ಅಂಕಣ ಬರಹ

ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ

ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ

ಸರಣಿಬರಹ………..

ಅದ್ಯಾಯ-6

ಹೌರಾ ಬ್ರಿಜ್ ಹತ್ರ ಬಂದು ನಿಂತು ಸ್ವಲ್ಪ ಹೊತ್ತು ಫೋಟೊ ಶೂಟ್ ಎಲ್ಲಾ ಆಗುವಾಗ, ಅಲ್ಲಿವರೆಗೆ ಸರ್ಕಸ್ ಮಾಡಿ ಬಂದಿದ್ದು ಸಾಕಾಗಿ ಹೋಯ್ತೇನೊ. ಇನ್ನು ಸಾಕು‌. ವಾಪಸ್ ಹೋಗೋಣ ಅಂದರು ಸತೀಶ್. ನೀರಿನಲ್ಲಿ ನಕ್ಷತ್ರ ಮೀನು, ಜೆಲ್ಲಿ ಮೀನು ಇನ್ನೇನೇನೊ ನೋಡುತ್ತಾ ಮಕ್ಕಳು ಮುಂದೆ ಹೋಗಿದ್ದರು.ನೀವು ಮುಂದೆ ಹೋಗಿ ನೋಡಿ ಬನ್ನಿ. ನಾವಿಲ್ಲೇ ಕೂತಿರ್ತೇವೆ ಎಂದು ಸರಸ್ವತಿಗೆ ಹೇಳಿದೆ.

ಅಲ್ಲೇ ಒಂದು ಬಂಡೆಯ ಮೇಲೆ ಕೂತು ಸಮುದ್ರ ನೋಡುತ್ತಾ ಇದ್ದಾಗ ನಮ್ಮ ಮ್ಯಾನೇಜರ್ ಬಂದು, ನೀವಿಲ್ಲೇ ಇದ್ದೀರಾ? ಮುಂದೆ ಹೋಗಿ ಬನ್ನಿ ಸರ್ ಎಂದು ಹೇಳಿದರು. ಅವರಿಗೆ ಆಗ್ತಿಲ್ಲ. ಅದಕ್ಕೆ ಇಲ್ಲೇ ಕೂತೆವು ಅಂದೆ. ಯಾಕೆ? ಏನಾಯ್ತು? ಎಂದು ಗಾಬರಿಯಾದರು.


ಏನಿಲ್ಲ. ಈಗ ಏನೂ ಆಗಿದ್ದಲ್ಲ. ಒಂದೂವರೆ ವರ್ಷದ ಹಿಂದೆ ಬ್ರೈನ್ ಸ್ಟ್ರೋಕ್ ಆದ ವಿಷಯ ಹೇಳಿದೆ. ನನಗೆ ಗೊತ್ತೇ ಆಗಿಲ್ಲ. ನೀವು ಮೊದಲೇ ಹೇಳಿದ್ದರೆ ನಾನಿಲ್ಲಿ ಅವರ ಜೊತೆ ಇದ್ದು ನೋಡಿಕೊಳ್ತಾ ಇದ್ದೆ. ನೀವು ಹೋಗಿ ಬರಬಹುದಿತ್ತು, ಈಗ ಹೋಗಿ ನಾನಿಲ್ಲಿರ್ತೇನೆ ಅಂದರು. ಅಷ್ಟರೊಳಗೆ ಎಲ್ಲರೂ ವಾಪಸ್ ಬರುತ್ತಾ ಇದ್ದರು. ಅಲ್ಲೊಂದಿಷ್ಟು ಹೊತ್ತು ಮತ್ತೆ ಫೋಟೊ ಶೂಟಿಂಗ್ ಆಯಿತು.

ನಂತರ ನಾವು ಹೋಗಿದ್ದು ಲಕ್ಷ್ಮಣಪುರ ಬೀಚ್ ಗೆ. ಸೂರ್ಯ ಮುಳುಗೋದನ್ನು ನೋಡಲು ಅಲ್ಲಿ ತುಂಬಾ ಜನ ಬರ್ತಾರೆ. ಸಂಜೆ ಐದೂವರೆಗೆ ಸೂರ್ಯಾಸ್ತ. ನಾವು ಬೇಗ ಹೋಗಿ ಕೂತರೆ ಒಳ್ಳೆಯ ದ್ರಶ್ಯ ನೋಡಲು ಸಿಗುತ್ತೆ ಅಂತ ಮತ್ತೆ ಬಸ್ಸಿನಲ್ಲಿ ನೀಲ್ ದ್ವೀಪದ ಪಶ್ಚಿಮಕ್ಕಿರುವ ಆ ಬೀಚ್ ತಲುಪುವಾಗ ಐದು ಗಂಟೆ.

ಸಣ್ಣ ಚಿರೋಟಿ ರವೆಯಂತ ಮರಳು, ಪುಸ್ ಪುಸ್ ಜಾರುತ್ತಾ ಹೆಜ್ಜೆ ಇಟ್ಟಲ್ಲೇ ಇದ್ದ ಹಾಗೆ, ಮುಂದೆ ಸಾಗುತ್ತಲೇ ಇಲ್ಲ. ಅಂತೂ ಹೋಗಿ ಸೂರ್ಯಾಸ್ತ ಆಗುವ ಜಾಗಕ್ಕೆ ಹೋಗಿ ಸೇರಿದೆವು. ಕಲ್ಲಿನ ಬೆಂಚ್ ತರ ಮಾಡಿ ಇಟ್ಟಿದ್ದಾರೆ. ಜಾಗ ಸಿಕ್ಕಿದಲ್ಲಿ ಕೂತೆವು. ಪಕ್ಕದಲ್ಲಿ ಚಾ ಅಂಗಡಿ. ಯಾವತ್ತೂ ಚಾ ಕುಡಿಯದ ನನಗೆ ಆವತ್ತು ಚಹಾದ ಪರಿಮಳ ತುಂಬಾ ಇಷ್ಟವಾಗಿ ಎಲ್ಲರೊಂದಿಗೆ ನಾನೂ ಚಹಾ ಕುಡಿದೆ.

ಇನ್ನೂ ಹತ್ತು ಹದಿನೈದು ನಿಮಿಷ ಬಾಕಿ ಇತ್ತು. ನಮ್ಮ ಜೊತೆಯಲ್ಲಿ ಬಂದವರಲ್ಲಿ ನವವಿವಾಹಿತ ಜೋಡಿ ಒಂದಿತ್ತು. ನಮ್ಮ ಮಕ್ಕಳಿಗೆ ಈ ಬೀಚ್ ಲ್ಲಿ ಅವರಿಬ್ಬರೂ ಸ್ನೇಹಿತರಾದರು. ಎಲ್ಲರೂ ಜೊತೆ ಸೇರಿ ನಗುತ್ತಾ ಹರಟುತ್ತಾ ಹಾಯಾಗಿ ಸಮುದ್ರದ ಬಳಿ ಇದ್ದರು. ಆ ಜಾಗದಲ್ಲಿ ಸಮುದ್ರ ಸ್ವಲ್ಪ ಆಳವಾಗಿದೆ, ತುಂಬಾ ಮುಂದೆ ಹೋಗೋದೆಲ್ಲ ಬೇಡ. ಸೂರ್ಯಾಸ್ತ ನೋಡಿದ ಕೂಡಲೇ ರೆಸಾರ್ಟ್ ಗೆ ಹೊರಡೋದು ಎಂದು ಬರುವಾಗ ಬಸ್ಸಿನಲ್ಲೇ ಹೇಳಿದ್ದರು.

ಸೂರ್ಯ ಉರಿಯುತ್ತಾ ಇದ್ದವನೇ.. ಇದ್ದಕ್ಕಿದ್ದ ಹಾಗೆ ಸುತ್ತಲೂ ಆಕಾಶ ಕೆಂಪು ಕೆಂಪಾಗಿ ಮೆಲ್ಲ ಮೆಲ್ಲನೆ ಆ ಕೆಂಪಿನೊಳಗೆ ಜಾರುತ್ತಾ ಸಮುದ್ರವನ್ನೂ ಕೆಂಪಾಗಿಸುತ್ತಾ.. ಸಮುದ್ರದ ನೀರು ನೀಲಿ ಹಸುರಿನ ಜೊತೆ ಕೆಂಪನ್ನೂ ಸೇರಿಸಿ ವರ್ಣರಂಜಿತ. ಅಬ್ಬಾ ನೋಡಲು ಕಣ್ಣುಗಳೇ ಸಾಲುವುದಿಲ್ಲ! ನೋಡನೋಡುತ್ತಿದ್ದಂತೆಯೇ ಸೂರ್ಯ ಸಮುದ್ರದೊಳಗೆ ಕರಗಿಯೇ ಹೋದ. ನೋಡಲು ಕೂತವರ ಮುಖದ ಮೇಲಿನ ಭಾವನೆಗಳ ಜೊತೆ ಆಕಾಶದ ರಂಗೂ ಸೇರಿ ಸುತ್ತಮುತ್ತೆಲ್ಲ ಕೆಂಪಾದವೋ ಎಲ್ಲಾ ಕೆಂಪಾದವೋ.. ಆ ನೀಲಿ ಸಾಗರ, ಸುತ್ತಲಿದ್ದ ಹಸುರು ಮರಗಳು, ಕೂತ ನಾವಷ್ಟೂ ಜನರೂ ಕೆಂಪಾದೆವು!!

ಸಂಜೆಯಾ ರಾಗಕೆ ಬಾನು ಕೆಂಪೇರಿದೆ!! ಅಕ್ಷರಶಃ ಕೆಂಪೇರಿತ್ತು. ಎದ್ದು ಬರಲು ಯಾರಿಗೂ ಮನಸ್ಸಿಲ್ಲ.ಹಾಗೇ ಕಾಲೆಳೆದು ನಡೆದು ಬರುವಾಗ ಮಸುಕು ಕತ್ತಲಲ್ಲಿ ಕೆಂದಾಳೆ ಸೀಯಾಳವನ್ನು ಮಾರುತ್ತಾ ನಿಂತವನನ್ನು ದಾಟುವಾಗ ಒಮ್ಮೆಲೇ ಎಲ್ಲರಿಗೂ ಎಳನೀರು ಕುಡಿಯುವ ಬಯಕೆಯಾಯಿತು.

ಅದ್ಭುತ ರುಚಿಯ ಆ ಕೆಂದಾಳೆಯ ನೀರು ಒಂದೇ ಚಿಟಿಕೆ ಉಪ್ಪು ಬೆರೆಸಿದ ಹಾಗೆ ಇತ್ತು. ನಮ್ಮನ್ನು ನೋಡಿ ಇನ್ನೂ ಕೆಲವರು ಸೇರಿದರು. ನೋಡ ನೋಡುತಿದ್ದಂತೆ ಅವನ ಸೈಕಲಲ್ಲಿದ್ದ ಅಷ್ಟೂ ಎಳನೀರು ಮಾರಾಟವಾಗಿ ಹೋಯಿತು.

ಬಸ್ಸು ಹತ್ತುವುದರೊಳಗೆ ದೊಡ್ಡವಳು.. ಅಮ್ಮಾ ಅಮ್ಮಾ ಅಮ್ಮಾ ನೋಡಿಲ್ಲಿ ಇವಳು ಜೆನಿಶಾ.. ಇದು ಇವಳ ಗಂಡ ಪ್ರವೀಣ್. ಎಂದು ಪರಿಚಯ ಮಾಡಿ ಕೊಟ್ಟಳು.ಶ್… ಏನಿದು.. ಇದು, ಗಂಡ. ಹಾಗೆಲ್ಲಾ ಅನ್ನಬಾರದು ಅಂದೆ.ಆಯ್ತಮ್ಮಾ ನೀನು ಕೂತ್ಕೊ ಎಂದು ಅವರ ಹರಟೆಯಲ್ಲಿ ಅವರು ಮಗ್ನರಾದರು.

ಅಷ್ಟರವರೆಗೆ ಇಬ್ಬರು ಹುಡುಗಿಯರು ಒಬ್ಬ ಹುಡುಗ ಒಬ್ಬರಿಗೊಬ್ಬರು ಕೀಟಲೆ ಮಾಡಿಕೊಂಡಿದ್ದವರಿಗೆ ಈಗ ಇನ್ನಿಬ್ಬರು ಸೇರಿ ಅವರ ಲೋಕವೇ ಬೇರೆಯಾಯ್ತು.

ಈ ರೆಸಾರ್ಟ್ ತುಂಬಾ ದೊಡ್ಡದಾಗಿದ್ದು ಪ್ರತ್ಯೇಕ ಕಾಟೇಜ್ ಗಳು ತುಂಬಾ ಚೆನ್ನಾಗಿದ್ದವು. ಸುತ್ತಲೂ ಮರಗಿಡಗಳು, ನಮ್ಮನ್ನು ಬಾರ್ಜಲ್ಲಿ ಕರೆದುಕೊಂಡು ಬಂದು ಹೌರಾ ಬ್ರಿಜ್ ನೋಡಲು ಹೋದಾಗ ನಮ್ಮ ಲಗ್ಗೇಜ್ ಗಳು ಇಲ್ಲಿ ಈ ರೆಸಾರ್ಟಲ್ಲಿ ಬಂದು ಕೂತಿದ್ದವು.

ನಮ್ಮ ನಮ್ಮ ಕಾಟೇಜ್ ಯಾವುದೆಂದು ನಮಗೆ ತಿಳಿಸಿ, ನಮ್ಮ ಲಗ್ಗೇಜ್ ಗಳನ್ನು ಅಲ್ಲಿನ ಹುಡುಗರು ತಂದಿರಿಸಿದರು. ನಾವೆಲ್ಲಾ ಮತ್ತೊಮ್ಮೆ ಸ್ನಾನ ಮಾಡಿ ಶುಚಿಯಾಗಿ ಎಂಟು ಗಂಟೆಗೆ ರೆಸ್ಟೋರೆಂಟ್ ಗೆ ಬರಬೇಕು ಎಂದು ಹೇಳಿದ್ದರಿಂದ ಅಲ್ಲೇ ಹೋಗಿ ಕೂತೆವು.

ಮಾರನೆ ದಿನದ ಕಾರ್ಯಕ್ರಮದ ಬಗ್ಗೆ ತಿಳಿಸಲು ರಾಕೇಶ್ ಮತ್ತು ದರ್ಶನ್ ನಿಂತಿದ್ದರು.
ನಾಳೆ ನೀಲ್ ಐಲ್ಯಾಂಡ್ ಲ್ಲಿರುವ ಡೈವಿಂಗ್ ಸ್ಪಾಟ್ ಲ್ಲಿ ಸ್ಕೂಬಾ ಡೈವಿಂಗ್, ಸ್ನೊರ್ಕ್ಲಿಂಗ್, ಗಾಜಿನ ತಳದ ದೋಣಿಯಲ್ಲಿ ಸಮುದ್ರಯಾನ ಮುಂತಾದ ಚಟುವಟಿಕೆಗಳಿಗಾಗಿ ಕರೆದುಕೊಂಡು ಹೋಗುತ್ತೇವೆ. ಸ್ಕೂಬಾ ಡೈವಿಂಗ್ ಮಾಡುವ
ಆಸಕ್ತಿ ಉಳ್ಳವರು ತಯಾರಾಗಿರಿ. ಮದ್ಯಾಹ್ನದವರೆಗೆ ಸಮುದ್ರದ ಬಳಿ ಕಾಲ ಕಳೆದು ಊಟದ ನಂತರ ಮತ್ತೆ ನಾವು ಹಡಗಿನಲ್ಲಿ ಪೋರ್ಟ್ ಬ್ಲೇರ್ ಗೆ ಹೋಗುವವರಿದ್ದೇವೆ ಎಂದು ತಿಳಿಸಿದರು.

ರಾತ್ರಿ ಒಳ್ಳೆಯ ನಿದ್ರೆ ಅತೀ ಅವಶ್ಯಕ, ಸಾಕಷ್ಟು ನೀರು ಕುಡಿಯುತ್ತಾ ಇರಿ. ಮತ್ತು ನಾಳೆ ಬೆಳಗಿನ ಉಪಹಾರದಲ್ಲಿ ಎಣ್ಣೆ ಪದಾರ್ಥವನ್ನು ಸೇವಿಸಬೇಡಿ. ಬ್ರೆಡ್, ಬನ್ ಮತ್ತು ಹಣ್ಣುಗಳನ್ನು ಸೇವಿಸಿದರೆ ಒಳ್ಳೆಯದು ಎಂದು ಸೂಚನೆಗಳನ್ನು ಕೊಟ್ಟರು.

ಬೆಳಿಗ್ಗೆ ನಿಗದಿತ ಸಮಯಕ್ಕೆ ತಯಾರಾಗಿ ನಮ್ಮ ಸಾಮಾನುಗಳ ಜೊತೆಗೆ ರೆಸ್ಟೋರೆಂಟ್ ಗೆ ಬಂದು ಉಪಹಾರ ಸೇವಿಸಿ ಲಗ್ಗೇಜ್ ಗಳನ್ನು ಅಲ್ಲಿಯೇ ಬಿಟ್ಟು ನಾವೆಲ್ಲರೂ ಬಸ್ಸಿನಲ್ಲಿ ಸಮುದ್ರ ತೀರಕ್ಕೆ ಹೋದೆವು.

ಈ ನನ್ನ ಪ್ರವಾಸ ಕಥನದಲ್ಲಿ ನಮ್ಮ‌ ಸುಖಪ್ರವಾಸದ ಬಗ್ಗೆ ನಿಮಗೆ ನನಗೆ ನೆನಪಿದ್ದಷ್ಟು ತಿಳಿಸುತಿದ್ದೇನೆ. ಪ್ರವಾಸ ವೆಂದರೆ ಸಾಹಸ ಎಂದುಕೊಂಡವರಿಗೆ ನೀರಸವೆನಿಸಬಹುದು.
ಸಾಮಾನ್ಯವಾಗಿ ನಾವು ಸಂಸಾರದ ಏಕತಾನತೆಯಿಂದ ಬಿಡುಗಡೆ ಹೊಂದಲು ಒಂದಿಷ್ಟು ಸಮಯವನ್ನು ಬೇರೆ ವಾತಾವರಣದಲ್ಲಿ ಕಳೆಯಲು ಎಂದು ಹೋಗುತ್ತೇವೆ. ಆದರೆ ಬಂದ ಮೇಲೆ ಹೋದ ಖುಷಿಗಿಂತ ಕಿರಿಕಿರಿಯೇ ಜಾಸ್ತಿ ಅನಿಸಿ, ಯಾಕಾದರೂ ಹೋಗಬೇಕಿತ್ತೋ! ಅನಿಸುವುದೂ ಇದೆ.

ನಾವು ಅಂಡಮಾನ್ ಗೆ ಹೋಗಿ ಬಂದು ಒಂದು ವರ್ಷದ ಮೇಲಾಯ್ತು. ಬಂದ ಕೂಡಲೇ ಬರೆಯಬೇಕು ಎಂದುಕೊಂಡಿದ್ದೆ. ಏನು ಬರೆದರೂ ನಮ್ಮ ಮಧುರ ಅನುಭವಕ್ಕಿಂತ ಸಪ್ಪೆ ಅನಿಸುತಿತ್ತು. ಹಾಗಾಗಿ ಕೈ ಬಿಟ್ಟಿದ್ದೆ. ಅದಾದ ಸ್ವಲ್ಪ ದಿನಕ್ಕೆ ಕೊರೊನಾ, ಲಾಕ್ ಡೌನ್ ಎಂದು ಬೇರೆಯೇ ಪ್ರಪಂಚದಲ್ಲಿದ್ದಂತೆ ದಿನ ಕಳೆದ ಮೇಲೆ ಅಂಡಮಾನ್ ನೆನಪು ಮರೆತೇ ಹೋಗಿತ್ತು.

ಇತ್ತೀಚೆಗೆ ರೇಖಾ ಗೌಡ ಅವರು ಪೂರ್ಣ ಚಂದ್ರ ತೇಜಸ್ವಿಯವರ ಅಂಡಮಾನ್ ಪ್ರವಾಸ ಮತ್ತು ನೈಲ್ ಮಹಾನದಿ ಎಂಬ ಪುಸ್ತಕ ಓದಿ ಅಂಡಮಾನ್ ಬಗ್ಗೆ ಬಹಳ ಆಸೆಯಿಂದ ಬರೆದಿದ್ದರು. ಆಗ ನಾವು ಹೋಗಿ ಬಂದ ವಿಷಯ ಹೇಳಿದ್ದೆ ಅವರಿಗೆ. ನೀವು ನಿಮ್ಮ ಅನುಭವ ಬರೆಯಿರಿ ಎಂದು ತುಂಬಾ ಒತ್ತಾಯಿಸಿದರು.

ಬರೆಯಲು ಶುರು ಮಾಡಿದಾಗ ಏನೂ ಸರಿಯಾಗಿ ನೆನಪಿರಲಿಲ್ಲ. ಆಮೇಲಾಮೇಲೆ ಒಂದೊಂದೇ ನೆನಪಾಗಲು ತೊಡಗಿತು. ನಾನೂ ಐದಾರು ದಿನಗಳಿಂದ ಅಂಡಮಾನ್ ಲ್ಲೇ ಇದ್ದಂತೆ ಅನಿಸುತ್ತಿದೆ.

(ಮುಂದುವರೆಯುತ್ತದೆ..)

*********

ಶೀಲಾ ಭಂಡಾರ್ಕರ್.

Leave a Reply

Back To Top