ಅನುವಾದಿತ ಕಥೆ
ಓದುಗನು ಮಾಡಿದ ಸತ್ಕಾರ.
ತೆಲುಗು ಮೂಲ: ಪ್ರಭಾಕರ್ ಜೈನಿ
ಅನುವಾದ: ಚಂದಕಚರ್ಲ ರಮೇಶ ಬಾಬು
ಮನಸ್ಸೆಲ್ಲ ಬೇಜಾರಾಗಿದೆ. ರಾತ್ರಿಯ ಒಂಬತ್ತಾದರೂ ಇನ್ನೂ ಇಬ್ಬರು ವ್ಯಾಪಾರಸ್ಥರು ಉಳಿದಿದ್ದಾರೆ. ನಮ್ಮ ಆಫೀಸಿನ ಸಿಬ್ಬಂದಿ ವರ್ಗ ಒಂದು ತಿಂಗಳಿಂದ ನೆನಪಿಸುತ್ತಿದ್ದರೂ ನಿರ್ಲಕ್ಷ್ಯ ಮಾಡಿ, ಕೊನೆ ಗಳಿಗೆಯಲ್ಲಿ ಆದಾಯ ಕರ ತುಂಬಬೇಕಾದ ಕೊನೆಯ ದಿನ ನಾಳೆ ಎನ್ನುವಾಗ ಬಂದು ಕುತ್ತಿಗೆ ಮೇಲೆ ಕೂಡುತ್ತಾರೆ ಇಂಥವರು. ಆದರೆ, ನಮಗೆ ತಪ್ಪಿದ್ದಲ್ಲ. ನಮ್ಮ ಗ್ರಾಹಕರಿಗೆ ನಿರಾಶೆ ತರಿಸದೆ ರಾತ್ರಿ ಹಗಲು ದುಡಿದು ಅವರ ರಿಟರ್ನ್ ಗಳನ್ನು ತುಂಬಿಸಿ ಕಳಿಸುತ್ತಿರುತ್ತೇವೆ. ಯಾಕೆ ಎಂದರೆ, ಆದಾಯ ಕರದ ರಿಟರ್ನ್ ಗಳನ್ನು ತುಂಬುವುದು ಎಂದರೆ ಬರೀ ಕಾಗದಗಳಲ್ಲಿ ಅಂಕಿ ಸಂಖ್ಯೆಗಳನ್ನು ತುಂಬಿಸುವುದಲ್ಲ. ಅವರ ವರಮಾನವನ್ನು ಎಲ್ಲಾದರೂ ಹೂಡಿಕೆ ಮಾಡಿಸಿ, ಅವರು ತುಂಬ ಬೇಕಾದ ಕರವನ್ನು ಲೆಕ್ಕ ಮಾಡುವುದು ಸಾಧಾರಣ ವಿಷಯವಲ್ಲ. ಎಷ್ಟೋ ತರದ ಲೇವಾದೇವಿಗಳಿರುತ್ತವೆ. ಟ್ಯಾಕ್ಸ್ ಕಟ್ಟಬೇಕೆಂದರೇ ಎಲ್ಲರಿಗೂ ಪಕ್ಕೆಗಳಲ್ಲಿ ನೋವೇ. ಈ ತರದ ವಾತಾವರಣದಲ್ಲಿ ನಮ್ಮ ಕ್ಲಯಿಂಟನ್ನು ಒಪ್ಪಿಸಿ ಸರಕಾರಕ್ಕೆ ಕರವನ್ನು ತುಂಬುವ ಹಾಗೆ ಮಾಡುವುದೇ ನಮ್ಮ ಚಾರ್ಟರ್ಡ್ ಅಕೌಂಟೆಂಟ್ ಗಳ ಕರ್ತವ್ಯ!
ಕುರ್ಚಿಯಿಂದ ಎದ್ದು ಒಮ್ಮೆ ಮೈ ಮುರಿದುಕೊಂಡೆ. ಎರಡು ಹೆಜ್ಜೆ ಆಚೆ ಈಚೆ ನಡೆದರೆ ಮೈ ಹಗುರವಾಗುತ್ತದೆ ಎನಿಸಿ ಎರಡು ಹೆಜ್ಜೆ ಹಾಕಿ ಕಿಟಿಕಿಯ ಹತ್ತಿರ ನಿಂತುಕೊಂಡೆ. ದೂರದ ಕಡಲ ಮೇಲಿಂದ ಗಾಳಿ ಬೀಸುತ್ತಿತ್ತು. ವಿಶಾಖ ಸುಂದರಿ ವಜ್ರವೈಢೂರ್ಯಗಳಿಂದ ಅಲಂಕರಿಸಿಕೊಂಡವಳ ಹಾಗೆ, ಬೀದಿ ದೀಪಗಳ ತೋರಣಗಳಿಂದ ಮೆರೆಯುತ್ತಿದ್ದಳು.
ಕೆಲಸ ದಿಂದ ದೃಷ್ಟಿ ತೆಗೆದಾಗ, ನೆನ್ನೆ ಭಾನುವಾರದ ಪುರವಣಿಯಲ್ಲಿ ನೋಡಿದ ಒಂದು ಕಥೆಯ ತಲೆಬರಹ ಮನಸ್ಸಿನಲ್ಲಿ ಸುಳಿದಾಡಿತು. ಆ ಹೆಸರು ನೋಡಿದಾಗಲಿಂದ ನನಗೆ ಆ ಕಥೆಯನ್ನು ಓದಬೇಕೆನಿಸಿತ್ತು. ಆದರೆ ಈ ರಿಟರ್ನ್ ಗಳ ಒತ್ತಡದಲ್ಲಿ ಓದಲಾಗಿರಲಿಲ್ಲ. ಬಿಡುವಾದಾಗ ಓದ ಬಹುದೆಂದು ಆ ಸಂಚಿಕೆಯನ್ನು ತೆಗೆದು ನನ್ನ ಬ್ರೀಫ್ ಕೇಸಿನಲ್ಲಿ ಹಾಕ್ಕೊಂಡಿದ್ದೆ. ಆದರೆ ಇನ್ನು ವರೆಗೂ ಆಗಿರಲಿಲ್ಲ. ಇವತ್ತು ಓದಿಬಿಡಬೇಕೆಂದುಕೊಂಡೆ.
ಅಷ್ಟರಲ್ಲಿ ತರಬೇತಿ ಪಡೆಯುತ್ತಿದ್ದ ಹುಡುಗ ಎರಡು ಫೈಲನ್ನು ತಂದಾಗ ಅದರ ಕೆಲಸ ಮುಗಿಸುವುದರಲ್ಲಿ ಮತ್ತೊಂದು ಎರಡು ಗಂಟೆ ಕಳೆಯಿತು. ನಮ್ಮ ಗ್ರಾಹಕರು ತೃಪ್ತಿಯ ನಗೆ ನಕ್ಕಾದ ಮೇಲೆ ನಾನು ಸಹ ಮನೆಗೆ ಹೊರಟೆ.
ಗಾಜುವಾಕದಲ್ಲಿನ ನನ್ನ ಮನೆಯನ್ನು ಸೇರುವುದರಲ್ಲಿ ನನ್ನ ಮೈ ಜರ್ಝರಿತವಾಗಿತ್ತು. ಸ್ನಾನ ಮಾಡಿ, ಹಗುರಾದ ಆಹಾರ ತೆಗೆದುಕೊಂಡು ಮಲಗಿದ ತಕ್ಷಣ ಕಣ್ಣು ಮುಚ್ಚಿದ್ದವು. ರಾತ್ರಿ ಮೂರು ಗಂಟೆಯ ಸುಮಾರು ಬಾಯಾರಿಕೆಯಿಂದ ಎಚ್ಚರವಾಯಿತು. ನೀರು ಕುಡಿಯುತ್ತಿರುವಾಗ ಮತ್ತೆ ಆ ಕಥೆಯ ವಿಷಯ ನೆನಪಾಯಿತು. ಮನಸ್ಸು ಸೆಳೆಯುತ್ತಿದ್ದರಿಂದ ನನ್ನ ಬ್ರೀಫ್ ಕೇಸಿನಿಂದ ಆ ಪುರವಣಿಯನ್ನು ಕೈಗೆತ್ತಿಕೊಂಡೆ.
*****************
ಬಾತ್ ರೂಮಿಗೆ ಹೋಗಲು ಎದ್ದ ನನ್ನಾಕೆ, ಕಣ್ಣು ಮುಚ್ಚಿ ಸೋಫಾದಲ್ಲಿ ಕೂತ ನನ್ನನ್ನು ನೋಡಿ, ನನ್ನ ಭುಜದ ಮೇಲೆ ಕೈ ಹಾಕಿ “ ಏನಾಯಿತು ? ಯಾಕೆ ಅಳ್ತಾ ಇದ್ದೀರಿ? ಅದೂ ಈ ಬೆಳಗಿನ ಜಾವ ? ಯಾರಾದರೂ… “ ಎನ್ನುತ್ತ ಸಂಶಯದಿಂದ, ದಿಗುಲಾಗಿ ಕೇಳಿದಳು.
ನಾನು ಬೆಚ್ಚಿ ಬಿದ್ದು “ ಅಳ್ತಾ ಇದ್ದೇನಾ ?” ಅಂತ ಕಣ್ಣು ಒರೆಸಿಕೊಂಡರೆ, ಒದ್ದೆ ತಗುಲಿತು. ನನ್ನವಳ ಕೈಯನ್ನು ತೆಗೆದುಕೊಂಡು ಮೆಲ್ಲಗೆ ಸವರುತ್ತಾ “ ಏನಿಲ್ಲ ಭಾಗ್ಯಾ ! ಒಂದು ಕಥೆ ಓದಿದ್ದೆ. ಮನಸ್ಸೆಲ್ಲ ದುಃಖದಿಂದ ತುಂಬಿ ಹೋಯಿತು. ಅದೇ ಯೋಚನೆ ಮಾಡುತ್ತ ಕಣ್ಣು ಮುಚ್ಚಿದ್ದೆ. ಅಷ್ಟೇ. ನೀನೇನೂ ಆತಂಕ ಪಡ ಬೇಡ. ಯಾರಿಗೂ ಏನೂ ಆಗಿಲ್ಲ” ಎಂದೆ ಸ್ವಲ್ಪ ಸಂಕೋಚದಿಂದ.
ನನ್ನವಳು ಅಚ್ಚರಿಯಿಂದ ನನ್ನ ನೋಡುತ್ತ “ ಕಥೆ ಓದ್ತಾ ಅಳ್ತಿದ್ದೀರಾ ? ನೀವೊಳ್ಳೆ ಮನುಷ್ಯರು ! ಬಂದು ಮಲ್ಕೊಳ್ಳಿ. ಅದೂ ರಾತ್ರಿ ತಡವಾಗಿ ಮಲ್ಗಿದ್ದಿರಿ” ಎನ್ನುತ್ತ ಬೇಜಾರು ಮಾಡಿದಳು.
ಅವಳು ಹೋದ ಮೇಲೆ ನಾನು ಆಲೋಚನೆ ಮಾಡುತ್ತ ಕೂತೆ. ನಿಜವಾಗಿ, ಒಂದು ಕಥೆಯನ್ನು ಓದಿ ದುಃಖಿಸುವಷ್ಟು ಸುನ್ನಿತ ಮನಸ್ಕನಲ್ಲ ನಾನು. ಆದರೆ ಈ ಕಥೆ ಓದಿದ ಮೇಲೆ ನನಗೆ ನನ್ನ ಸೋದರ ಮಾವ ನೆನಪಿಗೆ ಬಂದಿದ್ದ.
****************
ನನ್ನ ಸೋದರ ಮಾವ ಹತ್ತು ವರ್ಷದ ಹಿಂದೆ ಮುನಿಸಿಪಲ್ ಕಮೀಶನರ್ ಆಗಿ ನಿವೃತ್ತರಾಗಿ, ವಿಜಯನಗರದಲ್ಲಿ ವಾಸವಾಗಿದ್ದಾರೆ. ನನ್ನ ಸೋದರ ಮಾವ ಅಂತ ಅನಬಾರದಾಗಲಿ, ಚಂಡಶಾಸನರು, ಮುಕ್ಕೋಪಿ ಆತ. ಆ ನಗರಪಾಲಿಕೆಗಳಲ್ಲಿ, ಕೊಳೆತ ರಾಜಕೀಯದಲ್ಲಿ ತನ್ನ ಕೆಲಸವನ್ನು ಹೇಗೆ ನಿಭಾಯಿಸಿದ್ದರೋ ಆಗಲಿ, ಮನೆಗೆ ಬಂದಾದ ಮೇಲೆ ಸಾಕ್ಷಾತ್ ದುರ್ವಾಸ ಅಪರಾವತಾರವೇ ಎನಿಸುತ್ತಿದ್ದರು. ಮನೆಯವರೆಲ್ಲ ಹೆದರುತ್ತಿದ್ದರು. ಎದುರು ಮಾತಾಡುತ್ತಿರಲಿಲ್ಲ.
ಅಂಥಾ ಮಾವನ ಮನೆಯಲ್ಲಿ ಒಂದು ಬಂಡಾಯವೆದ್ದಿತ್ತು. ಪತಾಕೆ ಹಾರಿಸಿದ್ದು ಅವರ ಮಗಳು ವಸಂತ. ಒಬ್ಬ ಅನ್ಯ ಕುಲಸ್ಥನನ್ನು ಪ್ರೀತಿಸಿ, ಮದುವೆ ಮಾಡಿಕೊಡಲು ಕೇಳಿದ್ದಳು. ನರಸಿಂಹಾವತಾರನಾಗಿದ್ದ ಮಾವ ಒಬ್ಬಳೇ ಮಗಳೆಂದು ಸಹ ನೋಡದೆ ಒಂದು ಕೋಣೆಯಲ್ಲಿ ಹಾಕಿ ಬೀಗ ಜಡಿದಿದ್ದ. ಆದರೆ ಅವರ ಕುಟುಂಬದ ಸದಸ್ಯರೇ ಯಾರೋ ಬೀಗ ತೆಗೆದು, ಬೀದಿಯ ಬಾಗಿಲೂ ತೆಗೆದು ಸಹಕರಿಸಿದ್ದು, ಅವಳು ತಾನು ಪ್ರೀತಿಸದವನ ಜೊತೆಗೆ ಹೊರಟು ಹೋಗಿದ್ದಳು. ಬೆಂಗಳೂರಿನಲ್ಲಿ ಇಬ್ಬರೂ ಒಳ್ಳೆಯ ಕೆಲಸಗಳಲ್ಲಿ ಸ್ಥಿರಪಟ್ಟಿದ್ದರು.
ಮಾವನ ಹುದ್ದೆ ನೋಡಿ ಅಷ್ಟೂ ದಿನ ಬಾಯಿ ಮುಚ್ಚಿದ್ದ ಬಂಧು ಜನವೆಲ್ಲ ಅವರು ನಿವೃತ್ತಿ ಹೊಂದಿ ವಿಜಯನಗರಕ್ಕೆ ತನ್ನ ಶೇಷ ಜೀವನ ಕಳೆಯಲು ಬಂದ ಮೇಲೆ ಅವರ ಮೇಲೆ ಮುಗಿಬಿದ್ದರು. ಓಡಿ ಹೋದ ಮಗಳ ತಂದೆ ಎನ್ನುತ್ತ ಅವರ ಮುಂದೆನೇ ಬೈಗುಳ ಶುರು ಮಾಡಿದ್ದರು. ಮಗಳು ಹೀಗೆ ಮಾಡಿದ್ದರ ಜೊತೆಗೆ ಬಂಧುಗಳೆಲ್ಲ ತನ್ನನ್ನು ಜರಿಯುವುದನ್ನು ಕಂಡ ಮಾವನಿಗೆ ರಕ್ತದೊತ್ತಡ ಜಾಸ್ತಿಯಾಗಿ, ಲಕ್ವ ಹೊಡೆದು, ಮಾತು ಬಿದ್ದು ಹೋಗಿ, ಕಳೆದ ಹತ್ತು ವರ್ಷದಿಂದ ಮಂಚದ ಮೇಲೆ ದಿನ ದೂಡುತ್ತಿದ್ದರು. ಮದುವೆಯಾದಾಗಿನಿಂದಲೂ ತನ್ನ ದುರ್ವಾಸನ ಸಿಟ್ಟಿನಿಂದ ನರಕವನ್ನೇ ತೋರುವುದಲ್ಲದೇ, ತನ್ನ ಒಬ್ಬಳೇ ಮಗಳನ್ನು ದೂರ ಮಾಡಿ ಈ ಮುಪ್ಪಿನಲ್ಲಿ ಒಬ್ಬಂಟಿಗರಾಗಿ ಬದುಕುವಂತೆ ಮಾಡಿದ್ದಕ್ಕೆ ಪ್ರತಿಯಾಗಿ, ಗಂಡನಿಗೆ ಕಾಟಾಚಾರದ ಊಟವನ್ನು ಹಾಕುತ್ತಿದ್ದಳು ನನ್ನ ಅತ್ತೆ. ಎಲ್ಲ ಕೆಲಸಗಳಿಗೂ ಆಳುಗಳಿದ್ದರು. ಆದರೆ ಮಾವನ ಜೊತೆ ಮಾತನಾಡಲು ಯಾರೂ ಇದ್ದಿಲ್ಲ.
ನಾನೇ ಆಗಾಗ ಹೋಗುತ್ತಿದ್ದೆ. ನನ್ನನ್ನು ನೋಡಿ ಕಣ್ಣೀರು ಹಾಕುತ್ತಿದ್ದರು. ಸಂಜೆ ವರೆಗೆ ನಾನು ಆತನ ಜೊತೆ ಕಳೆದು ವೈಜಾಗ್ ಗೆ ಮರಳಿ ಬರುತ್ತಿದ್ದೆ.
**********************
ಈಗ ನಾನು ಓದಿದ ಕಥೆಯಲ್ಲಿ ಕೂಡಾ ಒಬ್ಬತಂದೆ ತನ್ನ ಗೆಳೆಯನ ಸಾವಿನಿಂದ ಪಶ್ಚಾತ್ತಾಪ ಹೊಂದಿ, ತಾನು ಮರಣಿಸುವ ಮುನ್ನ “ಡೆತ್ ಕ್ಲೀನಿಂಗ್” ಮಾಡಿಕೊಳ್ಳಬೇಕೆಂದು ಅಂದರೆ ತಾನು ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಬೇಕೆಂದುಕೊಳ್ಳುವುದು, ಹತ್ತು ವರ್ಷದ ಹಿಂದೆ ಮತಾಂತರ ಮದುವೆ ಮಾಡಿಕೊಂಡು, ದೆಹಲಿಯಲ್ಲಿ ನಿವಾಸ ಮಾಡುತ್ತಿದ್ದ ಮಗಳ ಹತ್ತಿರ ಹೋಗಿ, ಇಷ್ಟೂ ದಿನದ ದುಃಖವೆಲ್ಲ ಕಣ್ಣೀರ ರೂಪದಲ್ಲಿ ಕರಗಿಹೋದಾಗ, ಮಗಳು ಮತ್ತೊ ಮೊಮ್ಮಕ್ಕಳನ್ನು ಮನಸಾ ನೋಡಿಕೊಂಡು ಮತ್ತೆ ವಾಪಸ್ ಬರುತ್ತಾನೆ. ದೀಪಾವಳಿಯ ಹಬ್ಬಕ್ಕೆ ಮಗಳು, ಅಳಿಯ, ಮಕ್ಕಳು ಮನೆಗೆ ಬಂದಾಗ ದಿಗುಲಾಗಿದ್ದ ಆ ತಾಯಿಯ ಮುಖ ಬೆಳಗುತ್ತದೆ. ತಂದೆ “ ಇಷ್ಟು ಸಾಕು ನನ್ನ ಬದುಕಿನಲ್ಲಿ” ಅಂತ ಅಂದುಕೊಳ್ಳುವುದರಲ್ಲಿ ಕಥೆ ಮುಗಿಯುತ್ತದೆ.
ಎರಡು ಪೇಜಿನ ಸಣ್ಣ ಕತೆಯೇ ಆದರೂ, ಅಣುಬಾಂಬಿನಂತಹ ಜೀವನದ ಸತ್ಯವನ್ನು ಹೇಳಿದ ಕಥೆಗೆ, ಬರೆದವರಿಗೆ ಮನಸ್ಸಿನಲ್ಲೇ ಧನ್ಯವಾದ ತಿಳಿಸಿದೆ.
ಯಾಕೋ ನನಗೆ ಈ ಕಥೆಯನ್ನು ಮಾವನಿಂದ ಓದಿಸಬೇಕೆನ್ನುವ ಗಾಢವಾದ ಬಯಕೆಯಾಯಿತು. ಬೆಳೆಗ್ಗೆ ನನ್ನ ಡ್ರೈವರನನ್ನು ಕರೆದು, ಆ ಪುಸ್ತಕವನ್ನು ವಿಜಯನಗರಕ್ಕೆ ಕಳಿಸಿದೆ. ಮಾವನಿಗ್ ಫೋನ್ ಮಾಡಿ ಆ ಕತೆಯನ್ನು ಓದಲು ಹೇಳಿದೆ.
******************
ಆ ದಿನ ರವೀಂದ್ರ ಭಾರತಿಯ ಮೊದಲ ಅಂತಸ್ತಿನ ಸಭಾಂಗಣ ಜನ ಭರಿತವಾಗಿತ್ತು. ನಾನು ನನ್ನವರ ಕಡೆಗೆ ನೋಡಿದೆ. “ಹೇಗಾದರೂ ವೇದಿಕೆ ಹತ್ತ ಬೇಕು” ಅಂತ ಅವರ ಮುಖಗಳಲ್ಲಿಯ ನಿರ್ಧಾರ ಕಂಡೆ.
ವೇದಿಕೆಯ ಮೇಲೆ ಸಾಹಿತ್ಯ ಕ್ಷೇತ್ರದ ಅತಿರಥ ಮಹಾರಥರು ಆಸೀನರಾಗಿದ್ದರು. ಸಭೆ ಮುಗಿಯುವ ಹೊತ್ತಾದಾಗ ನಮ್ಮಲ್ಲಿ ಆತಂಕ ಶುರುವಾಯಿತು. ನಾವು ಮೆಲ್ಲಕ್ಕೆ ಜನರನ್ನು ಸರಿಸುತ್ತಾ, ವೀಲ್ ಚೇರನ್ನು ತಳ್ಳುತ್ತಾ ಸಭಾಸ್ಥಳದ ಹತ್ತಿರ ಹೋದೆವು.
ವೀಲ್ ಚೇರಿನ ಮೇಲಿರುವ ನನ್ನ ಮಾವನನ್ನು, ನಮ್ಮನ್ನು ನೋಡಿದರು ಅಲ್ಲಿಯ ನಿರ್ವಾಹಕರು. ನಾನೇ ಮುಂದುವರೆದು “ ಸಾರ್ ! ನನ್ನ ಮಾವ ಇವರು. ನಿವೃತ್ತ ಮುನಿಸಿಪಲ್ ಕಮೀಷನರ್. ವಿಜಯನಗರದಲ್ಲಿರುತ್ತಾರೆ. ಇಂದಿನ ಸಭೆಯ ಬಗ್ಗೆ ತಿಳಿದು, ತಮ್ಮ ಅನಾರೋಗ್ಯವನ್ನು ಲೆಕ್ಕಿಸದೆ ಒಂದೆರಡು ಮಾತು ಹೇಳಲು ಬಂದಿದ್ದಾರೆ. ದಯವಿಟ್ಟು ಒಂದೈದು ನಿಮಿಷ ಮಾತಾಡಲು ಅನುವು ಮಾಡಿಕೊಡಿ.” ಎಂದೆ.
ಅವರಲ್ಲೇ ಮಾತಾಡಿಕೊಂಡು, ಒಬ್ಬ ನಿರ್ವಾಹಕರು ಬಂದು “ ಯಾವುದರ ಬಗ್ಗೆ ಮಾತಾಡುತ್ತಾರೆ ?” ಎಂದು ಪ್ರಶ್ನಿಸಿದರು.
“ ಇಂದಿನ ಸಭೆಯ ವಿಷಯವೇ ! ದಯವಿಟ್ಟುಸಾರ್ ! ಅವರಿಗೆ ಅನಾರೋಗ್ಯ. ಆದರೂ ವಿಜಯನಗರದಿಂದ ಕಾರಿನಲ್ಲಿ ಬಂದಿದ್ದೇವೆ.” ಎಂದು ಗೋಗರಿದೆ.
ಅವರಿಗೆ ಮಾವ ಏನು ಮಾತಾಡ ಬಹುದೋ ಎನ್ನುವ ಕುತೂಹಲ ಹುಟ್ಟಿ “ಆಗಲಿ “ ಎಂದು ಒಪ್ಪಿದರು.
ಕಷ್ಟದಲ್ಲಿ ಮಾವನನ್ನು ವೇದಿಕೆ ಮೇಲಕ್ಕೆ ಹತ್ತಿಸಿ, ಅವರ ವೀಲ್ ಚೇರಿಗೆ ಅನುವಾಗಿ ಮೈಕ್ ಸರಿಮಾಡಿದೆವು. ಮಾವ ವೇದಿಕೆ ಮೇಲೆ ಕುತಿರುವ ಒಬ್ಬ ವ್ಯಕ್ತಿಯ ಕಡೆಗೆ ತಿರುಗಿ ನಮಸ್ಕರಿಸಿ “ ಸಾರ್ ! ನಾನ್ಯಾರೋ ನಿಮಗೆ ಗೊತ್ತಿಲ್ಲ. ನನ್ನ ಹೆಸರು ರಾಮಾಚಾರಿ. ಮುನಿಸಿಪಲ್ ಕಮೀಷನರ್ ಆಗಿ ಕೆಲಸ ಮಾಡಿ ರಿಟೈರ್ ಆಗಿದ್ದೇನೆ. ಕೆಲಸದಲ್ಲಿದ್ದಾಗ ಎಲ್ಲರ ಜೊತೆಗೆ ಮೂರ್ಖತನದಿಂದ, ಕಠಿನವಾಗಿ, ಸಿಟ್ಟಿನಿಂದ ನಡೆದುಕೊಂಡಿದ್ದೆ. ಅದಕ್ಕೇ ಇರಬಹುದು. ಹತ್ತು ವರುಷದ ಕೆಳಗೆ ಲಕ್ವಾ ಹೊಡೆದು ಕೈಕಾಲು, ಮಾತು ಬಿದ್ದುಹೋದವು. ಆದರೆ, ಕಳೆದ ಎರಡು ತಿಂಗಳಿನಿಂದ ನನ್ನ ಆರೋಗ್ಯ ಸುಧಾರಿಸುತ್ತಿದೆ. ಮಾತಾಡಲಿಕ್ಕಾಗುತ್ತಿದೆ. ಕೈಕಾಲು ಸ್ವಾಧೀನಕ್ಕೆ ಬರುತ್ತಿವೆ. ಅದಕ್ಕೂ ಮುಂಚೆ ಪ್ರತಿ ದಿನ “ ಸತ್ತರೆ ಸಾಕು. ನನ್ನ ಈ ನರಳಿಕೆಯಿಂದ ವಿಮುಕ್ತಿ ಸಿಕ್ಕರೆ ಸಾಕು” ಎಂದುಕೊಳ್ಳುತ್ತ ಜೀವನ ಕಳೆದೆ. ಆದರೆ ಎರಡು ತಿಂಗಳಿಂದ ಜೀವನದ ಮೇಲೆ ಮತ್ತೆ ಆಸೆ ಮೊದಲಾಗಿದೆ. ಅದಕ್ಕೆ ಕಾರಣ ಮಾತ್ರ ನೀವೇ “ ಎನ್ನುತ್ತ ವೇದಿಕೆ ಮೇಲಿನ ವ್ಯಕ್ತಿಯನ್ನು ನೋಡುತ್ತ ಕಂಬನಿ ಒರೆಸಿಕೊಂಡರು.
ಅದನ್ನು ಕೇಳಿದ ಆ ವ್ಯಕ್ತಿ ನನ್ನ ಮಾವನ ಹತ್ತಿರ ಬಂದು “ ಅಯ್ಯೋ ! ಅಳಬೇಡಿ ! ನಾನೇನು ಮಾಡಿದೆ ? ಇಷ್ಟಕ್ಕೂ ನಡೆದಿದ್ದಾದರೂ ಏನು? “ ಅಂತ ಕೇಳಿದರು. ಮಾವ ಅವರ ಕೈ ಹಿಡಿದುಕೊಂಡು “ ಸಾರ್ ! ಇವು ಕಣ್ಣಿರಲ್ಲ. ಆನಂದಾಶ್ರುಗಳು ಸಾರ್ ! ನಿಮ್ಮ ಕೈಗಳನ್ನೊಮ್ಮೆ ಮುತ್ತಿಡ ಬಹುದಾ ! ಅನುಮತಿಸಿ “ ಎನ್ನುತ್ತ ಅವರ ಕೈಗಳನ್ನು ತುಟಿಗೆ ಒತ್ತಿಕೊಂಡರು.
ಎಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದರು. ನನ್ನ ಮಾವನ ತಲೆ ಕೆಟ್ಟಿಲ್ಲ ತಾನೇ ಎನ್ನುವ ನೋಟ ತುಂಬಾ ಜನರ ಕಣ್ಣಲ್ಲಿತ್ತು.
“ ಸಾರ್ ! ನನ್ನ ಅಳಿಯ ಶಿವಪ್ರಸಾದ ರಾವ್ ವೈಜಾಗ್ ನಲ್ಲಿ ಚಾರ್ಟರ್ಡ್ ಅಕೌಂಟೆಂಟ್. ಎರಡು ತಿಂಗಳ ಹಿಂದೆ ನನಗೆ ಒಂದು ಪುಸ್ತಕ ಕಳಿಸಿದ. ಅದರಲ್ಲಿ ನೀವು ಬರೆದ ಆ ಕಥೆಯನ್ನು ಓದಿದೆ. ಏನ್ ಕಥೆ ಸಾರ್ ಅದು ! ಜೀವನದ ಸಾರವನ್ನೆಲ್ಲ ಕಾಸಿ ಸೋಸಿ ಎರಡು ಪೇಜುಗಳಲ್ಲಿ ಕುಗ್ಗಿಸಿ, ಮನುಷ್ಯ ತನ್ನ ಜೀವನದಲ್ಲಿ ಏನು ಮಾಡಬೇಕು ಏನು ಮಾಡ ಬಾರದು ಎನ್ನುವುದನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ. “ಡೆತ್ ಕ್ಲೀನಿಂಗ್” ಎಂದರೆ ಸಾಯುವ ಮೊದಲು ನಾವು ನಮ್ಮ ಜೀವನವನ್ನು ಹೇಗೆ ಸರಿಪಡಿಸಿಕೊಳ್ಳಬೇಕೋ ಹೇಳಿದ್ದೀರಿ. ಆ ಕ್ಷಣದಲ್ಲೇ ನನಗೆ ಜ್ಞಾನೋದಯವಾಯಿತು. ನೀವು ಸಾಕ್ಷಾತ್ ಬುದ್ಧಭಗವಾನನ ರೀತಿಯಲ್ಲಿ ನನ್ನಲ್ಲಿಯ ಸಂಶಯಗಳನ್ನೆಲ್ಲ ಆ ಚಿಕ್ಕ ಕಥೆಯಿಂದ ತೀರಿಸಿದಿರಿ. ಸಾರ್ ! ಆ ಕಥೆಯಲ್ಲಿಯ ತರಾನೇ ನಾನು ಸಹ, ನನ್ನ ಮೂರ್ಖತನದಿಂದ ನನ್ನ ಒಬ್ಬಳೇ ಮಗಳನ್ನು ದೂರ ಮಾಡಿಕೊಂಡಿದ್ದೆ. ಆ ಕಥೆಯನ್ನು ಓದಿದ ಮರುಕ್ಷಣವೇ ನಾನು ನನ್ನ ತಪ್ಪನ್ನು ತಿದ್ದಿಕೊಳ್ಳ ಬೇಕೆಂದು ನಿರ್ಣಯಿಸಿದೆ. ಹದಿನೈದು ವರ್ಷದ ಹಿಂದೆ ನನ್ನನ್ನು ಬಿಟ್ಟು ಹೋದ ನನ್ನ ಮಗಳ ಹತ್ತಿರಕ್ಕೆ ರೆಕ್ಕೆ ಕಟ್ಟಿಕೊಂಡು ಹಾರಿ ಹೋಗಿ, ನನ್ನ ಕಣ್ಣೀರಲ್ಲಿ ಅವಳ ಕಾಲು ತೊಳೆದು ನನ್ನ ಮನೆಗೆ ಕರೆದುಕೊಂಡು ಬಂದೆ. ಅವಳು ಬಂದಾಗನಿಂದ ಹತ್ತು ವರ್ಷದಿಂದ ಮೂಕದಾದ ನನ್ನ ಗಂಟಲು ಜೀವಂತವಾಗಿ ಇಕೋ ನೋಡಿ ಇಷ್ಟು ಮಾತಾಡುತ್ತಿದ್ದೇನ. ನನ್ನ ಜೀವನದಲ್ಲಿ ನಾನು ನೋಯಿಸಿದವರನ್ನೆಲ್ಲ, ಮುಖ್ಯವಾಗಿ ನನ್ನ ಹೆಂಡತಿಯನ್ನ ಮತ್ತು ಮಗಳನ್ನ ಮನ್ನಿಸೆಂದು ಬೇಡಿಕೊಂಡೆ. ಇನ್ನೂ ಆ ಪ್ರಯತ್ನ ನಡೆದಿದೆ. ನಾನು ನನ್ನ ತಪ್ಪುಗಳಿಗೆ ಕ್ಷಮೆಯಾಚಿಸಿದಷ್ಟೂ ನನ್ನ ಆರೋಗ್ಯ ದಿನೇ ದಿನೇ ಸುಧಾರಿಸುತ್ತಿದೆ.
ಇಷ್ಟರಲ್ಲಿ ನಿಮ್ಮ ಕಥೆಗೆ ಪ್ರಶಸ್ತಿ ಬಂದಿದೆಯಿಂದೂ, ಆ ಸಂದರ್ಭವಾಗಿ ನಿಮಗೆ ಇಲ್ಲಿ ಸತ್ಕರಿಸುತ್ತಿದ್ದಾರೆಂದು ತಿಳಿದು ಬಂತು. ನಿಮಗೆ ಒಂದು ಪತ್ರ ಬರೆದು ಕೃತಜ್ಞತೆ ತಿಳಿಸ ಬೇಕೆಂದಿದ್ದೆ. ಆದರೆ ನನ್ನಲ್ಲಿ ಇಷ್ಟು ದೊಡ್ಡ ಬದಲಾವಣೆ ತಂದ ನಿಮಗೆ ಒಂದು ಚಿಕ್ಕ ಪತ್ರ ಬರೆದರೇ ಸಾಕಾಗುತ್ತದೆಯೇ ! ಅದು ನಿಮಗೆ ಸಿಗದೇ ಇರಬಹುದು, ಅದಕ್ಕೆ ನಾನೇ ಸ್ವತಃ ಬಂದು ನಿಮ್ಮನ್ನು ಕಂಡು, ನಿಮ್ಮ ಕೈಗಳನ್ನು ಮುಟ್ಟ ಬೇಕೆಂದು ಬಂದೆ. ಅಕೋ ಅಲ್ಲಿ ನೋಡಿ ಅಲ್ಲಿ ನಿಂತಿದ್ದಾಳಲ್ಲ ಅವಳೇ ನನ್ನ ಮಗಳು. ನನ್ನನ್ನು ಕ್ಷಮಿಸಿ,ಈ ಮುಪ್ಪಿನ ವಯಸ್ಸಿನಲ್ಲಿ ನನ್ನ ಜೊತೆ ಇರಲು ಬಂದಿದ್ದಾಳೆ. ನನ್ನ ಹೆಂಡತಿ, ನನ್ನ ಸೋದರಳಿಯ ಅವಳ ಪಕ್ಕದಲ್ಲೇ ಇದ್ದಾರೆ. ನಮ್ಮ ಕುಟುಂಬವೆಲ್ಲ ನಿಮಗೆ ಋಣಗ್ರಸ್ತರಾಗಿದ್ದೇವೆ ಸಾರ್ ! “ ಎನ್ನುತ್ತ ನನಗೆ ಸಂಜ್ಞೆ ಮಾಡಿದರು.
ನಾನು ವೇದಿಕೆಯ ಮೇಲೆ ಬರ ತೊಡಗಿದಾಗ, ಆ ಬರಹಗಾರ ನನ್ನ ಅತ್ತೆಯನ್ನು, ಅವರ ಮಗಳನ್ನೂ ಕರೆದು ತರಲು ಹೇಳಿದರು. ಮಾವ ಅವರಿಗೋಸ್ಕರ ವಿಶೇಷವಾಗಿ ತರೆಸಿದ ಚಿನ್ನದ ಪೆನ್ನನ್ನು ನೀಡಿ, ಶಾಲು ಹೊದೆಸಿ ನಮಸ್ಕಾರ ಮಾಡಿದರು.
ಈ ತರದ ಸನ್ನಿವೇಶ ಎಂದೂ ಕಾಣದ ವೇದಿಕೆಯ ಮೇಲಿನ ಗಣ್ಯರು, ಪ್ರೇಕ್ಷಕರೂ ಕರತಾಡನದೊಂದಿದೆ ತಮ್ಮ ಹರ್ಷವನ್ನು ವ್ಯಕ್ತ ಪಡಿಸಿದರು.
ಈ ಅನೂಹ್ಯ ಸನ್ನಿವೇಶದಿಂದ ಹೊರಬಂದ ಬರಹಗಾರರು ಮಾತನಾಡುತ್ತ “ ಸತ್ಯಕ್ಕೂ ಇದೊಂದು ಮರೆಯಲಾರದ ದಿನ. ನನಗೆ ಇದರ ಬಗ್ಗೆ ಏನು ಮತ್ತು ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ನಾನು ಬರೆದ ಕಥೆ ಒಬ್ಬ ಮನುಷ್ಯನ ಜೀವನವನ್ನು ಹೀಗೆ ಪ್ರಭಾವಿತ ಮಾಡಿ, ಅವರಲ್ಲಿ ಬದಲಾವಣೆ ತಂದಿದೆ ಎನ್ನುವುದು ನನ್ನಲ್ಲಿ ಸಂಭ್ರಮಾಶರ್ಯಗಳನ್ನು ಮೂಡಿಸುತ್ತಿದೆ. ನಾವೆಲ್ಲ “ ವಿಶ್ವ ಶ್ರೇಯಃಕಾವ್ಯಂ “ ಎಂದು ಕಾವ್ಯದ ಪ್ರಯೋಜನದ ಬಗ್ಗೆ ಹೇಳಿಕೊಳ್ಳುತ್ತೇವೆ. ಈ ಘಟನೆ ನೋಡುವಾಗ ಅದು ನಿಜವೆನಿಸುತ್ತದೆ. ಆದರೆ ಇಲ್ಲಿ ನಡೆದಿದ್ದು ಏನೆಂದರೆ ನನ್ನ ಕಥೆಯಿಂದ ಶ್ರೇಯ ಪಡೆದು, ತಾವೇ ಬದಲಾಗಿ, ಈ ವಯಸ್ಸಿನಲ್ಲಿ ವಿಜಯನಗರದಿಂದ ಹೈದರಾಬಾದಿನ ವರೆಗೆ ಬಂದ ಈ ಓದುಗರು ನನಗೆ ಸತ್ಕಾರ ಮಾಡುವುದು ಸೋಜಿಗವೆನಿಸುತ್ತದೆ. ಒಬ್ಬ ಬರಹಗಾರನಿಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ ! ಇದು ನನ್ನ ಪೂರ್ವ ಜನ್ಮದ ಸುಕೃತವೆನಿಸುತ್ತಿದೆ. ಇದು ನನಗೆ ಸಂದ ಗೌರವವಲ್ಲ. ಸಾಹಿತ್ಯದ ಹಿರಿತನ. ಒಳ್ಳೆಯ ಸಾಹಿತ್ಯವನ್ನು ಜನ ಎಂದಿಗೂ ಆದರಿಸುತ್ತಾರೆ, ಆಚರಿಸುತ್ತಾರೆ ಎನ್ನುವುದಕ್ಕೆ ಒಂದು ಒಳ್ಳೆ ಉದಾಹರಣೆ. ಆದರೆ ಇಲ್ಲಿ ನನ್ನದೊಂದು ಚಿಕ್ಕ ಮನವಿ ಇದೆ. ನಾನು ಇಷ್ಟು ಬೆಲೆ ಬಾಳುವ ಬಹುಮಾನ ಸ್ವೀಕರಿಸಲಾರೆ. ಇದಕ್ಕಿಂತ ಎಷ್ಟೋ ಪಟ್ಟು ಬೆಲೆ ಬಾಳುವ ಮಧುರಾನುಭೂತಿಯನ್ನು ನೀವು ನನ್ನಗೆ ಕೊಟ್ಟಿದ್ದೀರಿ. ಆದಕಾರಣ ನನ್ನ ಹೆಸರಿನ ಮೇಲೆ ಇದರ ಹಣವನ್ನು ಬಡ ವಿದ್ಯಾರ್ಥಿಗಳ ಓದಿಗೆ ಕೊಡಿ ಎಂದು ಕೇಳಿಕೊಳ್ಳುತ್ತೇನೆ.” ಎನ್ನತ್ತ ತಮ್ಮ ಪ್ರಸಂಗವನ್ನು ಮುಗಿಸಿದ ಹತ್ತು ನಿಮಿಷಗಳಲ್ಲಿ ಸಭೆ ಮುಕ್ತಾಯವಾಯಿತು.
ಸಭೆಯ ನಂತರ ಎಲ್ಲರೂ ಮಾವನ ಸುತ್ತು ನೆರೆದರು. ಅಂದಿನ ಸಭೆ ತುಂಬಾ ಜನಕ್ಕೆ ತುಂಬಾ ದಿನ ನೆನಪಿನಲ್ಲಿರುತ್ತಿತ್ತು. ನಿರ್ವಾಹಕರ ಕರೆಯ ಮೇರೆಗೆ ರವೀಂದ್ರ ಭಾರತಿಯ ಪಕ್ಕದಲ್ಲಿರುವ ಕಾಮತ್ ಹೋಟೆಲ್ ನಲ್ಲಿ ಊಟ ಮುಗಿಸಿ, ಎಲ್ಲರನ್ನೂ ಬೀಳ್ಕೊಂಡು ಮಾವನನ್ನು ಹತ್ತಿರದ ನೆಂಟರೊಬ್ಬರ ಮನೆಗೆ ಕರೆದುಕೊಂಡು ಹೊರಟೆ. ಇದಕ್ಕೂ ಮುಂಚೆ ಮಾವ ಯಾವ ನೆಂಟರನ್ನೂ ಹತ್ತಿರ ಬರಲು ಬಿಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ತುಂಬಾ ಬದಲಾಗಿದ್ದರು.
ಕಾರಿನಲ್ಲಿ ಅವರ ಮನೆಗೆ ಹೋಗುತ್ತಿರ ಬೇಕಾದರೆ, ನನ್ನ ಮನಸ್ಸು ಎರಡು ತಿಂಗಳ ಕೆಳಗೆ ನಡೆದ ಘಟನೆಯನ್ನು ನೇವರಿಸಿದಾಗ ನಾನು ಅದರ ಗುಂಗಿಗೆ ಜಾರಿದೆ.
“ಆ ದಿನ ನಾನು ಮಾವನಿಗೆ ಆ ಕಥೆಯನ್ನು ಓದಲು ಕಳಿಸಿದ ಮೇಲೆ, ಮರುದಿನ ಬೆಳೆಗ್ಗೆ “ ಅರ್ಜೆಂಟಾಗಿ ಬರಲು” ಫೋನ್ ಬಂತು. ಆ ದಿನ ಭಾನುವಾರವಾದ್ದರಿಂದ ವಿಜಯನಗರಕ್ಕೆ ಹೊರಟೆ. ನನ್ನನ್ನು ನೋಡಿದ ತಕ್ಷಣ ಮಾವ ಕಣ್ಣೀರು ಹಾಕಿದ. ಅದು ನನಗೆ ಸಾಧಾರಣವಾಗಿತ್ತು. ಆದರೆ ಬದಲಾವಣೆ ಎಂದರೆ, ಅತ್ತೆ ಅವರ ಪಕ್ಕಕ್ಕೇ ಕೂತು ಕಾಲು ಒತ್ತುತ್ತಿದ್ದರು. ಕಳೆದ ಹತ್ತು ವರ್ಷದಿಂದ ಮಾವನ ಕಡೆಗೆ ಕಣ್ಣಿತ್ತಿಯೂ ನೋಡದ ಅತ್ತೆ ಇಂದು ಅವರ ಮಂಚದ ಮೇಲೆ ಕೂತಿರುವುದಲ್ಲದೇ ಅವರ ಕಾಲು ಒತ್ತುತ್ತಿದ್ದುದು ಅಪರೂಪ ದೃಶ್ಯವಾಗಿ ಕಂಡಿತು. ನಾನು ಮಾವನ ಕಡೆಯ ನೆಂಟನಾದ್ದರಿಂದ ಅತ್ತೆ ನನ್ನ ಸಹ ಅಸಡ್ಡೆಯಿಂದಲೇ ಕಾಣುತ್ತಿದ್ದರು. ಆದರೆ ಇವತ್ತು ನನ್ನನ್ನು ನೋಡುತ್ತಲೇ ಎದ್ದು ನಿಂತು “ ಬಾ ಶಿವಾ ! ನೀನು ಕಳಿಸಿದ ಕಥೆ ಓದಿದಂದಿನಿಂದ ಕಣ್ಣೀರ ಕೋಡಿ ಹರಿಸುತ್ತಿದ್ದಾರೆ. ನನ್ನನ್ನು ಹತ್ತಿರಕ್ಕೆ ಕರೆದು ಕ್ಷಮಿಸಬೇಕೆನ್ನುವ ಹಾಗೆ ಕೆನ್ನೆಗೆ ಬಾರಿಸಿಕೊಳ್ಳುತ್ತಿದ್ದಾರೆ. ನನಗೇನು ಮಾಡಬೇಕೋ ತಿಳಿಯದೇ ನಿನ್ನನ್ನು ಕರೆಸಿದೆ. ಆ ಕಥೆಯನ್ನು ನಾನೂ ಓದಿದೆ. ಮಗಳನ್ನು ಭೇಟಿಯಾದ ನಂತರ ಪಡೆದ ಸಂತೋಷ, ಹಾಗೆ ಸನ್ನಿವೇಶಕ್ಕೆ ತಕ್ಕ ಹಾಗೆ ಹೊಂದಿಕೊಂಡು ಹೋಗಬೇಕೆಂದು ಹೇಳಿದ್ದು ನನಗೂ ಹಿಡಿಸಿತು. ನಿಮ್ಮ ಮಾವ ಏನಾದ್ರೂ ವಸಂತಳನ್ನು ಭೇಟಿ ಮಾಡಬೇಕಂತಿದ್ದಾರಾ? ಇಷ್ಟ ವರ್ಷಗಳ ನಂತರ ಅವಳನ್ನು ಮನೆಗೆ ಕರೆತರಬೇಕು ಅಂತ ಅಂದ್ಕೊಳ್ತಿದ್ದಾರಾ? ನೀನು ಸ್ವಲ್ಪ ತಿಳಿದುಕೊಂಡು ಹೇಳಪ್ಪಾ! ನನ್ನ ಹೊಟ್ಟೆ ತಣ್ಣಗೆ ಮಾಡು. ಒಂದು ವೇಳೆ ಅದೇ ನಿಜವಾದರೆ ಇಷ್ಟು ದಿನಕ್ಕೆ ನಾವು ಅನುಭವಿಸುತ್ತಿದ್ದ ಒಂದು ಸಮಸ್ಯೆಗೆ ಪರಿಹಾರ ಸಿಕ್ಕಂತಾಗತ್ತದೆ “ ಅಂತ ಒಂದೇ ಉಸಿರಲ್ಲಿ ಹೇಳಿದರು.
ನಾನು ಮಾವನ ಕಡೆಗೆ ನೋಡ್ತಾ “ ಹೌದಾ ಮಾವಾ ? ವಸಂತಳ ಹತ್ತಿರಕ್ಕೆ ಹೋಗೋಣ್ವಾ ? ಈ ಪರಿಸ್ಥಿತಿಯಲ್ಲಿ ನಿನಗೆ ಬರಲಿಕ್ಕೆ ಆಗುತ್ತದಾ ?” ಅಂತ ಕೇಳಿದೆ.
“ ಬರ್ತೇನೆ. ನಾಳೆನೇ ಹೋಗೋಣ” ಎನ್ನುವ ಹಾಗೆ ಸಂಜ್ಞೆ ಮಾಡಿದರು.
“ ಸರಿ. ಹಾಗಾದ್ರೆ ಡಾಕ್ಟರ್ ಹತ್ತಿರ ಮಾತಾಡ್ತೀನಿ” ಎನ್ನುತ್ತ ಹೊರ ನಡೆದೆ.
ಆದರೆ ಮಾವ ಕಥೆಯಲ್ಲಿದ್ದಂತೆ ಬೆಂಗಳೂರಿಗೆ ಹೋಗಿ ವಸಂತಳಿಗೆ ಸರ್ ಪ್ರೈಜ್ ಕೊಡಬೇಕೆಂದುಕೊಂಡದ್ದು ಆಗುವುದು ಕಷ್ಟವೆನಿಸಿತ್ತು. ಅಲ್ಲಿಯ ಪರಿಸ್ಥಿತಿ ಹೇಗಿದೆಯೋ ಅಂತ ತಿಳಿದುಕೊಳ್ಳಲಿಕ್ಕೆ ಹೊರಬಂದು ವಸಂತಳಿಗೆ ಫೋನ್ ಕಲಿಸಿದೆ. ಅವರಿಬ್ಬರ ನಡುವೆ ಮಾತುಕತೆ ಇಲ್ಲದಿದ್ದರೂ ವಸಂತ ನನಗೆ ತಿಂಗಳಿಗೊಮ್ಮೆ ಪೋನ್ ಮಾಡಿ ಅಪ್ಪ ಅಮ್ಮನ ಕ್ಷೇಮ ಸಮಾಚಾರ ತಿಳಿಯುತ್ತಿದ್ದಳು. ಅದಕ್ಕೆ ನಾನು ಫೋನ್ ಮಾಡಿ ವಿಷಯ ತಿಳಿಸಿದ ತಕ್ಷಣ ವಸಂತ ಕಣ್ಣೀರು ಹಾಕ್ತಾ “ ನಿಜವಾಗ್ಲೂ ಅಪ್ಪ ಬರ್ತೀನಂದ್ರಾ ?” ಅಂತ ಎರಡೆರಡು ಬಾರಿ ಕೇಳಿದಳು. ನಾನು ಹೌದೆಂದಾಗ ಅವಳ ಸಂತೋಷಕ್ಕೆ ಮಿತಿ ಇರಲಿಲ್ಲ.
ನಾನು ಡಾಕ್ಟರ್ ಹತ್ರ ಮಾತಾಡಿ ಅದೇ ದಿನ ಅತ್ತೆ, ಮಾವನ ಜೊತೆ ವೈಜಾಗಿಗೆ ಬಂದು, ನಮ್ಮ ಮನೆಯಲ್ಲಿ ಆ ರಾತ್ರಿ ಮಲಗಿ, ಮರುದಿನ ಬೆಳೆಗ್ಗೆ ಬೆಂಗಳೂರಿಗೆ ವಿಮಾನ ಹತ್ತಿದ್ದೆ.
ನಮಗಾಗಿ ಕಾಯುತ್ತಿದ್ದ ವಸಂತ, ವೀಲ್ ಚೈರ್ ನಿಂದ ಇಳಿಸುತ್ತಿದ್ದ ಅಪ್ಪನನ್ನು ನೋಡಿ ಜೋರಾಗಿ ಅತ್ತಳು. ಅವರಮ್ಮನನ್ನು ಅಪ್ಪಿದಳು. ಮಾವ ತನ್ನನ್ನು ಕ್ಷಮಿಸು ಎನ್ನುವ ಹಾಗೆ ಕೈ ಜೋಡಿಸುತ್ತಿದ್ದದ್ದು ನೋಡಿ, ಅವರ ಕೈಗಳನ್ನು ಹಿಡಿದು ಕಣ್ಣಿಗೊತ್ತಿಕೊಂಡಳು. ಎಲ್ರೂ ಮನೆಯೊಳಗೆ ಹೋದೆವು.
ನಾನು ಅದೇ ದಿನ ಸಂಜೆ ವೈಜಾಗಿಗೆ ವಾಪಸ್ ಬಂದೆ. ಅವರಿಬ್ಬರು ಮಾತ್ರ ಒಂದು ವಾರ ಬೆಂಗಳೂರಿನಲ್ಲಿದ್ದು ವಿಜಯನಗರಕ್ಕೆ ಹೋಗ್ತಾ ನಮ್ಮ ಮನೆಗೆ ಬಂದಿದ್ದರು. ವಸಂತಳು ಕಳಿಸಿದ ಮೈಸೂರು ಸಿಲ್ಕ್ ಸೀರೆಯನ್ನು ಹಣ್ಣು, ಹೂವು, ಅರಿಶಿಣ, ಕುಂಕುಮಗಳ ಜೊತೆಗೆ ನನ್ನಾಕೆಗೆ ಕೊಟ್ಟರು. ಹತ್ತು ವರ್ಷದ ನಂತರ ಮಾವ, ಅತ್ತೆ ನಮ್ಮ ಮನೆಗೆ ಬಂದು, ನನ್ನಾಕೆಗೆ ಅರಿಶಿಣ ಕುಂಕುಮ ಕೊಟ್ಟು ಹರಿಸಿದ್ದು ನನಗೆ ತುಂಬಾ ತೃಪ್ತಿ ತಂದಿತ್ತು.
ಮಾವನ ಮುಖದಲ್ಲಿ ಸಹ ಒಂದು ರೀತಿಯ ಆನಂದ ಕಂಡಿತ್ತು ನನಗೆ. ಅದಾದ ಎರಡು ತಿಂಗಳಲ್ಲಿ ಔಷಧಿ ಕೆಲಸ ಮಾಡಿ ಆರೋಗ್ಯ ಸುಧಾರಿಸಿತು. ಫಿಜಿಯೋ ಥೆರಪಿ ಸಹ ತುಂಬಾ ಸಹಾಯ ಮಾಡಿತ್ತು. ಇಷ್ಟರಲ್ಲಿ ಮಾವನ ಜೀವನದ ದೃಷ್ಟಿಕೋನವನ್ನು ಬದಲಾಯಿಸಿದ ಆ ಕಥೆಗೆ ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದ್ದು, ಆ ಬರಹಗಾರರಿಗೆ ಸತ್ಕಾರ ಮಾಡುವ ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡು ಮಾವ ಹಠ ಮಾಡಿ ನನ್ನನ್ನು ಹೈದರಾಬಾದಿಗೆ ಕರೆ ತಂದಿದ್ದರು.”
ಅಷ್ಟರಲ್ಲಿ ಕಾರು ಅವರ ಮನೆ ಮುಂದೆ ನಿಂತದ್ದರಿಂದ ನಾನು ನನ್ನ ಆಲೋಚನೆಗಳಿಂದ ಹೊರಬಂದೆ. ಇವತ್ತಿನ ಘಟನೆ ಮಾವನ ಹೊಸ ರೂಪವನ್ನು ತೋರಿತ್ತು.
*************
ಮಾವನ ಮಗಳನ್ನು ಮರುದಿನ ಬೆಂಗಳೂರಿಗೆ ವಿಮಾನ ಹತ್ತಿಸಿ, ನಾವು ವಿಜಯನಗರಕ್ಕೆ ಕಾರಲ್ಲಿ ಹೊರಟೆವು. ಮಾವನ ಮುಖದಲ್ಲಿ ಸಂತೃಪ್ತಿ ಎದ್ದು ಕಾಣುತ್ತಿತ್ತು. “ ಶಿವಾ ! ನಿನ್ನಿಂದಲೇ ಮಾರಾಯಾ ನಾನು ಇಷ್ಟು ಸಂತೋಷವಾಗಿರುವುದು “ ಅಂತ ಕಿರುನಗೆಯೊಂದಿಗೆ ಹೇಳಿದ್ದರು.
*********
ಅವೇ ಮಾವನ ಕೊನೆಯ ಮಾತುಗಳು.
ವಿಜಯನಗರದಲ್ಲಿ ಕಾರು ನಿಂತಾಗ ಮಾವನ ಪಾರ್ಥಿವ ಶರೀರವನ್ನು ನಾನು, ಅತ್ತೆ ಕೆಳಗೆ ಇಳಿಸಿದೆವು. ಮಾವನ ಮುಖದ ಮೇಲೆ ಅದೇ ಕಿರುನಗೆ ಹಾಗೇ ನಿಂತಿತ್ತು.
*****ಮುಗಿಯಿತು*****
********************