ಹೆಸರಲ್ಲೇನಿದೆ..

ಪ್ರಬಂಧ

ಹೆಸರಲ್ಲೇನಿದೆ..

ಜ್ಯೋತಿ ಡಿ.ಬೊಮ್ಮಾ.

Samskara (rite of passage) - Wikipedia

ಹೆಸರಿನ ಮಹತ್ವ ಇತ್ತಿಚೆಗೆ ಹೆಚ್ಚಾಗುತ್ತಿದೆ. ಮಗು ಹುಟ್ಟುವುದಕ್ಕೆ ಮೊದಲೆ ಮಗುವಿಗೆ ಏನು ಹೆಸರಿಡಬೇಕೆಂದು ಮನೆಯವರೆಲ್ಲ ತಲೆ ಕೆಡೆಸಿಕೊಂಡಿರುತ್ತಾರೆ. ಇಂತದ್ದೆ ಅಕ್ಷರದಿಂದ ಶುರುವಾಗುವ ಹೆಸರಿರಬೆಕೆಂಬ ಅಭಿಲಾಷೆಯೊಂದಿಗೆ , ತಂದೆಯ ಹೆಸರಿನ ಮೊದಲಕ್ಷರದಿಂದ ಶುರುವಾಗುವ ಹೆಸರು. ತಾಯಿಯ ಹೆಸರಿನ ಮೊದಲಕ್ಷರದಿಂದ ಶುರುವಾಗುವ ಹೆಸರು.ಇಲ್ಲವೆ ಮೊದಲ ಮಗುವಿನ ಹೆಸರಿನ ಮೊದಲಕ್ಷರದಿಂದ ಶುರುವಾಗುವ ಹೆಸರು ಹೀಗೆ . ಮೊದಲ ಹಾಗೂ ಎರಡನೆ ಮಗುವಿನ (ಇದ್ದರೆ ಮೂರನೆ ಮಗು ) ಹೆಸರುಗಳು ಪ್ರಾಸಗಳಂತೆ ಗೊಚರಿಸಬೇಕು. ಇಲ್ಲವೇ ಎಲ್ಲಾ ಮಕ್ಕಳ ಹೆಸರುಗಳು ಒಂದೇ ಅಕ್ಷರದಿಂದ ಆರಂಭವಾಗಬೇಕು . ಇಂತಹ ಹೆಸರುಗಳಿಗೆ ತಲೆ ಕೆಡೆಸಿಕೊಂಡು ಒಂದು ಹೆಸರು ನಿರ್ದರಿಸುವಲ್ಲಿ ಯುದ್ದ ಮಾಡಿದಂತಾಗುತ್ತದೆ. ಈಗೆಲ್ಲ ಹೆಸರಿನ ಪುಸ್ತಕಗಳೆ ಇವೆ .ಇಲ್ಲದಿದ್ದರೆ ಹೇಳಲು ಗೂಗಲಜ್ಜ ಇದ್ದಾನೆ. ಈ ಅಕ್ಷರದಿಂದ ಶುರುವಾಗುವ ಹೆಸರು ಬೇಕು ಸೂಚಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರೆ ಹೆಸರಿನ ಹೊಳೆ ಹರಿದು ಬರುತ್ತದೆ. ಈ ಹೆಸರು ಹುಡುಕುವ ಗೊಂದಲದಲ್ಲಿ ಮಗುವಿನ ನಾಮಕರಣ ಸಮಾರಂಭ ಮುಗಿದರೂ ಮಗುವಿನ ಹೆಸರು ನಿರ್ಧಾರ ವಾಗಿರುವದಿಲ್ಲ.ತೊಟ್ಟಿಲಲ್ಲಿ ದೇವರ ಹೆಸರೊ ಮನೆಯ ಹಿರಿಯರ ಹೆಸರೊ ಸೂಚಿಸಿ ಮಗುವಿನ ಕಿವಿಯಲ್ಲಿ ಉಸುರಿ  ನಾಮಕರಣದ ಶಾಸ್ತ್ರ ಮುಗಿಸಿರುತ್ತಾರೆ.ಮಗುವಿನ ಹೆಸರು ಕೇಳಿದರೆ ಇನ್ನೂ ನಿರ್ದರಿಸಿಲ್ಲ ಎಂಬ ಉತ್ತರ ಬರುತ್ತದೆ. ಮುಂದೆ ಆ ಮಗು ಶಾಲೆಗೆ ಹೋಗುವವರೆಗೆ ಹೆಸರಿನ ಹುಡುಕಾಟದಲ್ಲೆ ಇರುತ್ತಾರೆ.

ಹೀಗೆ ಕಷ್ಟಪಟ್ಟು ಹುಡುಕಿ ಇಟ್ಟ ಹೆಸರುಗಳು ನೇಪಥ್ಯಕ್ಕೆ ಸರಿದಿರುತ್ತವೆ. ಪ್ರೀತಿಯಿಂದ ಕರೆಯುವ ನಿಕ್ ನೇಮ್‌ ಗಳೆ ರೂಢಿಯಾಗಿ ನಿಜ ನಾಮಧೇಯ ಶಾಲೆಯ ದಾಖಲಾತಿಯಲ್ಲಿ ಇಲ್ಲವೆ ಮದುವೆಯ ಕರೆಯೋಲೆಯಲ್ಲಿ ಮಾತ್ರ ಕಾಣಿಸುತ್ತದೆ. ಚಿನ್ನು , ಪುಟ್ಟ  , ಪುಟ್ಟಿ , ಇಂತಹ ಹೆಸರುಗಳೆ ಖಾಯಂ ಹೆಸರುಗಳಾಗುತ್ತವೆ.

ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ಹೆಸರುಗಳು A ಅಥವಾ I ಅಕ್ಷರದಿಂದಲೆ ಕೊನೆಯಾಗುತ್ತವೆ. ಶುರುವಾಗುವ ಅಕ್ಷರಗಳು ಬೇರೆಬೇರೆ ಯಾದರು ಕೊನೆಗೊಳ್ಳುವ ಅಕ್ಷರಗಳು ಮಾತ್ರ ಬಹುತೇಕ ಇವೆರಡೆ. ಈಗಿನ ಹೆಸರುಗಳೆಲ್ಲ ಎರಡಕ್ಷರದವು , ಬಹಳವಾದರೆ ಮೂರಕ್ಷರ. ಸರಸ್ವತಿ , ಭಾಗೀರಥಿ ಇಂತಹ ಹೆಸರುಗಳನ್ನು ಈಗ ಇಡುವದೆ ಅಸಾದ್ಯ.

ಒಂದೊಂದು ಹೆಸರುಗಳು ಹುಡುಗನದ್ದೊ , ಹುಡುಗಿಯದ್ದೊ ಕನ್ಫ್ಯೂಸ್ ಆಗುತ್ತದೆ.ಹೆಸರನ್ನು ಶಾರ್ಟ್ ಕಟ್ ಮಾಡಿ ಕರೆಯುವದು ಒಂದು ರೂಢಿ ನಮಗೆ . ಗೆಳೆಯರಲ್ಲಿ ಇದು ಹೆಚ್ಚು ಪ್ರಚಲಿತವಿರುತ್ತದೆ. ಅತಿ ಸಿಟ್ಟು ಬಂದಾಗ ಅಥವಾ ಅತಿ ಪ್ರೀತಿ ಉಕ್ಕಿದಾಗಲೂ ಹೆಸರುಗಳು ವಿರೂಪಗೊಳ್ಳುವದು ಸಾಮಾನ್ಯ.

ಒಂದೊಂದು ಹೆಸರುಗಳು ಉಚ್ಚರಿಸುವದೆ ತ್ರಾಸದಾಯಕ.ಅಂತಹ ಹೆಸರುಗಳು ಉಚ್ಚರಿಸಲು ನಾಲಿಗೆ ಸರಾಗವಾಗಿ ಹೊರಳುವದೆ ಇಲ್ಲ. ದ್ವೀತಿ , ಅದ್ವೈತ , ಶಾಂಗ್ರಿಲಾ ಇಂತಹ ಅನೇಕ ಹೆಸರುಗಳು ಒಬ್ಬೊಬ್ಬರ ಬಾಯಲ್ಲಿ ಒಂದೊಂದು ರೀತಿಯ ಉಚ್ಚಾರಣೆ ಯೊಂದಿಗೆ ಉಚ್ಚರಿಸ್ಪಡುತ್ತದೆ.

ನಮ್ಮ ತಮ್ಮನ ಮಗನ ಹೆಸರು ಶ್ರೀನೈ ಎಂದಿದೆ. ಇದು ಗಣೆಶನಿಗಿರುವ ಇನ್ನೊಂದು ಹೆಸರಂತೆ . ನಮ ಅಜ್ಜಿ ಅವನನ್ನು ಸಿರಿನಾಯಿ ಎಂದೆ ಕರೆಯುತ್ತಾಳೆ. ಒಂದು ಅರ್ಥ ಸೂಚಿಸುವ ಹೆಸರು ಸರಿಯಾಗಿ ಉಚ್ಚರಿಸಲಾಗದೆ ಏಡವಟ್ಟಾಗುವ ಸಂದರ್ಬಗಳು ಉಂಟು. ಅದಕ್ಕೆ ನಮ್ಮ ಅಜ್ಜಿಗೆ ಅವನನ್ನು ಚಿನ್ನು ಎಂದು ಕರೆಯಲು ಸೂಚಿಸಲಾಯಿತು.ಈಗ ಮನೆಯಲ್ಲಿ ಎಲ್ಲರಿಗೂ ಅವನು ಚಿನ್ನು 

ಹೆಸರಿನೊಂದಿಗೆ ಆಪ್ತ ಸಂಬಂಧಗಳುಂಟು.ಕೆಲ ಹೆಸರುಗಳು ಮನ ಘಾಸಿಗೊಳಿಸಿದರೆ ಕೆಲ ಹೆಸರು ಮನ ಮುದಗೊಳಿಸುತ್ತವೆ.ಕೆಲ ಹೆಸರು ಮಮತೆ ಉಕ್ಕಿಸುತ್ತವೆ . ಕೆಲ ಹೆಸರುಗಳು  ಗೌರವ ಸೂಚಿಸುತ್ತವೆ.  ಮರೆಯಾದ ಹೆಸರುಗಳು ಮನಪರದೆಮೇಲೆ ಅಚ್ಚಳಿಯದೆ ಉಳಿದಿರುತ್ತವೆ. ಹೆಸರಿನೊಂದಿಗೆ ಬೆರೆತ ಅವರ ವ್ಯಕ್ತಿತ್ವವೂ .

ಹೆಸರುಗಳನ್ನು ಕರೆಯುವ ದ್ವನಿಗಳಲ್ಲೂ ಅನೇಕ ಭಾವಗಳು.ಒಂದೇ ಹೆಸರನ್ನು ಅನೇಕ ಭಾವಗಳಲ್ಲೂ ಕರೆಯಬಹುದು. ಪ್ರೀತಿ ಯಿಂದ ಕೋಪದಿಂದ , ಉದಾಸೀನದಿಂದ , ಕುಹಕದಿಂದ  ತಮ್ಮ ಭಾವಗಳನ್ನು ಹೆಸರಿನ ಮೇಲೆ ಹೋರಿಸಿ ಮಾತಾಡಿದಾಗ ಹೆಸರಿನ ಮರ್ಮವೂ ಅಗಾಧವೆ ಎನಿಸದಿರದು.

ಹಿಂದೆಲ್ಲ ಗಂಡ ಹೆಂಡತಿಗೆ ಹೆಸರು ಹಿಡಿದು ಕರೆಯುವ ಸಂಪ್ರದಾಯವಿರಲಿಲ್ಲ.ಹೆಂಡತಿಗೂ ಒಂದು ಹೆಸರಿರಬಹುದು ಎಂದು ಗಂಡನಿಗೆ ಗೊತ್ತಿರುತಿತ್ತೊ ಇಲ್ಲವೋ. ಎಕೆಂದರೆ ಅವನು ಹೆಂಡತಿಗೆ ಕರೆಯುವದು ಲೇ ಎಂದೊ ಏ ಎಂದೋ ಹೀಗೆ ಕರೆಯುತಿದ್ದರು.ಇನ್ನೂ ಹೆಂಡತಿಯಾದವಳ ಬಾಯಿಂದ ಗಂಡನ ಹೆಸರು ಹೊರಡಿಸಬೇಕಾದರೆ ಒಂದು ಯುದ್ದಮಾಡಿದಂತೆ.ಗಂಡನ ಹೆಸರು ಹೇಳಲು ನಾಚಿಕೆಯೋ ನಾಚಿಕೆ. ಮದುವೆಯಲ್ಲಿ ಗಂಡಿನ ಹೆಸರು ಹೆಣ್ಣಿಗೆ , ಹೆಣ್ಣಿನ ಹೆಸರು ಗಂಡಿಗೆ ಕೇಳುವದು ಸಂಪ್ರದಾಯ. ಒಬ್ಬರ ಹೆಸರು ಇನ್ನೊಬ್ಬರ ಬಾಯಲ್ಲಿ ನಲಿದಾಡಿ ಸಂಕೋಚ ದೂರಗೊಳಿಸಿ ಆತ್ಮೀಯತೆ ಮೂಡಿಸುವ ಒಂದು ಉಪಾಯ.

ಆದರೆ ಈಗ ಕಾಲ ಬದಲಾಗಿದೆ ಗಂಡ ಹೆಂಡತಿ ಏಕವಚನದಲ್ಲೆ ಒಬ್ಬರ ಹೆಸರೊಬ್ಬರು ಉಚ್ಚರಿಸಿ ಮಾತಾಡುವದು ಸಾಮಾನ್ಯ ವಾಗಿದೆ. ಆದರೂ ಈಗಲೂ ಕೂಡ ಗಂಡನನ್ನು ಹೆಸರಿನೊಂದಿಗೆ ಕರೆಯುವದು ಕೆಲವೊಬ್ಬರಿಗೆ ಅಸಹಜವೆ ಅನಿಸುತ್ತದೆ.

ನಮ್ಮ ಆತ್ಮಿಯರ ಮನೆಯಲ್ಲಿ ಅವರ ಮಗನ ಮದುವೆ ಜರುಗಿತು.ಇಬ್ಬರದು ಪ್ರೇಮವಿವಾಹ. ಇಬ್ಬರೂ ಕಾಲೇಜಿನ ಸಹಪಾಠಿಗಳಾಗಿರುವದರಿಂದ ಏಕವಚನದಲ್ಲೆ ಮಾತಾಡಿಕೊಳ್ಳುತಿದ್ದರು. ಸಂಪ್ರದಾಯ ಬೆಳೆಸಿಕೊಂಡು ಬಂದ ಅವರಿಗೆ ಇದರಿಂದ ಅಸಮಾಧಾನವಾಗುತಿತ್ತು.ಹೆಂಡತಿಯಾದವಳು ಗಂಡನ ಹೆಸರಿಡಿದು ಏಕವಚನದಲ್ಲಿ ಮಾತಾಡುವದು ಅವಮರ್ಯಾದೆ ಎಂದೆ ಭಾವಿಸುತಿದ್ದರು.ಗಂಡನಿಗೆ ರ್ರೀ , ಅಥವಾ ಎನ್ರೀ , ಎಂದೇ ಕರೆಯಲು ಸುಚಿಸಿದರು. ಅವಳೋ ಯಾವದೆ ರೂಢಿಯನ್ನು ಒತ್ತಾಯವಾಗಿ ಹೇರುವದನ್ನು ವಿರೋಧಿಸುತಿದ್ದಳು. ಅದಕ್ಕೆ  ಅವಳು ಗಂಡನಿಗೆ ಅವನ ಹೆಸರಿನಿಂದ ಕೂಗಬೇಡ ಎಂದಿದ್ದಕ್ಕೆ ಗಂಡ  ಎಂದೆ  ಕರೆಯತೊಡಗಿದಳು. ಗಂಡ ಊಟಕ್ಕೆ ಬನ್ನಿ , ಗಂಡ ಟೀ ಕುಡಿತಿರಾ , ಗಂಡ ನಿಮ್ಮಮ್ಮ ಕರಿತಿದಾರೆ , ಹೀಗೆ .  ಅವಳ  ವರಸೆ ಮನೆಯಲ್ಲಿ ಎಲ್ಲರಿಗೂ ಪಿಕಲಾಟಕ್ಕಿಟ್ಟುಕೊಂಡಿತು.

ಅತ್ತೆ ,ಮಾವ , ಭಾವ ಎಂಬಂತೆ ಗಂಡನನ್ನು ಗಂಡ ಎಂದು ಕರೆಯುವದರಲ್ಲಿ ಏನು ತಪ್ಪು ಎಂಬುದು ಅವಳ ವಾದ. ಗಂಡ ಎಂದು ಕರೆಯುವದಕ್ಕಿಂತ ಗಂಡನ ಹೆಸರಿಡಿದು ಕರೆಯುವದೆ ಸೂಕ್ತ ಎಂದು ಎಲ್ಲರೂ ಒಮ್ಮತದ ನಿರ್ದಾರಕ್ಕೆ ಬಂದರು.

ಎಲ್ಲಾ ಸಂಬಂಧಗಳಿಗೂ ಒಂದೊಂದು ಹೆಸರುಂಟು . ಹಾಗಂತ ಆ ಸಂಬಂಧ ಸೂಚಿ ಹೆಸರಿನಿಂದ ಅವರನ್ನು ಕರೆಯುವದು ಮುಜುಗರ ಉಂಟು ಮಾಡುತ್ತೆ.

ಗಂಡನನ್ನು ಗಂಡ ಎಂದೊ , ಹೆಂಡತಿಯನ್ನು ಹೆಂಡತಿ ಎಂದೊ , ನಾದಿನಿಯನ್ನು , ಮೈದುನನನ್ನು , ಓರಗಿತ್ತಿಯನ್ನು ಇನ್ನೂ ಅನೇಕ ಸಂಬಂಧ ಗಳನ್ನು ಅವುಗಳ ಹೆಸರಿನಿಂದ ಕರೆಯಲಾಗದು.

ಹೆಸರಲ್ಲೇನಿದೆ..! ಕರೆಯಲು ಅಥವ ಸೂಚಿಸಲು ಇರುವ ಒಂದು ನಾಮಪದ ಅಷ್ಟೆ , ಎನ್ನುತ್ತಲೆ ಹೊಸ ಹೆಸರುಗಳಿಗಾಗಿ ತಡಕಾಡುತ್ತೆವೆ. ಹೊಸತನದ ತುಡಿತ ಚಿರನೂತನ.


ಜ್ಯೋತಿ ಡಿ.ಬೊಮ್ಮಾ.

2 thoughts on “ಹೆಸರಲ್ಲೇನಿದೆ..

Leave a Reply

Back To Top