ಮುಕ್ತಿ

ಕಥೆ

ನಾಗಶ್ರೀ ಅವರ ‘ ಮುಕ್ತಿ ‘ ಕತೆ ತುಂಬಾ ಸಹನೆಯಿಂದ , ಜೀವನ ಪ್ರೀತಿಯಿಂದ ಬರೆದ ಕತೆ. ಮುಕ್ತಿ ಓದುವಾಗ ಮಾಸ್ತಿಯವರು ನೆನಪಾದರು. ನಾಗಶ್ರೀ ಕತೆ ಹೇಳುವ ಶೈಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ತರಹ. ಕುಟುಂಬ, ಜೀವನ ಪ್ರೀತಿಯ ಆಯಾಮಗಳು ಈ ಕತೆಯಲ್ಲಿವೆ.
ಕಥನ ಕಲೆ ನಾಗಶ್ರೀಗೆ ಸಿದ್ಧಿಸಿದೆ. ಯಾವ ವಸ್ತುವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದು ಕಲಾತ್ಮಕತೆ ದಕ್ಕಿದೆ ಎನ್ನುತ್ತಾರೆ ಸಹೃದಯಿ ನಾಗರಾಜ್ ಹರಪನಹಳ್ಳಿ.
ಈ ವಾರದ ಸಂಗಾತಿಗಾಗಿ ಈ ಕತೆಯನ್ನು ಆಯ್ಕೆ ಮಾಡಿಕೊಟ್ಟಿದ್ದಾರೆ…

ಮುಕ್ತಿ

ಎಸ್ ನಾಗಶ್ರೀ

Togetherness by artist Seby Augustine | ArtZolo.com

ಅದು ಮಾರ್ಚ್ ತಿಂಗಳ ಕೊನೆಯ ವಾರ. ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದು ಈಗ ಹಣ್ಣಾಗಿದ್ದ ಸೀತಮ್ಮನಿಗೆ ಹೊರಗಿನ ಬಿಸಿಲು ಕಂಡು ಕಣ್ಣು ಕತ್ತಲೆಗಟ್ಟಿ ಬಾಗಿಲ ಪಕ್ಕದ ಒರಳುಗಲ್ಲಿನ ಮೇಲೆ ಕುಸಿದು ಕುಳಿತು ಸಾವರಿಸಿಕೊಳ್ಳುವಂತಾಯ್ತು. ಎಂಭತ್ತೈದರ ಪ್ರಾಯದಲ್ಲೂ ಕರಿಗಪ್ಪು ಕೂದಲ ದೊಡ್ಡ ಗಂಟು. ಅಲ್ಲಲ್ಲಿ ನಾಲ್ಕಾರು ಬಿಳಿಗೂದಲು ಮಿರಿ ಮಿರಿ ಮಿಂಚುತ್ತಿತ್ತು. ಸುಕ್ಕುಗಟ್ಟಿದ ಕೈಗಳಲ್ಲಿ ಮುಂಚಿನಷ್ಟು ಶಕ್ತಿಯಿರದಿದ್ದರೂ ಅಭ್ಯಾಸಬಲದಿಂದ ಎಲ್ಲವನ್ನೂ ಮಾಡುವ ಕಸುವು. ಮಣ್ಣಿನ ಗೋಡೆಯ ಮನೆಗೆ ಕಾಲಕಾಲಕ್ಕೆ ಸುಣ್ಣಬಣ್ಣ ಹೊಡೆಸಿ, ದಿನವೂ ನೆಲ ಸಾರಿಸಿ, ರಂಗೋಲಿಯಿಟ್ಟು , ಬೆಳ್ಳಿ ಪಾತ್ರೆಗಳೋ ಎಂಬಂತೆ ಥಳಥಳ ತೊಳೆದಿಟ್ಟು, ಮನೆಯಿಡೀ ದಿಟ್ಟಿಸಿದರೂ ಚಿಟಿಕೆ ಕಸವಿರದಂತೆ ಇಟ್ಟುಕೊಂಡಿದ್ದ ರೀತಿಗೆ ಮೆಚ್ಚದವರುಂಟೆ? ಆದರೆ ಯಾರ ಮೆಚ್ಚುಗೆ, ಮುಲಾಜಿಗೂ ತಲೆಕೊಡದೆ ೬೦ ವರ್ಷದಿಂದ ಒಬ್ಬಂಟಿಯಾಗಿ ಸಂಸಾರದ ಸಕಲೆಂಟು ಕಷ್ಟಗಳನ್ನು ಈಸಿ ಬಂದವಳಿಗೆ ಇತ್ತೀಚೆಗೆ ಒಂದು ವಿಷಯ ಮನಸ್ಸನ್ನು ಆವರಿಸಿ , ಹೇಳಲಾಗದೆ ಬಿಡಲಾಗದೆ ಸಂದಿಗ್ಧ ಸೃಷ್ಟಿಸಿತ್ತು.

ಹೊರಗಿನ ಬಿಸಿಲು, ಯೋಚನೆ, ವಯೋಸಹಜ ಆಯಾಸದಿಂದ ಬಳಲಿ, ಕುಳಿತಿದ್ದ ಒರಳುಗಲ್ಲನ್ನು ಸವರುತ್ತಲೇ ಅರ್ಧ ಶತಮಾನ ಹಿಂದಕ್ಕೆ ಜಾರಿದ್ದಳು ಅಜ್ಜಿ.

೨೫ಕ್ಕೆ ಗಂಡನನ್ನು ಕಳೆದುಕೊಂಡು, ನಾಲ್ಕು ಮಕ್ಕಳ ನ್ನು ಬಗಲಿಗೆ ಕಟ್ಟಿಕೊಂಡು ಅಪ್ಪನ ಮನೆ ಕದ ತಟ್ಟಿದಾಗ, ತನ್ನೊಳಗೆ ಇದ್ದದ್ದು ಮಕ್ಕಳಿಗೆ ದಾರಿ ಮಾಡಬೇಕೆನ್ನುವ ಕನಸೊಂದೇ. ಅಪ್ಪ ಅಮ್ಮನೇ ಮುಂದೆ ನಿಂತು, ಆಳಾಗಿ ದುಡಿದು ಕಟ್ಟಿಕೊಟ್ಟ ಮನೆ, ರಟ್ಟೆಯಲ್ಲಿದ್ದ ಶಕ್ತಿ, ದೈವ ಭಕ್ತಿ ಇಷ್ಟೇ ಆ ದಿನದ ಆಸ್ತಿ. ಕಸಮುಸುರೆ ಕೆಲಸದಿಂದ ಆರಂಭಿಸಿ, ಮೆಣಸಿನಪುಡಿ ಕುಟ್ಟಿ, ದೋಸೆ-ಇಡ್ಲಿ ಹಿಟ್ಟು ರುಬ್ಬಿ, ಒಬ್ಬಟ್ಟು ಚಕ್ಕುಲಿ ಉಂಡೆ ವ್ಯಾಪಾರ ಮಾಡುವ ಮಟ್ಟಕ್ಕೆ ಬೆಳೆಯುವವರೆಗೂ ಜತೆ ನಿಂತಿದ್ದು ತವರಿನ ಆಸರೆಯೇ. ಬೆಳಿಗ್ಗೆ ನಾಲ್ಕಕ್ಕೆ ಎದ್ದು, ತಣ್ಣೀರಲ್ಲಿ ಮಿಂದು, ತೌಡಿಗೆ ಉಪ್ಪು ಸೇರಿಸಿ ಎರಡು ರೊಟ್ಟಿ , ಒಂದು ಗಟ್ಟಿ ಕಾಫಿ ಕುಡಿದು ಹೊರಟರೆ ಕೆಲಸ ಮುಗಿಸಿ ಮನೆ ಸೇರುವಷ್ಟರಲ್ಲಿ ಮಕ್ಕಳು ಅಜ್ಜಿ, ತಾತ, ಮಾವಂದಿರ ಪಕ್ಕ ಗಡದ್ದು ನಿದ್ದೆಯಲ್ಲಿರುತ್ತಿದ್ದರು. ಅವರ ನಗು-ಅಳು , ಆಟ ಪಾಠ ನೋಡಿ ಸಂಭ್ರಮಿಸುವ ಸಮಯ, ಪುರುಸೊತ್ತು ಇದ್ದದ್ದಾದರೂ ಯಾವತ್ತು? ದುಡಿದು ಸಂಪಾದಿಸಿದ್ದನ್ನು ಧಾರಾಳವಾಗಿ ಇಟ್ಟು, ಕೊಟ್ಟು ಕೈಮುಗಿವುದರಲ್ಲಿ ಕಂಡ ಸಾರ್ಥಕತೆ ಬಚ್ಚಿಡುವುದರಲ್ಲಿ ಇರಲಿಲ್ಲ. ಕಾಲವುರುಳಿ ಸೊಸೆಯರು ಬಂದರು. ದುಡಿವ ಛಲ ಕುಗ್ಗಲಿಲ್ಲ. ಅವರನ್ನು ಕೂರಿಸಿ, ತಾನೇ ದುಡಿದು, ಊಟಕ್ಕಿಟ್ಟರೂ,ಗಂಡನೊಂದಿಗೆ ಸುಖವಾಗಿರಲೆಂದು ಖಾಸಗಿತನಕ್ಕೆ ಧಕ್ಕೆಯಿರದಂತೆ ನಡೆದರೂ ಒಗ್ಗಟ್ಟು ಮೂಡಲಿಲ್ಲ. ಹತ್ತಿರವಿದ್ದು ದುಸುಮುಸು ಎನ್ನುವುದಕ್ಕಿಂತ ದೂರವೇ ತಣ್ಣಗಿರುವುದು ಮೇಲೆಂದು ಹೊಸ ಸಂಸಾರ ರೂಢಿಸಿ ಬಂದದ್ದಾಯ್ತು. ಬಸಿರು ಬಯಕೆ, ಬಾಣಂತಿ ನೀರು-  ಪಥ್ಯ, ಮೊಮ್ಮಕ್ಕಳ ದಿನದಿನದ ತಿಂಡಿ ತೀರ್ಥ, ಕೈಗಾಸು ಯಾವುದಕ್ಕೂ ಕೊರೆಯಿಲ್ಲದಂತೆ , ಮಗ- ಸೊಸೆ ಎಂಬ ವಾಂಛಲ್ಯದಲ್ಲಿ ಉರುಳಿದ ಕಾಲಕ್ಕೆ ಕೃತಜ್ಞತೆಯ ಭಾರವಿರಲಿಲ್ಲ. ಒದ್ದೆ ಬಾಣಲಿಗೆ ಬಿದ್ದ ಎಣ್ಣೆಯಂತೆ ಸಿಡಿಸಿಡಿದು ದೂರವಿಟ್ಟ ಸೊಸೆ, ಉಪ್ಪಿಲ್ಲದ ಸಪ್ಪೆಯೂಟದಂತೆ ಉಸಿರೆತ್ತದೆ ಉಳಿದ ಮಗ, ನೆಲದ ಸಾರ ಹೀರಿ ಪಕ್ಕಕ್ಕೆ ವಾಲಿದ ಪಾರಿಜಾತದಂಥ ಮೊಮ್ಮಕ್ಕಳನ್ನು ಕ್ಷಮಿಸುವುದು, ಚೆನ್ನಾಗಿರಲೆಂದು ಹರಸುವುದು ಸೀತಮ್ಮನಿಗಷ್ಟೇ ಸಾಧ್ಯವಾದ ಮಾತಾಗಿತ್ತು. ಅವರಿವರ ಬಾಯಿಯ ಕೊಂಕು ಮಾತಿಗೆ ಕೊಕ್ಕೆ ಹಾಕಿ, “ನನ್ನ ಮಕ್ಕಳು ಒಳ್ಳೆಯವರೇ. ಮಗನಂತೂ ಅಪ್ಪಟ ಅಪರಂಜಿ. ಅವನ ಬದುಕಿನ ಕಷ್ಟ ಅಂತದ್ದು. ಅದಕ್ಕೇಕೆ ಮಾತಿನ ಮಸಿ? ನಿರ್ವಂಚನೆಯಿಂದ ನಡೆದ ತೃಪ್ತಿ ನನಗೆ. ಅವರವರ ಕರ್ಮ ಅವರವರಿಗೆ. ಮಾತು ಮನೆ ಕೆಡಿಸ್ತು. ತೂತು ಒಲೆ ಕೆಡಿಸ್ತು. ಗಾದೆ ಕೇಳಿಲ್ವಾ? ಹೊತ್ತು ಹೋಗದ ಸಂಕಟಕ್ಕೆ ನನ್ನ ಮನೆ ಮಾತೇ ಬೇಕಾ ನಿಮಗೆ? ” ಅಂತ ಮಂಗಳಾರತಿ ತೆಗೆದು ಕಳಿಸುತ್ತಿದ್ದ ಸೀತಮ್ಮನ ಮುಂದೆ ಇನ್ನೊಂದು ಮಾತಿಗೆ ಜಾಗವಿರುತ್ತಿರಲಿಲ್ಲ. ಹುಟ್ಟಿದಾರಭ್ಯ ಕಷ್ಟವನ್ನೇ ಉಂಡುಟ್ಟು ಬೆಳೆದವಳ ಮನಸ್ಸಿನಲ್ಲಿ ಹಳಹಳಿಕೆಯ ಕಳೆ ಬೆಳೆಯದಂತೆ ಜೀವನಪ್ರೀತಿ ಉತ್ತು, ಬಿತ್ತು ತೆನೆಹೊತ್ತ ಪೈರಾಗಿತ್ತು.

ಅಂತಹ ಸೀತಮ್ಮನನ್ನು ನೆನೆದು ಬಂದ ಸರೋಜ, ಬಾಗಿಲಲ್ಲೇ ಕುಳಿತ ಅವಳನ್ನು ಕೈಹಿಡಿದು ನಡೆಸಿಕೊಂಡು ಹೋಗಿ ಮನೆಯೊಳಗೆ ಕುಳಿತಳು. ಗತದಿನದ ಮೆಲುಕಲ್ಲಿ ನೋಡಲಾಗದ ಟಿವಿ ಕಾರ್ಯಕ್ರಮವೊಂದರ ಬಗ್ಗೆ ಮಾತನಾಡುತ್ತಲೇ ಬಿಸಿ ಕಾಫಿ, ಕೋಡುಬಳೆ ತಂದಿಟ್ಟು ಬೆತ್ತದ ಕುರ್ಚಿಯಲ್ಲಿ ನೆಟ್ಟಗೆ ಕುಳಿತ ಸೀತಮ್ಮಳನ್ನು ಮತ್ತೆ ಮತ್ತೆ ಪರೀಕ್ಷಿಸುವಂತೆ ದಿಟ್ಟಿಸಿದಳು ಸರೋಜ.ಸರಿಯಾದ ಹದದಲ್ಲಿ ಮಾಡಿದ ಕೋಡುಬಳೆ ದಿನಗಳೆದಷ್ಟೂ ರುಚಿಯಾಗುವಂತೆ ದಿನೇದಿನೇ ವ್ಯಕ್ತಿತ್ವದ ಹದ ಒಪ್ಪಗೊಳಿಸಿಕೊಂಡ ಸೀತಮ್ಮನ ಬಗ್ಗೆ ಮಮತೆಯುಕ್ಕಿತು. ಸರೋಜಳ ಗಂಡ ಇದ್ದೊಂದು ಕೆಲಸ ಬಿಟ್ಟು, ವ್ಯಾಪಾರದ ಹುಚ್ಚು ಹತ್ತಿಸಿಕೊಂಡು ನಷ್ಟವಾಗಿ , ತಿನ್ನಲು ಗತಿಯಿಲ್ಲದೆ ಮನೆಯಲ್ಲಿ ಕೂತಾಗ, ಐವತ್ತರ ಹರೆಯದ ಸೀತಮ್ಮ ಹತ್ತು ಜನರ ಅಡುಗೆ ತಂದಿಟ್ಟು, ಮಕ್ಕಳ ಓದಿಗೆ ಹಣ ಕೊಟ್ಟು, ಹೊಲಿಗೆ ತರಬೇತಿಗೆ ಕಳಿಸಿ , ಸಂಸಾರಕ್ಕಂಟಿದ ಮೊಣಕನ್ನು ಬಿಡಿಸಿ ಥಳಥಳ ಹೊಳೆಸಿದ ಕಥೆಯನ್ನು ತನ್ನ ಮಕ್ಕಳ ಮುಂದೆ ಆಡಿದಷ್ಟೂ ಸಾಲದವಳಿಗೆ. ಚೂರು ಒರಟೆನ್ನಿಸುವ ಮಾತು, ದುಂದುಗಾರಿಕೆ ಬಿಟ್ಟರೆ ಮತ್ತಾವ ಅವಗುಣಗಳಿಲ್ಲದ ಅವಳ ಮುಂದೆ ಕೂತು, ಒಂದರ್ಧ ಗಂಟೆ ಮನೆಸಮಾಚಾರವೆಲ್ಲಾ ವರದಿ ಒಪ್ಪಿಸಿ ಹೊರಟರೆ ಏನೋ ಧನ್ಯತೆಯ ಭಾವ. ಇವತ್ತು ಅದರೊಂದಿಗೆ ಸೊಸೆಯ ಬಾಣಂತನದ ಬಗ್ಗೆ ವಿವರವಾಗಿ ಕೇಳಿ ಬರೆದುಕೊಳ್ಳುವ ಕೆಲಸವನ್ನೂ ಅಂಟಿಸಿಕೊಂಡು ಬಂದಿಳಿದಿದ್ದಳು. “ಹರಳೆಣ್ಣೆ- ಎಳ್ಳೆಣ್ಣೆಗೆ ಬೆಳ್ಳುಳ್ಳಿ, ವಾಯುವಿಳಂಗ ಸೇರಿಸಿ ಕಾಸಿ ಮೈಗೆ ಮಸಾಜು ಮಾಡು, ಕಡೆಯಲ್ಲಿ ಒಂಚೂರು ಎಣ್ಣೆಯುಳಿಯದಂತೆ ಸೀಗೆಪುಡಿಯಲ್ಲಿ ಕೂದಲು, ಮೈಯುಜ್ಜಿ, ನಂತರ ಬೆನ್ನು ಮತ್ತು ಎದೆಗೆ ಸಾಕಷ್ಟು ಅರಿಸಿನದಿಂದ ದಸದಸ ತಿಕ್ಕಿ ನೀರು ಹಾಕಿ , ತಲೆ ಮೈಯಿ ಕಾಯಿಸಬೇಕು. ಬಾಣಂತಿಗೆ ಹೆಚ್ಚು ನೀರು ಕೊಡಬೇಡ. ದಿನಕ್ಕೆ ಎರಡು ಸಲ ಮಾತ್ರ ಊಟ. ಎಲ್ಲಕ್ಕೂ ತುಪ್ಪವೇ ಆಗಬೇಕು. ಶೀತ ಮತ್ತು ವಾಯು ಪದಾರ್ಥಗಳು ಅಪಥ್ಯ. ಬಾಣಂತಿಗೆ ಹೊಟ್ಟೆ ಕಟ್ಟಬೇಕು. ಸೌಭಾಗ್ಯಶುಂಠಿ ಲೇಃಹ್ಯ, ಬೆಳ್ಳುಳ್ಳಿ, ಮೆಣಸು ಮರೆಯುವಂತಿಲ್ಲ. ೪೦ ದಿನ ಸರಿಯಾಗಿ ಬಾಣಂತನ ಮಾಡಿದ್ರೆ ನೂರು ವರ್ಷ ಗಟ್ಟಿಯಾಗಿ ಬಾಳ್ತಾಳೆ. ಮುಖ್ಯವಾಗಿ ಬಾಣಂತಿ ಏನೂ ಯೋಚನೆ ಮಾಡಬಾರದು. ಅಳಬಾರದು. ಎಷ್ಟು ನಿದ್ದೆ ಮಾಡಿದ್ರೆ ಅಷ್ಟು ಒಳ್ಳೇದು. ಬೇಸಿಗೆಯಿದ್ರೂ ಮೈ ಬೆಚ್ಚಗೆ ಇಟ್ಟುಕೋಬೇಕು. ಮಗುವಿಗೆ ಸುತ್ತುಖಾರ ನೆಕ್ಕಿಸಬೇಕು. ” ಹೀಗೆ ನಾಲ್ಕಾರು ಪುಟ ತುಂಬುವಷ್ಟು ವಿಷಯ ಹೇಳುತ್ತಾ ಹೋದಳು. “ಹಾಗೆ ಬಾಣಂತನ ಮಾಡಿಸಿಕೊಂಡ ನೂರಾರು ಹೆಣ್ಣುಮಕ್ಕಳು ಈಗ ಅಜ್ಜಿಯರಾಗಿ ಮಕ್ಕಳು ಮೊಮ್ಮಕ್ಕಳ ಬಾಣಂತನ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ. ನನ್ನೇ ತೊಗೋ… ೮೫ ಆದರೂ ಕಣ್ಣು, ಕಿವಿ ಚುರುಕು. ಮನೆಗೆಲಸ, ಅಡುಗೆಗೆಲಸಕ್ಕೆ ಯಾರಿಲ್ಲ. ಬೆಳಗ್ಗೆ ಮೂರಕ್ಕೆ ಎದ್ದರೆ ಎಲ್ಲಾ ಕೆಲಸ ಚಟಪಟ ಮುಗಿಸಿ, ದಿನವೆಲ್ಲಾ ದೇವರ ಧ್ಯಾನದಲ್ಲಿ ಕಳೀತೀನಿ. ಏನು ಕಷ್ಟ ನಂಗೆ? ಪಿಂಚಣಿ ಬರತ್ತೆ. ಮಕ್ಕಳು ದುಡ್ಡು ಕೊಡ್ತಾರೆ. ಊರಿನ ಜನರೆಲ್ಲಾ ಪ್ರೀತಿಯಿಂದ ನೆನೆದು, ಮನೆಬಾಗಲಿಗೆ ಬಂದು ಮಾತಾಡಿಸಿ ಹೋಗ್ತಾರೆ. ೮ ಮೊಮ್ಮಕ್ಕಳು, ೬ ಮರಿಮಕ್ಕಳನ್ನು ಕಂಡಿದೀನಿ. ಮರಿಮಕ್ಕಳನ್ನ ಕಂಡವರಿಗೆ ಪುನರ್ಜನ್ಮ ಇಲ್ಲ ಅಂತಾರೆ. ನಂಗೂ ಇನ್ನೊಂದು ಜನ್ಮ ಇಲ್ಲ ಕಣೆ ಸರೋಜ. ದೇವರು ಇಟ್ಟಿರೋ ವರೆಗೂ ಇದ್ದು ಹೋಗೋದಷ್ಟೇ. ನಾನು ವಿಧವೆ . ಅಪಶಕುನ ಅಂತ ಸೊಸೆ ಮನೆಗೆ ಸೇರಿಸೊಲ್ಲ. ಮೊಮ್ಮಗಳಿಗೆ ಗಂಡು ಮಗು. ಹತ್ತು ತಿಂಗಳಾಯ್ತು. ಕರೆದುಕೊಂಡು ಬಂದು ತೋರಿಸಲೂ ಇಲ್ಲ. ಹೆಸರೇನಿಟ್ಟರು ಅದೂ ಗೊತ್ತಿಲ್ಲ. ಮೊನ್ನೆ ಮಗ ಮನೆಗೆ ಬಂದಾಗ, ಅವನ ಮೊಮ್ಮಗನಿಗೆ ಅಂತ ಸಾವಿರದೊಂದು ರುಪಾಯಿ ಕೊಟ್ಟೆ. ಹೆಂಡತಿಯ ಮಾತು ಮೀರದೆ ವಾಪಸ್ ತಂದುಕೊಟ್ಟ. ಡಬ್ಬಕ್ಕೆ ಹಾಕಿ ಮುಚ್ಚಿಟ್ಟೆ.”

ಸೀತಮ್ಮ ಎಂದಿನ ದನಿಯಲ್ಲಿ ವರದಿಯಿಂದರಂತೆ ಇದನ್ನೊಪ್ಪಿಸುವಾಗ ಸರೋಜಳ ಕಣ್ಣಲ್ಲಿ ನೀರಾಡಿತು. ಉಷ್ಣಕ್ಕೆ ಕಣ್ಣುರಿತಿದೆ ಅಂತ ಕಣ್ಣುಜ್ಜಿಕೊಂಡು ಮೇಲೆದ್ದಳು. ಬದುಕೆಲ್ಲಾ ಅವರಿವರ ಕಷ್ಟಕ್ಕೆ ಮಿಡಿದು ತಣ್ಣನೆ ನೆರಳಾಗಿ ನಿಂತವಳ ಬದುಕೇಕೆ ಹೀಗೆಂಬ ಪ್ರಶ್ನೆ ಮತ್ತೆ ಬೃಹದಾಕಾರ ನಿಂತಿತು. ಉತ್ತರಕ್ಕೆ ಕಾಯದೆ ಹೊರಟು ನಿಂತವಳ ಹತ್ತಿರ ಸೀತಮ್ಮ ಮತ್ತೆ ಮಾತು ತೆಗೆದಳು.

 “ಸತ್ತರೆ ತಿಥಿ ಮಾಡೋಕೆ ಹಣ ಬೇಕಂತ ೪೦ ಸಾವಿರದ ಬಾಂಡ್ ಮಾಡಿಟ್ಟಿದೀನಿ. ಅದು ಮಗನ ಹತ್ತಿರವೇ ಇದೆ.ಇದಲ್ಲದೆ ಅಕೌಂಟಲ್ಲಿ ೮೦ ಸಾವಿರ ಕೂಡಿದೆ. ಅದು ಯಾರಿಗೂ ಗೊತ್ತಿಲ್ಲ. ನಾಳೆ ನಾಡಿದ್ದರ ಹಾಗೆ ನೀನು ಜೊತೆ ಬಂದರೆ, ಆ ದುಡ್ಡು ಡ್ರಾ ಮಾಡಿ ಕೊಡ್ತೀನಿ. ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡು. ಮುಂಚಿನ ಹಾಗೆ ಊರೆಲ್ಲಾ ಓಡಾಡೋಕೆ ಕೈಲಾಗ್ತಿಲ್ಲ. ಮಗನಿಗೆ ಹೇಳಿದ್ರೆ ಇವೆಲ್ಲಾ ಆಗದ ಹೋಗದ ಮಾತು. ಅವನ ಕಷ್ಟಗಳೇ ಬೇರೆ. ಇದೊಂದನ್ನ ಯಾಕೆ ಅವನಿಗೆ ಗಂಟು ಹಾಕಲಿ? ಇದ್ದಾಗ ನೋಡದೆ, ಸತ್ತ ಮೇಲೆ ಶ್ರದ್ಧೆಯಿಂದ ತಿಥಿ ಮಾಡಿ ಏನು ಪ್ರಯೋಜನ? ನಮ್ಮ ಕರ್ಮ ನಾವು ಸವೆಸಿದ್ರೆ ದೇವರೇ ಮುಕ್ತಿ ಕೊಡ್ತಾನೆ. ಅದಕ್ಕೆ ಮಕ್ಕಳು ಬೇಕಿಲ್ಲ. ಮಕ್ಕಳು ಬೇಕಿರೋದು ಖಾಲಿ ಹೃದಯ ತುಂಬೋಕೆ. ಕೈಲಾಗದ ಹೊತ್ತಲ್ಲಿ ಮಗುವಂತೆ ನಮ್ಮನ್ನು ಜೋಪಾನ ಮಾಡೋಕೆ. ನಾನು ಹೆರದಿದ್ದರೂ ನೀನು ನನ್ನ ಮಗಳೇ. ಈ ಕೆಲಸ ನೀನು ಮಾಡ್ತೀಯಾ ಅನ್ನೋ ನಂಬಿಕೆ ನಂಗೆ. ನಾನು ಕೊಟ್ಟೆ ಅಂತ ಯಾರಿಗೂ ಟಾಂ ಟಾಂ ಮಾಡದೆ ಮಾತು ನಡೆಸಿ ಕೊಡಬೇಕಮ್ಮಾ ಅಂದರು.”

ಆಯ್ತು ಎಂದು ಹೊರಟ ಸರೋಜಳ ಹೃದಯ ಭಾರವಾಗಿತ್ತು.ದಳದಳ ಇಳಿಯುವ ಕಣ್ಣೀರು ಕಾಣದಂತೆ ಬಚ್ಚಲಿಗೆ ನುಗ್ಗಿ ಕಾಲು ಕೈ, ಮುಖ ತೊಳೆದು… ಸೆಕೆ ಸೆಕೆಯೆನ್ನುತ್ತಾ ಹೊರಬಂದಳು. ಸೀತಮ್ಮಳಿಗೆ ದೊಡ್ಡ ಸಂದಿಗ್ಧವೊಂದನ್ನು ಸುಲಭವಾಗಿ ಪರಿಹರಿಸಲು ದೇವರೇ ಕಳುಹಿಸಿದ ದೂತೆ ಸರೋಜಳೆಂಬ ಭಾವ ಗಟ್ಟಿಯಾಯಿತು. ಸಂಜೆಯ ದೀಪ ಪ್ರಶಾಂತವಾಗಿ ಉರಿಯುತ್ತಿತ್ತು.

************************************

One thought on “ಮುಕ್ತಿ

  1. ಎಲ್ಲರೂ ಇದ್ದೂ ಯಾರೂ ಇಲ್ಲದ ಹಾಗೆ ದಿನ ಕಲಿಯುತ್ತಿರುವ ಸೀತಮ್ಮನ ವೃದ್ಧಾಪ್ಯದ ದಿನಗಳು ಚೆನ್ನಾಗಿ ನರೇಟ್ ಆಗಿದೆ.

Leave a Reply

Back To Top