ಕಾವ್ಯ ಸಂಗಾತಿ
ಹೃದಯ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಎಲ್ಲರೆದೆಯೊಳು ಒಂಟಿ ಗುಮ್ಮನಂತಡಗಿ
ಸೂರ್ಯ ಚಂದ್ರರ ನಿಷ್ಠೆಯಲಿ
ಅಹರ್ನಿಶಿ ತುಡಿವ ಬಡಿವ
ಓ ಹೃದಯವೇ
ಮನುಜ ಕುಲ ನಿನಗೆ ಧನ್ಯ!
ಆಪ್ತ ನೀರವತೆಯಲಿ ಕೂತು
ಒಬ್ಬೊಬ್ಬರೊಳಗು
ಇಂತಿಷ್ಟೆ ಕರಾರುವಕ್ಕು
ನಿಮಿಷ ನಿಮಿಷಕೆಂದು ಮಿಡಿದು
ನಿಮಿಷದಿಂದ ಘಂಟೆ
ಘಂಟೆಯಿಂದ ದಿನ ತಿಂಗಳು
ಮತ್ತೆ ವರುಷ ವರುಷ ಬದುಕಿನುದ್ದಕೂ
ದುಡಿವ ಓ ಹೃದಯವೆ
ಮನುಜ ಕುಲ ನಿನಗೆ ಧನ್ಯ!
ನಿದ್ದೆಯಲಿರಲಿ ಎಚ್ಚರದಲಿರಲಿ
ಇಲ್ಲದೆ ಯಾವುದರ ಕಾಳಜಿ
ನೀನು ನೀನೆ ನಿಶಾಂಧಕಾರದಲಿ
ರೈಲೊಂದು ಶಿಳ್ಳೆ ಕೂಗಿ ಕೂಗಿ
ಕಾಡುಮೇಡುಗಳಲು ದಾರಿ ಸೀಳಿ
ರಭಸ ನುಗ್ಗುವ ಹಾಗೆ
ವಿಶ್ರಾಂತಿಯಿಲ್ಲದೆ ಒಂದೇ ಒಂದು ಘಳಿಗೆ
ಬಡಿ ಬಡಿದೋಡುವ ನಿನ್ನ ಓಘಕೆ
ಓ ಹೃದಯವೆ
ಮನು ಜಕುಲ ನಿನಗೆ ಧನ್ಯ!
ಅದು ಅಂಥ ಎದೆ
ಇದು ಇಂಥ ಎದೆ
ಕಪ್ಪೆದೆ ಬಿಳಿಯೆದೆ ಹೀನ ಎದೆ
ಉತ್ತಮೋತ್ತಮ ಎದೆ
ಇಂಥ ನೀಚ ಚಿಂತನೆಗಳಲಿ ಮುಳುಗದೆ
ಎಲ್ಲರೊಳು ತಾನೊಂದೆ
ಬಡಿದು ದುಡಿವ ಮಾಂಸಮುದ್ದೆ
ಎನುವ ಕಾಯಕದ ಓ ಹೃದಯವೆ
ನಿನಗೆ ಮನುಜಕುಲ ಧನ್ಯ!
ಮಾನವನೆಲ್ಲ ಭಾವ ಭಾವನೆಗಳಿಗೂ
ಒಲವಿನಲಿ ಸ್ಪಂದಿಸುತ್ತ
ದುಃಖಕ್ಕು ಸುಖಕ್ಕು ಭಾಗಿಯಾಗುತ್ತ
ಎಲ್ಲರೆದೆಯಲು ಸಿರಿವಂತಿಕೆಯನು
ಎಷ್ಟೆಷ್ಟು ದಕ್ಕುವುದೋ ಅಷ್ಟಷ್ಟು ಬಿತ್ತುತ್ತ
ಮುನ್ನುಗ್ಗುವ ಎಲ್ಲರೊಳಗಿನ
ಘನ ರೈತ ಶ್ರೀಮಂತ
ಓ ಹೃದಯವೆ
ಮನುಜ ಕುಲ ನಿನಗೆ ಧನ್ಯ!
ಗರ್ಭದ ಕಾರಾಗೃಹ ಕಗ್ಗತ್ತಲೆಯಲು
ಬೈರಾಗಿಯ ಹಾಗೆ ಕೂತು ಬಡಿದು
ಬದುಕ ಪಯಣದಂತಿಮ ನಿಲ್ದಾಣಕು
ಜೀವಂತ ಗಾಡಿ ಎಳೆದೊಯ್ದು
ಮೆರೆವ ಮಾತೆ ಮಾತೆಯರ ಮಾತೆ
ಮನುಜಕುಲದ ಮಹಾಮಾತೆ
ಎಲೆ ನಲ್ಮೆಯ ಹೃದಯವೆ
ಮನುಜಕುಲ ನಿನಗೆ ನಿರಂತರ ಧನ್ಯ!
ಹೃದಯವಂತರು ಎಲ್ಲಾ
ಸಹೃದಯರು ಹುಡುಕಿದರೆ ಮಾತ್ರ!
ಕವನ ಚೆನ್ನಾಗಿದೆ ಮೂರ್ತಿ
Very nicely penned dr
ಸೂಪರ್ ಸರ್