ಅಂಕಣ ಬರಹ

ಗಜಲ್ ಲೋಕ

ಜಕಾಪುರೆಯವರ ಗಜಲ್ ಗಳ

ವಿಹಂಗಮನೋಟ

ನಮಸ್ಕಾರ…

ಇಂದು ಮತ್ತೊಮ್ಮೆ ನಾನು ತುಂಬಾ ಪ್ರೀತಿಸುವ ಗಜಲ್ ಗುಲ್ಜಾರ್ ನಲ್ಲಿ ವಿಹರಿಸುತಿದ್ದೇನೆ, ಈ ಲೋಕವನ್ನೇ ಮರೆತು. ರಂಗು ರಂಗಿನ ಹೂವುಗಳ ಸೌಂದರ್ಯವನ್ನು ಆಸ್ವಾದಿಸುತ್ತಾ, ತಮ್ಮನ್ನು ಆಸ್ವಾದಿಸಲು ಸ್ವಾಗತಿಸುತ್ತ…!!

ಎಲ್ಲಿವರೆಗೆ ಪ್ರೀತಿ ಸುತ್ತ ಮುತ್ತ ಇರುವುದಿಲ್ಲ

ಸೌಂದರ್ಯ ಏಕಾಂತದಲ್ಲಿದೆ ನಿರಾಸೆಯಲ್ಲಿದೆ

                                    –ಜಹೀರ್ ಕಾಶ್ಮೀರಿ

         ‘ಪ್ರೀತಿ’ ಎನ್ನುವ ಶಬ್ದವು ಭಾವವಾಗಿ ಮನಸನ್ನು ಬೆತ್ತಲೆಗೊಳಿಸಿದಾಗ ಬದುಕು ನೆಮ್ಮದಿಯ ಉಡುಪನ್ನು ಧರಿಸುತ್ತದೆ. ಈ ‘ಅನುರಾಗ’ ಎನ್ನುವುದು ಅಮಾವಾಸ್ಯೆಯ ಕತ್ತಲಲ್ಲೂ ಬೆಳದಿಂಗಳ ನೂರ್ ಚೆಲ್ಲುತ್ತದೆ. ಅಂತೆಯೇ ಪ್ರತಿಯೊಂದು ಜೀವ ಸಂಕುಲ ಪ್ರೀತಿಗಾಗಿ ಜೀವನವಿಡೀ ಪರಿತಪಿಸುತ್ತಲೆ ಇದೆ, ಇರುತ್ತದೆ; ಇರಬೇಕು ಕೂಡ. ಇದು ಸಪ್ತ ವರ್ಣದ ಕಾಮನಬಿಲ್ಲಿಗಿಂತಲೂ ಹೆಚ್ಚು ಆಯಾಮಗಳನ್ನು, ಸಂವೇದನೆಗಳನ್ನು ಹೊಂದಿದೆ. ಪ್ರೀತಿಯ ಪರಿಧಿಯಲ್ಲಿ ಮೋಹ, ಪ್ರೇಮ, ಪ್ರಣಯ, ಮಿಲನ, ಸಾಂಗತ್ಯ, ಹುಸಿ ಮುನಿಸು, ಸಂತೈಸುವಿಕೆ, ಓಲೈಕೆ, ಚಡಪಡಿಕೆ, ಅನುಮಾನ, ಅನುಬಂಧ, ಅಭದ್ರತೆ, ಏಕಾಂತ, ವಿರಹ, ಮೋಸ, ಭಗ್ನ… ಮುಂತಾದ ಮನೋಲಹರಿಗಳಿವೆ. ಪ್ರೀತಿಯ ಸೋಂಕಿನಿಂದ ದಾನವ ಮಾನವನಾಗಬಲ್ಲ ; ಪ್ರೀತಿಯಿಂದ ವಂಚಿತನಾದ ಮಾನವನೂ ದಾನವನಾಗಬಲ್ಲ. ಪ್ರೇಮಿಗಳಿಗೆ ನಮ್ಮ ಸಾಮಾಜಿಕ ವ್ಯವಸ್ಥೆ ಅಮೃತದ ಪ್ಯಾಲಾಗಿಂತಲೂ ವಿಷದ ಬಟ್ಟಲನ್ನು ಉಡುಗೊರೆಯಾಗಿ ನೀಡಿದ್ದೆ ಹೆಚ್ಚು!! ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಯ ನಂಟನ್ನು ಅಂಟಿಸಿಕೊಂಡ ಪ್ರೇಮಿಗಳು ಮಾತ್ರ ಉದಾತ್ತವಾದ ಪ್ರೀತಿ ಮೆರೆದಿದ್ದಾರೆ. ಇಂತಹ ಪ್ರೀತಿಯ ಗಮ್ಮತ್ತು ಪ್ರತಿಯೊಂದು ಭಾಷೆಯ ಸಾಹಿತ್ಯದಲ್ಲಿದ್ದು, ಓದುಗರ ಹೃದಯವನ್ನು ಗೆದ್ದಿದೆ. ಆದರೆ… ಆದರೆ…ಈ ಅನುರಾಗದ ತಕ್ಕಡಿಯಲ್ಲಿ ಇಡೀ ವಾಗ್ದೇವಿಯ ಭಂಡಾರ ಒಂದೆಡೆಯಾದರೆ ಗಜಲ್ ನ ಜೀವಸೆಲೆ ಮತ್ತೊಂದೆಡೆ ಇದೆ. ಹೀಗಾಗಿಯೇ ಈ ‘ಗಜಲ್’ ಎನ್ನುವ ಮಧುಬಟ್ಟಲು ಕಾಲ-ಸೀಮೆ-ಭಾಷೆ-ಧರ್ಮ-ವಯಸ್ಸು-ಲಿಂಗಾತೀತವಾಗಿದ್ದು ಸರ್ವರನ್ನೂ ಪ್ರೀತಿಯಿಂದ ಕಾಡುತ್ತಿದೆ, ಮನಕ್ಕೆ ಕಚಗುಳಿಯಿಡುತಿದೆ. ಇದೆಲ್ಲದರ ಪರಿಣಾಮವೆಂಬಂತೆ ಇಂದು ಕನ್ನಡ ವಾಙ್ಮಯ ಪರಿಸರದಲ್ಲಿ ನೂರಾರು ಸಹೃಯಿಗಳು ಹೃದಯ ಶ್ರೀಮಂತಿಕೆಯಿಂದ ಗಜಲ್ ಕೃಷಿಯನ್ನು ಮಾಡುತ್ತಿದ್ದಾರೆ. ಸದಾ ಹೊಸತನಕ್ಕೆ ತುಡಿಯುವ, ಹಲವಾರು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿರುವ ಗಜಲ್ ಗೋ ಶ್ರೀ ಗಿರೀಶ್ ಜಕಾಪುರೆಯವರ ಗಜಲ್ ಯಾನವನ್ನು ಒಮ್ಮೆ ಅವಲೋಕಿಸೋಣ ಬನ್ನಿ..!!

          ಶ್ರೀ ಗಿರೀಶ ಜಕಾಪುರೆಯವರು   ೧೯೮೧ ರ ಸೆಪ್ಟೆಂಬರ್ ೦೯ ರಂದು ನಮ್ಮ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮೈಂದರ್ಗಿಯ ಕೃಷಿಕ ಕುಟುಂಬದಲ್ಲಿ ಚಂದ್ರಕಾಂತ-ಶಾರದೆ ದಂಪತಿಗಳ ಸುಪುತ್ರನಾಗಿ ಜಪಿಸಿದ್ದಾರೆ. ಎಂ.ಎ. ಬಿ.ಇಡಿ ಪದವಿಯನ್ನು ಪಡೆದಿರುವ ಶ್ರೀಯುತರು , ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನಾರ್ಥಿಯಾಗಿ “ಪ್ರೇಮಚಂದ ಮತ್ತು ಚದುರಂಗ” ರ ಕುರಿತು ಪಿಎಚ್.ಡಿ ಮಾಡುತಿದ್ದಾರೆ. ಪ್ರಸ್ತುತದಲ್ಲಿ ಕಲಬುರಗಿ ಜಿಲ್ಲೆಯ ಮಾದನ ಹಿಪ್ಪರಗಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆಯನ್ನು  ಸಲ್ಲಿಸುತ್ತಿದ್ದಾರೆ. ಇವರು “ಆದರ್ಶ ಕನ್ನಡ ಬಳಗ”ದ ಮೂಲಕ ಮಹಾರಾಷ್ಟ್ರದ ನೆಲದಲ್ಲಿ ಕನ್ನಡವನ್ನು ಉಳಿಸಲು, ಬೆಳಸಲು ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ, ಆಯೋಜಿಸುತಿದ್ದಾರೆ. ಅದರೊಂದಿಗೆ ನಾಡು-ನುಡಿಗಾಗಿ ನಡೆಯುವ ಹೋರಾಟಗಳಲ್ಲೂ ಸಹ ಸಕ್ರಿಯರಾಗಿದ್ದಾರೆ. ನೈಸರ್ಗಿಕ ವಿಕೋಪ ಪೀಡಿತರಿಗೆ ಸಹಾಯ, ವೃಕ್ಷಾರೋಪಣ, ಗ್ರಾಮ ಸ್ವಚ್ಛತೆ, ರಕ್ತದಾನ, ಶೈಕ್ಷಣಿಕ ಸಾಮಗ್ರಿಗಳ ಸಹಾಯ, ಗ್ರಂಥದಾಸೋಹ ಮುಂತಾದ ಕಾರ್ಯಗಳ ಮೂಲಕ ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಇವರು ಕಥೆ, ಕಾವ್ಯ, ಕಾದಂಬರಿ, ವ್ಯಕ್ತಿ ಚಿತ್ರಣ, ಅನುವಾದ, ಸಂಶೋಧನೆ ಹಾಗೂ ಗಜಲ್ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ೩೦ ಕ್ಕೂ ಹೆಚ್ಚು ಮೌಲ್ಯಿಕ ಕೃತಿಗಳನ್ನು ಸಾಹಿತ್ಯಿಕ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ‘ಮೊದಲ ಮುತ್ತು’, ‘ಹೆಣ್ಣಾಗದ ಭ್ರೂಣಗಳು’, ಕವನ ಸಂಕಲನಗಳಾಗಿದ್ದರೆ, ‘ನೇಣು’, ‘ಬದುಕು ಮಾಯೆಯ ಆಟ’, ‘ವ್ಯಾಮೋಹದ ಸುಳಿಯಲ್ಲಿ’, ಎಂಬುವವು ಕಥಾ ಸಂಕಲನಗಳಾಗಿವೆ. ‘ಬೆಳಕು ಬಂತು’, ಎಂಬುದು ಕಾದಂಬರಿಯಾಗಿದ್ದು, ‘ವಿಶ್ವ ಕಂಡ ಗಾಂಧಿ-ಅಣ್ಣಾ ಹಜಾರೆ’, ‘ಮಲೆನಾಡ ಗಾಂಧಿ-ಎಚ್.ಜಿ.ಗೋವಿಂದಗೌಡ’, ‘ಮಹಾತ್ಮ ಜ್ಯೋತಿಬಾ ಫುಲೆ’, ಎಂಬ ಕೃತಿಗಳು ವ್ಯಕ್ತಿ ಚಿತ್ರಣಗಳಾಗಿವೆ. ಬಹುಭಾಷಾ ಪಂಡಿತರಾದ ಜಕಾಪುರೆಯವರು ಕನ್ನಡ ಭಾಷೆಯೊಂದಿಗೆ ಮರಾಠಿ, ಹಿಂದಿ, ಇಂಗ್ಲೀಷ್ ಹಾಗೂ ಉರ್ದು ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ. ಅನ್ಯ ಭಾಷೆಗಳಿಂದ ಕನ್ನಡಕ್ಕೆ, ಕನ್ನಡದಿಂದ ಇನ್ನಿತರ ಭಾಷೆಗಳಿಗೆ ಹಲವಾರು ಕೃತಿಗಳನ್ನು ಅನುವಾದಿಸಿದ್ದಾರೆ. ಅವುಗಳಲ್ಲಿ ನನ್ನ ಊರು ಪುಣ್ಯ ಭೂಮಿ (ಮರಾಠಿಯಿಂದ ಕನ್ನಡಕ್ಕೆ) ಸಾಗರ್ ಔರ್ ಬಾರಿಶ್ (ಹಿಂದಿ) ಪಾರಿವಾಳ ಮತ್ತು ಅಗ್ಗಿಷ್ಠಿಕೆ (ಹಿಂದಿಯಿಂದ ಕನ್ನಡಕ್ಕೆ) ಫಕೀರಾ (ಮರಾಠಿಯಿಂದ ಕನ್ನಡಕ್ಕೆ) ಸದಾ ಮಲ್ಲಿಗೆ (ಮರಾಠಿಯಿಂದ ಕನ್ನಡಕ್ಕೆ) ಖಾಮೋಶಿ (ಕನ್ನಡದಿಂದ ಹಿಂದಿಗೆ) ಸದಾ ಪ್ರವಹಿಸುವ ಕಥೆಗಳು (ಮರಾಠಿಯಿಂದ ಕನ್ನಡಕ್ಕೆ) ಗೀತಾಂಜಲಿ – ರವೀಂದ್ರನಾಥ್ ಟ್ಯಾಗೋರ್ (ಹಿಂದಿಯಿಂದ-ಕನ್ನಡಕ್ಕೆ) ಹೌಜ್ ಖಾಸ್ (ಇಂಗ್ಲೀಷ್ ನಿಂದ ಕನ್ನಡಕ್ಕೆ) ಗೆರೆಗಳು (ಇಂಗ್ಲೀಷ್ ನಿಂದ ಕನ್ನಡಕ್ಕೆ) ಅಂಬೇಡ್ಕರ್ – ಅ ರೀಡರ್ (ಇಂಗ್ಲೀಷ್ ನಿಂದ ಕನ್ನಡಕ್ಕೆ) ಕ್ಯಾ ಖಾಸ್ ಹೈ (ಕನ್ನಡದಿಂದ ಹಿಂದಿಗೆ).. ಕೃತಿಗಳು ಮುಖ್ಯವಾಗಿವೆ. ಒಂದು ಭಾಷೆಯ ಸಾಹಿತ್ಯ ಪ್ರಕಾರವನ್ನು ಮತ್ತೊಂದು ಭಾಷೆಗೆ ಅದೇ ಛಂದಸ್ಸಿನಲ್ಲಿ ತರುವುದು ಕಷ್ಟಸಾಧ್ಯ. ಅರಬ್-ಪರ್ಷಿಯನ್ ಮೂಲದ ಗಜಲ್ ಕಾವ್ಯ ಕನ್ನಿಕೆಯನ್ನು ಕನ್ನಡದಲ್ಲಿ, ಅದೂ ಕನ್ನಡದ್ದೇ ಎಂಬಂತೆ ರಚಿಸಿರುವ ಕೆಲವೇ ಕೆಲವು ಗಜಲ್ ಗೋ ಅವರಲ್ಲಿ ಗಿರೀಶ್ ಜಕಾಪುರೆಯವರೂ ಒಬ್ಬರು. ಇವರು ‘ಸಾವಿರ ಕಣ್ಣಿನ ನವಿಲು’, ಎಂಬ ಕಾಫಿಯಾನಾ ಗಜಲ್ ಸಂಕಲನ, ‘ನನ್ನ ದನಿಗೆ ನಿನ್ನ ದನಿಯು’, ಎಂಬ ಗಜಲ್ ಜುಗಲ್ ಬಂದಿ, ‘ನಿನ್ನ ಮರೆಯುವ ಮಾತು’, ಎಂಬ ತರಹೀ ಗಜಲ್ ಸಂಕಲನ ಹಾಗೂ ಮಾತ್ರೆಯಾಧಾರಿತ ‘ಮನದ ಮುಂದಣ ಮಾಯೆ’, ಎನ್ನುವ ಪ್ರಮುಖ ನಾಲ್ಕು ಗಜಲ್ ಸಂಕಲನಗಳನ್ನು ಪ್ರಕಟಿಸಿದ್ದಾರೆ.

       ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ, ಮಾಡುತ್ತಿರುವ ಜಕಾಪುರೆಯವರಿಗೆ ಹತ್ತು ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಬಹುದು. ಮಾಸ್ತಿ ಕಾದಂಬರಿ ಪುರಸ್ಕಾರ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಜಯತೀರ್ಥ ರಾಜಪುರೋಹಿತ ದತ್ತಿ ಪ್ರಶಸ್ತಿ, ಗು.ವಿ.ವಿ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಸಂಕ್ರಮಣ ಕಾವ್ಯ ಪ್ರಶಸ್ತಿ, ಜಯದೇವಿ ಲಿಗಾಡೆ ಕಾವ್ಯ ಪ್ರಶಸ್ತಿ,

ಅತ್ತಿಮಬ್ಬೆ ಕಾದಂಬರಿ ಪ್ರಶಸ್ತಿ, ಅತ್ತಿಮಬ್ಬೆ ಕಾವ್ಯ ಪ್ರಶಸ್ತಿ, ಕಲ್ಯಾಣ ಕರ್ನಾಟಕ ಸಾಧಕ ಶಿಕ್ಷಕ ಪ್ರಶಸ್ತಿ, ಬಾಲ್ಕಿ ಪಟ್ಟದ್ದೇವರ ಮಕ್ಕಳ ಸಾಹಿತ್ಯ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನ, ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಕ ಸಾ ಪ ದತ್ತಿ ಪ್ರಶಸ್ತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ.

        ಕಾವ್ಯ ವ್ಯಕ್ತಿಗಿಂತಲೂ ಇಡೀ ಸಮುದಾಯಕ್ಕೆ ಸೇರಿರುವಂತದ್ದು. ಈ ಹಿನ್ನೆಲೆಯಲ್ಲಿ ಕಾವ್ಯ ಕೇವಲ ಮನೋರಂಜನೆಯ ಸರಕಲ್ಲ, ಸರಕಾಗಲೂ ಬಾರದು. ಗಜಲ್ ಗೋ ತನ್ನ ಅಸ್ಮಿತೆಯನ್ನು ಮೊಟಕುಗೊಳಿಸದೆ ಅದನ್ನು ಸಮಾಜದಲ್ಲಿ, ಸಾಮಾಜಿಕ ವ್ಯವಸ್ಥೆಯೊಂದಿಗೆ ಅರ್ಥಪೂರ್ಣವಾಗಿ ಬೆರೆಸುತ್ತಾನೆ, ಬೆರೆಸಬೇಕು. ಈ ಹಿನ್ನೆಲೆಯಲ್ಲಿ ಗಜಲ್ ಸಮಾಜಮುಖಿ ಕಾವ್ಯ ಪ್ರಕಾರವಾಗಿದೆ. ಗಜಲ್ ಕುರಿತು ಪ್ರೀತಿ ಮತ್ತು ಕಾಳಜಿಯನ್ನು ಹೊಂದಿರುವ ಜಕಾಪುರೆಯವರ ಗಜಲ್ ಗಳಲ್ಲಿ ಕೋಮಲವಾದ ಭಾವನೆ, ಸೂಫಿತನದ ಮಹೆಕ್, ಹುಡುಕಾಟದ ಹಾದಿಯಿದೆ. ಇವರ ಗಜಲ್ ಓದುತಿದ್ದರೆ ಪ್ರೀತಿಯ ಮಧುಮಾಸದಲ್ಲಿ ಕಳೆದು ಹೋದ ಅನುಭವವಾಗುತ್ತದೆ. ಅವರ ಭಾವಲೋಕದ ಗಜಲ್ ಗಳಿಗೆ ಆಪ್ತತೆಯಿಂದ ಕಿವಿಗೊಟ್ಟರೆ ಅಂತರಂಗದ ನಾದ ಲಹರಿ ಕೇಳಿಸುತ್ತದೆ. ಜೊತೆಗೆ ಸಾಮಾಜಿಕ ಪ್ರಜ್ಞೆಯ ಛಾಯೆಯೂ ಇದೆ.

ಮಂದಿರ ಮಸೀದಿ ಚರ್ಚುಗಳು ಗಲ್ಲಿ ಗಲ್ಲಿಗೆಲ್ಲ

ಮಾನವನಿಗೆ ಬೇಕಿದೆ ಮನೆ, ಮಹಾದೇವನಿಗಲ್ಲ

ಈ ಮೇಲಿನ ಷೇರ್ ಗಮನಿಸಿದಾಗ ವೈಚಾರಿಕತೆ ಹಾಗೂ ಸಾಮಾಜಿಕ ಜವಾಬ್ದಾರಿಯ ಬೆಸುಗೆ ಕಂಡುಬರುತ್ತದೆ. ಇಲ್ಲಿ ಶರಣರ, ಸಂತರ ಹಾಗೂ ಸೂಫಿಗಳ ದಟ್ಟ ಪ್ರಭಾವವನ್ನು ಗಮನಿಸಬಹುದು. ‘ದೇವರು’ ಅಮೂರ್ತ ರೂಪದ ನಂಬಿಕೆ. ಆ ದೇವರುಗಳನ್ನು ತಮ್ಮ ತಮ್ಮ ಮನಗಳಲ್ಲಿ, ತಾವು ಕೈಗೊಂಡ ಕಾಯಕಗಳಲ್ಲಿ ; ಪ್ರೀತಿಸುವ ಹೃದಯಗಳಲ್ಲಿ ಕಾಣಬೇಕಾಗಿದೆಯೆ ಹೊರತು ಕಲ್ಲು-ಮಣ್ಣಿನ ಗುಡಿ-ಗುಂಡಾರ, ಚರ್ಚು-ಮಸೀದಿಗಳಲ್ಲಿ ಅಲ್ಲ. ಇವೆಲ್ಲವುಗಳಿಗಿಂತಲೂ ಇಂದು ಮನುಷ್ಯನಿಗೆ ಬೇಕಾಗಿರುವುದು ವಿಶ್ವ ಮತ. ಮಂದಿರ-ಮಸೀದಿ-ಚರ್ಚುಗಳು ಬಂಡವಾಳಶಾಹಿಯ ಕಪಿಮುಷ್ಠಿಯಲ್ಲಿ ನಲುಗುತಿದ್ದು ಅಸಹಾಯಕ, ದುರ್ಬಲ ಜನರಿಗೆ ಆಶ್ರಯ ನೀಡುವಲ್ಲಿ ಸೋಲುತ್ತಿವೆ. ಈ ಹಿನ್ನೆಲೆಯಲ್ಲಿ ‘ಮನೆ’ ಬೇಕಾಗಿರುವುದು ಮನುಷ್ಯನಿಗೆ ಹೊರತು ಮಹಾದೇವನಿಗಲ್ಲ ಎಂದು ಗಜಲ್ ಗೋ ಅವರು ಮೌಢ್ಯತೆಯನ್ನು ಖಂಡಿಸುತ್ತ ಮನುಕುಲವನ್ನು ಪ್ರೀತಿಸಿದ್ದಾರೆ.

            ಪ್ರತಿಯೊಬ್ಬ ನಾಗರಿಕನಿಗೂ ತನ್ನದೆಯಾದ ಜವಾಬ್ದಾರಿ, ಕರ್ತವ್ಯಗಳಿವೆ. ಸಮಾಜದ, ರಾಷ್ಟ್ರದ ಏಳ್ಗೆಯಲ್ಲಿ ಅವರವರದೆಯಾದ ಪಾತ್ರವಿದೆ. ಆದರೆ ಚಿಂತಕ, ಮುತ್ಸದ್ದಿ, ಕಲಾವಿದ, ಸಾಹಿತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತರಾಗಿರುವ ವ್ಯಕ್ತಿಗಳಿಂದ ಸಮಾಜ ಯಾವಾಗಲೂ ಕಲ್ಮಶರಹಿತವಾದ ಪ್ರೀತಿಯನ್ನು ಬಯಸುತ್ತದೆ. ಅಕ್ಷರದ ತೊಟ್ಟಿಲು ತೂಗುವ ಕೈಗಳಂತೂ ರಕ್ತಲೇಪಿತವಾಗಿರದೆ ಶುಭ್ರವಾಗಿರಬೇಕು. ಅಂತೆಯೇ ಗಜಲ್ ಗೋ ಜಕಾಪುರೆಯವರು ‘ಕವಿತೆ’ ಹೇಗಿರಬೇಕು ಎಂದು ಹೇಳುತ್ತಲೆ, ಹೇಗಿರಬಾರದು ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

ದ್ವೇಷಿಸುವವರು ರಾಜ್ಯವನ್ನು ಕಟ್ಟಬಹುದು, ಕವಿತೆಯನ್ನಲ್ಲ

ಆಳುವವರು ಗೋಡೆಗಳ ಸೃಷ್ಟಿಸಬಹುದು, ಕವಿತೆಯನ್ನಲ್ಲ

ಕವಿತೆ ಮೂಡುವುದು ರಕ್ತ ಸಿಕ್ತ ಹೃದಯಗಳಲ್ಲಿ ಅಲ್ಲ, ಅದು ಉದಯಿಸುವುದು ಪ್ರೀತಿ ತುಂಬಿದ ಮನಸುಗಳಲ್ಲಿ!! ಅಂತೆಯೇ ದ್ವೇಷ ತುಂಬಿದ ಕೊಳಕು ಮನಸ್ಸುಗಳಲ್ಲಿ, ಗುಲಾಮಗಿರಿಯನ್ನು ಆಸ್ವಾದಿಸುವ ಆಳುವವರಲ್ಲಿ ‘ಕಾವ್ಯ’ ಹುಟ್ಟುವುದಿಲ್ಲ ಎಂದಿದ್ದಾರೆ. ಇಂದಿನ ಸಾಂಸ್ಕೃತಿಕ ರಾಜಕಾರಣದ ಹಿನ್ನೆಲೆಯಲ್ಲಿ ಈ ಷೇರ್ ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.

     ಗಿರೀಶ್ ಜಕಾಪುರೆಯವರ ಗಜಲ್ ಗಳಲ್ಲಿ ಸಮಕಾಲೀನ ಸಂದರ್ಭದ ಧರ್ಮ, ಸ್ನೇಹ, ಪ್ರೀತಿ, ರಾಜಕೀಯ, ನಂಬಿಕೆ, ಮಂದಿರ, ಮಸೀದಿ, ಚರ್ಚುಗಳ ಪುರಾತನ ಪಳೆಯುಳಿಕೆಗಳು ಭಗ್ನಗೊಂಡಿವೆ. ಸೌಮ್ಯ ರೂಪದಲ್ಲಿ ಗೋಚರಿಸುವ ಸಮಾಜದ ಆಳದಲ್ಲಿ ಅವಿತಿರುವ ಕುಕರ್ಮಗಳನ್ನು ಜಾಲಾಡಿರುವ, ಜಾಲಾಡುವ ಜಕಾಪುರೆಯವರಿಂದ ನಮ್ಮ ಗಜಲ್ ಲೋಕ ಮತ್ತಷ್ಟು ಸಮೃದ್ಧಿಯಾಗಲಿ ಎಂದು ಶುಭ ಕೋರುತ್ತೇನೆ.

ಇಹನು ಪ್ರಭು ಕಣ್ಣಿನಲ್ಲಿರುವ ಕಣ್ಣಬೊಂಬೆಯಂತೆ ಚರಾಚರಗಳಲ್ಲೂ

ನೀನು ಅವನ ಹುಡುಕುತಿರುವೆ ಕಾಶಿ, ಕಾಬಾ, ಮಂದಿರ, ಮಸೀದಿಗಳಲಿ

                                        –ಕಬೀರದಾಸ

    ಕಣ್ಣಿಗೆ ಕಾಣುವ ‘ಚಂದಿರ’ ನನ್ನು ಹಿಡಿಯಲಾಗದ ಹುಲುಮಾನವ ಜೊತೆಗಿದ್ದರೂ ಗೋಚರಿಸದ ‘ಕಾಲ’ವನ್ನು ಹಿಡಿಯಲಾದೀತೆ… ‘ಇಲ್ಲ’ ಅಂತೀದ್ದೀರಾ… ಖಂಡಿತ ಹೌದು, ಅದನ್ನು ಹಿಡಿಯಲಾಗದು ಎಂಬ ಸತ್ಯವನ್ನು ಮನಗಂಡು ಮೌನಿಯಾಗುತಿರುವೆ. ಮತ್ತೆ ಮುಂದಿನ ವಾರ ಬರುವೆ, ಮಾತಿನ ಮಲ್ಲನೊಂದಿಗೆ.. , ಸ್ವಾಗತಿಸುವಿರಲ್ಲವೆ… ಗೊತ್ತು, ಸ್ವಾಗತಿಸುವಿರೆಂದು.

ಎಲ್ಲರಿಗೂ ಹೃನ್ಮನದಿ ವಂದನೆಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top