
ಅಂಕಣ ಬರಹ
.
ರಾಮಕೃಷ್ಣ ಗುಂದಿ ಅವರ ಆತ್ಮಕಥೆ—25
ಆತ್ಮಾನುಸಂಧಾನ
ಸಾಗರಕ್ಕಿಳಿದು ಬೊಗಸೆಯಲ್ಲಿ ತುಂಬಿಕೊಂಡೆವು…

ಗಂಗಾವಳಿ ನದಿಯ ಆಚೆಗಿನ ಅಗ್ಗರಗೋಣ, ಅಡಿಗೋಣ, ಹೆಗ್ರೆ, ಮಾಸ್ಕೇರಿ, ಗಂಗಾವಳಿ, ಹನೇಹಳ್ಳಿ ಇತ್ಯಾದಿ ಊರುಗಳಿಂದ ಬಹಳಷ್ಟು ವಿದ್ಯಾರ್ಥಿಗಳು ನಿತ್ಯವೂ ನದಿಯನ್ನು ದಾಟಿ ಈಚೆಗೆ ಅಂಕೋಲೆಯ ಕಾಲೇಜಿಗೆ ಬಂದು ಹೋಗುತ್ತಿದ್ದೆವು. ವಿವಿಧ ಊರುಗಳ ಕವಲು ದಾರಿಗಳು ಗಂಗಾವಳಿ ನದಿಯ ತಾರಿಬಾಗಿಲಿನಲ್ಲಿ ಒಂದಾಗುವಾಗ ಬೇರೆ ಬೇರೆ ಊರುಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವ್ಯವಹಾರಸ್ಥರು, ಮೀನು-ತರಕಾರಿ ಮೊದಲಾದವುಗಳನ್ನು ಮಾರಾಟಕ್ಕೆಂದು ಅಂಕೋಲೆಗೆ ಹೊತ್ತೊಯ್ಯುವ ಹಾಲಕ್ಕಿ ಮತ್ತು ಬೆಸ್ತರ ಹೆಂಗಸರು, ಬೇರೆ ಬೇರೆ ಉದ್ಯೋಗಿಗಳು ಮೊದಲಾಗಿ ಹಲವು ಸ್ತರಗಳ ಜನಸಮೂಹ ಬಸ್ಸಿಗೆ ನುಗ್ಗುವುದು ಸಹಜವಾಗಿತ್ತು. ಈ ಸಂದಣಿಯ ನಡುವೆ ‘ಕಾಲೇಜು ಹುಡುಗರು’ ಎಂಬುದಕ್ಕಾಗಿಯೇ ಒಂದು ವಿಶೇಷ ಮರ್ಯಾದೆ ನಮ್ಮ ಕಾಲೇಜು ಹುಡುಗರಿಗೆ ದೊರೆಯುತ್ತಿತ್ತು.
ಈ ಹೆಚ್ಚಿನ ಮರ್ಯಾದೆಯಿಂದಾಗಿಯೇ ನಮ್ಮ ಕಾಲೇಜು ವಿದ್ಯಾರ್ಥಿ ತಂಡವು ಬಸ್ಸನ್ನೇರುತ್ತಿದ್ದಂತೆ ಸೀಟು ಹಿಡಿಯುವ, ಹಿಡಿದ ಎಲ್ಲ ಸೀಟುಗಳ ಮೇಲೆ ನಮ್ಮದೇ ಹಕ್ಕು ಸಾಧಿಸುವ, ಅಗತ್ಯವಾದರೆ ಡ್ರೈ ವರ್ ಒಟ್ಟಾಗಿ ಕೆಣಕುವ, ಮಾತು-ನಗೆ-ಹಾಡು-ಹಾಸ್ಯಗಳಿಂದ ಇಡಿಯ ಬಸ್ಸಿನ ಮೇಲೊಂದು ಹಿಡಿತ ಸಾಧಿಸಿಕೊಳ್ಳುವ ಕಾಲೇಜು ವಿದ್ಯಾರ್ಥಿ ತಂಡದಲ್ಲಿ ಕಳೆದ ಆ ದಿನಗಳು ಅವಿಸ್ಮರಣೀಯ ಆನಂದದ ಕ್ಷಣಗಳೇ ಆಗಿದ್ದವು.
ಬಸ್ಸು ಅಂಕೋಲೆಯ ಬಸ್ ನಿಲ್ದಾಣದಲ್ಲಿ ಬಂದು ನಿಲ್ಲುವ ಹೊತ್ತಿಗೆ ಸರಿಯಾಗಿ ಸುತ್ತಲಿನ ಬೇಲೇಕೇರಿ, ಭಾವಿಕೇರಿ, ಕಣಗಿಲ ಮುಂತಾದ ಊರುಗಳಿಂದಲೂ ಬಸ್ಸುಗಳು ಬಂದು ನಿಲ್ಲುತ್ತಿದ್ದವು. ಎಲ್ಲ ಬಸ್ಸುಗಳಲ್ಲಿಯೂ ಅಷ್ಟಿಷ್ಟು ಕಾಲೇಜು ವಿದ್ಯಾರ್ಥಿಗಳು ಇರುತ್ತಿದ್ದರು. ಎಲ್ಲರೂ ಕೂಡಿಯೇ ಕಾಲೇಜಿನವರೆಗೆ ಕಾಲ್ನಡಿಗೆಯಲ್ಲಿ ನಡೆಯುವಾಗ ಇಂದಿನ ‘ದಿನಕರ ದೇಸಾಯಿ ರಸ್ತೆ’ ಅಕ್ಷರಶಃ ಜಾತ್ರೆ ಹೊರಟಂತೆ ಕಾಣುತ್ತಿತ್ತು.
ಗಂಗಾವಳಿ ನದಿಯಾಚೆಯ ನಮ್ಮ ವಿದ್ಯಾರ್ಥಿಗಳ ಗುಂಪಿನಲ್ಲಿ ನಮ್ಮದೇ ತರಗತಿಯ ಪ್ರಮೋದ ನಾಯಕ, ಕುಪ್ಪಯ್ಯ ಗೌಡ, ನಾರಾಯಣ ಗಾಂವಕರ, ವಿಠಲ ನಾಯಕ, ಮದನ ಕಾಂಬ್ಳೆ, ನಾರಾಯಣ ನಾಯ್ಕ, ಮಹಾದೇವ ಜಟ್ಟಪ್ಪ ನಾಯ್ಕ, ರಮೇಶ ಗೌಡ ಮುಂತಾಧ ಹುಡುಗರು, ಶಾರದಾ ಉದ್ದಂಡ ನಾಯಕ, ಶಕುಂತಲಾ ಪಿ. ನಾಯಕ, ದೇವಯಾನಿ ಗೋಳಿಕಟ್ಟೆ, ಕಮಲಾ ಗಾಂವಕರ, ಲಕ್ಷ್ಮಿ ನಾಯ್ಕ ಮುಂತಾದ ಹುಡುಗಿಯರೂ ಇರುತ್ತಿದ್ದರು.
ಈ ಎಲ್ಲ ಗೆಳೆಯರು ಯಾವ ಭೇದ ಭಾವ ತೋರದೆ ಮುಕ್ತವಾಗಿ ಒಡನಾಡುತ್ತಿದ್ದುದರಿಂದ ಅದುವರೆಗೂ ನನ್ನೊಳಗೆ ಸುಪ್ತವಾಗಿದ್ದು ತೀವ್ರವಾಗಿ ಕಾಡುತ್ತಿದ್ದ ಅಸ್ಪೃಶ್ಯತೆಯ ಕೀಳರಿಮೆಯಿಂದ ನಾನು ಬಿಡುಗಡೆಗೊಳ್ಳುವುದಕ್ಕೆ ಸಾಧ್ಯವಾಯಿತು.
ಆಗ ಅಂಕೋಲೆಯ ಬಹುತೇಕ ಚಹಾದಂಗಡಿಗಳು ವೈಶ್ಯ ಸಮಾಜದ ಶೆಟ್ಟರಿಂದ ನಡೆಸಲ್ಪಡುತ್ತಿದ್ದವು. ಎಲ್ಲ ಅಂಗಡಿಗಳಲ್ಲಿಯೂ ನಮ್ಮ ಆಗೇರ ಮುಂತಾದ ದಲಿತ ಸಮುದಾಯಗಳಿಗೆ ಅಂಗಡಿಯ ಹೊರಗೇ ಕುಳಿತು ಚಹಾ ಕುಡಿಯುವ ವ್ಯವಸ್ಥೆ ಮಾಡಿದ್ದವು. ಸುತ್ತಲಿನ ವಂದಿಗೆ, ಕಂತ್ರಿ, ನೀಲಂಪುರ, ಭಾವಿಕೇರಿ ಮೊದಲಾದ ಊರುಗಳಿಂದ ಬರುವ ನಮ್ಮ ಜಾತಿಯ ಜನರು ಅಂಗಡಿಯ ಜಗುಲಿಯ ಮೇಲೆ ಸಾಲಾಗಿ ಕುಳಿತು ತಮಗಾಗಿಯೇ ಪ್ರತ್ಯೇಕವಾಗಿ ಇಟ್ಟ ಗ್ಲಾಸುಗಳನ್ನು ತಾವೇ ಕೈಯ್ಯಾರೆ ತೊಳೆದುಕೊಂಡು ಚಹಾ ಕುಡಿಯುವ ಸನ್ನಿವೇಶಗಳನ್ನು ನಾನು ಹಲವು ಬಾರಿ ಕಂಡಿದ್ದೆ. ಅದರಿಂದ ಮುಜುಗರಪಟ್ಟುಕೊಳ್ಳುವ ನಾನು ನನ್ನ ಗೆಳೆಯರ ಗುಂಪಿನೊಡನೆ ಚಹಾ ಕುಡಿಯಲು ಹೋಗುವ ಸಂದರ್ಭ ಬಂದಾಗಲೆಲ್ಲ ಏನಾದರೂ ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದೆ. ನನ್ನ ಆತಂಕವನ್ನು ಸೂಕ್ಷ್ಮವಾಗಿ ಗಮನಿಸಿದ ನನ್ನ ಗೆಳೆಯರು ನಾನು ಬಿ.ಎ. ದ್ವಿತೀಯ ವರ್ಷದಲ್ಲಿ ಓದುತ್ತಿರುವಾಗ (೧೯೭೧) ಅಂಕೋಲೆಯಲ್ಲಿ ಅಂದು ಪ್ರಸಿದ್ಧಿ ಪಡೆದ ‘ಜೈಹಿಂದ್ ಹೋಟೆಲ್’ ಎಂಬ ಹೋಟೆಲ್ಲಿಗೆ ಒತ್ತಾಯ ಮಾಡಿ ಒಳಗೇ ಕರೆದೊಯ್ದರು. ಅಂದು ಗೆಳೆಯರೊಡನೆ ಹೋಟೆಲ್ಲಿನ ಒಳಗೆ ನನಗೆ ಪ್ರಿಯವಾದ ಮಸಾಲೆ ದೋಸೆ ತಿನ್ನುವಾಗಲು “ಹೋಟೆಲ್ ಯಜಮಾನರಿಗೆ ಗೊತ್ತಾದರೆ ನನ್ನ ಗತಿಯೇನು?” ಎಂಬ ಚಿಂತೆಯಲ್ಲೇ ತಿಂದು ಮುಗಿಸಿ, ಚಹಾ ಕುಡಿದು ಹೊರ ಬಂದ ನೆನಪು ಈಗಲೂ ನನ್ನನ್ನು ರೋಮಾಂಚನಗೊಳಿಸುತ್ತದೆ.
ನಮ್ಮ ನಮ್ಮ ಊರ ನೆಲೆಯಿಂದ ಓಡೋಡಿ ಬಂದು ಮೊಣಕಾಲುವರೆಗಿನ ನೀರಿಗಿಳಿದು ದೋಣಿ ಹತ್ತುವಾಗ ಪರಸ್ಪರ ಕೈ ಹಿಡಿದು ಆಸರೆಯಾಗುವಲ್ಲಿ, ಜನದಟ್ಟಣೆಯ ನಡುವೆ ಬಸ್ಸಿನ ಸೀಟು ದೊರೆಯದೆ ನಿಂತು ಪ್ರಯಾಣಿಸುವ ಅನಿವಾರ್ಯತೆಯಲ್ಲಿ, ಇದ್ದುದರಲ್ಲೇ ಸ್ಥಳಾವಕಾಶ ಮಾಡಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸುವಲ್ಲಿ, ತಪ್ಪಿ ಹೋದ ತರಗತಿಗಳ ಟಿಪ್ಪಣಿ ನೀಡುವಲ್ಲಿ, ಪಠ್ಯ ಪುಸ್ತಕದ ಕೊಡುಕೊಳ್ಳುವಿಕೆಯಲ್ಲಿ ನಮ್ಮ ಗೆಳೆಯರು ಸದಾ ಪರಸ್ಪರರಿಗೆ ನೆರವಾಗುತ್ತ ಮುಕ್ತವಾಗಿದ್ದೆವು.
ಇಂಥ ಸಲುಗೆಯ ಸ್ನೇಹಿತರ ಒಡನಾಟದಲ್ಲಿ ತೀರಾ ಸಹಜ ಹುಡುಗಾಟದಲ್ಲಿಯೇ ಪದವಿ ಶಿಕ್ಷಣದ ಕಾಲ ಸರಿದು ಹೋಯಿತು. ಈಗಲೂ ನನಗೆ ಬಹಳವಾಗಿ ಕಾಡುವ ಪ್ರಶ್ನೆಯೆಂದರೆ ಗೋಖಲೆ ಕಾಲೇಜಿನ ಸುವ್ಯವಸ್ಥಿತ ಕಟ್ಟಡ, ವಿಶಾಲವಾದ ಗ್ರಂಥಾಲಯ, ಅಪಾರ ಜ್ಞಾನ ಸಂಪತ್ತಿನಿಂದ ನಿಷ್ಠೆಯಿಂದ ಪಾಠ ಹೇಳುವ ಗುರುಗಳು ಎಲ್ಲವೂ ಇದ್ದರೂ ಮೂರು ವರ್ಷಗಳ ಕಾಲಾವಧಿಯಲ್ಲಿ ನಾವು ಪಡೆದ ಪ್ರಯೋಜನವೆಷ್ಟು? ವಿದ್ಯಾರ್ಜನೆಯ ಆ ಸುವರ್ಣಮಯ ಕಾಲಾವಕಾಶವನ್ನು ನಾವೆಷ್ಟು ಸದುಪಯೋಗ ಪಡಿಸಿಕೊಂಡೆವು? ಎಂದು ಯೋಚಿಸುವಾಗ ನಾವು ಪಡೆದುಕೊಂಡುದಕ್ಕಿಂತ ಕಳೆದುಕೊಂಡುದೇ ಹೆಚ್ಚು ಅನ್ನಿಸಿ ನಮ್ಮ ಮೂರ್ಖತನಕ್ಕೆ ವಿಷಾಧವಾಗುತ್ತದೆ.
ಕಾಲೇಜಿನ ಆಡಳಿತ ಶಿಸ್ತು, ಪಾಠಕ್ರಮದ ಪ್ರಾಮಾಣಿಕತೆ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಇರುವ ವಿಫುಲ ಅವಕಾಶಗಳನ್ನು ನಾವು ಯಾರೂ ಬಳಸಿಕೊಳ್ಳದೆ ಹೆಡ್ಡರಾದೆವು. ವರ್ಷ ವರ್ಷವೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ರಾಜ್ಯ ಮಟ್ಟದ ವಿದ್ವಾಂಸರು, ಸಾಹಿತಿಗಳು, ಕವಿಗಳು ಮುಖ್ಯ ಅತಿಥಿಗಳಾಗಿ ಬರುತ್ತಿದ್ದರು. ನಮ್ಮ ಕಾಲೇಜಿನ ಹತ್ತಕ್ಕೂ ಅಧಿಕ ಕಬ್ಬಡ್ಡಿ ಇತ್ಯಾದಿ ಕ್ರೀಡಾಪಟುಗಳು ‘ವಿಶ್ವ ವಿದ್ಯಾಲಯ ಬ್ಲೂ’ ಆಗಿ ಆಯ್ಕೆಗೊಂದು ರಾಜ್ಯ ಅಂತರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಹೆಸರು ಮಾಡಿದ್ದರು. ಈ ಯಾವುದರಲ್ಲೂ ನಮ್ಮ ಗೆಳೆರಯರ ತಂಡದ ಒಬ್ಬನೇ ಒಬ್ಬ ಸದಸ್ಯ ಇರಲಿಲ್ಲ ಎಂಬುದು ನಮ್ಮ ನಿರಾಸಕ್ತಿ ಅಥವಾ ಅವಿವೇಕದ ಪರಮಾವಧಿಯೆಂದೇ ಅನಿಸುತ್ತದೆ. ಒಟ್ಟಾರೆಯಾಗಿ ಗಮನಿಸಿದರೂ ನಾವೆಲ್ಲ ಸಾಗರಕ್ಕಿಳಿದರೂ ಕೇವಲ ಬೊಗಸೆಯಲ್ಲಿ ನೀರು ಮೊಗೆದುಕೊಂಡು ಮೂರ್ಖರೇ ಆದೆವಲ್ಲ? ಎಂದು ಈಗಲೂ ನಾಚಿಕೆಯಾಗುತ್ತದೆ.
*******************
ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.
ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
“ಸಾಗರಕ್ಕಿಳಿದು ಬೊಗಸೆ ನೀರು ಪಡೆದಂತೆ “ಕಾಲೇಜಿನಲ್ಲಿ ಕಲಿತುದಕ್ಕಿಂಥ ಕಳೆದುಕೊಂಡದ್ದೇ ಹೆಚ್ಚೆಂದು ನೊಂದುಕೊಂಡಿದ್ದು ನಮಗೂ ನೋವೆನಿಸಿತು
ಧನ್ಯವಾದಗಳುತಮ್ಮೆಲ್ಲರ ಪ್ರೀತಿಗೆ
ಎಲ್ಲರೂ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯವೇ? ಸರ್ .ಪ್ರೀತಿಯನ್ನು ಬೆಳೆಸಿಕೊಂಡಿದ್ದೀರಿ ಅಲ್ಲವೇ,ಆ ಕಾಲಕ್ಕೇ ಉನ್ನತ ವ್ಯಾಸಂಗ ಮಾಡೀದ್ದೀರಿ . ಕದಡಿದ ಕಡಲಿಂದ ಬೊಗಸೆ ನೀರನ್ನಾದರೂ ಎತ್ತಿದ್ದೀರಿ ಅಲ್ಲವೇ
ಧನ್ಯವಾದಗಳುತಮ್ಮೆಲ್ಲರ ಪ್ರೀತಿಗೆ
ಬೆಳೆದ ಪರಿ ನೋಡಿ ಮನವು ಕಲಕ್ಕುತ್ತದೆ. ಅಂಥಾ ಕಾಲದಲ್ಲಿ ನೀವು ಓದಿನಲ್ಲಿ ಮುಂದೆ ಬಂದದ್ದು ನೋಡಿದರೆ ನೀವು ನಿಮ್ಮ ತಂದೆಯ ಹಾರೆಯಕೆ. ಸರ ಗ್ರೇಟ್. ತುಂಬಾ ಧನ್ಯವಾದಗಳು.
ಧನ್ಯವಾದಗಳು
ಕಭಿ ಖುಷಿ ಕಭಿ ಗಮ ಹಾಗೆ ಅನಿಸಿತು ಈ ಸಂಚಿಕೆ. ಎಲ್ಲದರಲ್ಲೂ ಹಿಂದೆ ಉಳಿಯಲು ನಿಮ್ಮಲ್ಲಿ ಕಾಡುತ್ತಿದ ಜಾತೀಯತೆ. ನಿಮ್ಮ ಕಾಲೇಜಿನ ದಿನಗಳು ಓದುವಾಗ ನನಗೆ ನನ್ನ ಕಾಲೇಜ್ ದಿನಗಳ ನೆನಪಾಯಿತು. ಒಟ್ಟಿನಲ್ಲಿ ಈ ಸಂಚಿಕೆ ಸ್ವಲ್ಪ ಖುಷಿ ಅನಿಸಿತು ಗುರೂಜಿ.
ಮುಂದಿನ ಸಂಚಿಕೆಗೆ ಎದುರಾಗಿರುವೆ…..