ಡಾ. ನಿರ್ಮಲಾ ಬಟ್ಟಲ ಕವಿತೆಗಳು
ಕನಸಿರದವಳು
ಕನಸುಗಳಿರದವಳು ನಾನು
ಯಾವ ಕನಸು ಬೇಕು
ಎಂದು ಕೇಳಿದರೆ ಏನು ಹೇಳಲಿ….?
ಕನಸೆಂದರೆ ಕಾಮನಬಿಲ್ಲು
ನನಗೆ ಕಂಡಷ್ಟೇ ಸುಂದರ
ಕೈಗೆ ಸಿಗದ ಒಲವು….!
ಕನಸುಗಳ ಹಿಂದೆದೂ
ಬೆನ್ನಟ್ಟಿ ಓಡಿದವಳಲ್ಲ
ಕಾಡಿದವಳೂ ಅಲ್ಲ….!
ಕನಸಿಗೆ ಬಣ್ಣ ತುಂಬುವ
ಕಲೆಗಾರ ಚಿತ್ರಿಸದಿರು
ಬಣ್ಣಗಳ ಚೌಕಟ್ಟಿನೊಳಗೆ
ಬಯಲ ಪ್ರೀತಿಸುವವಳು ನಾನು..!
ಕನಸುಗಳ ಮೀನು ಹಿಡಿವ
ಬೆಸ್ತಗಾರ ಸಿಕ್ಕಿಸದಿರು ನನ್ನ
ಬಲೆಯೊಳಗೆ
ಹರಿವ ನೀರು ಸೇರುವವಳು ನಾನು..!
ಕನಸಿಗೆ ರೆಕ್ಕೆ ಕಟ್ಟುವ
ಮಾಯಗಾರ
ಮೋಡಿಮಾಡದಿರು
ಮುಗಿಲೊಳಗೆ
ನೆಲದೊಳಗೆ ಕಾಲುರಿ ನಿಂತವಳು ನಾನು….!
ನನಗಾಗಿ
ನೀನು ಹೊತ್ತು ತಂದ
ನೂರು ಕನಸುಗಳಲಿ
ಯಾವುದನ್ನು ಆರಿಸಲಿ….?
ನೀನು ಪ್ರೀತಿಯಿಂದ
ಕೊಟ್ಟರೆ ಯಾವುದಾದರೂ ಸರಿ
ಇಟ್ಟು ಕೊಳ್ಳುವೆ
ನನಸಾಗಿಸುವ ಪಣ
ತೊಟ್ಟುಕೊಳ್ಳುವೆ…!
ಕನಸು ಹೆಣೆವ ನೇಕಾರ
ನೀ ನೇಯುವ
ಎಳೆ ಎಳೆಯೊಳಗೆ
ಚಂದದ ಚುಕ್ಕಿಯಾಗಿ
ಅಂದದ ಚಿತ್ತಾರವಾಗಿ
ನಿನ್ನ ಕನಸುಗಳ
ಅರಸಿ ಬರುವೆ….!
ಗೆಳೆಯಾ….
ಗೆಳೆಯಾ…
ಹಸಿದು ಬಂದರೆ ನೀನು
ನನ್ನ ಬಳಿ ಇರುವುದು ಬರಿ
ಭಾವಬುತ್ತಿ….!
ಬಿಚ್ಚಿ ಕೊಡುವೆ
ಕೈಯೊಡ್ಡು….!
ತುತ್ತು ತುತ್ತನು
ಅದ್ದಿ ಕೊಡುವೆ
ಸ್ನೇಹವೆಂಬ ಜೇನಲಿ….!
ಸವಿಯೆ ನೀನು
ಸುಖಿಯು ನಾನು
ಮಾತೃ ಹೃದಯ ಮನದಲಿ…!
ಗೆಳೆಯಾ ಬಾಯಾರಿ
ಬಳಲಿ ಬಂದರೆ ನೀನು….
ನನ್ನಲ್ಲಿದೆ ಬರೀ ಭಾವಭಾರದ ಮೋಡ
ಬೊಗಸೆಯೊಡ್ಡು….!
ಸುರಿವೆ ಪ್ರೇಮಮಳೆ
ಬರಗಾಲದ ಬಯಲನೆಲ್ಲ
ರಮಿಸಿ ….!
ಮುತ್ತುಹನಿಗಳಲ್ಲಿ ತೊಯಿಸಿ
ತುಂಬುವೆ ಒಡಲ ತುಂಬ ಜೀವಕಳೆ….!
ತೃಪ್ತ ನೀನು ಹಗುರ ನಾನು….!
ಗೆಳೆಯಾ ನೀನು
ದಣಿದು ವಿರಮಿಸಲೂ
ನನ್ನಲ್ಲಿರುವುದು
ಭಾವ ಜೋಳಿಗೆ ….!
ಹೃದಯ ಮಿಡಿತದ ಲಾಲಿಯೊಳಗೆ
ನೆತ್ತಿಯ ಮುಂಗುರುಳಲಿ
ಬೆರಳ ತೀಡುತ ಕನಸು ಬಿತ್ತುವೆ
ನಾನು….!
ಮುಗುಳುನಗುತ ಕನಸಲ್ಲಿ
ತೇಲಬೇಕು ನೀನು….!
ಲಿಂಗ…..
ಬಹಿರಂಗದಲಿ ಗಂಡುವೇಶ
ದೇಹದೋಷ
ಅಂತರಂಗದೊಳೊಂದು
ಆವೇಶ
ಹೊರಬರಲಾರದೆ
ಒಳಗಿರಲಾರದೆ
ತಲ್ಲಣದ ಸುಳಿಯೊಳಗೆ
ವಾಂಛೆಯೊಂದು ದಿಕ್ಕು ತಪ್ಪಿತು
ಲಿಂಗವೆ ಕಳೆದು ಹೋಯಿತು ತಿಳಿಯಲೆಇಲ್ಲ
ಹೆಣ್ಣುಗಂಡು ಲಿಂಗದಲಿ
ಒಂದಾದ ಹರ
ಗಂಡು ಹೆಣ್ಣಾಗಿ ಗಂಡು
ಮೋಹಿಸಿದ ಹರಿ
ದ್ವಿಲಿಂಗಿಗಳಾದುದ ನೆನೆಯಬೇಕಲ್ಲ
ಲಿಂಗದೊಳಗಿಷ್ಟು ಪರಿಯನಿಟ್ಟು
ಸುಖದತತ್ವವ ಒಳಗೆಯಿಟ್ಟು
ತಾರತಮ್ಯದ ಕಣ್ಣು ಕೊಟ್ಟು
ನೋಟ ಸರಿಯಾವುದೆಂದು
ತಿಳಿಯಲೆ ಇಲ್ಲ….!
*******************
ಕನಸಿರದವಳು ಕನಸು ಅರಸುವ ಪರಿ
ಭಾವ ಬುತ್ತಿ ಬಿಚ್ಚಿ ಕೊಡುವ ಸಿರಿ
ಲಿಂಗದೊಳಗಿನ ಗಂಡು ಮೊಹಿಸಿದ ಹರಿ
ಹರಿದು ಬಂದ ಭಾವಗಳ ಝರಿ
ಅಮೋಘ ಡಾ ನಿರ್ಮಲಾ
ಸುಂದರ ಭಾವಗಳಿಂದ, ವಿಭಿನ್ನ ಪರಿಕಲ್ಪನೆಗಳಿಂದ, ವಿಶಿಷ್ಠವಾದ ಶೈಲಿಯಲ್ಲಿ ಮೂಡಿದ ಪ್ರಬುದ್ದ ಕವನಗಳು ಡಾ ನಿರ್ಮಲಾ. ಅಭಿನಂದನೆಗಳು
ಕನಸುಗಳಿರದವಳ ಕನಸುಗಳು ಚೆಂದ…. ಗೆಳೆಯನಿಗೆ ಕೊಡುವ ಭಾವಜೋಳಿಗೆಯೊಳಗಿನ ಉಡುಗೊರೆಗಳು…ಚಂದ….
ಲಿಂಗ ತತ್ವ ಗಂಡು ಹೆಣ್ಣಾಗಿ ಗಂಡು ಮೋಹಿಸುವ ಹರಿ….
ಒಂದೊಳ್ಳೆಯ ಭಾವಲಹರಿಯನ್ನು ಚಂದಕ್ಕೆ ಕಟ್ಟಿಕೊಟ್ಟಿರುವಿರಿ…..ಡಾ ನಿರ್ಮಲಾ…. ಅಭಿನಂದನೆಗಳು