ಅಂಕಣ ಬರಹ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌.

ಸಾಧಕಿಯರ ಯಶೋಗಾಥೆ01

ಸ್ವಾತಂತ್ರ್ಯ ಹೋರಾಟಗಾರ್ತಿ ಬಸಂತಿದೇವಿ (೧೮೮೦-೧೯೭೪)

ಬಸಂತಿ ದೇವಿ ಭಾರತದಲ್ಲಿ ಬ್ರಿಟೀಷರ ಆಳ್ವಿಕೆ ಇದ್ದಾಗ ಬ್ರಿಟಿಷರ ವಿರುದ್ಧ ದೇಶದ ಸ್ವತಂತ್ರ್ಯಕ್ಕಾಗಿ ಹೋರಾಟ ಮಾಡಿದರು. ಬಸಂತಿ ದೇವಿಯವರು ೨೩ ಮಾರ್ಚ್ ೧೮೮೦ ರಂದು ಕೊಲ್ಕತ್ತಾದ ಲೊರಿಟೋ ಹೌಸ್‌ನಲಿ ಜನಿಸಿದರು. ಇವರ ತಂದೆ ಬರದನಾಥ ಹಲ್ದಾರ್. ಇವರು ಬ್ರಿಟೀಷರ ಆಳ್ವಿಕೆಯಲ್ಲಿ ಬಹುದೊಡ್ಡ ಜಮೀನ್ದಾರಿ ಆಗಿದ್ದರು. ಅಲ್ಲಿ ಅವರು ತಮ್ಮ ೧೭ನೇ ವಯಸ್ಸಿನಲ್ಲಿ ಚಿತ್ತರಂಜನ್ ದಾಸ್ ಅವರನ್ನು ಭೇಟಿಯಾಗಿ, ನಂತರದ ದಿನಗಳಲ್ಲಿ ವಿವಾಹವಾದರು. ದಂಪತಿಗಳಿಗೆ ಮೂರು ಜನ ಮಕ್ಕಳು.

ಬಸಂತಿ ದೇವಿಯವರು ಹಲವಾರು ಚಳುವಳಿಗಳಲ್ಲಿ ಭಾಗವಹಿಸಿದರು. ನಾಗರಿಕ ಅಸಹಕಾರ ಚಳುವಳಿ ಮತ್ತು ಖಾಲಿಫತ್ ಚಳುವಳಿಗಳಲ್ಲಿ ಭಾಗವಹಿಸಿದರು. ನಾಗಪುರದಲ್ಲಿ ೧೯೨೦ರಲ್ಲಿ ನಡೆದ ಭಾರತೀಯ ರಾಷ್ಟೀಯ ಕಾಂಗ್ರೇಸ್ ಅಧಿವೇಶನದಲ್ಲಿ ಭಾಗವಹಿಸಿದರು. ಅಲ್ಲಿ ದಾಸರ ಸಹೋದರಿಯಾದ ಊರ್ಮಿಳಾದೇವಿ ಮತ್ತು ಸುನಿಲಾದೇವಿಯವರನ್ನು ಭೇಟಿ ಮಾಡಿದರು. ಊರ್ಮಿಳಾ ದೇವಿ ಮತ್ತು ಸುನಿಲಾ ದೇವಿಯವರೊಂದಿಗೆ ಸೇರಿಕೊಂಡು ‘ನಾರಿ ಕರ್ಮ ಮಂದಿರ’ ಸಂಘವನ್ನು ಫ್ರಾರಂಭಿಸಿದರು. ಅಲ್ಲಿ ಮಹಿಳಾ ಹೋರಾಟ ಗಾರ್ತಿಯವರರನ್ನು ತರಬೇತಿಗೊಳಿಸುತ್ತಿದ್ದರು. ತಿಲಕ್ ಸ್ವರಾಜ್ ಫಂಡ್‌ ನಿಂದ ಬಸಂತಿ ದೇವಿಯವರು ಚಿನ್ನದ ನಾಣ್ಯ ಮತ್ತು ಆಭರಣಗಳನ್ನು ಸಂಗ್ರಹಿಸಿ, ಅದನ್ನು ಚಳುವಳಿಯ ಸಂದರ್ಭದಲ್ಲಿ ಬಳಸಿಕೊಳ್ಳುತ್ತಿದ್ದರು. ೧೯೨೦ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೂಲಕ ವಿದೇಶಿ ಸರಕುಗಳ ನಿಷೇಧಕ್ಕೆ ಕರೆ ನೀಡುವುದರೊಂದಿಗೆ ಅಸಹಕಾರ ಚಳುವಳಿಯನ್ನು ಫ್ರಾರಂಭಿಸಿದರು.

ಇದೇ ಸಮಯದಲ್ಲಿ ಕೊಲ್ಕಾತ್ತದಲ್ಲಿ ಐದು ಸ್ವಯಂ ಸೇವಕರ ಸಣ್ಣ ಗುಂಪುಗಳನ್ನು ಮಾಡಿ ಕೊಲ್ಕಾತ್ತದ ಬೀದಿಗಳಲ್ಲಿ ಖಾದಿ ಬಟ್ಟೆಗಳನ್ನು ಮಾರಾಟ ಮಾಡಲು ನೇಮಿಸಿದರು. ಒಂದು ಗುಂಪಿನ ನೇತೃತ್ವವನ್ನು ಬಸಂತಿದೇವಿಯವರು ತೆಗೆದುಕೊಂಡರು. ಸುಭಾಷ್‌ಚಂದ್ರ ಬೋಸ್‌ರವರನ್ನು ಬಂಧಿಸಲು ಬ್ರಿಟಿಷರು ಸಂಚು ಹಾಕುತ್ತಿದ್ದನ್ನು ಅರಿತ ಬಸಂತಿದೇವಿಯವರು ಜನರನ್ನು ಸಂಘಟಿಸಿದರು. ಹೆಚ್ಚೆಚ್ಚು ಜನರನ್ನು ಜಾಗೃತಗೊಳಿಸಿದರು. ಆದರೆ ಬ್ರಿಟಿಷರು ಸುಭಾಷ್‌ಚಂದ್ರ ಬೋಸ್ ಮತ್ತು ಬಸಂತಿದೇವಿಯವರ ಪತಿ ದಾಸರನ್ನು ಬಂಧಿಸಿದರು. ಆ ಸಮಯದಲ್ಲಿ ಹೆಚ್ಚಿನ ಜನರನ್ನು ಬಂಧಿಸಿದ್ದರಿಂದ ಕೊಲ್ಕಾತ್ತಾದ ಎರಡು ಕಾರಗೃಹಗಳು ಕ್ರಾಂತಿಕಾರಿ ಸ್ವಯಂ ಸೇವಕರಿಂದ ತುಂಬಿ ಹೋಗಿತ್ತು. ಮತ್ತೇ ಹೆಚ್ಚಿನ ಶಂಕಿತರನ್ನು ಬಂಧಿಸಲು ಬ್ರಿಟೀಷರು ತರಾತುರಿಯಲ್ಲಿ ಬಂಧನ ಶಿಬಿರಗಳನ್ನು ನಿರ್ಮಿಸಿದರು. ಹಾಗೆಯೇ  ಹೆಚ್ಚಿನ ಸಂಖ್ಯೆಯಲ್ಲಿ ಕ್ರಾಂತಿಕಾರಿಗಳನ್ನು ಬಂಧಿಸಿದರು. ದಾಸರ ಬಂಧನದ ನಂತರ ಬಸಂತಿದೇವಿಯವರು ‘ಬಂಗಾಲಾರ ಕಥಾ’ (ಬಂಗಾಳದ ಕಥೆ) ಎಂಬ ಸಪ್ತಾಹಿಕ ಪತ್ರಿಕ ಪ್ರಕಟಣೆಯ ಉಸ್ತುವಾರಿಯನ್ನು ವಹಿಸಿಕೊಂಡರು. ಬಸಂತಿ ದೇವಿಯವರು ೧೯೨೧-೨೨ರಲ್ಲಿ ಬಂಗಾಳದ ಪ್ರಾಂತಿಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೆಳಮಟ್ಟದ ಜನರನ್ನು ಆಂದೋಲನದಲ್ಲಿ  ಸೇರಿಕೊಳ್ಳಲು ಪ್ರೋತ್ಸಾಹಿಸಿದರು.

ಬಸಂತಿದೇವಿಯವರ ಪತಿ ಚಿತ್ತರಂಜನ್‌ದಾಸ್ ಅವರು ಸುಭಾಷ್‌ಚಂದ್ರ ಬೋಸ್ ಅವರ ರಾಜಕೀಯ ಮಾರ್ಗದರ್ಶಕರಾಗಿದ್ದರು. ದಾಸರವರ ಮರಣದ ನಂತರ ಬಸಂತಿ ದೇವಿಯವರು ಬೊಸ್ ಅವರಿಂದ ರಾಜಕೀಯ ಸಲಹೆಗಳನ್ನು ಪಡೆಯುತ್ತಿದ್ದರು ಎಂದು ಪತ್ರಿಕೆಗಳು ವರದಿ ಮಾಡಿದ್ದವು. ಬೋಸರವರು ಬಸಂತಿ ದೇವಿಯವರನ್ನು ತನ್ನ ದತ್ತು ತಾಯಿ ಎಂದು ಪರಿಗಣಿಸುತ್ತಿದ್ದರು.

ಬಸಂತಿ ದೇವಿಯವರು ಸ್ವತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಜನರ ಕುರಿತು ಸಹಾನುಭೂತಿಯನ್ನು ಹೊಂದಿದ್ದರು. ಲಾಲಾ ಲಜಪತ್ ರಾಯ್‌ರವರು ಬ್ರಟೀಷ್‌ರ ವಿರುದ್ಧ ಶಾಂತಿಯುತವಾದ ಮೆರವಣಿಗೆಯನ್ನು ತೆಗೆದ ಸಂದರ್ಭದಲ್ಲಿ ಬ್ರಿಟಿಷರು ಲಾಠಿ ಚಾರ್ಜ್ ಮಾಡಿದರು. ಅದರ ಪರಿಣಾಮವಾಗಿ ಗಾಯಗೊಂಡ ಲಾಲಾಲಜಪತ್ ರಾಯ್‌ಯವರ ಕಲವೇ ದಿನಗಳಲ್ಲಿ ನಿಧನಗೊಂಡರು. ಜಪತ್ ರಾಯ್‌ಯವರ ಸಾವಿನ ಸೇಡನ್ನು ತೀರಿಸಿಕೊಳ್ಳಲು ಬಸಂತಿ ದೇವಿಯವರು ಬ್ರೀಟಿಷರ ವಿರುದ್ಧ ಯುವಕರನ್ನು ಪ್ರಚೋಧಿಸಿದರು.

ಬಸಂತಿದೇವಿಯವರು ಭಾರತವು ಸ್ವಾತಂತ್ರ್ಯವಾದ ನಂತರವು ತಮ್ಮ ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಿದರು. ೧೯೫೯ರಲ್ಲಿ ಕೊಲ್ಕಾತ್ತದ ಮೊದಲ ಮಹಿಳಾ ಕಾಲೇಜು ‘ಬಸಂತಿದೇವಿ ಮಹಿಳಾ ಕಾಲೇಜು’ನ್ನು ಸ್ಥಾಪಿಸಿದರು. ಇವರಿಗೆ ೧೯೭೩ ರಲ್ಲಿ ಭಾರತದ ಎರಡನೇ ಅತ್ಯನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಬಸಂತಿದೇವಿಯವರು ೧೯೭೪ರಲ್ಲಿ ತಮ್ಮ ೯೪ನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು.

**************************

ಡಾ.ಸುರೇಖಾ ಜಿ.ರಾಠೋಡ

ಸುರೇಖಾ ರಾಠೋಡ್  ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು:  ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿದೆ

Leave a Reply

Back To Top