ತರಹಿ ಗಜಲ್
ಸಾನಿ ಮಿಸ್ರಾ: ಸಿದ್ಧರಾಮ ಹಿರೇಮಠ ಕೂಡ್ಲಿಗಿ
ಅರುಣಾ ನರೇಂದ್ರ


ಎದೆ ಪದರಿಗೆ ಗಾಯವಾಗಿದೆಯೇನೋ ಕಣ್ಣೀರು ತೊಡೆಯುವೆಯಾ ಸಾಕಿ
ಮಧು ಬಟ್ಟಲಿಗೆ ದಾಹವಾಗಿದೆಯೇನೋ ಮಧುವ ಕೊಡುವೆಯಾ ಸಾಕಿ
ಗಡಿಬಿಡಿ ದುನಿಯಾದಲಿ ಎಷ್ಟೊಂದು ಪರಿಚಿತ ಮುಖಗಳಿವೆ ಸಜನಿ
ನೋಡಿಯೂ ನೋಡದಂತೆ ಹಾಕಿಕೊಂಡ ಮುಖವಾಡ ತೆಗೆಸುವೆಯಾ ಸಾಕಿ
ಮದ್ಯದಂಗಡಿಯ ಮೇಜು ಕುರ್ಚಿಗಳಿಗೂ ವ್ಯಥೆಯ ಕಥೆಗಳು ಗೊತ್ತಿವೆ ಬಿಡು
ಕಿಟಕಿಯ ಪರದೆಯ ಆಚೆಗಿನ ಲೋಕದ ನಂಟು ಮರೆಸುವೆಯಾ ಸಾಕಿ
ನಂಜು ತುಂಬಿದ ಮನಗಳಿಗಿಂತ ನಶೆ ಏರಿ ಬಡಬಡಿಸುವವರೇ ಲೇಸು ಎನಿಸುತ್ತದೆ
ಪ್ರಿಯತಮನ ತೋಳ ಆಸರೆ ಸಿಗದೆ ನರಳುವವರ ಸಂತೈಸುವೆಯಾ ಸಾಕಿ
ತಿನ್ನುವ ಅನ್ನ ಕೈತಪ್ಪಿತೆಂದು ಲೊಚಗುಡುವ ಹಲ್ಲಿಗೇನು ಗೊತ್ತು ನನ್ನ ನಿನ್ನ ಸಂಬಂಧ
ಕಳೆದುಹೋದ ಅರುಣಾಳ ಕನಸುಗಳ ಕರೆತಂದು ಸಿಂಗರಿಸುವೆಯಾ ಸಾಕಿ
ಚಂದನೆಯ ಗಜಲ್
ಸೊಗಸಾಗಿದೆ