ಸೊಪ್ಪು ಹೂವೇ….

ಲೇಖನ

ಸೊಪ್ಪು ಹೂವೇ….

ಸುನೀತ ಕುಶಾಲನಗರ

Flower vendor Stock Photos - Page 1 : Masterfile

  ದಿನ ಬೆಳಗಾಗುತ್ತಲೇ ಸೊಪ್ಪು, ಹೂವೇ  ..ಎಂದು ರಾಗವಾಗಿ ಕೂಗಿಕೊಂಡು  ಮನೆ ಬಳಿ ಬರುವ ದನಿ ಕೇಳುತ್ತಲೇ ಹೊರಗೆ ಧಾವಿಸುವ ಗೃಹಿಣಿಯರು    ಪೂಜೆಗಾಗಿ ಹೂವು , ಒಗ್ಗರಣೆ ಹಾಕಲು  ಕರಿಬೇವು , ಸಂಭಾರ ಸೊಪ್ಪಿಗಾಗಿ ಅವರನ್ನೇ ಕಾಯುತ್ತಿರುವಂತೆ ತಮಗೆ ಬೇಕು  ಬೇಕಾದ   ಸೊಪ್ಪು , ಹೂವನ್ನು ಕೊಂಡು ಸಾಧ್ಯವಾದಷ್ಟು ಏರು ಧ್ವನಿಯಲ್ಲಿ ಚೌಕಾಸಿ ಮಾಡುವ  ರಾಗವೂ ಅಷ್ಟೇ ಮಾಮೂಲಿ . ಒಬ್ಬರ ಹಿಂದೆ ಒಬ್ಬರೆಂಬಂತೆ ಬರುವ ಅಮ್ಮಂದಿರು, ಅವರು ತಂದ ಕುಕ್ಕೆಯೊಳಗೆ ಬೇರೆ ಬೇರೆ  ಬಗೆಯ ಹೂಗಳು.ಕೆಲವರಿಗೆ   ಬೇಗ ಬಾಡದ  ಬಣ್ಣದ ಸೇವಂತಿಗೆಯೇ ಬೇಕು ,ಮತ್ತೆ ಕೆಲವರಿಗೆ ಗಂಧವಿಲ್ಲದ ಭಾರವಿಲ್ಲದ  ಕನಕಾಂಬರ ಚೆಂದವೆಂಬ ವಾದ . ಪೂಜೆಗಾಗಿ   ದೇವರಿಗೆ ಮುಡಿಸಲು ಕಾಕಡವೇ ಸರಿ ಮತ್ತು ಬೆಲೆ ಸ್ವಲ್ಪ ಅಗ್ಗ ಕೂಡಾ ಎಂಬುದು  ಇನ್ನು ಕೆಲವು ಗೃಹಿಣಿಯರ ಅನಿಸಿಕೆ. ಹೂ , ಬಳೆ, ಕುಂಕುಮವನ್ನು ಸದಾ ಕಾಲವೂ ಸಂಭ್ರಮಿಸುವ ನಾರಿಯರಂತೂ   ಕಂಪಿನ ಮೈಸೂರು ಮಲ್ಲಿಗೆಗಾಗಿಯೇ ಸದಾ  ಕಾಯೋದು.

        ಹಳ್ಳಿಗಳಲ್ಲಿ ತಾವೇ ಬೆಳೆದ ಹೂಗಳನ್ನು ಸುಂಗಂಧ ಭರಿತ ಎಲೆಗಳೊಂದಿಗೆ  ಅಂದವಾಗಿ ಪೋಣಿಸಿ,ಅಷ್ಟೇ ಜಾಗರೂಕತನದಿಂದ ಬಾಡದಂತೆ ಎಳೆ ಎಳೆಯಾಗಿಯೂ , ಆಕರ್ಷಕವಾಗಿಯೂ ಸುತ್ತಿ    ತುಂಬಿದ  ಹೂ ಬುಟ್ಡಿಯನ್ನು ಬಟ್ಟೆಯಿಂದ ಮುಚ್ಚಿ ಹೂವೇ…ಕನಕಾಂಬರ ಮಲ್ಲಿಗೇ…ಅಮ್ಮಾ,  ಹೂ ಬೇಕಾ? ಎಂದು ಮನೆ ಬಾಗಿಲಿಗೆ ಬಂದು ಕೇಳುವ ಪರಿಗೆ ಮತ್ತು ಬದುಕು ಕಟ್ಟಿಕೊಳ್ಳಲು ಸೆರಗು ಸಿಕ್ಕಿಸಿ  ತೆಗೆದುಕೊಳ್ಳುವ ಶ್ರಮಕ್ಕೆ  ಎಂತವರೂ ಕೂಡಾ  ಚೌಕಾಸಿ ಮಾಡದೆ ಕೊಂಡು ಗೌರವದಿಂದ  ಅವರಿಗೆ ತಲೆದೂಗಲೇಬೇಕನಿಸುತ್ತದೆ. ಏಕೆಂದರೇ ಹೆಣ್ತನದ ಹಕ್ಕನ್ನು ಪಾಲಿಸುತ್ತಾ ಹೆಣ್ಮಕ್ಕಳಿಗೆ  ಪಾಲಿಸುವಂತ ಸಂಸ್ಕಾರವನ್ನು ಬೆಳೆಸಿಕೊಳ್ಳಿರೆಂಬ  ಕರೆಯನ್ನು ಕೊಡುವ ಆದರ್ಶಪ್ರಾಯರು ಇವರು.

        ಇಲ್ಲೊಂದಮ್ಮ  ತರಾವರಿ ಸೊಪ್ಪು  ಹೊತ್ತು ಸೊಪ್ಪೇ.. ಸೊಪ್ಪೆ …ಎಂದು ಸ್ವಲ್ಪ  ಸಿಟ್ಟಲಿ  ಕೂಗುವಂತೆ ಕೇಳಿಸಿದರೂ  ಹತ್ತಿರ ಬಂದಾಗ ಸೊಪ್ಪು ಬೇಕಾ?ಎಂದು ಬುಟ್ಟಿ ಇಳಿಸಿ ತಂದ ಎಳೆ ಹಸಿರು ಸೊಪ್ಪನ್ನು ಮುಂದಿಡುವಾಗ ಅವರ  ಪ್ರಾಮಾಣಿಕ ಕಾಯಕದಂತೆಯೇ ಮನಸ್ಸು ಕೂಡಾ ಹಸಿರು ಎಂದು ಬಿಂಬಿತವಾಗುತ್ತದೆ.  ಮೆಂತೆಸೊಪ್ಪು, ಸಂಭಾರಸೊಪ್ಪು,ಕೀರೆ ಸೊಪ್ಪು, ಪಾಲಾಕ್ ಹೀಗೆ ತರಾವರಿ ತಾಳ್ಮೆಯ ಬೇರಿನಿಂದ ಬಿಡಿಸಿದ  ಹಸಿರಸಿರು ಕಂತೆ ಕಂತೆ ನೋಡುವುದೇ ಒಂದು ಸಂಭ್ರಮ. ಸೊಪ್ಪಮ್ಮನ ಗ್ರಾಮೀಣ ಭಾಷಾ ಸೊಗಡು,  ಉಟ್ಟ ಸೀರೆ , ಅವರು ಹಣ ಇಡುವ ಸಂಚಿ, ಬುಟ್ಟಿ , ಸೊಪ್ಪಿನ ಬಗ್ಗೆ ಕೊಡುವ  ಸಮರ್ಥನೆ  ಇವೆಲ್ಲವೂ ಜನಪದರ  ಬದುಕನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ.

      ಇತ್ತೀಚಿನ ದಿನಗಳಲ್ಲಿ  ಪಕ್ಕದ ಹಳ್ಳಿಯಿಂದ ಪ್ರತಿದಿನ  ಬರುವ ಸೊಪ್ಪಮ್ಮನೂ ಇಲ್ಲ. ಹೂವಮ್ಮನೂ ಇಲ್ಲ. ಅವರಿಗೆ ಬರುವ  ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ವ್ಯಾಪಾರವೂ ಇಲ್ಲ. ಮನೆ ಬಳಿ ತಲುಪಿದರೂ  ಯಾರೂ ಹತ್ತಿರ ಹೋಗಲಾಗದೆ   ಒಂದು ರೀತಿ ಅನುಮಾನ. ದೂರದಿಂದಲೇ  ಬೇಡವೆಂದು ಕಳಿಸುವ ಅನಿವಾರ್ಯ ಪರಿಸ್ಥಿತಿ..ವ್ಯಾಪಾರವಿಲ್ಲದ  ಬದುಕಿನ ಸ್ಥಿತಿಗೆ ಹೂವಮ್ಮಂದಿರು  ಉತ್ತರವಿಲ್ಲದೆ ಆಕಾಶ ನೋಡುವಂತಾಗಿದೆ.

      ಇನ್ನು ಪೇಟೆಗಳಲ್ಲಿ ಬಸ್ ನಿಲ್ದಾಣದ ಪಕ್ಕವೇ ಸಾಲು ಸಾಲಾಗಿ ಗೋಚರಿಸಿ ಬಣ್ಣ ಬಣ್ಣಗಳಲ್ಲಿ  ಕಂಗೊಳಿಸುವ ಹೂವಿನ ಅಂಗಡಿಗಳ ಸಾಲು. ಪ್ರತಿ ಅಂಗಡಿಗಳಲ್ಲೂ  ಹಣೆಯಲ್ಲಿ ಕುಂಕುಮವಿಟ್ಟು, ಹೂ ಮುಡಿಗೇರಿಸಿ ಕೈ ತುಂಬಾ ಬಳೆ ತೊಟ್ಟು ಸಂಸ್ಕೃತಿಗೆ ಪ್ರತೀಕವಾಗುವ  ಹೂವಮ್ಮಂದಿರು   ಕುಳಿತು  ಹೂ ಕಟ್ಟುವುದನ್ನು ನೋಡುವುದೇ ಒಂದು ರೀತಿಯ ಖುಷಿ. ಹತ್ತಿರ ಸುಳಿದರೆ ಸಾಕು ಹೂ ಬೇಕಾ..? ಎಂಬ ಚೆಂದದ ರಾಗಕ್ಕೆ ಕೊಂಡೇ ಬಿಡುವಂತ ಆಕರ್ಷಣೆ.

 ಇನ್ನು ಈ ಹಳ್ಳಿ ಅಕ್ಕಂದಿರು   ಬೆಳೆದ ಹೂಗಳನ್ನು ತಂದು  ಹೂವಿನಂಗಡಿಗೆ ಕೊಟ್ಟರೂ ವ್ಯಾಪಾರವಿಲ್ಲದೆ  ಸ್ವಲ್ಪ ಹೊತ್ತಷ್ಟೇ ಕುಳಿತು  ಅಂಗಡಿ ಮುಚ್ಚಲೇ ಬೇಕಾದ ಅನಿವಾರ್ಯತೆಯನ್ನು ಇದೀಗ ಮತ್ತೆ  ಕಾಲ ತಂದೊಡ್ಡಿದೆ. ಹೇರಳ ಹೂವ ಕೊಂಡರೂ ಮಾರಿ ಮುಗಿಸುವುದಾದರೂ ಹೇಗೆ? ಕೊಂಡುಕೊಳ್ಳಲು ಜನ ಬರಬೇಡವೇ.

          ಕುಶಾಲನಗರದ ಬಸ್ ನಿಲ್ದಾಣದ ಸಮೀಪ  ಇರುವ ದೊಡ್ಡ ದೊಡ್ಡ ಮರಗಳಲ್ಲಿ  ನೂರಾರು ಹಕ್ಕಿಗಳ ವಾಸ. ಸಂಜೆ ಅವುಗಳು ಬಂದು ಸೇರುವುದನ್ನು ನೋಡುವುದೇ ಒಂದು ಮಜಾ!  ಅವುಗಳೆಡೆ ಕಣ್ಣು ನೆಟ್ಟರೆ  ಸಾಕಷ್ಟು ಏನೇನೋ  ಕಲ್ಪನೆಗಳು ಬಳಿಗೆ ಸುಳಿಯುತ್ತವೆ. ಹಕ್ಕಿಗಳನ್ನು  ಆಳವಾಗಿ ಗ್ರಹಿಸಿದರೆ ಅದೆಷ್ಟು  ವಿಭಿನ್ನ ಕತೆ ಹುಟ್ಟುವುದೋ? ನೀರ್ಕಾಗೆಗಳು ಮರಿಗಳಿಗಾಗಿ  ಹೊಳೆ , ಕೆರೆಗಳಿಂದ ಹಿಡಿದು ತರುವ ಮೀನುಗಳಿಂದಾಗಿ ಆ ಸುತ್ತ ಮುತ್ತ  ಪರಿಸರದಲ್ಲಿ ಮೀನು ವಾಸನೆ.  ಆ ವಾಸನೆಯನ್ನು ಮೀರಿ  ಹೂವಿನ ಅಂಗಡಿಗಳಿಂದ ಬರುವ ಮೈಸೂರು ಮಲ್ಲಿಗೆಯ ಘಮವನ್ನು   ಆಘ್ರಾಣಿಸುವ ಸುಖ ನಗರಕ್ಕೆ ದಕ್ಕಿದ  ಸೌಭಾಗ್ಯವೇ ಸರಿ.

            ಈಗ ಸಾಲು ಸಾಲು ಅಂಗಡಿಗಳಲ್ಲಿ ಸಾಲು  ಸಾಲಾಗಿ ನೇತಾಡುತ್ತಾ ಎದುರೇ  ಕಾಣುವ  ಸುಗಂಧರಾಜ ಹೂಗಳಿಂದ ಮಾಡಿದ ದೊಡ್ಡ , ಚಿಕ್ಕ ಹಾರಗಳು  ಮತ್ತು ಅವುಗಳ ಹಿಂದೆ ಹೆಸರಿಗಷ್ಟೇ ಸ್ವಲ್ಪ ಹೂವು… ಹೂವಿನ ಅಂಗಡಿಯ ಬದಿಯಿಂದ ಸರಿಯುವಾಗ ಅದ್ಯಾಕೋ ನಿಟ್ಟುಸಿರೊಂದು  ಹೊರಬಂದು ಹಾರದೊಳಗಿನಿಂದ ಮಲ್ಲಿಗೆಯನ್ನು ಅರಸುತ್ತದೆ…

           ಹೊತ್ತು ಏರಿ ಇಳಿಯುವಷ್ಟರಲ್ಲಿ  ಎಂದಿನಂತೆ ನೀರ್ಕಾಗೆಗಳು ಹೊತ್ತು ತಂದ ಮೀನು ವಾಸನೆ .ಆ  ಮೀನು ವಾಸನೆಯನ್ನು  ಹಿಂದಿಕ್ಕಲು ಮಲ್ಲಿಗೆಗಾಗಿ ಪರಿಸರ  ಕಾಯುತ್ತಿದೆ . 

      ಜೊತೆಗೆ ಹಾದಿ ಬೀದಿಗಳನು  ಹಾದು ಬರುವ  ಸೊಪ್ಪು, ಹೂವೇ …. ಎಂದು  ಸಂಸಾರ  ನಡೆಸಲು ಯಾವುದಕ್ಕೂ  ಸೈ ಎಂಬ ಚೆಂದದ ರಾಗದ ದೀದಿಯರಿಗಾಗಿ ಕಾಯುತ್ತಾ ಕಾಲ ಬದಲಾಗಿ ಮತ್ತೆ ಮಲ್ಲಿಗೆಯ ಘಮ ಎಲ್ಲೆಡೆ ಹರಡುವುದೆಂಬ ಭರವಸೆಯ ನಿರೀಕ್ಷೆ…

**********************

7 thoughts on “ಸೊಪ್ಪು ಹೂವೇ….

  1. ಬದುಕಿನ ನಿತ್ಯ ಸಾಮಾನ್ಯ ಸನ್ನಿವೇಶದ ಅನಾವರಣ ನಿಮ್ಮ ಸರಳವಾದ ಬರವಣಿಗೆಯಲ್ಲಿ ಸೊಗಸಾಗಿ ಮೂಡಿಬಂದಿದೆ.ಸುತ್ತಲಿನ ಬದುಕಿನ ಬಗ್ಗೆ ನಿಮ್ಮ ಸೂಕ್ಷ್ಮ ದೃಷ್ಟಿ, ನಿರ್ಲಕ್ಷಿಸುವಂತೆ ಕಂಡು ಬರುವ ಕೆಲವರ(ಇಲ್ಲಿ ಸೊಪ್ಪಮ್ಮ) ಬಗ್ಗೆಗಿನ ನಿಮ್ಮ ಕಾಳಜಿ ಶ್ಲಾಘನೀಯ.

  2. ಸಂಗಾತಿ ಮತ್ತು ಅಭಿಪ್ರಾಯಿಸಿದ ಗೆಳತಿಯರಿಗೆ ಪ್ರೀತಿ

Leave a Reply

Back To Top