ಅಂಕಣ ಸಂಗಾತಿ

ಗಜಲ್ ಲೋಕ

ಅಂಕಲಗಿಯವರ ಅಂಗಳದಲ್ಲೊಂದು ಸುತ್ತು,….!!

ನಾನು ನಿಮ್ಮ ರತ್ನರಾಯಮಲ್ಲ, ಎಂದಿನಂತೆ ತಮ್ಮ ಮುಂದೆ ಮತ್ತೊಬ್ಬ ಗಜಲ್ ಗೋ ಅವರ ಪರಿಚಯದೊಂದಿಗೆ ಬಂದಿದ್ದೇನೆ.

ಒಣರೊಟ್ಟಿ ತಿಂದು

ತಣ್ಣೀರ ಕುಡಿ, ಫರೀದ್

ಇತರರ ತುಪ್ಪ ರೊಟ್ಟಿಯ ಕಡೆ

ನೋಡದಿರು ಹಂಬಲಿಸಿ

                          –ಬಾಬಾ ಷೇಖ್ ಫರೀದ್

        ಭಾರತದ ನೆಲದ ಸಂಸ್ಕೃತಿಯನ್ನು ಗೌರವದಿಂದ ಕಂಡು, ಇಲ್ಲಿನ ವೈವಿಧ್ಯಮಯ ಬದಕಿಗೆ ಅಮೂಲ್ಯವಾದ ಕೊಡುಗೆ ನೀಡಿದ ಕಾವ್ಯ ಪ್ರಕಾರವೆಂದರೆ ಗಜಲ್. ಅರಬ್, ಇರಾನ್ ನಿಂದ ಬಂದರೂ ಭಾರತಮಾತೆಯ ತನುಜೆಯಾಗಿ, ಭುವನೇಶ್ವರಿಯ ಸಹೋದರಿಯಾಗಿ ಎಲ್ಲರ ಮನಸನ್ನು ಸೂರೆಗೊಂಡಿದ್ದಾಳೆ!! ಭಾರತದ ಇತರ ಪ್ರಾದೇಶಿಕ ಭಾಷೆಗಳಂತೆ ಕನ್ನಡದಲ್ಲಿಯೂ ಗಜಲ್ ಕೃಷಿ ಸಾಂಗೋಪಾಂಗವಾಗಿ ನಡೆಯುತ್ತಿದೆ. ವೃತ್ತಿಯಿಂದ ನ್ಯಾಯವಾದಿಗಳಾಗಿದ್ದು, ಪ್ರವೃತ್ತಿಯಿಂದ ಉತ್ತಮ ಕವಯಿತ್ರಿ, ಲೇಖಕಿ ಹಾಗೂ ಗಜಲ್ ಗೋ ಆದ ಶ್ರೀಮತಿ ವಿದ್ಯಾವತಿ ಕೆ. ಅಂಕಲಗಿಯವರು 1954 ರ ನವ್ಹೆಂಬರ್ 01ರಂದು ಜನಿಸಿದ್ದಾರೆ.‌ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪ್ರಥಮ ಸಿಂಡಿಕೇಟ್ ಸದಸ್ಯೆಯಾಗಿ, ಹಲವಾರು ಸಾಹಿತ್ಯಿಕ-ಸಾಂಸ್ಕೃತಿಕ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ದುಡಿದಿರುವ, ದುಡಿಯುತಿರುವ ಶ್ರೀಯುತರು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ‘ಪಾಂಚಾಲಿ,’ ‘ಬೆಳಕಿನೆಡೆಗೆ’, ಎಂಬ ಕವನ ಸಂಕಲನಗಳು,  ‘ನವರಸ,’ ಎಂಬ ಸ್ವರಚಿತ ತ್ರಿಪದಿ ಸಂಕಲನ,  ‘ಶರಣರ ವಚನಗಳಲ್ಲಿ ಕಾನೂನು’, ಎಂಬ ವೈಚಾರಿಕ ಕೃತಿ ಹಾಗೂ “ಸಾಠ್ ಗಜಲ್” ಎನ್ನುವ ಗಜಲ್ ಸಂಕಲನವನ್ನು 2017ರಲ್ಲಿ ಪ್ರಕಟಿಸಿದ್ದಾರೆ. ಅಖಿಲ ಭಾರತ ಮಹಿಳಾ ಲೇಖಕಿಯರ ಸಂಘದ ‘ಸುದರ್ಶನ ಪ್ರಶಸ್ತಿ’ , ಜಿಲ್ಲಾಡಳಿತ ನೀಡುವ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ಮುಂಬಯಿಯ ‘ಪ್ರಗತ್ ಮಹಾರಾಷ್ಟ್ರ ಫೆಲೋಶಿಪ್’,…. ಮುಂತಾದ ಹತ್ತು ಹಲವು ಸನ್ಮಾನ, ಗೌರವ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 

      ಗಜಲ್ ಎಂದರೆ ದ್ರಾಕ್ಷಾರಸವನ್ನು ಕುಡಿಯದೆ ಅಮಲೇರಿಸುವ, ಊಟ ಮಾಡದೆ ಹಸಿವನ್ನು ನೀಗಿಸುವ ಹಾಗೂ ಅವಶೇಷಗಳ ಅಡಿಯಲ್ಲಿರುವ ಖಜಾನೆ. ಇದೊಂದು ದಡವಿಲ್ಲದ ಸಮುದ್ರ, ತಳಮಳಗೊಂಡ, ನಿದ್ರೆಯಿಲ್ಲದೆಯೂ ವಿನಯದ ಉಡುಪನ್ನು ಧರಿಸಿದ ಹೃದಯವಂತರ ಹೃದಯದರಸಿ!! ಈ ಗಜಲ್ ಪ್ರಕೃತಿ, ಆತ್ಮ, ಜ್ಞಾನ, ಮನಸ್ಸು ಮತ್ತು ಆಧ್ಯಾತಗಳಿಂದ ಕೂಡಿದ್ದು, ಇಡೀ ಮನುಕುಲವನ್ನೆ ಆವರಿಸಿದೆ. ಪರಮಾನಂದದ ಸೂಕ್ಷ್ಮ ಭಾವನೆಗಳು ಸಂಗೀತದ ಮಾಧುರ್ಯದಲ್ಲಿ ಮಾತ್ರ ಅನುಭವಿಸಲು ಸಾಧ್ಯ. ಇದರೊಂದಿಗೆ ಮಧುರ ಸ್ವರವು ಸೇರಿ ನಮ್ಮನ್ನು ನಾವು ಮರೆಯುವಂತೆ ಮಾಡುತ್ತದೆ. ಈ ನೆಲೆಯಲ್ಲಿ ಮೂಲವಾಗಿ ಹಾಡುಗಬ್ಬವಾದ ಗಜಲ್ ಮನುಷ್ಯನ ಹೊಯ್ದಾಟ, ತಳಮಳವನ್ನು ನಿವಾರಿಸುವ ಓರ್ವ ಸೂಫಿ ಸಂತ!! ಈ ಗಜಲ್ ಪ್ರೀತಿ, ಪ್ರೇಮ, ಮೋಹ, ಅನುರಾಗಗಳ ಬಂಧನವನ್ನು ಕಳಚಿಕೊಂಡು ನಿಂತಿದೆ. ಪ್ರೇಮದೊಡನೆ ವಿರಹ, ನೋವು, ನಿರುತ್ಸಾಹ, ಬೇಸರ, ಮುನಿಸು, ದುಃಖ, ನಿರಾಸೆ, ದುಗುಡ ಮತ್ತು ಸಂಕಟಗಳು ಗಜಲ್ ನ ಮಡಿಲನ್ನು ತುಂಬುತ್ತಿವೆ. ಇತ್ತೀಚೆಗೆ ಸಮಾಜಮುಖಿ, ಜೀವನ್ಮುಖಿಯಾಗಿ ಹದಗೊಳ್ಳುತ್ತಿದೆ. ಹಸಿದವರ ಹಸಿವನ್ನು ನೀಗಿಸುವಲ್ಲಿ ರೊಟ್ಟಿಯಾಗುವ, ಹಕ್ಕಿಯೊಂದು ಹಾರಾಡಿ ತಂದ ಆಹಾರದ ತುಣುಕಾಗುವ, ಗುಟುಕಾಗುವ ಹೆಬ್ಬಯಕೆಯು ಅಂಕಲಗಿಯವರ ಗಜಲ್ ಗಳಲ್ಲಿ ಸ್ಥಾಯಿಯಾಗಿ ಮೂಡಿಬಂದಿದೆ. ಇವುಗಳೊಂದಿಗೆ ಸ್ತ್ರೀ ಸಂವೇದನೆ, ವಚನಸಾಹಿತ್ಯದ ಪ್ರಭಾವ ಇವರ ಗಜಲ್ ಗಳಲ್ಲಿ ದಟ್ಟವಾಗಿ ಗುರುತಿಸಬಹುದು.

ಕಂಡ ಕನಸುಗಳಿಗೆ ಬಣ್ಣ ತುಂಬಲು ಹೋಗಿ ಬಣ್ಣಗೆಟ್ಟವರು ನಾವು

ದೇವರ ಹೆಸರಿನಲಿ ಹೊಂಡಸುತ್ತಿ ಜನರ ಮನರಂಜಿಸುವವರು ನಾವು

ಎನ್ನುವ ಮತ್ಲಾ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ದಲಿತರು, ಮಹಿಳೆಯರು ಮೌಢ್ಯ, ದೇವರ ಹೆಸರಿನಲ್ಲಿ ಪುರುಷರ ತೃಷೆ ತೀರಿಸುವ ಭೋಗದ ವಸ್ತುವಾಗಿರುವ ಪರಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಪರಂಪರಾಗತವಾಗಿ ಸಾಗಿಸಿಕೊಂಡು ಬರುತ್ತಿರುವ ಹೀನ ಸಾಂಪ್ರದಾಯಿಕ ಪದ್ಧತಿಗಳನ್ನು ಖಂಡಿಸಿದ್ದಾರೆ. ‘ದೇವರು’ ಎನ್ನುವ ನಂಬಿಕೆ ಸಮಾಜದಲ್ಲಿ ಯಾವ ಯಾವ ರೂಪದಲ್ಲಿದೆ, ಯಾರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ ಈ ಮತ್ಲಾ!!

ಹಸಿವೆಯ ನೋವನು ಏನೆಂದು ಬಲ್ಲಿರೇನು ನೀವು?

ಹಸಿವೆಯಿಂದ ಸತ್ತವರನು ಕಂಡಿರುವಿರೇನು ನೀವು?”

ಈ ಮೇಲಿನ ಷೇರ್ ನಲ್ಲಿ ವಿದ್ಯಾವತಿಯವರು ಸಮಾಜದ ದ್ವಂದ್ವ ನಿಲುವುಗಳ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ. ಮಾತಿನಲ್ಲಿಯೇ ಮನೆ ಕಟ್ಟುವ ಮನೆಮುರುಕರ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ‘ಹಸಿವು’ ಇಂದು ರಾಜಕೀಯ ದಾಳವಾಗಿ ಜನಸಾಮನ್ಯರನ್ನು ಬಳಸಿಕೊಳ್ಳುತ್ತಿರುವ ಪರಿ ಉಸಿರುಗಟ್ಟಿಸುತ್ತಿದೆ. ಹಸಿವೆಯ ನೋವನ್ನು ಅರಿಯದವರು ಅದರ ಕುರಿತು ಗಂಟೆಗಟ್ಟಲೆ ಭಾವಪರವಶವಾಗಿ, ಭಾವದೀಪ್ತಿಯಿಂದ ಮಾತಾಡುವುದನ್ನು ಇಲ್ಲಿ ವ್ಯಂಗ್ಯವಾಡಿದ್ದಾರೆ.

ಮನದ ಅಂಗಳದ ಕಳೆ ಕೀಳೋಣ ಬನ್ನಿರಿ

ಮನದಂಗಳದಿ ಹೊಸ ಬೀಜ ಬಿತ್ತೋಣ ಬನ್ನಿರಿ

ಲೌಕಿಕ ಮೋಹವನ್ನು ತ್ಯಾಗ ಮಾಡಿರುವ ಮನುಷ್ಯನಲ್ಲಿ ವಿವೇಕ, ಅನುಭವ ಹಾಗೂ ಜ್ಞಾನ ತುಂಬಿರುತ್ತದೆ. ಈ ಹಿನ್ನೆಲೆಯಲ್ಲಿ ದೇಹದ ಸಾತ್ವಿಕ ದಂಡನೆ ತುಂಬಾ ಮುಖ್ಯ.‌ ಅಂದರೆ ಉಪವಾಸ ಮತ್ತು ನಿದ್ರೆಯನ್ನು ತೆಡೆದುಕೊಳ್ಳುವುದು. ಆಧ್ಯಾತ್ಮ ಸಾಧನೆಯಲ್ಲಿ ಇದು ಅನುಕರಣೀಯ. ಈ ನೆಲೆಯಲ್ಲಿ ಗಜಲ್ ಗೋ ಅವರು ಪ್ರತಿ ಮನುಷ್ಯ ತನ್ನ ಮನದ ಹೊಲದಲ್ಲಿ ನಿತ್ಯ ಕೃಷಿ ಮಾಡಬೇಕು, ಮನದಲ್ಲಿಯ ಕಳೆ ಕೀಳುತ್ತ ಹೊಸ ಆಶಾವಾದದ ಬೀಜ ಬಿತ್ತೋಣ ಬನ್ನಿರಿ ಎಂದು ಕರೆ ನೀಡಿರುವುದು ಮನದಟ್ಟಾಗುತ್ತದೆ. ಮನದ ಅಂಗಳ ಸ್ವಚ್ಚವಾದರೆ ಮಾತ್ರ ಎಲ್ಲವೂ ಸ್ವಚ್ಚವಾಗುತ್ತದೆ, ಇಡೀ ಮನುಕುಲವೇ ನೆಮ್ಮದಿಯಾಗಿರುತ್ತದೆ ಎಂಬ ಸಂದೇಶವನ್ನು ನೀಡಿದ್ದಾರೆ.

ಸತ್ತೇ ಹೋಗಿದ್ದೆ, ಮತ್ತೆ ಬದುಕಿದೆ

ಒಮ್ಮೊಮ್ಮೆ ಅಳುತ್ತಾ ಒಮ್ಮೊಮ್ಮೆ ನಗುತ್ತಾ

ಸತ್ತು ಸತ್ತು ಬದುಕಿದೆ

                –ರೂಮಿ

ರೂಮಿಯವರ ಈ ಮೇಲಿನ ಸಾಲುಗಳು ಬದುಕಿನ ದಾಸ್ತಾನ್ ಹೇಳುತ್ತಿದೆ!! ಇದರ ಅಂಶವನ್ನು ಅಂಕಲಗಿಯವರ ಕೆಲವು ಅಶಅರ್ ನಲ್ಲಿ ಕಾಣುತ್ತೇವೆ. ಶ್ರೀಮತಿ ವಿದ್ಯಾವತಿ ಅಂಕಲಗಿಯವರ ಗಜಲ್ ಕೃಷಿ ನಿರಂತರವಾಗಿ ಸಾಗಲಿ, ಕಂಬನಿ ಒರೆಸುವ ಷೇರ್ ಆಗಲಿ, ನಾಳೆಯ ಬದುಕಿನ ಕುರಿತು ಹೆದರುವ ಬಡಪಾಯಿಗಳಿಗೆ ಆಶಾಜ್ಯೋತಿಯಾಗಲಿ ಎಂದು ಕೋರುತ್ತೇನೆ.

ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಬ್ಬ ಗಜಲ್ ಮಾಂತ್ರಿಕರೊಂದಿಗೆ ನಿಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೂ ಧನ್ಯವಾದಗಳು…


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top