ಅಂಕಣ ಬರಹ

ಸವಡಿಯಾಗುವ ಸವತಿಯರು

ಭಾರತ ಬಹುಸಂಸ್ಕೃತಿ ನಾಡು. ಅಂತೆಯೆ ಬಹು ಪತ್ನಿತ್ವ ಸಮಾಜವುಳ್ಳ ಕೇಂದ್ರಸ್ಥಾನವೂ ಹೌದು.ಒಬ್ಬ ಪುರುಷನನ್ನು ಇಬ್ಬರು ಮಹಿಳೆಯರು ಮದುವೆಯಾದರೆ ಅವರು ಒಬ್ಬರಿಗೊಬ್ಬರು ಸವತಿಯಾಗುವರು. ‘ಸವತಿ’ ಎನ್ನುವ ಈ ಶಬ್ದ ಮೂಲತಃ ಸಹವರ್ತಿ ಎನ್ನುವ ಪದದಿಂದ ಬಂದಿದ್ದು. ಇದರ ಅರ್ಥ ಇಬ್ಬರೂ ಸಮಾನ ಹಕ್ಕು ಹೊಂದಿರುವುದು ಎಂದಾಗುತ್ತದೆ. ಸಮಾನ ಹಕ್ಕುಗಳು, ಸಮಾನ ಸಕಲ ಸವಲತ್ತುಗಳನ್ನು ಸಮಾನವಾಗಿ ಪಡೆಯುವರನ್ನು ಸವತಿ ಎಂದು ಕರೆಯುವರು‌.

ಈ ಸವತಿ ಎನ್ನುವ ಪದ ಹೊಟ್ಟೆಕಿಚ್ಚು, ಮತ್ಸರ, ವೈರಿ, ಅಸಹನೆ ಎಂಬ ನಾನಾರ್ಥಗಳನ್ನು ಕೊಡುತ್ತವೆ. ಹಾಗೇ ನೋಡಿದರೆ ಈ ಸವತಿ ಎಂಬ ಸಂಸ್ಕೃತಿ ಮತ್ತು ಸಂಪ್ರದಾಯ ಬೆಳೆದು ಬರಲು ಮುಖ್ಯ ಕಾರಣ ಪುರುಷರ ಪ್ರತಿಷ್ಠೆ ಮತ್ತು ಲೈಂಗಿಕ ಬಯಕೆಗಳು, ಸಂತಾನ ಅಪೇಕ್ಷೆಗಳು ಪ್ರಮುಖ ಎಂದು ಹೇಳಬಹುದು. ಇಲ್ಲಿಯೂ ಸವತಿಯರಾಗಿ ಬಂದ ಸ್ತ್ರೀಯರನ್ನು ಇನ್ನಷ್ಟು ದುಸ್ಥಿತಿಗೆ ಸಿಲುಕಿಸಿತು. ಇದೊಂದು ಕೆಟ್ಟ ಸಾಮಾಜಿಕ ಸಮಸ್ಯೆ ಎಂದೇ ಹೇಳಬಹುದು.

ಗಂಡನು ಇನ್ನಾವುದೋ ಕಾರಣದಿಂದ ಎರಡನೆಯ ಮದುವೆಯಾದರೆ ಮೊದಲ ಸತಿಯ ಎದೆ, ಮನಸು ಒಪ್ಪದಿದ್ದರೂ ಅದಕ್ಕೆ ಶಾಂತವಾಗಿ, ಮೌನವಾಗಿ ಸಮ್ಮತಿಯನ್ನು ಕೊಡಬೇಕು. ಅಂದು ಸ್ತ್ರೀಯು ತನ್ನ ಒಡಲಾಳದ ನೋವು ಗಂಭೀರ ಆಗಿದ್ದರೂ ಅವಳು ತನ್ನ ಗಂಡನ ಎದುರು ಹೇಳಿಕೊಳ್ಳುವಂತಿರಲಿಲ್ಲ. ಅಂತಹ ಕೆಟ್ಟ ವ್ಯವಸ್ಥೆಯನ್ನು ಎದುರಿಸಿ ನಿಲ್ಲುವ ಶಕ್ತಿ ಅವಳಾಗ ಪಡೆದುಕೊಂಡಿರಲಿಲ್ಲ.

ಪತ್ನಿಯ ಮುಂದೆ ಎರಡನೆಯ ಮದುವೆ ವಿಚಾರ ಪ್ರಸ್ತಾಪಿಸಿ ಅವಳ ಒಪ್ಪಿಗೆಗಾಗಿ ಕಾಯುವುದು ಅಂದಿನ ವ್ಯವಸ್ಥೆಗೆ ಹೊಂದದ ನಿಯಮವನ್ನಾಗಿ ಮಾಡಿಕೊಂಡಿತು ಈ ಪುರುಷ ಸಮಾಜ. ಇಂತದ್ದೆ ಒಂದು ಉದಾಹರಣೆ ನೋಡಲಾಗಿ, ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ರಾಮೈತಾಳರು ತಮ್ಮ ಎರಡನೆಯ ಮದುವೆ ವಿಷಯದಲ್ಲಿ ಸಂಶಯ ಗ್ರಹಸ್ಥನಾದ ಶೀನಮ್ಮಯ್ಯನಿಗೆ ಮನವರಿಕೆ ಮಾಡುವ ಹೇಳಿಕೆಯನ್ನು ನಿದರ್ಶನವಾಗಿ ನೋಡಬಹುದು.

“ಶೀನ ನಮ್ಮ ಮನೆಯ ಪಂಚಾಯಿತಿ ನಿನಗೆ ಗೊತ್ತಿಲ್ಲ.ನಮ್ಮಲ್ಲಿ ಒಬ್ಬ ಯಜಮಾನ ಎಂದರೆ ಸಿಂಗಲ್ ಯಜಮಾನ.ಗಂಡನು ಒಂದು ಹೇಳುವುದು, ಹೆಂಡತಿ ಇನ್ನೊಂದು ಹೇಳುವುದು ಈವರೆಗೆ ನಡೆದಿಲ್ಲ”. ಇಂತಹ ವ್ಯವಸ್ಥೆಯ ಬೇರು ಗಟ್ಟಿಯಿರುವಾಗ ಸ್ತ್ರೀ ಅದನ್ನು ವಿರೋಧಿಸುವಂತಿಲ್ಲ.ಆದಾಗ್ಯೂ ಹೆಂಡತಿಯ ಬಗೆಗೆ ದ್ವೇಷ ಮಾಡಿಕೊಳ್ಳವ ಬದಲು ಇಲ್ಲಿ ಪಾರ್ವತಿಯು ಸತ್ಯಭಾಮೆಯರೊಂದಿಗೆ ಬಹು ಅಕ್ಕರೆಯಿಂದಲೇ ನಡೆದುಕೊಳ್ಳುತ್ತಾಳೆ. ಆದರೂ ಇಲ್ಲಿ ಮೊದಲು ಸವತಿಯ ಮೇಲೆ ಹೊಟ್ಟೆಕಿಚ್ಚು ಹೊಂದಿದಳು ಅನ್ನುವದಂತು ನಿಜ.

ಈ ವ್ಯವಸ್ಥೆ ಹೇಗೆ ಪುರುಷನ ನಿಯಂತ್ರಣದಲ್ಲಿರುತ್ತದೆ, ಹೆಣ್ಣು ತನ್ನ ಕೋಪವನ್ನು ಹೇಗೆ ಹೆಣ್ಣಿನ ಮೇಲೆ ಸಾಧಿಸಿಕೊಂಡು ಪುರುಷನ ಮೇಲೆ ತೀರಿಸಿಕೊಳ್ಳುತ್ತಾಳೆ ಅಂದ್ರೆ, ಅವಳು ತನ್ನ ಸಿಟ್ಟುನ್ನು ಹೊಸದಾಗಿ ಬಂದ ಹೆಣ್ಣಿನ ಮೇಲೆ ಜಗಳ, ಅಸಹನೆ ತೋರುವುದರ ಮೂಲಕ ತೀರಿಸಿಕೊಳ್ಳುವಳು.

ಹೀಗೆ ಇದು ಸವತಿಯರ ಮತ್ಸರಯುದ್ದ ಎಂದೇ ಹೇಳಬಹುದು.

ಇಂತದ್ದೆ ಒಂದು ಉದಾಹರಣೆ ‘ಅಂತರಂಗ’ ಕಾದಂಬರಿಯಲ್ಲಿ ಪಾತಮ್ಮ ಸಾಕ್ಷಿಯಾಗಿ ನಿಲ್ಲುತ್ತಾಳೆ.

ಇಲ್ಲಿ ಭಟ್ಟರು ತೀರ್ಥಯಾತ್ರೆ ಕೈಗೊಂಡು ಪ್ರಯಾಣದ ನಡುವೆ ಬಸವಿ ಗೌರಮ್ಮಳಿಗೆ ಮನಸೋತು ಹೋಗುವನು. ಬಸವಿಯಾದ ಗೌರಮ್ಮ ಯಾರಿಗೂ ಕಣ್ಣೆತ್ತಿ ನೋಡದ ಅವಳು ಇಲ್ಲಿ ಭಟ್ಟರಿಗೆ ಮನಸೋತು ಹೋಗುತ್ತಾಳೆ.

ಭಟ್ಟರು ತೀರ್ಥ ಯಾತ್ರೆ ಮುಗಿಸಿಕೊಂಡು ಮನೆಗೆ ಬಂದ ಕೆಲವು ದಿನಗಳಲ್ಲಿ ಬಸವಿ ಗೌರಮ್ಮ ಕೂಡಾ ಮನೆಗೆ ಬರುವಳು. ವಿಶಾಲ ನಿರ್ಮಲ ಪ್ರೇಮದ ಗೌರಮ್ಮ ವೈರಾಗ್ಯ ನಿಧಿಯಂತೆ ಇರುತ್ತಾಳೆ. ಆದರೆ ಭಟ್ಟರು ಗೌರಮ್ಮಳ ಕುರಿತು ತನ್ನ ಸ್ನೇಹಿತರಿಗೆ, ಸಂಬಂಧಿಕರ ಎದುರಿಗೆ ಮಾಡುವ ವರ್ಣನೆಯಿಂದ ಭಟ್ಟರ ಮೊದಲ ಹೆಂಡತಿ ಪಾತಮ್ಮ ಮೂರ್ಛೆ ಹೋಗುತ್ತಾಳೆ. ಅಂದಿನಿಂದ ಅವಳು ಗಂಡನನ್ನು ದ್ವೇಷಿಸುತ್ತಾಳೆ .ಹೀಗೆ ಇಲ್ಲಿ ಗಂಡನನ್ನ ತಿರಸ್ಕಾರದ ಮನಸ್ಸು ಬೀರುವುದರೊಂದಿಗೆ ಸವತಿಯರ ಅಸಹನೆ ಎದ್ದು ಕಾಣುತ್ತದೆ. ಪುರುಷನದೆ ಸಮಾಜ ಅಲ್ವ ಇದು!

ಇಲ್ಲಿ ಎಂಥದ್ದೇ ಸಮಸ್ಯೆಗಳಾದರೂ ಪರಿಹಾರ ಅವಳಿಂದಲೇ ಅನ್ನುವುದು ಆಲ್ರೆಡಿ ಶಾಸನ ಹೊರಡಿಸಿ ಆಗಿದೆ ಈ ನೆಲದ ಮಣ್ಣಿನ ಮೇಲೆ. ಅಂತಹ ಸಾಮಾಜಿಕ ಸಮಸ್ಯೆಗಳು ಕಾದಂಬರಿಯಲ್ಲಿ ಪ್ರಸ್ತಾಪಿಸುವ ಮೂಲಕವೇ ಈ ವ್ಯವಸ್ಥೆಯನ್ನು ಹೀಗೆಳೆಯುವುದು ಒಂದು ಉಸಿರು ಬೇರೆಡೆ ಬಿಡುವಂತೆ ಮಾಡುತ್ತದೆ. ಅಂತೆಯೆ ಇನ್ನೊಂದು ಕಾದಂಬರಿಯಾದ ‘ಪ್ರಬುದ್ಧ ಪದ್ಮನಯನೆ’ ಯಲ್ಲಿ ಪದ್ಮನಯನೆ ಮತ್ತು ಜೀವನಕಲಾ ಸವತಿಯರಾದರೂ ಇಲ್ಲಿ ಅವರಿಬ್ಬರೂ ಬಲುಪ್ರೇಮ ಅಕ್ಕರೆಯಿಂದ ಇದ್ದವರು. ಆದರೂ ಬದಲಾವಣೆ ಮತ್ತು ಹೊಂದಾಣಿಕೆಯ ಮನಸುಗಳು ಕೆಲವೊಂದು ಸಲ ಅನಿವಾರ್ಯತೆಗೆ ಒಗ್ಗಿಕ್ಕೊಳ್ಳುತ್ತವೆ ಅನ್ನುವುದಕ್ಕೆ ಇದೊಂದು ದೃಷ್ಟಾಂತ. ಹೊಯ್ಸಳ ದೊರೆ ವಿಷ್ಣುವರ್ಧನ ಶಾಂತಲೆಗೆ ಮನಸೋತಾಗ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಬಂಧವನ್ನು ಹೊಂದಿದ್ದ ನಾಟ್ಯರಾಣಿ ಶಾಂತಲೆ ಹಾಗೂ ಲಕ್ಷ್ಮೀ ಇಬ್ಬರೂ ಕೊನೆಗೆ ವಿಷ್ಣುವರ್ಧನನ ಪತ್ನಿಯರಾಗಿ ಕೊನೆಗೆ ತ್ಯಾಗದ ಮೂರ್ತಿಯಾಗುವ ಕತೆಯನ್ನು ‘ಕೆ ವಿ ಅಯ್ಯರ್ ರವರ ‘ಶಾಂತಲೆ’ ಕಾದಂಬರಿಯಲ್ಲಿ ಕಾಣಬಹುದು.

ಈ ಸವತಿಯರು ಸಂಪ್ರದಾಯ ಇವತ್ತು ನಿನ್ನೆಯದಲ್ಲ. ಇದು ವೇದ ಕಾಲದಿಂದ ಹಿಡಿದು ರಾಜ ಮಹಾರಾಜರ ಕಾಲದಲ್ಲಿ ವಿಫುಲವಾಗಿ ಸಂಚರಿಸಿಕೊಂಡು ಬಂದ ಒಂದು ಪದ್ಧತಿ. ಒಬ್ಬರಿಗೊಬ್ಬರ ಬಗೆಗೆ ಸಿಟ್ಟಲ್ಲಿ  ಮತ್ಸರವಿದ್ದರೂ ಆ ಸವತಿಯರು ಈ ಸಮಾಜದಲ್ಲಿ ಸವತಿಯರಾಗಿ ಉಳಿಯದೇ ಅಕ್ಕತಂಗಿಯರಾಗಿ ಬದುಕು ಸಾಗಿಸುವ ಪರಿ ಗಮನಾರ್ಹವಾದುದು.

ಹೀಗೆ ಹೆಣ್ಣು ಈ ಸಮಾಜದಲ್ಲಿ ಭೋಗಕ್ಕೆ ಸಿಲುಕಿದಂತೆ ತ್ಯಾಗಕ್ಕೂ ಸೈ ಅನ್ನುವ ಆದರ್ಶನಾರಿಯೇ ಆಗಿದ್ದಾಳೆ.

******************************************

   ತೇಜಾವತಿ ಹೆಚ್ ಡಿ

Leave a Reply

Back To Top