ಅಂಕಣ ಸಂಗಾತಿ
ಗಜಲ್ ಲೋಕ
ಹೊನ್ನಗದ್ದೆಯಲ್ಲಿ ಅರಳಿದ
ರೇಖಾ ಗಜಲ್ ಗಳು
ನಾನು ಪ್ರೀತಿಸುವ ಗಜಲ್ ಚಾಂದನಿಯ ಅಭಿಮಾನಿಗಳಿಗೆ ತುಂಬು ಹೃದಯದಿಂದ ಗಜಲ್ ಮಧುಶಾಲೆಗೆ ಆಹ್ವಾನಿಸಲು ಅಶಅರ್ ಮಧುಬಟ್ಟಲು ಹಿಡಿದು ಕಾಯುತ್ತಿರುವೆ, ತಮ್ಮ ಆಗಮನಕ್ಕಾಗಿ ಕನವರಿಸುತ್ತಿರುವೆ. ಬನ್ನಿ..ಸಾಕಿಯ ಮೃದು ಹಸ್ತಗಳಿಂದ ಮಧುಬಟ್ಟಲುಗಳನ್ನು ಬರಿದುಗೊಳಿಸಲು, ಗಜಲ್ ನ ಅಮಲಿನಲ್ಲಿ ತೇಲಾಡಲು…
“ನನ್ನ ಕಂಬನಿಯ ಸತ್ಯ ಅದರಲ್ಲಿ ಅಡಗಿದೆ
ಒಂದು ಯುಗದವರೆಗೆ ಕಾಗದ ತೇವವಾಗಿತ್ತು“
–ಮೀರ್ ತಖಿ ಮೀರ್
ಕಾವ್ಯ.. ಎಂದರೇನು ಎಂಬ ಪ್ರಶ್ನೆ ನಮಗೆ ಎದುರಾದರೆ ‘ಇದಮಿತ್ಥಂ’ ಎಂಬ ಉತ್ತರ ಕೊಡಲು ನಾವು ಒದ್ದಾಡುತ್ತೇವೆ. ಕಾರಣ, ಕಾವ್ಯ ನವನವೋನ್ಮೇಷಶಾಲಿನಿಯಾಗಿದ್ದು, ಜಲದಂತೆ ಪಾತ್ರೆಗಳಿಗೆ ಅನುಗುಣವಾಗಿ ತನ್ನ ರೂಪವನ್ನು ಬದಲಿಸಿಕೊಳ್ಳುತ್ತ ಇಂದಿಗೂ ಆಕರ್ಷಣೆಯನ್ನು ಉಳಿಸಿಕೊಂಡು ಬಂದಿದೆ. ಇದು ಬುದ್ಧಿ ಭಾವಗಳ ವಿದ್ಯುದಾಲಿಂಗನವಾಗಿದ್ದು, ಹೇಗೆ, ಯಾವಾಗ ಉದಯಿಸುತ್ತದೆ ಎಂದು ಹೇಳಲಾಗದು. ಇದೊಂದು ನಿಗೂಢ, ಆಕಸ್ಮಿಕ ಮತ್ತು ವಿಸ್ಮಯ. ಉತ್ತಮ ಕಾವ್ಯದ ಆವಿರ್ಭಾವಕ್ಕಾಗಿ ಕವಿಗಳು ಸಾವಧಾನ ಚಿತ್ತದಿಂದ ಕಾಯಬೇಕಾಗುತ್ತದೆ. ಪ್ರೀತಿ, ಪ್ರೇಮ ಕಾವ್ಯದ ಸ್ಥಾಯಿ ಭಾವವಾದರೂ ಸಮಕಾಲೀನ ಸ್ಪಂದನ ಮುಖ್ಯವಾಗುತ್ತದೆ. ಇದರಲ್ಲಿ ಲಯ ಮತ್ತು ಛಂದಸ್ಸು ತಾಂತ್ರಿಕವಾಗಿದ್ದರೆ, ಪರಿಕಲ್ಪನೆಗಳು ತಾತ್ವಿಕ ಮಟ್ಟದಲ್ಲಿ ಇರುತ್ತವೆ, ಇರಬೇಕು ಕೂಡ. ಭಾಷೆಯ ಅಂತರ್ಗತ ನಾದದ ಬೆನ್ನು ಹತ್ತುವ ಕವಿ ಎಲ್ಲ ರೀತಿಯ ನಿರ್ದೇಶಿತ ತತ್ವಗಳನ್ನು ಮೀರುತ್ತಾನೆ, ಮೀರಬೇಕು. ಇಲ್ಲಿ ಪ್ರೇಮ ಎನ್ನುವುದು ಅಮೂರ್ತ ನಿರ್ದೇಶಿತ ತತ್ವವಾಗಿರದೆ ಕಣಕಣಗಳಲ್ಲೂ ಮಿಡಿಯುವ ನಿಜಾನುಭವವಾಗಬೇಕು. ಅಂದಾಗ ಮಾತ್ರ ಕವಿ ತನ್ನ ಹೃದಯವನ್ನು ನಾವೆಯಂತೆ ಬಳಸಲು ಸಾಧ್ಯ, ಹೃದಯ ಪಿಸುಗುಟ್ಟಲು ಸಾಧ್ಯ. ಈ ಕಾವ್ಯ ಕೋಗಿಲೆ ಭಾಷೆ, ಗಡಿ ಮೀರಿ ಹಾಡುತ್ತಿದೆ, ರಸಿಕರ ಹೃದಯವನ್ನು ತಣಿಸುತ್ತಿದೆ. ರಸಿಕರ ಹೃದಯದೊಂದಿಗೆ ಮಿಡಿಯುತ್ತಿರುವ ಆ ಕಾವ್ಯ ಪ್ರಕಾರವೆಂದರೆ ‘ಗಜಲ್’. ಅರಬ್ ನ ‘ಗಜಲ್’ ಇರಾನ್ ಮಾರ್ಗವಾಗಿ ಶತಮಾನಗಳ ಅಂತರವನ್ನು ದಾಟಿ, ದೇಶ ಖಂಡಗಳನ್ನು ದಾಟಿ ಕರ್ನಾಟಕದ ಮೂಲೆ ಮೂಲೆಗೂ ಪಸರಿಸಿದೆ, ಪಸರಿಸುತ್ತಿದೆ. ‘ಗಜಲ್’ ಮಳೆಯಂತೆ ತನು-ಮನಕ್ಕೆ ಪುಳಕವನ್ನು ನೀಡುತ್ತದೆ. ಮಳೆ, ನೆನಪುಗಳನ್ನು ತಂದು ಸುರಿಯುತ್ತದೆ. ಮಳೆಯ ಗುಣವೇ ಹಾಗೆ. ಮತ್ತೆ ಮಳೆ ಹೊಯ್ಯುತಿದ್ದಂತೆಯೇ ಎಲ್ಲ ನೆನಪಾಗಿ ಬಿಡುತ್ತದೆ. ‘ಗಜಲ್’ ಬರೆದಷ್ಟು, ಓದಿದಷ್ಟು ಮನದ ಮಧುಬಟ್ಟಲು ತುಂಬಿ ಅಮಲೇರಿಸುತ್ತಲೆ ಇರುತ್ತದೆ. ಇಂಥಹ ‘ಅಮಲು’ ಹಂಚುತ್ತಿರುವ ಗಜಲ್ ಗೋ ಅವರಲ್ಲಿ ಹೊನ್ನಗದ್ದೆಯ ಶ್ರೀಮತಿ ರೇಖಾ ಭಟ್ ಅವರೂ ಒಬ್ಬರು.
ಶ್ರೀಮತಿ ರೇಖಾ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೊನ್ನಗದ್ದೆಯಲ್ಲಿ ಶ್ರೀ ವಿಶ್ವೇಶ್ವರ ಗೋಪಾಲ ಭಟ್ ಹಾಗೂ ಶ್ರೀಮತಿ ಭಾಗೀರಥಿ ಭಟ್ ಅವರ ಒಲವಿನ ಮಗಳಾಗಿ ೧೯೮೬ರ ಜುಲೈ ೩೦ರಂದು ಜನಿಸಿದರು. ಬಿ.ಎ., ಡಿ.ಎಡ್ ಮುಗಿಸಿದ ಇವರು ಯಲ್ಲಾಪುರ ತಾಲೂಕಿನ ಕಾನಗೋಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಓದು, ಬರವಣಿಗೆ ಹಾಗೂ ಗಾಯನದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಇವರು ಗಜಲ್, ಕವನ , ಲೇಖನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಹಲವಾರು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ’ಮಡಿಲ ನಕ್ಷತ್ರ’ ಎನ್ನುವ ಗಜಲ್ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರೆಹಗಾರರ ಚೊಚ್ಚಲ ಕೃತಿಗೆ ಧನಸಹಾಯ ಯೋಜನೆಯಲ್ಲಿ ಪ್ರಕಟವಾಗಿದೆ. ಉತ್ತಮ ಕವಯಿತ್ರಿ, ಗಾಯಕಿಯೂ ಆಗಿರುವ ಶ್ರೀಯುತರಿಗೆ ಉತ್ತರ ಕನ್ನಡ ಜಿಲ್ಲೆಯ ‘ಸ್ಪಂದನಾ ಸೇವಾ ಸಂಸ್ಥೆ’ಯವರು ನಡೆಸಿದ ಜಿಲ್ಲಾ ಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಂದಿದೆ. ‘ಕವಿ ಬಳಗ’ ಎನ್ನುವ ಸಂಘಟನೆ ನಡೆಸಿದ ಧ್ವನಿಸುರುಳಿ ತಯಾರಿಕೆಗಾಗಿ ಭಾವಗೀತೆ ರಚನೆ ಸ್ಪರ್ಧೆಯಲ್ಲಿ ಇವರ ‘ನೀನಿರದ ಬದುಕು’ ಎನ್ನುವ ಭಾವಗೀತೆಯ ಧ್ವನಿ ಸುರಳಿ ಬಿಡುಗಡೆಯಾಗಿದೆ. ಶಿಕ್ಷಕರ ಪ್ರತಿಭಾ ಪರಿಷತ್ತು ನಡೆಸಿದ ರಾಜ್ಯಮಟ್ಟದ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ ಕೆಲವು ಸಂಸ್ಥೆಗಳು ನಡೆಸಿದ ಶಿಶಿಗೀತೆ ರಚನೆ ಸ್ಪರ್ಧೆಗಳಲ್ಲಿ ಶ್ರೀಮತಿ ರೇಖಾ ಭಟ್ ಅವರಿಗೆ ಬಹುಮಾನಗಳು ದೊರೆತಿವೆ.
‘ಗಜಲ್’ ಎಂಬುದು ಶಾಯರ್, ಸುಖನವರ್ ಹಾಗೂ ಗಜಲ್ ಗೋ ಅವರ ಅಂತರಂಗದಲ್ಲಿ ನಿರಾಕಾರ ರೂಪದಲ್ಲಿ ಅಡಕವಾಗಿರುತ್ತದೆ. ಆ ನಿರಾಕಾರಕ್ಕೆ ಆಕಾರ ದೊರೆಯುವುದು ಅನುಭಾವದ ಅಮೃತ ಸಿಂಚನದಿಂದ. ಹೀಗಾಗಿ ವ್ಯಕ್ತಿಯೂ ಏಕಕಾಲಕ್ಕೆ ‘ಗಜಲ್’ ಮತ್ತು ‘ಗಜಲ್ ಗೋ’ ಆಗಿರುತ್ತಾನೆ. ಈ ಕಾರಣಕ್ಕಾಗಿಯೇ ಭುವಿಯ ಅಣುರೇಣು ತೃಣಕಾಷ್ಟಗಳಲೆಲ್ಲ ದೈವಿಸತ್ವವನ್ನು ಕಂಡು ‘ಇಶ್ಕ್ ಹಕೀಕಿ ಗಜಲ್’ ಗಳು ರೂಪುಗೊಳ್ಳಲು ಸಾಧ್ಯವಾಗುತ್ತವೆ. ಗಜಲ್ ಗೋ ಸವಿನುಡಿಯ ಸಿರಿಗುಡಿ ನಿರ್ಮಿಸುವ ಶಿಲ್ಪಿಯಾದರೂ, ಅವನ ಉದ್ದೇಶ ಮಾತ್ರ ಲೋಕದ ಹೊಂಗನಸುಗಳನ್ನು ಸ್ಪಂದಿಸುವುದೆ ಆಗಿದೆ. ಗಜಲ್ ನ ಪ್ರತಿ ಹರ್ಫ್ ಮೆದುವಾಗಿರುವಂತೆ ಪೊಡವಿಯನ್ನೆಲ್ಲ ತಲ್ಲಣಿಸುವ ಸಿಡಿಲಿನ ಮಿಂಚೂ ಆಗಿ ನಿಲ್ಲುತ್ತದೆ. ಈ ದಿಸೆಯಲ್ಲಿ ನಾವು ಹೆಜ್ಜೆ ಇಟ್ಟಾಗ ‘ಗಜಲ್’ ಎಂಬುದು ಸೊನ್ನೆಯಲ್ಲಿ ಜನ್ನತನ್ನೂ, ಶೂನ್ಯದಲ್ಲಿ ಮುಖಮ್ಮಲ್ ಅನ್ನು ಸೃಜಿಸುತ್ತದೆ. ಈ ನೆಲೆಯಲ್ಲಿ ಹೊನ್ನಗದ್ದೆಯ ರೇಖಾ ಭಟ್ ಅವರ ‘ಗಜಲ್’ಗಳಲ್ಲಿ ಭಾವತೀವ್ರತೆಯ ಜೊತೆ ಜೊತೆಗೆ ಬದುಕು ಕಟ್ಟುವ ಕಲೆಯೂ ಆವರಿಸಿಕೊಂಡಿದೆ. ಮುಗಿಲೂರಿಗೆ ಹೊರಟ ದಿಬ್ಬಣವಿದೆ, ಬೆಚ್ಚಗಿನ ಹಂಬಲಕ್ಕೆ ಹರಿದ ಕೌದಿ ಒಲೆಯುವ ಕಾಳಜಿ, ಕಕ್ಕುಲಾತಿ ಇದೆ, ಕಳೆದುದೆಲ್ಲ ಹುಡುಕಲು ಕಾಡು ಬೇಕಿದೆ ಎಂಬ ಆರ್ತತೆ, ನಲ್ಮೆಯಿರದ ಬಾಳಿಗೊಂದು ಅರ್ಥವಿದೆಯೇ ಎಂಬ ಆರ್ದ್ರತೆ, ಒಲವೆ ಇರದ ಕಂಗಳ ದೀಪವು ಬೆಳಕಾಗಬಲ್ಲದೇ ಎಂಬ ಆತಂಕ, ಹಸಿದಿರುವ ಒಡಲಿಗಾಗಿ ಅಲೆಯುತ್ತಿರಲು ಉಣಿಸಿದ ಮಾನವೀಯ ಅಂತಃಕರಣ… ಎಲ್ಲವೂ ಇವರ ‘ಗಜಲ್’ ಗಳಲ್ಲಿ ಮುಪ್ಪರಿಗೊಂಡಿವೆ. ಕೋಮಲವಾದ, ಸ್ತ್ರೀ ಸಂವೇದನೆಯ ಮೆಲುಮಾತುಗಳು, ನಗು-ಅಳು-ತಲ್ಲಣಗಳ ಆಪ್ತಲೋಕ ಗಜಲ್ ಪ್ರೇಮಿಗಳಿಗೆ ಸ್ವಾಗತಿಸುತ್ತದೆ.
“ನೀ ಬರುವ ಮೊದಲು ಪ್ರತಿಕ್ಷಣವೂ ಮಧುರವೆಂದು ಊಹಿಸಿರಲಿಲ್ಲ
ಮುಳ್ಳುಗಳ ನಡುವೆ ಹೂವಿನಂತೆ ಬಾಳಬಹುದೆಂದು ಊಹಿಸಿರಲಿಲ್ಲ”
‘ಊಹಿಸಿರಲಿಲ್ಲ’ ಎನ್ನುವ ‘ರದೀಫ್’ ಇಡೀ ಷೇರ್ ಗೆ, ಗಜಲ್ ಗೆ ಜೀವಾಳವಾಗಿದೆ. ಪ್ರಾಣಿಗಳಲ್ಲಿಯೆ ಮನುಷ್ಯನ ಬದುಕು ವಿಶಿಷ್ಟವಾದುದು, ಅನುಪಮವಾದುದೇನೊ ಸರಿಯೆ ಸರಿ. ಆದರೆ ಆ ಬದುಕಿನಲ್ಲಿ ಪ್ರೀತಿಯ ಆಲಿಂಗನವಿರದಿದ್ದರೆ ಅದಕ್ಕೆ ಬದುಕು ಎನ್ನಲಾದೀತೆ..!! ಪ್ರೀತಿಯ ಸೋಂಕು ತಗುಲದ ಜೀವನವು ಜಹನ್ನಮ್ ನ ಅನುಭವ ನೀಡಿದರೆ, ಪ್ರೀತಿಯಲ್ಲಿ ನೆನೆದು ತೇಯ್ದ ಜೀವನವು ಜನ್ನತ್ ನ ಅನುಭಾವವನ್ನು ತೆರೆದಿಡುತ್ತದೆ. ಅಂತೆಯೇ ಮೋಹಬ್ಬತ್ ನಮ್ಮ ಹೃದಯದ ದೇಹಲಿಜ್ ದಾಟಿದಾಗ ಆ ಬದುಕಿನ ರಸಾನಂದಕ್ಕೆ ಎಲ್ಲೆಯೆ ಇರುವುದಿಲ್ಲ. ಈ ನೆಲೆಯಲ್ಲಿ ಮೇಲಿನ ಷೇರ್ ಪ್ರೀತಿಯ ಔಚಿತ್ಯ, ಪ್ರೇಮದ ಶಕ್ತಿ; ಸಾಂಗತ್ಯದ ಅವಶ್ಯಕತೆಯನ್ನು ಸಾರುತ್ತಿದೆ. ಪ್ರೀತಿಯ ಊರುಗೋಲು ಜೊತೆಗಿದ್ದರೆ ಸಪ್ತ ಸಾಗರಗಳನ್ನು ದಾಟಬಹುದು, ವಿಷದ ಮಧು ಬಟ್ಟಲಲ್ಲಿ ಅಮೃತದ ಮದಿರೆ ಸವಿಯಬಹುದು; ನಂಜು ಕಾರುವ ಮುಳ್ಳುಗಳು ನಡುವೆಯೂ ಮಲ್ಲಿಗೆಯಂತೆ ಸುಮ ಬೀರುತ್ತ ಜೀವಿಸಬಹುದು. ಈ ದಿಸೆಯಲ್ಲಿ ಗಜಲ್ ಗೋ ಅವರು ಪ್ರೀತಿಯನ್ನು ತುಂಬಾ ಪ್ರೀತಿಯಿಂದ ತಮ್ಮ ಅಶಅರ್ ನಲ್ಲಿ ಹಿಡಿದಿಟ್ಟಿದ್ದಾರೆ.
“ಹೊಸಬೆಳಕಿನ ಎಳೆಗಾಗಿ ತೆರೆದಿರಲಿ ಬಾಗಿಲು
ಒಳಗಿನ ಹೊಳಹಿಗಾಗಿ ತೆರೆದಿರಲಿ ಬಾಗಿಲು“
ಭೌತಿಕ ಲೋಕವನ್ನು ನೇಸರನ ಉದಯವು ಬೆಳಕಿನಿಂದ ಸಿಂಗರಿಸಿದರೆ, ಅಸ್ತಂಗತವು ಕತ್ತಲಿನಿಂದ ಜೋಗುಳ ಹಾಡುತ್ತದೆ. ಆದರೆ ಮನಸ್ಸಿಗೆ, ಕನಸ್ಸಿಗೆ; ಹೃದಯಕ್ಕೆ ರವಿಯ ಹೊಂಗಿರಣ ಕೇವಲ ನೆಪ ಮಾತ್ರ. ಪ್ರತಿ ಹೃದಯಗಳಲ್ಲಿ ‘ಬೆಳಕು’ ಇದ್ದೆ ಇರುತ್ತದೆ, ಅದನ್ನು ಗ್ರಹಿಸುವ, ಅರ್ಥೈಸುವ ಹಾಗೂ ಅನುಭವಿಸುವ ಮನಸ್ಥಿತಿ ಇರಬೇಕು ಅಷ್ಟೇ. ಈ ನೆಲೆಯಲ್ಲಿ ಮೇಲಿನ ಷೇರ್ ಸೂಫಿ ಸಂತರ ವಿಚಾರಧಾರೆಯನ್ನು ಪ್ರಚುರಪಡಿಸುತ್ತಿದೆ. ಮನದ ಅಂಧಕಾರ ಕಳೆಯಲು ಬೆಳಕಿಗಾಗಿ ಎಲ್ಲೆಲ್ಲೊ ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ, ಎದೆಯೊಳಗೆ ಪ್ರಜ್ವಲಿಸುತ್ತಿರುವ ಹಣತೆಗೆ ಎಣ್ಣೆಯಾಗಿ ಉಸಿರಾಡುವುದನ್ನು ಕಲಿಯಬೇಕಿದೆ ಎಂಬ ಸಂದೇಶವನ್ನು ಈ ಷೇರ್ ನೀಡುತ್ತಿದೆ.
ಪ್ರೇಮ ಗಜಲ್ ನಲ್ಲಿ ಸಾಂಕೇತಿಕವಾಗಿ ಪ್ರತಿಧ್ವನಿಸುತ್ತಿದೆ, ಪ್ರತಿಧ್ವನಿಸಬೇಕು. ದೈವಿಕತೆಯ ಕಡೆಗೆ ಮನಸನ್ನು ಒಯ್ದು, ಆತ್ಮಿಕ ಆನಂದ ನೀಡಬೇಕು. ಗಜಲ್ ನ ಸೌಂದರ್ಯ, ಪ್ರೇಮ ಮನುಷ್ಯನ ಬದುಕನ್ನು ಹಸನುಗೊಳಿಸುವಂತಿರಬೇಕು. ಸಂಸ್ಕೃತಿಗೆ ಉಜ್ವಲತೆಯನ್ನು ತಂದುಕೊಡಬೇಕು. ಇಂಥಹ ಹತ್ತು ಹಲವಾರು ಗಜಲ್ ಗಳು ಶ್ರೀಮತಿ ರೇಖಾ ಭಟ್ ಅವರಿಂದ ರೂಪುಗೊಳ್ಳಲಿ ಎಂದು ಶುಭ ಹಾರೈಸುತ್ತೇನೆ.
“ನಿನ್ನನ್ನು ಭೇಟಿಯಾಗಲು ಪ್ರಾರ್ಥಿಸದ ಹೃದಯವಿದ್ದರೇನೂ ಚೆಂದ
ನಾನು ನಿನ್ನನ್ನು ಮರೆತು ಬದುಕಲು ದೇವರು ಬಿಟ್ಟರೇನು ಚೆಂದ“
– ಖತೀಲ್ ಶಿಫಾಯಿ
ಮಧುಬಟ್ಟಲಿನ ಅಮಲು ಮದಿರೆಯ ಹನಿ ಹನಿಗಳೊಂದಿಗೆ ಮೇಳೈಸಿರುತ್ತದೆ. ಬಟ್ಟಲು ಬರಿದಾದಂತೆ ಮತ್ತೆ ಮತ್ತೆ ತುಂಬಿಸಲು ಮೈ ಮನವು ಬಿಕ್ಕಳಿಸುತ್ತಿರುತ್ತದೆ. ಸಾಕಿಯು ಪಕ್ಕದ ಟೇಬಲ್ಲಿನ ರಸಿಕರಿಗೆ ಮದಿರೆಯನ್ನು ಹಂಚುತಿದ್ದಾಳೆ. ಮತ್ತೆ ಮುಂಅದಿನ ವಾರ ಸಾಕಿಯೊಂದಿಗೆ ಪ್ರೇಮದ ಮಧುಬಟ್ಟಲಿನೊಂದಿಗೆ ಹಾಜರಾಗುವೆ, ಮದಿರೆಯ ಸ್ವಾದ ಸವಿಯಲು ಬರುವಿರಲ್ಲವೆ.. ನಿಮ್ಮ ಮಲ್ಲಿ ಸಾಕಿಯಾಗಿ ಮಧುಶಾಲೆಯ ದೇಹಲಿಜ್ ನಲ್ಲಿ ಕಾಯುತ್ತಿರುವನು. ಎಲ್ಲರಿಗೂ ತುಂಬು ಹೃದಯದ ವಂದನೆಗಳು..
ಡಾ. ಮಲ್ಲಿನಾಥ ಎಸ್. ತಳವಾರ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ