ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—38

ಆತ್ಮಾನುಸಂಧಾನ

ನಿಗೂಢ ಕಾಯಿಲೆಯಿಂದ ನರಳಿದ ಸೋದರತ್ತೆ – ನಾಗಮ್ಮ

Image of Cremation Fire In a Crematorium-LL927058-Picxy

ನನಗೆ ಇಬ್ಬರು ಸೋದರ ಅತ್ತೆಯರಿದ್ದರು. ಒಬ್ಬಳು ನನ್ನ ತಂದೆಯವರ ಅಕ್ಕ ದೇವಿ, ಇನ್ನೊಬ್ಬಳು ನನ್ನ ತಂದೆಯ ತಂಗಿ ನಾಗಮ್ಮ.

                ದೇವಿ ಅತ್ತೆಯ ಗಂಡನ ಮನೆ ನಮ್ಮ ನೆರೆಯ ಅಗ್ಗರಗೋಣದಲ್ಲಿತ್ತು. ಅವಳ ಗಂಡನು ಕೂಲಿ ಕಾರ್ಮಿಕನಾಗಿದ್ದ. ಸಹಜವಾಗಿಯೇ ಬಡತನದ ಸಂಸಾರ. ಅತ್ತೆಗೆ ಇಬ್ಬರು ಗಂಡು, ಒಬ್ಬಳು ಹೆಣ್ಣು ಮಗಳಿದ್ದಳು. ಅತ್ತೆಯ ಕಿರಿಯ ಮಗ ಮಾತ್ರ ಶಾಲೆ ಕಲಿಯುತ್ತಿದ್ದ. ಹೆಚ್ಚೂ ಕಡಿಮೆ ನನ್ನ ಓರಗೆಯವನು. ಅವನ ಜೊತೆಯ ಪ್ರೀತಿಯ ಒಡನಾಟಕ್ಕಾಗಿಯೇ ನಾನು ಅಪರೂಪಕ್ಕಾದರೂ ಅತ್ತೆಯ ಮನೆಗೆ ಹೋಗಿ ಬರುತ್ತಿದ್ದೆ. ನಾಡವರ ಜಮೀನ್ದಾರರಲ್ಲಿ ಅತ್ತೆ-ಮಾವ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

                ನಾನು ಅತ್ತೆಯ ಮನೆಗೆ ಹೋದಾಗಲೆಲ್ಲಾ ಅತ್ತೆ ನನಗಾಗಿ ಏನಾದರೂ ವಿಶೇಷ ಅಡಿಗೆ ಮಾಡಿ ಉಣಿಸುತ್ತಿದ್ದಳು. ನಾಡವರ ಗದ್ದೆ ಕೆಲಸದಲ್ಲಿಯೇ ಸಂಪಾದಿಸಿ ತಂದ ಪಚ್ಚೆಸರು, ಹೊಂಬೆಸರು ಕಾಳನ್ನು ಅತ್ತೆ ಯಾವಾಗಲೂ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಳು. ನಾನು ಅತ್ತೆಯ ಮನೆಗೆ ಬಂದಾಗಲೆಲ್ಲ ಈ ಕಾಳುಗಳನ್ನು ಬೇಯಿಸಿ ಅದಕ್ಕೆ ಕಾಯಿ, ಬೆಲ್ಲ ಹಾಕಿ ರುಚಿಯಾದ ಪಾಯಸ ಮಾಡಿ ಬಡಿಸುತ್ತಿದ್ದಳು. ಅದು ಎಷ್ಟೊಂದು ರುಚಿಯಾಗಿ ಇರುತ್ತಿತ್ತೆಂದರೆ ಈ ಹೆಸರು ಕಾಳಿನ ಪಾಯಸದ ಆಸೆಯಾದಾಗಲೆಲ್ಲ ನಾನು ಅಗ್ಗರಗೋಣದ ಅತ್ತೆಮನೆಗೆ ಬಂದು ಹೋಗುತ್ತಿದ್ದೆ. ಬಡತನದ ನಡುವೆಯೂ ಇದ್ದುದರಲ್ಲಿ ಉಣ್ಣಿಸಿ ಪ್ರೀತಿ ತೋರುವ ದೇವಿ ಅತ್ತೆ ನನಗೆ ಅಚ್ಚುಮೆಚ್ಚಾಗಿದ್ದಳು.

                ಅತ್ತೆಯ ಮನೆಯ ಸಮೀಪವೇ ಜಟ್ಟು ಗುನಗ ಎಂಬವರ ಮನೆ ಇತ್ತು. ಜಟ್ಟು ಗುನಗ ಅಗ್ಗರಗೋಣದ ಪ್ರಸಿದ್ಧ ಗ್ರಾಮ ದೇವತೆಯಾದ “ಹೊಲೆವಟ್ರ” ದೇವರ ಅರ್ಚಕನಾಗಿದ್ದ. ಅಗ್ಗರಗೋಣ ಬಂಡಿಹಬ್ಬದಲ್ಲಿ ಈ ದೇವರಿಗೆ ಸಾವಿರಾರು ಕೋಳಿಗಳನ್ನು ಬಲಿಕೊಡುತ್ತಿದ್ದರು. ಅಷ್ಟೇ ಪ್ರಮಾಣದ ಕೋಳಿ ತಲೆಗಳು ಗುನಗರ ಪಾಲಿಗೆ ಸಂಗ್ರಹವಾಗುತ್ತಿದ್ದವು. ಜಟ್ಟು ಗುನಗರು ಈ ಕೋಳಿ ತಲೆಗಳನ್ನು ನಮ್ಮ ಜನರ ಕೇರಿಯ ಎಲ್ಲ ಮನೆಗಳಿಗೂ ಹಂಚುತ್ತಿದ್ದರು. ನಮ್ಮ ಅತ್ತೆಯ ಮನೆಗೂ ಒಂದು ಬುಟ್ಟಿಯಷ್ಟು ಕೋಳಿ ತಲೆಗಳು ಸಿಗುತ್ತಿದ್ದವು. ಅತ್ತೆ ಈ ಸಂದರ್ಭದಲ್ಲಿ ತಪ್ಪದೇ ನನಗೆ ಹೇಳಿ ಕಳುಹಿಸುತ್ತಿದ್ದಳು. ನನಗೋ ‘ಕೋಳಿ ಆಸೆಯ ಚಪಲ’ ಬಾಲ್ಯದಿಂದಲೂ ಅಧಿಕವಾಗಿತ್ತು. ನಾನು ತಪ್ಪದೇ ಅಗ್ಗರಗೋಣಕ್ಕೆ ಓಡುತ್ತಿದ್ದೆ.

                ಬುಟ್ಟಿಯಲ್ಲಿ ನೂರಿನ್ನೂರು ಕೋಳಿ ತಲೆಗಳು ಇರುತ್ತಿದ್ದವು. ಅದರ ನೆತ್ತಿಯ ಮೇಲೆ ಕಡಿದು ಕೊರಳ ಭಾಗದ ಮಾಂಸವನ್ನು ಬೇರ್ಪಡಿಸಿಕೊಂಡು ಕೋಳಿಯ ಮಸಾಲೆಗೆ ಸಿದ್ಧಪಡಿಸಬೇಕಾಗುತ್ತದೆ. ಈ ಕೆಲಸವನ್ನು ನಾನು ಮತ್ತು ಅತ್ತೆಯ ಮಗ ನನ್ನ ಓರಗೆಯ ಮಹಾದೇವ ಇಬ್ಬರೂ ಕೂಡಿ ಮುಗಿಸುತ್ತಿದ್ದೆವು. ಎರಡು ದಿನ ಅತ್ತೆಯ ಮನೆಯಲ್ಲೇ ಉಳಿದು ಕೋಳಿಯೂಟ ಮಾಡಿಕೊಂಡೇ ನಾನು ಮಾಸ್ಕೇರಿಗೆ ಮರಳುತ್ತಿದ್ದೆ.

                ನನ್ನ ಕಿರಿಯ ಸೋದರತ್ತೆ ನಾಗಮ್ಮ ಎಂಬುವಳು. ಅವಳ ಗಂಡನ ಮನೆ ಅಂಕೋಲಾ ತಾಲೂಕಿನ ಹಿಲ್ಲೂರು ಎಂಬ ಬೆಟ್ಟ ಪ್ರದೇಶದಲ್ಲಿ ಇತ್ತು. ನಾವು ಹೈಸ್ಕೂಲು ಓದುವವರೆಗೂ ಬೇಸಿಗೆಯ ರಜೆಯಲ್ಲಿ ಕುಟುಂಬದ ಎಲ್ಲರೂ ಹಿಲ್ಲೂರಿಗೆ ಹೊರಟು ಸೋದರತ್ತೆಯ ಮನೆಯಲ್ಲಿ ಕೆಲವು ದಿನ, ಅದೇ ಊರಿನ ಹೊಸಕಂಬಿ ಎಂಬ ಭಾಗದಲ್ಲಿರುವ ನನ್ನ ತಾಯಿಯ ಚಿಕ್ಕಪ್ಪ ಮರ‍್ಕುಂಡಿ ಅಜ್ಜನ ಮನೆಯಲ್ಲಿ ಕೆಲವು ದಿನ ಇದ್ದು ಊರಿಗೆ ಮರಳುವುದು ನಮಗೆ ರೂಢಿಯಾಗಿತ್ತು.

                ದೇವಿ ಅತ್ತೆಯಂತೆ ನಾಗಮ್ಮತ್ತೆಯದು ಬಡತನದ ಕುಟುಂಬವಾಗಿರಲಿಲ್ಲ. ದಲಿತ ಕೃಷಿಕರಿಗೆ ಬೇಸಾಯಕ್ಕಾಗಿ ಸರಕಾರವು ಅರಣ್ಯಭೂಮಿಯನ್ನು ಮಂಜೂರಿ ನೀಡುವ ಯೋಜನೆಯಲ್ಲಿ ಸರಕಾರವು ಹತ್ತಾರು ಕುಟುಂಬಗಳಿಗೆ ತಲಾ ಇಪ್ಪತ್ತು ಎಕರೆಯಷ್ಟು ಭೂಮಿಯನ್ನು ಉಚಿತವಾಗಿ ನೀಡಿತ್ತು. ನಮ್ಮ ಮಾಸ್ಕೇರಿ, ಅಗ್ಗರಗೋಣ, ಹೆಗ್ರೆ ಇತ್ಯಾದಿ ಊರುಗಳ ನಮ್ಮ ಜಾತಿಯ ಕುಟುಂಬಗಳು ಇಲ್ಲಿ ಭೂಮಿಯನ್ನು ಪಡೆದು ಬೇಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇಂಥ ಫಲಾನುಭವಿಗಳಲ್ಲಿ ನಮ್ಮ ನಾಗಮ್ಮತ್ತೆಯ ಗಂಡ ಸುಕ್ರು ಮಾವನೂ ಒಬ್ಬನಾದುದರಿಂದ ನಾಗಮ್ಮತ್ತೆಯ ಕುಟುಂಬ ಆರ್ಥಿಕವಾಗಿ ಅನುಕೂಲಕರವಾಗಿಯೇ ಇತ್ತು.

                ಇಲ್ಲಿ ಬೇಸಾಯ ಮಾಡುತ್ತಿರುವ ಹಲವು ಕುಟುಂಬಗಳು ಸರಕಾರ ನೀಡಿದ ಉಚಿತ ಭೂಮಿಯಲ್ಲಿ ಸರಿಯಾಗಿ ಬೇಸಾಯ ಮಾಡದೇ ಬಡತನದಲ್ಲಿಯೂ ಇದ್ದರು. ಆದರೆ ನಮ್ಮ ಸುಕ್ರುಮಾವ ಮಾತ್ರ ನಿಷ್ಠೆಯಿಂದ ದುಡಿದು ಭತ್ತ, ಕಬ್ಬು ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದ. ಇದರಿಂದ ಆತ ಎಲ್ಲರಿಗಿಂತ ಆರ್ಥಿಕವಾಗಿ ಸದೃಢನಾಗಿದ್ದ. ಆ ದಿನಗಳಲ್ಲಿಯೇ ಅವರ ಮನೆಯ ಒಂದು ಕೋಣೆಯಲ್ಲಿ ಹತ್ತಾರು ಅಕ್ಕಿ ಮೂಡೆಗಳು, (ಹುಲ್ಲಿನಿಂದ ಗೋಲಾಕಾರದಲ್ಲಿ ಅಕ್ಕಿಯ ಮೂಟೆ ಕಟ್ಟುವುದು) ಏಳೆಂಟು ಬೆಲ್ಲದ ಕೊಡಗಳು ತುಂಬಿಯೇ ಇರುತ್ತಿದ್ದವು.

                ಊಟ ತಿಂಡಿಗಾಗಿಯೂ ನಮ್ಮ ಜಾತಿಯ ಮನೆಗಳಲ್ಲಿ ಬಳಸುವಂತೆ ಅಲ್ಯೂಮಿನಿಯಂ, ಪಿಂಗಾಣಿ ಇತ್ಯಾದಿ ತಟ್ಟೆ ಬಟ್ಟಲುಗಳು ಇರಲಿಲ್ಲ. ನಾಗಮ್ಮತ್ತೆಯ ಮನೆಯಲ್ಲಿ ಹಿತ್ತಾಳೆ, ತಾಮ್ರ ಮೊದಲಾದ ಲೋಹದ ಪಾತ್ರೆಗಳೇ ತುಂಬಿದ್ದು ಯಾವಾಗಲೂ ಅವು ಫಳ ಫಳ ಹೊಳೆಯುವಂತೆ ನಾಗಮ್ಮತ್ತೆ ಸಜ್ಜುಗೊಳಿಸಿಕೊಂಡೇ ಇರುತ್ತಿದ್ದಳು.

                ಒಟ್ಟಾರೆಯಾಗಿ ವಿಶಾಲವಾದ ಕೋಣೆಗಳ ಹಂಚಿನಮನೆ, ವಿಸ್ತಾರವಾದ ಜಗಲಿ, ಸದಾ ಸಗಣಿಯಿಂದ ಸಾರಿಸಿಕೊಂಡು ಆಟದ ಬಯಲಿನಂತೆ ತೋರುವ ಅಂಗಳ…. ಇತ್ಯಾದಿಗಳಿಂದ ನಾಗಮ್ಮತ್ತೆಯ ಮನೆಯೆಂಬುದು ನಮ್ಮ ಜಾತಿಯಲ್ಲೇ ಘನಸ್ಥಿಕೆಯ ಮಹಾಮನೆಯಾಗಿ ನಮಗೆ ಕಾಣಿಸುತ್ತಿತ್ತು.

                ಈ ಎಲ್ಲ ಕಾರಣಗಳಿಂದ ನಮ್ಮ ನಾಗಮ್ಮತ್ತೆಯ ಗಂಡ ಸುಕ್ರು ಮಾವನಲ್ಲಿಯೂ ಜಮೀನ್ದಾರಿಕೆಯ ಗತ್ತು-ದೌಲತ್ತುಗಳು ಎದ್ದು ಕಾಣಿಸುತ್ತಿದ್ದವು. ಮಾಸ್ತರಿಕೆ ಮಾಡುವ ನಮ್ಮ ತಂದೆಯವರಿಂದಲೂ ವಿಶೇಷ ಗೌರವವನ್ನು ಬಯಸುವ ಠೀವಿಯನ್ನೇ ಸುಕ್ರುಮಾವನಲ್ಲಿ ಕಾಣಬಹುದಿತ್ತು. ಮಕ್ಕಳಾದ ನಾವೆಲ್ಲ ಆತನಲ್ಲಿ ಸಲಿಗೆ ತೋರುವ ಪ್ರಸಂಗವೇ ಇರಲಿಲ್ಲ!

                ನಾಗಮ್ಮತ್ತೆ ದಂಪತಿಗಳಿಗೆ ಒಬ್ಬನೇ ಮಗನಿದ್ದು ನಾವು ಹೈಸ್ಕೂಲು ಸೇರುವಾಗ ಆತ ಒಂದೆರಡನೇ ತರಗತಿಯಲ್ಲಿ ಓದುವ ಚಿಕ್ಕ ಹುಡುಗನಾಗಿದ್ದ. ಅವನಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಹಂಬಲವಂತೂ ಅತ್ತೆ ಮಾವ ಇಬ್ಬರಿಗೂ ಇತ್ತು.

                ನಾನು ಅಂತಿಮ ಎಂ.ಎ ಓದಿನ ಪರೀಕ್ಷೆಯ ಸಿದ್ಧತೆಯಲ್ಲಿ ಇರುವಾಗ ನಮ್ಮ ನಾಗಮ್ಮ ಅತ್ತೆಗೆ ಅನಾರೋಗ್ಯವೆಂದೂ ಔಷಧೋಪಚಾರಕ್ಕಾಗಿ ಅವಳನ್ನು ಮಾಸ್ಕೇರಿಯ ನಮ್ಮ ಮನೆಯಲ್ಲೇ ಕರೆತಂದು ಉಳಿಸಿಕೊಂಡಿದ್ದೇವೆ ಎಂದೂ ತಂದೆಯವರು ಪತ್ರ ಬರೆದಿದ್ದರು.

                ಊರಿಗೆ ಹೋಗಿ ಅತ್ತೆಯನ್ನೊಮ್ಮೆ ನೋಡಿ ಮಾತಾಡಿಸಿ ಬರಲೆಂದು ನಾನೊಂದಿಷ್ಟು ಮೂಸಂಬಿ ಮತ್ತಿತರ ಹಣ್ಣುಗಳನ್ನು ಖರೀದಿಸಿಕೊಂಡು ಊರಿಗೆ ಬಂದೆ.

                ಅತ್ತೆ ತುಂಬಾ ಹೈರಾಣ ಆಗಿದ್ದಳು. ನಾನು ಊರಿಗೆ ಬಂದ ಮರುದಿನ ತಂದೆಯವರು, ತಮ್ಮ, ತಂಗಿಯರೆಲ್ಲ ತಮ್ಮ ತಮ್ಮ ಶಾಲೆಗಳಿಗೆ ಹೋಗಿದ್ದರು. ಅವ್ವ ಅಡಿಗೆ ಕೆಲಸದಲ್ಲಿ ಆಚೆಗೆ ಇದ್ದಳು. ನಾನು ನಾಗಮ್ಮತ್ತೆಯ ಹಾಸಿಗೆಯ ಪಕ್ಕದಲ್ಲಿ ಕುಳಿತು ಅವಳ ಯೋಗಕ್ಷೇಮ ವಿಚಾರಿಸುತ್ತ ಅವಳ ಕಾಯಿಲೆಯ ಕುರಿತು ಮಾತನಾಡಿದೆ. ಅತ್ತೆ, ನಾನು ಧಾರವಾಡದಲ್ಲಿದ್ದು ಓದುತ್ತಿರುವ ವಿವರಗಳನ್ನು, ನನ್ನ ಊಟ-ತಿಂಡಿಯ ವ್ಯವಸ್ಥೆಯ ಕುರಿತು ವಿಚಾರಿಸುತ್ತಿದ್ದಳು. ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗಲೇ ಅತ್ತೆ ವಿಚಿತ್ರವಾಗಿ ನಡೆದುಕೊಳ್ಳಲು ತೊಡಗಿದಳು….

                ಒಂದೇ ಕ್ಷಣದಲ್ಲಿ ಅವಳ ಕಣ್ಣುಗಳು ಕೆಂಡದ ಉಂಡೆ ಯಂತೆ ಭೀಕರವಾಗಿ ಕಾಣಿಸಿದವು. ಮೈ ಕೊಡವಿ ಎದ್ದು ನಿಂತವಳು ವಿಚಿತ್ರವಾಗಿ ಕುಣಿಯಲು ತೊಡಗಿದಳು. ಹರವಿದ ಕೂದಲು, ಕಚ್ಚಿ ಹಿಡಿದ ಹಲ್ಲುಗಳು… ನನ್ನನ್ನು ಕ್ರೂರವಾಗಿ ದಿಟ್ಟಿಸುತ್ತ, ವಿಕಾರವಾಗಿ ಕುಣಿಯುವ ಅವಳ ಅವತಾರವನ್ನು ಕಂಡು ಬೆಚ್ಚಿಬಿದ್ದೆ. ಭಯಭೀತನಾಗಿ ಅವ್ವನನ್ನು ಕರೆಯುತ್ತ ಅಡಿಗೆ ಮನೆಯ ಕಡೆ ಓಡಿದೆ. ಅತ್ತೆಯು ಕ್ರೂರವಾಗಿ ಹೂಂಕರಿಸುವುದನ್ನು ಕೇಳಿದ ಅವ್ವನಿಗೆ ಪರಿಸ್ಥಿತಿಯ ಅರಿವಾಗಿತ್ತು. ಅವಳು ನನಗೆ ಧೈರ್ಯ ಹೇಳಿ ನಮ್ಮ ಮನೆಯ ಸಮೀಪವೇ ಇರುವ ಜಟ್ಟಿ ಆಗೇರ ಎಂಬಾತನನ್ನು ಅಂಗಳದಲ್ಲಿ ನಿಂತು ಕೂಗಿ ಕರೆದಳು. ಅವನು ಓಡೋಡಿ ಬಂದವನು ಅತ್ತೆಯ ಕೋಣೆಗೆ ನುಗ್ಗಿ ಅವಳ ತೋಳುಗಳನ್ನು ಕಟ್ಟಿ ಹಿಡಿದು ಹಾಸಿಗೆಯ ಮೇಲೆ ಕುಳ್ಳಿರಿಸಿ ಅವಳ ಉದ್ವೇಗವನ್ನು ಶಮನಗೊಳಿಸುತ್ತಿದ್ದಂತೆ ಯಾವುದೋ ಭಾವ ಪ್ರಪಂಚದಿಂದ ವಾಸ್ತವಕ್ಕೆ ಬಂದಂತೆ ಅತ್ತೆ ಸಹಜ ಸ್ಥಿತಿಗೆ ಬಂದಳು.

                ಮನೆಯ ಎಲ್ಲರಿಗೂ ಇದು ರೂಢಿಯಾಗಿದೆ. ಆದರೆ ಇಂಥ ಉದ್ವೇಗದ ಸ್ಥಿತಿಯಲ್ಲಿ ಅವಳನ್ನು ಯಾರಿಂದಲೂ ಹಿಡಿದು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಶಾರೀರಿಕವಾಗಿ ಕಟ್ಟು ಮಸ್ತಾಗಿದ್ದ ಜಟ್ಟಿಯೇ ಬಂದು ಅವಳನ್ನು ಹಿಡಿದು ನಿಲ್ಲಿಸಿ ನಿಗ್ರಹಿಸುತ್ತಿದ್ದ.

                ನನಗೆ ಇದು ಹೊಸ ಅನುಭವ ಮಾತ್ರವಲ್ಲದೇ ಅತ್ತೆಯ ಈ ನಿಗೂಢ ಕಾಯಿಲೆಗೆ ಕಾರಣವಾದರೂ ಏನು? ಎಂಬುದೇ ಚಿಂತೆಯಾಯಿತು. ಇಂಥವಳನ್ನು ಮನೆಯಲ್ಲಿ ಉಳಿಸಿಕೊಂಡು ತಮ್ಮ ತಂಗಿಯರೆಲ್ಲ ಹೇಗೆ ಹೊಂದಿಕೊಂಡಿದ್ದಾರೆ? ಎಂದು ಆತಂಕವಾಯಿತು.

                ಭಯದಿಂದ ದಿಗ್ಬ್ರಾಂತನಾದ ನನಗೆ ಅವ್ವ ಮತ್ತು ಜಟ್ಟಣ್ಣ ಸಾಂತ್ವನ ಹೇಳಿ ಸಂತೈಸಿದರು. ಆಶ್ಚರ್ಯವೆಂದರೆ ವಾಸ್ತವ ಸ್ಥಿತಿಗೆ ಬಂದ ನಾಗಮ್ಮತ್ತೆಯೂ ನನಗೆ ಸಮಾಧಾನದ ಮಾತು ಹೇಳ ತೊಡಗಿದ್ದಳು.

                ನಾಗಮ್ಮತ್ತೆಯ ಈ ನಿಗೂಢ ಕಾಯಿಲೆಗೆ ಭೂತ ಚೇಷ್ಟೆ ಕಾರಣವೆಂದು ನಮ್ಮ ಜಾತಿ ಬಾಂಧವರೆಲ್ಲ ಅಭಿಪ್ರಾಯ ಪಡುತ್ತಿದ್ದರು. ನಮ್ಮ ತಂದೆಯವರು ಮಾತ್ರ ಅದನ್ನು ನಂಬದೇ ಗೋಕರ್ಣ ಕಡೆಯ ವೈದ್ಯರಿಂದ ಇದಕ್ಕೆ ಉಪಚಾರ ಮಾಡಿಸುತ್ತಿದ್ದರು. ಅವರು ದಿನಕ್ಕೊಂದು ಬಾರಿ ಬಂದು ಬಿ.ಪಿ ಇತ್ಯಾದಿ ಪರೀಕ್ಷಿಸಿ ಇಂಜೆಕ್ಷನ್ ಮಾತ್ರೆ ಇತ್ಯಾದಿ ಕೊಟ್ಟು ಹೋಗುತ್ತಿದ್ದರು. ನಮ್ಮ ಸಂಬಂಧಿಕರಲ್ಲಿ ಯಾರೋ ಮಂತ್ರವಾದಿಯೊಬ್ಬರನ್ನು ಕರೆದು ತಂದರು. ಅವರು ಖಂಡಿತವಾಗಿಯೂ ಇದು ಪ್ರೇತ ಬಾಧೆಯೆಂದೂ ಇದಕ್ಕೆ ನೂರಾ ಎಂಟು ದಿನ ಸ್ಮಶಾನದಲ್ಲಿ ಜಪಮಾಡುವುದೆಂದೂ ಪರಿಹಾರ ತಿಳಿಸಿದರು. ಇದು ಬಹುದೊಡ್ಡ ಖರ್ಚಿನ ಸಂಗತಿ. ತಂದೆಯವರಿಗೆ ಸಾಧ್ಯವಾಗದ ಮಾತು. ಸಂಗತಿಯನ್ನು ಕೇಳಿ ತಿಳಿದ ನಾಗಮ್ಮತ್ತೆಯ ಗಂಡ ಸುಕ್ರು ಮಾವನೂ ಇದಕ್ಕೆ ಒಪ್ಪಲಿಲ್ಲ.

                ನಾನು ಎಂ.ಎ ಅಂತಿಮ ವರ್ಷದ ಪರೀಕ್ಷೆಗಾಗಿ ಧಾರವಾಡಕ್ಕೆ ಹೊರಟು ಪರೀಕ್ಷೆಗಳನ್ನು ಮುಗಿಸಿ ಮರಳಿ ಊರಿಗೆ ಬರುವ ಹೊತ್ತಿಗೆ ಸುಕ್ರು ಮಾವ ನಾಗಮ್ಮತ್ತೆಯನ್ನು ತಮ್ಮ ಹಿಲ್ಲೂರು ಮನೆಗೆ ಕರೆದೊಯ್ದಿದ್ದರು.

                ಕೆಲವೇ ದಿನಗಳಲ್ಲಿ ಒಂದು ದಿನ “ನಾಗಮ್ಮತ್ತೆ ರಾತ್ರಿ ಮಲಗಿದವಳು ಮುಂಜಾನೆ ನಾಪತ್ತೆಯಾಗಿದ್ದಾಳೆ” ಎಂಬ ಆತಂಕದ ಸುದ್ದಿ ತಂದರು. ಅಪ್ಪ ನಮ್ಮ ದಾಯಾದಿ ಇಬ್ಬರು ಚಿಕ್ಕಪ್ಪಂದಿರೊಂದಿಗೆ ಹಿಲ್ಲೂರಿಗೆ ಹೋದರು. ಅಲ್ಲಿ ಮತ್ತೆರಡು ದಿನಗಳವರೆಗೆ ಬೆಟ್ಟ, ಗುಡ್ಡ, ನದಿ, ಕೆರೆ, ಬಾವಿ ಇತ್ಯಾದಿ ಎಲ್ಲ ಕಡೆಗಳಲ್ಲಿಯೂ ಹುಡುಕಾಟ ಮಾಡಿದ್ದಾರೆ. ಆಗಲೂ ಮಂತ್ರವಾದಿಗಳು “ಅವಳು ಬದುಕಿದ್ದಾಳೆ… ಉತ್ತರ ದಿಕ್ಕಿನಲ್ಲಿ ಇದ್ದಾಳೆ…” ಇತ್ಯಾದಿ ಭವಿಷ್ಯ ನುಡಿದು ಹುಡುಕಾಟದ ತಂಡವನ್ನು ಅಲೆದಾಡಿಸಿ ನೋಡಿದರಲ್ಲದೆ ಅತ್ತೆಯು ಎಲ್ಲಿಯೂ ಕಾಣಸಿಗಲಿಲ್ಲ.

ಮೂರನೆಯ ದಿನ ನಾಗಮ್ಮತ್ತೆಯ ಶವ ಮನೆಯ ಸಮೀಪದಲ್ಲೇ ಇರುವ ಸಾರ್ವಜನಿಕ ಬಾವಿಯಲ್ಲಿ ತೇಲುತ್ತಿರುವುದನ್ನು ಮುಂಜಾನೆ ನೀರಿಗೆ ಬಂದವರು ಕಂಡು ಗುರುತಿಸಿದ್ದಾರೆ!

ನಾಗಮ್ಮತ್ತೆಯ ಅಂತ್ಯ ಸಂಸ್ಕಾರವನ್ನು ಮುಗಿಸಿ ಮನೆಗೆ ಮರಳಿದ ಅಪ್ಪ ದಣಪೆ ದಾಟುತ್ತಲೇ ದೊಡ್ಡ ದನಿಯಲ್ಲಿ ಗೋಳಾಡುತ್ತ ಮನೆಯೊಳಗೆ ಬಂದ ದೃಶ್ಯ ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ.

ತನ್ನ ಪ್ರೀತಿಯ ತಂಗಿಯ ಸಾವಿನ ದುಃಖದಿಂದ ಚೇತರಿಸಿಕೊಳ್ಳಲು ಅಪ್ಪನಿಗೆ ತಿಂಗಳುಗಳೇ ಹಿಡಿದವು. ನಮಗೂ ಸಹ.

************************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿ
ದೆ

4 thoughts on “

  1. ಹೆಸರು ಕಾಳಿನ ಪಾಯಸದ ಸವಿ ಒಂದೆಡೆಯಾದರೆ, ನಾಗಮ್ಮತ್ತೆಯವರ ವಿಚಿತ್ರ ಕಾಯಿಲೆಯ ಭಯ ಇನ್ನೊಂದೆಡೆಯಾಯಿತು ಸರ್. ಕೊನೆಗೂ ಅದರ ಮರ್ಮ ಗೊತ್ತಾಗಲೇ ಇಲ್ವ? ಸರ್. ಪಾಪ! ನಾಗಮ್ಮತ್ತೆ.

  2. ಸರ್,
    ತಮ್ಮ ಅನುಭವ ಅಗಾದ.ಆ ಎಂ.ಎ. ಪರೀಕ್ಷೆಯ ಸಮಯದಲ್ಲಿ ನಡೆದ ಘಟನೆಯನ್ನು ಓದಿ ವಿಷಾದವಾಯಿತು.

  3. ಸರ್ ನಿಮ್ಮ ಕಥನ ಓದಿ ಸ್ಪೂರ್ತಿ ಸಿಕ್ಕಿದಂತಾಗಿದೆ ಸರಳ ಸುಂದರ ವಿವರಣೆ

Leave a Reply

Back To Top