ಲೇಖನ
ಪ್ರೀತಿಗೆ ಒಂದು ಮಿತಿ ಇದೆ ಸ್ನೇಹಕೆ ಎಲ್ಲಿದೆ??
ಡಾ. ನಟರಾಜು ಎಸ್. ಎಂ
ಅಣ್ಣನಂತಹ ಗೆಳೆಯನ ಸಹೋದರನ ಪುಟ್ಟ ಪಾಪುವಿಗೆ ಆಗ ಒಂದೂವರೆ ವರ್ಷವಿರಬಹುದು. ಅಂದು ಆಕೆ ಕಿನ್ನರಿಯಂತೆ ಬಿಳಿ ಬಣ್ಣದ ಬಟ್ಟೆ ತೊಟ್ಟು ತಲೆ ಮೇಲೆ ಟೋಪಿ ಹಾಕಿಕೊಂಡು ಸಾಸಿವೆ ಹೊಲಗಳ ಮಧ್ಯೆ ನನ್ನ ಕ್ಯಾಮೆರಾ ಕಣ್ಣೆದುರು ನಿಂತಿದ್ದಳು. ಅವಳು ರೂಪದರ್ಶಿಯಾಗಿ ನಿಂತಿದ್ದು, ಅವಳಿಗೆ ಸ್ಮೈಲ್ ಎಂದು ನಾನು ನಗುತ್ತಾ ಹೇಳಿದ್ದು, ಅವಳು ನಗದಿದ್ದಾಗ ಅವಳ ಪುಟ್ಟ ಅಕ್ಕಂದಿರು ಅವಳನ್ನು ನಗಿಸಿದ್ದು ನಂತರ ಅವಳ ಫೋಟೋ ಸೇರಿದಂತೆ ಅವಳ ಇಬ್ಬರು ಪುಟ್ಟ ಅಕ್ಕಂದಿರ ಫೋಟೋಗಳನ್ನು ಕ್ಲಿಕ್ಕಿಸಿದ ನೆನಪು ಇನ್ನೂ ಹಚ್ಚ ಹಸಿರು. ಹಳದಿ ಬಣ್ಣದ ಹೂವುಗಳಿಂದ ಕಂಗೊಳಿಸುವ ಸಾಸಿವೆ ಹೊಲಗಳನ್ನು ಸಿನಿಮಾಗಳಲ್ಲಿ ಅಷ್ಟೆ ನಾನು ನೋಡಿದ್ದುದ್ದು. ನಮ್ಮ ಕಡೆಯ ಬತ್ತದ ಗದ್ದೆಗಳು ಹಸಿರಾಗಿ ಕಂಡರೆ ಅಲ್ಲಿನ ಸಾಸಿವೆ ಹೊಲಗಳು ದೂರದಿಂದ ನೋಡಿದರೆ ಹಳದಿ ಹೂವುಗಳ ಹಾಸಿಗೆಯಂತೆ ಕಾಣುತ್ತವೆ. ಅಂದು ಹೂವುಗಳಿಂದ ಕೂಡಿದ ಅದೇ ಹೊಲಗಳು ಕೆಲವು ತಿಂಗಳು ಬತ್ತದ ಗದ್ದೆಗಳಾಗಿದ್ದರೆ, ಮಳೆಗಾಲದಲ್ಲಿ ದಾಮೋದರ ನದಿ ತುಂಬಿ ಹರಿದು ಪ್ರವಾಹ ಬಂದರೆ ಅವುಗಳೆಲ್ಲಾ ಸರೋವರದಂತೆ ಗೋಚರಿಸುತ್ತವೆ. ಆಗ ಎತ್ತ ನೋಡಿದರೂ ನೀರೇ ನೀರು. ಕೆಲವು ಸಲ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಾದರೆ ಆ ನೀರು ತುಂಬಿದ ಹೊಲಗಳ ಮೇಲೆಯೇ ದೋಣಿಗಳನ್ನು ಉಪಯೋಗಿಸಬೇಕಾದ ಅನಿವಾರ್ಯತೆ ಸಹ ಇರುತ್ತದೆ. ಅಂತಹ ಅನಿವಾರ್ಯತೆಗಳೆಲ್ಲಾ ಮೆಟ್ಟಿ ನಿಂತು ಬದುಕುವ ಜನರಿರುವ ಪುಟ್ಟ ಹಳ್ಳಿಯಲ್ಲಿ ನನ್ನ ಗೆಳೆಯನ ಮನೆ ಇದೆ. ಮನೆಯ ಮುಂದೆ ಬಿದುರಿನ ಮೆಳೆಗಳು. ಒಂದು ಕುಟುಂಬಕ್ಕೆ ಒಂದು ನೀರಿನ ಕುಂಟೆ ಎಂಬಂತೆ ಆ ಪುಟ್ಟ ಹಳ್ಳಿಯಲ್ಲೂ ಹತ್ತಾರು ನೀರಿನ ಕುಂಟೆಗಳು. ಇಂಗ್ಲೀಷ್ ನಲ್ಲಿ ಪಾಂಡ್ ಎಂದು, ಬೆಂಗಾಳಿಯಲ್ಲಿ ಪುಕೂರ್ ಕರೆಯಲಾಗುವ ಆ ಕುಂಟೆಗಳು ಮನೆಗೆ ಬೇಕಾದ ಮೀನುಗಳ ಆಗರಗಳು ಹಾಗು ಬಾತುಕೋಳಿಗಳಿಗೆ ದಿನದ ವಾಸಸ್ಥಾನಗಳು.
ಅಂದು ಫೋಟೋ ಸೆಷನ್ ಮುಗಿಸಿ ನನ್ನ ಗೆಳೆಯ, ಆತನ ಇಬ್ಬರು ಸಹೋದರರು ಹಾಗು ನಾನು ಎಲ್ಲರೂ ಊಟಕ್ಕೆ ಕುಳಿತಾಗ ಬಿಸಿ ಬಿಸಿ ಪಲಾವ್, ಬಾತುಕೋಳಿಯ ಮಾಂಸ, ಎಣ್ಣೆಯಲ್ಲಿ ಕರಿದ ಬದನೆಕಾಯಿ, ಪುಕೂರ್ ನಿಂದ ಹಿಡಿದು ತಂದು ರೆಡಿಮಾಡಿದ್ದ ಮೀನಿನ ಫ್ರೈ, ಜೊತೆಗೆ ಐದು ಬಗೆಯ ತರಕಾರಿಗಳ ಹಾಕಿ ಮಾಡಿದ ಬೆಂಗಾಳಿಗಳ ಸ್ಪೆಷಲ್ ಪಾಂಚ್ ಮಿಸಾಲಿ ಎಂಬ ಸಬ್ಜಿ ನಮ್ಮ ಪ್ಲೇಟ್ ನಲ್ಲಿದ್ದವು. ಆ ಭೂರಿ ಭೋಜನದ ಜೊತೆ ಪಾಯಸ ತಿಂದು ಎಲೆ ಅಡಿಕೆ ಹಾಕಿ ಅವನ ಮನೆಯ ವರಾಂಡದಲಿ ಹರಟಿದ ದಿನ ನೆನೆಸಿಕೊಂಡರೆ ಎಲ್ಲಿಯ ಸೀಗೆಕೋಟೆ ಎಲ್ಲಿಯ ಬರೋಡೇಕ್ (ಅವನ ಊರು) ಎನಿಸುತ್ತದೆ. ಆ ನೆನಪುಗಳನ್ನು ಇನ್ನೂ ಒಂಚೂರು ಕೆದಕಿದರೆ ಆ ಶನಿವಾರದ ದಿನ ನೆನಪಾಗುತ್ತದೆ.
ಆಪ್ತಮಿತ್ರ ಚಿತ್ರದಲ್ಲಿರೋ ಹಳೆಯ ಕಾಲದ ಬಂಗಲೆಯಂತೆ ನಮ್ಮ ಹಾಸ್ಟೆಲ್. ಎತ್ತರದಲ್ಲೂ ಅಗಲದಲ್ಲೂ ವಿಶಾಲವಾದ ಕೊಠಡಿಗಳು. ಈ ಕಾಲದ ಆರೇಳು ಅಂತಸ್ತಿನ ಬಿಲ್ಡಿಂಗ್ ನಷ್ಟು ಎತ್ತರವಿರುವ ಹಾಸ್ಟೆಲ್ ಇರೋದು ಕೇವಲ ನಾಲ್ಕು ಅಂತಸ್ತು. ಅದಕ್ಕೊಂದು ಕೊಲಾಪ್ಸಿಂಗ್ ಗೇಟ್ ಇರುವ ಹಳೆ ಕಾಲದ ಲಿಫ್ಟ್ ಇದೆ. ಕರೆಂಟ್ ಇಲ್ಲದಿದ್ದಾಗ ಹತ್ತಲು ಇಳಿಯಲು ಮರದ ಗಟ್ಟಿಯಾದ ಅಗಲವಾದ ಮೆಟ್ಟಿಲುಗಳಿವೆ. ಆ ಸ್ಟೇರ್ ಕೇಸ್ ನ ಗೋಡೆಯ ಮೇಲೆ ಒಂದೇ ಬಾರಿಗೆ ಮೂರ್ನಾಲ್ಕು ಜನ ಹತ್ತುವುದನ್ನಾಗಲಿ ಇಳಿಯುವುದನ್ನಾಗಲಿ ಮಾಡಬಾರದು, ಭಾರವಾದ ವಸ್ತುವನ್ನಾಗಲಿ ಒತ್ತೊಯ್ಯಬಾರದು ಎಂಬ ಆದೇಶವಿರುವ ಬೋರ್ಡ್ ಸಹ ಇದೆ. ಬ್ರಿಟಿಷರ ಕಾಲದಲ್ಲಿ ಅದು ಯಾವುದೋ ಆಫೀಸಾಗಿತ್ತೋ ಏನೋ ಗೊತ್ತಿಲ್ಲ. ಅಂತಹ ಹಾಸ್ಟೆಲ್ ಗೆ ನಾನು ಸೇರಿ ಕೇವಲ ಒಂದದಿನೈದು ದಿನಗಳಾಗಿತ್ತು. ನನ್ನ ಪಕ್ಕದ ರೂಮಿನ ಆ ಗೆಳೆಯ ಆಗಷ್ಟೇ ಪರಿಚಯವಾಗಿದ್ದ. ಒಂದು ಶನಿವಾರ ಬೆಳಿಗ್ಗೆ ಹತ್ತು ಗಂಟೆಯ ಸಮಯದಲ್ಲಿ ಆತ ಎಲ್ಲಿಗೋ ಆತುರಾತುರವಾಗಿ ಹೊರಡುತ್ತಿದ್ದ. ಶನಿವಾರ ಮತ್ತು ಭಾನುವಾರ ನಮಗೆ ರಜಾ ದಿನ ಆಗಿದ್ದರಿಂದ “ಇವತ್ತು ಕ್ಲಾಸ್ ಇಲ್ಲ. ಟ್ಯೂಷನ್ ಇಲ್ಲ. ಇಷ್ಟೊಂದು ಆತುರವಾಗಿ ಎಲ್ಲಿಗೆ ಪಯಣ ಬೆಳೆಸಿದ್ದೀಯ?” ಎಂದು ಆ ಗೆಳೆಯನನು ಅಚ್ಚರಿಯಿಂದ ಕೇಳಿದ್ದೆ. ಆತ ಹೆಚ್ಚು ಮಾತನಾಡದೆ “ಸಂಜೆ ಬಂದು ಹೇಳ್ತೇನೆ.” ಎಂದು ಹೊರಟುಹೋಗಿದ್ದ. ಹವಾನಿಯಂತ್ರಿತ ನಗರದಂತಿದ್ದ ಬೆಂಗಳೂರಿನಿಂದ ಬಂದಿದ್ದ ನನಗೆ ಹಳೇ ಕಾಲದ ದೊಡ್ಡ ಫ್ಯಾನ್ ನನ್ನ ರೂಮಿನಲ್ಲಿ ತಿರುಗುತ್ತಿದ್ದರೂ ಕೊಲ್ಕತ್ತಾ ನನ್ನಿಂದ ಬೆವರಿಳಿಸುತ್ತಿತ್ತು. ಆ ಸೆಖೆಗೆ ದಿನಕ್ಕೆ ಮೂರ್ನಾಲ್ಕು ಬಾರಿ ಸ್ನಾನ ಮಾಡಿ ರೂಮಿನ ಕಿಟಕಿ ಬಾಗಿಲುಗಳು ಮುಚ್ಚಿ ಆರಾಮಾಗಿ ಸಂಜೆ ವಿಶ್ರಮಿಸುತ್ತಿದ್ದಾಗ ಆತ ಬಾಗಿಲು ತಟ್ಟಿದ್ದ. ಬಾಗಿಲು ತೆಗೆದಾಗ ಬೆಳಿಗ್ಗೆ ಆತುರಾತುರವಾಗಿ ಹಾಸ್ಟೆಲ್ ನಿಂದ ಹೊರಬಿದ್ದಿದ್ದ ಆತ ಏನನ್ನೋ ಗೆದ್ದು ಬಂದವನಂತೆ ಖುಷಿಯಿಂದಿದ್ದ. ಚೇರಿನಲ್ಲಿ ಕುಳಿತು ಇಬ್ಬರೂ ಮಾತಿಗಿಳಿದಿದ್ದೆವು. “ಈ ಬಿಸೀಲಿ ಎಲ್ ಹೋಗಿದ್ರಿ ಸರ್ ಇಷ್ಟೊತ್ತು?” ಎಂದಿದ್ದೆ. ಮೊದಲು ಎಲ್ಲಿ ಹೋಗಿದ್ದೆ ಎಂದು ಹೇಳಲು ಮುಜುಗರಪಟ್ಟವನು ನನ್ನ ಒತ್ತಾಯಕ್ಕೆ ಮಣಿದು “ಸೈಕಾಲಜಿಸ್ಟ್ ನೋಡಲು ಹೋಗಿದ್ದೆ” ಎಂದ. ನನಗೆ ಅಚ್ಚರಿಯಾಯಿತು. “ಎಷ್ಟು ದಿನದಿಂದ ಹೋಗ್ತಾ ಇದ್ದೀಯ? ಎಷ್ಟು ಡಾಕ್ಟರ್ ಫೀ? ಯಾರು ಡಾಕ್ಟರ್? ಎಲ್ಲಿ ಅವರ ಕ್ಲಿನಿಕ್?” ಎಂದೆಲ್ಲಾ ಅವನಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದೆ. “ಒಬ್ಬರು ಲೇಡಿ ಡಾಕ್ಟರ್ ಇದ್ದಾರೆ. ಕಳೆದ ಎರಡು ತಿಂಗಳಿನಿಂದ ವಾರಕ್ಕೆ ಒಂದು ಬಾರಿ ಹೋಗ್ತೇನೆ. ಪರ್ ಸಿಟ್ಟಿಂಗ್ 500 ರೂಪಾಯಿ” ಎಂದಿದ್ದ. “ನಂಗೆ ಪರ್ ಸಿಟ್ಟಿಂಗ್ 100 ರೂಪಾಯಿ ಕೊಡು. ನಾನು ನಿನಗೆ ಕೌನ್ಸಿಲಿಂಗ್ ಮಾಡ್ತೇನೆ. ನಿನ್ನ ಸಮಸ್ಯೆಗಳೆಲ್ಲಾ ಪರಿಹಾರ ಆಗುತ್ತೆ” ಎಂದು ನಕ್ಕು ಹೇಳಿದ್ದೆ. ನಕ್ಕು ಹೇಳಿದ್ದನ್ನೇ ಸೀರಿಯಸ್ ಆಗಿ ತೆಗೆದುಕೊಂಡವನೇ ಒಂದು ಪುಟ್ಟ ನೋಟ್ ಪ್ಯಾಡ್ ಮತ್ತು ಪೆನ್ ಅನ್ನು ಕೈಯಲ್ಲಿ ಹಿಡಿದು ಇವತ್ತಿನಿಂದ ನಾನು ನಿನಗೆ ಕೌನ್ಸಿಲಿಂಗ್ ಮಾಡ್ತೇನೆ ಎಂದು ಮಾತುಕತೆ ಶುರು ಮಾಡಿದ್ದೆ. ಮನಶ್ಶಾಸ್ತ್ರ ಎಂದರೆ ನಮಗೆ ತಟ್ಟನೆ ನೆನಪಾಗುವುದು ಸಿಗ್ಮಂಡ್ ಫ್ರಾಯ್ಡ್. ಸತ್ಯ ಹೇಳಬೇಕೆಂದರೆ ನನ್ನಂತಹ ಸಾಮಾನ್ಯ ಓದುಗನಿಗೆ ಫ್ರಾಯ್ಡ್ ಪುಸ್ತಕಗಳು ಕಬ್ಬಿಣದ ಕಡಲೆ ಎನಿಸಿ ಅವುಗಳನ್ನು ಓದುವ ಸಾಹಸ ಎಂದಿಗೂ ಮಾಡಿದವನಲ್ಲ. ಸೈಕಾಲಜಿ ಎಂದರೆ ತಲೆ ಬುಡ ಗೊತ್ತಿಲ್ಲದ ನಾನು ಅಲ್ಲಿಯವರೆಗೂ ಕನ್ನಡದ ಖ್ಯಾತ ಮನೋರೋಗ ತಜ್ಞ ಡಾ. ಸಿ ಆರ್ ಚಂದ್ರಶೇಖರ್ ರವರ ಬಿಡಿ ಬರಹಗಳು, ವರ್ಧಮಾನ ಪ್ರಶಸ್ತಿ ಪುರಸ್ಕೃತ ಲೇಖಕರಾದ ಮೈಸೂರಿನ ಡಾ. ಮೀನಗುಂಡಿ ಸುಬ್ರಮಣ್ಯ ರ ‘ಮಾನಸಿಕ ಸಮಸ್ಯೆಗಳಿಗೆ ಮನಸ್ಸು ಇಲ್ಲದ ಮಾರ್ಗ’ ಪುಸ್ತಕ, ಇವುಗಳನ್ನಷ್ಟೇ ಓದಿಕೊಂಡಿದ್ದೆ. ಜೊತೆಗೆ ಓದಿದ್ದನ್ನು ಮರೆತೂ ಬಿಟ್ಟಿದ್ದೆ. ಆದರೂ ನನ್ನ ಗೆಳೆಯನಿಗೆ ಕೌನ್ಸಿಲಿಂಗ್ ಮಾಡಲು ಕುಳಿತಾಗ ನಾನೊಬ್ಬ ಆಪ್ತ ಸಲಹೆಗಾರ ಎಂಬ ಭಾವನೆಗಿಂತ ಒಬ್ಬ ಆತ್ಮೀಯ ಗೆಳೆಯ ಎಂಬ ಭಾವನೆ ಮೂಡುತ್ತಿತ್ತು. ಮನದಲ್ಲಿರೋ ದ್ವಂದ್ವಗಳನ್ನು ಹೋಗಲಾಡಿಸಲಾರದೆ ತೊಳಲುವ ಅನೇಕ ಜನ ನಮ್ಮ ನಡುವೆ ಜೀವಿಸುತ್ತಿರುವರು. ಅಂತಹ ಜೀವಿಗಳಲ್ಲಿ ನನ್ನ ಗೆಳೆಯನೂ ಒಬ್ಬನಾಗಿದ್ದ. ನನ್ನೊಡನೆ ಮಾತನಾಡಲು ಅವನು ಶುರು ಮಾಡಿದ ದಿನದಿಂದ ಅವನ ಮನದ ಭಾರ ಕೊಂಚ ಕೊಂಚವಾಗಿ ಕಡಿಮೆಯಾಗುತ್ತಿರುವುದು ನನ್ನ ಅರಿವಿಗೆ ಬಂದಿತ್ತು.
ನನಗೆ ಅಚ್ಚರಿ ಎಂಬಂತೆ ಹಿಂದಿನ ಶನಿವಾರ ಬೆಳಿಗ್ಗೆ ಹತ್ತು ಗಂಟೆಗೆ ಎದ್ದು ಓಡಿ ಓಡಿ ಸೈಕಾಲಜಿಸ್ಟ್ ಬಳಿ ಹೋಗುತ್ತಿದ್ದವನು ಆ ಶನಿವಾರ ಆರಾಮಾಗಿ ಸ್ನಾನ ಮಾಡಿ ರೂಮಿನಲ್ಲಿ ಕುಳಿತು ರೆಸ್ಟ್ ತೆಗೆದುಕೊಳ್ಳುತ್ತಿದ್ದ. “ಯಾಕೆ ಸರ್ ಇವತ್ತು ತಮ್ಮ ಮೇಡಂ ನೋಡೋಕೆ ಹೋಗಲ್ವ?” ಎಂದು ಕೆಣಕುವ ದನಿಯಲ್ಲಿ ಕೇಳಿದ್ದೆ. “ನೋ” ಎಂದು ಅಂದು ನಗುತ್ತಾ ಹೇಳಿದವನಿಗೆ ಮತ್ತೆಂದೂ ಸೈಕಾಲಜಿಸ್ಟ್ ಬಳಿ ಆತ ಹೋಗುವ ಅವಶ್ಯಕತೆ ಬರಲಿಲ್ಲ. ನಂತರದ ದಿನಗಳಲ್ಲಿ ಆತನ ನಿತ್ಯದ ನಮಾಜು, ಮಾನವೀಯತೆ, ಬೇರೆಯವರಿಗೆ ಸಹಾಯ ಮಾಡುವ ಗುಣ ಎಲ್ಲವನೂ ಹತ್ತಿರದಿಂದ ನೋಡುವ ಭಾಗ್ಯ ನನಗೆ ಸಿಕ್ಕಿತು. ಕಾಲಾಂತರದಲ್ಲಿ ಕೇವಲ ಗೆಳೆಯನಂತಿದ್ದವನು ನನ್ನ ದೊಡ್ಡಣ್ಣನ ಸ್ಥಾನ ತುಂಬುತ್ತಾ ಹೋದ. ತಾನು ಎಂಡಿ ಮಾಡುವುದೋ ಕೆಲಸಕ್ಕೆ ಸೇರುವುದೋ ಎಂಬ ದ್ವಂದ್ವದಿಂದ ಬಳಲುತ್ತಿದ್ದವನು ಸರ್ಕಾರಿ ವೈದ್ಯಾಧಿಕಾರಿಯಾಗಿ ಕೆಲಸಕ್ಕೆ ಸೇರಿದ. ತನ್ನ ಊರಿನ ಪಕ್ಕದ ಹೋಬಳಿ ಮಟ್ಟದ ಊರಿನಲ್ಲಿ ತನ್ನ ಊರಿನ ಸುತ್ತಮುತ್ತಲಿನ ಊರುಗಳ ಜನರ ಸೇವೆಗಾಗಿ ಕ್ಲಿನಿಕ್ ಒಂದನು ತೆರೆದ. ಆ ಕ್ಲಿನಿಕ್ ನಲ್ಲಿಯೇ ತನ್ನ ತಮ್ಮನಿಗೆ ಔಷದಿಯ ಅಂಗಡಿಯ ಉಸ್ತುವಾರಿ ವಹಿಸಿದ. ತನ್ನ ಕೆಲಸ ಮಾಡುವ ಊರು ತನ್ನೂರಿನಿಂದ ತುಂಬಾ ದೂರದಲ್ಲಿದ್ದರೂ ಪ್ರತಿ ಭಾನುವಾರ ತಪ್ಪದೇ ಆ ಕ್ಲಿನಿಕ್ ನಲ್ಲಿ ರೋಗಿಗಳ ಸೇವೆ ಮಾಡಿದ. ಉಳಿದ ದಿನಗಳಲ್ಲಿ ರೋಗಿಗಳ ಸೇವೆಗಾಗಿ ಡಾಕ್ಟರ್ ಗಳನ್ನು ನೇಮಿಸಿದ. ಹಣಕಾಸಿನ ವಿಷಯದಲ್ಲಿ ಒಂಚೂರು ಸುಸ್ಥಿತಿ ತಲುಪಿದ ಮೇಲೆ ಸುಶಿಕ್ಷಿತ ಕುಟುಂಬವೊಂದರ ಹೆಣ್ಣೊಂದನು ಮದುವೆಯಾದ. ಸರ್ಕಾರ ತಾನು ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪುಟ್ಟ ಪಟ್ಟಣದ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಎರಡು ಕೋಟಿ ರೂಪಾಯಿ ನೀಡಿತು. ಹಣ ನುಂಗಲು ಹಾತೊರೆಯುತ್ತಿದ್ದ ಇಂಜಿನಿಯರ್ ಮತ್ತು ಇತರ ಅಧಿಕಾರಿಗಳ ಮೇಲೆ ನಿಗಾ ವಹಿಸಿದ. ಅವನು ಅಧಿಕಾರಿಯಾಗಿದ್ದಾಗ ಆಸ್ಪತ್ರೆಯ ಅಧ್ಬುತವಾದ ಹೊಸ ಕಟ್ಟಡವೊಂದು ನಿರ್ಮಾಣಗೊಂಡಿತು. ಅದ ನೋಡಿ ಖುಷಿಗೊಂಡ. ನಂತರದ ದಿನಗಳಲ್ಲಿ ಹುಟ್ಟಿದ ತನ್ನ ಮೊದಲ ಮಗುವನು ಕಂಡು ಬೀಗಿದ. ಇಪ್ಪತ್ತೇ ದಿನಗಳಲ್ಲಿ ಹೃದಯ ಸಂಬಂಧಿ ಖಾಯಿಲೆಯಿಂದ ಅದು ಅಸು ನೀಗಿತು. ಒಂದಷ್ಟು ದುಃಖ ನುಂಗಿದ. ದುಃಖ ನುಂಗಿ ಬದುಕುತ್ತಿದ್ದ ಗೆಳೆಯನಿಗೆ ಕಳೆದ ವರ್ಷ ದೇವರು ಮುದ್ದಾದ ಗಂಡು ಮಗುವನು ಕರುಣಿಸಿದ. ಗೆಳೆಯ ಮತ್ತೆ ಖುಷ್..
ಅಂದು ರೂಪದರ್ಶಿಯಾಗಿ ಫೋಟೋಗೆ ಫೋಜ್ ನೀಡಿದ್ದ ಪುಟ್ಟ ಹುಡುಗೀಗ ಏಳೂವರೆ ವರ್ಷವಿರಬಹುದು. ಅವಳು ಬೆಳೆದಷ್ಟು ಎತ್ತರಕೆ ನನ್ನ ಮತ್ತು ನನ್ನ ಗೆಳೆಯನ ನಡುವಿನ ಗೆಳೆತನವೂ ಬೆಳೆದಿದೆ. ಅಂದು ನಾವು ಕುಳಿತು ಊಟ ಮಾಡಿದ್ದ ಆ ಮನೆ ಇಂದು ಆ ಊರಿನ ಗೌರವಾನ್ವಿತ ಡಾಕ್ಟರ್ ಒಬ್ಬರ ಮನೆಯಾಗಿ ಬದಲಾಗಿದೆ. ಆದರೆ ಅವನೆಷ್ಟೇ ದೊಡ್ಡವನಾದರೂ ಅವನೊಬ್ಬ ನನ್ನ ನೆಚ್ಚಿನ ಗೆಳೆಯನಷ್ಟೇ ಅಲ್ಲ ನನ್ನ ದೊಡ್ಡಣ್ಣನ ಸ್ಥಾನವನ್ನು ನನ್ನ ಹೃದಯದಲ್ಲಿ ಅವನು ಶಾಶ್ವತವಾಗಿ ಪಡೆದಿದ್ದಾನೆ.. ನಮ್ಮ ಗೆಳೆತನವನ್ನು ನಾನೇ ನೋಡಿಕೊಂಡಾಗ, ಮನುಷ್ಯ ಯಾವುದೇ ಜಾತಿ ಮತ ಧರ್ಮಕ್ಕೆ ಸೇರಿದ್ದರೂ, ಯಾವುದೇ ಹಳ್ಳಿಯವನೋ ಪಟ್ಟಣದವನೋ, ಯಾವುದೇ ರಾಜ್ಯದವನೋ ದೇಶದವನೋ ಆಗಿದ್ದರೂ, ಯಾವುದೇ ಹುದ್ದೆಯಲ್ಲಿದ್ದೂ ಎಷ್ಟು ಪ್ರಸಿದ್ದನಾಗಿದ್ದರೂ, ಮನುಷ್ಯ ಮನುಷ್ಯರ ನಡುವಿನ ಅಸಮಾನತೆಯನ್ನು, ನಮ್ಮ ಅಹಂಗಳ ಸೀಮಾರೇಖೆಗಳನ್ನು ಸದ್ದಿಲ್ಲದೆ ಅಳಿಸಿ ನಾವು ಕೇವಲ ಮನುಷ್ಯರು ಎಂದು ಒತ್ತಿ ಒತ್ತಿ ಹೇಳುವ ಶಕ್ತಿ ಇರುವುದು ಕೇವಲ ಗೆಳೆತನಕ್ಕೆ ಮಾತ್ರ ಎನಿಸುತ್ತಿದೆ… ಅಂದ ಹಾಗೆ ನನ್ನ ಅಣ್ಣನಂತಹ ಗೆಳೆಯನ ಪೂರ್ತಿ ಹೆಸರು ಡಾ. ಶೇಕ್ ಮೊಯರಫ್ ಅಲಿ.. ಆ ಮುದ್ದಾದ ರೂಪದರ್ಶಿಯ ಹೆಸರು ಅಫ್ರಿನ್ ಹಾಗು ಅವಳ ಪುಟ್ಟ ಅಕ್ಕಂದಿರ ಹೆಸರು ಜಾಸ್ಮಿನ್ ಮತ್ತು ನಜ್ನಿನ್.. ಎಲ್ಲರಿಗೂ ರಂಜಾನಿನ ಶುಭಾಶಯಗಳು..
***************
–
ಲೇಖನ ಪ್ರಕಟಿಸಿದ್ದಕ್ಕೆ ಅನಂತ ಧನ್ಯವಾದಗಳು ಸರ್…
ವಾವ್…ಅಧ್ಬುತ ಜಾತಿ ಧರ್ಮಗಳ ಮೀರಿ ಬೆಳೆದ ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ…ಸುಂದರವಾಗಿ ನಿರೂಪಿಸಿದ್ದಿರಿ…ರಂಜಾನ್ ಹಬ್ಬದ ಶುಭಾಶಯಗಳು