ಅಂಕಣ ಬರಹ

ಎರಡು ವಚನಗಳು :

ಒಂದು ವಿವೇಚನೆ

Devara Dasimayya | Spotify

ಸತಿಯರ ಸಂಗವನು ಅತಿಶಯದ ಗ್ರಾಸವನು

ಪೃಥ್ವಿಗೀಶ್ವರನ ಪೂಜೆಯನು

ಅರಿವುಳ್ಳೊಡೆ ಹೆರರ ಕೈಯಿಂದ ಮಾಡಿಸುವರೆ ! ರಾಮನಾಥ ೧

======

ತನ್ನಾಶ್ರಯದ ರತಿಸುಖವನು ತಾನುಂಬ ಊಟವನು

ಬೇಱೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ ?

ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ

ಬೇಱೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ

ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ

ನಿಮ್ಮನೆತ್ತ ಬಲ್ಲರು ಕೂಡಲಗಮದೇವಾ ? ೨

ವಚನಕಾರರಿಗೆ ತಮ್ಮ ಪುರಾತನ ವಚನಕಾರರನ್ನು ಕುರಿತು ಅಪಾರವಾದ ಭಕ್ತಿ ಗೌರವಗಳು ಇವೆ. ಭಕ್ತಿ ಗೌರವಗಳಿಗೆ ಪುರಾತನರಲ್ಲಿದ್ದ ನಡೆ, ನುಡಿಗಳಲ್ಲಿನ ಅಭೇದವೇ ಮುಖ್ಯ ಕಾರಣ. ಬಸವಣ್ಣನವರಿಗಂತೂ ಪುರಾತನರನ್ನು ಕಂಡರೆ ಬಹಳ ಭಕ್ತಿ ಆದರಗಳು. ಇದಕ್ಕೂ ಪುರಾತನರಲ್ಲಿ ಅವರಿಗೆ ಕಾಣಿಸಿದ ನಡೆ ನುಡಿಯಲ್ಲಿ ಏಕತ್ರರೂಪಿ ರಚನೆಗಳು ಕಾರಣವಾಗಿವೆ. ಪುರಾತನರ ಬದುಕನ್ನಷ್ಟೇ ಗೌರವಿಸದೆ, ಬದುಕಿನ ಉಪೋತ್ಪನ್ನವಾದ, ನಡೆ, ನುಡಿಗಳು ಏಕತ್ರಗೊಂಡು ರಚನೆಯಾದ ವಚನಗಳಿಂದ ಬಸವಣ್ಣನವರೂ ಪ್ರಭಾವಕ್ಕೆ ಒಳಗಾಗಿದ್ದಾರೆ. ಅಂತಹ ವಚನಗಳಲ್ಲಿ ಮೇಲಿನ ವಚನವೂ ಒಂದು.

ಜೇಡರ ದಾಸಿಮ್ಮಯ್ಯ ಬಸವಣ್ಣನವರಿಗೂ ಹಿಂದೆ ಇದ್ದವನು. ಈತನು ನೇಯ್ಗೆ ಕಾಯಕವನ್ನು ಮಾಡುತ್ತಿದ್ದವನು. ಈತನ ಕಾಲವನ್ನು ಕವಿಚರಿತಕಾರರು ಕ್ರಿ. ಶ. ೧೦೪೦ ಎಂದು ಹೇಳಿದ್ದಾರೆ. ೩ ತ. ಸು. ಶಾಮರಾಯರೂ ಇದೇ ಕಾಲವನ್ನು ಒಪ್ಪಿಕೊಂಡಿದ್ದಾರೆ. ೪ ತನ್ನ ವಚನಗಳಲ್ಲಿ ಸಂಸಾರ, ವಿರಕ್ತಿ ಮುಂದಾದ ಅಂಶಗಳ ಬಗೆಗೆ ಮಾತನಾಡುವ ದಾಸಿಮ್ಮಯ್ಯನ ಅಂಕಿತ ರಾಮನಾಥ ಎಂದಿದೆ. ದೇವರ ದಾಸಿಮ್ಮಯ್ಯ ಮತ್ತು ಜೇಡ ದಾಸಿಮ್ಮಯ್ಯ ಎಂಬ ಹೆಸರುಗಳಿಂದ ಈತ ಒಬ್ಬನೇ ? ಅಥವಾ ಬೇರೆ ಬೇರೆ ವ್ಯಕ್ತಿಗಳೇ ? ಎಂಬ ಚರ್ಚೆಗಳು ನಡೆದಿದ್ದು. ಡಾ. ಕಲಬುರ್ಗಿ, ಡಾ. ಎಂ. ಚಿದಾನಂದಮೂರ್ತಿಯವರ ಲೇಖನಗಳನ್ನು ಗಮನಿಸಬಹುದು. ಪ್ರಸ್ತುತ ಚರ್ಚೆಗೆ ತೆಗೆದುಕೊಂಡಿರುವ ವಚನವನ್ನು ಜನಪ್ರಿಯ ಪ್ರತಿಯಿಂದ ಅಯ್ಕೆ ಮಾಡಿಕೊಳ್ಳಾಗಿದೆ. ದಾಸಿಮ್ಮಯ್ಯನ ಬದುಕನ್ನು ಕುರಿತಂತೆ “ದೇವಾಂಗದಾಸಿಮ್ಮಯ್ಯನ ಪುರಾಣ” ಎಂಬ ಕೃತಿಯೂ ಇದೆ‌. ಸಾಂಗತ್ಯ ಪ್ರಕಾರದಲ್ಲಿ ಒಟ್ಟೂ ಏಳು ಸಂಧಿಗಳಲ್ಲಿ ಈ ವಚನಕಾರನ ಬದುಕನ್ನು ವಿಸ್ತಾರವಾಗಿ ಆ ಕೃತಿಯಲ್ಲಿ ಸ್ತುತಿಸಲಾಗಿದೆ. ಈ ಕೃತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಆಚಾರ್ಯ ಡಿ. ಎಲ್. ನರಸಿಂಹಾಚಾರ್ಯರ ‘ಪೀಠಿಕೆಗಳು ಲೇಖನಗಳು’ ಕೃತಿಯನ್ನು ಗಮನಿಸಬಹುದು.

ಬದಲಾದ ಕಾಲದಲ್ಲಿ ನಿಂತು ದಾಸಿಮ್ಮಯ್ಯ ಹೇಳಿದ ಮಾತುಗಳನ್ನೇ ಮತ್ತೊಂದು ವಿನ್ಯಾಸದಲ್ಲಿ ಬಸವಣ್ಣ ಹೇಳುತ್ತಿದ್ದಾನೆ. ಇದಕ್ಕೆ ಕಾರಣವೇನು ? ಎಂಬುದು ಇಲ್ಲಿ ಬಹಳ ಮುಖ್ಯವಾದ ಪ್ರಶ್ನೆ. ಒಂದು ಕಾಲದಲ್ಲಿನ ಮೌಲ್ಯವನ್ನು ಮತ್ತೊಂದು ಕಾಲಕ್ಕೆ ಮೌಲ್ಯವಾಗಿಸಿಕೊಳ್ಳಬೇಕಾದಾಗ ಎರಡು ಬಹಳ ಮುಖ್ಯ ಅಂಶಗಳನ್ನು ಗಮನಿಸಬೇಕು. ಒಂದು ಆ ಮೌಲ್ಯ ಉತ್ತಮವಾದದ್ದೇ, ಸಮಾಜಕ್ಕೆ ಒಪ್ಪಿತವಾಗುವುದೇ ಎಂದು, ಮತ್ತೊಂದು ಮೌಲ್ಯವೊಂದು ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ಸಮಾಜವೊಂದರ ಅಪೇಕ್ಷಿತ ಮೌಲ್ಯಗಳು, ನೀತಿ ಸಂಹಿತೆಗಳು, ಧಾರ್ಮಿಕ ಆಚರಣೆ ನಂಬಿಕೆಗಳು ಬದಲಾಗುತ್ತವೆ. ಹೀಗೆ ಬದಲಾಗುವಾಗ ಮೌಲ್ಯವೊಂದನ್ನು ಪುರಾತನಮತವೆಂದು ( ವೈದಿಕರಲ್ಲಿ “ಪ್ರಾಚೀನಾಮಿತಿ” ಎಂಬ ಮಾತುಗಳು ಕೆಲವು ಕ್ರಿಯೆಗಳನ್ನು ಮಾಡುವಾಗ ಬಂದೇ ಬರುತ್ತದೆ. ಅದಕ್ಕೆ ಉತ್ತರವಿಲ್ಲ ಆದರೆ ಹಿಂದೆ ಹೀಗೆ ಮಾಡುತ್ತಿದ್ದರು, ಇಂದು ಹಾಗೇ ಮಾಡಬೇಕು ಎಂದು ಹೇಳಿಬಿಡುತ್ತಾರೆ. ) ನಂಬಿದ್ದನ್ನು ಹಸ್ತಾಂತರ ಮಾಡುವುದು. ಹೀಗೆ ಮಾಡಲು ಬಹುಮುಖ್ಯ ಕಾರಣವೇ

೧. ಪುರಾತನರನ್ನು ಸಮಕಾಲೀಮಗೊಳಿಸುವುದು ಮತ್ತು ಪರಂಪರಾಗತವಾಗಿ ಬದುಕಿನ ಸಾರವಾಗಿ ಬಂದ ಮೌಲ್ಯಗಳನ್ನು ನೆನಪಿಸಿಕೊಳ್ಳುವುದು ಮತ್ತು ಜಾಗೃತಗೊಳಿಸಿಕೊಳ್ಳುವುದು.

೨. ಮೌಲ್ಯಗಳು ಕಾಲದಿಂದ ಕಾಲಕ್ಕೆ ಸಮಾಜದ ಅಪೇಕ್ಷೆಗೆ ತಕ್ಕಂತೆ ಬದಲಾಗುತ್ತವೆ. ಹಾಗೆ ಬದಲಾಗುವಾಗ ಪುರಾತನರನ್ನು ಸಾಕ್ಷಿಯಾಗಿ ನಿಲ್ಲಿಸಿಕೊಂಡು ಮಾತನಾಡುವುದು ಮತ್ತು ಇಂದಿನ ಮೌಲ್ಯಗಳನ್ನು ಅದರ ಬೆಳಕಿನಲ್ಲಿ ಕಂಡುಕೊಳ್ಳುವುದು. ಪುರಾತನರಂತೆ ಬದುಕು ಭಾವಗಳನ್ನು ಕಟ್ಟಿಕೊಂಡು ಬದುಕನ್ನು ಹಸನಾಗಿಸಿಕೊಳ್ಳುವುದು.

ಅಧ್ಯಾತ್ಮದ ತುತ್ತ ತುದಿಯ ಅನುಭವವು ರತಿಸುಖದಂತೆ ಇರುತ್ತದೆ ಎಂಬುದನ್ನು ಹಲವಾರು ಕಡೆಗಳ್ಲಿ ಉಲ್ಲೇಖ ಮಾಡಲಾಗಿದೆ. ( ರತಿಸುಖದಲಿ ಓಲಾಡುತಲಿ ಒಮ್ಮೆ / ಕೃಷ್ಣಾ ಎನಬಾರದೆ ? – ಪುರಂದರದಾಸ ) ರತಿಸುಖಕ್ಕೆ ಸಮನಾದುದೆಂಬುದನ್ನು ಹೇಳಿದ ಮೇಲೆ ಕೆಲವೊಂದು ಬದಲಾವಣೆಗಳು ನಡೆದಿವೆ. ಕಾಪಾಲಿಕ, ಪಾಶುಪಥದಲ್ಲಿನ ಪಂಚ ಮ ಕಾರದ ಆಚರಣೆಗಳಲ್ಲಿ ಮೈಥುನವೂ ಒಂದೆಂಬುದನ್ನು ಮರೆಯುವ ಹಾಗಿಲ್ಲ. ಈ ವಚನದಲ್ಲಿನ ಎರಡು ದೃಷ್ಟಾಂತಗಳನ್ನು ಕೊಡುತ್ತಾರೆ‌‌. ‘ತನ್ನಾಶ್ರಯದ ರತಿಸುಖ’ ಮತ್ತು ‘ತಾನುಂಬ ಊಟ’ ಎರಡು ವ್ಯಕ್ತಿ ದೇಹ ಮತ್ತು ದೇಹಕ್ಕೆ ಶಕ್ತಿಕೊಡುವುದಕ್ಕೆ ನೇರವಾಗಿ ಸಂಬಂಧ ಸಾಧಿಸುವ ಕ್ರಿಯೆ. ಇದನ್ನು ಹೇಗೆ ಮತ್ತೊಬ್ಬರ ಕೈಯಲಿ ಹೇಗೆ ಮಾಡಿಸಲು ಸಾಧ್ಯವಿಲ್ಲವೋ ಹಾಗೆ‌ ‘ಪೃಥ್ವಿವಲ್ಲಭನ ಪೂಜೆ’ ಮತ್ತು ‘ಲಿಂಗಕ್ಕೆ ಮಾಡುವ ನಿತ್ಯ ನೇಮ’ವನ್ನೂ ಬೇರೆಯವರಿಂದ ಮಾಡಿಸಲಾಗದು ಎಂಬಲ್ಲಿಯೂ ಒಂದೇ ದನಿಯನ್ನು ಈ ವಚಗಳು ಹೊರಡಿಸುತ್ತಿವೆ. ಇದು ಬಸವಣ್ಣ ತನ್ನ ಸಮಕಾಲೀನಕ್ಕೆ ಪುರಾತನನಾದ ದಾಸಿಮ್ಮಯ್ಯನನ್ನು ಕರೆತರುವ ಮಾರ್ಗವಾಗಿದೆ.

ಭಾಷಿಕವಾಗಿ ಮೇಲಿನ ವಚನಗಳನ್ನು ನೋಡುವುದಾದರೆ ದಾಸಿಮ್ಮಯ್ಯನ ವಚನದಲ್ಲಿ “ಹೆರರ ಕೈಯಿಂದ ಮಾಡಿಸುವರೆ” ಎಂದು ಪ್ರಶ್ನಾರ್ಥಕವಾಗಿ ಬಂದಿದೆ. ಬಸವಣ್ಣನಲ್ಲಿ “ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ/ ನಿಮ್ಮನೆತ್ತ ಬಲ್ಲರು ಕೂಡಲಗಮದೇವಾ ?” ಎಂಬಲ್ಲಿಯೂ ಪ್ರಶ್ನಾರ್ಥಕವಾಗಿಯೇ ಬಂದಿದೆ. ಆದರೂ ಬಸವಣ್ಣನ ವಚನದ ಆಂತರ್ಯದಲ್ಲೊಂದು ಸಾತ್ವಿಕ ಸಿಟ್ಟಿದೆ. ಈ ಸಾಲುಗಳಿಂದ ಹೊರಹೊಮ್ಮುವ ದನಿಯೇ ಬಹಳ ಮಹತ್ವವಾದದ್ದು. ‘ಮಾಡಿಸುವರೆ’ ಎಂದು ದಾಸಿಮ್ಮಯ್ಯನಲ್ಲಿ ಬಂದಾಗ ಓದುಗನೊಬ್ಬ ಉತ್ತರ ಕಂಡುಕೊಳ್ಳಲು ಆಂತರಿಕ ಶೋಧದ ಕಡೆಗೆ ಮುಖ ಮಾಡಿತೊಡಗಿಸುವ ಕಾರ್ಯ, ಬಸವಣ್ಣನವರಲ್ಲಿ ಹಿಂದೆ ಹೀಗೆ ಹೇಳಿದ್ದಾರೆಂದು ನೆನಪಿಸಿ ಅದನ್ನು ಮಾಡಲಾರದವ ಕಂಡು ಸಾತ್ವಿಕ ಸಿಟ್ಟಾಗಿ ಬಂದಿದೆ.

ದಾಸಿಮ್ಮಯ್ಯನಲ್ಲಿನ ವಚನವು ಬಹಳ ಸಾಂದ್ರವಾಗಿ, ನಿಖರವಾಗಿ, ನೇರವಾಗಿ ಬಂದಿದೆ. ಬಸವಣ್ಣನವರಲ್ಲಿ ಪ್ರಶ್ನೆಗಳೇ ಹೆಚ್ಚಾಗಿ ವಿಸ್ತಾರ ಪಡೆದುಕೊಂಡಿದೆ. ದಾಸಿಮ್ಮಯ್ಯ ಒಮ್ಮೆ ಮಾತ್ರ “ಹೆರರ” ಎಂದು ಬಳಸಿದರೆ, ಬಸವಣ್ಣನಲ್ಲಿ “ಬೇಱೆ ಮತ್ತೊಬ್ಬರ ಕೈಯಲ್ಲಿ” ಎಂಬ ಪದ ಎರಡು ಬಾರಿ ಬಂದಿದೆ.  ಬಸವಣ್ಣನವರ ವಚನಕ್ಕಿಂತ ದಾಸಿಮ್ಮಯ್ಯನ ವಚನವು ಬೀರುವ ಪರಿಣಾಮದಲ್ಲಿ ತೀಕ್ಷ್ಣತೆಯಿಂದ ಕೂಡಿದೆ. ಬಸವಣ್ಣನ ವಚನವನ್ನು ಓದಿದೊಡನೆ ಸಾಲುಗಳೆಲ್ಲಾ ಹೆಚ್ಚು ಪ್ರಶ್ನಾರ್ಥಕವಾಗಿಯೇ ಬಂದಿದೆಯಲ್ಲ ಏಕೆ ಹೀಗೆ ? ಎಂಬ ಪ್ರಶ್ನೆ ಉಂಟಾಗುತ್ತದೆ‌. ಒಂದು, ಪ್ರಶ್ನೆಗಳನ್ನು ತೆರೆದಿಟ್ಟಾಗ ಉತ್ತರದ ಕಡೆಗೆ ಹೋಗಬಹುದು, ಕೊನೆಗೆ ಯಾರು ಹೋಗದಿದ್ದರೂ ಪ್ರಶ್ನೆಗಳು ಹುಟ್ಟಿದವನು ಆ ಹಾದಿಯಲ್ಲಿ ಗಮಿಸಿ ಉತ್ತರ ಕಂಡುಕೊಳ್ಳಬಹುದು ಆ ಆಸೆಯನ್ನು ಹೊಂದಿದೆ. ಪ್ರಶ್ನೆಗಳಿಂದಲೇ‌ ಪುರಾತನರ ಮತಕ್ಕೆ ಕರೆತರುವ ಹಂಬಲವಿರಬೇಕು.

ಎರಡು ಸಮಾನವಾದ ದೃಷ್ಟಾಂತಗಳನ್ನು ಇಬ್ಬರೂ ವಚನಕಾರರು ಕೊಡುತ್ತಾರೆ. ಸತಿಯರ ಸಂಗ, ಅತಿಶಯದ ಗ್ರಾಸ, ಪೃಥ್ವಿಗೀಶ್ವರನ ಪೂಜೆ ಎಂದು ದಾಸಿಮ್ಮಯ್ಯ ನೀಡಿದರೆ, ತನ್ನಾಶ್ರಯದ ರತಿಸುಖ, ತಾನುಂಬ ಊಟ, ತನ್ನ ಲಿಂಗಕ್ಕೆ ಮಾಡುವ ನಿತ್ಯ ನೇಮ ಎಂದು ಅದೇ ಮೂರನ್ನು ಬೇರೆ ರೀತಿಯಲ್ಲಿ ಬಸವಣ್ಣನವರು ನೀಡಿದ್ದಾರೆ. ಇದು ದಾಸಿಮ್ಮಯ್ಯನ ಪ್ರಭಾವಕ್ಕೆ ಒಳಗಾಗಿದ್ದಾರೆನ್ನುವುದಕ್ಕೆ ಸಾಕ್ಷಿಯಾಗಿದೆ. ಗ್ರಾಸ ಎಂಬುಥತದಕ್ಕೆ “ಹುಲ್ಲು” ಎಂಬ ಅರ್ಥವೂ ಇದೆ. ಆ ಹಾದಿಯಲ್ಲಿ ಗಮನಿಸಿದರೆ ದಾಸಿಮ್ಮಯ್ಯನಲ್ಲಿ ಪಶು – ಪತಿ ಭಾವಕ್ಕೆ ವಚನ ವಿಸ್ತಾರವಾಗುವ ಸಾಧ್ಯತೆಯೂ ಇದೆ.

ಎರಡು ವಚನಗಳಿಂದ ಘಟಿಸುವ ಜೀವಧ್ವನಿಯೇ ವಿಶಿಷ್ಟವಾದ ಕ್ರಮಗಳಲ್ಲಿ ಬಂದಿವೆ. ದಾಸಿಮ್ಮಯ್ಯನ ವಚನದ ಕೊನೆಯ ಸಾಲಾದ ‘ಅರಿವುಳ್ಳೊಡೆ ಹೆರರ ಕೈಯಲ್ಲಿ ಮಾಡಿಸುವರೆ’ ಎಂದು ಬಂದೊಡನೆ ಅರಿವಿಲ್ಲದವರು ಮಾತ್ರ ಹಾಗೆ ಮಾಡುವರು, ಅರಿವಿದ್ದವರು ಎಂದು ಹಾಗೆ ಮಾಡಲಾರರು. ಇದನ್ನು ಕೇಳಿದವರಲ್ಲಿ ಆಂತರಿಕ ಶೋಧ ಆರಂಭವಾಗಿ ಆಯ್ಕೆಗೆ ಎರಡು ಹಾದಿಗಳೂ ತೆರೆಯುತ್ತವೆ. ಆದರೆ ಬಸವಣ್ಣನವರಲ್ಲಿನ ಸಿಟ್ಟು ‘ಬೇಱೆ ಮತ್ತೊಬ್ಬರ ಕೈಯಲ್ಲಿ ಮಾಡಿಸುವರೆ’ ಎಂದು ಮೂರು ಬಾರಿ ಬಂದು, ಕೊನೆಯಲ್ಲಿ ‘ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ ನಿಮ್ಮನೆತ್ತ ಬಲ್ಲರು’ ಎಂದು ನೇರವಾಗಿ ಬೈಗುಳದ ಹಂತಕ್ಕೆ ತಲುಪಿ ಬೋಧನೆ ಮಾಡಲು ಆರಂಭ ಮಾಡಿಬಿಡತ್ತದೆ. ಈ ಸಾಲು ಹೊಮ್ಮಿಸುವ ಮತ್ತೊಂದು ದನಿಯನ್ನೂ ಸೂಕ್ಷ್ಮವಾಗಿ ಗಮನಿಸಿ. ‘ನಿಮ್ಮನ್ನೆತ್ತ ಬಲ್ಲರು’ ಎಂಬು ಪದವೂ ಪ್ರಶ್ನಾರ್ಥಕವಾಗಿ ಕೆಲಸ ಮಾಡುತ್ತಿದೆ. ಆದರೆ ಅದರೊಳಗೊಂದು ‘ನಾ ನಿಮ್ಮ‌ ಬಲ್ಲೆ’ ಎಂಬ ಅಹಂಕಾರದ ದನಿಯೂ ಹಿನ್ನೆಲೆಯಿಂದ ಬರುತ್ತಿದೆ. ಅಹಂಕಾರಕ್ಕೆ ಸಾಕ್ಷಿಯಾಗಿ ಅದೇ ಸಾಲಿನ ಮತ್ತೊಂದು ಪದವನ್ನು ಗಮನಿಸಿ ‘ಉಪಚಾರಕ್ಕೆ ಮಾಡುವರಲ್ಲದೆ’ ಎಂಬುದು ಮುಂದಿನ‌ ಪದದ ಭಾವಕ್ಕೆ ಹೊಂದಿಸಿಕೊಂಡು ನೋಡಿದರೆ ‘ನಾನು ಉಪಚಾರಕ್ಕೆ ಮಾಡುವವನಲ್ಲ ಇತರರು ಮಾಡುತ್ತಿದ್ದಾರೆ’ ಎಂಬ ದೋಷಾರೋಪಣೆಯ ಮಟ್ಟವನ್ನು ವಚನದ ದನಿ ಮುಟ್ಟಿಬಿಡುತ್ತದೆ.

ಎರಡು ವಚನಗಳನ್ನು ಗಮನಿಸಿದರೆ ಎರಡು ತನ್ನ ಭಾಷೆ, ರಾಚನಿಕ ವಿನ್ಯಾಸ ಮತ್ತು ಕೇಳುಗನ ಮೇಲೆ ಬೀರುವ ಪರಣಾಮದಲ್ಲಿ ಭಿನ್ನವಾದ ಮಾರ್ಗಗಳನ್ನು ಹಿಡಿದವುಗಳೇ ಆಗಿವೆ. ಒಂದು ಪ್ರಶ್ನಾರ್ಥಕವಾಗಿ ನಡೆದರೆ, ಮತ್ತೊಂದು ಬದಲಾದ ಕಾಲ, ಸಮಾಜಕ್ಕೆ ಹಿಂದಿನ ಮೌಲ್ಯವೊಂದನ್ನು ಸಾರಿ ಹೇಳಬೇಕಾದಾಗ ಉಂಟಾದ ಖೇಧ, ಸಿಟ್ಟುಗಳು ಕೆಲಸ ಮಾಡಿವೆ. ‘ಅರಿವುಳ್ಳೊಡೆ’ ಎಂಬ ಒಂದು ಪದವನ್ನು ಬಳಸಿ ಅರಿವನ್ನು ಉಂಟುಮಾಡುವುದರ ಕಡೆಗೆ ತನ್ನ ಉದ್ದೇಶವನ್ನು ದಾಸಿಮ್ಮಯ್ಯ ಯಶಸ್ವಿಯಾಗಿ ಹಸ್ತಾಂತರ ಮಾಡಿಬಿಡುತ್ತಾನೆ, ಆದರೆ ಬಸವಣ್ಣನವರಲ್ಲಿ ಸಿಟ್ಟು, ದೋಷಣೆಗಳು ಬಂದಿವೆ

—————————

.

ಅಡಿಟಿಪ್ಪಣಿಗಳು

೧. ಬಸವಯುಗದ ವಚನ ಮಹಾಸಂಪುಟ ೦೧. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು. ವ ಸಂ ೧೫೩. ಪು ೧೨೮೫. (೨೦೧೬)

೨. ಎನ್ನ ನಾ ಹಾಡಿಕೊಂಡೆ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ಬೆಂಗಳೂರು. ವ ಸಂ ೧೮೬. ಪು ೧೪೩. (೨೦೧೨)

೩. ಕರ್ಣಾಟಕ ಕವಿಚರಿತೆ. ಸಂಪುಟ ೦೧. ಆರ್. ನರಸಿಂಹಾಚಾರ್ಯ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು. ಪು ೨೧೬. (೨೦೧೫)

೪. ಶಿವಶರಣ ಕಥಾರತ್ನಕೋಶ. ತ.‌ ಸು. ಶಾಮರಾಯ. ತಳುಕು ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಮೈಸೂರು. ಪು ೧೬೨ ಮತ್ತು ೧೯೪ ರಿಂದ ೧೯೬ (೧೯೬೭)

***********************************

ಆರ್.ದಿಲೀಪ್ ಕುಮಾರ್

ಹುಟ್ಟಿದ್ದು ೧೯೯೧ ಮಾರ್ಚಿ ೧ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Leave a Reply

Back To Top