ಕವಿತೆ
ಹಬ್ಬದ ಸಂತೆ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಇನ್ನೇನು
ಹತ್ತಿರ ಹಬ್ಬದ ಕಾಲ
ಸಂತೆಗಳಲಿ ಮಾರಾಟಕೆ
ಪಂಚೆ ಸೀರೆ ಒಂದೆರಡು ಪಿಂಡಿ
ಮುತುವರ್ಜಿ ವಹಿಸಿ
ನೇಯತೊಡಗಿರುವನು
ನೇಕಾರ ಹಗಲು ರಾತ್ರಿ ಎನ್ನದೆ
ಮುಂದಿನ ನಾಲ್ಕಾರು ತಿಂಗಳ
ಹೊಟ್ಟೆಪಾಡಿಗೆ!
ಇನ್ನು ವಾರದಲ್ಲೆ
ಸಂತೆಗಳ ಸುರಿಮಳೆ…
ಅಷ್ಟರಲ್ಲಿ ಅದೆಂಥದೋ ಕಾಯೆಲೆ
ಜಗಕೆಲ್ಲ ಸುಂಟರಗಾಳಿಯ ಹಾಗೆ
ಹಬ್ಬಿ
ಅದೇನೋ ಸಂಜೆ ಕರ್ಫ್ಯೂ
ಅಂತ ಹೇರಿದರು
ಜೊತೆಜೊತೆಗೆ ಘಂಟೆ ಜಾಗಟೆ
ಬಾರಿಸಿರೆಂದರು
ದೀಪ ಬೆಳಗಿಸಿ ಕುಣಿಸಿದರು
ಎಲ್ಲರೊಡನೆ ತಾವೂ ಕೂಡಿಕೊಂಡರು
ಈ ನೇಕಾರರು
ಅಮಾಯಕರು…
ಹಾಗೆ ಕುಣಿಕುಣಿದು
ದೀಪ ಜಾಗಟೆಗಳ
ಶಬ್ದ ಬೆಳಕಿನಾಟದ ನಡುವೆಯಲಿ
ದಿಢೀರನೆ ಸಿಡಿಲು ಬಡಿದು
ಮರಗಳು ಬೆಂದು ಉರಿದ ಹಾಗೆ
ಲಾಕ್ ಡೌನ್! ಲಾಕ್ ಡೌನ್!
ಎಂದು ಗುಡುಗಿದರು
ನಾಡೆಲ್ಲ ಒಟ್ಟೊಟ್ಟಿಗೆ ಬಂದ್ ಬಂದ್!
ಮತ್ತೆ ಗುಡುಗುಟ್ಟಿದರು…
ಮೂಲೆಯಲಿ ಸದ್ದಿಲ್ಲದೆ ಕೂತಿದ್ದ
ಪಿಂಡಿಗಳು
ಇದ್ದಕ್ಕಿದ್ದಂತೆ ನೆಲಕ್ಕುರುಳಿ
ಅಂಗಾತ ಮಲಗಿಬಿಟ್ಟವು
ನೇಕಾರನ ಕಣ್ಣುಗಳು
ಅಸಹಾಯಕವಾಗಿ
ಆ ಪಿಂಡಿಗಳನೇ ನೆಟ್ಟಗೆ ದಿಟ್ಟಿಸಿ
ತಮಗೆ ತಾವೇ ಬಲವಾಗಿ ಒತ್ತಿ
ಮುಚ್ಚಿ
ಮೆಲ್ಲ ಮೆಲ್ಲ ಸುರಿದ ಕಣ್ಣೀರೊಡನೆ
ಉರುಳಿದವು ಒಂದೆರಡು
ಕೆಂಪು ಹನಿ…!
*********
ಕವಿತೆ ಬಹಳ ಚನ್ನಾಗಿದೆ. ಅಭಿನಂದನೆಗಳು ನೀಲಣ್ಣ
ಧನ್ಯವಾದಗಳು ರಮೇಶ್.