ಕಾವ್ಯಯಾನ
ಎಂ. ಆರ್. ಅನಸೂಯ
ಜಂಗಮ – ಸ್ಥಾವರ
ವಿಕಾಸವಾಗಲು
ಆವಿರ್ಭವಿಸಿದ ಭ್ರೂಣಕೆ
ಸ್ಥಾಯಿ ಗರ್ಭದಾಶ್ರಯವಿರಬೇಕು
ಸುರಿಸಲು
ವರ್ಷಧಾರೆ ಅಲೆಮಾರಿ ಮೋಡಗಳು
ನಿಂತಲ್ಲೇ ನಿಂತ ಗಿರಿ ಶಿಖರಗಳಿರಬೇಕು
ಹರಿಯಲು
ಜೀವ ಜಲದ ಹೊನಲು
ಸ್ಥಾವರ ಇಳೆಯ ನೆಲೆಯಿರಬೇಕು
ಕಟ್ಟಲು
ಗೂಡು ಹಾರುವ ಹಕ್ಕಿಗಳು
ಬೇರೂರಿದ ವೃಕ್ಷಗಳ ಆಧಾರವಿರಬೇಕು
ಅಲೆದಾಡಲು
ಸಂಚಾರಿ ಚಂಚಲ ಚಿತ್ತವು
ಸ್ಥಿರವಾದ ತನುವಿನಾಸರೆ ಬೇಕು
ಬದುಕಲು
ನಶ್ವರ ಜೀವನದೆ
ಚರಾಚರಗಳ ಹಂಗಿರಬೇಕು
ವಿರಮಿಸಲು
ಜಂಗಮ ಬದುಕಿನ ಹೋರಾಟ
ಸ್ಥಾವರ ಚಿರ ಶಾಂತಿಯಿರಬೇಕು
ಸ್ಥಾವರದಳಿವು
ಜಂಗಮದುಳಿವು
ಒಂದಕೊಂದು ಕೊಡಲು ತಾವು
ಉಳಿದೀತು ಜಗದ ಅಸ್ಥಿತ್ವವು
ತುಂಬಾ ಚೆನ್ನಾಗಿದೆ