ಅಂಕಣ ಬರಹ
ಗಜಲ್ ಲೋಕ
ಸಬರದ್ರವರ ಗಜಲ್ನಲ್ಲಿ
ಸಖಿಯಹುಡುಕಾಟ…
ಹಾಯ್…
ಎಲ್ಲರೂ ಹೇಗಿದ್ದೀರಿ, ಕ್ಷೇಮವಲ್ಲವೆ…2021 ರ ಕೊನೆಯ ಗುರುವಾರ ಬಂದೆ ಬಿಟ್ಟಿತು. ಎಂದಿನಂತೆ ಇಂದೂ ಸಹ ಗಜಲ್ ಲೋಕದ ಮತ್ತೊಬ್ಬ ತಾರೆಯೊಂದಿಗೆ ನಿಮ್ಮ ಮುಂದೆ ರುಬರೂ ಆಗಲು ಕಾತುರದಿಂದ ಕಾಯುತಿದ್ದೇನೆ. ಸುರ್ಯೋದಯದ ಕಿರಣಗಳೊಂದಿಗೆ ನಿಮ್ಮನ್ನು ಗಜಲ್ ಮಧುಶಾಲೆಗೆ ಹೃದಯಪೂರ್ವಕವಾಗಿ ಸ್ವಾಗತಿಸುತಿರುವೆ…🌹🌹
“ಅಲೆದಾಟದಿಂದಾದರೂ ಸರಿ ಗುರಿ ತಲುಪಬಹುದು
ದಾರಿ ತಪ್ಪಿದವರೆಂದರೆ ಅವರು ಮನೆಯಿಂದ ಹೊರ ಬರದವರು“
–ಮಿರ್ಜಾ ಗಾಲಿಬ್
ಭಾವನೆಗಳ ಮೂಲ ಸೆಲೆಯಾದ ಭಾಷೆ ಮನುಕುಲವನ್ನು ಇನ್ನಿತರ ಪ್ರಾಣಿಗಳಿಗಿಂತಲೂ ಭಿನ್ನವಾಗಿಸಿ ಅನುಪಮವನ್ನಾಗಿಸಿದೆ. ಭಾಷೆಯ ಮಳೆಬಿಲ್ಲೆಂದರೆ ಅದೂ ಸಾಹಿತ್ಯ! ಪ್ರಪಂಚವು ನಮ್ಮ ಕಂಗಳಿಗೆ ವಿವಿಧ ಆಯಾಮಗಳಾಗಿ ಕಂಗೊಳಿಸಿದೆ, ಕಂಗೊಳಿಸುತ್ತಿದೆ. ಇದನ್ನೆಲ್ಲ ಒಂದಾಗಿ ಮೂಟೆ ಕಟ್ಟಿರುವ ಹಗ್ಗವೇ ‘ಅಕ್ಷರ ಚಿಂತನ ಮಾಲೆ’. ನಾವು ಪ್ರೀತಿಸುವ ಅಕ್ಷರದ ತೊಟ್ಟಿಲನ್ನು ತೂಗುತ್ತಿರುವ ಮಮತಾಮಯಿ ಮಾತೆ ಎಂದರೆ ಅದು ಕಾವ್ಯ. ಕಾವ್ಯವು ವಿಶೇಷವಾಗಿ ನಮ್ಮ ಅಂತರಂಗದ ಒಂದು ಅಂಶವಾದ ಮನಸನ್ನು ಉದ್ದೇಶಿಸಿರುತ್ತದೆ. ಈ ನೆಲೆಯಲ್ಲಿ ಹೃದಯವು ಮನುಷ್ಯನ ಅಂತರಂಗದಲ್ಲಿಯ ಅನುಭವಸ್ಥಾನ. ಅದರಲ್ಲಿ ನಾನಾ ಅನುಭವಗಳ ರಂಗೋಲಿಯನ್ನು ಬಿಡಿಸಿ ನವರಸವನ್ನು ಕಾರಂಜಿಯಂತೆ ಚಿಮ್ಮಿಸುವುದೆ ಕಾವ್ಯ. ಈ ಹಿನ್ನೆಲೆಯಲ್ಲಿ ಕಾವ್ಯವೆಂದರೆ ಒಂದು ಸಂಹಿತೆ. ಸಂಹಿತೆ ಎಂದರೆ ಸಮೂಹ, ಅದುವೆ ರಸಗಳ ಸಮೂಹ!! ಅನುರಾಗ, ಲಜ್ಜೆ, ಭಯ, ಕೋಪ, ಗರ್ವ… ಮುಂತಾದವು ಅಂತಃಕರಣದ ಧರ್ಮಗಳು. ರತಿ, ಹಾಸ್ಯ, ಶೋಕ, ಕ್ರೋಧ, ಉತ್ಸಾಹ, ಭಯ, ಜಿಗುಪ್ಸೆ ಮತ್ತು ವಿಸ್ಮಯಗಳೆಂಬ ಸ್ಥಾಯಿಭಾವಗಳನ್ನು ಪೋಷಿಸಿಕೊಂಡು ಬರುತ್ತಿರುವುದೆ ಕಾವ್ಯ!! ಆದರೆ ಮರುಭೂಮಿಯಲ್ಲಿ ಓಯಾಸಿಸ್ ನಂತೆ ದಾಹ ತಣಿಸುವ ಯಾವುದಾದರೂ ಒಂದು ಕಾವ್ಯ ಪ್ರಕಾರವಿದೆಯೆಂದರೆ ಅದು ಗಜಲ್..! ಇದು ಮನಸನ್ನು ಸೆಳೆದು, ಮೈಮರೆಸಿ, ಮೇಲಕ್ಕೆತ್ತಿ ಒಂದು ರೀತಿಯ ಉದಾತ್ತವಾದ ಆನಂದವನ್ನು ನೀಡುತ್ತದೆ. ಈ ಕಾರಣಕ್ಕಾಗಿಯೇ ಗಜಲ್ ಎನ್ನುವುದು ಜಗತ್ತಿನ ಜಂಜಡದಿಂದ ಸಹೃದಯ ಓದುಗರನ್ನು ಮುಕ್ತಗೊಳಿಸುತ್ತದೆ, ಮನ-ಮನಗಳಲ್ಲೂ ಪ್ರೀತಿಯ ಸಿಂಚನವನ್ನು ಅರಳಿಸುತ್ತದೆ. ಈರ್ಷೆ-ಮತ್ಸರಗಳನ್ನು ಪರಿಹರಿಸಿ, ಮನಸ್ಸು ಮತ್ತು ಬುದ್ಧಿಯನ್ನು ವಿಕಾಸವಾಗಿಸುವ ದಿವ್ಯ ಔಷಧಿಯಾಗಿದೆ. ಈ ಅನುರಾಗದ ಮುಲಾಮನ್ನು ಸಮಾಜಕ್ಕೆ ಹಂಚಿರುವ, ಹಂಚುತಿರುವ ಅಸಂಖ್ಯಾತ ಗಜಲ್ ಗೋ ಅವರಲ್ಲಿ ಡಾ. ಬಸವರಾಜ ಸಬರದ್ ಅವರೂ ಒಬ್ಬರು!!
ಕವಿ, ಚಿಂತಕ, ನಾಟಕಕಾರ, ಸಾಮಾಜಿಕ ಹೋರಾಟಗಾರರು ಹಾಗೂ ಗಜಲ್ ಕಾರರೂ ಆದ ಡಾ. ಬಸವರಾಜ ಸಬರದ್ ರವರು 1954 ರ ಜೂನ್ 20 ರಂದು ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜನಿಸಿದರು. ತಂದೆ ಬಸಪ್ಪ ಸಬರದ್, ತಾಯಿ ಬಸಮ್ಮ. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕುಕನೂರಿನಲ್ಲಿ ಮುಗಿಸಿ, ಗದಗ್ ನ ಜೆ.ಟಿ. ಕಾಲೇಜಿನಿಂದ ಬಿ.ಎ. ಪದವಿಯನ್ನು ಪಡೆದು, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. (ಕನ್ನಡ), ಡಿಪ್ಲೊಮ ಇನ್ ಎಪಿಗ್ರಫಿ ಮತ್ತು “ಬಸವೇಶ್ವರ ಮತ್ತು ಪುರಂದರದಾಸರು : ಒಂದು ಸಾಂಸ್ಕೃತಿಕ ಅಧ್ಯಯನ” ವಿಷಯ ಕುರಿತು ಪ್ರಬಂಧವನ್ನು ಮಂಡಿಸಿ ಪಿಎಚ್.ಡಿ. ಪದವಿಯನ್ನೂ ಗಳಿಸಿದ್ದಾರೆ. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ ರಾಯಭಾಗ ಆರ್ಟ್ಸ್ ಕಾಲೇಜು, ಬೀದರ ಕರ್ನಾಟಕ ಕಾಲೇಜು, ಔರದ್‌ನ ಅಮರೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ. ಇದರ ಜೊತೆಗ ಗುಲಬರ್ಗಾ ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ, ಕನ್ನಡ ಅಭ್ಯಾಸ ಮಂಡಳಿ, ಕಲಾ ನಿಕಾಯದ, ಕನ್ನಡ ವಿಭಾಗದ ಸದಸ್ಯತ್ವ, ಪರೀಕ್ಷಾ ಮಂಡಳಿಯ ಚೇರ್‌ಮನ್, ವಿಶ್ವವಿದ್ಯಾಲಯದ ಅಫಿಲಿಯೇಷನ್ ಕಮಿಟಿ ಚೇರ್‌ಮನ್ ಮುಂತಾದ ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಹಲವಾರು ವಿದ್ಯಾರ್ಥಿಗಳು ಎಂ.ಫಿಲ್, ಪಿಎಚ್.ಡಿ ಮುಗಿಸಿದ್ದಾರೆ. ಸಾಮಾಜಿಕ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ, ಅಸ್ಪೃಶ್ಯತಾ ನಿವಾರಣಾ, ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ದಲಿತ-ಬಂಡಾಯ ಚಳವಳಿಯ ನೇತಾರರಾಗಿ…ಹೀಗೆ ಹಲವಾರು ಜನಪರ ಹೋರಾಟಗಳಲ್ಲಿ ಭಾಗಿಯಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಪ್ರಸ್ತುತವಾಗಿ ವೃತ್ತಿಯಿಂದ ನಿವೃತ್ತರಾಗಿ, ವಿಶ್ರಾಂತಿ ಜೀವನವನ್ನು ಸಾಗಿಸುತ್ತಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರ ಕಂಡ ಉತ್ತಮ ಸಾಹಿತಿಗಳಲ್ಲಿ ಒಬ್ಬರಾದ ಸಬರದ್ ಅವರು ಕಾವ್ಯ, ಕಥೆ, ನಾಟಕ, ವಿಮರ್ಶೆ-ಸಂಶೋಧನೆ-ಸಂಸ್ಕೃತಿ ಚಿಂತನೆ, ವಿಚಾರ ಸಾಹಿತ್ಯ, ಜೀವನ ಚರಿತ್ರೆ, ಜನಪದ, ತತ್ವಪದ, ಸಂಪಾದನೆ ಹಾಗೂ ಗಜಲ್ ಕ್ಷೇತ್ರದಲ್ಲಿ ಕೃಷಿಯನ್ನು ಮಾಡಿದ್ದಾರೆ. ಅವರು ಕೈಗೊಂಡ ಕೃಷಿಯನ್ನು ಒಮ್ಮೆ ಅವಲೋಕಿಸಿದರೆ ಅವರ ದೈತ್ಯ ಪ್ರತಿಭೆಯ ಅರಿವು ನಮಗಾಗುತ್ತದೆ.
ಕವನ ಸಂಕಲನಗಳು : ನನ್ನವರ ಹಾಡು, ಹೋರಾಟ, ಮೂಡಲಕ ಕೆಂಪು ಮೂಡ್ಯಾನ, ನೂರು ಹನಿಗಳು, ದನಿಯತ್ತಿ ಹಾಡೇನ, ಬೆಳದಿಂಗಳು ಬಿಸಿಲಾತು, ಗುಬ್ಬಿಯೊಂದು ಗೂಡು ಕಟ್ಯಾದೊ…
ನಾಟಕಗಳು : ಪ್ರತಿರೂಪ, ರೆಕ್ಕೆ ಮೂಡಿದಾಗ, ಬೆಳ್ಳಿ, ನರಬಲಿ, ಬೆಳ್ಳಕ್ಕಿ ಸಾಲು, ಬೀದಿ ನಾಟಕಗಳು…
ವಿಮರ್ಶೆ : ಹೊಸದಿಕ್ಕು, ವಚನ ಚಳುವಳಿ, ಸಾಹಿತ್ಯ ಸಂಗಾತಿ, ಜಾನಪದ, ಅನಂತಮೂರ್ತಿ ಕೃತಿಗಳು, ನಿರಂಜನ ಕೃತಿಗಳು….
ಸಂಶೋಧನೆ : ಬಸವೇಶ್ವರ ಮತ್ತು ಪುರಂದರದಾಸರು, ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ ಕವನಗಳು…
ವಿಚಾರ ಸಾಹಿತ್ಯ : ವಿಚಾರ ಸಂಪದ, ಸಮುದಾಯ ಮತ್ತು ಸಂಸ್ಕೃತಿ, ಪ್ರಭುತ್ವ ಮತ್ತು ಜನತೆ.. ಇವುಗಳೊಂದಿಗೆ ಹಲವಾರು ಮೌಲಿಕ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಅವುಗಳಲ್ಲಿ ದಲಿತ ಸೂರ್ಯ, ಕಲ್ಯಾಣ ನಾಡಿನ ಕೆಂಪು ಕವಿತೆಗಳು, ಆಯ್ದ ಕವನಗಳು, ಶರಣರ ಬಂಡಾಯ ವಚನಗಳು, ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು…ಈ ಎಲ್ಲ ವೈವಿಧ್ಯಮಯ ಸಾಹಿತ್ಯ ರೂಪಗಳೊಂದಿಗೆ “ಹೇಳೆ ಸಖಿ” ಎಂಬ ಸೊಗಸಾದ ಗಜಲ್ ಸಂಕಲನವನ್ನೂ ಪ್ರಕಟಿಸಿದ್ದಾರೆ.
ಡಾ. ಬಸವರಾಜ ಸಬರದ್ ಅವರ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ನಾಡಿನಾದ್ಯಂತ ಗೌರವ ಪುರಸ್ಕಾರಗಳು, ಸನ್ಮಾನಗಳು ಮತ್ತು ಹತ್ತು ಹಲವಾರು ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ಕೆಲವೊಂದು ಹೆಸರಿಸುವುದಾದರೆ ದೇವರಾಜ ಬಹಾದ್ದೂರ ಪ್ರಶಸ್ತಿ, ಕಲಬುರ್ಗಿ ವಿಶ್ವವಿದ್ಯಾಲಯ ಪುರಸ್ಕಾರ, ಕುವೆಂಪು ಸಾಹಿತ್ಯ ಪುರಸ್ಕಾರ, ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ರತ್ನಾಕರವರ್ಣಿ, ಮುದ್ದಣ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ, ರಂಗಭೂಮಿ ಅಜ್ಜರಕಾಡು ಬಹುಮಾನ….
ಒಬ್ಬ ಗಜಲ್ ಗೋ ತನ್ನ ಇಡೀ ಜೀವಮಾನದಲ್ಲಿ ಬರೆಯುವ ಗಜಲ್ ಒಂದೇ ಎಂಬ ಮಾತಿದೆ. ಅಂದರೆ ಅವರು ಎಷ್ಟೆಲ್ಲ ಗಜಲ್ ಗಳನ್ನು ಬರೆದರೂ ಅವೆಲ್ಲವೂ ಸೇರಿ ಒಂದು ಗಜಲ್ ಆಗಲು ಹವಣಿಸುತ್ತಿರುವೆ ಅಥವಾ ಅವರ ಪ್ರತಿಯೊಂದು ಗಜಲ್ ಅವರು ಬರೆಯಬೇಕೆಂದು ಬಯಸಿಯೂ ಬರೆಯಲಾಗದಿರುವ ಒಂದು ಮಹಾಗಜಲ್ ನ ಅಭ್ಯಾಸ ಅಥವಾ ಪದ್ಧತಿಗಳಂತಿರುತ್ತವೆ. ಈ ದಿಸೆಯಲ್ಲಿ ನಂಬಿಕೆಯನ್ನು ಅನುಭವಗಳ ಒರೆಗಲ್ಲಿಗೆ ಹಚ್ಚಿ ಪರಿಶೀಲಿಸಿದಾಗ ಕಂಡ ಬಾಳಿನ ಕಟು ನಿಷ್ಟುರತೆ ಗಜಲ್ ತಪಸ್ವಿಯ ಹೃದಯಕ್ಕೆ ಬಲವಾಗಿ ತಾಕಿದಾಗ ಸಂವೇದನೆಯ ಗಜಲ್ ರೂಪ ಪಡೆಯುತ್ತದೆ. ಆಗ ಆ ಗಜಲ್ ಸಾಮಾಜಿಕ ಸಮ್ಮೋಹಿನಿಗೊಳಗಾಗುತ್ತದೆ. ಪ್ರಸ್ತುತ ಸಬರದ್ ಅವರ ಗಜಲ್ ಗಳಲ್ಲಿ ಲಯ, ಮಾಧುರ್ಯ, ಅರ್ಥವಂತಿಕೆಯಿಂದ ಕೂಡಿದ ಶೃಂಗಾರ, ಪೂರಕ ಸಂಚಾರಿಗಳೊಂದಿಗೆ ಹಿತಕರ ವಸಂತ ಋತುವಿನ ಸೃಷ್ಟಿಯಿದೆ. ದಾವಾ-ದಲೀಲ್ ಮಾದರಿಯ ಸಂಭಾಷಣಾ ರೂಪದ ಹೆಚ್ಚಿನ ಗಜಲ್ ಗಳು ಇವರಿಂದ ರಚನೆಯಾಗಿವೆ.
“ನೀನು ನಕ್ಕಾಗ ನಿನ್ನ ಗಲ್ಲದ ಗುಳಿಯಲ್ಲಿ ನದಿಯೊಂದು ಕಂಡಿತು
ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ ಅಲ್ಲಿ ಬೆಳಕೊಂದು ಕಂಡಿತು“
ಗಜಲ್ ನ ಮೂಲ ಸ್ವರೂಪ, ಸ್ಥಾಯಿ ಭಾವವೇ ಮುಷ್ಟಿಯಷ್ಟು ಹೃದಯದಲ್ಲಿ ಅಡಗಿರುವ ಒಲವೇ ಆಗಿದೆ. ಆ ಒಲವೆ ದೃಷ್ಟಿಯಾದಾಗ ಬದುಕು ವಸಂತಕಾಲವಾಗುತ್ತದೆ. ಈ ಮೇಲಿನ ಷೇರ್ ಪ್ರೀತಿಯ ಅನುಭೂತಿಯನ್ನು ಸಾರುತ್ತಿದೆ. ತಾನು ಪ್ರೀತಿಸುವ ನೀರೆ ನಕ್ಕಾಗ ಗುಳಿಕೆನ್ನೆ ಕಾಣುವವರ ಮಧ್ಯೆ ಇಲ್ಲಿ ಗಜಲ್ ಗೋ ಅವರು ‘ಗಲ್ಲದ ಗುಳಿ’ಯಲ್ಲಿ ನದಿಯನ್ನು ಕಾಣುವುದು ವಿಶೇಷವೆನಿಸುತ್ತದೆ. ಇನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಅಲ್ಲಿ ಕಾಣುವ ಬೆಳಕು ಬಾಳಿಗೆ ಊರುಗೋಲು ಆಗುವ ಪರಿ ಅನನ್ಯವೆನಿಸುತ್ತದೆ. ಈ ಕಾರಣಕ್ಕಾಗಿಯೇ ಪ್ರೀತಿ ಜೀವನವನ್ನು ರೂಪಿಸುತ್ತದೆ ಎಂದು ಹೇಳಲಾಗಿದೆ. ಇದು ಸಾಧ್ಯವಾಗಬೇಕಾದರೆ ಎರಡು ದೇಹಗಳು ಬೆತ್ತಲಾಗುವುದರ ಬದಲಿಗೆ ಎರಡು ಮನಸ್ಸಿನ ಭಾವನೆಗಳು ಬೆತ್ತಲಾಗಬೇಕಿದೆ.
ಅಂತರ್‌ವ್ಯಕ್ತಿಯ ಪ್ರೀತಿಯು ಮನುಷ್ಯರ ನಡುವಿನ ಪ್ರೀತಿಯನ್ನು ಸೂಚಿಸುತ್ತದೆ. ಇದು ಮತ್ತೊಬ್ಬರೆಡೆಗಿನ ಒಂದು ಸಾಧಾರಣವಾದ ಮಮತೆಗಿಂತಲೂ ಮಿಗಿಲಾದ ಒಂದು ಪ್ರಬಲವಾದ ಭಾವನೆಯಾಗಿದೆ. ಅಂತರ್‌ವ್ಯಕ್ತಿಯ ಪ್ರೀತಿಯು ಅಂತರ್‌ವ್ಯಕ್ತಿಯ ಸಂಬಂಧಗಳೊಂದಿಗೆ ನಿಕಟವಾದ ಸಂಬಂಧ ಹೊಂದಿರುತ್ತದೆ. ಇದರಿಂದ ಮಾತ್ರ ದೈವಿಕ ನೆಲೆಯಲ್ಲಿ ಪ್ರೀತಿ ಚಿಗುರಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕೆಳಗಿನ ಷೇರ್ ಅನ್ನು ಗಮನಿಸಬಹುದು.
“ನಾನು ಮುಗಿಲಾಗಿ ಬಂದರೆ ನೀನು ನೆಲವಾಗಿ ಚಿಗುರುವೆ
ನಾನು ವೀಣೆಯಾಗಿ ನುಡಿದರೆ ನೀನು ವಾಣಿಯಾಗಿ ಹಾಡುವೆ”
ಮುಗಿಲ-ನೆಲ, ವೀಣೆ-ಹಾಡು… ಪ್ರೀತಿಯ ಬಾಂಧವ್ಯವನ್ನು ಪ್ರತಿನಿಧಿಸುತ್ತವೆ. ಈ ಹಿನ್ನೆಲೆಯಲ್ಲಿ ಪ್ರೀತಿ ಎನ್ನುವುದು ಒಂದು ಸಂವೇದನೆಯ ಮತ್ತು ಸಾಮಾಜಿಕ ವಿದ್ಯಮಾನವಾಗಿದೆ. ಅನ್ಯೋನ್ಯತೆ, ಬದ್ಧತೆ ಹಾಗೂ ಭಾವೋದ್ರೇಕ ಎಂಬ ಮೂರು ವಿಭಿನ್ನ ಅಂಶಗಳನ್ನು ಪ್ರೀತಿಯು ಒಳಗೊಂಡಿರುತ್ತದೆ. ಅವುಗಳೊಂದಿಗೆ ಬಾಂಧವ್ಯ, ಆರೈಕೆ ಮತ್ತು ಅನ್ಯೋನ್ಯತೆ ಎನ್ನುವ ಮೂರು ಅಂಶಗಳು ಸೇರಿಕೊಂಡು ಪ್ರೀತಿಗೆ ‘ಪಂಚಮವೇದ’ ಸ್ಥಾನವನ್ನು ನೀಡಿವೆ, ನೀಡುತ್ತಿವೆ.
ಪ್ರೀತಿ, ಪ್ರೇಮ, ಪ್ರಣಯ, ಒಲವು, ಅನುರಾಗ, ಇಷ್ಕ್, ಮೋಹಬ್ಬತ್, ಪ್ಯಾರ್… ಎನ್ನುವ ಪದಪುಂಜಗಳು ಕೇಳುತ್ತಲೆ ಹೃದಯವು ನವಿಲಿನಂತೆ ಗರಿ ಬಿಚ್ಚಿ ಕುಣಿಯತ್ತದೆ. ಆದರೆ ಪ್ರೀತಿಯ ಹೆಸರಿನಲ್ಲಿ ನೋವು ಹಲವೊಮ್ಮೆ ಕಾಡುವುದುಂಟು. ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳುತ್ತದೆ. ಪ್ರೀತಿಯ ಸುಖದ ಕ್ಷಣಗಳನ್ನು ನಾವು ಹೇಗೆ ಗುನುಗುತ್ತಿರುತ್ತೇವೆಯೋ ಹಾಗೇಯೇ ನೋವನ್ನು ಕೂಡಾ ಪದೇಪದೆ ಮನದೊಳಗೇ ಅನುಭವಿಸುತ್ತೇವೆ. ಇದೆಲ್ಲವನ್ನೂ ತನ್ನ ಗರ್ಭದೊಳಗಿಟ್ಟುಕೊಂಡು ಸಹೃದಯ ಓದುಗ ಮತ್ತು ಕೇಳುಗರನ್ನು ಸಂತೈಸುವ ಪರಿ ‘ಗಜಲ್’ ಅನಾದಿಕಾಲದಿಂದಲೂ ಮಾಡುತ್ತಾ ಬಂದಿದೆ. ಇಂತಹ ಗಜಲ್ ಗಳು ಡಾ. ಬಸವರಾಜ ಸಬರದ್ ಅವರಿಂದ ಮತ್ತಷ್ಟು ಮೊಗದಷ್ಟೂ ಮೂಡಿಬರಲಿ ಎಂದು ಶುಭ ಕೋರುತ್ತೇನೆ.
“ಹೂ ಅರಸುತ್ತಾ ಉದ್ಯಾನವನಕ್ಕೆ ತೆರಳಬೇಡ ನಿನ್ನ ಶರಿರವೇ ಹೂ ಗಿಡವಾಗಿರುವಾಗ ಹೂವನೇತೆಕೆ ಅರಸುವೆ ? ಬಾ ಇಲ್ಲಿ ಕುಳಿತಿಕೊ ನಿನ್ನ ದೇಹದಲ್ಲಿ ಸಾವಿರ ಕಮಲಗಳು ಅರಳುವುದನು ನೀನು ಗಮನಿಸು“
– ಕಬೀರ್ ದಾಸ್
ಮುಂದಿನ ವಾರ.. ಅಂದರೆ ಹೊಸ ವರ್ಷದ ಮೊದಲ ಗುರುವಾರ, ಮತ್ತೊಬ್ಬ ತಮ್ಮ ಕುತೂಹಲ ತಣಿಸುವ ಗಜಲ್ ಮಾಂತ್ರಿಕರೊಂದಿಗೆ ನಿಮ್ಮ ಮುಂದೆ ಬಂದು ನಿಲ್ಲುವೆ. ಅಲ್ಲಿಯವರೆಗೂ ತುಂಬು ಹೃದಯದ ಧನ್ಯವಾದಗಳು…
ಡಾ. ಮಲ್ಲಿನಾಥ ಎಸ್. ತಳವಾರ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
ಬಹಳ ಚೆನ್ನಾಗಿ ಮೂಡಿ ಬಂದಿದೆ ಬಸವರಾಜ ಅವರ ಪರಿಚಯ ನಿಮ್ಮ ಕಾರ್ಯ ಶ್ಲಾಘನೀಯ ಅದಕ್ಕೆ ತಮಗೆ ಅಭಿನಂದನೆ ಹಾಗೂ ಸಂಪಾದಕರಿಗೂ ಧನ್ಯವಾದಗಳು ಸರ್