ಪುಸ್ತಕ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಮುಖವಾಡ ಕಾದಂಬರಿ

ಮುಖವಾಡ ಕಾದಂಬರಿ 

ಲೇಖಕಿ ನೀಳಾದೇವಿ 

ಮೊದಲ ಮುದ್ರಣ ೧೯೯೨

ಪ್ರಕಾಶಕರು ಹೇಮಂತ ಸಾಹಿತ್ಯ 

ನೀಳಾದೇವಿಯವರು ಕನ್ನಡ ಸಾಹಿತ್ಯರಂಗದಲ್ಲಿ ಒಂದು ಪ್ರಮುಖ ಹೆಸರು . ೧೯೩೨ ಆಗಸ್ಟ್ 3 ರಂದು ಜನಿಸಿ ಹದಿನೈದನೇ  ವಯಸ್ಸಿನಿಂದಲೇ ಬರೆಯಲಾರಂಭಿಸಿದರು ಕಾದಂಬರಿ, ಕಿರುಗತೆ, ಲಘುಹಾಸ್ಯ, ಶಿಶು ಸಾಹಿತ್ಯ, ನಾಟಕ, ಪ್ರವಾಸ ಕಥನ, ಅನುವಾದಗಳಲ್ಲಿ ಕೈಯಾಡಿಸಿದ ಹಿರಿಯ ಕಿರುಗತೆಗಳ ಬರಹಗಾರ್ತಿ.  ಇವರ “ಬೇಡಿ ಬಂದವಳು” ಕಾದಂಬರಿ ಚಲನಚಿತ್ರವಾಗಿದೆ. “ಮೂಕರಾಗ” ಕಾದಂಬರಿಯು ವೈಶಾಲಿ ಕಾಸರವಳ್ಳಿಯವರ ನಿರ್ದೇಶನದಲ್ಲಿ ಕಿರುತೆರೆಯ ಧಾರಾವಾಹಿಯಾಗಿ ಬಂದಿದೆ. ೧೪ ಕಾದಂಬರಿಗಳು, 3 ಕಥಾ ಸಂಕಲನಗಳು, 2 ಪ್ರವಾಸ ಸಾಹಿತ್ಯ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ ಕೃತಿಗಳು ಇವರ ಲೇಖನಿಯಿಂದ ಹರಿದುಬಂದಿವೆ  ಒಟ್ಟು ನಲವತ್ತು ಗ್ರಂಥಗಳು ಲೇಖನಗಾರ್ತಿ.  “ಮನುಷ್ಯನಾದವನು ಆದಷ್ಟು ಮಾನವೀಯತೆ ಮತ್ತು ಶಾಂತಿ ಗುಣವನ್ನು ಬೆಳೆಸಿಕೊಳ್ಳಬೇಕು ಬದುಕನ್ನು ಎದುರಿಸುವ ಕಲೆ ಸಮಸ್ಯೆಗಳು ಎದುರಾದಾಗ ಋಣಾತ್ಮಕ ಭಾವದಿಂದ ಧನಾತ್ಮಕ ಭಾವದೆಡೆ ಧೈರ್ಯದಿಂದ ಕಷ್ಟವನ್ನು ಎದುರಿಸುವ ಕ್ರಮ ಇವೆಲ್ಲವನ್ನೂ ತನ್ನ ಸ್ತ್ರೀ ಸಮುದಾಯದೊಂದಿಗೆ ಹಂಚಿಕೊಂಡಾಗ ಅನೇಕ ನೈಜ ಸ್ಥಿತಿಗಳು ಹೊರಬರುತ್ತದೆ”  ಎನ್ನುವ ಇವರು ಅದೇ ಅಂಶಗಳನ್ನು ತಮ್ಮ ಕಾದಂಬರಿಗಳಲ್ಲಿ ಅಳವಡಿಸಿಕೊಂಡು ಪಾತ್ರಗಳ ಮೂಲಕ ಹೇಳಿರುವುದು ವಿಶೇಷ.  ವಡ್ಡರ ಜೀವನವನ್ನು ಕಥವಸ್ತುವನ್ನಾಗಿ ಆಯ್ಕೆ ಮಾಡಿಕೊಂಡು ಬರೆದ ಕಾದಂಬರಿ “ಹುಲ್ಲು ಹಸಿರಾಯಿತು” ಅಮೇರಿಕದ ವಾಷಿಂಗ್ಟನ್ ಲೈಬ್ರರಿ ಆಫ್ ಕಾಂಗ್ರೆಸ್ ನ ಸಮಾಜಶಾಸ್ತ್ರ ವಿಭಾಗದಲ್ಲಿ ಆಯ್ಕೆಯಾಗಿದೆ.  ರಾಮಾನುಜಾಚಾರ್ಯರನ್ನು ಸಮಾಜ ಸುಧಾರಕರನ್ನಾಗಿ ಚಿತ್ರಿಸಿರುವುದೂ ಗಮನಾರ್ಹ.  

ಪ್ರಸ್ತುತದ “ಮುಖವಾಡ” ಕಥೆ ಎಪ್ಪತ್ತರ ದಶಕದಲ್ಲಿ ನಡೆಯುವ ನಂದಿನಿ ಎಂಬ ಹೆಣ್ಣುಮಗಳ ಕಥೆ.  ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಈ ತರಹದ ಪ್ರಕರಣಗಳು ಅಲ್ಲೊಂದು ಇಲ್ಲೊಂದು ಸಿಗಬಹುದಾದರೂ ಅಂದಿನ ಕಾಲಮಾನದಲ್ಲಿ ಸರ್ವೇಸಾಮಾನ್ಯ ಎನಿಸುವಂತಹ ಪ್ರಸಂಗಗಳು ವರ್ತಮಾನದ ಸಂದರ್ಭಗಳ ಹಿನ್ನೆಲೆಯಲ್ಲಿ ಹಿಂದಿನ ಘಟನೆಗಳನ್ನು ಹೇಳುತ್ತಾ ಕಥೆ ಹೆಣೆದಿರುವ ರೀತಿ ತುಂಬ ಸಮರ್ಥವಾಗಿ ಮೂಡಿ ಬಂದಿರುವುದಲ್ಲದೆ ಓದುಗನ ಕಲ್ಪನೆಗೆ ಕೆಲಸ ಕೊಡುತ್ತಾ ಹೋಗುವುದು ಕಾದಂಬರಿಕಾರ್ತಿಯ ಕಥನ ಕಲೆಯ ಕುಸುರಿ ಕೆಲಸಕ್ಕೊಂದು ಉದಾಹರಣೆ . 

ಪಮ್ಮಿ 5 ವರ್ಷದ ಮಗುವಿನ ಆಲೋಚನೆಗಳೊಂದಿಗೆ ಶುರುವಾಗುವ ಕಥೆ ಅವಳಮ್ಮ ನಂದಿನಿಯ ಮನಸ್ಸಿನ ಭಾವನೆ ಗತಜೀವನವನ್ನು ಬಿಚ್ಚಿಡುತ್ತಾ ಹೋಗುತ್ತದೆ .3 ಮನೆಯಿಂದ ಆಚೆಗಿನ ಕುಟುಂಬಕ್ಕೆ ಬಂದಿರುವ ರಂಗಜ್ಜಿ ಒಡನೆ ಪಮ್ಮಿಯ ಸ್ನೇಹ, ರಂಗಜ್ಜಿಗೆ ಪಮ್ಮಿಯ ಬಗೆಗಿನ ಮಮಕಾರ ಆ ಕುಟುಂಬಕ್ಕೂ ನಂದಿನಿಗೂ ಇರಬಹುದಾದ ಸಂಬಂಧದ ಸುಳಿವು ನೀಡುತ್ತದೆ.  ಪಮ್ಮಿಯ ಕೆನ್ನೆಯ ಮೇಲಿನ ಮಚ್ಚೆಯನ್ನು ಸವರುತ್ತಾ ಅವಳಿಗೆ ಚಿನ್ನದ ಸರ ಕೊಡುವ ಪ್ರೀತಿ ತೋರುವ ರಂಗಜ್ಜಿ ಏನೋ ಹೇಳಲು ತೊಡಗುವ ಹೇಳದೆ ರಹಸ್ಯ ಮುಚ್ಚಿಟ್ಟುಕೊಂಡು ಸಾಯುತ್ತಾರೆ . ಸಾಯುವ ಸಮಯದಲ್ಲೂ ದೂರದಲ್ಲಿ ಪಮ್ಮಿ ಜೀಕುವ ಉಯ್ಯಾಲೆಯ ಸದ್ದಿನದೇ ಧ್ಯಾನ .

ಎಷ್ಟೇ ಚೆನ್ನಾಗಿ ಮದುವೆ ಮಾಡಿಕೊಟ್ಟರೂ ಚಿನ್ನ ತರಲಿಲ್ಲವೆಂದು ಹಂಗಿಸುವ ಮಾವ ಶ್ರೀನಿವಾಸಯ್ಯ, ಅವನ ತಾಯಿ ರಂಗಜ್ಜಿ, ದುಡಿಯದಿದ್ದರೂ ಹೆಂಡತಿಯ ಮೇಲೆ ದರ್ಪ ಚಲಾಯಿಸುವ ಶ್ರೀನಿವಾಸಯ್ಯನ ಎರಡನೆಯ ಮಗ ಮುಕುಂದನೆ ನಂದಿನಿಯ ಗಂಡ . ಜಿಪುಣ ಮಾವ, ಬಡವಳೆಂದು ತಾತ್ಸಾರ ತೋರುವ ರಂಗಜ್ಜಿ ಕೈಲಿ ಬೆಂದರೂ ಸಹಿಸುವ ನಂದಿನಿ ಗಂಡ ತನ್ನ ನಡತೆಯ ಮೇಲೆ ಅನುಮಾನ ಪಟ್ಟಾಗ ಮಾತ್ರ ತಿರುಗಿ ಬೀಳುತ್ತಾಳೆ . ಅದೇ ಮುಳಿವಾಗಿ ಅವಳ ಮೇಲೆ ಸೀಮೆ ಎಣ್ಣೆ ಸುರಿಯುವ ಪ್ರಯತ್ನ ನಡೆದಾಗ ತಪ್ಪಿಸಿಕೊಂಡು ಮನೆ ಬಿಟ್ಟು ಹೋಗುತ್ತಾಳೆ.  ಪರಿಚಯದ ಸಮಾಜಸೇವಕಿ  ಉಷಾ ದಮಯಂತಿಯರ ಸಹಾಯದಿಂದ “ನಂದಗೋಕುಲ” ಮಕ್ಕಳ ಅನಾಥಾಶ್ರಮದ ಮೇಲ್ವಿಚಾರಕಿಯಾಗಿ ಬಾಳು ಕಂಡುಕೊಳ್ಳುತ್ತಾಳೆ.  ಮುಂದೆ ತನ್ನ ಗಂಡನ ಅನ್ಯಾಯದ ಕೂಸನ್ನು ಆಶ್ರಮಕ್ಕೆ ತಂದಾಗ ತಾನೇ ಸಾಕುತ್ತಾಳೆ.  ತನ್ನ ಭಾವ ಕೇಶವ  ಅವನ ಹೆಂಡತಿ ಸುಧಾ ರಂಗಜ್ಜಿಯರು ತನ್ನ ಬೀದಿಗೇ ವಾಸಿಸಲು ಬಂದಾಗ ಈಗ ಮಕ್ಕಳಿರದ ಮುಕುಂದ ಎಲ್ಲಿ ಪಮ್ಮಿಯನ್ನು ಕಸಿದುಕೊಂಡು ಬಿಡುವನೋ ಎಂದು ಜೀವನದ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾಳೆ.  ಅದೇನೆಂದು ತಿಳಿಯಲು ನೀವು ಕಾದಂಬರಿಯನ್ನು ಓದಲೇ ಬೇಕು. ಓದುತ್ತೀರಿ ತಾನೆ ?

ಶ್ರೀಮಂತ ಬೀಗರೆಂದು ಅವರು ಹೇಳಿದ್ದಕ್ಕೆಲ್ಲ ತಲೆಯಾಡಿಸುವ ನಾಯಕಿಯ ತಂದೆ ಸಾಲ ಮಾಡಿ ಹೈರಾಣಾಗುತ್ತಾರೆ . ತಾಯಿಗೆ ಕ್ಯಾನ್ಸರ್ ಆದಾಗ ಅವರಿಗೆ ಚಿಕಿತ್ಸೆ ಕೊಡಿಸುವ ಬದಲು ನಿನಗೆ ಚಿನ್ನ ಮಂಡಿಸಬೇಕಿತ್ತು ಎನ್ನುವ ಅತ್ತೆ ಮನೆಯವರ ಧೋರಣೆ, ಶ್ರೀಮಂತೆ ಉದ್ಯೋಗಸ್ಥೆ ಎಂದು ಹಿರಿಯ ಸೊಸೆ ಸುಧಾಳಿಗೂ ಇವಳಿಗೂ ತೋರುವ ಪಕ್ಷಪಾತ ಗಂಡನ ಪ್ರೀತಿ ಇರುವ ತನಕ ಹೇಗೋ ಸಹಿಸುತ್ತಾಳೆ.  ಕಡೆಕಡೆಗೆ ಅದಕ್ಕೂ ತತ್ವಾರವಾಗಿ ” ತಾ ಕಳ್ಳ ಪರರ ನಂಬ “ಎಂಬಂತೆ ತನ್ನನ್ನೇ ಶಂಕಿಸಿ ಸಾಯಿಸುವ ಮಟ್ಟಕ್ಕೆ ಬಂದಾಗ ಅವಳು ತೆಗೆದುಕೊಳ್ಳುವ ನಿರ್ಧಾರ ತವರಿನ ಬೆಂಬಲವಿರದ ಹೆಣ್ಣಿನ ಸಹಜ ಸ್ಥಿತಿಯೇ.  ನಂತರ ತಮ್ಮ ಶ್ರೀಕಾಂತ ದುಬಾಯಿಯಲ್ಲಿ ಕೆಲಸ ಹಿಡಿದು ಹಣ ಸಂಪಾದಿಸಿ ಇವಳಿಗೆ ಆಸರೆಯಾದರೂ ಅದು ಶಾಶ್ವತವಲ್ಲವೆಂಬ ಅರಿವೂ ಅವಳಿಗಿದೆ . 

ಇಡೀ ಕಥೆಯೇ ತುಂಬಾ ಮುಖವಾಡಗಳ ಧರಿಸಿದ ಪಾತ್ರಗಳು ಪರಿಚಯವಾಗುತ್ತಾ ಹೋಗುತ್ತದೆ . ಮೊದಲಿಗೆ ಶ್ರೀನಿವಾಸಯ್ಯನ ಆಸೆಬುರುಕತನ ನಗುವಿನ ಮುಖವಾಡದ ಹಿಂದಿನ ಸೊಸೆಯನ್ನೇ ಸಾಯಿಸುವ ಮಟ್ಟದ ಕ್ರೌರ್ಯ ದಿಗ್ಭ್ರಮೆ ಮೂಡಿಸುತ್ತದೆ.  ಇನ್ನು  ರಂಗಜ್ಜಿ ಮೊಮ್ಮಗನ ನೀತಿಬಾಹಿರ ಅಪ್ರಾಪ್ತ ಹದಿನೈದು ವರ್ಷದ ಹುಡುಗಿಯ ಜತೆಗಿನ ಅವ್ಯವಹಾರಕ್ಕೆ ಬೆಂಬಲ, ನಂತರ ನಂದಿನಿಯನ್ನು ದೈಹಿಕ ಮಾನಸಿಕವಾಗಿ ಹಿಂಸಿಸುವುದು ಮುಕುಂದನ ಎರಡನೇ ಹೆಂಡತಿ ಸಿರಿವಂತ ಳೆಂದು ಮೊದಲ ಸೊಸೆ ಸುಧಾಳನ್ನು ಶೋಷಿಸುವುದು ವಯಸ್ಸಿನೊಂದಿಗೆ ಹಿರಿತನ ತೋರಿಸದ ಸ್ಯಾಡಿಸ್ಟ್ ಮನೋಭಾವವನ್ನು ಬಿಂಬಿಸುತ್ತದೆ . ಮುಂದೆ ಪಮ್ಮಿಯನ್ನು  ಹಿಂದೆ ಆಸ್ಪತ್ರೆಯಲ್ಲಿ ಕಂಡಿದ್ದ ನೆನಪು ಸಂಗತಿಗಳ ಆಧಾರದಲ್ಲಿ ಮುಕುಂದನ ಮಗಳೆಂದು ಗುರುತಿಸಿದರೂ ನಾಲಿಗೆ ಬಿದ್ದು ಹೇಳಲಾಗದೆ ಹೋಗುವುದು ಒಂದು ತರಹದಲ್ಲಿ ನಂದಿನಿಗೆ ವಿಧಿ ತೋರಿದ ಅಲ್ಪ ಕರುಣೆ.  ಮೊದಲ ಮಗ ಕೇಶವ ಅವನ ಹೆಂಡತಿ ಸುಧಾ ಮನೆಯಲ್ಲಿ ನಡೆಯುವ ಅನ್ಯಾಯವನ್ನು ಕಂಡರೂ ಸೊಲ್ಲೆತ್ತಿದರೆ ತಮ್ಮ ನೆಮ್ಮದಿಗೆ ಭಂಗ ಎಂದು ಡಿಪ್ಲೊಮಸಿಯ ಮುಖವಾಡ ತೊಟ್ಟವರು.  ತಂದೆಯ ಕೃಪಾಕಟಾಕ್ಷಕ್ಕಾಗಿ ವಿಧೇಯತೆಯ ಮುಖವಾಡ ಹಾಕಿಕೊಂಡವರು . ಮುಕುಂದನಂತೂ ನಿರುದ್ಯೋಗಿ ದಂಡಪಿಂಡವಾದರೂ ಹೆಂಡತಿಯ ಮೇಲೆ ಜಬರದಸ್ತು ಮಾಡಿ ಮನೆಯವರ ಮಾತು ಕೇಳಿ ಅವಳ ಮೇಲೆ ಶಂಕೆ ಪಡುವವನು. ” ಭಾರ್ಯಾ ರೂಪವತೀ ಶತ್ರು” ಇವನ ಪಾಲಿಗೆ . ಹಾಗಂತ ತಾನೇನು ನೀತಿವಂತನಲ್ಲ. ಎದುರುಮನೆಯ ಹೈಸ್ಕೂಲು ಹುಡುಗಿಯನ್ನು ಬಸಿರು ಮಾಡಿ ಅಕ್ರಮ ಸಂತಾನ ಪಮ್ಮಿಯನ್ನು ಹುಟ್ಟಿಸಿದವನು. ಎರಡನೆಯ ಸಂಬಂಧಕ್ಕೆ ಶ್ರೀಮಂತ ಮಾವ ದೊರಕಿದರೂ ನಂತರ ಮಕ್ಕಳಾಗದೆ ಇವನಲ್ಲೇ ದೋಷ ಹುಡುಕುತ್ತಾರೆ “ಮಾಡಿದ್ದುಣ್ಣೋ ಮಹರಾಯ” ಎಂಬಂತೆ . ಸ್ವಾರ್ಥದ ಮುಖವಾಡ ತೊಟ್ಟ ಗೋಮುಖ ವ್ಯಾಘ್ರದಂತವನು.  ಇಲ್ಲಿ ನಂದಿನಿಗೆ ನೆರವಾದ ಉಷಾ ಮತ್ತು ದಮಯಂತಿ ಮಾನವೀಯತೆಯ ಪ್ರತಿನಿಧಿಯಾಗುತ್ತಾರೆ . ಅಕ್ಕನಿಗೆ ಎಲ್ಲ ತರಹದ ಬೆಂಬಲ ಕೊಟ್ಟು ಅವಳ ನಿರ್ಧಾರಕ್ಕೆ ನೆರವು ನೀಡುವ ತಮ್ಮ ಶ್ರೀಕಾಂತ ವಿಶಿಷ್ಟನೆನಿಸುತ್ತಾನೆ . 

ನಂದಿನಿಯಂತೂ ಮೊದಲಿಗೆ ಅಸಹಾಯಕತೆಯ ಪ್ರತಿರೂಪವಾಗಿ ಮೌನದ ಮುಖವಾಡವನ್ನೇ ತೊಡುವ ವಳು . ಪ್ರಾಣಕ್ಕೆ ಸಂಚಕಾರ ಬಂದಾಗ ದಿಟ್ಟ ಹೆಜ್ಜೆ ಇಡುತ್ತಾಳೆ ಮುಖವಾಡ ಸರಿಸುತ್ತಾಳೆ.  ಮುಂದೆ ತನ್ನ ಗಂಡನ ಅಕ್ರಮಸಂತಾನ ತಮ್ಮ ಆಶ್ರಮಕ್ಕೆ ಬಂದಾಗ ತಾನೇ ಅದನ್ನು ಸಾಕುವ ನಿರ್ಧಾರ ಮಾಡುತ್ತಾಳೆ. ಮುಕುಂದನಿಂದ ತ್ಯಜಿಸಲ್ಪಟ್ಟ ತಾನೂ ಆ ಮಗುವು ಸಮಾನ ದುಃಖಿಗಳು ಎನ್ನುವ ವಾದ ಅವಳದು.  ಅವನ ಮೋಸಕ್ಕೆ ತನ್ನ ಪ್ರತೀಕಾರ ಇದು ಎನ್ನುತ್ತಾಳೆ . ಕ್ರೌರ್ಯ ದ್ವೇಷಗಳು ಪ್ರತೀಕಾರ ಎನಿಸುವಾಗ ಈ ರೀತಿಯ ಪ್ರತೀಕಾರ ಭಿನ್ನವೆನಿಸುತ್ತದೆ . ಆದರೆ ದಾಸರೇ ಹೇಳಿಲ್ಲವೆ “ಮೋಸ ಮಾಡಿದವನ ಹೆಸರ ಮಗನಿಗಿಡಲು ಬೇಕು” ಎಂದು . ಅಲ್ಲದೆ ಹೆಣ್ಣು ಎಂದರೆ ಒಗಟು . ಅವಳು ಅರ್ಥವಾಗುವುದು ಕಷ್ಟ ನಂದಿನಿಯ ಮನೋಭಾವವೂ ಹಾಗೆಯೇ.  ಅಂತೆಯೇ “ತಾಯ್ತನ ಜಗತ್ತಿನ ಅತ್ಯಂತ ಪುರಾತನ ನೈಸರ್ಗಿಕ ನಿಯಮ” ಎಂದು ನಂಬಿರುವ ಅವಳಿಗೆ ಇದು ಅನಿವಾರ್ಯ ಹೆಜ್ಜೆ ಎಂದೆನಿಸಿರಬಹುದು.  ಕೊನೆಗೆ ಇನ್ನು ಅತ್ತೆ ಮನೆಯವರಿಗೆ ಅದರಲ್ಲೂ ಗಂಡ ಮುಕುಂದನಿಗೆ ಪಮ್ಮಿ ಅವನ ಮಗಳೇ ಎಂದು ತಿಳಿದರೆ ಅವಳನ್ನು ಕಸಿದುಕೊಂಡು ಬಿಡಬಹುದು ಎಂಬ ಭಯ ಕಾಡುವುದು ಬೆಂಕಿಯನ್ನು ಒಮ್ಮೆ ತಗಲಿಸಿಕೊಂಡ ಮಗು ಮತ್ತೊಮ್ಮೆ ಹತ್ತಿರ ಹೋಗಲು ಅಂಜುವ ಅಂಜಿಕೆಯಂತೆಯೇ.  

ಇನ್ನು ನಂದಿನಿ ಮತ್ತು ಸುಧಾ ಇಬ್ಬರ ಮನೆಯಲ್ಲೂ ಕೆಲಸ ಮಾಡುವ ಜಯ  ಒಂದು ತರಹದ ಸಂದೇಶ ವಾಹಕಿ ಹಾಗೂ ಇಡೀ ಸಮಾಜದ ಧ್ವನಿಸೂಚಕವಾಗಿ ಚಿತ್ರಿತಳಾಗಿರುತ್ತಾಳೆ.  ಇಡೀ ಕಾದಂಬರಿಯ ತುಂಬ ಜೋಕಾಲಿಯ,  ಎಣ್ಣೆ ಹಾಕದೆ ರಷ್ಟು ಹಿಡಿದು ಶಬ್ದ ಮಾಡುವ ಜೋಕಾಲಿಯ ಜೀಕು,  ಹೊಸತು ಮತ್ತು ಹಳೆಯದರ, ಒಳಿತು ಕೆಡುಕಿನ, ಶಕ್ತಿ ದೌರ್ಬಲ್ಯಗಳ, ಅವಮಾನ ಅಭಿಮಾನದ, ಕ್ರೌರ್ಯ ಮಾನವೀಯತೆಯ ನಡುವಿನ ಸಂಘರ್ಷದ ಏರಿಳಿತದ ಪ್ರತಿಮೆಯಾಗಿ ಭಾಸವಾಗುತ್ತದೆ.  ಕಥೆ ಮುಗಿದರೂ ಉಯ್ಯಾಲೆಯ ದನಿ ಅನುರಣಿತವಾಗುತ್ತಲೇ ಇರುತ್ತದೆ.


                       ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

One thought on “

  1. ಪ್ರಕಟಣೆಗಾಗಿ ಸಂಪಾದಕರಿಗೆ ಧನ್ಯವಾದಗಳು

    ಸುಜಾತಾ ರವೀಶ್

Leave a Reply

Back To Top