ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಸ್ವಾತಂತ್ರ್ಯ ಹೋರಾಟಗಾರ್ತಿ

ಕನಕಲತಾ ಬರುವಾ(1924-1942)

ಕನಕಲಾತಾ ಬರುವಾ ಅವರನ್ನು ಬಿರ್ಬಾಲಾ ಮತ್ತು ಶಹೀದ್ ಎಂದು ಕರೆಯುತ್ತಾರೆ. ಇವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಎಐಎಸ್‍ಎಫ್‍ನ ನಾಯಕರಾಗಿದ್ದರು. ಕನಕಲತಾ ಅವರು ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜವನ್ನು ಹಿಡಿದುಕೊಂಡು ಮೆರವಣಿಗೆ ಹೊರಟಾಗ ಬ್ರಿಟೀಷರ ಪೋಲಿಸರು ಗುಂಡಿಕ್ಕಿ ಕೊಂದರು.
ಕನಕಲತಾ ಅವರು 1924ರಲ್ಲಿ ಆಸಾಂನ ಅವಿಭಜಿತವಾಗಿದ್ದ ದಾರಂಗ್ ಜಿಲ್ಲೆಯ ಬೋರಂಗಬರಿ ಗ್ರಾಮದಲ್ಲಿ ಜನಿಸಿದರು. ಈಕೆಯ ತಂದೆ ಕೃಷ್ಣಕಾಂತ, ತಾಯಿ ಕರ್ಣೇಶ್ವರಿ ಬರುವಾ. ಈಕೆಯ ಅಜ್ಜ ಘಾನಾ ಕಾಂತಾ ಬುರುವಾ ದಾರಂಗ್‍ನಲ್ಲಿ ಪ್ರಸಿದ್ಧ ಬೇಟೆಗಾರರಾಗಿದ್ದರು. ಈಕೆಯ ಪೂರ್ವಜರು ಹಿಂದಿನ ಅಹೋಮ್ ರಾಜ್ಯದ ದೋಲಕಾಖರಿಯಾ ಬರುವಾ ಸಾಮ್ರಾಜ್ಯದವರು.
ಕನಕಲತಾ ಕೇವಲ ಐದು ವರ್ಷದವಳಿದ್ದಾಗ ತಾಯಿ ತೀರಿಕೊಂಡರು. ತಾಯಿಯ ಮರಣದ ನಂತರ ತಂದೆಯವರು ಮರುಮದುವೆ ಮಾಡಿಕೊಂಡರು. ಮರುಮದುವೆ ಮಾಡಿಕೊಂಡ ತಾಯಿಯು ಕೂಡ ಕನಕಲತಾ ಅವರು ಹದಿಮೂರನೆಯ ವಯಸ್ಸಿಗೆ ತಲುಪಿದಾಗ ತೀರಿಕೊಂಡರು. ಕನಕಲತಾ ಕೇವಲ ಮೂರನೆಯ ತರಗತಿಯವವರೆಗೆ ಶಾಲೆಗೆ ಹೋದರು. ನಂತರ ತನ್ನ ಕಿರಿಯ ಸಹೋದರರನ್ನು ನೋಡಿಕೊಳ್ಳಲು ಶಾಲೆಯನ್ನು ಬಿಟ್ಟರು.
ಕನಕಲತಾ ಅವರು ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಆಸ್ಸಾಂನ ಗೋಹ್ಪರ ಉಪವಿಭಾಗದ ಯುವಕರ ಗುಂಪುಗಳನ್ನೊಳಗಂಡ ಮೃತತ್ಯ ಬಹನಿ ಎಂಬ ಡೆತ್ ಸ್ಕಾಡಗೆ ಸೇರಿಕೊಂಡರು. ಸೆಪ್ಟೆಂಬರ್ 20, 1942 ರಂದು ಬಹಿನಿಯವರು ಸ್ಥಳಿಯ ಪೋಲೀಸ್ ಠಾಣೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ನಿರ್ಧರಿಸಿದರು. ಹಾಗಾಗಿ ಗ್ರಾಮಸ್ಥರನ್ನು ಸೇರಿಸಿಕೊಂಡು ನಿರಾಯುಧ ಮೆರುವಣಿಗೆಯನ್ನು ಕನಕಲತಾ ಅವರ ನೇತೃತ್ವದಲ್ಲಿ ನಡೆಸಿದರು. ಮೆರವಣೆಗೆಯನ್ನು ನೋಡಿ ಪೋಲೀಸರು ಮುಂದುವರೆಯದಂತೆ ಎಚ್ಚರಿಕೆಯನ್ನು ನೀಡಿದರು. ಆದರೂ ಕೂಡ ಹೆದರದೆ ಮುಂದೆ ವರೆದ ಕನಕಲತಾ ಮೇಲೆ ಪೋಲೀಸರು ಗುಂಡು ಹಾರಿಸಿದರು. ಕನಕಲತಾ ಕೈಯಲ್ಲಿದ್ದ ಧ್ವಜವನ್ನು ಮುಕುಂದ ಕಾಕೋಟಿಯವರು ತಗೆದುಕೊಂಡರು. ಇವರ ಮೇಲೆಯೂ ಬ್ರಿಟೀಷ ಪೋಲಿಸರು ಗುಂಡು ಹಾರಿಸಿದರು. ಇದರ ಪರಿಣಾಮವಾಗಿ ಕನಕಲತಾ ಮತ್ತು ಮುಕುಂದ ಅವರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಕನಕಲತಾ ಮೇಲೆ ಗುಂಡು ಹಾರಿಸಿದಾಗ ಕೇವಲ 17ನೇ ವಯಸ್ಸಿನ ಯುವತಿಯಾಗಿದ್ದರು. ಅತಿ ಚಿಕ್ಕ ವಯಸ್ಸಿನಲ್ಲಿಯೇ ದೇಶದ ಸ್ವಾತಂತ್ರ್ಯಕ್ಕಾಗಿ ಜೀವನ ಅರ್ಪಿಸಿದ ಯುವತಿ ಎಂಬ ಹೆಗ್ಗೆಳಿಕೆಗೆ ಪಾತ್ರರಾಗಿದ್ದಾರೆ.

1997ರಲ್ಲಿ ಭಾರತೀಯ ಕರಾವಳಿ ರಕ್ಷಣಾ ವಲಯವು ಅತಿವೇಗವಾಗಿ ಗಸ್ತು ತಿರುವುವ ಐಸಿಜಿಎಸ್ ಹಡಗಿಗೆ ಕನಕಲತಾ ಬರುವಾ ಅವರ ಹೆಸರನ್ನು ಇಡಲಾಗಿದೆ. 2011ರಲ್ಲಿ ಗೌರಿಪುರದಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಕನಕಲತಾ ಅವರ ಮರಣದ ಮೊದಲಿನ ಉತ್ಸಾಹ ಭರಿತ ಭಾಷಣಗಳು ಅನೇಕರಿಗೆ ಸ್ಪೂರ್ತಿಯ ಮೂಲವಾಗಿ ಉಳಿದಿದೆ.
ಕನಕಲತಾ ಅವರ ಜೀವನವನ್ನು ಚಿತ್ರದ ಮೂಲಕ ನಿರ್ದೇಶಕ ಚಂದ್ರ ಮುಡೋಯಿ “ಇಪಾಹ ಪುಲಿಲ ಇಪಾಹ ಕ್ಷರೊಲಿ” ಶಿರ್ಷೆಕೆ ಕೊಟ್ಟು ತೋರಿಸಿದ್ದಾರೆ. ಇದೇ ಚಿತ್ರವನ್ನು ಹಿಂದಿಯಲ್ಲಿ “ಪುರಬ್ ಕಿ ಆವಾಚ್” ಹೆಸರಿನಿಂದಲೂ ಕೂಡ ಬಿಡುಗಡೆ ಮಾಡಲಾಗಿದೆ.


ಡಾ.ಸುರೇಖಾ ರಾಠೋಡ್

Leave a Reply

Back To Top