ಅಂಕಣ ಬರಹ
“ಕಾವ್ಯದರ್ಪಣ”
ಮೊದಲ ಮಾತು
“ಯಾವ ಕನ್ನಡಿಗನ ಮನೆಯಲ್ಲಿ
ಕೆಲವಾದರೂ ಕನ್ನಡ ಕೃತಿಗಳಿಲ್ಲವೋ
ಅದು ಕನ್ನಡಿಗನ ಮನೆಯೇ ಎಂದು ಪ್ರಶ್ನಿಸುವಂತಾಗಬೇಕು“
– ಕಮಲಾಹಂಪನಾ
ಓದುಗ ಸಹೃದಯರಿಗೆ ನಮಸ್ಕಾರ.…
ಆಧುನಿಕ ತಂತ್ರಜ್ಞಾನ ಹಾಗೂ ಜಾಲತಾಣಗಳ ಅತಿಯಾದ ಬಳಕೆ ಮತ್ತು ವ್ಯಾಮೋಹಕ್ಕೊಳಗಾಗಿ ಓದುವ ಅಭಿರುಚಿಯನ್ನೆ ಬೆಳೆಸಿಕೊಳ್ಳದೆ ಸದಾ ಕಂಪ್ಯೂಟರ್ ಮತ್ತು ಮೊಬೈಲ್ ಗುಂಗಿನಲ್ಲಿಯೆ ಮುಳುಗಿರುವ ಜನತೆಯಲ್ಲಿ ಸಾಹಿತ್ಯ ಓದುವ ಆಸಕ್ತಿ ಕಡಿಮೆಯಾಗಿರುವುದು ವಿಪರ್ಯಾಸದ ಸಂಗತಿಯಾಗಿದ್ದರೂ, ಸಾಹಿತ್ಯ ರಚಿಸುತ್ತಿರುವ ಬರಹಗಾರರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿರುವುದು ಮಾತ್ರ ಮರಳುಗಾಡಿನಲ್ಲಿ ಒಯಸಿಸ್ ಸಿಕ್ಕಷ್ಟು ಹರ್ಷದ ಸಂಗತಿಯಾಗಿದೆ.
ಕನ್ನಡ ಭಾಷೆ ಭಾರತೀಯ ಸಾಹಿತ್ಯ ಲೋಕದಲ್ಲಿ ತನ್ನದೆ ಆದ ವಿಶಿಷ್ಟವಾದ ಚಾಪು ಮೂಡಿಸುತ್ತ, ಸಾರಸ್ವತ ಲೋಕಕ್ಕೆ ಸರ್ವ ಶ್ರೇಷ್ಠವಾದ ಕೊಡುಗೆಯನ್ನು ನೀಡಿರುವುದು ಕನ್ನಡದ ಹಿರಿಮೆ ಗರಿಮೆಗೆ ಸಾಕ್ಷಿಯಾಗಿದೆ. ಸಾಹಿತ್ಯ ಎಂಬುದು ಅಗಾಧವಾದ ಸಾಗರದಂತೆ. ವೈವಿಧ್ಯಮಯವಾದ ಪ್ರಕಾರಗಳನ್ನು ಒಳಗೊಂಡು, ವಿಭಿನ್ನವಾದ ಶೈಲಿಯಲ್ಲಿ ಮೂಡಿಬರುವ ಮೂಲಕ ಸಾಹಿತ್ಯಾಭಿಮಾನಿಗಳ ಮನೋಭಿಲಾಷೆಗೆ ತಕ್ಕಂತೆ ರಸದೌತಣವನ್ನು ಉಣಬಡಿಸುತ್ತಿದೆ. ಆ ನಿಟ್ಟಿನಲ್ಲಿ ಕನ್ನಡದ ಮಹಾನ್ ಸಾಹಿತಿಗಳ ಸೇವೆ ಹಾಗೂ ಸಾಧನೆ ಅವಿಸ್ಮರಣೀಯವಾದುದು. ಅಸಂಖ್ಯಾತ ಕಾವ್ಯಸೃಷ್ಟಿಯು ಶ್ಲಾಘನೀಯವಾಗಿದೆ.
ಮನುಷ್ಯನ ಹೃದಯ ಭಾವನೆಗಳ ಆಗರ. ಇಲ್ಲಿ ವೈವಿಧ್ಯಮಯವಾದ ಭಾವಗಳ ಪ್ರವಾಹ ಹರಿಯುತ್ತಿರುತ್ತದೆ. ಕೆಲವರು ಅವುಗಳನ್ನು ತನ್ನೊಳಗೆ ಹುದುಗಿಸಿಟ್ಟರೆ,ಮತ್ತೆ ಕೆಲವರು ಅವುಗಳನ್ನು ಅನುಭವಿಸುತ್ತಾರೆ. ಕಾವ್ಯಾಸಕ್ತ ಮನಸುಗಳು ಬರಹ ರೂಪದಲ್ಲಿ ಅವುಗಳನ್ನು ವ್ಯಕ್ತಪಡಿಸುತ್ತಾರೆ. ಆಗ ಸಾಹಿತ್ಯವೊಂದು ಜೀವತಳೆಯುತ್ತದೆ. ಅಂತಹ ಸನ್ನಿವೇಶದಿಂದ ರೂಪಿತವಾದ ಸಾಹಿತ್ಯ ಪ್ರಕಾರಗಳಲ್ಲಿ ಕಾವ್ಯವೂ ಒಂದಾಗಿದೆ.
ಕಾವ್ಯ ಹೃದಯದಲ್ಲಿ ಹುಟ್ಟುವಂತದ್ದು. ನಂತರ ಅಕ್ಷರಗಳಲ್ಲಿ, ಸಶಕ್ತವಾಗಿ ಪದಬಂಧದಲ್ಲಿ ಕಟ್ಟುವಂಥದ್ದು. ಅನುಭವ ಜನ್ಯ ಕಾವ್ಯ ರಚನೆಯಾಗುತ್ತದೆ. ಅನುಭವ,ಅದ್ಯಯನ ಮಾಗಿದಾಗ ಉತ್ತಮ ಕವಿತೆ ರಚಿಸಲು ಸಾಧ್ಯವಾಗುತ್ತದೆ.ಈ ಪಥದಲ್ಲಿ ಸಾಗಿದ ಕವಿತೆಗಳು ಶಾಶ್ವತ ಸ್ಥಾನ ಪಡೆಯುತ್ತವೆ.
ಕಾವ್ಯವನ್ನು ಇಷ್ಟಪಡದವರು ಯಾರಿದ್ದಾರೆ ? ಹೇಳಿ ಮಕ್ಕಳಿಂದ ಹಿಡಿದು, ವಯೋವೃದ್ಧರವರೆಗೂ ಪ್ರತಿಯೊಬ್ಬರನ್ನು ಸೆಳೆಯುವ ಸಾಹಿತ್ಯ ಪ್ರಕಾರವೆಂದರೆ ಅದು ಕಾವ್ಯ. “ವಿಲಿಯಂ ವರ್ಡ್ಸ್ ವರ್ತ್” ಅವರು ಕಾವ್ಯವನ್ನು “ಶಕ್ತಿಯುತ ಭಾವನೆಗಳ ಸ್ವಾಭಾವಿಕ ಉಕ್ಕಿ” ಎಂದು ವ್ಯಾಖ್ಯಾನಿಸುವುದು ಇದೆ ಕಾರಣಕ್ಕಿರಬಹುದು. ಗದ್ಯ ಪ್ರಕಾರಗಳಿಗಿಂತ ಕಾವ್ಯ ಪ್ರಕಾರ ಹೆಚ್ಚು ಸೆಳೆತವನ್ನು ಹೊಂದಿದ್ದು ಉದಯೋನ್ಮುಖ ಬರಹಗಾರರನ್ನು ತನ್ನ ತೆಕ್ಕೆಯೊಳಗೆ ಸಿಲುಕಿಸಿಕೊಂಡು ಅಗಾಧವಾದ ಕಾವ್ಯಕೃಷಿ ಮಾಡಿಸಿಕೊಳ್ಳುತ್ತ ಸಾಗುತ್ತಿರುವುದಕ್ಕೆ ಅವುಗಳ ಲಯ,ಪ್ರಾಸ,ಗೇಯತೆಯ ಮೋಡಿಯು ಕಾರಣವಿರಬಹುದು. ಅದರಲ್ಲೂ ಆದಿಪ್ರಾಸ,ಮದ್ಯಪ್ರಾಸ, ಅಂತ್ಯಪ್ರಾಸಗಳು ಕೂಡ ಕವಿಗಳ ಕೈಚಳಕದಲ್ಲಿ ಹೊಸತನ ತೋರುತ್ತವೆ .ನಾಡಿನ ಮಹಾನ್ ಕವಿಗಳ ಕಾವ್ಯದ ಪ್ರಭಾವವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾವ್ಯ ಬರಹಕ್ಕೆ ಸ್ಪೂರ್ತಿಯಾಗಿದೆ.
ಕವಿಯ ಮನಸ್ಸು ಹೊರ ಜಗತ್ತಿನ ಸಂವೇದನೆಗಳಿಗೆ ಸ್ಪಂದಿಸಿದಾಗ ಅಲ್ಲೊಂದು ಕಾವ್ಯ ಸೃಜಿಸುತ್ತದೆ. ಅಮೋಘ ಪದ ಪುಂಜಗಳು, ನುಡಿಗಟ್ಟುಗಳು ಮತ್ತು ಸೂಕ್ಷ್ಮ ವಿಚಾರವಂತಿಕೆ ಮೂಲಕ ಕಲಾತ್ಮಕವಾಗಿ ಕಾವ್ಯ ಹೆಣೆಯಲಾಗುತ್ತದೆ. ಕವಿಗಳು ಲಯ,ಭಾವ,ಪ್ರಾಸಕ್ಕೆ ಪ್ರಾಧಾನ್ಯತೆ ನೀಡಿ ಹಾಡುಗಬ್ಬ ಶೈಲಿಯಲ್ಲಿ ಕವಿತೆ ಕಟ್ಟುತ್ತಾರೆ. ಮತ್ತೆ ಕೆಲವರು ಇಂತಹ ಯಾವುದೆ ಗೋಜಿಗೂ ಹೋಗದೆ ತಮ್ಮ ಮನದ ಭಾವ ಲಹರಿ ಹರಿದಂತೆ ಅಕ್ಷರರೂಪ ನೀಡುತ್ತಾರೆ. ಇಲ್ಲಿ ಯಾವುದು ಮುಖ್ಯ ಅಥವಾ ಅಮುಖ್ಯ ಎಂಬ ಪ್ರಶ್ನೆ ಬರುವುದಿಲ್ಲ. ಅವರವರ ಲೇಖನಿಯ ಚಲನೆಯ ಪ್ರಕಾರ ಕಾವ್ಯಾಭಿವ್ಯಕ್ತಿಯನ್ನು ವ್ಯಕ್ತಪಡಿಸುತ್ತ ಕವಿತೆಗೆ ಜೀವ ತುಂಬುತ್ತಾರೆ. ಅಂತಿಮವಾಗಿ ಅದು ಓದುಗನಿಗೆ ಆಪ್ತವಾಗಬೇಕಷ್ಟೆ.
ಕಾಮನಬಿಲ್ಲು ಹಲವು ಬಣ್ಣಗಳನ್ನು ಹೊಂದಿ ಅಂಬರದ ತುಂಬೆಲ್ಲ ಚಿತ್ತಾರ ಮೂಡಿಸಿ ಎಲ್ಲರ ಚಿತ್ತವನ್ನು ತನ್ನೆಡೆ ಸೆಳೆಯುವಂತೆ, ಕವಿತೆಗಳು ರಂಗು ರಂಗಿನ ಭಾವಗಳು, ವರ್ಣನೆ, ಕಲ್ಪನೆ, ಸಂದೇಶ, ಆಶಯ, ಸಾಂತ್ವನ, ಭರವಸೆ ತುಂಬಿಕೊಂಡು ಕಾವ್ಯ ಲೋಕವನ್ನು ರಸಮಯವಾಗಿಸಿ ಓದುಗರ ತನುಮನಗಳನ್ನು ರೋಮಾಂಚನಗೊಳಿಸುತ್ತವೆ. ಈ ಕವಿತೆಗಳು ವಿಶಿಷ್ಟವಾಗಿ ಓದುಗರಲ್ಲಿ ಭಾವತೀವ್ರತೆಯನ್ನು ಕೆರಳಿಸುತ್ತವೆ. ಇದೆ ಉದ್ದೇಶದಿಂದ “ಡೈಲನ್ ಥಾಮಸ್” ಅವರು ಕಾವ್ಯವೆಂದರೆ “ಕವನವು ನನ್ನನ್ನು ನಗುವಂತೆ ಮಾಡುತ್ತದೆ ಅಥವಾ ಅಳುವಂತೆ ಮಾಡುತ್ತದೆ ಅಥವಾ ಆಕಳಿಸುವಂತೆ ಮಾಡುತ್ತದೆ. ಅದು ನನ್ನ ಕಾಲ್ಬೆರಳುಗಳನ್ನು ಮಿನುಗುವಂತೆ ಮಾಡುತ್ತದೆ. ನಾನು ಇದನ್ನು ಮಾಡಲು ಅಥವಾ ಏನನ್ನು ಮಾಡಲು ಬಯಸುವುದಿಲ್ಲ” ಎಂದಿದ್ದಾರೆ ಇದು ಕಾವ್ಯಕ್ಕಿರುವ ಅಂತಃಶಕ್ತಿಯಾಗಿದೆ. ಇದು ಬರಹಗಾರನನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ದುಃಖದ ಮಡುವಿನಲ್ಲಿ ಮುಳುಗಿಸಬಲ್ಲದು, ಬಾನಲ್ಲಿ ಹಕ್ಕಿಯಂತೆ ಹಾರಿಸಬಹುದು, ಕಲ್ಪನಾಲೋಕದಲ್ಲಿ ಸುತ್ತಿಸುವುದು. ಪ್ರೀತಿ, ಪ್ರೇಮ, ಸರಸ, ಸಲ್ಲಾಪಗಳ ಮೂಲಕ ಭಾವಪರವಶಗೊಳಿಸುವುದು, ರಮ್ಯ ಭಾವದಿಂದ ಸಮ್ಮೋಹನಗೊಳಿಸುವುದು, ಶೃಂಗಾರದಿಂದ ಮೈಮನಗಳನ್ನು ನವಿರೇಳಿಸುವುದು, ಸೊಗಸಾದ ವರ್ಣನೆಯ ಮೂಲಕ ಉಲ್ಲಾಸ ಉತ್ಸಾಹ ಮೂಡಿಸುವುದು, ವೈವಿಧ್ಯಮಯ ಭಾವಗಳ ಮೂಲಕ ಮನಸ್ಸನ್ನು ತಾಜಾ ಗೊಳಿಸುವುದು, ಜಗತ್ತನ್ನು ಸುಂದರವಾಗಿ, ವರ್ಣಮಯವಾಗಿ ಚಿತ್ರಿಸುವುದು, ಪ್ರಕೃತಿಯ ರಮಣಿಯ ಸೊಬಗನ್ನು ಆಸ್ವಾದಿಸುವ ಅವಕಾಶ ನೀಡುವುದು, ನೋವುಗಳಿಗೆ ಅಂತಃಕರಣದ ಭಾವವನ್ನು ಬಿಂಬಿಸುವುದು, ಒಟ್ಟಾರೆ ಹೇಳುವುದಾದರೆ ಕಾವ್ಯವು ಓದುಗರಿಗೆ ಹೃದಯಸ್ಪರ್ಶಿಯಾಗಿರುವುದು.
ಕಾವ್ಯದ ಕಾಲಘಟ್ಟವನ್ನು ನೋಡುತ್ತ ಹೋದಂತೆ ಹಳಗನ್ನಡ ,ನಡುಗನ್ನಡ, ಹೊಸಗನ್ನಡವಾಗಿ ರೂಪಾಂತರಗೊಂಡು ನವ್ಯ, ನವೋದಯ, ಬಂಡಾಯ, ದಲಿತ ಕಾವ್ಯಗಳು ಇಂದು ಕಾವ್ಯಲೋಕದ ಮುಖ್ಯ ಭೂಮಿಕೆಯಲ್ಲಿವೆ. ಇವುಗಳ ಪ್ರಧಾನ ಗುರಿ ಸಾಹಿತ್ಯಾಭಿಮಾನಿಗಳ ಮನದ ಬಿತ್ತಿಗೆ ತಮ್ಮ ಕಾವ್ಯ ಓದಿನ ಮೂಲಕ ಸಂತೃಪ್ತಿಯನ್ನು ಲೇಪಿಸುವುದು. ಜೊತೆಗೆ ಸಾಮಾಜಿಕ ಕಳಕಳಿಯ ಬರಹಗಳ ಮೂಲಕ ಅನ್ಯಾಯ, ನೋವು, ಕಷ್ಟ, ಶೋಷಣೆ, ಭ್ರಷ್ಟಾಚಾರ, ಕ್ರೌರ್ಯ, ಅಸಮಾನತೆ, ಮೌಢ್ಯದಲ್ಲಿ ಮುಳುಗಿರುವ ಸಮಾಜವನ್ನು ಚೇತನಗೊಳಿಸಿ, ನ್ಯಾಯದ ದಾರಿಯಲ್ಲಿ ನಡೆಸಲು ಹಾಗೂ ನಿಸ್ತೇಜವಾಗಿ ಜಡವಾಗಿರುವ ಮನುಕುಲವನ್ನು ಬಡಿದೆಚ್ಚರಿಸುವ ಕಾರ್ಯ ಮಾಡಿ ಸಾಂತ್ವನದ ಮುಲಾಮು ಹಚ್ಚಿ ಸಂತೈಸುವುದು. ಅವರಲ್ಲಿರುವ ಆ ದುಃಖ ದುಮ್ಮಾನಗಳಿಗೆ ಸಮಾಧಾನದ ದನಿಯಾಗಿ, ಮೌಢ್ಯಗಳ ಅಂದಕಾರ ಕೂಪದಿಂದ ಹೊರತಂದು ಬೆಳಕ ನಿಚ್ಚಣಿಕೆಯನ್ನು ಏರಿ ಅವರ ಬದುಕನ್ನು ಹಸನು ಮಾಡಿಕೊಳ್ಳಲು ಕಾವ್ಯಗಳು ದಾರಿದೀಪಗಳಾಗಿವೆ. ಈ ನಿಟ್ಟಿನಲ್ಲಿ ನಾನು ಹೊಸ ತಲೆಮಾರಿನ ನಾಡಿನ ನಾನಾ ಭಾಗಗಳ ಕವಿಗಳು ರಚಿಸಿರುವ ಕವಿತೆಗಳನ್ನು ನಿಮ್ಮ ಮುಂದೆ ತರುವ ಮೂಲಕ ವಿಶಿಷ್ಟವಾದ ಕಾವ್ಯಶೈಲಿ ಹಾಗೂ ಪ್ರಾದೇಶಿಕ ಭಾಷಾ ಸೊಗಡಿನ ಅನುಭೂತಿಯನ್ನು ಕಟ್ಟಿಕೊಡುವ ಮಹದಾಶಯ ಹೊಂದಿರುವೆ.
ವೈವಿಧ್ಯಮಯವಾದ ಕಾವ್ಯಗಳು ಏಕತಾನತೆಯನ್ನು ಹೋಗಲಾಡಿಸಿ ವೈವಿಧ್ಯತೆಯ ಪರಿಕರಗಳ ಮೂಲಕ ಲೋಕದ ಅಭಿರುಚಿಗೆ ತಕ್ಕಂತೆ ಸ್ಪಂದಿಸುತ್ತವೆ. ಕವಿ ತಾನು ಕಂಡಿದ್ದೆಲ್ಲವನ್ನು ತನ್ನೊಳಗೆ ಧೇನಿಸಿ, ಬೆರಗು,ಬಿನ್ನಾಣ, ಬೆಡಗು, ಸೊಬಗು, ಸೌಂದರ್ಯದೊಂದಿಗೆ ಬರಹದ ರೂಪ ನೀಡುತ್ತಾನೆ. ತನ್ನ ಅನುಭವಕ್ಕೆ ದಕ್ಕಿದ್ದನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾನೆ. ಈ ನಿಟ್ಟಿನಲ್ಲಿ ಪ್ರಕೃತಿಯ ಕೊಡುಗೆ ಅಮೋಘ ಎಂದೆ ಹೇಳಬಹುದು. ನಿಸರ್ಗದ ಜೀವಾಳವಾದ ಹಸಿರು ಗಿಡ ಮರ, ಬೆಟ್ಟ ಗುಡ್ಡ, ಸರೋವರ ,ಕಾನನ, ಸೂರ್ಯೋದಯ, ಚಂದ್ರ ದರ್ಶನ, ತಾರೆಗಳು, ಕಡಲ ಕಿನಾರೆ, ಜಲಪಾತ ಇತ್ಯಾದಿಗಳು ಕವಿಯನ್ನು ಕಾವ್ಯ ಲೋಕಕ್ಕೆ ಕರೆದೋಯ್ದು, ಭಾವನಾ ಲೋಕ ವಿಸ್ತರಿಸಿಕೊಳ್ಳುವ ವಿಧಾನ ವರ್ಣನಾತೀತ.
ಕಾವ್ಯವೆಂಬುದು ಶ್ವೇತವರ್ಣದ ಅಮೃತದ ಹಾಲಿನಂತೆ ಸ್ವಚ್ಚ ಹಾಗೂ ಶುಭ್ರವಾದ ಅಕ್ಷರಧಾರೆಯಾಗಿದೆ. ಇಲ್ಲಿ ಕವಿಯಾದವನು ತರಾವರಿ ಪಾತ್ರಗಳನ್ನು ತನ್ನೊಳಗೆ ಆವಾಹಿಸಿಕೊಂಡು ಅನುಭೂತಿಯಲ್ಲಿ ಕಾವ್ಯ ಕಟ್ಟುವರು. ಕವಿತಾ ಲೋಕ ಬಹಳ ವಿಸ್ತಾರವಾದ ಮಹಾಸಾಗರವಾಗಿದ್ದು, ಇಲ್ಲಿ ಈಜುವವನು ತನ್ನ ಸುತ್ತ ಮುತ್ತ ಕಾಣುವ ವಸ್ತು, ಪರಿಕರಗಳು, ಘಟನೆ, ಸನ್ನಿವೇಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಾವ್ಯ ರಚಿಸುವಲ್ಲಿ ಪ್ರೌಢಿಮೆಯನ್ನು ಮೆರೆಯಬೇಕು. ಆದಾಗ್ಯೂ ಓದುಗ ಅದೆಲ್ಲವನ್ನು ಆಸ್ವಾದಿಸಿ ಅದನು ಒಪ್ಪಿ ಅಪ್ಪಿಕೊಳ್ಳುವುದರ ಮೇಲೆ ಅವನ ಲೇಖನಿಯ ಸಾರ್ಥಕತೆ ನಿರ್ಧಾರವಾಗುತ್ತದೆ. ಇಲ್ಲಿ ಕಾವ್ಯ ಕಟ್ಟುವ ಮನೋಭಿಲಾಷೆ ಹೊಂದಿದ ಬರಹಗಾರ ಎಲ್ಲ ರಸಗಳನ್ನು ಹದವಾಗಿ ಬೆರೆಸಿ ಸಿಹಿಯಾದ ಪಾನಕ ಮಾಡಿ ಓದುಗರ ಗಂಟಲಿಗೆ ನವಿರಾಗಿ ಇಳಿಸಿದಾಗ ಮಾತ್ರ ಅದು ಕಾವ್ಯ ರಸಿಕನ ಮನ ಸೂರೆಗೊಳ್ಳಲು ದಾರಿಯಾಗುತ್ತದೆ. ಬಹಳ ಮುಖ್ಯವಾಗಿ ಅಂತಹ ಶರಬತ್ತಿನ ರುಚಿಯನ್ನು ಸವಿಯಲು ಸಿದ್ದರಾಗಿ ಮುಂದಿನ ಶುಕ್ರವಾರದಿಂದ ನನ್ನ ಕಾವ್ಯದರ್ಪಣ ಅಂಕಣ ಬರಹದಲ್ಲಿ .
ಕವಿಯಾದವನು ಅರಗಿನ ಅರಮನೆಯಲ್ಲಿ ಕುಳಿತು ಕಾವ್ಯ ರಚಿಸಲಾಗದು. ಅವನು ಹೊರ ಜಗತ್ತಿನ ಸ್ಪರ್ಶಕ್ಕೆ ಬಂದು ಅವರ ನಾಡಿಮಿಡಿತಕ್ಕೆ, ಬಡಿತಕ್ಕೆ ನಾಲಿಗೆಯಾಗಬೇಕು. ಆಗ ಮಾತ್ರ ಮನದಲ್ಲಿ ಹೆಪ್ಪುಗಟ್ಟಿದ ನೋವು ಸೋನೆಯಾಗಿ , ಕಾವ್ಯವಾಗಿ ಓದುಗರ ಮನೆ ಮನ ತಲುಪಲು ಸಾಧ್ಯ ಮತ್ತು ಸಶಕ್ತವಾದ ಸಾಹಿತ್ಯ ಹುಟ್ಟಲು ದಾರಿಯಾಗುತ್ತದೆ. ಇದಕ್ಕಾಗಿ ಕವಿಯಾದವನು ಸಿದ್ಧಿಪುರುಷನಾಗಬೇಕು. ನಿತ್ಯ ಶ್ರದ್ಧೆ, ಆಸಕ್ತಿಯಿಂದ ಅಕ್ಷರ ತಪವಗೈಯಬೇಕು. ಅನುಸಂಧಾನ ಮಾಡಬೇಕು. ಮನರಂಜನೆಯ ಜೊತೆಗೆ ಜೀವಪರ ಬರಹವನ್ನು ಮುಂಚೂಣಿಗೆ ತರುವ ಕೆಲಸ ಕವಿಯಿಂದ ಆಗಬೇಕು.
ಕಾವ್ಯಕ್ಕೆ ಅಮೋಘ ವಾದಂತಹ ಚಿಕಿತ್ಸಕ ಗುಣವಿದೆ. ನೋವಿನಲ್ಲಿರುವವರಿಗೆ ಸಮಾಧಾನದ ಸಿಂಚನಗೈಯುತ್ತ, ಕಾವ್ಯ ಓದುತ್ತ, ಮನದೊಳಗಿನ ತನ್ನೆಲ್ಲ ನೋವುಗಳನ್ನು ಸ್ವಲ್ಪ ಸಮಯವಾದರೂ ಮರೆಯಲು ಪ್ರೇರೇಪಿಸಿದರೆ, ಮತ್ತೆ ಕೆಲವೊಂದು ಕವಿತೆಯ ಸಾಲುಗಳು ದುಃಖದ ಪ್ರಪಾತದಿಂದ ಮೇಲೆತ್ತಿ ನಲಿವಿನ ಹೂರಣವನ್ನು ಉಣಬಡಿಸುತ್ತವೆ. ಬತ್ತಿದ ಬಾಳಿಗೆ ಹೊಂಗನಸನ್ನು ಬಿತ್ತಿ,ಭರವಸೆಯ ಆಶಾಕಿರಣವನ್ನು ಮೂಡಿಸುತ್ತವೆ. ಈ ಕವಿತೆಗಳು ಓದುಗರಿಗೆ ಸಮಾಜ ದರ್ಶನ, ವ್ಯಕ್ತಿ ದರ್ಶನ ಮಾಡಿಸುವುದರ ಜೊತೆಗೆ ಬಾಳಿಗೆ ಸ್ಫೂರ್ತಿಯ ಚಿಲುಮೆಯಾಗುತ್ತದೆ. ಎದುರಾದ ಸವಾಲುಗಳು ಮತ್ತು ಸಮಸ್ಯೆಗಳಿಗೆ ಪರಿಹಾರದ ಕಿಟಕಿಯನ್ನು ತೆರೆಯುತ್ತವೆ. ಈ ನಿಟ್ಟಿನಲ್ಲಿ ಕವಿಯ ಲೇಖನಿ ಸದಾ ಸಮಾಜಮುಖಿಯಾದ ತುಡಿತವನ್ನು ಹೊಂದಿರಬೇಕು.
ಎಲ್ಲಾ ಕವಿಗಳ ಭಾವಾಭಿವ್ಯಕ್ತಿ, ಭಾಷಾಬಳಕೆ,ಶಬ್ದ ಚಮತ್ಕಾರಿಕೆ, ಒಳನೋಟ, ಅಂತಃಶಕ್ತಿ, ಕಾವ್ಯ ಕಟ್ಟುವ ಪರಿಭಾಷೆ, ಚೌಕಟ್ಟು ಮುಂತಾದವುಗಳು ಒಂದೆ ತೆರನಾಗಿರುವುದಿಲ್ಲ. ಒಬ್ಬೊಬ್ಬರ ಭಾವಲಹರಿ, ಅನುಭವಜನ್ಯ ನುಡಿಗಳು, ಪದ ಕಟ್ಟುವ ವಿಶೇಷತೆ, ಚಿಂತನಾಲಹರಿ, ಭಾವಯಾನ, ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ನಾನು ಇನ್ನು ಮುಂದೆ ವಿವಿಧ ಕವಿಭಾವಗಳ ಅಕ್ಷರ ಬುತ್ತಿಯನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತೇನೆ.
ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿರುವ ಕವಿತೆಗಳನ್ನು ವಿಶ್ಲೇಷಿಸುವ ಮೂಲಕ ಇಂದಿನ ತಲೆಮಾರಿನ ಕವಿಗಳ ಪಾಂಡಿತ್ಯ, ವಿದ್ವತ್ತು, ಸಮಾಜಮುಖಿ ಆಲೋಚನೆ, ಯೋಚನಾ ಲಹರಿ, ಕಾಳಜಿ, ವೈಚಾರಿಕ ಚಿಂತನೆಗಳು, ಪ್ರಜಾಸತ್ತಾತ್ಮಕ ಮೌಲ್ಯಗಳು, ವೈವಿಧ್ಯಮಯ ದೃಷ್ಟಿಕೋನಗಳ ವಿಭಿನ್ನವಾದ ಮಜಲುಗಳನ್ನು ನಿಮಗೆ ಪರಿಚಯಿಸಲಿದ್ದೇನೆ. ಜೊತೆಗೆ ನಾನು ಪರಿ ಪರಿಯಾದ ಕವಿತೆಗಳನ್ನು ಆಯ್ಕೆಮಾಡಿಕೊಂಡು ಪ್ರೀತಿ,ಪ್ರೇಮ, ಸರಸ,ಸಲ್ಲಾಪ ವಿರಹವೇದನೆ ಮುಂತಾದ ಭಾವನಾಲಹರಿಗಳನ್ನು ನಿಮ್ಮ ಮುಂದೆ ತೆರೆದಿಡುವ ಕನಸು ನನ್ನದಾಗಿದೆ
“ನಾನು ಪುಸ್ತಕವನ್ನು ಓದಿದರೆ ಮತ್ತು ಅದು ನನ್ನ ದೇಹವನ್ನು ತಣ್ಣಗಾಗಿಸಿದರೆ ಯಾವುದೆ ಬೆಂಕಿ ನನ್ನನ್ನು ಬೆಚ್ಚಗಿಡಲು ಸಾಧ್ಯವಿಲ್ಲ ಅದೆ ಕವಿತೆಗಿರುವ ಶಕ್ತಿ” ಎಂಬ “ಎಮಿಲಿ ಡಿಕಿನ್ಸನ್” ರವರ ಮಾತನ್ನು ನಾವು ಇಲ್ಲಿ ಸ್ಮರಿಸಬಹುದು. ಎಲ್ಲ ಕವಿಗಳ ರಚನೆ ಒಂದೆ ತೆರನಾಗಿ ಇರಲು ಸಾಧ್ಯವಿಲ್ಲ. ಕಾರಣ ಅವರು ಬೆಳೆದುಬಂದ ಪರಿಸರ, ಎದುರಿಸಿದ ಸವಾಲುಗಳು, ಅನುಭವಗಳು, ನೋವುಗಳು, ಜನಜೀವನ, ಬದುಕಿನ ಆಯಾಮಗಳು, ಜಗತ್ತನ್ನು ಕಾಣುವ ರೀತಿ, ಶಬ್ದಭಂಡಾರ, ಭಾವನಾಲೋಕ, ಕಲ್ಪನೆ, ಭಾಷೆಯ ಹಿಡಿತ, ಅಭಿವ್ಯಕ್ತಿ, ಸೃಜನಶೀಲತೆ, ಕೌಶಲ್ಯಗಳು ಜ್ಞಾನದ ಮಿತಿ ,ಸಂತೋಷ ಮುಂತಾದವುಗಳು ಅವರ ಬರಹದ ಮೇಲೆ ಅಭೂತಪೂರ್ವವಾದ ಪ್ರಭಾವ ಬೀರುತ್ತವೆ ಎಂಬುದು ಗಮನಾರ್ಹವಾದ ಸಂಗತಿಯಾಗಿದೆ. ಹಾಗಾಗಿ ಅಂತಹ ಎಲ್ಲಾ ಕವಿಗಳು, ಕವಿಯತ್ರಿಯರ ಕವಿತೆಗಳನ್ನು ಓದಿದಾಗ ಅತಿ ಸರಳ ಎನಿಸಿದರೂ ಆ ಕವಿತೆಗಳು ಅನನ್ಯ ವಾದಂತಹ ಗೂಢಾರ್ಥವನ್ನು, ಮಾರ್ಮಿಕ ಛಡಿಯೇಟನ್ನು ಒಳಗೊಂಡಿರುತ್ತವೆ. ಹಾಗೆಯೆ ಮತ್ತೆ ಕೆಲವು ಕವಿತೆಗಳು ಅದ್ದೂರಿಯಾದ ಪದಪುಂಜಗಳ ಹೆಣಿಗೆ ಇದ್ದರೂ ಒಮ್ಮೊಮ್ಮೆ ಭಾವಗಳು ನೀರಸವಾಗಿರುತ್ತವೆ
ಇಂತಹ ವಿಭಿನ್ನತೆಗಳನ್ನು ನಿಮಗೆ ಪರಿಚಯಿಸುವ ಮಹದಾಸೆಯ ನನ್ನದಾಗಿದೆ. ವೈವಿಧ್ಯಮಯವಾದ ರೂಪಕಗಳು, ಪ್ರತಿಮೆಗಳು, ಉಪಮಾನ ಉಪಮೇಯ ಗಳಿಂದ ಅಲಂಕೃತಗೊಂಡ ಕವಿತೆಗಳು ಕೆಲವು ಕವಿಗಳ ಕಲಾತ್ಮಕತೆಯ ಬರಹವಾದರೆ, ನಿರಾಭರಣ ಸುಂದರಿಯಂತೆ ಯಾವುದೆ ರೂಪಕ, ಛಂದಸ್ಸುಗಳ ಉಸಾಬರಿಗೆ ಹೋಗದೆ ಜೀವನಾನುಭವವನ್ನು ಕಾವ್ಯ ವಸ್ತುವಾಗಿಸಿಕೊಂಡ ಜನಿಸಿದ ಕವಿತೆಗಳು ಮತ್ತೊಂದೆಡೆ. ಇವುಗಳ ವಿಶೇಷತೆಯನ್ನು, ಆನಂದವನ್ನು ನಿಮಗೆ ಕಟ್ಟಿಕೊಡುವುದು ನನ್ನ ಅಂಕಣ ಬರಹದ ಪ್ರಬಲವಾದ ಆಶಯವಾಗಿದೆ.
ಬಹುತೇಕರು ಕವಿತೆಗಳನ್ನು ಬರೆದರು ಅವುಗಳನ್ನು ಓದಿ ಜೀರ್ಣಿಸಿಕೊಳ್ಳುವುದು ಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲ. ಕೆಲವು ಕವಿಗಳು ತಮ್ಮ ಕಾವ್ಯವನ್ನು ನೇರವಾಗಿ ಸರಳವಾಗಿ ಬರೆದರೆ, ಮತ್ತೆ ಕೆಲವು ಕವಿಗಳು ಮಾರ್ಮಿಕವಾದ ರೂಪದಲ್ಲಿ, ಸಂಕೀರ್ಣ ಸ್ವರೂಪದಲ್ಲಿ ರಚಿಸುವರು. ಅವುಗಳೆಲ್ಲವನ್ನು ಓದಿ ಭಾವವನ್ನು ಅರಿತು ಕಾವ್ಯ ಆಸ್ವಾದಿಸುವುದು ಕಾವ್ಯ ರಸಿಕರಿಗೆ ಒಮ್ಮೊಮ್ಮೆ ಸವಾಲೆನಿಸಬಹುದು. ಅಂತಹ ಸನ್ನಿವೇಶವನ್ನು ಸರಳಿಕರಿಸಿ ನಿಮ್ಮ ಓದಿಗೆ ಸಹಕರಿಸುವ ಪ್ರಯುಕ್ತ ಸಂಗಾತಿ ಅಂತರ್ಜಾಲ ಪತ್ರಿಕೆಯ “ಅಂಕಣ ಬರಹ” “ಕಾವ್ಯದರ್ಪಣ”ದಲ್ಲಿ ನಿಮ್ಮೆಲ್ಲರಿಗೂ ಹೊಸ ತಲೆಮಾರಿನ ಕವಿಗಳ ಕಾವ್ಯದ ಸಾರವನ್ನು ಹೊತ್ತು ತರಲಿದ್ದೇನೆ.
ಸ್ನೇಹಿತರೆ ನಿರೀಕ್ಷಿಸಿ ….
ನಿಮಗಾಗಿ ನಾನು ಮುಂದಿನ ಶುಕ್ರವಾರದಿಂದ ಪ್ರತಿ ಶುಕ್ರವಾರ ಒಬ್ಬೊಬ್ಬ ಕವಿಯ ಕವಿತೆಯ ಸಾರವನ್ನು ಹೊತ್ತು ತರಲಿದ್ದೇನೆ. ನೀವೆಲ್ಲರೂ ನನ್ನೊಂದಿದ್ದು ಆ ಕವಿಯ ಕಾವ್ಯವನ್ನು ಆಸ್ವಾದಿಸಲು ಮರೆಯದಿರಿ .ನಿಮ್ಮ ಓದಿನ ನಿರೀಕ್ಷೆಯಲ್ಲಿ ನಾನಿರುವೆ. ಅಲ್ಲಿಯವರೆಗೂ ಎಲ್ಲರಿಗೂ ನಮಸ್ಕಾರ
ಅನುಸೂಯ ಯತೀಶ್
ಅನುಸೂಯ ಯತೀಶ್ ಇವರು ನೆಲಮಂಗಲದ ನಿವಾಸಿ. ಸ್ನಾತಕೋತ್ತರ ಪದವೀಧರೆಯಾದ ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ
.
ಪ್ರಾಚೀನ ಕನ್ನಡ ಹೊಳಹುಗಳೊಂದಿಗೆ ಈಚಿನ ಸಾಹಿತ್ಯದ, ಮುಖ್ಯವಾಗಿ ಕಾವ್ಯದ ಕುರಿತ ಪೂರ್ವಭಾವಿ ವಿಶ್ಲೇಷಣೆ ಚನ್ನಾಗಿ ಮೂಡಿ ಬಂದಿದೆ. ಲೇಖನದಲ್ಲಿ ಒಂದೆರಡು ಇಂಗ್ಲಿಷ್ ಬರಹಗಾರರ ಉಕ್ತಿಗಳನ್ನು ಉಲ್ಲೇಖಿಸಲಾಗಿದೆ. ಅವರ ಜೊತೆಗೆ ಕನ್ನಡದ ವಿದ್ವಾಂಸರ ಅನಿಸಿಕೆಗಳನ್ನು ಬಳಸಿಕೊಂಡರೆ ಇನ್ನೂ ಚಂದ. ಕವಿತಾ ರಚನೆಯಲ್ಲಿ ಬದಲಾದ ಇಂದಿನ ಸ್ಥಿತಿಗತಿಗಳನ್ನು ಗಮನಿಸಿದರೆ ಇನ್ನೂ ಉತ್ತಮ. ಕುವೆಂಪು ಅಂಥವರು ಎಲ್ಲ ಪ್ರಾಸಗಳನ್ನು ಮೀರಿ ಮುಕ್ತ ಛಂದಸ್ಸಿನಲ್ಲೇ “ರಾಮಾಯಣ ದರ್ಶನಂ” ನಂಥ ಮಹಾಕಾವ್ಯವನ್ನು ರಚಿಸಿದರು.
ಚನ್ನಾಗಿದೆ ಲೇಖನ. ಮುಂದುವರೆಯಲಿ.
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ
ಆತ್ಮೀಯ ಧನ್ಯವಾದಗಳು ಸರ್
ಹಾಗೂ ನಿಮ್ಮ ಸಲಹೆಯ ಕಡೆ
ಗಮನ ವಹಿಸುವೆ ..
ಅಂಕಣ ಬರಹದ ಮೊದಲ ಪರಿಚಯದ ಭಾಗವಾಗಿ ಓದುಗರು ಕಾತರದಿ ಕಾಯುವಂತೆ ಮಾಡಿದ್ದೀರಿ ನಿಮ್ಮ ಪ್ರತಿ ಅಂಕಣವು ಓದುಗರೆದೆಯಲಿ ಅಚ್ಚಳಿಯದೆ ಉಳಿಯುವುದು ಏಕೆಂದರೆ ನೀವು ಪದಗಳನ್ನು ಮಾಲೆ ಕಟ್ಟಿದಂತೆ ಉಪಮೆಗಳನ್ನು ಉಪಯೋಗಿಸುತ್ತೀರಿ ತರು ಲತೆಯನ್ನು ಅಪ್ಪುವಂತೆ ಓದುಗರು ನಿಮ್ಮ ಬರಹಗಳನ್ನು ಒಪ್ಪುವರು. ಅಕ್ಷರದಲ್ಲಿ ಹುಟ್ಟುವಂತದ್ದು ಪದಬಂಧಗಳಲ್ಲಿ ಕಟ್ಟುವಂತದ್ದು ಇಂತಹ ನಿಮ್ಮ ಬರಹ ಶೈಲಿ ನಿಜಕ್ಕೂ ಅಸಕ್ತಿಕರವಾಗಿದೆ ನಿಮಗೆ ಆತ್ಮೀಯ ಅಭಿನಂದನೆಗಳು ಶುಭವಾಗಲಿ ಮೇಡಂ.
ನಿಮ್ಮ ಪ್ರೋತ್ಸಾಹದ ನುಡಿಗಳಿಂದ
ನನ್ನ ಲೇಖನದ ಶಕ್ತಿ ಇಮ್ಮಡಿಯಾಗಿದೆ
ಸರ್.ನಿಮ್ಮ ಅಭಿಮಾನದ ಪ್ರತಿಕ್ರಿಯೆಗೆ
ಆತ್ಮೀಯ ಧನ್ಯವಾದಗಳು ಸರ್
ಮೇಡಂ, ಚೆನಾಗಿ ಬರೆದಿದೀರಿ ನಿಮ್ಮ ಅಂಕಣ ಬರಹಕ್ಕೆ ಮುನ್ನಡಿಯ ಮಾತುಗಳನ್ನ. ಕಾವ್ಯದ ಸ್ವರೂಪವನ್ನ ವಿವರಿಸುತ್ತಲೇ ಅದರ ಮಹತ್ವವನ್ನ ಕೂಡ ಹೇಳುತ್ತಾ ಹೋಗಿದ್ದೀರಿ. ನಿಮಗೆ ಶುಭವಾಗಲಿ. ನಿಮ್ಮ ಅಂಕಣ ಬರಹವನ್ನ ಪ್ರತಿ ಶುಕ್ರವಾರ ನಾವು ಅಷ್ಟೇ ಕಾತುರದಿಂದ ಕಾಯುತ್ತೇವೆ.