ಪ್ರಬಂಧ
ಜೀವ ಮಿಡಿತದ ಸದ್ದು
ವಿಜಯಶ್ರೀ ಹಾಲಾಡಿ
ಸುಂದರವಾದ ಜೀವಂತ ಬೇಲಿ ಅಥವಾ ಕಂಪೌಂಡ್, ಒಳಗೊಂದಷ್ಟು ಜಾಗ, ನಾಲ್ಕು ಗಿಡ-ಪೊದೆಗಳು, ಸರಳವಾದ ಮನೆ, ಸುತ್ತಮುತ್ತ ಹಕ್ಕಿಗಳು ಕುಳಿತು ಹಾಡುವ ಮರಗಳು… ಕನಿಷ್ಟ ಇಷ್ಟಾದರೂ ನಿಸರ್ಗ ಸಾಂಗತ್ಯವಿರುವ ಮನೆಗಳನ್ನೇ ಹುಡುಕಿ ವಾಸವಿದ್ದ ನಮಗೆ ಅಪಾರ್ಟ್ಮೆಂಟ್ ಒಂದಕ್ಕೆ ಹೋಗಲೇಬೇಕಾದ ಕ್ರೂರ ಪರಿಸ್ಥಿತಿಯೊಂದು ಧುತ್ತನೆ ಎದುರಾಯಿತು. ಒಳಗೊಳಗೇ ಒದ್ದಾಡಿದರೂ, ಬಿಕ್ಕಿದರೂ, ನಾವಿದ್ದ ಜೀವಸಂಕುಲದ ಮನೆ ಕೈ ಹಿಡಿದು ಎಳೆಯುತ್ತಿದ್ದರೂ ಏನೂ ಮಾಡುವಂತಿರಲಿಲ್ಲ. ಈ ಸೂಕ್ಷ್ಮಗಳನ್ನೆಲ್ಲ ಅವಲೋಕಿಸಿ ಸಮಾಧಾನಿಸಿಕೊಳ್ಳುವಷ್ಟು ವ್ಯವಧಾನವೂ ತುಟ್ಟಿಯಾದ ಆ ತುರ್ತು ಸಂದರ್ಭದಲ್ಲಿ ಭಾವಗಳನ್ನೆಲ್ಲ ಗಂಟು ಕಟ್ಟಿಕೊಂಡು ಹೊಸಮನೆಗೆ ಹೊರಟೆವು. ಬೆಕ್ಕು, ನವಿಲು, ಕಾಡುಕೋಳಿ, ಗುಡ್ಡೆಹೆಗ್ಳ, ಮುಂಗುಸಿ, ನರಿ, ಇಲಿಗಳ ಸಾನಿಧ್ಯದ ಹಳೆಮನೆಗೆ ಕೊರಳುಬ್ಬಿ ವಿದಾಯ ಹೇಳಿದೆವು.
ಗಿಡಮರ ಪರಿಸರದಿಂದ ಕೂಡಿ ‘ಜೀವ’ ಇರುವಂತೆ ಕಾಣುವ ಫ್ಲಾಟೊಂದರಲ್ಲೇ ಸದ್ಯ ಮನೆ ಸಿಕ್ಕಿತು. ಈ ನಮ್ಮನೆ ಎರಡನೇ ಮಹಡಿಯ ಮೂಲೆಯಲ್ಲಿತ್ತು. ಬಾಗಿಲು ತೆರೆದು ಒಳಗೆ ಹೆಜ್ಜೆಯಿಟ್ಟರೆ ಅಲ್ಲಿಂದ ಮುಖ್ಯಕೋಣೆ ಮತ್ತು ಅಡುಗೆಮನೆಗೆ ಸರಾಸರಿ ಹತ್ತು ಮೀಟರ್ ದೂರ ! ಅಂದರೆ ಅಷ್ಟುದ್ದದ ಹಾಲ್! ಇದೊಂತರಾ ಸುರಂಗದ ಭಾವ ಕೊಡುತ್ತಿತ್ತು. ನನಗೂ ಇದೇ ಬೇಕಿತ್ತು. ಹೀಗೆ ಉದ್ದಕ್ಕೆ ಚಾಚಿಕೊಂಡಿರುವ ಮನೆಗಳು ಕಣ್ಣಾಮುಚ್ಚಾಲೆ ಆಟದಲ್ಲಿ ಬಚ್ಚಿಟ್ಟುಕೊಳ್ಳುವ ಜಾಗಗಳಂತೆ ಆಪ್ತ. ಮುಖ್ಯಕೋಣೆಗೆ ಅಂಟಿಕೊಂಡಂತೆ ಮನೆಯ ಕೊನೆಯಲ್ಲಿ ಒಂದು ಮುಚ್ಚಿದ ಬಾಲ್ಕನಿಯಾದರೆ, ಚಾವಡಿ(ಹಾಲ್)ಗೆ ತಾಗಿಕೊಂಡು ಇನ್ನೊಂದು ತೆರೆದ ಬಾಲ್ಕನಿ. ಅಡುಗೆಮನೆಯ ಕಿಟಕಿಯಲ್ಲಿ ಪುಟ್ಟರಸ್ತೆ, ಅದರಾಚೆಯ ಮನೆ-ತೋಟಗಳ ಹೊರಪ್ರಪಂಚಕ್ಕೆ ಕಿಂಡಿ. ನನ್ನ ಕಣ್ಣುಗಳಿದ್ದದ್ದು ಬಾಲ್ಕನಿಯ ಮೇಲೆ. ಚಾವಡಿ ಬಾಲ್ಕನಿಯ ಹೊರಗಿನ ನೋಟ ಆಹ್ಲಾದಕರ; ಇಲ್ಲಿ ಹತ್ತಿರದ ಮನೆಯವರ ಅದ್ಭುತ ತೋಟ-ಹೂವುಗಳು, ಮರಗಳು, ನಾಯಿಗಳು! ಈ ಬಾಲ್ಕನಿಯಲ್ಲಿ ಗಿಡಗಳನ್ನು ಇಡಲು ಒಂದಷ್ಟು ಜಾಗ. ಇದಕ್ಕೆ ‘ಬಸವನ ಹುಳು ಬಾಲ್ಕನಿ’ ಎಂದು ಕರೆಯೋಣ. ಇತ್ತ, ಮುಖ್ಯಕೋಣೆಯ ಬಾಲಂಗೋಚಿ ಬಾಲ್ಕನಿಯ ಕಿಟಕಿಗಳನ್ನು, ಹೋದವಳೇ ತೆಗೆದಿಟ್ಟೆ. ಹೊರಗಿನ ಗಾಳಿ ಬೀಸಿ ಬಂದು ಹಿತವೆನಿಸಿತು. ಹತ್ತಿರದ ಮನೆಯವರ ನಾಯಿಮನೆಗಳು, ಕೆಂಪು ಹಸಿರು ದೊಡ್ಡ ದೊಡ್ಡ ಎಲೆಗಳ ಕಾಡುಬಾದಾಮಿ ಗಿಡಗಳು, ಒಳಮಾರ್ಗದಲ್ಲಿ ಓಡಾಡುವ ದಾರಿಗರು ಎಲ್ಲವೂ ಇಲ್ಲಿಂದ ಹಣಕಿದಾಗ ಕಾಣುವಂತಿತ್ತು. ಇದನ್ನು ‘ಸೂರಕ್ಕಿ ಬಾಲ್ಕನಿ’ ಎಂಬ ಅನ್ವರ್ಥ ಹೆಸರಿನಿಂದ ಕರೆಯುತ್ತೇನೆ.
‘ಬಸವನಹುಳು ಬಾಲ್ಕನಿ’ಗೆ ನಮ್ಮ ಹಳೆಮನೆಯ ಗಿಡಗಳು ಬಂದವು. ತರುವಾಗ ದಾರಿಯಲ್ಲಿ ಒಂದಷ್ಟು ಮುರಿದುಹೋದರೂ ಬೇಗನೆ ಚೇತರಿಸಿಕೊಂಡವು. ದಿನ ಕಳೆದಂತೆ ದಾಸವಾಳಗಳು ಅರಳಿದಾಗ ಸೂರಕ್ಕಿಗಳು ಯಾರ ಹೆದರಿಕೆಯೂ ಇಲ್ಲದೆ ಮಕರಂದ ಹೀರಿ ಹೋಗತೊಡಗಿದವು. ಇತ್ತ, ಉದ್ದನೆಯ ಚಾವಡಿಯ ಕಿಟಕಿ ತೆರೆದುಕೊಂಡದ್ದು ಕಟ್ಟಡದ ಇನ್ನೊಂದು ಭಾಗದ ಗೋಡೆಗೆ. ಪಾರಿವಾಳದ ಸದ್ದು ಕೇಳುತ್ತ ಕಿಟಕಿ ಸರಳಿಗೆ ಮುಖವಿಟ್ಟು ಕುತ್ತಿಗೆ ಮೇಲೆ ಕೆಳಗೆ ಮಾಡಿ ಹುಡುಕಾಡಿದಾಗ ಕಂಡದ್ದು ಅವುಗಳ ಗೂಡಿನ ಕುರುಹು! ಈ ಹುಡುಕಾಟ ಸಾಕಷ್ಟು ಸಂತಸ ತಂದಿತು. ದಿನವೂ ಖಾಲಿ ಹೊತ್ತಿನಲ್ಲಿ ಕಿಟಕಿ ಇಣುಕತೊಡಗಿದೆ. ಆ ಕಡೆಯ ಮನೆಗಳ ಗೋಡೆಯಲ್ಲಿ ಇದ್ದ ಪುಟ್ಟ ಪೆಟ್ಟಿಗೆಯಾಕಾರದ ಜಾಗಗಳಲ್ಲಿ ಎರಡು ಪಾರಿವಾಳಗಳು ಕಡ್ಡಿ ತಂದು ಹಾಕುತ್ತಿದ್ದವು. ಗಂಡುಹಕ್ಕಿ ಉದ್ದುದ್ದ ಕಡ್ಡಿಗಳು, ಸಪೂರ ಬೇರು, ನಾರುಗಳನ್ನು ತಂದು ಹಾಕಿದರೆ, ಹೆಣ್ಣುಹಕ್ಕಿ ಸುಮ್ಮನೆ ಕುಳಿತಿತ್ತು. ದಿನಗಳು ಕಳೆಯುತ್ತ ಮೊಟ್ಟೆಗಳಿಗೆ ಕಾವು, ಮರಿಯೊಡೆಸಿದ ಸದ್ದು. ಮೇಲಿನಿಂದ ಕೆಳಗೆ ಸಾಲಾಗಿ ಮೂರು ‘ಗೋಡೆಪೆಟ್ಟಿಗೆ’ಯೊಳಗೆ ಪಾರಿವಾಳ ಜೋಡಿಗಳು ಮನೆ ಮಾಡಿಕೊಂಡವು.
ಎರಡನೆ ಅತಿಥಿ ಸೂರಕ್ಕಿ. ಅಂದರೆ ನೇರಳೆ ಸೂರಕ್ಕಿ ದಂಪತಿ! ನಾವು ಮನೆ ಸೇರಿಕೊಂಡ ಸುಮಾರು ಐದು ತಿಂಗಳ ನಂತರ ಇವರ ಆಗಮನವಾಯಿತು. ಒಂದು ದಿನ ಬಟ್ಟೆ ಒಣಗಿಸಲೆಂದು ‘ಸೂರಕ್ಕಿ ಬಾಲ್ಕನಿ’ಯ ಬಾಗಿಲು ತೆರೆದಾಗ ಬಟ್ಟೆ ದಾರದ ಮೇಲೆ ಸೂರಕ್ಕಿಯೊಂದರ ಚಟುವಟಿಕೆ ಕಂಡು ಸದ್ದಿಲ್ಲದೆ ಬಾಗಿಲೆಳೆದುಕೊಂಡು ಬಂದೆ. ಆದ ಖುಷಿಯನ್ನು ಮುಚ್ಚಿಡಲಾಗದೆ ಮಗನನ್ನು ಕರೆದು ಹಂಚಿಕೊಂಡೆ. ಮುಂದಿನ ಕೆಲ ದಿನಗಳು ಪಕ್ಕದ ಕಿಟಕಿಯ ಮೂಲಕ ಗಮನಿಸಿದೆವು. ಎಂತೆಂತದೋ ಕಸದ ತರ ಕಾಣುವ ಸರಕನ್ನು ಜೊಂಪೆ ಜೊಂಪೆಯಾಗಿ ತಂದು ಹಕ್ಕಿ ಗೂಡು ನೇಯುತ್ತಿತ್ತು. ಸ್ವಲ್ಪ ದಿನದೊಳಗೆ ಗೂಡು ದೊಡ್ಡದಾಯಿತು. ಜೋಡಿ ಆಚೀಚೆ ಹಾರಾಡುತ್ತಿದ್ದವು. ಆದರೆ ಕ್ರಮೇಣ ಚಟುವಟಿಕೆ ಸ್ತಬ್ಧವಾಯಿತು; ಅದೂ ತುಂಬಾ ದಿನಗಳ ಕಾಲ. ಕಾವು ಕೊಡುತ್ತಿರಬಹುದು ಎಂದೆಲ್ಲ ಯೋಚಿಸಿದರೂ ಹತ್ತಿರ ಹತ್ತಿರ ತಿಂಗಳೊಂದು ಉರುಳಿದಾಗಲೂ ಹಕ್ಕಿಗಳು ಕಾಣಲಿಲ್ಲ. ನಾವು ಹಣಕಿದ್ದಕ್ಕೇ ‘ಸಾವಾಸ ಬೇಡ’ವೆಂದು ನಿರ್ಧರಿಸಿ ಹಾರಿಹೋದವೋ ಎಂದು ಬೇಸರವೆನಿಸಿತು. ಇನ್ನೇನು ಮಾಡೋಣ, ದಾರದ ಮೇಲೆ ಬಟ್ಟೆಯಾದರೂ ಒಣ ಹಾಕೋಣವೆಂದುಕೊಂಡು ಸೀರೆ, ಬೆಡ್ಶೀಟ್ ಹರವಿದೆ. ಅದು ಮಾರ್ಚ್ ತಿಂಗಳು, ಮಗನಿಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಯಾರಿಯ ದಿನಗಳು. ಆ ರಾತ್ರಿ ನಾನೊಂದು ತಪ್ಪು ಮಾಡಿದೆ. ಒಣಗಿಸಿದ್ದ ಹೊದಿಕೆಯನ್ನು ತೆಗೆದುಕೊಂಡೆ. ಛೇ, ಎಂತಾ ಕೆಲಸವಾಯ್ತು! ಹಕ್ಕಿಯೊಂದು ಹಾರಿ ಕೆಳಗೆ ಇಟ್ಟಿದ್ದ ಮೂಟೆಯೊಂದರ ಮೇಲೆ ಕುಳಿತಿತು! ಗಾಬರಿ, ಭಯದೊಂದಿಗೆ ಓಡಿಹೋಗಿ ಮಗನನ್ನು ಕರೆದೆ. ಮರುದಿನ ಅವನ ಮೊದಲ ಪರೀಕ್ಷೆ. ಆಗ ರಾತ್ರಿ ಸುಮಾರು ಒಂಬತ್ತು ಗಂಟೆ. ‘ಹಕ್ಕಿ ಈ ತರ ಆಗಿದೆ’ ಎಂದಾಗ ಅವನು ಅಪ್ಪನನ್ನೂ ಕರೆದ. ಆ ಹಕ್ಕಿಗೆ ಏನೂ ಕಾಣುತ್ತಿರಲಿಲ್ಲವೋ ಅಥವಾ ಕರೆಂಟಿನ ಬೆಳಕಿಗೆ ಹಾಗಾಗುತ್ತಿತ್ತೋ ತಿಳಿಯಲಿಲ್ಲ. ಕಣ್ಣು ಕಾಣದಂತೆ, ದಿಕ್ಕೇ ತೋಚದಂತೆ ವರ್ತಿಸಿತು. ಕಿಟಕಿಯ ಮೂಲಕ ರೂಮಿನೊಳಗೆ ಹಾರಿಬಂದಿತು. ಅಲ್ಲಿ, ಇಲ್ಲಿ ತೂರಾಡಿ ಮೂಲೆಯಲ್ಲಿ ಹೋಗಿ ಕುಳಿತಿತು. ಹೇಗಾದರೂ, ಅದನ್ನು ಮುಟ್ಟದೇ ಹಿಡಿದು ಹೊರಗೆ ಬಿಡೋಣ ಎಂದು ಪ್ರಯತ್ನಿಸಿದರು. ಸಾಧ್ಯವಾಗಲಿಲ್ಲ. ಸ್ವಲ್ಪ ಹೊತ್ತು ತಪ್ಪು ತಪ್ಪಾಗಿ ಹಾರಾಡಿ ಮೇಲುಗಡೆಯ ಸಜ್ಜಾದಲ್ಲಿ ಸರಂಜಾಮುಗಳ ಮೇಲೆ ಕುಳಿತುಕೊಂಡಿತು. ನನಗೆ ಎಷ್ಟು ದುಗುಡವಾಯಿತೆಂದು ಹೇಳಲಾಗದು. ವಿನ್ಯಾಸ್ ಕೂಡಾ ತನ್ನ ಪರೀಕ್ಷೆ ಮರೆತು, ನಿಂತಲ್ಲಿ ನಿಲ್ಲಲಾಗದೆ ಚಡಪಡಿಸಿದ. ಅಮ್ಮಾ ಹೊದಿಕೆ ಯಾಕೆ ಒಣಹಾಕಿದ್ದೆ ಅಲ್ಲಿ ? ಯಾಕಮ್ಮಾ ಹೀಗೆ ಮಾಡಿದೆ ? ಎಂದು ಪದೇ ಪದೇ ಪ್ರಶ್ನಿಸಿದಾಗ ನನ್ನಲ್ಲಿ ಉತ್ತರವಿರಲಿಲ್ಲ.
ಆ ರಾತ್ರಿ ನಾವ್ಯಾರೂ ಊಟ, ನಿದ್ದೆ ಮಾಡಲಿಲ್ಲ. ಬಾಲ್ಕನಿಯ ಬಾಗಿಲನ್ನು ತೆರೆದಿಟ್ಟು, ಹಕ್ಕಿಯಿದ್ದ ಕೋಣೆಯ ಬಾಗಿಲನ್ನು ಭದ್ರವಾಗಿ ಹಾಕಿಕೊಂಡು ಚಾವಡಿಯಲ್ಲಿ ಅಡ್ಡಾದೆವು. ಬೆಳಗಾಗುವುದನ್ನೇ ಕಾದು, ಓಡಿಹೋಗಿ ನೋಡಿದರೆ, ಸಜ್ಜಾದಿಂದ ಇಳಿದ ಸೂರಕ್ಕಿ ರೂಮಿನ ಮೂಲೆಯಲ್ಲಿ ಕುಳಿತಿತ್ತು. ಹಗಲಿನ ಬೆಳಕಿಗಾದರೂ ಹಾರಿ ಹೋಗಿ ಗೂಡು ಸೇರಬಹುದೆಂದುಕೊಂಡಿದ್ದ ನಮಗೆ ನಿರಾಶೆ. ಆದರೆ ತುಸು ಹೊತ್ತಲ್ಲೇ ಹಿಡಿಸಲಾಗದ ಸಂತಸ. ತೆರೆದ ಬಾಗಿಲ ಮೂಲಕ ಬಾಲ್ಕನಿಗೆ ಹಾರಿಹೋಯಿತು, ವಿನ್ಯಾಸ್ ಖುಷಿಯಿಂದ ಪರೀಕ್ಷೆಗೆ ಹೊರಟ. ಅಂತೂ ಮುಂದೆ ಇನ್ಯಾವುದೇ ವಿಘ್ನಗಳು ಬಾರದೆ ಸೂರಕ್ಕಿ ಮೊಟ್ಟೆಯೊಡೆಸಿ ,ಮರಿಮಾಡಿ ಗುಟುಕು ಕೊಟ್ಟಿತು. ಗೂಡೊಳಗಿನ ಮರಿಗಳ “ಚೀ ಚೀ” ಕೂಗು ಪಿಸುಗುಡುವಿಕೆಯಂತೆ ಕಿವಿ ತುಂಬಿತು! ಕೊನೆಗೊಂದು ದಿನ ಮರಿಗಳು ದೊಡ್ಡದಾಗಿ ಹಾರಿಯೂ ಹೋಗಿ ಗೂಡು ಖಾಲಿಯಾದಾಗ ಇನ್ನದು ಹಳೆಯ ಗೂಡು ಅಂದುಕೊಂಡೆವು. ಆದರೆ ಮತ್ತೊಂದು ತಿಂಗಳು ಕಳೆಯುವಾಗ ಗೂಡೊಳಗೆ ಚಟುವಟಿಕೆ ಆರಂಭವಾಯಿತು! ಬಹುಶಃ ಇನ್ನೊಂದು ಸೂರಕ್ಕಿ ಕುಟುಂಬ ಆ ಗೂಡನ್ನು ಸ್ವೀಕರಿಸಿತ್ತು! ಇದಂತೂ ಹೊಸ ವಿಷಯ. ಈ ಮೊದಲು ಹಳೆಮನೆಗಳಲ್ಲಿ ನಾವು ಕಟ್ಟಿದ ರಟ್ಟಿನ ಪೆಟ್ಟಿಗೆಗೆ ಬೇರೆ ಬೇರೆ ಮಡಿವಾಳ ಹಕ್ಕಿಗಳು ಮತ್ತು ಕಾಡುಮುನಿಯ ಹಕ್ಕಿಗಳು ಬಂದು ಸಂಸಾರ ಹೂಡಿದ್ದು ಹೌದು, ಆದರೆ ಇದು ಸೂರಕ್ಕಿಯೊಂದು ಕಟ್ಟಿದ ಗೂಡು; ಇನ್ನೊಂದು ಸೂರಕ್ಕಿ ಜೋಡಿ ಅದರಲ್ಲಿ ಬಂದು ವಾಸ ಮಾಡುವುದು ರೋಮಾಂಚನಕಾರಿ! ಬಾಡಿಗೆ ಇಲ್ಲದ ಚಂದದ ಮನೆ ! ಈ ಸೂರಕ್ಕಿಗಳೂ ಮೊಟ್ಟೆಯಿಟ್ಟು, ಕಾವುಕೊಟ್ಟು ಮರಿಮಾಡಿದವು. ಸೂರಕ್ಕಿ ಮೊಟ್ಟೆ ಮರಿಯಾಗಲು ಹದಿನೈದರಿಂದ ಹದಿನೇಳು ದಿನಗಳ ಸಮಯ. ಮರಿ ದೊಡ್ಡದಾಗಲು ಎರಡು ವಾರ ಎಂದೇ ಲೆಕ್ಕ ಹಿಡಿದರೂ ಒಟ್ಟಿನಲ್ಲಿ ಒಂದು ತಿಂಗಳಿಗಿಂತ ಸ್ವಲ್ಪ ಜಾಸ್ತಿ. ಆದರೆ ವಿಚಿತ್ರವೆಂದರೆ ಗೂಡಲ್ಲಿ ಚಟುವಟಿಕೆ ಮುಂದುವರಿಯುತ್ತಲೇ ಇದೆ! ಜೂನ್, ಜುಲೈ, ಆಗಸ್ಟ್ ತಿಂಗಳ ಜಡಿಮಳೆಯಲ್ಲೂ ತುತ್ತುಣಿಸುವಿಕೆ….. ಹಾಗಾದರೆ ಕನಿಷ್ಟವೆಂದರೂ ವರ್ಷದಲ್ಲಿ ನಾಲ್ಕು ಹಕ್ಕಿ ಸಂಸಾರಗಳು ಆ ಗೂಡಲ್ಲಿ ವಸತಿ ಹೂಡಿ ಹೋಗಿವೆ ! ಒಟ್ಟಿನಲ್ಲಿ ಹಕ್ಕಿಗಳ ನಡವಳಿಕೆಯ ಕುರಿತು ಹೊಸತೊಂದು ಮಾಹಿತಿ ತಿಳಿಸಿಕೊಟ್ಟದ್ದು ನಮ್ಮ ಬಾಲ್ಕನಿ ಸೂರಕ್ಕಿಗಳು!
ಹಾಗೇ ಇಲ್ಲಿ ಪ್ರಸ್ತಾಪಿಸಲೇಬೇಕಾದ ಇನ್ನೊಂದು ಬಹುಮುಖ್ಯ ವಿಷಯವೆಂದರೆ ಅವು ಕೊರೋನಾ ಸಂಕಟ ಕಾಲದ ದಿನಗಳು. ಮನುಷ್ಯ ಇನ್ನೊಬ್ಬ ಮನುಷ್ಯನಿಂದ ದೂರಾಗಿ, ಮನೆಯೊಳಗೆ ಬಂಧಿಯಾದ ದಿನಗಳು. ಇದರೊಂದಿಗೆ ಲಾಕ್ಡೌನ್, ಆ ನಂತರದ ಸಾಲು ಸಾಲು ಸಾವು ನೋವುಗಳು; ದುಃಖದ, ಗೊಂದಲದ ಭಯದ ಕ್ಷಣಗಳು. ಆಗ ತಮ್ಮ ಚಿಟಪಟ ಚಿಮ್ಮುವಿಕೆಯಿಂದ ನಮಗೆ ಆಮ್ಲಜನಕವಾದದ್ದು ಈ ಸುರಂಗದ ಮನೆ, ಹಕ್ಕಿಗಳು, ನಾಯಿಗಳು, ಬಸವನಹುಳುಗಳು…
ಈ ನಡುವೆ ಹತ್ತಿರದ ಮನೆಯ ನಾಯಿಗಳ ಕುರಿತು ಹೇಳಬೇಕು. ಗಿಡ ಮರ ಬಳ್ಳಿಗಳ ಮಧ್ಯೆ ಇರುವ ಆ ‘ನಕ್ಷತ್ರ ಮನೆ’ಯಲ್ಲಿ ಒಟ್ಟು ಮೂರು ನಾಯಿಗಳು. ಎರಡು ಹೆಣ್ಣು ಒಂದು ಗಂಡು… ಟಾಮಿ, ಜಿಮ್ಮಿ, ಮೋತಿ. ಇವುಗಳ ಒಗ್ಗಟ್ಟಿನ ಸಂಗೀತವೇ ಒಂದು ಅದ್ಭುತ. ನಮ್ಮನೆಗೆ ಬಂದವರೆಲ್ಲ ಇದನ್ನು ಕೇಳಿ ಆಶ್ಚರ್ಯಚಕಿತರಾಗುತ್ತಿದ್ದರು. ಮೊದಮೊದಲು ನಮ್ಮದೂ ಅದೇ ಪರಿಸ್ಥಿತಿ. ಬೊಗಳಲು ಶುರು ಮಾಡಿದರೆ ಮೂರೂ ಸೇರಿ ಬೊಬ್ಬೆಯೋ ಬೊಬ್ಬೆ! ಆ ಬೊಬ್ಬೆಗೂ ಒಂದು ವಿಚಿತ್ರ ಲಯ! ಎರಡು ಮೂರು ನಿಮಿಷ… ಒಬ್ಬ ನಿಲ್ಲಿಸಿದರೆ ಸಾಕು, ಉಳಿದೆಲ್ಲರೂ ಗಪ್ಚಿಪ್; ಎಲ್ಲವೂ ಸ್ತಬ್ಧ, ನೀರವ. ಜಡಿಮಳೆ ಬಂದುಬಿಟ್ಟಂತೆ! ನಮ್ಮ ಸೂರಕ್ಕಿ ಬಾಲ್ಕನಿಗೂ ನಾಯಿಮನೆಗೂ ಎರಡು ಮಾರಿನಷ್ಟೇ ದೂರ. ನಡುವೆ ಒಂದೇ ಒಂದು ಆವರಣ. ಮತ್ತೆರಡು ಕಾಡು ಬಾದಾಮಿ, ದಾಸವಾಳದ ಗಿಡಗಳು. ಇನ್ನು, ಕಾಡು ಬಾದಾಮಿಯ ಬೀಜವನ್ನು ಗೂಡಿಗೆ ಸಾಗಿಸುತ್ತಾ ಕಂಪೌಂಡಿನುದ್ದಕ್ಕೂ ಜಿಗಿದಾಡುವ ಅಳಿಲೊಂದರ ಕಾರುಬಾರಂತೂ ಭಯಂಕರ!
ಮತ್ತೊಂದು ಕಡೆ ಅಡುಗೆಮನೆಯ ನೋಟಕ್ಕೆ ದಕ್ಕುವ ಮನೆಯಲ್ಲೂ ಎರಡು ನಾಯಿಗಳು. ಒಬ್ಬ ಕಾಳ ಇನ್ನೊಬ್ಬ ಟಾಮಿ. ಕಾಳ ದಪ್ಪ ದಪ್ಪಗೆ ಮೈ ತುಂಬಿಕೊಂಡ ಕಟ್ಟುಮಸ್ತಿನ ಆಸಾಮಿ, ಧೈರ್ಯವಂತ. ಇವನಿಗಿಂತ ಕಿರಿಯನಾದರೂ ಮುದುಕನಂತೆ ನಡೆದಾಡುವ ಟಾಮಿ ಜೆರ್ಮನ್ ಶೆಫರ್ಡ್ ಸಂತತಿಯವನು. ಟಾಮಿ ಎತ್ತಕಡೆ ಹೊರಟರೂ ಅವನ ಹಿಂದೆ ಕಾಳ ಇದ್ದೇ ಇರುತ್ತಿದ್ದ. ಕಾಳನ ವರ್ತನೆ ಹೇಗೆಂದರೆ, ಟಾಮಿ ಸಣ್ಣವನು, ಏನೂ ತಿಳಿಯುವುದಿಲ್ಲ; ತಾನೇ ಅವನನ್ನು ಸಂಭಾಳಿಸಬೇಕು, ‘ನಾನೇ ಅವನ ಬಾಡಿಗಾರ್ಡ್’ ಎಂಬಂತೆ! ಇವರಿಬ್ಬರ ಜೋಡುನಡಿಗೆ ಬಹಳ ಚಂದ.
ಇನ್ನು, ನಮ್ಮ ‘ಬಸವನಹುಳು ಬಾಲ್ಕನಿ’ಗೆ ಬರುವ. ಇದು ಹೂ ಗಿಡಗಳು, ಕೆಸ, ಉರಗ, ದೊಡ್ಡಪತ್ರೆ, ಮಾವು, ಹಲಸು ಗೇರು ಸಸಿಗಳು, ಬಿದ್ದು ಹುಟ್ಟಿದ ಕಲ್ಲುಬಾಳೆ ಮುಂತಾದವುಗಳಿಂದ ಕಿಕ್ಕಿರಿದ ಪ್ರದೇಶ. ಬಟ್ಟೆಗಳೂ ಇಲ್ಲೇ ಬಿಸಿಲು ಕಾಣಬೇಕು. ಮೆಣಸಿನಕಾಳು, ಎಳ್ಳು, ಜೀರಿಗೆ, ಕೆಂಪುಮೆಣಸು ಕೊತ್ತಂಬರಿ ಎಲ್ಲವೂ ಮುಗ್ಗಲು ಹಿಡಿಯದಂತೆ ಇಲ್ಲೇ ಒಣಗಿಸಬೇಕು. ಒಟ್ಟಿನಲ್ಲಿ ಒಂದಂಗುಲವೂ ವ್ಯರ್ಥವಾಗದೆ ಉಪಯೋಗವಾಗುವ ಜಾಗ.
ಕಿಟಕಿಯ ಹೊರಭಾಗದಲ್ಲೆಲ್ಲೋ ಮೈನಾ ಹಕ್ಕಿಯ ಗೂಡುಗಳಿವೆ, ಪಕ್ಕದ ಮನೆ ಬಾಲ್ಕನಿಯಲ್ಲಿ ಪಿಕಳಾರಗಳ ಮನೆಯಿದೆ, ಪಾರಿವಾಳಗಳಂತೂ ಕಟ್ಟಡದ ದಶದಿಕ್ಕುಗಳ ಕಿಂಡಿ-ಕಂಡಿಗಳಲ್ಲೂ ಗೂಡುಕಟ್ಟಿ ದಿನವಿಡೀ ಗುಟರ್ ಗುಟರ್ ಎಂಬ ಮಧುರ ಸಂಗೀತವೊದಗಿಸಿವೆ! ಅಡುಗೆ ಮನೆಗೆ ಕಾಲಿಟ್ಟರೆ ಸಾಕು, ಮರಿಗಳನ್ನೋ, ಸಂಗಾತಿಯನ್ನೋ ಸಂತೈಸುವ, ಸೆಳೆಯುವ ಪಾರಿವಾಳಗಳ ಮಾತು ಸಿಂಕಿನ ಹಳಸಲು ಪಾತ್ರೆ ತೊಳೆಯುವುದನ್ನೂ ಪ್ರೀತಿಸುವಂತೆ ಮಾಡುತ್ತದೆ!
ಪಿಕಳಾರ (ಬುಲ್ ಬುಲ್), ಸೂರಕ್ಕಿಗಳು ಅಲ್ಲಲ್ಲಿ ಗೂಡು ಕಟ್ಟಿಕೊಂಡಿರುವ ಇಡೀ ಅಪಾರ್ಟ್ಮೆಂಟೇ ಒಂದು ಜೀವಂತ ರೂಪಕವಾಗಿದೆ…
ಒಂದು ಬೆಳಿಗ್ಗೆ ಚಾವಡಿಯಲ್ಲಿ ತಿಂಡಿ ತಿನ್ನುತ್ತ ಕುಳಿತಿದ್ದಾಗ ಬಾಲ್ಕನಿಯ ಹೂವಿನ ಕುಂಡದಲ್ಲಿ ಏನೋ ಚಲನೆ ಕಂಡಿತು “ಹಾವು ಬಂತಾ ಇಷ್ಟು ಮೇಲೆ?” ಎಂದು ಆಶ್ಚರ್ಯದಿಂದ ಗಮನಿಸಿದಾಗ ಕಂಡದ್ದು ಒಂದು ಪಿಕಳಾರ. ಅಲ್ಲಿ ಇರುವೆಗಳಿಗೆಂದು ಹಾಕಿದ್ದ ದೋಸೆಚೂರನ್ನು ತಿನ್ನುತ್ತಿತ್ತು!
ಅಗಲದ ಬುತ್ತಿಪಾತ್ರವೊಂದರಲ್ಲಿ ಸ್ವಲ್ಪ ಅಕ್ಕಿ, ಇನ್ನೊಂದು ತಟ್ಟೆಯಲ್ಲಿ ಅರ್ಧ ಸಿಪ್ಪೆ ಬಿಡಿಸಿದ ಬಾಳೆಹಣ್ಣನ್ನು ಇಟ್ಟೆ. ಜೊತೆಗೆ ಬಕೆಟ್ ಮತ್ತು ಚೊಟ್ಟು (ಮಗ್ಗ್)ಗಳಲ್ಲಿ ತಣ್ಣನೆಯ ನೀರು. ಇಲ್ಲಿಗೆ ಮೊತ್ತಮೊದಲ ಅತಿಥಿಗಳಾಗಿ ಬಂದದ್ದು ಬುಲ್ ಬುಲ್ ಜೋಡಿ! ನಂತರ ಕಾಗೆಗಳು. ಇದೇ ಖುಷಿಯಲ್ಲಿ ದಿನವೂ ಹಣ್ಣು, ಕಾಳು ಇಡುತ್ತಾ ನೀರು ಬದಲಿಸುತ್ತಾ ಕಾದೆ. ಮೂರ್ನಾಲ್ಕು ದಿನಗಳಲ್ಲಿ ಮೈನಾ ಬಂದವು. ಕ್ರಮೇಣ ಇಷ್ಟು ದಿನ ಕಾಣಿಸದಿದ್ದ ದರಲೆ ಹಕ್ಕಿಗಳೂ (ಸಾತ್ ಭಾಯಿ) ಬಂದವು. ಬಾಳೆಹಣ್ಣನ್ನು ಅರ್ಧಮಾಡಿ ಹಾಕಿದಾಗ ಕಾಗೆಗಳು ಆಚೆ ಈಚೆ ನೋಡಿ ಇಡೀ ಚೂರನ್ನೇ ಹೊತ್ತೊಯ್ಯುವುದನ್ನು ಕಂಡು, ಸಣ್ಣ ಸಣ್ಣ ಹೋಳುಗಳಾಗಿ ಮಾಡಿ ಹಾಕಿದೆ. ಇದು ಒಳ್ಳೆಯ ಬದಲಾವಣೆಗೆ ದಾರಿಯಾಯಿತು. ಆಶ್ಚರ್ಯಕರವೆಂಬಂತೆ ಎರಡು ಹೆಣ್ಣು ಕೋಗಿಲೆಗಳು ಬಂದವು! ಒಂದು ದಿನ ‘ಕ್ಯಾಕ್ ಕ್ಯಾಕ್’ ಎಂಬ ಜೋರಾದ ಶಬ್ದ ಕೇಳಿ ಮೈನಾಗಳು ಜಗಳವಾಡುತ್ತಿರಬೇಕೆಂದು ಭಾವಿಸಿದರೆ, ಹೆಣ್ಣು ಕೋಗಿಲೆಯ ಗಡಸು ದನಿಯ ಕೂಗಾಟವೆಂದು ಮರುದಿನ ತಿಳಿಯಿತು! ಕಂದುಬಣ್ಣ, ಮೈತುಂಬಾ ಚುಕ್ಕಿಗಳ ಇವು ನೋಡಲು ಎಷ್ಟು ಚಂದ! ವಿಪರೀತ ಹೆದರಿಕೆಯಿಂದ ಬಹು ಸಣ್ಣ ಕಂಪನವನ್ನೂ ಗುರುತಿಸಿ ಧಡಲ್ಲನೆ ಓಡಿಬಿಡುವುದು ಇವುಗಳ ಸ್ವಭಾವ. ಗಂಡು ಕೋಗಿಲೆಯೂ ಬರುತ್ತದೆ; ಕಾಗೆಗಳ ಗುಂಗಿನಲ್ಲಿದ್ದ ನಾವು ಫಕ್ಕನೆ ಅದನ್ನು ಗುರುತಿಸಲಿಲ್ಲ. ಮುಂದೆ ಬಂದ ವಿಶೇಷ ನೆಂಟರೆಂದರೆ ಕಾಲೊಂದನ್ನು ಕಳೆದುಕೊಂಡ ಕಾಗೆ. ಅದನ್ನಂತೂ ಹಿಡಿದು ಮುತ್ತಿಕ್ಕಬೇಕೆಂಬಷ್ಟು ಮುದ್ದು ಉಕ್ಕಿ ಬರುತ್ತಿತ್ತು. …..
“ಬಸವನಹುಳು ಬಾಲ್ಕನಿ”ಗೆ ಈ ಹೆಸರು ಬಂದದ್ದೇಕೆ ಎಂಬ ಕುರಿತು ಈಗ ಹೇಳುತ್ತೇನೆ. ಗಿಡಗಳಿಗೆ ದಿನವೂ ನೀರು ಹಾಕುವುದರಿಂದ ಅವುಗಳ ಬುಡ ತಂಪಾಗಿರುತ್ತದೆ. ಈ ಭಾಗದಲ್ಲಿ ಸೆಪ್ಟಂಬರಿನಿಂದ ಶುರುವಾಗುವ ಸುಡುಬಿಸಿಲು ಮೇ ತಿಂಗಳವರೆಗೆ ಮುಂದುವರಿಯುತ್ತದೆ. ನಡುನಡುವೆ ಮಳೆ, ಅಡ್ಡಮಳೆಗಳು ಬಂದು ಹೋದರೂ ಬಿಸಿಲಿನ ಝಳ ವಿಪರೀತವಿರುತ್ತದೆ. ನಮ್ಮ ಬಾಲ್ಕನಿಗೂ ಬಿಸಿಲು ಕಮ್ಮಿಯೇನಲ್ಲ. ಮಕರ ಸಂಕ್ರಾಂತಿಯವರೆಗಿನ ಬಿಸಿಲು ನೇರವಾಗಿ ಇಲ್ಲಿಗೆ ಹೊಡೆಯುತ್ತದೆ. ಹಾಗಾಗಿ ಬೆಳಿಗ್ಗೆ ಮತ್ತು ಸಂಜೆ ಎರಡೆರಡು ಬಾರಿ ಗಿಡಗಳಿಗೆ ನೀರುಣಿಸುತ್ತೇವೆ. ಸಹಜವಾಗೇ ಸುತ್ತಲಿನ ವಾತಾವರಣಕ್ಕಿಂತ ನಮ್ಮ ಬಾಲ್ಕನಿ ಕೂಲ್. ಈ ಕಾರಣಕ್ಕಾಗಿಯೋ ಏನೋ ‘ಮರಜವಳೆ’ ಎಂದು ನಾವು ಕರೆಯುವ ಸಿಂಬಳದ ಹುಳುವಿನ ಜಾತಿಯಲ್ಲೇ ಕಪ್ಪು ಬಣ್ಣದ ಹುಳ ಕಾಣಿಸಿಕೊಂಡಿತು. ಮೊದಮೊದಲು ಇದ್ದ ನಾಲ್ಕೈದು ಹುಳುಗಳು ಒಮ್ಮೊಮ್ಮೆ ಒಳಗೂ ಬಂದು ಜೋಪಾನವಾಗಿ ಹೊರದಬ್ಬಿಸಿಕೊಳ್ಳುತ್ತಿದ್ದವು. ಆದರೆ ವರ್ಷವೊಂದು ಕಳೆಯುವುದರಲ್ಲಿ ಇವುಗಳ ಸಂಖ್ಯೆ ಐವತ್ತಕ್ಕಿಂತ ಜಾಸ್ತಿಯಾಯಿತು! ಇವು ಹಗಲಿನಲ್ಲಿ ಕಾಣಿಸಿಕೊಳ್ಳುವುದು ಕಮ್ಮಿ. ಆಶ್ಚರ್ಯವೆಂದರೆ ಇವುಗಳ ಜೊತೆ ಹೊಸ ಪರಿಚಯವಾಗಿ ಬಂದ ಬಸವನ ಹುಳುಗಳದ್ದು… ಮಗ ಕಾಲೇಜಿನ ಅಸೈನ್ಮೆಂಟ್ಸ್ ಬರೆಯುವ ಸಮಯದಲ್ಲಿ ನಾವಿಬ್ಬರೂ ಮಲಗುವುದು ರಾತ್ರಿ ಒಂದು ಗಂಟೆಯಾಗುತ್ತಿತ್ತು. ಹಾಗೊಂದು ದಿನ ನಾನು ಬಾಲ್ಕನಿಗೆ ಹೋಗಿ ನೋಡಿದಾಗ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಹೊಸತಾಗಿ ಕಾಡಿನಿಂದ ತಂದು ನೆಟ್ಟ ನೆಲಸಂಪಿಗೆ ಗಿಡದ ಕುಂಡದಲ್ಲಿ ಹತ್ತಕ್ಕಿಂತ ಜಾಸ್ತಿ ಬಸವನಹುಳುಗಳು ಕೂತಿದ್ದವು. ರಾತ್ರಿ ಏಳು-ಎಂಟರ ಹೊತ್ತಿಗೆಲ್ಲ ಅವು ಅಲ್ಲಿರಲಿಲ್ಲ. ಮರುದಿನವೂ ರಾತ್ರಿ ಒಂದರ ಹೊತ್ತಿನಲ್ಲಿ ಪರೀಕ್ಷಿಸಿದಾಗ ದಾಸವಾಳದ ಗಿಡದ ಬುಡದಲ್ಲಿ ಇಪ್ಪತ್ತಕ್ಕಿಂತಲೂ ಹೆಚ್ಚು ಬಸವನಹುಳುಗಳು! ಆಶ್ಚರ್ಯವೆಂದರೆ ಬೆಳಿಗ್ಗೆ ಆರೂವರೆಯ ಹೊತ್ತಿಗೆ ಎದ್ದು ನೋಡುವಾಗ ಒಂದೇ ಒಂದೂ ಸಿಗುವಂತಿರಲಿಲ್ಲ. ರಾತ್ರಿ ಒಂಬತ್ತರ ನಂತರ ಬೆಳಿಗ್ಗೆ ಐದರ ನಡುವಿನ ಹೊತ್ತಲ್ಲಿ ನಮ್ಮ ಬಾಲ್ಕನಿಯಲ್ಲಿ ಬಸವನಹುಳುಗಳದ್ದೇ ಜಾತ್ರೆ! ಬೇರೆ ಸಮಯದಲ್ಲಿ ಇವು ಎಲ್ಲಿ ಹೋಗುತ್ತವೆ?
ನಮ್ಮ ಫ್ಲಾಟಿನ ಮನೆ; ನೆಲದ ಸ್ಪರ್ಶ ಮಣ್ಣ ಘಮ, ಮರಗಳ ಸ್ನೇಹ, ಬೆಕ್ಕು ನಾಯಿಗಳ ಸಾನಿಧ್ಯ ಇಲ್ಲದ ನೆಲೆಯಾದರೂ ಇಲ್ಲಿಯೂ ಜೀವಮಿಡಿತದ ಸದ್ದಿದೆ. ಮರಗಿಡಗಳ, ತಂಗಾಳಿಯ ಸ್ಪರ್ಶವಿದೆ, ವಿಧ ವಿಧ ಹಕ್ಕಿ ಹಾಡಿನ ನಿನಾದವಿದೆ. ಇನ್ನೊಂದು ವಿಶೇಷವೆಂದರೆ ಕೆಳಗಿನ ಮನೆಯ ಕುಕ್ಕರ್ ಕರೆ, ಪಕ್ಕದ ಮನೆಯ ಒಗ್ಗರಣೆ ಘಾಟು, ಹತ್ತಿರದ ಮನೆಯ ಮಗುವಿನ ತೊದಲು ಮೇಲ್ಯಾವುದೋ ಮನೆಯ ಮಿಕ್ಸಿಯ ಆರ್ಭಟ. ನಮ್ಮ ಮೇಲ್ಗಡೆಯೇ ಇರುವ ವಿದ್ಯಾರ್ಥಿಗಳ ಓಡುನಡಿಗೆಯ ದಡಬಡ, ನಡುರಾತ್ರಿಯ ಸಂಗೀತ-ಮಾತುಕತೆ. ಹೀಗೆ ಎಲ್ಲವೂ ಮನದಲ್ಲಿ ದಾಖಲಾಗುತ್ತ ಇಲ್ಲಿ ನಾವು ಮಾತ್ರ ಅಲ್ಲ, ಎಲ್ಲರೂ ಇದ್ದಾರೆ; ನಮ್ಮೊಂದಿಗೇ ಇದ್ದಾರೆ ಎಂಬ ಭ್ರಮೆಯನ್ನೂ ಮೂಡಿಸುತ್ತದೆ. ಇಂತಹ ಹುಸಿಭ್ರಮೆಯ ಭದ್ರತೆಯೂ ಅಗತ್ಯವಿರಬಹುದು. ಇದಕ್ಕೆಂದೇ ಕೆಲವರು ಫ್ಲಾಟಿನ ಮನೆಯೇ ಬೇಕೆಂದು ಹಟ ಹಿಡಿಯುವುದೇನೋ!
*********************************************
ಸೊಗಸಾದ ಬರಹ.
ಮೇಡಂ ನಾನೇ ಅಲ್ಲಿದ್ದೇನಂತ ಅನಿಸಿತು. ನಮ್ಮದೂ ಅಪಾರ್ಟ್ಮೆಂಟ್ ಎರಡನೇ ಅಂತಸ್ತಿನ ಲ್ಲಿ ವಾಸ. ಎಲ್ಲವೂ ಕಾಣಸಿಗುತ್ವೆ . ಚೆಂದ ಬರೆದಿದ್ರಿ. ಖುಷಿ ಅಯ್ತು