ಸರಣಿ ಬರಹ
ಅಂಬೇಡ್ಕರ್ ಓದು
ಬಾಲ್ಯ
ಭಾಗ-ಒಂದು
ಭಾರತದಲ್ಲಿ ಶತಶತಮಾನಗಳಿಂದ ಐದನೇ ಒಂದು ಭಾಗದಷ್ಟು ಜನರನ್ನು ಶೂದ್ರರೆಂದು, ಅಸ್ಪೃಶ್ಯರೆಂದು, ಅಂತ್ಯಜರೆಂದು, ಅಪವಿತ್ರರೆಂದು, ಅವರ್ಣಿಯರೆಂದು ಮಲಿನರೆಂದು ಊರ ಹೊರಗೆ ಪಶುವಿಗಿಂತ ಕೀಳಾಗಿ ಅಮಾನವೀಯ ಜೀವನ ಸಾಗಿಸುತ್ತಾ ಸವರ್ಣೀಯರಿಂದ ತುಳಿಯಲ್ಪಟ್ಟ ಸಮುದಾಯವೆ ನಿಮ್ನ ವರ್ಗದ ಜನ, ಋಗ್ವೇದದ ಪುರುಷ ಸೂಕ್ತದಲ್ಲಿ ವರ್ಣಿಸಿದಂತೆ ಪುರುಷನೆಂಬಾತನ ಮುಖದಿಂದ ಬ್ರಾಹ್ಮಣರು, ಬಾಹುಗಳಿಂದ ಕ್ಷತ್ರೀಯರು, ತೊಡೆಯಿಂದ ವೈಶ್ಯರು ಮತ್ತು ಪಾದದಿಂದ ಶೂದ್ರರು ಜನಿಸಿದರೆಂದು ಜನರನ್ನು ವರ್ಗಿಕರಿಸಿ ಶೂದ್ರರನ್ನು ಇನ್ನು ನಿಮ್ನಕರಿಸಿ ಚಂಡಾಲರನ್ನು ಅಸ್ಪೃಶ್ಯರೆಂದು ಅತ್ಯಂತ ಹೀನ ನಿಕೃಷ್ಠ ಅವಮಾನವಿತೆಯಿಂದ ನಡೆಸಿಕೊಂಡು ಬಂದಿದ್ದು ಸತ್ಯ ಸಂಗತಿಯಾಗಿದೆ, ಶೂದ್ರರನ್ನು ಹೊಲೆಯ, ಮಾದಿಗ, ಚಮ್ಮಾರ, ಡೋರ, ಭಂಗಿ, ಇತ್ಯಾದಿ ಜಾತಿಗಳಿಂದ ಹಣೆಪಟ್ಟಿ ಕಟ್ಟಿ ಊರ ಒಳಗೆ ಬರದಂತೆ, ದೇವಸ್ಥಾನ ಪ್ರವೇಶಿಸದಂತೆ ಊರಿನ ಕೆರೆ ಬಾವಿಗಳಿಂದ ನೀರು ಮುಟ್ಟಿ ತೆಗೆದುಕೊಳ್ಳದಂತೆ ನಿರ್ಭಂದಿಸಿ, ಬಹಿಸ್ಕರಿಸಿ ಅವರ ನೆರಳೂ ತಮ್ಮ ಮೇಲೆ ಬಿಳದಂತೆ ಮುಟ್ಟಿಸಿಕೊಳ್ಳದಂತೆ ದೂರವಿರಿಸಿ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದ ಕಾಲವದು, ಅಸ್ಪೃಶ್ಯತೆಯ ಕರಾಳ ವಾತಾವರಣ ಕಾಲದಲ್ಲಿ 1891 ನೇ ಇಸ್ವಿಯ ಏಪ್ರಿಲ್ 14 ನೇ ತಾರಿಖಿನ ದಿನದಂದು ಮಧ್ಯಪ್ರದೇಶದ ಮಹೌ ಎಂಬಲ್ಲಿ ರಾಮಜಿ ಸಕ್ಪಾಲ ಮತ್ತು ಭೀಮಾಬಾಯಿ ದಂಪತಿಗಳಿಗೆ 14 ನೇ ಮಗುವಾಗಿ ಭೀಮರಾವ ಅಂಬೇಡ್ಕರ್ ಜನಿಸುತ್ತಾರೆ. ಹದಿನಾಲ್ಕು ಮಕ್ಕಳಲ್ಲಿ ಬದುಕುಳಿದವರು ಬಾಳಾರಾವ, ಆನಂದರಾವ ಮತ್ತು ಭೀಮಾರಾವ ಗಂಡುಮಕ್ಕಳಾದರೆ ಮಂಜುಳಾ, ತುಳಸಿ ಹೆಣ್ಣು ಮಕ್ಕಳು, ರಾಮಜಿ ಸಕ್ಪಾಲರು ಅವರ ತಂದೆ ಮಾಲೋಜಿ ಸಕ್ಪಾಲರಂತೆ ಬ್ರಿಟಿಷ ಸೈನ್ಯದಲ್ಲಿ ಸುಭೇದಾರಾಗಿ ಸೇವೆ ಸಲ್ಲಿಸಿದವರು. ತಾಯಿ ಭೀಮಾಬಾಯಿ ಠಾಣಾ ಜಿಲ್ಲೆಯ ಮುರ್ಚಾದ ಗ್ರಾಮದವರಾಗಿದ್ದರು, ತಾಯಿಯ ಸಂಬಂಧಿಕರು ಬ್ರಿಟಿಷ ಸೈನ್ಯದಲ್ಲಿ ಸುಭೇದಾರರಾಗಿದ್ದರು, ರಾಮಜಿಯವರಂತೆ ಅವರು ಕೂಡಾ ಕಬೀರ ಪಂಥದ ಅನುಯಾಯಿಯಾಗಿದ್ದರು.
ಭೀಮ ಎರಡು ವರ್ಷ ವಯಸ್ಸಿನವನಿದ್ದಾಗ ರಾಮಜಿ ಸಕ್ಪಾಲ ನಿವೃತ್ತಿ ಹೊಂದುತ್ತಾರೆ, ನಿವೃತ್ತಿ ನಂತರ ಮಹಾರಾಷ್ಟ್ರ, ಕೊಂಕಣದ ದಾಪೋಲಿಗೆ ಬಂದು ನೆಲೆಸುತ್ತಾರೆ ರಾಮಜಿ ಸಕ್ಪಾಲ ತುಂಬಾ ಸರಳ ಜೀವಿ ಮಾಂಸಹಾರ ಮಧ್ಯಪಾನದಿಂದ ದೂರವಿದ್ದವರು, ಸದಾ ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದ, ಅವರಿಗೆ ಕೆಲಸ ಸಿಗದೆ ಇದ್ದಾಗ ಸಂಸಾರ ಸಾಗಿಸೋದು ಕಷ್ಟವಾಗುತ್ತದೆ. ಕೆಲಸ ಅರಸಿಕೊಂಡು ಸಾತಾರಕ್ಕೆ ಬಂದು ನೆಲೆಸುತ್ತಾರೆ ಇಲ್ಲಿಯೇ, ಭೀಮ ಮತ್ತು ಆತನ ಅಣ್ಣಂದಿರು ಪ್ರಾಥಮಿಕ ಶಾಲೆಗೆ ಸೇರಿಕೊಳ್ಳುತ್ತಾರೆ, ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡುವ ಕನಸನ್ನು ರಾಮಜಿ ಹೊಂದಿರುತ್ತಾರೆ, ಆದರೆ ಸಾತಾರಕ್ಕೆ ಬಂದ ಕೆಲವೆ ದಿನಗಳಲ್ಲಿ ಭೀಮಾಬಾಯಿ ತೀರಿಕೊಳ್ಳುತ್ತಾರೆ ಇದು ರಾಮಜಿ ಸಕ್ಪಾಲ ಕುಟುಂಬಕ್ಕೆ ಬಾರಿ ಆಘಾತವನ್ನುಂಟು ಮಾಡುತ್ತದೆ. ತಾಯಿ ತೀರಿಕೊಂಡಾಗ ಭೀಮನಿಗೆ ಆಗ ಇನ್ನು ಐದು ವರ್ಷ ವಯಸ್ಸು, ರಾಮಜಿ ಸಕ್ಪಾಲರ ಕುಟುಂಬದ ನಿರ್ವಹಣೆ ಮಕ್ಕಳ ಪಾಲನೆ ಪೋಷಣೆಯ ಹೋರೆ ತಂಗಿ ಮೀರಾಬಾಯಿ ಮೇಲೆ ಬೀಳುತ್ತದೆ, ಕಷ್ಟದಲ್ಲಿಯು ರಾಮಜಿ ಸಕ್ಪಾಲರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಅವರ ಸರಳ ಸಜ್ಜನಿಕೆಯ ಸನ್ನಡತೆ ಮಕ್ಕಳ ಮೇಲೆ ಬಹಳಷ್ಟು ಪ್ರಭಾವವನ್ನು ಬೀರಿತ್ತು.
ಭೀಮನು ಸಾತಾರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಡ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಾನೆ. ಅಸ್ಪೃಶ್ಯತೆಯ ನರಕಯಾತನೆ ಕಹಿ ನೋವುಗಳ ಅನುಭವ ಆಗಲೇ ದರ್ಶನವಾಗ ತೋಡಗಿತ್ತು. ತಾನು ಮಹಾರ ಜಾತಿಗೆ ಸೇರಿದವನು ಮಹಾರ ಅಸ್ಪೃಶ್ಯತೆ ಜಾತಿ ಎಂಬುದರ ಶಾಲಾ ದಿನಗಳ ಅನುಭವಗಳನ್ನು ಮುಂದೆ ಅಂಬೇಡ್ಕರರು ಬೆಳೆದು ದೊಡ್ಡವರಾದಾಗ ತಮ್ಮ ಆತ್ಮಕಥನ “ವೇಟಿಂಗ್ ಫಾರ ವಿಸಾ” ಅಂದರೆ ವಿಸ್ ಕ್ಕಾಗಿ ಕಾಯುವ ಜನ ಎಂಬ ಬರಹಗಳಲ್ಲಿ ಪ್ರಸ್ತೂತ ಪಡೆಸಿದ್ದಾರೆ. 1901 ರಲ್ಲಿ ನಡೆದ ಒಂದು ಘಟನೆ ಭೀಮಜಿ ಮಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ.
ಬರಪೀಡತದಿಂದಾಗಿ ಸಾವಿರಾರು ಜನರು ಹೊಟ್ಟೆಪಾಡಿಗಾಗಿ ಉದ್ಯೋಗವಿಲ್ಲದೆ ಸಯುವಂತಾಗಿತ್ತು, ಆ ಸಂದರ್ಭದಲ್ಲಿ ಬಾಂಬೆ ಸರಕಾರವು ಖಟವ್ ತಾಲೂಕಿನ ಗೋರೆಗಾಂವ ಗ್ರಾಮದಲ್ಲಿ ಕೆರೆ ನಿರ್ಮಾಣ ಕಾರ್ಯ ಆರಂಭಿಸಿ ಜನರಿಗೆ ಉದ್ಯೋಗ ಒದಗಿಸುತ್ತದೆ. ರಾಮಜಿ ಕೆಲಸ ಹುಡುಕಿಕೊಂಡು ಗೋರೆಗಾಂವಗೆ ಹೋಗುತ್ತಾರೆ, ಅಲ್ಲಿ ಹಣ ಬಟವಾಡೆ ಮಾಡುವ ಗುಮಾಸ್ತನ ಕೆಲಸ ಸಿಗುತ್ತದೆ. ಕೆಲಸ ಸಿಕ್ಕಿದ್ದರಿಂದ ಆಗ ಅಲ್ಲಿಯೆ ಉಳಿದುಕೊಂಡಿದ್ದರು ಬೇಸಿಗೆ ಕಾಲವಾಗಿದ್ದರಿಂದ ಶಾಲೆಗಳಿಗೆ ರಜೆ ಘೋಷಿಸಿರುತ್ತದೆ. ರಜಾ ದಿನಗಳಲ್ಲಿ ತನ್ನ ಜೊತೆ ಕಾಲ ಕಳೆಯಲು ಗೋರೆಗಾಂವಗೆ ಬರಲು ಮಕ್ಕಳಿಗೆ ರಾಮಜಿ ಪತ್ರ ಬರೆದಿದ್ದರು. ಭೀಮ ತನ್ನ ಅಣ್ಣ ಮತ್ತು ಅಕ್ಕನ ಮಗನೊಂದಿಗೆ ಕೂಡಿ ಮೂವರು ಗೋರೆಗಾಂವಗೆ ರೈಲು ಮೂಲಕ ಪ್ರಯಾಣ ಮಾಡುತ್ತಾರೆ ಹೊಸ ಹೊಸ ಬಟ್ಟೆತೊಟ್ಟುಕೊಂಡು ಅತ್ತೆ ಮೀರಾಬಾಯಿ ಮಾಡಿದ ರುಚಿ ರುಚಿಯಾದ ಅಡುಗೆಯ ಬುತ್ತಿ ಕಟ್ಟಿಕೊಂಡು ಒಂದಿಷ್ಟು ದುಡ್ಡು ಹೊಂದಿಸಿಕೊಂಡು ರೈಲು ಬಂಡಿಯಲ್ಲಿ ಪ್ರಯಾಣ ಮಾಡುತ್ತಾರೆ ಮೊದಲಸಲ ರೈಲು ಬಂಡಿಯಲ್ಲಿ ಪ್ರಯಾಣ ಮಾಡುತ್ತಿರುವುದು ಅವರ ಆನಂದಕ್ಕೆ ಪಾರವೆ ಇರಲಿಲ್ಲ.
ಗೋರೆಗಾಂವ ಗ್ರಾಮಕ್ಕೆ ರೈಲು ಮಾರ್ಗ ಇಲ್ಲದ್ದರಿಂದ ಹತ್ತಿರದ ಗ್ರಾಮ ಮಾಸೂರ ನಿಲ್ದಾಣಕ್ಕೆ ರೈಲು ಬಂದು ತಲುಪಿದಾಗ ಸಂಜೆಯಾಗಿತ್ತು, ಅಲ್ಲಿಂದ ಗೋರೆಗಾಂವಗೆ ಹೋಗಲು ಹತ್ತು ಮೈಲು ದೂರ ಕ್ರಮಿಸಬೇಕಿತ್ತು, ಆಗಲೇ ಸಂಜೆ ಆಗಿದ್ದರಿಂದ ರಾತ್ರಿ ಕತ್ತಲಾಗುವುದರೊಳಗಾಗಿ ಅಲ್ಲಿಗೆ ತಲುಪಬೇಕೆಂದು ನಿರ್ಧರಿಸುತ್ತಾರೆ. ಭೀಮ ಮತ್ತು ಆತನ ಸಹೋದರರು ರೈಲಿನಿಂದ ಕೆಳಗೆ ಇಳಿದು ನಿಂತು ನೋಡುತ್ತಾರೆ. ಅಲ್ಲಿ ಪರಿಚಿತರು ಯಾರು ಕಾಣುವುದಿಲ್ಲ ತಾವು ಇಂತದಿನ ಬರುವುದಾಗಿ ಪತ್ರ ಬರೆದಿದ್ದರಿಂದ ಅಪ್ಪ ತಮ್ಮನ್ನು ಕರೆದುಕೊಂಡು ಹೋಗಲು ಸೇವಕನನ್ನು ಕಳುಹಿಸಿರುತ್ತಾನೆಂದು ನೋಡುತ್ತಾರೆ. ಭೀಮನು ಬರೆದ ಪತ್ರ ಅಂಚೆಯವನು ರಾಮಜಿಗೆ ತಲುಪಿಸದೆ ಇಟ್ಟುಕೊಂಡಿದ್ದು ಮಕ್ಕಳು ಬರುತ್ತಿರುವುದು ರಾಮಜಿಗೆ ತಿಳಿದಿರಲಿಲ್ಲ. ಅಂಚೆಯವನ ಎಡವಟ್ಟಿನಿಂದ ಅವರನ್ನು ಕರೆದುಕೊಂಡುಹೊಗಲು ಯಾರು ಬಂದಿರಲಿಲ್ಲ. ಮಕ್ಕಳು ಚಿಂತಿತರಾಗುತ್ತಾರೆ. ಭೀಮ ಹೇಗೋ ಉಪಾಯಮಾಡಿ ಅಲ್ಲಿದ್ದ ಸ್ಟೇಷನ ಮಾಸ್ತರನ ಸಹಾಯದೊಂದಿಗೆ ಒಂದು ಎತ್ತಿನ ಬಂಡಿಯನ್ನು ಗೋತ್ತು ಮಾಡಿಕೊಂಡು ಅಲ್ಲಿಂದ ಗೋರೆಗಾಂವಗೆ ಹೊರಡುತ್ತಾರೆ.
ಹುಡುಗರು ಹೊಸ ಬಟ್ಟೆ ತೊಟ್ಟಿದ್ದರಿಂದ ಮೊದ ಮೊದಲು ಬಂಡಿಯವನಿಗೆ ಅವರು ಅಸ್ಪೃಶ್ಯರೆಂದು ಸಂಶಯ ಬಂದಿರಲಿಲ್ಲ. ಹೇಗೋ ಏನೋ ಸ್ವಲ್ಪ ದೂರ ಹೋಗುವುದರಲ್ಲಿ ಎತ್ತಿನ ಬಂಡಿಯವನಿಗೆ ಇವರು ಮಹಾರರೆಂಬುವುದು ಗೋತ್ತಾಗಿ ಗೊಬ್ಬರ ಸಾಗಿಸುವ ತನ್ನ ಬಂಡಿ ಮೈಲಿಗೆ ಮಾಡಿದರೆಂದು ಕೋಪಗೊಂಡು ಬೈಯುತ್ತ ಬಂಡಿಯ ನೊಗ ಬಿಚ್ಚಿ ಮೇಲಿಂದ ಸುರಿಯುವಂತೆ ಎತ್ತಿ ಬಿಟ್ಟು ಬಂಡಿಯಲ್ಲಿ ಕುಳಿತ ಹುಡುಗರನ್ನು ಕೆಳಗೆ ಬಿಳಿಸಿ ಬಿಡುತ್ತಾನೆ. ಮಕ್ಕಳು ಭಯಗೊಂಡು ಚಿಂತಿತರಾಗಿ ನೋವನ್ನು ಸಹಿಸಿಕೊಂಡು, ಬಂಡಿಯವನಿಗೆ ತಮ್ಮನ್ನು ಕರೆದುಕೊಂಡು ಹೋಗುವಂತೆ ಬೇಡಿಕೊಳ್ಳುತ್ತಾರೆ. ಬಂಡಿಯವನು ಹುಡುಗರನ್ನು ದಿಟ್ಟಿಸುತ್ತಾ ನೀವು ಅಸ್ಪೃಶ್ಯರು, ಬಂಡಿ ಮುಟ್ಟಿ ಮೈಲಿಗೆ ಮಾಡಿದ್ದಿರಿ ನೀವು ಬೇರೆ ಬಂಡಿ ನೋಡಿಕೊಳ್ಳಿ ಎನ್ನುತ್ತಾನೆ. ಭೀಮನು ಉಪಯಮಾಡಿ ಬಂಡಿಯವನಿಗೆ ಅಣ್ಣ ನಾವು ಎರಡರಷ್ಷು ಬಾಡಿಗೆ ಕೊಡುತ್ತೆವೆ. ಮೇಲಾಗಿ ನಾವೆ ಬಂಡಿ ನಡೆಸುತ್ತೆವೆ, ಎಂದಾಗ ಎರಡು ಪಟ್ಟು ಬಾಡಿಗೆ ಸಿಗುವುದು ಖಾತ್ರಿಯಾದಗ ಬಂಡಿಯವನು ಹುಡುಗರನ್ನು ಕರೆದುಕೊಂಡು ಹೋಗಲು ಒಪ್ಪಿಕೊಳ್ಳುತ್ತಾನೆ. ರೈಲು ಬಂಡಿಯ ಪ್ರಾಯಾಣದ ಖುಷಿಯಲ್ಲಿ ಮುಂಜಾನೆಯಿಂದ ಊಟಮಾಡಿರಲಿಲ್ಲ. ರುಚಿಯಾಗಿ ಅಡುಗೆ ಮಾಡಿಕೊಂಡು ತಂದಿದ್ದ ಬುತ್ತಿಯನ್ನು ಊಟಮಾಡಬೇಕೆಂದರೆ ದಾರಿ ಉದ್ದಕ್ಕು ಯಾರು ನೀರು ಕೊಟ್ಟಿರಲಿಲ್ಲ. ಸುಂಕದ ಕಟ್ಟೆಗೆ ಬಂದು ತಲುಪಿದಾಗ ತಡರಾತ್ರಿ ಯಾಗಿತ್ತು. ಕತ್ತಲಾಗಿದ್ದರಿಂದ ರಾತ್ರಿ ಕಳೆದು ನಸುಕಿನ ಜಾವ ಪ್ರಯಾಣ ಬೆಳೆಸುವುದಾಗಿ ನಿರ್ಧರಿಸಿ ಅಲ್ಲಿಯೇ ಉಳಿದುಕೊಳ್ಳುತ್ತಾರೆ. ಅಲ್ಲಿ ಬಹಳಷ್ಟು ಎತ್ತಿನ ಬಂಡಿಗಳು ವಿಶ್ರಾಂತಿಗೆ ತಂಗಿದ್ದವು. ಅಸಿವು ನೀರಡಿಕೆ ಯಾಗಿತ್ತು ಎಲ್ಲಿಯು ನೀರು ಸಿಕ್ಕಿರಲಿಲ್ಲ ಬಂಡಿಯವನು ಕೈಮಾಡಿ ತೋರಿಸಿ ಅಲ್ಲಿ ಸುಂಕದ ಸಂಗ್ರಹಗಾರನ ಗುಡಿಸಲು ಇದೆ ಅಲ್ಲಿಗೆ ಹೋಗಿ ನೀರು ತರಬಹುದು, ನೀವು ಮಹಾರ ಅಂತ ಹೇಳಬೇಡಿ, ಮುಸಲ್ಮಾನರು ಅಂತ ಹೇಳಿ ನಿಮ್ಮ ಅದೃಷ್ಟ! ನೀರು ಸಿಗಬಹುದು ಎಂದು ಹೇಳಿದನು ಭೀಮನು ಸ್ವಲ್ಪ ದೂರದಲ್ಲಿ ಇದ್ದ ಸುಂಕದ ಸಂಗ್ರಹಕಾರನ ಹತ್ತಿರ ಹೋಗಿ ಹಸಿವು ಆಗಿದೆ, ನೀರಿಲ್ಲ ಊಟಮಾಡಲು ನೀರುಕೊಡಲು ಕೇಳುತ್ತಾರೆ ಸಂಗ್ರಹಕಾರ ಯಾರು ನೀವು ಎಂದು ಪ್ರಶ್ನಿಸುತ್ತಾನೆ. ಉರ್ದು ಬರುತ್ತಿರುವುದರಿಂದ ಭೀಮ ಉರ್ದುವಿನಲ್ಲಿ ಮುಸಲ್ಮಾನರು ಎನ್ನುತ್ತಾನೆ. ನಿಮಗಾಗಿ ನೀರು ಇಡೋಕೆ, ಆಗುತ್ತಾ? ಗುಡ್ಡದ ಮೇಲೆ ನೀರು ಇದೆ ಅಲ್ಲಿಗೆ ಹೋಗಿ ಎಂದು ನೀರು ಕೋಡದೆ ಸುಂಕದ ಸಂಗ್ರಹಕಾರ ಸುಮ್ಮನಾದ. ರಾತ್ರಿ ಸಮಯ ಗುಡ್ಡದ ಮೇಲೆ ಹೋಗುವುದರಿಂದ ಅಪಾಯವೆಂದು ತಿಳಿದು, ಬುತ್ತಿ ಇದ್ದರು ಯಾರು ನೀರು ಕೋಡದೆ ಇದ್ದುದ್ದರಿಂದ ಊಟಮಾಡದೆ ಉಪವಾಸ ಮಲಗುತ್ತಾರೆ. ರಕ್ಷಣೆಗಾಗಿ ಮೂವರು ಒಬ್ಬರಾದ ಮೇಲೆ ಒಬ್ಬ ಸರದಿಯಂತೆ ಎಚ್ಚರವಿದ್ದು ಇನ್ನಿಬ್ಬರು ಮಲಗುವಂತೆ ರಾತ್ರಿ ಕಳೆದು, ಮುಂಜಾನೆ ಗೋರೆಗಾಂವಗೆ ತಲುಪಿದ್ದರು. ನಿಸರ್ಗದ ನೀರನ್ನು ಕುಡಿಯಲು ಬಿಡದ, ಸಗಣಿ ಸಾಗಿಸುವ ಬಂಡಿಯಲ್ಲಿ ಕೂಡ್ರಲು ಬಿಡದ ಈ ಅಸ್ಪೃಶ್ಯತೆಯ ಕರಾಳ ಘಟನೆ ಒಂಭತ್ತು ವರ್ಷದ ಬಾಲಕ ಭೀಮನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು.
———————————
ಸೋಮಲಿಂಗ ಗೆಣ್ಣೂರ