ಅಂಕಣ

ನೆಲಸಂಪಿಗೆ

(ಎರಡನೆ ಕಂತು)

ನಮ್ಮ ನಡುವಿನ  ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು  ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ

ಹಲಸಿನಜ್ಜನ ಮರಿಮಕ್ಕಳು!

ನನ್ನಷ್ಟಕ್ಕೆ ಮಾತಾಡಿಕೊಳ್ಳುತ್ತ ಮಣ್ಣು, ನೀರು, ಕೆಸರು, ಎಲೆ, ಬೀಜ, ಕೋಲುಕಡ್ಡಿಗಳೊಂದಿಗೆ ಆಟವಾಡುತ್ತ ಹೊಸ ಲೋಕವೊಂದರಲ್ಲಿ ಸಂಚರಿಸುತ್ತಿದ್ದ ದಿನಗಳಲ್ಲಿ ನಮ್ಮ ಮನೆಯ ಹಿಂದೆ ಅಜ್ಜ ಹಲಸಿನಮರವೊಂದಿತ್ತು. ಅದು ಎಷ್ಟು ಎತ್ತರವಿತ್ತೋ, ಎಷ್ಟು ಹಣ್ಣು ಬಿಡುತ್ತಿತ್ತೋ ನೆನಪಿಲ್ಲವಾದರೂ ನನಗೆ ನಿಲುಕುವ ಅದರ ದಪ್ಪ ಕಾಂಡದ ಭಾಗದಲ್ಲಿ ತೊಗಟೆ ಹಳೆಯದಾಗಿ ಅಲ್ಲಲ್ಲಿ ಬಿರುಕುಬಿಟ್ಟು ಒಳಗಿನ ಕಡುಹಳದಿ ಬಣ್ಣ ಇಣುಕುತ್ತಿದ್ದುದು ಸ್ಪಷ್ಟವಾಗಿದೆ. ಅಂತಹ ಒಂದೆರಡು ಚಕ್ಕೆಗಳನ್ನು ನಿಧಾನಕ್ಕೆ ಎಬ್ಬಿಸಿ ಸಣ್ಣ ಕಲ್ಲು ಅಥವಾ ಕೋಲಿನಲ್ಲಿ ಕಡುಹಳದಿ ಪುಡಿಯನ್ನು ಚೂರು ಚೂರೇ ತೆಗೆದು ಸಣ್ಣ ಸಣ್ಣ ಎಲೆಗಳಲ್ಲಿ ಸಂಗ್ರಹಿಸುವುದು; ಹಣೆ, ತೋಳು, ಅಂಗೈಗಳಿಗೆ ಬಳಿದುಕೊಳ್ಳುವುದು ನನ್ನ ಆಟವಾಗಿತ್ತು. ಹೀಗೆ ದಿನದ ಬಹುಹೊತ್ತನ್ನು ಅಲ್ಲಿ ಕಳೆಯುತ್ತಿದ್ದೆ. ತನ್ನ ಮುದಿ ಚರ್ಮದ ಮೇಲೆ ಪುಟ್ಟ ಕೈಗಳಿಂದ ಪ್ರಹಾರ ನಡೆಸುತ್ತಿದ್ದ ಈ ಮೊಮ್ಮಗಳ ಉಪಟಳವನ್ನು ನೋಡಿ ನಕ್ಕು ಗಾಢ ಹಳದಿ ಎಲೆಯೊಂದನ್ನು ಉದುರಿಸಿ ಸುಮ್ಮನಾಗಿಬಿಡುತ್ತಿತ್ತೇನೋ ಅಜ್ಜ ಹಲಸಿನ ಮರ! ಅಥವಾ ತನ್ನ ಜೀವಿತದುದ್ದಕ್ಕೂನೆರಳಿನಡಿ ಆಡಿ ದೊಡ್ಡವರಾದ ಮೊಮ್ಮಕ್ಕಳು, ಮರಿ ಮಕ್ಕಳನ್ನು ನೆನೆಸಿಕೊಳ್ಳುತ್ತಿತ್ತೋ! ಹೀಗೆ ನಾಲ್ಕೈದು ವಯಸ್ಸಿಗಿಂತ ಮೊದಲೇ ನನ್ನೊಳಗೆ ಬೇರುಬಿಟ್ಟ ಈ ಹಲಸಿನ ಮರದ ದೆಸೆಯಿಂದಾಗಿಯೋ ಏನೋ ಮರಗಳೆಂದರೆ ಜೀವ-ಭಾವ ತುಂಬಿಕೊಂಡ ಇನ್ನೊಬ್ಬ ಮನುಷ್ಯನೇ/ಳೇ ಎಂದು ಸದಾ ಅನ್ನಿಸುತ್ತದೆ. ಮರವೊಂದನ್ನು ಕಂಡ ಕೂಡಲೇ ಮುಟ್ಟಬೇಕು, ಮಾತಾಡಿಸಬೇಕು, ನಗಬೇಕು, ನೇವರಿಸಬೇಕು ಎಂಬೆಲ್ಲ ತಹತಹಗಳು ಧುಮ್ಮಿಕ್ಕತೊಡಗುತ್ತವೆ! ಅದರಲ್ಲೂ ಮುದಿಮರಗಳನ್ನು ಕಂಡಾಗ ದೀರ್ಘ ಬದುಕಿನ ಸಿಹಿ ಕಹಿಯುಂಡು ಅನುಭವದಲ್ಲಿ ಮಾಗಿದ ಸಮಚಿತ್ತದ, ನಿರ್ಲಿಪ್ತ ಪ್ರೀತಿಯ ಅಜ್ಜ ಅಜ್ಜಿಯರಂತೆಣಿಸಿ ನೆಮ್ಮದಿಯ ನಿಟ್ಟುಸಿರೊಂದು ಹಾದುಹೋಗುತ್ತದೆ.

‘ಮರ’ ಎಂದೊಡನೆ ಒಂದು ಏಕಾಂಗಿ ಜೀವದ ಚಿತ್ರಣ ಕಣ್ಮುಂದೆ ನಿಲ್ಲುವುದು ವಿರಳ. ಅಕ್ಕಪಕ್ಕದಲ್ಲಿ ಹಿರಿ-ಕಿರಿ ಗಿಡಮರಗಳು, ಮೈಮೇಲೆ ಹಬ್ಬಿಕೊಂಡ ಬಿಳಲು, ಬಳ್ಳಿಗಳು ಅಥವಾ ಮರಬಾಳೆ(ಆರ್ಕಿಡ್), ಮರಕೆಸಗಳು, ಪಾಚಿಸಸ್ಯ, ಬಂದಳಿಕೆಗಳು, ಸುತ್ತಮುತ್ತಲೂ ಹಳ್ಕಟ್ಟು(ಪೊದೆ)ಗಳು, ಪೊಟರೆ- ರೆಂಬೆಕೊಂಬೆಗಳಲ್ಲಿ ಹಕ್ಕಿ- ಅಳಿಲಿನ ಮನೆಗಳು, ಹೂ ಕಾಯಿ ಹಣ್ಣು ಸವಿಯಲು ಬಂದ ಚಿಟ್ಟೆ, ದುಂಬಿಗಳು; ಕಲರವದ ಹಕ್ಕಿಗಳು… ಹೀಗೆ ಹಿತ ಗದ್ದಲದ ಹಸಿರು ಆವರಣವೊಂದು ಛಕ್ಕನೆ ಸ್ಮೃತಿಯಲ್ಲಿ ಮಿಂಚುತ್ತದೆ. ಮನುಷ್ಯ, ಪ್ರಾಣಿ ಪಕ್ಷಿಗಳಿಗೆ, ಇಡೀ ಜೀವಜಾಲಕ್ಕೆ, ಭೂಮಿಗೆ ಉಸಿರು ತುಂಬುವ ಕರುಣಾಮಯಿ ಮರಗಳು ನನ್ನ ಪ್ರಜ್ಞೆಯನ್ನು ತುಂಬುತ್ತಾ ಕನಸು-ಮನಸಿನಲ್ಲಿ ನೆಲೆಯೂರಿವೆ.

ಒಂದು ಸಣ್ಣ ಕೊಠಡಿಯಲ್ಲಿ ನಡೆಯುತ್ತಿದ್ದ ನಮ್ಮ ಏಕೋಪಾಧ್ಯಾಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಾಸಿಗೆ ಸರಾಸರಿ ಹತ್ತು-ಹನ್ನೆರಡರಂತೆ ನಲವತ್ತೈದು-ಐವತ್ತು ಮಕ್ಕಳಿದ್ದಿರಬಹುದು! ಶಾಲೆಯ ಹಿಂಭಾಗದಲ್ಲಿ ನಾವೇ ನೆಟ್ಟ ಹೂಗಿಡಗಳು, ಹಂಚಿನ ಮಾಡಿನಲ್ಲಿ ಪಾರಿವಾಳದ ಗೂಡುಗಳು. ಎದುರಿಗೆ ಸಣ್ಣ ಜಗಲಿ, ಚಿಕ್ಕ ಆಟದ ಅಂಗಳದಾಚೆಗೆ ದೇವಸ್ಥಾನಕ್ಕೆ ಹೋಗುವ ದಾರಿ, ಸುತ್ತಲೂ ಹಾಡಿ(ಕಾಡು). ನಮ್ಮನೆಯಿಂದ ಶಾಲೆಗೆ ಸುಮಾರು ಎರಡು ಫರ್ಲಾಂಗು. ಒಂದಿನ ಬೆಳಿಗ್ಗೆ ಯಾವತ್ತಿನಂತೆ ಗದ್ದೆ, ಹಾಡಿಗಳನ್ನು ದಾಟಿ ಮರಗಿಡಗಳ ಜತೆ ಸಂವಾದಿಸುತ್ತ ಮಾಷ್ಟ್ರು ಬರುವುದಕ್ಕಿಂತ ಗಂಟೆಗೂ ಮುಂಚೆ ನಾವು ಮಕ್ಕಳೆಲ್ಲ ಶಾಲೆಗೆ ತಲುಪಿದಾಗ ಕಂಡ ದೃಶ್ಯ ಭಯಂಕರವಾಗಿತ್ತು. ‘ಹುಚ್ಚಿ’ ಎಂಬಂತೆ ಕಾಣುವ ಹೆಂಗಸೊಬ್ಬಳು ಎಂತದೋ ಗಂಟುಮೂಟೆಗಳೊಂದಿಗೆ ಅಲ್ಲಿ ಕುಳಿತಿದ್ದಳು; ಇಡೀ ಜಗುಲಿ ಗಲೀಜಾಗಿತ್ತು! ನಾವೆಲ್ಲ ಭಯದಿಂದ ನಡುಗುತ್ತಾ ಅಂಗಳದಲ್ಲೇ ಗುಂಪಾಗಿ ನಿಂತು ಮಾಷ್ಟ್ರ ಬರುವಿಕೆಯನ್ನೇ ಕಾದೆವು. ಮಾಷ್ಟ್ರು ಬಂದವರೇ ಹೆಂಗಸನ್ನು ಹೆದರಿಸಿ ಓಡಿಸಿ ಹುಡುಗರ ಸಹಾಯದಿಂದ ಜಗಲಿ ಸ್ವಚ್ಛಗೊಳಿಸಿ ಎಂದಿನಂತೆ ಪಾಠ ಶುರು ಮಾಡಿದರು. ಆದರೆ ನನ್ನ ಮನಸ್ಸಿನಿಂದ ಈ ಘಟನೆ ಹೊರಹೋಗದೆ ಅಸಹಾಯಕ ಹೆಣ್ಣುಮಗಳ ನೋವು ವಿಚಿತ್ರ ರೂಪಗಳಲ್ಲಿ ಕಾಡಿಸುತ್ತ ಒಳಗೇ ಉಳಿಯಿತು. ಅದೇ ಸಮಯಕ್ಕೆ ಶಾಲೆಯ ಎಡಬದಿ ಎತ್ತರದಲ್ಲಿರುವ ದೇವಸ್ಥಾನದ ಹಿಂಭಾಗದ ಊರಿನಲ್ಲಿ ಹುಚ್ಚನೊಬ್ಬನಿದ್ದಾನೆ, ಶಾಲೆ ಮಕ್ಕಳಿಗೆಲ್ಲ ಹೆದರಿಸುತ್ತಾನೆ ಎಂಬ ವದಂತಿ ಹರಿದು ಬಂದಿತು. ವಿಚಿತ್ರವೆಂದರೆ ದೇವಸ್ಥಾನದ ಹಿಂದೆ ಇರುವ ಗುಡ್ಡಗಳ ತುದಿಯಲ್ಲಿದ್ದ ಮುರಿನ್ ಮರಗಳೇ(ಪುನರ್ಪುಳಿ ಮರ) ತಲೆ ಕೆದರಿಕೊಂಡ ಹುಚ್ಚನ ಹಾಗೆ ಕಾಣುತ್ತಿದ್ದುದು! ದೂರದಲ್ಲಿದ್ದ ಆ ಮರಗಳನ್ನು ಕಂಡಾಗೆಲ್ಲ ಹುಚ್ಚನ ಪ್ರತಿರೂಪ ಅಟ್ಟಹಾಸಗೈಯ್ಯುತ್ತ ಅಟ್ಟಿಸಿ ಬಂದಂತೆ! ಪುನರ್ಪುಳಿ ಮರಗಳು ಕನಸಿಗೂ ಬಂದು ಭಯಹುಟ್ಟಿಸತೊಡಗಿದವು. ನನ್ನ ಬದುಕಿನಲ್ಲಿ ಕೆಟ್ಟ ಅನುಭವ ತಂದ ಮೊದಲ ಮತ್ತು ಕೊನೆಯ ಮರಗಳಿವು. ಕತೆ, ಕಾದಂಬರಿಗಳು, ಚಂದಮಾಮದ ಕತೆಗಳಲ್ಲಿ ದೆವ್ವದ ಮರಗಳ ಬಗ್ಗೆ ಓದಿದರೂ; ಮನೆಹಿಂದಿನ ಆಕಾಶದೆತ್ತರದ ಹುಣಸೆಮರ, ಹಾಡಿಯಲ್ಲಿನ ಬಿಳಲು ಹರಡಿಕೊಂಡ ಗೋಳಿಮರ ಹೌದೋ ಅಲ್ಲವೋ ಎಂಬಂತೆ ದೆವ್ವ ಭೂತಗಳ ಯೋಚನೆ ತಂದರೂ ಈ ಪರಿ ಭಯವಾಗಿರಲಿಲ್ಲ. ಅದಲ್ಲದೆ ಹಕ್ಕಲಿನಲ್ಲಿದ್ದ ಮುರಿನ್‌ಮರ ಸಿಹಿ-ಹುಳಿ ಮಿಶ್ರಿತ ಕೆಂಪು ಹಣ್ಣುಗಳನ್ನು ಕೊಡುತ್ತಿತ್ತು. ಅದರ ಓಡನ್ನು ಬಿಸಿಲಿನಲ್ಲಿ ಒಣಗಿಸಿ ‘ಪಿತ್ಥಕ್ಕೆ ಒಳ್ಳೆಯದು’ ಎನ್ನುತ್ತಾ ಅಮ್ಮ ರುಚಿಕರವಾದ ಸಾರನ್ನು ಮಾಡುತ್ತಿದ್ದರು.

ನಮ್ಮ ಮನೆಯೆದುರಿನ ಸಣ್ಣ ತೋಟದ ಸರಹದ್ದೆಂದರೆ ಒಂದು ತೋಡು!  ಇಂಥಹ ತೋಡುಗಳ ಕುರಿತು ಈಗ ಯೋಚಿಸಿದರೆ ವಿಸ್ಮಯವೆನಿಸುತ್ತದೆ. ಮಳೆಗಾಲದಲ್ಲಿ ಮಳೆನೀರು ಮತ್ತು ಉಜಿರು ಕಣ್ಣುಗಳು ಜೀವತಾಳಿ ತುಂಬಿ ಹರಿಯುವ ತೋಡುಗಳು ಬೇಸಗೆಯಲ್ಲಿ ಒಣಗಿಹೋಗುತ್ತವೆ. ತೋಟದಂಚಿನ ‘ಸಣ್ಣ್ತೋಡ್ʼ ಹುಟ್ಟುವುದು ಎಲ್ಲೆಂದು ಗೊತ್ತಿಲ್ಲ. ಮೇಲ್ಗಡೆಯಿಂದ ಹರಿದು ಬಂದು ತೋಟವನ್ನು ಬಳಸಿ ಸ್ವಲ್ಪ ಮುಂದೆ ‘ದೊಡ್ಡ್ ತೋಡ್ʼಎಂಬ ಜಾಗದಲ್ಲಿ ಆಳವಾದ ಗುಂಡಿಗೆ ಸೇರಿ ಮುಂದೋಡುತ್ತಿತ್ತು. ಮಳೆಗಾಲ ಕಳೆಯುತ್ತಿದ್ದಂತೆ ಈ ತೋಡಿಗೆ ಹತ್ತಿರದ ಮೂರ್ನಾಲ್ಕು ಮನೆಯವರು ಸೇರಿ ‘ಕಟ್ಟು’ ಹಾಕಿಕೊಳ್ಳುತ್ತಿದ್ದೆವು. ಹಾಗಾಗಿ ಸುಗ್ಗಿ ಬೆಳೆಗೆ ನೀರು ಸಿಗುತ್ತಿತ್ತು. ಮುದೂರಿ, ಚೇರ್ಕಿ ಬಯಲಿನ ಉದ್ದಕ್ಕೂ ಬಳಸಿ ಹರಿಯುವ ತೋಡಿಗೆ ಅಲ್ಲಲ್ಲಿ ಕಟ್ಟುಗಳನ್ನು ಹಾಕುತ್ತಿದ್ದರು. ನಮ್ಮ ಸಣ್ಣತೋಡಿಗೆ ಹೊಂದಿಕೊಂಡಂತೆ ಇದ್ದ ಮರಗಳಲ್ಲಿ ಹಂಗಾರ್‌ಮರ(ಚೆನ್ನೆಮರ)ವೂ ಒಂದು.  ಸುಗ್ಗಿ ಕೊಯ್ಲಿನ ನಂತರದ ದಿನಗಳಲ್ಲಿ ಗದ್ದೆಯಲ್ಲಿ ಗಂಟಿ (ಜಾನುವಾರು) ಮೇಯಿಸುತ್ತಿರುವಾಗ ಇದರ ರಕ್ತವರ್ಣದ ವಿಶಿಷ್ಟ ಆಕಾರದ ಹೂಗಳು ಗಮನ ಸೆಳೆಯುತ್ತಿದ್ದವು. ಅಷ್ಟು ದೂರಕ್ಕೇ ಕಾಣಿಸುವ ಹಕ್ಕಿಗಳ ಚಟುವಟಿಕೆ, ಗಲಾಟೆ! ವರ್ಷ ವರ್ಷವೂ ಹೂ ಬಿಟ್ಟು ವಿಚಿತ್ರ ಆಕಾರದ ಕೋಡುಗಳನ್ನು ತಳೆಯುತ್ತಿತ್ತು. ಉದುರುವ ಬೀಜಗಳನ್ನು ಹೆಕ್ಕಿ ಸಂಗ್ರಹಿಸಿಟ್ಟು ಚೆನ್ನೆ ಮಣೆಗೆ ಹಾಕಿಕೊಂಡು ಆಡುತ್ತಿದ್ದೆವು. ಜ್ವರ ಬಂದಾಗ ಕಷಾಯ ಮಾಡಲು ಮತ್ತು ಹೋರಿಗಳಿಗೆ ‘ಹದ್ನ’ದ ಗಂಜಿ ಮಾಡಲು ಇದರ ಕೆತ್ತೆಯನ್ನು ತರುತ್ತಿದ್ದುದು ನೆನಪಿದೆ. ಕಾತಿ ಬೆಳೆಯ ಹೂಟಿ, ಕೊಯ್ಲು, ನಟ್ಟಿ ಎಲ್ಲ ಮುಗಿದ ನಂತರ ಹದ್ನವನ್ನು ಮಾಡುತ್ತಾರೆ. ಆ ದಿನ ಹೋರಿಗಳಿಗೆ ಎಣ್ಣೆಸ್ನಾನ ಮತ್ತು ಬೆಲ್ಲ, ಹಂಗಾರ್ ಕೆತ್ತೆ, ಹಾಲೆಮರದ ಕೆತ್ತೆ, ಅಕ್ಕಿ ಹಾಕಿ ಮಾಡಿದ ಸಿಹಿಗಂಜಿ. ಕಾಡುಸೊಪ್ಪುಗಳ ಅಕ್ಕಚ್ಚು ಮತ್ತು ಬೇಯಿಸಿದ ಹುರುಳಿ, ಹಸಿಹುಲ್ಲೂ ಜೊತೆಗಿರುತ್ತಿತ್ತು. ಜಡಿಮಳೆಯಲ್ಲಿ ದುಡಿದ ಹೋರಿಗಳಿಗೆ ಯಾವುದೇ ಕಾಯಿಲೆ ಬರದಂತೆ ಔಷಧದ ರೂಪದಲ್ಲಿ ಹಂಗಾರ್, ಹಾಲೆ, ಕೆತ್ತೆಗಳನ್ನು ಕೊಡುತ್ತಾರೆ. ಕಾತಿ ಬೇಸಾಯದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಆ ದಿನ ವಿಶೇಷದೂಟ; ಮುಂದೆ ಒಂದು ತಿಂಗಳ ಬಿಡುವು. ಹೀಗೆ ಹದ್ನದೊಂದಿಗೆ ಹಾಲೆಮರ (Devil’s tree)ವೂ ಪ್ರಸ್ತಾಪವಾಗುತ್ತದೆ. ‘ದರೆಮನೆ’ಯ ಮೇಲ್ಭಾಗದ ಹಾಡಿಯಲ್ಲಿ ದೊಡ್ಡ ಹಾಲೆಮರವೊಂದಿದೆ. ಆಗಲೇ ಅದಕ್ಕೆ ಸುಮಾರು ವಯಸ್ಸಾಗಿರಬೇಕು. ಕಾಂಡ ಅಗಲವಾಗಿ ಬೆಳೆದು ಪೊಟರೆಯಾಕಾರದ ರಚನೆಗಳು ನಿರ್ಮಾಣವಾಗಿದ್ದವು. ಅಲ್ಲಿ ಮೊಲಗಳು ಆಶ್ರಯ ಪಡೆದಿರುತ್ತಿದ್ದವು. ಏಳು ಎಲೆಗಳ ಗುಚ್ಛಗಳನ್ನು ಹೊಂದಿದ ಈ ಮರ ನೋಡಲು ವಿಶೇಷ. ಇದರ ಹೂ ಕೂಡಾ ಘಾಟು ಪರಿಮಳ. ಕೆತ್ತೆಯ ಕಷಾಯವನ್ನು ಆಟಿ ಅಮವಾಸ್ಯೆಯ ದಿನ ಕುಡಿಯುವ ಸಂಪ್ರದಾಯ ತುಳುನಾಡಲ್ಲಿ ಇರುವುದಾದರೂ ನಮ್ಮ ಮುದೂರಿಯಲ್ಲಿ ಈ ಆಚರಣೆ ಇಲ್ಲ. ಬದಲಿಗೆ ʼಆಸಾಡಿ ಅಮಾಸಿʼ ದಿನ ಕ್ಯಾನಿಗ್ಯಂಡಿ ಹಿಟ್ಟು (ಕಡುಬು) ಮಾಡಿ ತಿನ್ನಬೇಕೆಂಬುದು ಆ ಭಾಗದಲ್ಲಿ ಪ್ರಚಲಿತ.

ಚೆನ್ನೆ ಮರದೊಂದಿಗೆ ತಳುಕು ಹಾಕಿದಂತೆ ಭಾಸವಾಗುವ ಇನ್ನೆರಡು ಮರಗಳೆಂದರೆ ಮುತ್ತುಗ ಮತ್ತು ಬೂರುಗ. ಈ ಮೂರು ಮರಗಳ ಹೂವೂ ಆಕರ್ಷಕ ಕೆಂಪು. ನಾನು ಕೆಲಸ ಮಾಡುತ್ತಿದ್ದ ಹೊಳೆನರಸೀಪುರದ ಹರಿಹರಪುರಕ್ಕೆ ಹೋಗುವ ದಾರಿಯಲ್ಲಿ ಎರಡು-ಮೂರು ಮುತ್ತುಗದ ಮರಗಳಿದ್ದವು. ‘ಕಾಡಿನ ಬೆಂಕಿ’ ಎಂಬ ಅನ್ವರ್ಥನಾಮದಂತೆ ತಣ್ಣಗಿನ ಕಡುಕೆಂಪು ಹೂಗಳೊಂದಿಗೆ ಉರಿಯುವ ಇವುಗಳನ್ನು ನೋಡುವುದೇ ಕೌತುಕ. ಪಲಾಶ, ಮುತ್ತುಗ ಎಂಬ ತನ್ನ ಹೆಸರಿಗೇ ಮಧುರತೆ ತುಂಬಿದ ಮರವಿದು. ಸುಮಾರು ಹತ್ತು ಕಿಲೋಮೀಟರ್‌ಗಳ ಇಲ್ಲಿಯ ದಾರಿ ವೈವಿಧ್ಯಮಯ ಸಸ್ಯಗಳಿಂದ ತುಂಬಿಕೊಂಡಿದೆ. ಕುರುಚಲು ಕಾಡು, ಅಲ್ಲಲ್ಲಿ ಮರ, ಪೊದೆಗಳು, ಹಳದಿ ಹೂ ಬಿಡುವ ವಿವಿಧ ಜಾತಿಯ ಗಿಡಗಳು, ರಕ್ಕಸಪಟ್ಟೆ ಗಿಡಗಳು,  ಓಡಾಡುವ ನವಿಲುಗಳು… ಈ ದಾರಿಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತ ಅನೇಕ  ಕವಿತೆಗಳು ನನ್ನೊಳಗೆ ಹುಟ್ಟಿದವು. ರಸ್ತೆಯ ಒತ್ತಿಗೇ ಬೆಳೆದ ಆಲದ ಮರಗಳು ರಾಶಿ ಹಣ್ಣುಗಳನ್ನು ಬಿಟ್ಟು ಹಕ್ಕಿಗಳ ಗದ್ದಲಕ್ಕೆ ಕಾಯುತ್ತಿದ್ದವು. ರಸ್ತೆಯಿಡೀ ತೊಯ್ಯಿಸುವ ಹಣ್ಣಿನ ರಸ, ಬಣ್ಣ, ಬೀಜಗಳಿಂದಾಗಿ ಅಲ್ಲೊಂದು ನಿಸರ್ಗ ಕಾವ್ಯ ಮೈದಾಳಿತ್ತು. ಕೃಪಾಕರ ಸೇನಾನಿ ಮತ್ತು ಸಂಜಯ್ ಗುಬ್ಬಿ ಅವರ ಕಾಡುಗಳ ಕುರಿತಾದ ಬರಹಗಳನ್ನು ಓದುವಾಗೆಲ್ಲ ಅಲ್ಲಿನ ಘಟನೆಗಳಿಗೆ ಹರಿಹರಪುರದ ದಾರಿಯ ನಿಸರ್ಗವನ್ನು ನನ್ನ ಪ್ರಜ್ಞೆ ಹೊಂದಿಸಿಕೊಂಡು ಬಿಡುವುದೊಂದು ಅಚ್ಚರಿ! ಇನ್ನು ಬೂರುಗದ ಮರವಂತೂ ಮೃದು ಹತ್ತಿಯ ಹಾಸಿಗೆಯಾಗಿ ಎಲ್ಲರೊಳಗೊಂದು ಆಪ್ತ ಭಾವ ತುಂಬಿರಬಹುದಾದರೂ ಅಂತಹ ಹಾಸಿಗೆ ಅಲರ್ಜಿಯಾದ ನನಗೆ ಈ ಮರ ತನ್ನ ಚೆಲುವಿನ ಹೂಗಳಿಂದಾಗಿ ಹೆಚ್ಚು ಆತ್ಮೀಯ.

ಮತ್ತೊಮ್ಮೆ ಬಾಲ್ಯ, ಹದಿಹರೆಯ, ಹರೆಯದ ಆವರಣಕ್ಕೆ ಜಿಗಿಯುವುದಾದರೆ;  ಮನೆ ಸುತ್ತಮುತ್ತಲಿನ ಹಾಡಿಗಳಲ್ಲಿರುವ ದೈತ್ಯಗಾತ್ರದ ಕಾಟುಮಾವಿನ ಮರಗಳು ನನ್ನ ಪುಟ್ಟ ನೋಟಕ್ಕೆ ಆಶ್ಚರ್ಯ ತರಿಸುತ್ತಿದ್ದವು. ತಲೆಯೆತ್ತಿ ನಿರುಕಿಸಿದರೂ ಅವುಗಳಲ್ಲಿರುವ ಸಣ್ಣ ಸಣ್ಣ ಹಣ್ಣುಗಳು ಕಣ್ಣಿಗೆ ಕಾಣಿಸುವುದು ಕಷ್ಟವೇ! ‘ಹಾಳ್ ಮನೆ’ ಎಂಬ ಜಾಗದ ಆಸುಪಾಸಿನಲ್ಲಿದ್ದ ಕಾಟುಮಾವಿನ ಮರಗಳು, ಮಾಷ್ಟ್ರ ಮನೆ ಹಾಡಿಯಲ್ಲಿ ಮತ್ತು ಹಂಜಾರ‍್ರ ಮನೆ ಹತ್ತಿರದ ಇಂತಹ ಮರಗಳು ನಮಗೆ ಮಕ್ಕಳಿಗೆ ಬಹುಪ್ರಿಯ. ಹಾಗೇ ಈ ಮರಗಳಿಗೂ ಮಕ್ಕಳೆಂದರೆ ಮಮತೆ; ಬೇಸಗೆ ರಜೆಯಲ್ಲೇ ಹಣ್ಣುಗಳನ್ನು ಬಿಟ್ಟು ಕರೆಯುತ್ತಿದ್ದವು!  ಬೆಳಗಿನ ಜಾವಕ್ಕೇ ಎದ್ದು ಹಚ್ಕುಕ್ಕೆ (ಬಿಳಲಿನ ಬುಟ್ಟಿ) ಹಿಡಿದುಕೊಂಡು ಕತ್ತಲು, ಕಲ್ಲು, ಮುಳ್ಳು ಯಾವುದನ್ನೂ ಲೆಕ್ಕಿಸದೆ ಅಷ್ಟು ದೂರ ಓಡುತ್ತಲೇ ಧಾವಿಸುತ್ತಿದ್ದೆವು. ಇನ್ಯಾರಾದರೂ ಬರುವ ಮುಂಚೆ ನಾವೇ ಹಣ್ಣುಗಳನ್ನು ಹೆಕ್ಕಿಕೊಳ್ಳಬೇಕೆಂಬ ಗಡಿಬಿಡಿ. ಧಡ್‌ಗುಟ್ಟಿಕೊಂಡು ಓಡಿಬಂದ ನಮಗೆ ನಿರಾಸೆ ಮಾಡಲಿಚ್ಛಿಸದ ಮರಗಳು ನಲವತ್ತು-ಐವತ್ತಕ್ಕೆ ಕಮ್ಮಿಯಿಲ್ಲದಂತೆ ಹಣ್ಣುಗಳನ್ನು ಉದುರಿಸುತ್ತಿದ್ದವು! ಅವನ್ನೆಲ್ಲಾ ಕುಕ್ಕೆಗೆ ತುಂಬಿ ತಂದು, ತೊಳೆದು ಚೊಟ್ಟು, ಸೊನೆ ಕಚ್ಚಿ ಥೂ ಎಂದುಗಿದು ಮೂರ್ನಾಲ್ಕು ಹಣ್ಣುಗಳನ್ನು ಸೀಪಿ ಸೀಪಿ ತಿನ್ನುವುದು!  ಸಾಸ್ಮೆ, ರಸಾಯನ, ಹುಳಿ ಹೀಗೆ ಏನೆಲ್ಲಾ ತಯಾರಿಸಿಯೂ ಖರ್ಚಾಗದೇ ಉಳಿದ ಹಣ್ಣುಗಳಿಂದ ಅಮ್ಮಮ್ಮ, ಅಮ್ಮ ‘ಹಣ್ಣ್ಚಟ್ಟ್’ (ಮಾಂಬಳ) ಮಾಡುತ್ತಿದ್ದರು. ಹಣ್ಣಿನ ರಸವನ್ನು ದಿನಗಟ್ಟಲೆ ಖಾರದ ಬಿಸಿಲಿಗೆ ಒಣಗಿಸಿ ಮಾಡುವ ಹುಳಿ-ಸಿಹಿ ಮಿಶ್ರಿತ ಹಣ್ಣ್ ಚಟ್ಟು ನಾಲ್ಕೈದು ತಿಂಗಳು ಹೊಗೆಕಂಡಿಯ ಡಬ್ಬದಲ್ಲಿ ಬೆಚ್ಚಗೆ ಕುಳಿತು ಚಾಕೋಲೇಟಿನ ಕರ್ತವ್ಯವನ್ನು ನಿಭಾಯಿಸುತ್ತಿತ್ತು!

ನಮ್ಮ ಮುದೂರಿ ಬೈಲಿನಲ್ಲಿ ಎರಡು ಹೊನ್ನೆ (ಸುರಹೊನ್ನೆ) ಮರಗಳಿದ್ದವು. ಒಂದು ಹಂಚಿನ್ಮನಿ ಕೆರೆಗೆ ಬಾಗಿಕೊಂಡು; ಮತ್ತೊಂದು ಮೂರ್ಮುಡಿ ತೋಡಿನ ಹತ್ತಿರ. ಬಿಳಿ ಹೂವಿನ ನಡುವೆ ಹಳದಿ ಕುಸುಮ, ಕೇಂದ್ರದಲ್ಲೊಂದು ಕೆಂಪು ಮಣಿಯಂಥಾ ರಚನೆ… ಸುಗಂಧ ಭರಿತ ಗೊಂಚಲು ಗೊಂಚಲು ಹೂಗಳು;  ಕಡುಹಸುರಿನ ಎಲೆಗಳು! ಹೊನ್ನೆಹೂಗಳ ಪರಿಮಳ ಸುತ್ತ ಒಂದು ಮಾರು ದೂರದವರೆಗೂ ಹರಡಿರುತ್ತದೆ.ಬೆಳಿಗ್ಗೆ ತುಸು ದುಗುಡದ ಕಾಲೆಳೆಯುತ್ತಾ ಶಾಲೆಗೆ ಹೋಗುವಾಗ ಸಾಲು ತೆಂಗಿನಮರಗಳಲ್ಲಿದ್ದ ಗೀಜುಗನ ಗೂಡುಗಳೊಂದಿಗೆ ಹೊನ್ನೆಮರವೂ ಸಂತೈಸುತ್ತಿತ್ತು. ಸಂಜೆ ಕುಣಿಯುತ್ತ ಮನೆಗೆ ಹಿಂದಿರುಗುವಾಗ ನಕ್ಕು ಬಳಿ ಕರೆಯುತ್ತಿತ್ತು! ಆ ಕರೆಗೆ ಸೋತು ಒಂದೆರಡು ಹೂ ಕೊಯ್ದು ಮೂಸಿ ಆಟವಾಡುತ್ತಾ ಅಲ್ಲೇ ಒಂದಷ್ಟು ಹೊತ್ತು ಕಳೆಯುತ್ತಿದ್ದೆವು. ಸ್ವಲ್ಪ ದೂರದ ಮನೆಯ ಚಿಟ್ಟೆ(ದಂಡೆ)ಯಲ್ಲಿ ಹಣೆಗೆ ಕೈಯ್ಯಾನಿಸಿ ನಿಂತು ನೋಡುವ ಅಮ್ಮಮ್ಮನ ಕಣ್ಣಿಗೇನಾದರೂ ಬಿದ್ದರೆ ಮುಗಿಯಿತು, ಸಿಟ್ಟುಗೊಂಡು ಮನೆಗೆ ಹೋದೊಡನೆ “ಅಲ್ಲ್ ಕ್ಯರಿಗ್ ನೀಕುದ್ ಎಂತ ಮಕ್ಳೇ, ಸೀದ ಮನಿಗ್ ಬಪ್ಕಾತಿಲ್ಯಾ?” ಎನ್ನುತ್ತಿದ್ದರು!

ಹಾಲಾಡಿ ಶಾಲೆಗೆ ಹೋಗುವಾಗ ದೇವಸ್ಥಾನದ ಹತ್ತಿರದ ಹಾಡಿಯ ಒಳದಾರಿಯಲ್ಲಿ ಕೊಯ್ಕಾಡಿ ಮೇಲೆ ಹೋಗುತ್ತಿದ್ದೆವು. ಹೀಗೆ ಹೋದರೆ ಆಚೆಪೇಟೆಯಲ್ಲಿರುವ ಶಾಲೆಗೆ ಸ್ವಲ್ಪ ಹತ್ತಿರವಾಗುತ್ತದೆ… ಎಂದರೆ, ಎರಡು ಮೈಲಿಯ ದಾರಿ. ಇದು ಬಿಟ್ಟು ನೇರವಾಗಿ ಹಾಲಾಡಿ ಮುಖ್ಯಪೇಟೆಯಾಗಿ ಹೋಗಿ ಮತ್ತೆ ಶಾಲೆಗೆ ಹೋಗುವುದೆಂದರೆ ಮತ್ತೊಂದು ಮೈಲಿ ಜಾಸ್ತಿಯಾಗುತ್ತದೆ. ಹಾಗಾಗಿ ಇಬ್ಬರು ಮೂವರು ಹುಡುಗಿಯರು ಒಟ್ಟಾಗಿ ಹಾಡಿಯ ನಡುವಿನ ಕಾಲುದಾರಿಯಲ್ಲಿ ನಡೆಯುತ್ತಿದ್ದೆವು.  ಇಲ್ಲಿ ದೊಡ್ಡ ದೊಡ್ಡ ಹಣ್ಣುಗಳನ್ನು ಬಿಡುವ ಜುಳ್ಕನಮರಗಳು ಸಿಗುತ್ತಿದ್ದವು. ಇದರೊಳಗೆ ಪೂರ್ತಿ ಹಳದಿ, ಹುಳಿಮಿಶ್ರಿತ ದೊಡ್ಡ ದೊಡ್ಡ ಸೊಳೆಗಳು. ಬೊಬ್ಬರ್ಯ, ಉಮ್ಮಲ್ತಿಯರ ಗುಡಿಯ ಹತ್ತಿರವೂ ಈ ಮರಗಳಿದ್ದವು. ಇವಲ್ಲದೆ ಈ ಕಾಡಿನ ದಾರಿಯಲ್ಲಿ ಅಸಂಖ್ಯಾತ ಬೋಗಿ, ಕಿರಾಲ್ ಬೋಗಿ, ಸಳ್ಳೆ, ನೇರಳೆ, ಕಾಸಾನ್, ಅಂಡಾರ್, ಮತ್ತಿ, ಧೂಪ, ಗ್ವಾಯ್ ಮರಗಳು… ಹೆಸರೇ ಗೊತ್ತಿಲ್ಲದ ಎಷ್ಟೋ ಮರಗಳಿದ್ದವು. ಇಂತಹ ದಿನನಿತ್ಯ ನೋಡಿದ ಕಾಡಿನ ಚಿತ್ರಗಳು ನನ್ನೊಳಗೆ ತುಂಬಿಕೊಂಡಿವೆ. ಆದರೆ ಆಗಿದ್ದ ಹಾಡಿಯ ಮರಗಳು ಈಗಿಲ್ಲ; ಕಡಿಸಿಕೊಂಡು ನಾಶವಾಗಿವೆ. ಬದಲಿಗೆ ಅವುಗಳ ಮುಂದಿನ ಪೀಳಿಗೆಯವು ಬೆಳೆದು ಬಾಳುತ್ತಿರಬಹುದು!  ಹೈಸ್ಕೂಲು, ಕಾಲೇಜಿನ ದಿನಗಳಲ್ಲಿ ಮನೆಯಿಂದ ಹಾಲಾಡಿ ಪೇಟೆಗೆ ಹೋಗುವ ಕಾಲುದಾರಿಯ ಅಕ್ಕಪಕ್ಕದಲ್ಲಿದ್ದ ಮರಗಿಡಗಳು ಸಂಗಾತಿಯಾದವು. ಅಂಥಾ ದಟ್ಟ ಕಾಡಿನ ಮಧ್ಯೆ ಮಳೆ ಬಿಸಿಲು ಚಳಿಯೆನ್ನದೆ ನಡೆದುಹೋಗುತ್ತಿದ್ದುದು ನಾನೇ ಹೌದಾ ಎಂಬ ಯೋಚನೆ ಬಂದಾಗ, ಈಗಲೂ ಅಲ್ಲಿನ ಮಕ್ಕಳು ಅದೇ ದಾರಿಯಲ್ಲಿ ದಿನನಿತ್ಯ ನಡೆದು ಶಿಕ್ಷಣಕ್ಕಾಗಿ ಪೇಟೆಗೆ ಹೋಗಿ ಬರುತ್ತಿದ್ದಾರೆಂಬ ವಾಸ್ತವ ಎಚ್ಚರಿಸುತ್ತದೆ. ಅವರ ಕಷ್ಟ ಇಲ್ಲೆಲ್ಲೋ ದೂರದಲ್ಲಿ ಕುಳಿತ ನನ್ನನ್ನು ತಾಕುತ್ತದೆ… ಅಂದು ಹಾಲಾಡಿ ಹತ್ತಿರ ಹತ್ತಿರ ಗದ್ದೆ ಬದಿ ಸಿಗುತ್ತಿದ್ದ ಎರಡು-ಮೂರು ‘ನಾಯಿಸಂಪಿಗೆ’ಯ ಮರಗಳು ಆಕರ್ಷಿಸಿದ್ದವು. ಸುವಾಸನೆಯ ಹಳದಿ ಮಿಶ್ರಿತ ಬಿಳಿ ಹೂಗಳನ್ನು ಬಿಡುವ ಈ ಮರಗಳನ್ನು ಬೇರೆ ಕಡೆಯಲ್ಲೆಲ್ಲ ‘ನಾಗಸಂಪಿಗೆ’ಯೆಂದು ಕರೆದರೂ ನಮ್ಮಲ್ಲಿ ನಾಯಿಸಂಪಿಗೆ ಎಂಬ ಹೆಸರು ಯಾಕೆ ಬಂತೋ ತಿಳಿಯದು. ಆದರೆ, ಕೆಲವರು ಅಭಿಪ್ರಾಯ ಪಡುವಂತೆ ಅದರಿಂದ ಆ ಮರಕ್ಕೆ, ಹೂವಿಗೆ ಕುಂದುಂಟಾಯಿತೆಂದು ನನಗೆ ಯಾವತ್ತೂ ಅನಿಸಿಲ್ಲ; ಬದಲಿಗೆ ಘನತೆ ಹೆಚ್ಚಿತು. ಏಕೆಂದರೆ ಇತರೆಲ್ಲಾ ಪ್ರಾಣಿ ಪಕ್ಷಿಗಳಂತೆಯೇ ನಾಯಿಯೂ ಮುಗ್ಧ, ಸರಳ ಜೀವಿ. ಅದಲ್ಲದೆ ಮನುಷ್ಯನ ಸ್ನೇಹಿತನಾಗಿ, ನಂಬಿಗಸ್ಥನಾಗಿ ಕೆಲಸ ಸಲ್ಲಿಸುವ ಪುಟ್ಟಜೀವ. ಈ ಹೆಸರು ನಮ್ಮ ಪ್ರಾದೇಶಿಕ ವೈಶಿಷ್ಟ್ಯತೆಯಾಗಿ ಉಳಿದುಕೊಳ್ಳುತ್ತದೆ. ನಾಯಿಸಂಪಿಗೆಯ ಉದ್ದುದ್ದ ಎಲೆಯಲ್ಲಿ ಹಲಸಿನ ಹಣ್ಣಿನ ಕಡುಬು ಮಾಡಿದರೆ ರುಚಿಯಂತೆ!

ದರೆಮನೆಯಲ್ಲಿದ್ದ ಬಾಗಾಳ್(ಬಕುಲ) ಮರವಂತೂ ನಮ್ಮನೆಯಲ್ಲಿ ಬೆಳೆದು ದೊಡ್ಡವರಾದ ಎಲ್ಲ ಮಕ್ಕಳಿಗೂ ಸ್ನೇಹಿತೆ. ಹುತ್ತವೊಂದರ ಮೇಲೆ ನೆಲೆ ಕಂಡುಕೊಂಡಿದ್ದ ಮರವಿದು. ಸಣ್ಣ ಚಕ್ರದಂತಿದ್ದು ನಡುವೆ ರಂಧ್ರವನ್ನು ಹೊಂದಿದ ನವಿರು ಪರಿಮಳದ ಹೂ ಇದರದ್ದು. ಬೆಳಿಗ್ಗೆ ಬೇಗ ಎದ್ದು ಬಾಗಾಳ್ ಹೂ ಹೆಕ್ಕಿ ಸಿಬ್ಲಿಗೆ ತುಂಬಿಕೊಂಡು ಬಂದು, ಸುರಿದು ದಂಡೆ ಮಾಡುತ್ತಿದ್ದೆವು. ಇದಕ್ಕಿಂತ ತುಸು ಘಾಟು ಸುವಾಸನೆಯ ಸುರಗಿ ಮರಗಳೂ ಮಕ್ಕಳನ್ನು ಕೈ ಬೀಸಿ ಕರೆಯುತ್ತಿದ್ದವು. ಕಾಂಡ, ಗೆಲ್ಲಿನ ಮೇಲೆಯೇ ಬಿಡುವ ಸುರಗಿ ಮೊಗ್ಗು ಕೊಯ್ದು ತಂದು ಜಾಣ್ಮೆಯಿಂದ ಬಾಳೆಬಳ್ಳಿಗೆ ಸುರಿಯಬೇಕು. ಬಿಸಿಲಲ್ಲಿ ಒಣಗಿಸಿದಾಗ ಸುವಾಸನೆ, ತಾಜಾತನ ಕಳೆದುಕೊಳ್ಳದೆ ತುಂಬ ದಿನ ಉಳಿದುಕೊಳ್ಳುವುದು ಈ ಹೂವಿನ ವೈಶಿಷ್ಟ.  ಹಾಗಾಗಿ ಕುಡುಬಿ ಜನಾಂಗದವರ ಹೋಳಿಹಬ್ಬದ ಅಲಂಕಾರದಲ್ಲಿ ಪ್ರಮುಖ ಹೂವಿದು. ನಾವು ಶಾಲೆಮಕ್ಕಳೂ ಅಷ್ಟೇ, ಸುರಗಿ, ಬಾಗಾಳ್ ದಂಡೆ ಮುಡಿದು ಪರಿಮಳ, ಚೆಲುವನ್ನು ಎರವಲು ಪಡೆದು ಖುಷಿಪಡುತ್ತಿದ್ದೆವು.

ಮನೆ ಹತ್ತಿರದ ಸಣ್ಣ್ತೋಡಿದೆಯಲ್ಲ, ಅದರ ಎದುರಿಗೆ ದೊಡ್ಡ ದರೆ. ಆ ದರೆಯನ್ನು ಹತ್ತಿ ಹೋದರೆ ಉದ್ದಾನುದ್ದಕ್ಕೆ ಚಾಚಿಕೊಂಡ ಹಾಡಿ. ಅಲ್ಲೇ ಎದುರಲ್ಲೇ ದುಗ್ಳ್ ಧೂಪದ ಮರವೊಂದಿತ್ತು. ತೀರಾ ಅಪರೂಪದ ಇದರ ಪ್ರಯೋಜನ ಪಡೆಯಲು ಮನುಷ್ಯನೊಬ್ಬ ಬರುತ್ತಿದ್ದ. ಕೊಡಲಿ ಡಬ್ಬಗಳನ್ನು ಹಿಡಿದು ಆಗಾಗ ಬಂದು ಕಾಂಡವನ್ನು ಕೆತ್ತಿ ಡಬ್ಬವಿಟ್ಟು ಹೋಗುತ್ತಿದ್ದ; ಆಮೇಲೆ ಬಂದು ಮೇಣವನ್ನು ಸಂಗ್ರಹಿಸಿಕೊಳ್ಳುತ್ತಿದ್ದ. ಹೀಗೆ ಬೇರೆ ಬೇರೆ ಕಡೆಯ ಇಂತಹ ಮರಗಳಿಂದ ಒಟ್ಟು ಮಾಡಿದ ರಾಳವನ್ನು ಯಾರೋ ವ್ಯಾಪಾರಸ್ಥರಿಗೆ ಮಾರುತ್ತಿದ್ದನೆಂದು ಕಾಣುತ್ತದೆ. ಅವನ ಕೆಲಸವನ್ನು ಕಂಡೂ ಹಳ್ಳಿಯವರು ಏನೂ ಹೇಳುತ್ತಿರಲಿಲ್ಲ. ಇದಕ್ಕೆಲ್ಲ ವಿರೋಧ ವ್ಯಕ್ತಪಡಿಸಬೇಕೆಂದು ಗೊತ್ತಿರಲೇ ಇಲ್ಲವೇನೋ! ಹೀಗೆ ಕೆತ್ತಿ ಕೆತ್ತಿ ಕ್ರಮೇಣ ಆ ಮರವೇ ಮುರಿದುಬಿದ್ದು ನಾಶವಾಯಿತು! ಉಳ್ಳವರ ಮನೆಗೆ ಧೂಪ ಉರಿಸುವ ಸಲುವಾಗಿ ಕಾಡಿನಲ್ಲಿದ್ದ ಎಲ್ಲ ದುಗ್ಳ್ ಧೂಪದ ಮರಗಳೂ ಈ ಹೊತ್ತಿಗೆ ಕಾಣೆಯಾಗಿರಬಹುದು!ಈ ಮರದ ಹತ್ತಿರವೇ ಎರಡು ಹೆಬ್ಬಲಸಿನ ಮರಗಳಿದ್ದವು. ಗೊಂಚಲು ಗೊಂಚಲು ಕಾಯಿಗಳನ್ನು ಬಿಡುವ ಹಲಸಿನ ಜಾತಿಗೆ ಸೇರಿದ ಮರವಿದು. ಬೇಸಗೆ ರಜೆ ಹೆಬ್ಬಲಸು ಹಣ್ಣಾಗುವ ಕಾಲ. ಸುಲಿದ ತೆಂಗಿನಕಾಯಿ ಗಾತ್ರದ ದೋರೆಗಾಯಿಗಳನ್ನು ಕೊಕ್ಕೆಯಲ್ಲಿ ಕೊಯ್ದು ಹುಲ್ಲುಕುತ್ರೆಯೊಳಗೆ ಹುದುಗಿಸಿಡುತ್ತಿದ್ದೆವು. ಹುಲ್ಲಿನ ಶಾಖಕ್ಕೆ ಹಣ್ಣಾದ ಹೆಬ್ಬಲಸನ್ನು ಹಿಸಿದು ಭಾಗಮಾಡಿ ಒಳಗಿನ ಕಡು ಹಳದಿ ಸೊಳೆಗಳನ್ನು ಬಾಯಿಗೆ ಹಾಕಿ ಉಜುಬಿ ಬೀಜ ಉಗಿಯುವುದು. ಮನೆ ಬಾಗಿಲು, ಕಿಟಕಿ, ಪೀಠೋಪಕರಣಗಳಿಗೆ ಉತ್ಕೃಷ್ಟ ಮೋಪನ್ನು ಒದಗಿಸುವ ತಪ್ಪಿಗಾಗಿ ಈ ಮರಗಳೂ ಈಗ ಖಾಲಿಯಾಗುತ್ತ ಬಂದಿವೆ!

ಅಂದು ಎಷ್ಟೊಂದು ಮರಗಳು! ‘ಗಣಪತಿಕಾಯಿ’ಗಳನ್ನು ರಾಶಿಗಟ್ಟಲೆ ಉದುರಿಸುತ್ತಿದ್ದ ಧೂಪದ ಮರ, ತೋಡು, ಕೆರೆಗಳ ಬದಿ ಪರಿಮಳದ ಹೂಗಳನ್ನರಳಿಸುತ್ತಿದ್ದ ಕೇದಗೆ, ಮುಂಡ್ಕ, ಹೂವಿನಂಥಾ ಬೀಜಗಳನ್ನು ಗಾಳಿಯಲ್ಲಿ-ನೀರಿನ ಮೂಲಕ ಬಹುದೂರ ಕಳಿಸುವ ಬೋಗಿ ಮರಗಳು, ನೇರಳೆ ಹಣ್ಣುಗಳನ್ನು ಗೊಂಚಲು ಗೊಂಚಲಾಗಿ ಬಿಟ್ಟು ನಾಲಗೆ ನೇರಳೆ ಮಾಡುತ್ತಿದ್ದ ನೇರ್ಲಣ್ಣಿನ್ ಮರ, ಆ ನೇರಳೆ ಬಣ್ಣವನ್ನು ತೆಗೆದು ಹಿರಿಯರ ಬೈಗುಳವನ್ನು ತಪ್ಪಿಸುತ್ತಿದ್ದ ಹಳದಿ ಹಣ್ಣುಗಳ ಸಳ್ಳೆಮರ, ಅಂಟಿನಕಾಯಿಗಳನ್ನು ಬಿಡುವ ಮರ, ಕೆಂಪು ಬೀಜದ ಮಂಜುರ್ಟಿ ಮರ, ಸುಟ್ಟ ಗಾಯಗಳನ್ನು ಗುಣಮಾಡುವ ಸಾಗುವಾನಿ ಮರ… ಪ್ರತಿಯೊಂದು ಮರದ ಚಹರೆಗಳು, ಪರಿಸರ, ಕೆಲ ಮರಗಳ ಮೇಲಿದ್ದ ಆರ್ಕಿಡ್ ಗುಬ್ಬಿಹೂ, ಮರ‍್ಬಾಳೆ(ಸೀತಾದಂಡೆ)… ಹೀಗೆ ಪ್ರತಿಯೊಂದೂ ಇಂದಿಗೂ ಸ್ಪಷ್ಟವಾಗಿ ಮೆದುಳ ಕೋಶಗಳಲ್ಲಿ ಅಡಗಿ ಕುಳಿತಿವೆ. ಆಗೆಲ್ಲ ಹೊಸ ಪರಿಚಯವಾಗಿದ್ದ ಪರಿಮಳದ ನೀಲಗಿರಿ; ಗಾಳಿ ತೋಪುಗಳು, ಅಕೇಶಿಯಾ, ಮ್ಯಾಂಜಿಯಂ, ಸುಬಾಬುಲ್ ಮರಗಳನ್ನು ಹಳ್ಳಿಯ ಜನರು ತುಸು ಅನುಮಾನದಿಂದಲೇ ಕಾಣುತ್ತಿದ್ದರು. ಇಂತಹ ಕೆಲವು ಮರಗಳ ವಿಷಯದಲ್ಲಿನ ದೂರುಗಳು ಈಗ ನಿಜವೆಂದು ಸಂಶೋಧನೆಗಳಿಂದ, ಅನುಭವದಿಂದ ಸಾಬೀತಾಗಿದೆ. ಅಕೇಶಿಯಾದಂತಹ ಮರಗಳು ಅಂತರ್ಜಲವನ್ನು ಒಣಗಿಸುತ್ತವೆ, ಪರಿಸರದ ವೈವಿಧ್ಯತೆಯನ್ನು; ಜೀವಜಂತುಗಳನ್ನು ನಾಶಗೊಳಿಸುತ್ತವೆಂದು ತಡವಾಗಿ ಎಚ್ಚರಿಕೆ ಮೂಡುತ್ತಿದೆ!

ಪ್ರಸ್ತಾಪಿಸಲೇಬೇಕಾದ ಹಲಸಿನ ಮರವೊಂದರ ಕುರಿತು ಹೇಳಿ ಬರಹವನ್ನು ಮುಗಿಸುತ್ತೇನೆ. ಹೊಳೆನರಸೀಪುರದಲ್ಲಿದ್ದ ಕೊನೆಯ ಮೂರು ವರ್ಷಗಳಲ್ಲಿ ಒಂದು ಸಣ್ಣ ಮನೆಯಲ್ಲಿದ್ದೆವು. ಇದನ್ನು ‘ಹಲಸಿನ ಮನೆ’ಯೆಂದು ಗುರುತಿಸುತ್ತೇನೆ. ಈ ಮನೆ ಕೊಟ್ಟ ಅದ್ಭುತ ಅನುಭವ ಅಳಿಸಲಾಗದ್ದು. ಓನರ್ ಮನೆಯ ಮೇಲ್ಗಡೆ ಹಿತ್ತಲಿಗೆ ಮುಖ ಮಾಡಿ ನಿಂತಿದ್ದ ಮನೆಯಿದು. ಹಿತ್ತಲಲ್ಲಿದ್ದ ದಷ್ಟಪುಷ್ಟ ಹಲಸಿನ ಮರವೊಂದು ನೇರ ಮನೆಯೊಳಗೇ ನುಗ್ಗಿತ್ತು! ಅಂದರೆ, ಹಾಲ್-ಬಚ್ಚಲಿನ ಕಿಟಕಿಗಳಲ್ಲಿ ಮರದ ಕೊಂಬೆಗಳು ಚಾಚಿದ್ದವು. ಮನೆಯೆದುರಿನ ಪುಟ್ಟ ಜಾಗದಲ್ಲಿ ರೆಂಬೆಗಳು ಆವರಿಸಿಕೊಂಡು ಎಲೆ, ಮೊಗ್ಗು, ಕಾಯಿ, ಹಣ್ಣು ಕೈಗೆಟುಕುವಂತಿದ್ದವು. ಇಡೀ ಮನೆಗೆಲ್ಲ ಹಲಸಿನ ಮರದ ವಿಶೇಷ ಘಮ. ಮರದಲ್ಲಿ ಹಾಡುತ್ತಿದ್ದ ಹಕ್ಕಿಗಳೆಲ್ಲ ಮನೆಯೊಳಗೇ ನಾದ ಹೊರಡಿಸಿದಂತೆನಿಸುತ್ತಿತ್ತು. ಇದನ್ನೆಲ್ಲ ಕಂಡೇ ಸಣ್ಣದಾದರೂ ಅಡ್ಡಿಯಿಲ್ಲ; ಸಿಕ್ಕಿದ್ದೇ ಅದೃಷ್ಟವೆಂದು ಆ ಮನೆಗೆ ಹೋಗಿದ್ದೆವು. ಸ್ವಾರಸ್ಯಕರ ಘಟನೆಯೆಂದರೆ ಕೆಲವು ಸಮಯದಲ್ಲಿ ಬೆಳಗಿನ ಜಾವ ಐದು ಗಂಟೆಗೇ ಹಕ್ಕಿಯೊಂದು ಮರದಲ್ಲಿ ಕುಳಿತು ಕೂಗುತ್ತಿತ್ತು. ʼಕೂಗಿದರೆ ಕೂಗಲಿʼ ಎಂದು ಅಲಕ್ಷಿಸುವಂತಿರಲಿಲ್ಲ ಆ ಕೂಗು! ಎಂದೂ ಕೇಳಿರದ ಗಟ್ಟಿ, ವಿಚಿತ್ರ ಧ್ವನಿ! ಮೊದಲೆರಡು ದಿನವಂತೂ ಬಡಿದೆಬ್ಬಿಸಿದಂತೆ, ಚಾಪೆಯಲ್ಲಿ ಹಾರಿ ಕುಳಿತಿದ್ದೆವು. ಆಮೇಲೆ ಪ್ರತಿದಿನವೂ ಅದೇ ಹೊತ್ತಿಗೆ ಕೂಗತೊಡಗಿದಾಗ ಚಳಿಯಲ್ಲಿ ಗಾಢನಿದ್ದೆಯಾಳದಿಂದ ಎದ್ದು ಕುಳಿತು ಹಕ್ಕಿಯ ಬಗ್ಗೆ ಮಾತಾಡಿಕೊಂಡು ಅದರ ಕೂಗನ್ನು ಆಸ್ವಾದಿಸಿ ಮತ್ತೆ ಹೊದ್ದು ಮಲಗುತ್ತಿದ್ದೆವು. ಶನಿವಾರದ ಮಾರ್ನಿಂಗ್ ಸ್ಕೂಲಿನ ದಿನ ಈ ಹಕ್ಕಿಯದ್ದೇ ಅಲರಾಂ!!  ಒಂದೊಂದು ಎಲೆಯೂ, ರೆಂಬೆಕೊಂಬೆಯೂ, ಹಣ್ಣೂ, ಹಣ್ಣಿನೊಳಗಿನ ಸೊಳೆ(ತೊಳೆ) ಯೂ ಗುಂಡು ಗುಂಡಾಗಿದ್ದದ್ದು ಈ ಹಲಸಿನ ಮರದ ವಿಶೇಷತೆ.  ನಮ್ಮಲ್ಲಿ ಎಲ್ಲರಿಗೂ ಹಲಸಿನ ಹಣ್ಣು ಹೇಳ ತೀರದ ಇಷ್ಟ. ಅದಲ್ಲದೆ ಮನೆಯೆದುರು ಕುಳಿತರೆ ಹಲಸಿನ ಮರದಲ್ಲೇ ಕುಳಿತಂತೆ ಭಾಸ!  ‘ಹಲಸಿನ ಮನೆ’ಯನ್ನು ಖಾಲಿ ಮಾಡಿ ಬರುವಾಗ ಈ ಧಡೂತಿ ಹಲಸಿನ ಮರವನ್ನು ಬೀಳ್ಕೊಳ್ಳುವುದು ಬಹಳ ಕಷ್ಟವಾಯಿತು.

ಪೂರ್ಣಚಂದ್ರ ತೇಜಸ್ವಿ ಅವರು ‘ಮರವೆನ್ನುವ ಕಾರ್ಖಾನೆ’ ಎಂಬ ಬರಹದಲ್ಲಿ “ಮರಗಳು ತಮ್ಮ ಜಟಿಲವಾದ ಬೇರಿನ ಜಾಲದಿಂದ ನೂರಾರು ಅಡಿ ಎತ್ತರಕ್ಕೆ ನೆಲದಿಂದ ನೀರನ್ನೆತ್ತುತ್ತವೆ. ಒಂದು ಸಾಧಾರಣ ಮರ ಎಲೆಗಳ ಮುಖಾಂತರ ಜೈವಿಕ ಕ್ರಿಯೆಯಲ್ಲಿ ಆವಿಯಾಗಿ ಬಿಡುಗಡೆ ಮಾಡುವ ನೀರಿನ ಪ್ರಮಾಣ ದಿನಕ್ಕೆ ಐವತ್ತು ಲೀಟರ್!  ಈ ಕ್ರಿಯೆಯಲ್ಲಿ ಒಂದು ಮರ ತಿಂಗಳಿಗೆ ಸರಾಸರಿ ಹದಿನಾಲ್ಕು ಟನ್ ನೀರನ್ನು ನೆಲದಾಳದಿಂದ ಮೇಲಕ್ಕೆತ್ತಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ” ಎನ್ನುತ್ತಾರೆ.  ಹೌದು, ಮರಗಳು ವಿಸ್ಮಯಗಳ ಆಗರ. ಕೆಲವು ಮರಗಳು ಮುನ್ನೂರು ಅಡಿಗಿಂತಲೂ ಎತ್ತರಕ್ಕೆ ಬೆಳೆಯುತ್ತವೆ. ಒಂದು ಸಾವಿರ ವರ್ಷಕ್ಕಿಂತಲೂ ಹೆಚ್ಚು ಕಾಲ ಬದುಕಿ ಬಾಳಿದ ಮರಗಳೂ ಇವೆ! ಭೂಮಿಯ ಮೇಲೆ ಮುನ್ನೂರ ಎಪ್ಪತ್ತು ದಶಲಕ್ಷ ವರ್ಷಗಳಿಂದ ಮರಗಳು ಅಸ್ತಿತ್ವದಲ್ಲಿವೆ ಎನ್ನುತ್ತಾರೆ ಸಂಶೋಧಕರು. ಆದರೆ ಇಂತಹ ಜೀವದಾಯಿ ಮರಗಳು ಇಂದಿನ ಮನುಷ್ಯನಿಗೆ ಬೇಡವಾಗಿವೆ. ಹಿಂದಿನ ತಲೆಮಾರಿನವರ ನಿಸರ್ಗದೊಂದಿಗಿನ ಸಹಬಾಳ್ವೆ ಇಂದು ರುಚಿಸುತ್ತಿಲ್ಲ;  ಬದಲಿಗೆ ಸಸ್ಯಗಳನ್ನು ಕಿತ್ತು, ಸುಟ್ಟು ಹಾಕುವ ಒಂದು ಥರದ ಅಸಹನೆ! ʼಕ್ಲೀನ್ʼ, ಸ್ವಚ್ಛತೆ ಎಂಬ ಪರಿಕಲ್ಪನೆ ಅತಿರೇಕಕ್ಕೇರಿದೆ ಅಥವಾ ಅಪವ್ಯಾಖ್ಯಾನಕ್ಕೊಳಗಾಗಿದೆ. ರಸ್ತೆ ಬದಿಯ ಮರಗಳನ್ನು, ಗಿಡ, ಪೊದೆಗಳನ್ನು ಯಾವುದೇ ಕಾರಣಗಳನ್ನು ಕೊಡದೆ ಕಡಿದೆಸೆಯಲಾಗುತ್ತಿದೆ. ಆಧುನಿಕ ಮನುಷ್ಯನ ಇಂತಹ ನಡತೆ ನಿಜಕ್ಕೂ ವಿಚಿತ್ರವಾಗಿದೆ. ಬುಡಕಟ್ಟು ಜನರು, ಆದಿವಾಸಿಗಳು ಸಸ್ಯಸಂಕುಲಕ್ಕೆ, ಪರಿಸರಕ್ಕೆ ಹಾನಿ ಮಾಡಬಾರದೆಂಬ ಸ್ಪಷ್ಟ ನಿಲುವನ್ನು ಮೊದಲಿನಿಂದಲೂ ಹೊಂದಿದ್ದರು. ಅವರ ಆಚರಣೆಗಳು, ಜೀವನ ವಿಧಾನವೂ ಇದನ್ನೇ ಸೂಚಿಸುತ್ತದೆ. ಆದರೆ ‘ಅಭಿವೃದ್ಧಿ’ಯ ಹುಚ್ಚು ಹೆಚ್ಚಾಗಿರುವ ನಮಗೆ ಮಂಕು ಕವಿದುಕೊಂಡಿದೆ. ಪರಿಸರದ ಕೇಂದ್ರಬಿಂದು ತಾನೇ ಎಂದು ಮನುಷ್ಯ ಪರಿಭಾವಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಭ್ರಮೆ ತೊಲಗಿ ಪಶು, ಪಕ್ಷಿ, ಹುಳಹುಪ್ಪಟೆ, ಕ್ರಿಮಿಕೀಟಗಳು, ಕಲ್ಲು, ಮಣ್ಣು, ಬೆಟ್ಟ, ಗುಡ್ಡ, ಮರಗಿಡಗಳಂತೆಯೇ ತಾನೂ ಭೂಮಿಯಲ್ಲಿ ‘ಎಲ್ಲರೊಳಗೊಂದಾದ’;ಎಲ್ಲರೊಳಗೊಂದಾಗಬೇಕಾದ ಜೀವಿ ಎಂಬ ಅರಿವು ಮೂಡಿದರೆ ಸ್ವತಃ ಮನುಷ್ಯನಿಗೂ, ನಿಸರ್ಗಕ್ಕೂ, ಪೊರೆವ  ಭೂಮಿತಾಯಿಗೂ ನೆಮ್ಮದಿ.

ಚಿತ್ರಕೃಪೆ: ವಿಜಯಶ್ರೀ ಹಾಲಾಡಿ

**********************

ವಿಜಯಶ್ರೀ ಹಾಲಾಡಿ

ಹುಟ್ಟೂರು: ಮುದೂರಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಬಳಿ ಗ್ರಾಮ..ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ 16 ವರ್ಷಗಳ ಸೇವೆ ಮಾಡಿದ್ದಾರೆ.  ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ್ದಾರೆ..ಆಸಕ್ತಿಯ ಕ್ಷೇತ್ರಗಳು:ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ,  ಕಾಡಿನ ತಿರುಗಾಟ ಮುಂತಾದವು.ಕೃತಿಗಳು :ಬೀಜ ಹಸಿರಾಗುವ ಗಳಿಗೆ,ಓತಿಕ್ಯಾತ ತಲೆಕುಣ್ಸೆ,ಅಲೆಮಾರಿ ಇರುಳು,  ಪಪ್ಪುನಾಯಿಯ ಪೀಪಿ,  ಸೂರಕ್ಕಿ ಗೇಟ್,  ಜಂಬಿಕೊಳ್ಳಿ ಮತ್ತು ಪುಟ್ಟವಿಜಿ,ಸಾಕು ಬೆಳಕಿನ ಮಾತು , ಪ್ರಕಟಿತ ಕೃತಿಗಳು.ಪಪ್ಪುನಾಯಿಯ ಪೀಪಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.ಜಿ.ಬಿ. ಹೊಂಬಳ ಸಾಹಿತ್ಯ ಪುರಸ್ಕಾರ, ಡಿಸೋಜ- ಎಚ್ಚೆಸ್ವಿ ಪುಟಾಣಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ , ಶಾರದಾ ರಾವ್ ದತ್ತಿನಿಧಿ ಬಹುಮಾನ ಇನ್ನಿತರ ಕೆಲ ಪ್ರಶಸ್ತಿಗಳು ಬಂದಿವೆ. ಪತ್ರಿಕೆಗಳಲ್ಲಿ ಕವಿತೆ, ಕಥೆ, ಪ್ರಬಂಧ, ಲೇಖನಗಳು ಪ್ರಕಟವಾಗಿವೆ.ಎರಡು ಮಕ್ಕಳ ಕವಿತೆಗಳು ಸಿಬಿಎಸ್ ಸಿ  ಸಿಲೆಬಸ್ ಲ್ಲಿ ಪಠ್ಯವಾಗಿದ್ದವು.ಈಗ ಏಳನೇ ತರಗತಿ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಮಕ್ಕಳ ಪದ್ಯವೊಂದು ಪಠ್ಯವಾಗಿದೆ.

2 thoughts on “

  1. Neal sampige…..ankana baraha…..nimma mathu kadina madiya sambada …edukanthide mam ….super mam

    1. ಥ್ಯಾಂಕ್ಯೂ ಮೇಡಂ….. ಓದಿ ತಿಳಿಸಿದ್ದಕ್ಕೆ ತುಂಬಾ ಧನ್ಯವಾದ

Leave a Reply

Back To Top