ಅಂಕಣ ಬರಹ

ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ

ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ

ಸರಣಿಬರಹ………..

ಅದ್ಯಾಯ-5

ಹ್ಯಾವ್ಲೊಕ್ ಲ್ಲಿ ನಮ್ಮ ರೆಸಾರ್ಟ್ ಹಿಂಭಾಗದ ಸಣ್ಣ ಖಾಸಗಿ ಬೀಚ್ ನ ಉದ್ದಕ್ಕೂ ಸರಸ್ವತಿ ಮತ್ತು ನಾನು ಎಷ್ಟು ದೂರ ನಡೆದೆವೋ ವಾಪಸ್ಸು ಬರಬೇಕೆಂದೇ ಅನಿಸಲಿಲ್ಲ.  ಮಕ್ಕಳು ಅಲ್ಲಿ ಇಲ್ಲಿ ಓಡಾಡಿಕೊಂಡು ಮೊಬೈಲಲ್ಲಿ, ಕ್ಯಾಮರಾದಲ್ಲಿ ಫೋಟೊ ತೆಗೆದುಕೊಳ್ಳುವುದರಲ್ಲೇ ಮಗ್ನರಾಗಿದ್ದರು.

ಗಣೇಶಣ್ಣ ಸತೀಶ್ ಇಬ್ಬರೂ ಅಲ್ಲಿದ್ದ ಬೆಂಚ್ ಮೇಲೆ ಆರಾಮಾಗಿ ಅಲೆಗಳನ್ನು ನೋಡುತ್ತಾ ಕೂತರು.

ನಾವು ತಿರುಗಿ ಬಂದರೂ ಮಕ್ಕಳಿಗೆ ರೂಮು ಸೇರಲು ಮನಸ್ಸೇ ಇಲ್ಲ. ಇನ್ನೂ ಸ್ವಲ್ಪ ಇನ್ನೂ ಸ್ವಲ್ಪ ಹೊತ್ತು ಎಂದು ಅಲ್ಲೇ ಇದ್ದುದರಿಂದ ನಾವೂ ಅಲ್ಲೇ ಕೂತು, ಅದು ಇದು ಮಾತು ಹಾಡು ಎಂದು ಹತ್ತೂವರೆಯವರೆಗೆ ಸಮಯ ಕಳೆದು, ಮರುದಿನ ಬೆಳಿಗ್ಗೆ ಎಂಟು ಗಂಟೆಯ ಒಳಗೆ ತಯಾರಾಗಲು ಹೇಳಿದುದರಿಂದ ಮಕ್ಕಳನ್ನು ಹೊರಡಿಸಿ ನಮ್ಮ ನಮ್ಮ ಕಾಟೇಜ್ ಸೇರಿದೆವು.

ನಮ್ಮ ಮಕ್ಕಳು ಇಬ್ಬರಿದ್ದುದರಿಂದ ಎಲ್ಲಾ ಕಡೆ, ಅವರಿಗೆ ಪ್ರತ್ಯೇಕ ಕೊಠಡಿ ಅಥವಾ ಕಾಟೇಜ್ ಸಿಗುತಿತ್ತು. ಆದರೆ ಶ್ರೀಪಾದನಿಗೆ ಮಾತ್ರ ಪ್ರತೀ ಸಲವೂ ಅಪ್ಪ ಅಮ್ಮನ ಜೊತೆಯೇ ಅವರ ಕೋಣೆಯೊಳಗೆ ಇನ್ನೊಂದು ಹಾಸಿಗೆ ಹಾಸಿ ಕೊಡುತಿದ್ದರು.

ಆ ಒಬ್ಬಳೇ ಬಂದ ಹುಡುಗಿಗೆ ಒಬ್ಬಳಿಗೇ ಒಂದು ಕೋಣೆ.

ಇದು ಅನ್ಯಾಯ ಎಂದು ಶ್ರೀಪಾದನಿಗಿಷ್ಟು ಕೀಟಲೆ ಮಾಡುತಿದ್ದರು ಈ ಹುಡುಗಿಯರು. ಇನ್ನೊಮ್ಮೆ ಎಲ್ಲಾದರೂ ಹೋಗುವಾಗ ಅವನ ಟಿಕೇಟ್ ಬೇರೆಯೇ ತಗೊಳ್ಳಿ ಎಂದು ಅವನ ಅಪ್ಪ ಅಮ್ಮನಿಗೆ ಇವರ ಸಲಹೆ.

ಪ್ರತಿಯೊಂದು ಕೋಣೆಗೂ ಪ್ರತೀ ದಿನ ಎರಡು ಲೀಟರಿನ ನೀರಿನ ಬಾಟಲ್ ಒದಗಿಸುತಿದ್ದರು.

ಬೆಳಗ್ಗಿನ ತಿಂಡಿ ಮತ್ತು ರಾತ್ರಿಯ ಊಟ ನಾವು ಉಳಿದುಕೊಳ್ಳುವ ಹೊಟೇಲ್ ಅಥವಾ ರೆಸಾರ್ಟ್ ಗಳಲ್ಲೇ ಆಗುತಿತ್ತು. ಮದ್ಯಾಹ್ನದ ಊಟವನ್ನು ಆದಷ್ಟು ಒಳ್ಳೆಯ ಹೊಟೇಲ್ ಹುಡುಕಿ ಕರೆದುಕೊಂಡು ಹೋಗುತಿದ್ದರು. ಊಟ ತಿಂಡಿಗೆ ಎಲ್ಲೂ ಯಾವ ತೊಂದರೆಯೂ ಆಗಲಿಲ್ಲ.

ಬೆಳಿಗ್ಗೆ ಎದ್ದು ಏಳೂವರೆಗೆ ತಯಾರಾಗಿ ಬೆಳಗಿನ ಉಪಹಾರ ತೆಗೆದುಕೊಂಡು ನಾವು ಹೋಗಲಿದ್ದಿದ್ದು ಅಂಡಮಾನ್ ನಲ್ಲಿ ಮಾತ್ರವಲ್ಲ ಇಡೀ ಏಷಿಯಾದಲ್ಲೇ ಸುಂದರ ರಾಧಾನಗರ್ ಬೀಚ್ ಗೆ. ಅಲ್ಲಿ ಸ್ನಾನ ಮಾಡಲು, ಸಮುದ್ರದಲ್ಲಿ ಆಟವಾಡಲು ಅನುಕೂಲಕರ ವಾತಾವರಣವಿದೆ. ಬಟ್ಟೆ ಬದಲಿಸಲು ವ್ಯವಸ್ಥೆಯೂ ಇತ್ತು. ನಮಗೆ ಅಲ್ಲಿ 12 ರ ವರೆಗೆ ಸಮಯವಿತ್ತು. ಎಲ್ಲರೂ ಮನಸೋ ಇಚ್ಛೆ ಸಮಯ ಕಳೆದರು.

ಅಂಡಮಾನಿನ ಸಮುದ್ರದ ಬಗ್ಗೆ ಯೋಚಿಸುವಾಗ ಮೊದಲೆಲ್ಲ.. ಕಾಲಾಪಾನಿ ಎಂಬ ಶಬ್ದವೊಂದು ಭೀಕರವಾಗಿ ಕಿವಿಯೊಳಗೆ ಮೊಳಗುತಿದ್ದುದರಿಂದ ನನಗೇನೋ ಆ ನೀರು ವಿಷಪೂರಿತ, ಗಲೀಜು, ಕರ್ರಗೆ.. ಹೀಗೆ ಏನೇನೋ ಕಲ್ಪನೆಗಳಿದ್ದವು.

ಆದರೆ., ಬಂಗಾಳ ಕೊಲ್ಲಿಯ ಸೌಂದರ್ಯಕ್ಕೆ ಸಾಠಿಯೇ ಇಲ್ಲ ಎಂಬುದು ಸ್ವತಃ ನೋಡಿದ ಮೇಲೆ ತಿಳಿಯಿತು.

ತಿಳಿ ನೀಲಿ, ತಿಳಿ ಹಸಿರು, ನೀರಿನ ಮೇಲೆ ಬಿಳಿ ನೊರೆಯ ಸಾಲು ಷಿಫಾನ್ ಸೀರೆಯ ಮೇಲೆ ಕಸೂತಿ ಹೊಲಿದಂತೆ ನೋಡಲು ಅತೀ ಸುಂದರ. ತಿಳಿಯಾದ ನೀರು, ಎಲ್ಲೆಲ್ಲೂ ಶುಭ್ರ, ಸ್ವಚ್ಛ, ಸಣ್ಣ ಮರಳು.

ಎಳೆ ಬಿಸಿಲಿನ ನಮ್ಮ ಆ ಬೆಳಗಿನ ಸಮಯ.

ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತಿತ್ತು.

ಎಷ್ಟೇ ವರ್ಣಿಸಿದರೂ ಆ ನೀರಿನ ಸೊಬಗಿನ ಮುಂದೆ ಶಬ್ದಗಳು ಸಪ್ಪೆಯಾಗುತ್ತವೆ. 

ಹ್ಯಾವ್ಲೊಕಿಂದ ಹತ್ತು ಕಿ.ಮೀಟರ್ ದೂರದ ರಾಧಾನಗರ ಬೀಚ್ ಗೆ ನಮ್ಮನ್ನು ಬಸ್ಸಿನಲ್ಲಿ ಕರೆತಂದಿದ್ದರು. ಸಾವಕಾಶವಾಗಿ ಒಂದಿಷ್ಟು ಸಮಯವನ್ನು ಯಾವುದೇ ಗಡಿಬಿಡಿಗಳಿಲ್ಲದೆ ಕಳೆದೆವು.

ಹ್ಯಾವ್ಲೊಕ್ ದ್ವೀಪಕ್ಕೆ ಬರುವವರೆಗೆ ಟೂರ್ ಮ್ಯಾನೇಜರ್ ಜೊತೆ ನಮ್ಮ ಪ್ರವಾಸದಲ್ಲಿ ಜೊತೆಗೂಡಿದ್ದು ನಮ್ಮನ್ನು ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಿಂದ ಕರೆದೊಯ್ಯಲು ಬಂದ ವಿಜಯ್ ಅನ್ನುವ ಹುಡುಗ.

ಅಲ್ಲಿಂದ ಮುಂದೆ..

ನಾವು ಹಡಗಿನಲ್ಲಿ ಪ್ರಯಾಣ ಮಾಡಿ ಹ್ಯಾವ್ಲೊಕ್ ದ್ವೀಪಕ್ಕೆ ಬಂದು ತಲುಪಿದಾಗ ಅಲ್ಲಿ ನಮಗೆ ರೆಸಾರ್ಟ್ ಮತ್ತಿತರ ಎಲ್ಲಾ ವ್ಯವಸ್ಥೆ ಮಾಡಿದ್ದು ದರ್ಶನ್. ಮೂಲತಃ ತಮಿಳುನಾಡಿನವರು. ಅವರ ತಂದೆ ಎಷ್ಟೋ ವರ್ಷಗಳ ಹಿಂದಿನಿಂದ ಅಂಡಮಾನ್ ನಲ್ಲಿ ನೆಲೆಸಿ ಟೂರಿಸಂ ನಡೆಸುತಿದ್ದಾರೆ. ಓದು ಮುಗಿಸಿ ದರ್ಶನ್ ಈಗ ಅಪ್ಪನ ಜೊತೆ ಸೇರಿದ್ದಾನೆ.

ವ್ಯವಸ್ಥಿತವಾಗಿ, ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳನ್ನೂ ಮರೆಯದೆ ನಮ್ಮ ಪ್ರವಾಸವನ್ನು ಅತ್ಯಂತ ಸುಖಮಯವಾಗುವಂತೆ ಮಾಡಿದ ಕೀರ್ತಿ ನಿರ್ಮಲಾ ಟ್ರಾವೆಲ್ಸ್ ಜೊತೆಗೆ ವಿಜಯ್ ಮತ್ತು ದರ್ಶನ್ ಅವರದು.

ಪೋರ್ಟ್ ಬ್ಲೇರ್ ನಷ್ಟು ಮುಂದುವರಿದಿಲ್ಲವಾದುದರಿಂದ ಈ ಸಣ್ಣ ದ್ವೀಪಗಳಲ್ಲಿ ಇರುವುದರಲ್ಲೇ ಒಳ್ಳೆಯ ಹೋಟೆಲಲ್ಲಿ ಮದ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಿಸಿದ್ದರು. ಶುಚಿ-ರುಚಿಯಾದ ಊಟದ ನಂತರ ನಮ್ಮ ಪ್ರಯಾಣ ಮುಂದುವರಿಯಿತು. ನಾವು ಇಂದು ಹೋಗಿ ಸೇರಬೇಕಿರುವುದು ಮತ್ತೊಂದು ದ್ವೀಪಕ್ಕೆ.

ಎರಡೂ ದ್ವೀಪಗಳು ಒಂದರಿಂದೊಂದು ಬೇರ್ಪಟ್ಟು ಇರೋದ್ರಿಂದ ಸಮುದ್ರ ಯಾನ ಮಾತ್ರವೇ ಇಲ್ಲಿಯ ಸಂಪರ್ಕ ಸಾಧನ.

ಸರಕಾರಿ ಫೆರ್ರಿಯಲ್ಲಿ ನಮ್ಮ ಬಸ್ಸಿನ ಜೊತೆಗೆ ನಮ್ಮ ಪ್ರಯಾಣ ನೀಲ್ ಐಲ್ಯಾಂಡ್ ಗೆ.

ನೀಲ್ ಐಲ್ಯಾಂಡ್ ಈಗ ಶಹೀದ್ ದ್ವೀಪವೆಂದು ಮರುನಾಮಕರಣಗೊಂಡಿದೆ.

ಬಾರ್ಜ್ ಅಥವಾ ಫೆರ್ರಿಯಲ್ಲಿ ಒಂದೂವರೆ ಗಂಟೆ ಪ್ರಯಾಣ ಮಾಡಿ ನಾವು ನೀಲ್ ದ್ವೀಪದ ಸಮುದ್ರದೊಳಗಿನ ಹವಳದ ಗಿಡಗಳನ್ನು ಮತ್ತು ನೈಸರ್ಗಿಕ ಸೇತುವೆಯನ್ನು ನೋಡಲು ಹೋದೆವು.

ನೈಸರ್ಗಿಕವಾಗಿ ಕಲ್ಲುಗಳ ರೂಪದಲ್ಲಿ ಹವಳದ ದಿಂಡಿನಂತಹ ರಚನೆಗಳು ಪ್ರತೀ ಹೆಜ್ಜೆ ಹೆಜ್ಜೆಗೂ ಸಿಗುತಿದ್ದವು. ಉಬ್ಬರವಿಲ್ಲದ ಸಮುದ್ರ ತೀರವದು, ಕಲ್ಲು ಬಂಡೆಗಳಂತ ರಚನೆಗಳು. ಅಲೆಗಳ ಬಡಿತಕ್ಕೆ ನೈಸರ್ಗಿಕವಾಗಿ ಸಮುದ್ರದೊಳಗೆ ಇಂತಹ ಅನೇಕ ಆಕಾರಗಳ ಸೃಷ್ಟಿಯಾಗಿದೆ.

ಕಲ್ಲುಗಳ ಮೇಲಿನಿಂದ, ನೀರಿನೊಳಗೆ ತುಂಬಾ ದೂರ ನಡೆದು ಹೋದ ಮೇಲೆ ನೋಡಲು ಸಿಕ್ಕಿದ್ದು ಇಂತಹ ಹವಳದ ಕಲ್ಲುಗಳಿಂದಲೇ ರಚಿತವಾದ ನೈಸರ್ಗಿಕ ಸೇತುವೆ.

ಪಶ್ಚಿಮ ಬಂಗಾಳಕ್ಕೂ ಅಂಡಮಾನ್ ಗೂ ವಿಶೇಷ ನಂಟು. ಅನೇಕ ವರ್ಷಗಳದು. ಸೆಲ್ಯುಲರ್ ಜೈಲಿನ ಸಂಬಂಧವೆಂದೂ ಹೇಳಬಹುದು. ಬಂಗಾಳದ ಅನೇಕ ಕ್ರಾಂತಿಕಾರಿ ಹೋರಾಟಗಾರರನ್ನು ಶಿಕ್ಷೆಗೆಂದು ಅಂಡಮಾನ್ ಜೈಲಿಗೆ ಖೈದಿಗಳನ್ನಾಗಿ ಕರೆತಂದಿದ್ದರಿಂದ, ಬಂಗಾಳದ ಜನತೆಗೆ ತಮ್ಮ ಪೂರ್ವಜರ ಬಗ್ಗೆ ಅಪಾರ ಹೆಮ್ಮೆ ಮತ್ತು ಗರ್ವ. ಅಂಡಮಾನ್ ದ್ವೀಪ ಬಂಗಾಳದ ಜನತೆಗೆ ತೀರ್ಥಕ್ಷೇತ್ರಕ್ಕೆ ಸಮ.

ಈಗಲೂ ಅಂಡಮಾನ್ ದ್ವೀಪ ಸಮೂಹಗಳಲ್ಲಿ ಬಂಗಾಳಿಗಳು ನೆಲೆಯೂರಿದ್ದಾರೆ. ಅಲ್ಲಿಯೇ ತಮ್ಮ ವ್ಯಾಪಾರ, ಕಸುಬುಗಳನ್ನು ಕೈಗೊಳ್ಳುತಿದ್ದಾರೆ.

ನೈಸರ್ಗಿಕವಾಗಿ ರಚನೆಯಾದ ಸೇತುವೆಗೆ ಬಂಗಾಳದ ಜನರು ಮೊದಲಿಗೆ ರಬೀಂದ್ರ ಸೇತು ಎಂದು ಕರೆದರು. ಕಾಲಾನಂತರ ಕಲ್ಕತ್ತಾದ ಹೌರಾ ಬ್ರಿಜ್ ಗೆ ಹೋಲಿಸಿ ಇದನ್ನೂ ಹೌರಾ ಬ್ರಿಜ್ ಎಂದೇ ಕರೆಯುತ್ತಾರೆ.

ಅಂಡಮಾನ್ ಆಲ್ಬಂ

(ಮುಂದುವರೆಯುವುದು..)

********************

ಶೀಲಾ ಭಂಡಾರ್ಕರ್.

Leave a Reply

Back To Top