ಅಂಬೇಡ್ಕರ್ ಜಯಂತಿ ವಿಶೇಷ ಬರಹ

ಅಸ್ಪೃಶ್ಯತೆಯ ವಿರುದ್ದ ಅಂಬೇಡ್ಕರ್ ರವರ ಹೋರಾಟ

Vijayawada to get India's tallest Ambedkar statue- The New Indian Express

೧೯೨೭ರಿಂದ ೧೯೩೨ರವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದರು. ಇವುಗಳಲ್ಲಿ ನಾಸಿಕದಲ್ಲಿಯ ಕಾಳ ರಾಮನ ದೇವಸ್ಥಾನ ಮತ್ತು ಮಹಾಡದ ಚೌಡಾರ್ ಕೆರೆಯ ವಿಷಯವಾಗಿ ಅಸ್ಪೃಶ್ಯರನ್ನು ಹೊರಗಿಟ್ಟಿರುವರ ವಿರುದ್ಧ ಮಾಡಿದ ಆಂದೋಲನಗಳು ಗಮನಾರ್ಹವಾಗಿವೆ.

ಸಹಸ್ರಾರು ಅಸ್ಪೃಶ್ಯ ಸತ್ಯಾಗ್ರಹಿಗಳು ಭಾಗವಹಿಸಿದ ಈ ಅಹಿಂಸಾತ್ಮಕ ಚಳುವಳಿಗಳಿಗೆ ಸವರ್ಣೀಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರು. ನ್ಯಾಯಾಲಯದ ಕಟ್ಟೆ ಹತ್ತಿದ ಚೌಡಾರ್ ಕೆರೆಯ ಚಳುವಳಿಯು, ಅನೇಕ ವರ್ಷಗಳ ನಂತರ, ಕೆಳವರ್ಗಗಳ ಪರವಾಗಿ ವಿಜಯ ಸಾಧಿಸು ವುದರೊಂದಿಗೆ ಪರ್ಯವಸಾನ ಹೊಂದಿತು. ಅಸ್ಪೃಶ್ಯರನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ಕ್ರೂರ ರೀತಿಗೆ ಮೂಲ ಕಾರಣ ‘ಮನುಸ್ಮೃತಿ’ ಎಂದು ಅಂಬೇಡ್ಕರ್ ನಂಬಿದ್ದರು.

ಮನುಸ್ಮೃತಿಯನ್ನು ಇದೇ ಚಳುವಳಿಯಲ್ಲಿ ವಿಧ್ಯುಕ್ತವಾಗಿ ದಹನ ಮಾಡಲಾಯಿತು. ಈ ಕೃತಿಯನ್ನು ಹೀಗೆ ಸಾರ್ವಜನಿಕವಾಗಿ ಅವಮರ್ಯಾದೆ ಮಾಡುವುದರ ಮೂಲಕ ಅಂಬೇಡ್ಕರರ ಅನುಯಾಯಿಗಳು ಸಮಾನತೆಯ ಹಕ್ಕು ಪ್ರತಿಪಾದನೆ ಮಾಡಬಯಸಿದ್ದರು. ಆದರೆ, ಹಿಂದೂ ಧರ್ಮದ ಅನುಯಾಯಿಗಳಲ್ಲಿ ಮನುಸ್ಮೃತಿಯ ಮಹತ್ವವೇನು ಎಂಬುದೇ ಅಸ್ಪಷ್ಟ ಹಾಗೂ ವಿವಾದಿತ ವಿಷಯವಾದ್ದರಿಂದ, ಅದರಲ್ಲಿಯೂ ಮುಖ್ಯವಾಗಿ ಮನುಸ್ಮೃತಿಯನ್ನು ಹಿಂದೂ ಧರ್ಮಶಾಸ್ತ್ರಗಳಲ್ಲಿ ಒಂದಾಗಿ ಪರಿಗಣಿಸದೇ ಇದ್ದು, ಹಳ್ಳಿಗಾಡುಗಳಿಂದ ಹೊರಗೆ ಅದಕ್ಕೆ ಧಾರ್ಮಿಕ ಮಹತ್ವವೂ ಇಲ್ಲದಿದ್ದುದರಿಂದ, ಈ ಉದ್ದೇಶ ನೆರವೇರಿತೋ ಇಲ್ಲವೂ ಎಂಬುದು ಚರ್ಚಾಸ್ಪದ.

ಮೊದಲೇ ತಮ್ಮ ಚಟುವಟಿಕೆಗಳಿಂದ ಸಂಪ್ರದಾಯಶೀಲ ಹಿಂದೂಗಳ ಅಸಮಾಧಾನವನ್ನು ಗಳಿಸಿದ್ದ ಅಂಬೇಡ್ಕರ್ , ೧೯೩೧-೩೨ ರಲ್ಲಿ ಮತ್ತಷ್ಟು ಅಪ್ರಿಯರಾದರು. ಅವರೇ ಹೇಳಿಕೊಂಡಂತೆ, ಭಾರತದ ಹಿಂದುಗಳು ಅತ್ಯಂತ ದ್ವೇಷಿಸುವ ವ್ಯಕ್ತಿಯಾದರು. ಅಂಬೇಡ್ಕರ್ ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಕ್ಕಾಗಿ ಪಟ್ಟು ಹಿಡಿದದ್ದೇ ಈ ಅಸಮಾಧಾನಕ್ಕೆ ಕಾರಣವಾಗಿತ್ತು.

ಮಹಾತ್ಮ ಗಾಂಧಿ ಹಾಗೂ ಕಾಂಗ್ರೇಸ್ ಪಕ್ಷದ ಧೋರಣೆ ಇದಕ್ಕೆ ವಿರೋಧವಾಗಿತ್ತು. ಗಾಂಧಿ ಹಾಗೂ ಅಂಬೇಡ್ಕರರಲ್ಲಿ ಈ ವಿಷಯದ ಮೇಲೆ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಚಕಮಕಿಯೂ ನಡೆದಿತ್ತು. ಹಿಂದೂ ಸಮಾಜದಿಂದ ಜಾತಿಪದ್ಧತಿ ಹಾಗೂ ತಾರತಮ್ಯ ವನ್ನು ನಿರ್ಮೂಲನ ಮಾಡುವ ಪರವಾಗಿದ್ದ ಗಾಂಧಿ, ದಲಿತರ ಹಿತರಕ್ಷಣೆಗಾಗಿ ದನಿಯೆತ್ತಿದ ಮೊದಲಿಗರಲ್ಲಿ ಒಬ್ಬರಾಗಿದ್ದರೂ, ಬ್ರಿಟಿಷರಿಗೆ ಈ ವಿಷಯದಲ್ಲಿ ಹಿಂದೂಗಳನ್ನು ಜಾತಿಯ ಆಧಾರದ ಮೇಲೆ, ರಾಜಕೀಯವಾಗಿ ಒಡೆಯಲು ಅವಕಾಶ ಕೊಡಬಾರದೆಂಬುದು ಅವರ ನಿಲುವಾಗಿತ್ತು.

೧೯೩೨ರಲ್ಲಿ ಬ್ರಿಟಿಷರು ಜಾರಿಗೆ ತಂದ ಕೋಮುವಾರು ಕಾನೂನಿನಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಕ್ಷೇತ್ರವನ್ನು ಮಂಜೂರು ಮಾಡಲಾಯಿತು. ಇದಕ್ಕೆ ಪ್ರತಿಭಟನೆಯಾಗಿ ಗಾಂಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಫಲವಾಗಿ, ಅಂಬೇಡ್ಕರ್, ಕಾಂಗ್ರೇಸ್ ಮತ್ತು ಸನಾತನ ಹಿಂದೂ ಮುಖಂಡರೊಂದಿಗೆ ಚರ್ಚಿಸಿ, ಕೊನೆಗೂ ಪ್ರತ್ಯೇಕ ಕ್ಷೇತ್ರ ಹಾಗೂ ಕೋಟಾ ಬೇಡಿಕೆಯನ್ನು ಕೈಬಿಟ್ಟರು.ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷವು, ಅಸ್ಪೃಶ್ಯರಿಗೆ ಪ್ರಾತಿನಿಧ್ಯವನ್ನು ಹೆಚ್ಚುಮಾಡಲು ಒಪ್ಪಿಕೊಂಡಿತು.

ಹಿಂದೂ ಧಾರ್ಮಿಕ ಮುಖಂಡರುಗಳು ಅಸ್ಪೃಶ್ಯತೆಯ ಹಾಗೂ ಜಾತ್ಯಾಧಾರಿತ ತಾರತಮ್ಯದ ವಿರುದ್ಧವಾಗಿ ಹೆಚ್ಚು ಹೆಚ್ಚಾಗಿ ದನಿಯೆತ್ತ ತೊಡಗಿದರು. ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ.ಇದೇ ವೇಳೆಗೆ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥರಾದ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ.

ಜಾತಿ ಪದ್ಧತಿಯ ಪುನರ್ವಿಮರ್ಶೆ ನಡೆಸಲು ಸನಾತನಿ ಹಿಂದೂಗಳ ಅನಾಸಕ್ತಿಯಿಂದ, ಭ್ರಮನಿರಸನವಾದಂತೆ ಅನ್ನಿಸಿದ್ದು ಹಾಗೂ ಮಹತ್ವದ ರಾಜಕೀಯ ವಿಷಯಗಳಲ್ಲಿ ಗಾಂಧಿಯವರ ಅಭಿಪ್ರಾಯಗಳಿಗೆ ಮಣಿಯಬೇಕಾಗಿ ಬಂದದ್ದು, ಅಂಬೇಡ್ಕರರನ್ನು ಅಸಮಾಧಾನಕ್ಕೀಡು ಮಾಡಿತು. ಪ್ರತ್ಯೇಕ ಚುನಾವಣಾ ಕ್ಷೇತ್ರದ ವಿಷಯದಲ್ಲಿ ಎದುರಿಸಿದ ಪ್ರತಿಭಟನೆ ಮತ್ತು, ಕೆಲವು ದೇವಸ್ಥಾನಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ಇನ್ನೂ ನಿಷಿದ್ಧವಾಗಿರುವುದು ಭಾಗಶಃ ಇವುಗಳ ಫಲವಾಗಿ, ಅಂಬೇಡ್ಕರ್ ತಮ್ಮ ಯೋಜನೆಯನ್ನು ಬದಲಾಯಿಸಿದರು.

ತಮ್ಮ ಅನುಯಾಯಿಗಳ ಜೀವನಮಟ್ಟವನ್ನು ಹೆಚ್ಚಿಸಿ ಕೊಂಡು , ರಾಜಕೀಯ ಅಧಿಕಾರವನ್ನು ಗಳಿಸುವತ್ತ ಲಕ್ಷ್ಯವಿಡಬೇಕೆಂದು ಆದೇಶಿಸಿದರು.ಜೊತೆಗೆ, “ಹಿಂದೂ ಧರ್ಮದಲ್ಲಿ ಅಸ್ಪೃಶ್ಯರ ಏಳಿಗೆ ಅಸಾಧ್ಯವಾದ್ದರಿಂದ ಅವರು ಬೇರೆಧರ್ಮಕ್ಕೆ ಮತಾಂತರಗೊಳ್ಳಬೇಕು”ಎಂಬ ಆಲೋಚನೆ ಮಾಡತೊಡಗಿದರು. ಇದಕ್ಕೆ ಹಿಂದೂ ಸಮಾಜ ದಿಂದ,ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ವರ್ಷದಲ್ಲಿ ಅಂಬೇಡ್ಕರ್ ಖಾಸಗಿ ಜೀವನದಲ್ಲಿ ಕೆಲವು ಮಹತ್ವದ ಘಟನೆಗಳು ಘಟಿಸಿದವು:

ಅಂಬೇಡ್ಕರರನ್ನು ಮುಂಬಯಿಯ ಸರಕಾರೀ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿ ನೇಮಕ ಮಾಡಿಕೂಳ್ಳಲಾಯಿತು. ನಂತರ ಅಂಬೇಡ್ಕರರು ತಮ್ಮದೇ ಆದ ಸ್ವಂತ ಮನೆ ಮಾಡಿ, ೫೦,೦೦೦ಕ್ಕೂ ಹೆಚ್ಚಿನ ಪುಸ್ತಕಗಳ ಗ್ರಂಥಾಲಯವನ್ನು ಕಟ್ಟಿಕೊಂಡರು. ಇದೇ ವರ್ಷ ಅವರ ಪತ್ನಿ ರಮಾಬಾಯಿಯವರು ಮರಣ ಹೊಂದಿದರು. ೧೯೦೮ರಲ್ಲಿ ಅವರ ಮದುವೆಯಾದಾಗ ಅಂಬೇಡ್ಕರ್ ವಯಸ್ಸು ಹದಿನಾರಾದರೆ, ಅವರ ಹೆಂಡತಿ ಕೇವಲ ಒಂಭತ್ತು ವರ್ಷದವರಾಗಿದ್ದರು. ಅವರಿಗೆ ಹುಟ್ಟಿದ ಐದು ಮಕ್ಕಳಲ್ಲಿ ಉಳಿದದ್ದು ಒಬ್ಬರೇ.

ಅಂಬೇಡ್ಕರ್ ರವರು ಈ ಭೂಮಿ ಮೇಲೆ ಜನಿಸದಿದ್ದರೆ ಇಂದು ಅನೇಕ ಅಸ್ಪೃಷರ ಸ್ಥಿತಿ ಊಹಿಸಲೂ ಅಸಾಧ್ಯ.

ಅಸ್ಪೃಶ್ಯ ರಿಗೆ ನ್ಯಾಯ ಒದಗಿಸಲು ಅವರು ಪಟ್ಟ ಶ್ರಮ ನಿಜಕ್ಕೂ ಶ್ಲಾಘನೀಯ.

ಅವರ ನಡೆ ನುಡಿ ಆದರ್ಶ ಪ್ರತಿಯೊಬ್ಬರಿಗೂ ಆದರ್ಶಪ್ರಾಯ.

***************************

ಆಶಾ ಸಿದ್ದಲಿಂಗಯ್ಯ .

3 thoughts on “

  1. ಅಂಬೇಡ್ಕರ್ ಹೋರಾಟವನ್ನು ಸಂಗಾತಿ ಓದುಗರಿಗೆ ಪರಿಚಯಿಸಿ, ಸಮಾನತೆ , ಮಾನೀಯಯತೆ ಹಾಗೂ ಸೆಕ್ಯುಲರ್ ಸಮಾಜದತ್ತ ಮನುಷ್ಯ ನಡೆಯಬೇಕು ಎಂಬ ಸಂದೇಶ ಬಿತ್ತಿದ ಯುವ ಬರಹಗಾರ್ತಿಗೆ ಅಭಿನಂದನೆಗಳು..

  2. ಸರಳವಾಗಿ ಅರ್ಥವಾಗುವಂತೆ ಬರೆದಿದ್ದೀರ

Leave a Reply

Back To Top