ಅಂಕಣ ಸಂಗಾತಿ
ಗಜಲ್ ಲೋಕ
ಶಕುಂತಲಾದಾಳೆರವರ ಗಜಲ್ ಕಾವು..
ಮತ್ತೊಮ್ಮೆ ತಮ್ಮೆಲ್ಲರ ನಿರೀಕ್ಷೆಯಂತೆ ಇಂದು ನಾನು ಮತ್ತೊರ್ವ ಪ್ರತಿಭಾನ್ವಿತ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ಪರಿಚಯದ ಪರಿ ಹಿಡಿದು ತಮ್ಮ ಮುಂದೆ ಬಂದು ನಿಂತಿದ್ದೇನೆ. ಪ್ರತಿ ಗುರುವಾರದಂತೆ ಈ ಗುರುವಾರವೂ ಸಹ ತಾವು ಅವರನ್ನು ತುಂಬು ಹೃದಯದಿಂದ ಸ್ವಾಗತಿಸುವಿರಿ ಎಂದು ನಂಬಿ, ಆ ಗುರುತುಗಳನ್ನು ತಮ್ಮ ಮುಂದೆ ಪ್ರಸ್ತುತ ಪಡಿಸುತ್ತಿರುವೆ..
“ಮೌನವೊಂದೆ ದೇವರ ಭಾಷೆ
ಮಿಕ್ಕಿದ್ದೆಲ್ಲ ಅದರ ಕಳಪೆ ತರ್ಜುಮೆ“
–ಜಲಾಲುದ್ದೀನ್ ರೂಮಿ
ಕನ್ನಡಿಗರ ಹೃದಯ ವೈಶಾಲ್ಯತೆ ಕುರಿತು ಅಂದೇ ಶ್ರೀವಿಜಯ ತನ್ನ ‘ಕವಿರಾಜಮಾರ್ಗ’ ದಲ್ಲಿ ಹೇಳಿದ್ದು ಅಂದಿಗೂ, ಇಂದಿಗೂ ಹಾಗೂ ಎಂದೆಂದಿಗೂ ಪ್ರಸ್ತುತ. ಪ್ರಪಂಚದ ಎಲ್ಲ ಸಾಹಿತ್ಯಗಳಿಂದಲೂ ಮಾದರಿಗಳನ್ನೂ, ವಿಷಯಗಳನ್ನೂ ಸ್ವೀಕರಿಸುವ ಸ್ಥಿತಪ್ರಜ್ಞ ಮನೋಭಾವ ನಮ್ಮದು. ಮತಗಳ ವಾದ, ಪ್ರತಿವಾದಗಳನ್ನು ತೊರೆದು, ಇಸಂಗಳ ಭೇದಗಳನ್ನು ಕಡಿದು, ಸರ್ವಸಮಾನವಾದ, ಉದಾರವಾದ ಚಿಂತನೆಯನ್ನು ಪ್ರೋತ್ಸಾಹಿಸುವವರು, ಮೈಗೂಡಿಸಿಕೊಂಡವರು ನಾವು. ಬರಿಯ ಶುಷ್ಕ ಕಲ್ಪನೆಗಳಿಗೆ ಜೋತು ಬೀಳದೆ ಮನುಷ್ಯಜಾತಿಯ ಪಾಂಙ್ತವಾದ ಅಭ್ಯುದಯವನ್ನು ಬಯಸುವ ಹೃದಯವಂತರು ಕನ್ನಡಿಗರು. ಕಾವ್ಯ ಎಲ್ಲ ಬರಹಗಳ ತಾಯಿ ರೂಪ. ಬರಹ ರೂಪುಗೊಳ್ಳುವುದೆ ‘ಪಲ್ಲವಿ’ಯ ಚರಣಗಳಿಂದ!! ಇಂದು ‘ಗಜಲ್’ ಎಂಬ ಕಾವ್ಯ ಪ್ರಕಾರ ಎಲ್ಲರ ಹೃದಯವನ್ನು ಗೆದ್ದು ಕರುನಾಡಿನಾದ್ಯಂತ ಬೀಗುತ್ತಿದೆ!! ಇದು ಇಡೀ ಮನುಕುಲದ ನೋವಿನ, ಆತಂಕದ, ತೊಳಲಾಟದ ಕೂಗನ್ನು ಕೂಗುತ್ತ, ಸಮುದಾಯದ ಒಂದು ಭಾಗವಾಗಿಯೇ ಬೆಳೆದಿದೆ. ಕನ್ನಡ ಸಾಹಿತ್ಯಕ್ಕೆ ಬೇಕಾದ ಜೀವನ ದ್ರವ್ಯವನ್ನು ಅಪಾರವಾಗಿ ಹೊಂದಿರುವ ‘ಗಜಲ್’ ಇಂದು ಜನ ಸಮುದಾಯಗಳ ನಡುವೆ ಉಸಿರಾಡುತಿದೆ!! ಅಪರಿಮಿತ ರಸಿಕರ ಕಂಗಳ ಕಾಂತಿಯಾಗಿ ಚಿಮ್ಮುತ್ತ, ಹಲವಾರು ಗಜಲ್ ಸಂಕಲನಗಳ ಜನಾರ್ಪಣೆಗೆ ಕಾರಣವಾಗಿದೆ. ಇಂಥಹ ಅನುಪಮ ಸಂಕಲನಗಳನ್ನು ಹೊರತಂದ ಹಲವರಲ್ಲಿ ಶ್ರೀಮತಿ ಶಕುಂತಲಾ ದಾಳೆರ ಇವರೂ ಕೂಡ ಒಬ್ಬರು.
ಶ್ರೀಮತಿ ಶಕುಂತಲಾ ನಾ. ದಾಳೆರ ಅವರು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿಯಲ್ಲಿ ಶ್ರೀ ಭೀಮಪ್ಪ ಮತ್ತು ಶ್ರೀಮತಿ ತಿರಕವ್ವ ದಂಪತಿಗಳ ಮಗಳಾಗಿ ೧೯೬೯ ರ ಮೇ ಒಂದರಂದು ಜನಿಸಿದ್ದಾರೆ. ಐ ಟಿ ಸಿ ಮುಗಿಸಿರುವ ಇವರು ಬ್ಯಾಡಗಿಯ ಕೋಳೂರು ಕ್ಯಾಂಪ್ ನ ಸರ್ಕಾರಿ ಹಿರಿಯ ಪ್ರಾಥಮಿಕ (ಉರ್ದು ಮಾಧ್ಯಮ) ಗಂಡು ಮಕ್ಕಳ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೇ ಕಸೂತಿ, ರಂಗೋಲಿ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಶ್ರೀಯುತರು ಕ್ರಮೇಣವಾಗಿ ಸಾಹಿತ್ಯದಲ್ಲಿ ಆಸಕ್ತಿ ಅಭಿರುಚಿಯನ್ನು ಬೆಳೆಸಿಕೊಂಡು ಚುಟುಕು, ಕವನ ,ಲೇಖನ, ಶಾಯರಿ ,ಗಜಲ್.. ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ‘ಅಭಿಜ್ಞಾನ’, ‘ಕಾವ್ಯಗಾನ’, ಹಾಗೂ ‘ಮೌನರಾಗ’, ಎನ್ನುವ ಕವನ ಸಂಕಲನಗಳನ್ನು, ‘ಮಿಂಚು’, ಎನ್ನುವ ಚುಟುಕು ಸಂಕಲನ, ‘ನಾಲ್ಕೂ ನಿಟ್ಟಿನಿಂದ’, ಎನ್ನುವ ಜುಗಲ್ಬಂದಿ ಕವನ ಸಂಕಲನ ಹಾಗೂ ‘ನೆಲದ ಕಾವ ನೆರಳು’, ಎಂಬ ಗಜಲ್ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವರ ಬರಹದ ಹಲವು ರೂಪಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ನಾಡಿನಾದ್ಯಂತ ಜರುಗಿದ ಹಲವಾರು ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಕವನ ವಾಚನ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮವಾಗಿ ಕವನಗಳನ್ನು ವಾಚಿಸಿ, ಪ್ರಶಸ್ತಿ ಪತ್ರ, ಕಾಣಿಕೆಗಳನ್ನು ಪಡೆದಿದ್ದಾರೆ!
ಉತ್ತಮ ಶಿಕ್ಷಕಿಯಾಗಿರುವ ಶ್ರೀಯುತರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರು. ಅವರ ಈ ಕ್ರಿಯಾಶೀಲತೆಯನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆ, ಶಿಕ್ಷಣ ಇಲಾಖೆ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಅವುಗಳಲ್ಲಿ ಗುರುಕುಲ ಪ್ರತಿಭಾ ಪ್ರತಿಷ್ಠಾನ ಧಾರವಾಡ ವತಿಯಿಂದ ೨೦೦೬-೦೭ ನೇ ಸಾಲಿನ ಸುವರ್ಣ ಕರ್ನಾಟಕ ರಾಜ್ಯ ಮಟ್ಟದ ಅತ್ಯುತ್ತಮ ಸುವರ್ಣ ಶಿಕ್ಷಕಿ ಪ್ರಶಸ್ತಿ, ೩೦೦೮-೦೯ ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಯಿಂದ ಪರಿಹಾರ ಬೋಧನೆಯ ಉತ್ತಮ ಶಿಕ್ಷಕಿ ಗೌರವ, ಸಾಹಿತ್ಯ ಸಿರಿ ಪ್ರಶಸ್ತಿ, ಬೆಳಕು ಶೈಕ್ಷಣಿಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ)ಮಾನ್ವಿ ಜಿಲ್ಲಾ ರಾಯಚೂರ ವತಿಯಿಂದ ‘ಕನ್ನಡದ ಕಣ್ವ’ ಪ್ರಶಸ್ತಿ, ‘ಮೌನರಾಗ’ ಕೃತಿಗೆ ದತ್ತಿ ಪುಸ್ತಕ ಬಹುಮಾನ ಮತ್ತು ಪ್ರಶಸ್ತಿ…. ಮುಂತಾದವುಗಳು ಪ್ರಮುಖವಾಗಿವೆ.
ತೊಟ್ಟಿಲಿಂದ ಹಿಡಿದು ಜನ್ಹಾಜದವರೆಗಿನ ಅಲೆದಾಟದ ಪ್ರಯಾಣದಲ್ಲಿ ಎಲ್ಲರ ಹೃದಯಗಳಲ್ಲಿ ಕಂಬನಿ ಹೆಪ್ಪುಗಟ್ಟಿರುವ ಸಾಧ್ಯತೆಯೇ ಹೆಚ್ಚು. ಈ ಹೆಪ್ಪು ಗಟ್ಟಿರುವ ಉಪ್ಪು ನೀರಿಗೆ ಕಾವು ಕೊಡುವ ಬಿಸಿಬಾಲೆಯೆಂದರೆ ಅದು ಗಜಲ್ ಎಂಬ ಮನೋಹರಿ!! ಕಣ್ಣೀರಿಗಾಗಿಯೆ ಕಾಲುವೆಯೊಂದನ್ನು ಕಟ್ಟಿಸಿ, ಅಲ್ಲಿ ಮಜ್ಜನಗೈದು ರೀಲ್ಯಾಕ್ಸ್ ಆಗಲು ಕಾರಣೀಭೂತೆಯಾದ ‘ಗಜಲ್’ ಕುವರಿ ಮನುಕುಲದ ವಿವಿಧ ಸಂಬಂಧಗಳಿಗೆ ಬೆಸುಗೆಯಾಗುತ್ತ ಸಮಾಜದಲ್ಲಿ ಶಾಂತಿಯ ತಪೋವನವನ್ನು ನಿರ್ಮಿಸುತ್ತಿದ್ದಾಳೆ. ಗಜಲ್ ಗೋ ಶಕುಂತಲಾ ದಾಳೆರ ರವರ ಗಜಲ್ ಗಳಲ್ಲಿ ಪ್ರಾದೇಶಿಕ ಭಾಷೆಯ ಸೊಗಡು, ನಾಡು-ನುಡಿಯ ಝೇಂಕಾರ, ಜಾನಪದೀಯ ನೆಲೆಗಳು, ಸಾಮಾಜಿಕ ವ್ಯವಸ್ಥೆಯ ವಿವಿಧ ಆಯಾಮಗಳ ಅವಲೋಕನ, ರಾಜಕೀಯದ ಕಲುಷಿತ ವಾತಾವರಣ, ವ್ಯಂಗ್ಯ, ವಿಡಂಬನೆ, ಟೀಕೆ, ಸ್ತ್ರೀ ಸಂವೇದನೆಯ ಮೆಲುಮಾತುಗಳು, ಗಂಡಿನ ಪಾರುಪತ್ಯ, ಶೋಷಣೆಯ ಮುಳ್ಳಿನ ಮೊನಚು, ಅವನಿಯನ್ನು ತೋಯ್ಸಿದ ರಕುತದ ಕಲೆಗಳು, ಜಾತಿಯತೆಯ ಅಟ್ಟಹಾಸ, ಕೋಮುವಾದದ ಮುಖವಾಡ, ಬಂಡವಾಳಶಾಹಿಯ ಬೇಗೆ…ಇವುಗಳೊಂದಿಗೆ ಆಧ್ಯಾತ್ಮದ ತಂಬೆಲರು, ಗಜಲ್ ನ ಮೂಲ ಆಶಯ ಪ್ರೀತಿ, ಪ್ರೇಮ, ಪ್ರಣಯ… ಎಲ್ಲವುಗಳ ಹದವಾದ ಮಿಶ್ರಣವಿದೆ. ಭಾಷೆ ಒಂದು ನಾಡಿನ ಅಸ್ಮಿತೆಯ ಲಕ್ಷಣ, ಆ ನಾಡಿನಲ್ಲಿ ವಾಸಿಸುವವರ ಸಂಸ್ಕೃತಿಯ ಕುರುಹು ; ಆ ಹೃದಯಗಳ ಪಿಸುಮಾತು. ಈ ಕಾರಣಕ್ಕಾಗಿಯೇ ‘ಮಾತೃಭಾಷೆ’ ಎಂಬುದು ಮುನ್ನೆಲೆಗೆ ಬರುತ್ತದೆ. ಅವರವರ ಮಾತೃಭಾಷೆ ಹಿತವಾಗಿ, ಮೆದುವಾಗಿ; ಸಿಹಿಯಾಗಿ ಇರುತ್ತದೆ. ಇಂದಿನ ಜಾಗತೀಕರಣದ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯ ತನ್ನ ನೆಲೆಯನ್ನು ಕಂಡುಕೊಳ್ಳಲು, ಸೌಹಾರ್ದತೆಯಿಂದ ಬಾಳಲು ಒಂದಕ್ಕಿಂತ ಹೆಚ್ಚು ಭಾಷೆ ಕಲಿತರೆ ಚಂದ, ನಿಜ. ಹಾಗಂತ ಮಾತೃಭಾಷೆಯನ್ನು ಕಡೆಗಣಿಸಬಾರದು ಎಂಬುದನ್ನು ಗಜಲ್ ಗೋ ಅವರು ತಮ್ಮ ಗಜಲ್ ನ ಷೇರ್ ಒಂದರಲ್ಲಿ ಈ ರೀತಿ ಹೇಳಿದ್ದಾರೆ.
“ಬಹುಭಾಷೆ ಬಲು ಸೊಗಸೆಂದು ಕಲಿಯಬೇಕು
ಮಾತೃಭಾಷೆ ಅಳಿಸದೆ ನಿಂತು ಬಾಳಬೇಕು“
ಬಹುಭಾಷೆಯ ಕರಗತ ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರಕಾಶಿಸುತ್ತದೆ. ಈ ಹಿನ್ನೆಲೆಯಲ್ಲಿ ಮನುಷ್ಯ ಎಷ್ಟು ಭಾಷೆಗಳನ್ನು ಕಲಿತರೂ ಕಡಿಮೆಯೇ. ಆದರೆ ಭಾಷೆಯ ಕಲಿಕೆ ಮೋಹ ಆಗಬಾರದು. ಮಾತೃಭಾಷೆ ಯಾವತ್ತೂ ನಮ್ಮ ಅಮ್ಮನ ಸ್ಥಾನದಲ್ಲಿ ಇರಬೇಕು, ಉಳಿದ ಭಾಷೆಗಳು ಚಿಕ್ಕಮ್ಮ, ದೊಡ್ಡಮ್ಮರಂತೆ ಇರಬೇಕು ಎಂಬ ವೈಚಾರಿಕತೆಯನ್ನು ಇಲ್ಲಿ ಮನಗಾಣಬಹುದು.
ಗಂಡು ತಾನು ಹೆಣ್ಣಿಗಿಂತ ಶ್ರೇಷ್ಠ ಎಂದು ಅನಾದಿ ಕಾಲದಿಂದ ಬೀಗುತ್ತ ಬಂದಿದ್ದರೂ ಹೆಣ್ಣು ಇಲ್ಲದೆ ಗಂಡಿಗೆ ಉಳಿಗಾಲವಿಲ್ಲ ಎಂದರೆ ಉತ್ಪ್ರೇಕ್ಷೆಯ ಮಾತಾಗದು. ಕುಟುಂಬ ಎನ್ನುವ ಆಲದಮರ ನಿಂತಿರೋದೆ ಹೆಣ್ಣೆಂಬ ಬೇರಿನ ಸಹಾಯದಿಂದ! ಈ ನಿಟ್ಟಿನಲ್ಲಿ ಹೆಂಡತಿಯಿಲ್ಲದ ಗಂಡಿನ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಶ್ರೀಯುತರು ತಮ್ಮ ಗಜಲ್ ಒಂದರಲ್ಲಿ ತುಂಬಾ ಸಶಕ್ತವಾಗಿ ದಾಖಲಿಸಿದ್ದಾರೆ.
“ಹಾಸಿದ ಹಾಸಿಗೆ ಕಸ–ಕಡ್ಡಿ ಮುಸುರಿ ಪಾತ್ರೆ ಹರಡಿ ಬೀಳಾಗಿವೆ
ಕಳ್ಳ ಬೆಕ್ಕು ಹಾಲು ಕುಡಿದು ಹೊಟ್ಟೆಗೆ ಹಿಟ್ಟಿರದೆ ದಾಹವಾಗಿದೆ ಸಖಿ“
ಈ ಮೇಲಿನ ಷೇರ್ ಗಮನಿಸಿದಾಗ ಗಂಡು ಹೆಣ್ಣಿನ ಮೇಲೆ ಎಷ್ಟು ಅವಲಂಬಿತವಾಗಿದ್ದೇನೆ ಎನ್ನಿಸುವುದರ ಜೊತೆಗೆ ಇಷ್ಟೊಂದು ಸೋಮಾರಿನಾ ಎಂಬ ಪ್ರಶ್ನೆಯೂ ನಮ್ಮ ಸ್ಮೃತಿ ಪಟಲದ ಮೇಲೆ ಹಾದು ಹೋಗುತ್ತದೆ. ಗಜಲ್ ಗೋ ಅವರು ಇಲ್ಲಿ ಭಾಗಶಃ ಹೆಣ್ಣು ಇರದ ಗಂಡಿನ ಮನೆಯ ವಾಸ್ತುವನ್ನು ವಾಸ್ತವದ ನೆಲೆಯಲ್ಲಿ ಅನಾವರಣಗೊಳಿಸಿದ್ದಾರೆ.
ಮನಸು ಕದಡಿದಾಗ ಅದನ್ನು ತಿಳಿಗೊಳಿಸುವ ತಾಕತ್ತು ಇರೋದು ‘ಗಜಲ್’ ಶಾರದೆಗೆ! ಇಂಥಹ ಗಜಲ್ ಸರಸ್ವತಿ ಶ್ರೀಮತಿ ಶಕುಂತಲಾ ದಾಳೆರ ರವರ ನಾಲಿಗೆಯಲ್ಲಿ ನೆಲೆಸಲಿ, ಮತ್ತಷ್ಟು ಮೊಗೆದಷ್ಟೂ ‘ಗಜಲ್’ ಚಾಂದಿನಿಯ ನೂರ್ ಜಗದಗಲಕೂ ಪಸರಿಸಲಿ ಎಂದು ಶುಭ ಕೋರುತ್ತೇನೆ.
“ಓ, ಪ್ರೀತಿಸುವ, ದ್ವೇಷಿಸುವ ಎಲ್ಲರಿಗೂ ಸಮಾಧಾನವಾಗಲು
ದೇವರು ಸ್ವರ್ಗವನ್ನೆಂತೋ ಅಂತೆಯೇ ನರಕವನ್ನೂ ಸೃಷ್ಟಿಸಿದ್ದಾನೆ“
–ಉಮರ್ ಖಯ್ಯಾಮ್
ಗಜಲ್ ಕಡಲ ದಂಡೆಯ ವಿಹಾರ ತಮ್ಮ ಮನಸುಗಳಿಗೆ ಖುಷಿ ನೀಡುತ್ತಿದೆ ಎಂದುಕೊಂಡಿರುವೆ, ಏನಂತೀರಿ.. ಆದರೂ ವಾಟ್ ಟು ಡು, ಟೈಮ್ ಟೈಮ್ ಕೀ ಬಾತ್ ಹೈ ಅಲ್ಲವೇ…? ಹಾಗಾಗಿ ಇಂದಿನ ಈ ಪರಿಚಯದ ದೇಹಲಿಜ್ ಗೆ ಪೂರ್ಣ ವಿರಾಮವನ್ನು ನೀಡುತ್ತ, ಮುಂದಿನ ಗುರುವಾರ ಮತ್ತೆ ತಮ್ಮ ಮುಂದೆ ಹಾಜರಾಗುವೆ ಎಂದು ಪ್ರಾಮಿಸ್ ಮಾಡುತ್ತ, ಇಲ್ಲಿಂದ ನಿರ್ಗಮಿಸುವೆ…!!
ಡಾ. ಮಲ್ಲಿನಾಥ ಎಸ್. ತಳವಾರ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
ತಮ್ಮ ಅನುಪಮ ಸಾಹಿತ್ಯ ಸೇವೆಗೆ ಅನಂತ ಧನ್ಯವಾದಗಳು ಸರ್…