ಅಂಕಣ ಸಂಗಾತಿ
ನೆನಪಿನದೋಣಿಯಲಿ
ಗಣರಾಜ್ಯೋತ್ಸವದಿನ
ಕಳೆಯುತ್ತಿರುವ ಜೀವನ ಚಕ್ರದ ಬಂಡಿಯ ಉರುಳಾಟದಲ್ಲಿ ಮತ್ತೆ ಬಂದಿದೆ ಜನವರಿ ಇಪ್ಪತ್ತಾರು. ಹೊರಟಿದೆ ಮನಸ್ಸಿನಲ್ಲಿ ನೆನಪಿನ ತೇರು.
ಗಣರಾಜ್ಯೋತ್ಸವ ರಿಪಬ್ಲಿಕ್ ಡೇ ಅಂದರೆ ಜನವರಿ ಮೊದಲಿನಿಂದಲೇ 1ರೀತಿಯ ಹರುಷ.
ಕ್ರಿಶ್ಚಿಯನ್ ಶಾಲೆಯಾದ್ದರಿಂದ ಕ್ರಿಸ್ಮಸ್ ರಜೆ ಕಳೆದು ಜನವರಿ ಎರಡರಿಂದ ಶಾಲೆ ಮರು ಆರಂಭ . ಅಂದೇ ಸಂಜೆ ತಂಡಗಳನ್ನು ಮಾಡಿ ವಿವಿಧ ರೀತಿಯ ಕಾರ್ಯಕ್ರಮಗಳಿಗೆ ತಯಾರಿ ಆರಂಭವಾಗುತ್ತಿದ್ದುದೂ ಸಹ. ವೇದಿಕೆಯ ಮೇಲಿನ ಕಾರ್ಯಕ್ರಮಗಳಿಗೆ ಕೆಲವು ತಂಡಗಳಾದರೆ ಮಿಕ್ಕವರೆಲ್ಲ ಶಾಲಾ ಪ್ರಾರ್ಥನೆಗೆ ನಿಲ್ಲುವ ಹಾಗೆ ನಿಂತು ಹೂಪ್ಸ್ ಡಂಬಲ್ಸ್ ಇನ್ನಿತರ ಕವಾಯತು ಮಾಡುವುದು. ಅಂತೂ ಪ್ರತಿಯೊಬ್ಬರನ್ನು ಒಳಗೊಂಡಿರುತ್ತಿದ್ದಂತಹ ಕಾರ್ಯಕ್ರಮ . ಆಗಸ್ಟ್ ಹದಿನೈದಕ್ಕೆ ಆದರೆ ತುಂತುರು ಮಳೆಯ ಅಡೆ ತಡೆ ಒಂದೊಮ್ಮೆ ಬಂದುಬಿಡುತ್ತಿತ್ತು. ಇದಕ್ಕಂತೂ ಅಡ್ಡಿ ಏನೂ ಇಲ್ಲ. ಸರಾಗ ಸುಲಲಿತವಾಗಿ ನಡೆಯುತ್ತಿತ್ತು ಕಾರ್ಯಕ್ರಮ . ಆದರೆ ರಂಗವಲ್ಲಿಗೆ ತುಂಬಲು ಬಾವುಟಕ್ಕೆ ಕಟ್ಟಲು ಬೇರೆ ಸಮಯದಲ್ಲಿ ಧಾರಾಳವಾಗಿ ಸಿಗುತ್ತಿದ್ದ ಹೂವುಗಳು ಈ ಗ್ರೀಷ್ಮ ಹೇಮಂತದಲ್ಲಿ ಕಡಿಮೆ. ಪ್ರತಿಯೊಬ್ಬರೂ ತರುತ್ತಿದ್ದುದರಿಂದ ಸಾಕಾಗುತ್ತಿತ್ತು . ಸಾಮಾನ್ಯ 8ಗಂಟೆಗೆ ಆರಂಭವಾಗುತ್ತಿದ್ದ ಕಾರ್ಯಕ್ರಮ ಹತ್ತು ಗಂಟೆಗೆ ಮುಗಿಯುತ್ತಿದ್ದರೂ ನಾವಂತೂ ರಂಗವಲ್ಲಿ ಮುಂತಾದ ಕೆಲಸಗಳಿಗಾಗಿ ಕ್ಲಾಸಿನ ಲೀಡರ್ ಆದ್ದರಿಂದ ಬೇಗನೆ ಹೋಗುತ್ತಿದ್ದೆವು .
ಅಲ್ಲಿ ಕೊಡುತ್ತಿದ್ದುದು ಕೈಗೆ ಒಂದಿಷ್ಟು ಬೂಂದಿ ಮಾತ್ರ ಬಾಯಿ ಒಣಗಿಸಿಕೊಂಡು ಹಸಿದುಕೊಂಡು ಮನೆಗೆ ವಾಪಸ್ಸು ಬಂದ ಮೇಲೆ ತಿಂಡಿ ತಿನ್ನುವುದು. ಆದರೂ ಹೋಗುವುದಕ್ಕೆ ಮಾತ್ರ ಎಂದೂ ತಪ್ಪಿಸದ ಒಂದು ರೀತಿಯ ಭಯ ಭಕ್ತಿ ಉತ್ಸಾಹ ಸಂಭ್ರಮ . ಪ್ರತಿ ಬಾರಿಯೂ ಸಮೂಹ ಗೀತೆ ಹಾಗೂ ಗುಂಪಿನ ಲೀಡರ್ ಆದ್ದರಿಂದ ಕವಾಯತುಗಳಲ್ಲಿ ಮುಂದೆ ನಿಲ್ಲುತ್ತಿದ್ದರೂ ಒಂದೇ 1ಬಾರಿ ಮಾತ್ರ ನೃತ್ಯ
ಕಾರ್ಯಕ್ರಮಕ್ಕೆ ಸೇರಿದ್ದುದು ನೆನಪಿದೆ . ಕನ್ನಡತಿ ನಮ್ಮೊಡತಿ ಎಂಬ ಪುನರ್ಜನ್ಮದ ಹಾಡಿಗೆ ನಾವು ಹೆಜ್ಜೆ ಹಾಕಬೇಕಿತ್ತು. 5ಜನ ಹುಡುಗರು 5ಜನ ಹುಡುಗಿಯರ ತಂಡ ಮಾಡಿ ನೃತ್ಯವಾಡಿಸಿದ್ದರು . ನೃತ್ಯಕ್ಕಾಗಿ ಹಸಿರು ಒಡಲಿನ ಕೆಂಪಂಚಿನ ಸೀರೆ ಶಾಲೆಯವರೇ ತಂದಿದ್ದರು . ಹಣ ಕೊಡಬೇಕಿತ್ತು
ಬ್ಲೌಸ್ ಸಹ ಅವರೇ ಹೊಲಿಸಿದ್ದರು. ಕೈತುಂಬ ಹಸಿರು ಕೆಂಪು ಬಳೆಗಳು ಅದು ಮಾತ್ರ ನನಗೇ ಉಳಿಯಿತು .ಇನ್ನೂ ಆಗೇನು ಸೀರೆ ಉಡದೆ ಇದ್ದುದರಿಂದ ಕಾಟನ್ ಸೀರೆಯಾದ್ದರಿಂದ ಅಮ್ಮನಿಗೆ ಮನೆಯಲ್ಲಿ ಉಟ್ಟುಕೊಳ್ಳಲು ಪ್ರಯೋಜನವಾಯಿತು . ಅದನ್ನು ಉಟ್ಟಾಗಲೆಲ್ಲ ರಿಪಬ್ಲಿಕ್ ಡೇ ಡ್ಯಾನ್ಸು ಸೀರೆ ಅಂತ ಗುರುತಿಸುತ್ತಾ ಇದ್ದುದು ನೆನಪು. ಕಡಿಮೆ ಕ್ವಾಲಿಟೀ ಸೀರೆಗೆ ಹೆಚ್ಚೇ ದುಡ್ಡು ತಗೆದುಕೊಂಡರು ಶಾಲೆಯವರು ಎಂದು ಅಮ್ಮ ಪ್ರತಿ ಬಾರಿಯೂ ಗೊಣಗುತ್ತಿದ್ದುದು ಇನ್ನೂ ನೆನಪಿನಿಂದ ಮರೆಯಾಗಿಲ್ಲ . ಪ್ರಾಯಶಃ ವೇದಿಕೆಯ ಮೇಲೆ ಕುಣಿದಿದ್ದು ಅದೇ ಮೊದಲು ಇದುವರೆಗೂ ಅದೇ ಕಡೆಯದೂ ಸಹ. ಈಗಿನಂತೆ ಹೆಚ್ಚು ಫೋಟೋ ತೆಗೆಯುವ ಅಭ್ಯಾಸ ಇಲ್ಲದ್ದರಿಂದ ಅದರ ನೆನಪು ಬರೀ ಸ್ಮೃತಿಪಟಲದಲ್ಲಿ ಮಾತ್ರ ಆಲ್ಬಂನಲ್ಲಿ ಇಲ್ಲ .
ಇನ್ನು ದೆಹಲಿಯ ರಿಪಬ್ಲಿಕ್ ಡೇ ಪರೇಡ್ ದಿನ ದೃಶ್ಯಗಳನ್ನು ಫೋಟೋದಲ್ಲಿ ಮಾರನೆಯ ದಿನ ಪೇಪರಿನಲ್ಲಿ ನೋಡುತ್ತಿದ್ದುದು ಮತ್ತು ರೇಡಿಯೊದಲ್ಲಿ ಆಗ ವೀಕ್ಷಕ ವಿವರಣೆ ಕೊಡುತ್ತಿದ್ದರು ಆ ಸಮಯದಲ್ಲಿ ನಾವು ಶಾಲೆಯಲ್ಲಿ ಇರುತ್ತಿದ್ದುದರಿಂದ ಅದರ ಮುಖ್ಯ ಅಂಶಗಳನ್ನು ಹಾಕಿದಾಗ ಖುಷಿಯಾಗಿ ಕೇಳುತ್ತಿದ್ದುದು ಅಭ್ಯಾಸ . ಆದರೆ ದೂರದರ್ಶನ ಬರುವ ವೇಳೆಗೆ ಕಾಲೇಜು ಮೆಟ್ಟಿಲು ಹತ್ತಿದ್ದರಿಂದ ದೂರದರ್ಶನದ ನೇರ ಪ್ರಸಾರವನ್ನು ಮನೆಯಲ್ಲೇ ಕುಳಿತು ನೋಡುತ್ತಿದ್ದೆವು . ಕಾಲೇಜಿಗೆ ಕಂಪಲ್ಸರಿ ಅಲ್ಲದ್ದರಿಂದ ಧ್ವಜಾರೋಹಣಕ್ಕೆ 1ಬಾರಿಯೂ ಹೋಗಲೇ ಇಲ್ಲ . ವಿವಿಧ ರೀತಿಯ ಟ್ಯಾಬ್ಲೊಗಳು ಬಂದಾಗ ಕರ್ನಾಟಕದ ರೆಜಿಮೆಂಟ್ ಹಾಗೂ ಕರ್ನಾಟಕದ ಟ್ಯಾಬ್ಲೋಗಳು ಬಂದಾಗ ಹೆಚ್ಚಿನ ಖುಷಿಯಿಂದ ವೀಕ್ಷಿಸಿ ಇಡೀ ಕಾರ್ಯಕ್ರಮವನ್ನು ವ್ರತದಂತೆ ತಪ್ಪದೆ ಕಪ್ಪು ಬಿಳಿ ಟಿವಿಯಲ್ಲೂ ನಂತರ ಬಣ್ಣದ ಟಿವಿಯಲ್ಲೂ ನೋಡುತ್ತಿದ್ದುದು ಇನ್ನೂ ಹಚ್ಚ ಹಸಿರಿನ ನೆನಪು . ಈಗ ನೆನೆಸಿಕೊಂಡರೆ ಅವುಗಳನ್ನು ಅಲ್ಲಾಡದೆ ಒಂದೇ ಸಮನೆ ಕುಳಿತು ನೋಡುತ್ತಿದ್ದೆವು ಈಗ ಯಾವುದೊಂದನ್ನೂ ನೋಡಲು ಕುಳಿತುಕೊಳ್ಳಲೇ ತಾಳ್ಮೆ ಇಲ್ಲವಲ್ಲಪ್ಪ ಅನ್ನಿಸುತ್ತೆ .
ಭಾರತದ ಅತಿ ದೊಡ್ಡ ಪ್ರಜಾಪ್ರಭುತ್ವ ಸಂವಿಧಾನ ಅದೆಷ್ಟು ಸಮರ್ಥವಾಗಿ ರಚಿಸಿದ್ದಾರೆ ಈ ಎಲ್ಲಾ ಹೆಮ್ಮೆಯ ಅಂಶಗಳು ಮನಸ್ಸಿಗೆ ಬಂದಾಗ 1ದಿನವಾದರೂ ಅದಕ್ಕಾಗಿ ನಮ್ಮ ಕೃತಜ್ಞತೆಯನ್ನು ತೋರಿಸಲೇ ಬೇಕು ಅಂತ ಇತ್ತೀಚೆಗೆ ಅನ್ನಿಸಲು ಆರಂಭವಾಯಿತು . ಸರ್ಕಾರಿ ರಜೆ ಎಲ್ಲಿಗಾದರೂ ಹೋಗುವುದು ಎಂದು ಪ್ಲಾನ್ ಮಾಡಿಕೊಳ್ಳುವಂತವರೇ ನಾವು ಹೆಚ್ಚು . ಕೆಲವೊಂದು ಕಚೇರಿಗಳಲ್ಲಿ ಕಡ್ಡಾಯವಾಗಿ ಬರಬೇಕು ಎಂದರೆ ಹೋಗುವುದೇ ವಿನಃ ಕಡ್ಡಾಯ ಅಲ್ಲದಿದ್ದರೆ ಯಾರೂ ಹೋಗುವುದಿಲ್ಲ . ನಿಯಮ ಪ್ರಕಾರ ಬೇಕಾದವರು ಮಾತ್ರ ಬರುತ್ತಾರೆ. ಈ ಅಭ್ಯಾಸ ತಪ್ಪಿಸಬೇಕು ನಾವು ನಮ್ಮ ಧ್ವಜಾರೋಹಣವನ್ನು ಕಣ್ಣಾರೆ ನೋಡಿ ಆನಂದಿಸಬೇಕು ಎಂದು ಅನಿಸಿ ಈ ವರ್ಷವಾದರೂ ಜನವರಿ ಇಪ್ಪತ್ತಾರರ ಧ್ವಜಾರೋಹಣ ಸಮಾರಂಭಕ್ಕೆ ಹೋಗೋಣ ಎಂದುಕೊಂಡಿದ್ದೆ . ನಾವು ಸಹೋದ್ಯೋಗಿ ಗೆಳತಿಯರು ಹಾಗೆಯೇ ಮಾತನಾಡಿಕೊಂಡೆವು ಇದ್ದೆವು ಸಹ . ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ಎಂಬಂತೆ ಈ ಬಾರಿ ಕಾಲು ಪೆಟ್ಟಾಗಿ ಕಚೇರಿಗೂ ಹೋಗಲಾಗದೆ ಮನೆಯಲ್ಲೇ ಉಳಿದಂತ ಪರಿಸ್ಥಿತಿಯಲ್ಲಿ ಧ್ವಜಾರೋಹಣಕ್ಕೆ ಹೋಗುವುದು ಇನ್ನೆಲ್ಲಿ ?
ನೋಡೋಣ ಮುಂದೆ ಆಗಸ್ಟ್ ಹದಿನೈದು ಬರುತ್ತದೆ ಮುಂದಿನ ವರ್ಷವೂ ಜನವರಿ ಇಪ್ಪತ್ತಾರು ಬರುತ್ತದೆ ತಪ್ಪದೆ ಧ್ವಜಾರೋಹಣ ಸಮಾರಂಭದಲ್ಲಿ ಭಾಗಿ ಆಗುವ ಅದೃಷ್ಟ ಆ ದೇವರು ತಂದುಕೊಡಲಿ.
ಜೈ ಹಿಂದ್
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು.