ಕಾವ್ಯ ಸಂಗಾತಿ
ಶಸ್ತ್ರಗಳೆ ಕ್ಷಮಿಸಿಬಿಡಿ
ನಿಶೆ
ಹಗಲು ಕಂಡರೆ ರಾತ್ರಿಗೆ
ಕತ್ತಲು ಕಂಡರೆ ಬೆಳಕಿಗೆ
ಆಗಿಬರದೆ
ಶತ ಶತಮಾನ ಕಳೆದವು
ಹಾಗೆಂದೇ
ಆಯುಧ ಹರಿತವಾಗುತಿವೆ
ಒಮ್ಮೆ ಹಗಲು ದೀರ್ಘವಾದರೆ
ಮತ್ತೊಮ್ಮೆ ರಾತ್ರಿ ಉದ್ದುದ್ದ ಬೆಳೆಯುವುದು
ಸೊಕ್ಕಿನಿಂದ ನಗುವುದು
ಅದರ ಅಟ್ಟಹಾಸವ ಕಿವಿಗೊಟ್ಟು ಕೇಳಬೇಕು
ಮುಖ ತಿರುವಿದವರು
ಹಗಲ ಮಕ್ಕಳು
ಪುನೀತರಾದರು ಕತ್ತಲೆಯ ಕಂದಮ್ಮರು
ರಾತ್ರಿಯೊಂದಿಗೆ ಯುದ್ಧಗೈದು
ಹಗಲು ಮಡಿದರೆ ಜಗಕೆ ಜೋಗುಳ
ಬೆಳಕ ಬೆರಗಿಗೆ ಕತ್ತಲೆಯ ಸಾವಾದರೆ
ಸಾವಿರದ ತೂಗುಯ್ಯಾಲೆ
ತೂಗಿ ನಂದನವನ ನಲಿಯುವುದಿಲ್ಲಿ
ಹಗಲು ಕೊಬ್ಬಿದ ಹಾವಾದರೆ ಹಗಲು
ರಾತ್ರಿಗೆ ಮಾರಣಹೋಮ
ನಡೆದುಬಂದ ನ್ಯಾಯ ತೀರ್ಮಾನಕೆ
ಶತಮಾನದ ಇತಿಹಾಸ
ಹಗಲು ಹಸಿರು ಕೆಂಪು ಕೇಸರಿ ಬಿಳಿ ನೀಲ ನೂರೆಂಟು ಬಣ್ಣ
ಕತ್ತಲೆ ಕರ್ರಗಿನ ಕಪ್ಪೊಂದೇ ಹಾಕಿಕೊಂಡಿದೆ ಕಣ್ಣ
ಒಂಟಿ ಯಾಗಿದ್ದು ಹರಿತ ಅದರ ಆಯುಧ
ಸಂಗಡಿಗರೊಂದಿಗೆ ನಾ ಶಪಥ ಮಾಡಿರುವೆ
ಯುದ್ಧ ನಮಗ್ಯಾಕೆ
ಮುಟ್ಟುವುದಿಲ್ಲ ಶಸ್ತ್ರವನೆಂದು
ಹಗಲಲಿ ಪ್ರೀತಿ ಬಿತ್ತುವೆವು
ರಾತ್ರಿಗೆ ದೀಪ ಉರಿಸುವೆವು
Sooperb Nishe mam
ಶುಭವಾಗಲಿ ನಿಮ್ಮ ಬರಹಕ್ಕೆ, ಕವನ ,ಕಾವ್ಯಗಳು,ಕಾವೇರಿ ಅಂತೇ ಬೆಳಗಲಿ.ಧನ್ಯವಾದ .