ತೊರೆಯ ಹರಿವು

  ‘ಹೊಸದಿನದ ಮುಂಗೋಳಿ ಕೂಗ್ಯಾವು…

Farmers Market Paintings | Fine Art America

ಮುಂಗೋಳಿ ಕೂಗ್ಯಾವು ಮೂಡೂ ಕೆಂಪೇರ್ಯಾವು। ಸ್ವಾಮೀ ನನ್ನಯ್ಯ

ರಥವೇರಿ। ಬರುವಾಗ ನಾವೆದ್ದು

ಕೈಯಾ ಮುಗಿದೇವೂ…

   ಅಂತೂ ಕೋಳಿ ಕೂಗಿದಾಗಲೇ ಬೆಳಕಾಗುವುದು ಎಂಬ ಮಾತನ್ನು ಸಮರ್ಥನೆ ಮಾಡುವಂತಿದೆ ನಮ್ಮ ಜನಪದರ ಈ ಪದ. ಹಾಗಾದರೆ ಅಜ್ಜಿ ಜಂಭಕ್ಕೆ ಅಡ್ಡಿಯಿಲ್ಲ..! ಆದರೆ ಹಳ್ಳಿ ಕೋಳಿಯನ್ನು ನಗರಕ್ಕೆ ಎಲ್ಲಿಂದ ತರೋಣ? ನಗರಕರರು (ಮುಂಬೈಕರ್ ಎನ್ನುವಂತೆ!)ಕೋಳಿ ಕೂಗದೇ  ಬೆಳಗಾದುದನ್ನು ಅರಿಯುವುದು ಹೇಗೆ?!

     ನಗರದ ಬಡಾವಣೆಗಳಲ್ಲಿ ಅಜ್ಜಿ ಕೋಳಿಯ ಆಸರೆ ಇಲ್ಲದೆಯೇ ಬೆಳಗು ಹರಿಸುವವರು ತಳ್ಳುಗಾಡಿಯ ಮೇಲೆ ತರೇವಾರಿ ಹೂ, ಹಣ್ಣು, ತರಕಾರಿ, ಸೊಪ್ಪು ಮಾರಲು ಬರುವವರು. ಇವರಷ್ಟು ಕರಾರುವಕ್ಕಾಗಿ ನಮ್ಮ ಗಡಿಯಾರಗಳೂ ಇರುವುದಿಲ್ಲವೇನೋ..! ಇನ್ನೂ ಒಂದಷ್ಟು ಹೊತ್ತು ಮುಂಜಾವಿನ ಸುಖನಿದ್ರೆಯ ಸವಿ ಅನುಭವಿಸುತ್ತಾ ಹಾಗೇ ಮಲಗಿರಬೇಕು ಎನ್ನುತ್ತಿರುವಾಗಲೇ, ಸೂರ್ಯ ನೆತ್ತಿಗೇರಿದೆ. ಹೊತ್ತಾಗುತ್ತಾ ಬಂತು. ಬೇಗ ಎದ್ದು ಒಲೆ ಹಚ್ಚಿ; ಈ ದಿನಕ್ಕೆ ಈ ತರಕಾರಿಯ ಪದಾರ್ಥ ಮಾಡಿಕೊಳ್ಳಿರಿ ಎಂದು ಹಿತೋಪದೇಶ ನೀಡುವವರಂತೆ ‘ಈರುಳ್ಳೀ, ಟಮೋಟೋ, ಕೊತ್ತಂಬ್ರಿ, ಪುದೀನಾ, ಮೆಣಸಿನ್ಕಾಯ್, ಮೂಲಂಗಿ, ಹಾಗಲಕಾಯ್, ಸೌತೇಕಾಯ್, ಬೆಂಡೆಕಾಯ್, ತೊಂಡೆಕಾಯ್, ತರ್ಕಾರೀ… ಸೊಪ್ಪೋ…’ ಎಂದು ರಾಗವಾಗಿ ನವ ಸುಪ್ರಭಾತ ಹಾಡುವ ಮುಂಗೋಳಿಗಳು ಮೂಡಿಬರುತ್ತಾರೆ.

58,278 Cock Rooster Stock Photos and Images - 123RF

    ನಗರದ ರಸ್ತೆಗಳಲ್ಲಿ ಹಾದಿ-ಬೀದಿಗೂ, ಹತ್ತೇ ಹೆಜ್ಜೆ ನಡೆದರೂ ಸಿಗುವ ಅಂಗಡಿಗಳಿದ್ದರೂ ನಾಕು ಹೆಜ್ಜೆಯನ್ನೂ ಎತ್ತಿಡಲಾರದ ಸುಖ ಪುರುಷರಿಗೆ- ಸುಖ ಸ್ತ್ರೀಯರಿಗೆ, ಒಟ್ಟಿನಲ್ಲಿ ಸೋಮಾರಿಗಳೆಂದು ಕರೆಸಿಕೊಳ್ಳುವವರಿಗೆ ಇವರೇ ಪ್ರತ್ಯಕ್ಷ ಹೂ-ಹಣ್ಣು- ತರಕಾರಿ-ಸೊಪ್ಪಿನ ದೈವಗಳು. ಕೇವಲ ಸೋಮಾರಿಗಳಿಗೇ ಏಕೆ? ಅನಾರೋಗ್ಯ ಪೀಡಿತರಿಗೆ, ವಯೋವೃದ್ಧರಿಗೆ, ಮನೆಬಿಟ್ಟು ಹೊರಹೋಗಲಾರದ ಸಣ್ಣ ಮಗುವಿರುವವರಿಗೆ, ನೆನ್ನೆಯೇ ಇಂದಿನ ತಿಂಡಿ -ಅಡುಗೆಗೆ ಸಿದ್ಧತೆ ಮಾಡಿಕೊಳ್ಳಲಾರದವರಿಗೆ ಅಥವಾ ಮತ್ಯಾವುದೋ ಕಾರಣಗಳಿಗೆ ಹೊರಗೆ ಹೋಗಲಾರದವರಿಗೆ ಮನೆಮುಂದೆ ಬರುವ ಇವರು ಆಪದ್ಬಾಂಧವರೇ ಸರಿ.

      ತಳ್ಳುಗಾಡಿಯವರ ಬಳಿ ಖರೀದಿಸಬಾರದು ಬೆಲೆ ಜಾಸ್ತಿ ಎನ್ನುವವರಿಗೆ ಗದರಿ, ‘’ಪಾಪ, ಅವರೆಷ್ಟು ಶ್ರಮ ಜೀವಿಗಳು, ಬಿಸಿಲು ಮಳೆ ಎನ್ನದೇ ಮನೆ ಮುಂದೆಯೇ ತಾಜಾ ತರಕಾರಿ ಸೊಪ್ಪು ತಂದು ಕೊಡುವಾಗ ಹತ್ರುಪಾಯಿ ಜಾಸ್ತೀನೇ ಕೊಡೋಣ ಏನೂ ತೊಂದ್ರೆ ಇಲ್ಲ..” ಎಂದು ಅರ್ಥವತ್ತಾಗಿ ಉಪದೇಶಿಸಬೇಕು. ಒಮ್ಮೊಮ್ಮೆ ಮಾರಾಟವಾಗದೆ ಉಳಿದ ಹೆಚ್ಚುವರಿ ಮಾಲನ್ನು ಸಸ್ತಾ ಬೆಲೆಯಲ್ಲಿ ಕೊಟ್ಟುಹೋಗುವ ಮಾರಾಟಗಾರರ ಅನ್ಯಾಯಕ್ಕೆ ಎಂದಾದರೂ ಮರುಗಿರುತ್ತೇವೆಯಾ? ಬದಲಿಗೆ ತುಂಬಾ ಚೀಪಾಗಿ ಸಿಗ್ತು ಎಂದು ಕುಣಿದು ಕೊಂಡಿರ್ತೀವಿ.

       ಮುಂಜಾವಿನ ಸವಿನಿದ್ದೆಗೆ ತಿಲಾಂಜಲಿಯಿಟ್ಟು, ಮಾರುಕಟ್ಟೆಗೆ ಧಾವಿಸಿ ತಾಜಾ ಪದಾರ್ಥಗಳನ್ನು ಆರಿಸಿ, ಓರಣವಾಗಿ ಗಾಡಿಯ ಮೇಲೆ ಪೇರಿಸಿ, ಬೆಲೆ ನಿಗದಿಪಡಿಸಿ, ಪರಿಚಿತ ಬಡಾವಣೆಗಳಲ್ಲಿ ತಿರುಗಾಟ ಶುರು ಮಾಡಿದರೆ, ಭಾರದ ಗಾಡಿ ತಳ್ಳುವ ಅವರ ಶರೀರ, ಪ್ರತೀ ಪದಾರ್ಥಗಳ ಹೆಸರು ಹಿಡಿದು, ಬೆಲೆ ಸಾರುವ ಅವರ ಶಾರೀರ ಏನಾಗಬೇಕು?! ಸ್ವಲ್ಪ ಹೆಚ್ಚೇ ದೈಹಿಕ ಶ್ರಮ ಬೇಡುವ ಅವರ ಕೆಲಸದಲ್ಲಿ ಬೆಲೆ ಕೊಂಚ ಹೆಚ್ಚಿರಬಹುದು. ಹಾಗೆಂದು, ಅವರ ಕಾಯಕ ನಿಷ್ಠೆಗೆ ಗೌರವ ತೋರುವುದು ಅವಶ್ಯ. ಮನೆ ಮುಂದೆಯೇ ಸೇವೆ ಒದಗಿಸುವ ಇವರ ಬಳಿ ಚೌಕಾಶಿ ಮಾತನಾಡಿ ಕೊಸರಾಡುವವರನ್ನು ಕಂಡರೆ ನನಗೂ ಇಷ್ಟವಾಗುವುದಿಲ್ಲ. 

     ವರ್ತನೆ ಮೇಲೆ ತರಕಾರಿ ಕೊಳ್ಳುವವರಿಗೂ ತರಕಾರಿ ಮಾರುವವರಿಗೂ ಒಂದು ಅವಿನಾಭಾವ ಸಂಬಂಧ ಏರ್ಪಟ್ಟಿರುತ್ತದೆ. ಇದರಲ್ಲಿ ಅತಿಶಯ ಹೇಳಿಕೆ ಏನೇನೂ ಇಲ್ಲ. ವರ್ತನೆ ಮನೆಯವರೆಂದು ಅವರಿಗಾಗಿಯೇ ವಿಶೇಷವಾದ, ತಾಜಾ ಎನಿಸುವ ತರಕಾರಿ-ಸೊಪ್ಪುಗಳನ್ನು ತಂದುಕೊಡುವುದಲ್ಲದೆ, ಕೆಲವು ಬಾರಿ ಸೊಪ್ಪು ಬಿಡಿಸಿಕೊಟ್ಟು, ತರಕಾರಿ ಶುದ್ಧ ಮಾಡಿಕೊಟ್ಟು ಹೋಗುವ ವರ್ತನೆಯವರೂ ಉಂಟು. ಹೀಗೆ ಮನೆ ಬಾಗಿಲಿಗೇ ಬಹುತರಕೆ ಉಪಯೋಗದಂತೆ ಒದಗಿಬರುವ ನಿತ್ಯದ ಮಾರಾಟಗಾರರಿಗೆ ಆಗೀಗ ಕಾಫಿ- ತಿಂಡಿ ಕೊಟ್ಟು, ಆಗೀಗ ಸೀರೆ- ಬಟ್ಟೆ, ಹಬ್ಬದಡುಗೆ ಬಡಿಸಿ, ಆಗೀಗ ಹಣಕಾಸು ಸಹಾಯ ಮಾಡುತ್ತಾ ಒಂದು ವಿಶ್ವಾಸ ಬೆಳೆಸಿಕೊಂಡಿರುವ ಹಲವು ನಾಗರಿಕರು ನಿಮಗೂ ಪರಿಚಯವಿರಬಹುದು ಅಥವಾ ಅಂಥಾ ಉದಾರ

ಚರಿತರು ನೀವೂ ಆಗಿರಬಹುದು.

      ನನಗೆ ಪರಿಚಯವಿದ್ದ ಮನೆಯವರ ಮಗಳ ‘ಬಾಣಂತಿ ಸ್ನಾನ’ಕ್ಕೆ ಬೇಕಾದ ಸೊಪ್ಪುಗಳನ್ನು ತಂದುಕೊಟ್ಟದ್ದು, ಮತ್ತೊಬ್ಬರ ಮಗಳು ಋತುಮತಿ ಆದಾಗ ಹಳ್ಳಿ ಸಂಪ್ರದಾಯದಂತೆ ಸೊಪ್ಪು ಹಾಕಲಾಗಲಿಲ್ಲವೆಂದು ಹಳಹಳಿಸುತ್ತಿದ್ದ ಅತ್ತೆಯನ್ನು ಸಮಾಧಾನಿಸಿದ್ದು, ಮಗುವಿಗೆ ‘ಅಮ್ಮ’ ಆದಾಗ ಬುಟ್ಟಿಗಟ್ಟಲೆ ಬೇವಿನ ಸೊಪ್ಪು ಒದಗಿಸಿದ್ದು   ಬೆಳಗ್ಗೆಯಿಂದ ಸಂಜೆವರೆಗೆ ಹಾದಿಬೀದಿ ಸುತ್ತುವ ಕಾಯಕ ಯೋಗಿಗಳು. ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಂದಾವರೆ, ಗಣೇಶ ಚತುರ್ಥಿಗೆ ಬಿಳಿ ಎಕ್ಕದ ಮಾಲೆ, ಯುಗಾದಿಗೆ ಮಾವಿನೆಲೆ, ಬೇವಿನ ಚಿಗುರು, ಬಕ್ರೀದಿಗೆ ತಾಜಾ ಪುದೀನ, ಕೊತ್ತಂಬರಿ, ಶುಂಠಿ, ಈರುಳ್ಳಿ,ಬೆಳ್ಳುಳ್ಳಿ…  ಅವರು ಇಂತಹವನ್ನು ಒದಗಿಸುವ ಕೆಲಸಗಳನ್ನು ಮಾಡುವುದು ಸಣ್ಣ ವಿಶ್ವಾಸಕ್ಕಾಗಿಯೇ.. ಇವೆಲ್ಲಾ ಸುಮ್ಮನೆ ಒಂದು ಹಣಕಾಸಿನ, ವಸ್ತು- ಖರೀದಿ- ಮಾರಾಟದ ವ್ಯವಹಾರದ ವಿಷಯಗಳಲ್ಲ. ಬೇಕಾದುದನ್ನು ತಂದುಕೊಟ್ಟು ದುಡ್ಡು ತೆಗೆದುಕೊಂಡು ಮುಖ ತಿರುವಿದಂತಲ್ಲ. ಅಗತ್ಯವಾದುದನ್ನು ಒದಗಿಸುವ ಜೊತೆಗೇ, ‘ಮಗು-ಬಾಣಂತಿ ಆರಾಮ?’ ‘ಮೈ ನೆರೆದ ಹುಡುಗಿಗೆ ಎಳ್ಳುಂಡೆ-ತುಪ್ಪ ಚೆನ್ನಾಗಿ ಕೊಡಿ’,  ‘ಅಮ್ಮ ತಣ್ಣಗಾದ್ಲಾ?’, ‘ಇನ್ನೂ ಎಷ್ಟು ದಿನ ಇಂಥಾ ಸೊಪ್ಪು ತಂದುಕೊಡ್ಲಿ?’ ‘ಹಬ್ಬ ಜೋರಾ? ಮಸಾಲೆ ಗಮ್ ಅಂತಿದೆ..!’ ಎಂದೆಲ್ಲಾ ವಿಚಾರಿಸುತ್ತಾ  ಮನೆಯವರಿಗೆ ಸಂಬಂಧಿಸಿದಂತೆ ತಮಗೆ ತಿಳಿದುದನ್ನು ಹೇಳುವ- ಕೇಳುವ ವಿಶ್ವಾಸ ತೋರುತ್ತಾರೆ. ಆಗೀಗ ನಾಕಾರು ಕಾಸು ಇವರು ಅವರಿಗೆ ಹೆಚ್ಚಾಗಿ ಕೊಡುತ್ತಲೋ, ಅವರಿಂದ ಒಂದೆರಡು ಮೊಳ ಹೂ, ಕಾಲು ಕೇಜಿ ತೂಕ ಹೆಚ್ಚಾಗಿ ತೆಗೆದುಕೊಳ್ಳುತ್ತಲೋ ಅದರ ಬಾಕಿ ಚುಕ್ತಾ ಮಾಡುವ ಸಾಲ ಉಳಿಸಿಕೊಳ್ಳುತ್ತಾ ವ್ಯಾಪಾರದ ಆಟ ಆಡುತ್ತಾರೆ. ಜೀವನವೇ ಒಂದು ನಾಟಕರಂಗವಲ್ಲವೇ!

       ಮಾಸ್ತಿಯವರ ‘ಮೊಸರಿನ ಮಂಗಮ್ಮ’ನೂ  ಹೀಗೆಯೇ.. ಕಥಾ ನಾಯಕಿಯೊಡನೆ ಆಕೆಗೆ ಒಂದು ರೀತಿಯ ವಾತ್ಸಲ್ಯದ ಸಂಬಂಧ. ಹೊರಗೆ ದುಡಿದು ಬರುವ ಗಂಡನನ್ನು ಒಲಿಸಿ ವಿಶ್ವಾಸಗಳಿಸಿಕೊಂಡು ಬಾಳನ್ನು ಹೇಗೆ ಸುಖಮಯ ಮಾಡಿಕೊಳ್ಳಬೇಕು  ಎನ್ನುವುದರೊಟ್ಟಿಗೆ ಸಾಂಸಾರಿಕ ಜೀವನವನ್ನು ಚೆಂದ ಮಾಡಿಕೊಳ್ಳುವ ಬಗೆ ಹೇಳಿಕೊಡ್ತಿರ್ತಾಳೆ. ಅಲ್ಲಿ ಮೊಸರಿನ ಮಂಗಮ್ಮ ಇದ್ದರೆ, ಇಲ್ಲಿ ತರಕಾರಿ ತಾಯಮ್ಮನೋ, ಸೊಪ್ಪಿನ ಸೋಮಕ್ಕನೋ, ಹೂವಿನ ಪೂವಮ್ಮನೋ ಯಾರೋ… ಅಂತೂ ಮನೆಯೊಡೆಯರು ಹಚ್ಚಿಕೊಂಡಂತೆ ಕಷ್ಟಕಾಲಕ್ಕೆ ಆಗಿಬರುತ್ತಾರೆ.

     ‘ಧ್ವನಿ ಶಾಸ್ತ್ರ’ ಅಭ್ಯಾಸ ಮಾಡುವವರಿಗೆ ಮುಂಜಾವು ಅತ್ಯಂತ ಪ್ರಶಸ್ತ ಸಮಯ. ವಿಭಿನ್ನ ದನಿ, ಏರಿಳಿತ, ಉಚ್ಚಾರ, ಪದಪ್ರಯೋಗ, ಭಾಷಾ ಬಳಕೆ, ಭಾಷಾ ಮಿಶ್ರಣ, ಲಯಗಾರಿಕೆ, ಗಡಸು-ಮಂದ್ರ- ನಾಜೂಕು-ನವಿರು, ಗೋಗರೆಯುವಿಕೆ, ಗಡವು ನೀಡುವುದು.. ಹೀಗೆ ನಾನಾ ಭಾವವಿಲಾಸ ಲೀಲಾವಳಿಯನ್ನು ಆ ಸಮಯದ ಧ್ವನಿ ವ್ಯಾಪಾರದಲ್ಲಿ ಕೇಳಬಹುದು. ‘ಧ್ವನಿ ಸಿದ್ಧಾಂತ’ ಅಥವಾ ‘ಧ್ವನಿ ಪ್ರಸ್ತಾನ’ಕ್ಕೆ ಭಾರತೀಯ ಕಾವ್ಯಮೀಮಾಂಸೆಯಲ್ಲಿ ವಿಶೇಷ ಪರಿಗಣನೆ ಇದೆ. ಅದು ಕಾವ್ಯದೊಳಗಿನ ದನಿ. ಇದು ಜನರ ಜೀವದೊಳಗಿನ ದನಿ.

    ಇಷ್ಟು ಜೋರು ದನಿ ತೆಗೆಯುವವರ ಗಂಟಲು ದಣಿಯದೇ? ಆ ಆರಿದ ಗಂಟಲಿಗೆ ನೀರನ್ನೋ ಬೇರೆ ಪಾನೀಯವನ್ನೋ ಕೊಡುವ ಸಂಸ್ಕೃತಿ ನಗರದಲ್ಲುಂಟೆ? ಕಾಸಿಗೊಂದು ಕೊಸರಿಗೊಂದು ಬೇಕರಿ ಗೂಡಂಗಡಿಗಳು ಇರುವಾಗ ಟೀ-ಕಾಫಿಗಾಗಿ ಮಾರಾಟಗಾರರೂ ಸಹ ಯಾರ ಮನೆಯ ಬಾಗಿಲನ್ನೂ ತಟ್ಟುತ್ತಿಲ್ಲ ಎನ್ನುವುದು ಅವರ ಸ್ವಾಭಿಮಾನದಷ್ಟು ಸತ್ಯ.

  ಗಂಟಲು ಹರಿದುಕೊಳ್ಳುವವರು ಉಪನ್ಯಾಸಕರು ಮಾತ್ರವಲ್ಲ, ನಮ್ಮ ಮುಂಜಾವಿನ ಈ ಮಿತ್ರರೂ.. ನಮ್ಮ ಮನೆಗೆ ಅದೆಷ್ಟೋ ಬೀದಿ ಆಚೆಯಲ್ಲಿ ಸಾರುತ್ತಿರುವುದು ಕೇಳುತ್ತಿರುವಾಗ ನನಗೆ ಕೆಲವು ಟೆನ್ನಿಸ್ ಆಟಗಾರರ ನೆನಪಾಗುತ್ತದೆ. ಟೆನ್ನಿಸ್ ಅಂಗಳದಲ್ಲಿ ಚೆಂಡನ್ನು ಎದುರಾಳಿಯ ಕೋರ್ಟಿಗೆ ಬೀಸಿ ಒಗೆಯುವಾಗ ಮೊನಿಕಾ ಸೆಲೆಸ್ ಎಂಬ ಮಾಜಿ ವಿಶ್ವ ಚಾಂಪಿಯನ್ ಕೂಗಿ ಮಾಡುತ್ತಿದ್ದ ದನಿಯು ಅದೆಷ್ಟೋ ಡೆಸಿಬಲ್ ಗಳದ್ದೆಂದು ವಿಜ್ಞಾನಿಗಳು ಅಳೆದಿದ್ದಾರೆ.

        ಕಂಠ ಶೋಷಣೆ ಮಾಡಿಕೊಂಡು ತಳ್ಳು ಗಾಡಿಯೊಡನೆ ಬರುತ್ತಿದ್ದವರು ಈಗೀಗ ಆಧುನಿಕರಾಗುತ್ತಿದ್ದಾರೆ. ತಾವೇ ಕೂಗಿ ಸಾರುವ ಬದಲು ಧ್ವನಿ ಮುದ್ರಿಸಿಕೊಂಡ ಟೇಪ್ ರೆಕಾರ್ಡರ್ ಅನ್ನು ಗಾಡಿಯಲ್ಲಿರಿಸಿರುತ್ತಾರೆ. ಒಮ್ಮೊಮ್ಮೆ ಈ ಧ್ವನಿ ಮುದ್ರಕಗಳು ಎಷ್ಟು ಆಭಾಸ ತರುತ್ತವೆ ಎಂದರೆ, ಅವರು ಹೇಳಿದ ತರಕಾರಿಯನ್ನೋ ಸೊಪ್ಪನ್ನೋ ಆ ದಿನ ಮಾರಾಟಕ್ಕೆ ತಂದಿರುವುದೇ ಇಲ್ಲ…! ಆಗ ಒಂದು ಸಣ್ಣ ತಗಾದೆ ತೆೆಗೆದು ಪುಡಿಜಗಳವೂ ನಡೆಯುವುದುಂಟು. ಇದು ಪುಕ್ಕಟ್ಟೆ ಮನರಂಜನೆಯಷ್ಟೇ. ಮಾರನೆಯ ದಿನ ಅದೇ ಗಾಡಿಗಾಗಿ ಈ ಮನೆಯವರು ಕಾದರೆ, ಅದೇ ಮನೆಯ ಮುಂದೆ ಸ್ವಲ್ಪ ಹೆಚ್ಚೇ ದನಿ ಹೆಚ್ಚಿಸುವ ತರಕಾರಿ ಮಾರುವವರಿದ್ದಾರೆ. ಇದು ಜೀವನ.

   ಕೆಲವು ತಳ್ಳುಗಾಡಿಯ ಮಾರಾಟಗಾರರು ಕೆಲವು ತಂತ್ರ ಉಪಯೋಗಿಸುತ್ತಾರೆ. ಎಷ್ಟೇ ಕಂಠಶೋಷಣೆ ಮಾಡಿಕೊಂಡರೂ ಹೊರಗೆ ಬರಲಾರದ ಸೋಮಾರಿ(?) ಅಥವಾ ಕಠಿಣ ಹೃದಯಿಗಳನ್ನು ಹೊರಗೆ ಕರೆಸುವ ಶಪಥ ಮಾಡಿದವರಂತೆ, ಸಾರುತ್ತಾರೆ. ಅವರ ದನಿ ಜೋರಾಗಿಯೇ ಇರುತ್ತದೆ. ಆದರೆ, ಅವರು ಏನನ್ನು ಮಾರುತ್ತಿದ್ದಾರೆ ಎನ್ನುವುದು ತಿಳಿಯಲಾಗದಂತೆ  ಗೂಢ ಭಾಷೆ ಬಳಸುತ್ತಾರೆ. ಮನೆಯೊಳಗಿದ್ದರೂ ತಡೆಯಲಾರದ ಕುತೂಹಲ ಹುಟ್ಟಿ, ಹೊರಗೆ ಬಂದು ಬಾಗಿಲು ತೆರೆದು ನೋಡಿ ಅದೇನೆಂದು ನಾವು ತಿಳಿಯಬೇಕಾಗುತ್ತದೆ. ಹೀಗೆ ಬಂದವರನ್ನು ಪುನಃ ಮಾತಿನಿಂದ ಮರಳು ಮಾಡುವುದಕ್ಕೆ ಅವರು ಪೂರ್ವನಿರ್ಧರಿಸಿದಂತೆ ಸಿದ್ಧರಾಗಿರುತ್ತಾರೆ. ತಮ್ಮ ಪದಾರ್ಥದ ಗುಣಗಾನ ಮಾಡುತ್ತಾ, ಅದರ ಬೆಲೆ ತಮ್ಮಲ್ಲಿ ಮಾರುಕಟ್ಟೆಗಿಂತ ಎಷ್ಟೋ ಪಾಲು ಕಡಿಮೆಯೆಂದೂ ಹಾಗೂ ವಸ್ತುವಿನ ಗುಣಮಟ್ಟ ಎಷ್ಟೋ ಪಾಲು ಮಿಗಿಲೆಂದು ವರ್ಣಿಸುತ್ತಾರೆ. ಹತ್ತು ಜನ ಕುತೂಹವಿಗಳಲ್ಲಿ ಒಬ್ಬರಾದರೂ ಮಾಲು ಕೊಳ್ಳುವುದಿಲ್ಲವೇ? ಅಷ್ಟೇ ಲಾಭ ಅವರಿಗೆ. ಮಾತಿನ ಜಾಣ್ಮೆ, ಮಾರಾಟದ ತಂತ್ರ ಇವರಿಗೆ ಕರಗತವಾಗಿರುತ್ತದೆ. ಯಾವ ವಿಶ್ವವಿದ್ಯಾಲಯದಲ್ಲಿ   ಇವರು ಎಂಬಿಎ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಓದಿರುತ್ತಾರೆ ಹೇಳಿ? ಜೀವನವೇ ಒಂದು ಯೂನಿವರ್ಸಿಟಿ.

    ಸಂತೆ- ಮಾರುಕಟ್ಟೆ, ಮಾಲ್ ಏನೇ ನಡೆದರೂ ಬಹುಪಾಲು ಜನರ ಫೇವರೆಟ್ ಖರೀದಿ ಮನೆ ಮುಂದಿನ ಮಾರಾಟಗಾರರಲ್ಲೇ. ಇವರು ನಂಬಿಕೆಗೆ ಅರ್ಹರು, ದಿನಾ ಮನೆ ಮುಂದೆಯೇ ಬರುವವರು, ಚೌಕಾಶಿಯೂ ನಡೆದೀತು, ವರ್ತನೆಗೆ ಬೇಕಾದುದನ್ನು ತಂದುಕೊಡುವರು, ಕೆ. ಜಿ ತೂಕ ಮಾಡಿ ಕೊಟ್ಟಮೇಲೂ ಮೇಲೊಂದಷ್ಟು ಎಕ್ಸ್ಟ್ರಾ ಕೊಸರು ನೀಡುತ್ತಾರೆ… ಹೀಗೆ ಅವರ ಮೇಲೆ ಅವಲಂಬಿತರಾಗಲು ನೂರಾರು ಕಾರಣಗಳನ್ನು ನೀಡಬಹುದು. 

  ‘’ಕೋವಿಡ್’ ಸಂಕಷ್ಟದಲ್ಲಿ ಚೆನ್ನಾಗಿ ಲಾಭ ಮಾಡಿಕೊಂಡವರೆಂದು ಮೆಡಿಕಲ್ ಶಾಪ್-ಆಸ್ಪತ್ರೆ, ತರಕಾರಿ-ಹಣ್ಣು-ಸೊಪ್ಪಿನ ಮಾರಾಟಗಾರರು’ ಎಂದು ಹೇಳುತ್ತಿದ್ದ ಸ್ನೇಹಿತರಿಗೆ, ‘ಅವರೆಲ್ಲಾ ತಮ್ಮ ಜೀವವನ್ನು ಒತ್ತೆ ಇಟ್ಟು ಬಂದುದು ಪರಿಗಣನೆಗೆ ಬರಲಿಲ್ಲವಲ್ಲಾ?’ ಎಂದು ವ್ಯಥೆಯಿಂದ ಕೇಳುತ್ತಿದ್ದೆ.

  ಅಪರೂಪಕ್ಕೆ ಬೇಸಿಗೆ-ದಸರೆಯ ರಜಾದಿನಗಳಲ್ಲಿ ತಳ್ಳುಗಾಡಿಯೊಡನೆ ಸಂಸಾರ ಕರೆದು ತರುತ್ತಿದ್ದ ಕೆಲವು ಮಾರಾಟಗಾರ ಕುಟುಂಬದ ಪರಿಚಯ ನನಗಿದೆ. ಹಾಗೇ ದುಡಿಮೆ ಅನಿವಾರ್ಯವಾದ ಎಳೆ ಬಾಣಂತಿಯರು ಹಸುಗೂಸುಗಳನ್ನು ಗಾಡಿಯ ಬದಿಯೊಂದರಲ್ಲಿ ಗೋಣಿಚೀಲ ಹಾಸಿ ಮಲಗಿಸಿ ಹೋಗುತ್ತಿದ್ದ ಒಂದೆರಡು ದೃಶ್ಯಗಳೂ ಕಲಾವಿದನ ಚಿತ್ರದಂತೆ ಕಣ್ಣಿನಲ್ಲಿ ಚಿತ್ರಿಸಿಕೊಂಡಿವೆ. ಆದರೆ, ಈಗೀಗ ತಳ್ಳುಗಾಡಿಯೊಡನೆ ಶಾಲೆಯ ಹಾದಿ ತುಳಿಯಬೇಕಾದ ಕೂಸುಗಳೂ ಬರುತ್ತಿರುವುದು ಈ ದೇಶದ ಕರಾಳ ಭವಿಷ್ಯವನ್ನು ಕಾಣಿಸುತ್ತಿದೆ. ಇದರಲ್ಲಿ ಸರಕಾರ ಹಾಗೂ ನಾಗರಿಕ ಸಮಾಜ ತಮ್ಮ ಮಿಗಿಲು ಜವಾಬ್ದಾರಿ ಏನೆಂದು ತಮಗೆ ತಾವೇ ಅರಿತುಕೊಳ್ಳಬೇಕು. ಆದಷ್ಟು ಬೇಗ ಎಲ್ಲಾ ಅನಾಹುತಗಳು ಸರಿಹೋಗಿ ಮುಚ್ಚಿದ ಶಾಲೆಗಳು ಮತ್ತೆ ತೆರೆಯಬೇಕು. ನಮ್ಮ ದೈನಂದಿನ ದಿನಚರಿಯನ್ನು ಎಚ್ಚರಿಸುವವರ ಭವಿಷ್ಯವೂ ಸಹ ಜಾಗೃತವಾಗಬೇಕು.

 ಒಂದು ಸವಿ ಮುಂಜಾವಿನ ತಳ್ಳುಗಾಡಿಯ ಮಾರಾಟಗಾರರ ಕೂಗಿನ ಬನಿಯೊಡನೆ ಮೂಡಿನಿಂತ ಈ ಲೇಖನ, ‘ಹೊಸಗನ್ನಡದ ಮುಂಗೋಳಿ’ ಎಂದು ಕವಿ ಮುದ್ದಣನನ್ನು ಕರೆದು ಗೌರವಿಸಲಾಗಿರುವಂತೆ, ‘ಹೊಸದಿನದ ಜಾಗೃತ ಮುಂಗೋಳಿ’ಗಳೆಂದು ನಾವು ಮುಂಜಾವಿನ ಈ ಮಾರಾಟಗಾರರನ್ನು ಕರೆದು ಗೌರವಿಸಬಹುದು ಅಲ್ಲವೇ ಎಂಬ ಸದಾಶಯವನ್ನು ಹಾಗೇ ಮನದ ಬಾನಿನಲಿ ತೇಲಿಸಿತು…


  ವಸುಂಧರಾ ಕದಲೂರು

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

Leave a Reply

Back To Top