ವಿಶೇಷ ಲೇಖನ
ಪೂಜಿಸಲ್ಪಡುವ ದೇಶದಲ್ಲಿ ಮಹಿಳೆ ಎಷ್ಟು ಸುರಕ್ಷಿತಳು?
ಜಯಶ್ರೀ.ಜೆ. ಅಬ್ಬಿಗೇರಿ
ಇದು ಇಂದು ನಿನ್ನೆಯ ಕಥೆಯಲ್ಲ ಅನಾದಿ ಕಾಲದಿಂದಲೂ ಚಾಚೂ ತಪ್ಪದೇ ನಡೆದು ಕೊಂಡ ಬಂದ ಹೆಣ್ಣಿನ ವ್ಯಥೆ. ಹೆಣ್ಣನ್ನು ಸಾಕ್ಷಾತ್ ದೇವತೆಗೆ ಹೋಲಿಸಿ ಪೂಜಿಸಿ ಗೌರವಿಸುವ ನಾಡು ನಮ್ಮದು ಎಂದು ಹೆಮ್ಮೆಯಿಂದ ಹೇಳುವ ನಾವು ಹೆಣ್ಣಿನ ನಿಜ ಜೀವನದತ್ತ ಕಣ್ಣು ಹಾಯಿಸಿದರೆ ಕಣ್ಣೀರು ಕೆನ್ನೆ ತೋಯಿಸದೇ ಇರದು. ನಾಲ್ಕು ಗೋಡೆಗಳ ಮಧ್ಯೆ ಇದ್ದಾಗ ಆಕೆಯ ನೋವುಗಳು ಎಷ್ಟಿದ್ದವೋ ಅದಕ್ಕಿಂತ ಹೆಚ್ಚು ನೋವುಗಳು ಹೊಸ್ತಿಲಾಚೆ ಬಂದಾಗಲೂ ಕಾಡುತ್ತಿವೆ. ಪ್ರಯಾಣ ಮಾಡುವ ಬಸ್ಸು ರೈಲು ವಿಮಾನದಲ್ಲೂ ಕಿರುಕುಳಗಳು ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ. ಮಮತೆಯ ಮಾತೆಯಾಗಿ, ಅಕ್ಕರೆಯ ಅಕ್ಕ ತಂಗಿಯಾಗಿ ಮೋಹದ ಮಡದಿಯಾಗಿ ವಿವಿಧ ಪಾತ್ರಗಳಲ್ಲಿ ಪುರುಷರಿಗೆ ಮೀರಿ ಕಣ್ಮನ ಸೆಳೆಯುವ ಮಾನಿನಿ ಹೆಣ್ಣು. ಹೆಣ್ಣಿನಿಂದಲೇ ಪ್ರಪಂಚ ನಿಟ್ಟಿಸುವ ಪುರುಷ ಸಮೂಹ ಆಕೆಯ ಮಹತ್ವವನ್ನು ತಿರಸ್ಕರಿಸುವುದು ಯಾವ ನ್ಯಾಯ? ಜಗದ ಆನಂದವನ್ನು ಮೊಗೆ ಮೊಗೆದು ನೀಡುವ ನಾರಿಯನ್ನು ತೆವಲುಗಳಿಗೆ ಬಳಿಸಿಕೊಂಡು,ಕೀಳಾಗಿ ಕಡೆಗಣಿಸುವ ಬಹುತೇಕ ಪುರುಷರ ಧೋರಣೆಯನ್ನು ಬಲವಾಗಿ ಧಿಕ್ಕರಿಸಲೇಬೇಕೆಂದು ಅನ್ನಿಸದೇ ಇರದು. ಹೆಣ್ಣಿನ ವರ್ಣನೆ ಮಾಡದ ರಸಿಕರಿಲ್ಲ, ಕವಿಗಳಿಲ್ಲ, ವರ್ಣನಾಲೋಕಕ್ಕೆ ಜಾರದ ಪುರುಷ ಪುಂಗವರಿಲ್ಲ, ಕಲ್ಪನಾಲೋಕಕ್ಕೆ ಹಾರದ ಗಂಡಸರಿಲ್ಲ, ಭೋೀಗ ವಸ್ತುವೆಂದು ಬಯಸದವರಿಲ್ಲ. ಇಷ್ಟೆಲ್ಲ ಇದ್ದರೂ ಬದುಕಿನುದ್ದಕ್ಕೂ ತನ್ನ ಮಾಯೆಯ ಛಾಯೆ ಬಿಡದೇ ಮೂಡಿಸುವ ಹೆಂಗಳೆಯರನ್ನು ಬಗ್ಗು ಬಡಿಯುವುದು ಶೋಷಣೆಗೊಳಪಡಿಸುವುದು ಕಿರುಕುಳ ನೀಡುವುದು ಇನ್ನೂ ತಪ್ಪಿಲ್ಲ. ಬಾಳೆಲೆಯ ಹಾಸುಂಡು ಬೀಸಾಡುವ ಹಾಗೆ ಬೀಸಾಡುವವರು, ಮನಸ್ಸೋ ಇಚ್ಛೇ ಬಳಸಿಕೊಳ್ಳುವವರು, ಏನೇ ಮಾಡಿದರೂ ಎಷ್ಟೇ ಸಾಧಿಸಿದರೂ ನೀನು ಹೆಣ್ಣು ಗಂಡಿನ ಅಂಕಿತದಲ್ಲಿಯೇ ಇರಬೇಕೆಂದು ಮೀಸೆ ತಿರುವುವ ಗಂಡಸರೇನು ಕಡಿಮೆ ಇಲ್ಲ.
ಹೆಣ್ಣು ಎಂಬ ಕಾರಣಕ್ಕೆ
ಹೆಣ್ಣು ಎಂಬ ಕಾರಣಕ್ಕೆ ಆಕೆ ಮನೆಯಿಂದ ಹೊರಗೆ ಹೋಗುವುದನ್ನು ಮತ್ತು ದೂರದ ಊರುಗಳಿಗೆ ಪಯಣಿಸುವುದನ್ನು ನಿರ್ಬಂಧಿಸಲಾಗುತ್ತದೆ. ಸಂಪ್ರದಾಯವಾದಿಗಳು ಶಾಲೆಗೆ ಹೋಗದಂತೆ ತಡೆಯುತ್ತಿದ್ದಾರೆ. ದಾಖಲಾದ ಹೆಣ್ಣು ಮಕ್ಕಳು ವಿವಿಧ ಕಾರಣಗಳಿಂದ ಶಾಲೆಯಿಂದ ಹೊರಗುಳಿಯುತ್ತಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಉತ್ತೇಜಕಗಳನ್ನು(ಮಧ್ಯಾಹ್ನದ ಊಟ, ಉಚಿತ ಪುಸ್ತಕ, ಉಚಿತ ಸಮವಸ್ತ್ರ) ನೀಡುತ್ತ ಬಂದಿದೆ ಶಾಲೆಯಲ್ಲಿನ ಹಾಜರಾತಿ ಕಾಪಾಡಿಕೊಳ್ಳಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಷ್ಟೋ ಸಲ ಮನೆ ಮಂದಿಯೇ ನಿರ್ಭೀತಿಯಿಂದ ಎಲ್ಲವನ್ನೂ ಎದುರಿಸಲು ಧೈರ್ಯವನ್ನು ತುಂಬುವುದಿಲ್ಲ. ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುವುದೂ ಇಲ್ಲ. ದಿನವೂ ಕಿರುಕುಳ.ಮನಸ್ಸಿಗೆ ಕಿರಿಕಿರಿ. ಹೆಣ್ಣಾಗಿ ಯಾಕಾದರೂ ಹುಟ್ಟಿದೆನೇನೋ ಎನ್ನುವ ಎದೆಯ ನೋವು. ಹೆಣ್ಣಾಗಿ ಹುಟ್ಟಿದ್ದಕ್ಕೆ ಹಲವು ಕಡೆ ಕಡೆಗಣಿಸಲ್ಪಡುವುದು ಸಹಜ. ಹಾದಿಯಲ್ಲಿ ಹೋಗುವಾಗ ಚುಡಾಯಿಸದೇ ಇರುವವರು, ಕಣ್ಣು ಮಿಟಕಿಸದವರು ಇಲ್ಲ ಅಂತಿಲ್ಲ. ಹೆಣ್ಣನ್ನು ಅನುಮಾನಿಸದವರು ಅವಮಾನಿಸದವರು ಸಿಗುವುದು ವಿರಳವೇನಲ್ಲ. ಇದಕ್ಕಿಂತ ಮುಂದೆ ಹೋಗಿ ಅತಿ ಹೇಯ ಕೃತ್ಯವಾದ ಅತ್ಯಾಚಾರವನ್ನೂ ಎಸಗಿದ್ದಾರೆ. ಸಾಲದೆಂಬಂತೆ ಹತ್ಯೆಯನ್ನೂ ಮಾಡಿದ ದುಷ್ಟರು ಸಮಾಜದಲ್ಲಿ ರಾಜಾರೋಷವಾಗಿ ತಿರುಗುತ್ತಿದ್ದಾರೆ. ಇಂಥವರ ಉಪಟಳ ತಾಳದೇ ಗೂಡಿನಲ್ಲಿ ಕೂಡು ಹಾಕಿಕೊಂಡು ಬದುಕುವ ದುಸ್ಥಿತಿ ಹೆಣ್ಣಿಗಿದೆ ಎಂಬುದು ಸುಳ್ಳಲ್ಲ.
ಹೆಣ್ಣೆಂದರೆ ಹೊರೆ
ಕೊಟ್ಟ ಹೆಣ್ಣು ಕುಲಕ್ಕೆ ಹೊರತು ಎಂಬ ಮಾತಿನಂತೆ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ತಾರತಮ್ಯ ಕಾಣುತ್ತಿರುವುದು ಸಾಮಾನ್ಯವಾದರೂ ಖಂಡನೀಯ.ಆಕೆಯ ಓದು ಮತ್ತು ಬದುಕಿಗಿಂತ ಆಕೆಯ ಮದುವೆಯದ್ದೇ ದೊಡ್ಡ ಚಿಂತೆ. ಹೆಣ್ಣೆಂದರೆ ಹೊರೆ ಎಂದು ತಿಳಿದ ಸಾಕಷ್ಟು ಅಪ್ಪ ಅಮ್ಮಂದಿರು ಮದುವೆ ಮಾಡಿ ತಲೆ ಭಾರ ಇಳಿಸಿಕೊಂಡರಾಯಿತೆಂದು ಕಾಯುತ್ತಿರುತ್ತಾರೆ.ಇನ್ನು ಕಲಿತ ಹೆಣ್ಣು ಮಕ್ಕಳು ಉದ್ಯೋಗ ಮಾಡುತ್ತೇನೆಂದರೆ ದೊರೆಯುವ ಪ್ರೋತ್ಸಾಹ ಅಷ್ಟಕ್ಕಷ್ಟೆ. ಆಕೆಯ ಆರ್ಥಿಕ ಸ್ವಾವಲಂಬಿ ಕನಸಿನ ಬದುಕಿಗೆ ಕೊಳ್ಳಿ ಇಡುತ್ತಾರೆ. ಹಿಂದಿನ ಶತಮಾನಕ್ಕೆ ಹೋಲಿಸಿದರೆ ಶಿಕ್ಷಣ ಪಡೆದ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ ಆಗಿದೆ.(ಹತ್ತು ಪಟ್ಟು ಹೆಚ್ಚಾಗಿದೆ.) ಉದ್ಯೋಗಸ್ಥ ಮಹಿಳೆಯರ ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೂ ಮಹಿಳೆಯರ ವಿಷಯದಲ್ಲಿ ಎಲ್ಲವೂ ಸರಿಯಿಲ್ಲ. ಬದಲಾಗಬೇಕಾದದ್ದು ಬಹಳಷ್ಟಿದೆ. ಬದಲಿಸುವ ಮನಸ್ಸುಗಳು ಮುಂದಿಟ್ಟ ಹೆಜ್ಜೆ ಹಿಂದಿಡದ ದೈರ್ಯ ಸಂಕಲ್ಪ ಮಾಡಬೇಕಿದೆ.
ಅತ್ಯಂತ ಅಪಾಯಕಾರಿ
ಭಾರತದಂತಹ ಶ್ರೀಮಂತ ಸಂಸ್ಕøತಿ ಹೊಂದಿದ ದೇಶದಲ್ಲಿ ಹೆಣ್ಣಿಗೆ ಅನ್ಯಾಯ ಅತ್ಯಾಚಾರ ಅಭದ್ರತೆ ಕಾಡುತ್ತಿದೆ.ಹೆಣ್ಣಿನ ಮೇಲೆ ಹಾಡುಹಗಲೆ ಬಲಾತ್ಕಾರ ದೌರ್ಜನ್ಯ ಎಸುಗುವುದು ತಲೆ ತಗ್ಗಿಸುವ ಸಂಗತಿ.ವಿಚಿತ್ರ ಸಂಗತಿಯೆಂದರೆ ನಾರಿಯರು ಅನೇಕ ವಿಷಯಗಳಲ್ಲಿ ಇರಿಸು-ಮುರಿಸುಗಳ ನಡುವೆ ಉಸಿರುಗಟ್ಟಿದಂತೆ ಬದುಕನ್ನು ದೂಕುತ್ತಿರುವುದು ಕಂಡು ಬರುತ್ತದೆ. ಮನೆಯಲ್ಲಾಗಲಿ ಉದ್ಯೋಗ ಸ್ಥಳದಲ್ಲಾಗಲಿ ಮಹಿಳೆ ಸುರಕ್ಷಿತವಾಗಿಲ್ಲವೆಂಬುದು ಸಾಬೀತಾಗಿದೆ. ಅತ್ಯಾಚಾರಕ್ಕೆ ಒಳಪಟ್ಟ ಹೆಣ್ಣು ಸಮಾಜಕ್ಕೆ ಹೆದರಿ, ಅವಮಾನ ಎದುರಿಸಲಾರದೇ ಆತ್ಮಹತ್ಯೆಗೆ ಶರಣಾಗುತ್ತಾಳೆ. ತಾನು ಮಾಡದ ತಪ್ಪಿಗೆ ಜೀವನಪರ್ಯಂತ ಗೋಳು ಅನುಭವಿಸುತ್ತಾಳೆ. ಇದಕ್ಕೆ ವಿರೋಧಾಭಾಸವೆಂಬಂತೆ ಅತ್ಯಾಚಾರವೆಸಗಿದ ದುರುಳರು ಮತ್ತದೇ ದುಷ್ಕøತ್ಯದಲ್ಲಿ ಅಟ್ಟಹಾಸವನ್ನು ಮೆರೆಯುತ್ತಾರೆ. ಪ್ರಸ್ತುತ ಸಮಾಜದಲ್ಲಿ ಅತ್ಯಾಚಾರದ ಸಂಖ್ಯೆ ಏರುತ್ತಲೇ ಇದೆಯೆಂದು ಅಧ್ಯಯನಗಳು ಸಮೀಕ್ಷೆಗಳು ತಿಳಿಸಿವೆ. ಇದು ನಿಜಕ್ಕೂ ಆತಂಕಕಾರಿ ಸಂಗತಿ. ವಾಸ್ತವದಲ್ಲಿ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ಎನ್ನುವಂಥ ಅಪಖ್ಯಾತಿಯನ್ನು ಜಾಗತಿಕ ಮಟ್ಟದಲ್ಲಿ ಪಡೆಯುತ್ತಿದೆ. ಅದಕ್ಕೆ ಕಾರಣ ಇತ್ತಿಚಿಗೆ ನಡೆಯುತ್ತಿರುವ ಭೀಕರ ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು.
ಏನು ಹೇಳುತ್ತವೆ ಅಂಕಿ ಅಂಶಗಳು?
ಕೇಂದ್ರ ರಾಜ್ಯ ಸರ್ಕಾರಗಳು ಮಹಿಳೆಯರ ಸುರಕ್ಷತೆಗಾಗಿ ಹತ್ತು ಹಲವು ಕ್ರಮಗಳನ್ನೂ ಕೈಗೊಂಡಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುವ ಬದಲು ಹೆಚ್ಚುತ್ತಿವೆ. 2012ರ ಬಳಿಕ ದೇಶಾದ್ಯಂತ ಹೆಚ್ಚಿದ ಅತ್ಯಾಚಾರಗಳು ತಗ್ಗಿದ ಶಿಕ್ಷೆಯ ಪ್ರಮಾಣದ ದುಷ್ಪರಿಣಾಮವನ್ನು ಸಾರುತ್ತಿವೆ. ಈ ಬೆಳವಣಿಗೆಗೆ ನಿದರ್ಶನವೆಂಬಂತೆ 2019ರ ಅವಧಿಯಲ್ಲೂ ಮಹಿಳೆಯರ ವಿರುದ್ಧ ಅಪರಾಧ ಕೃತ್ಯಗಳು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಎನ್ಸಿಆರ್ ಬಿ)ವರದಿ ಮಾಡಿದೆ. ದೇಶದಲ್ಲಿ ಪ್ರತಿದಿನ ಸರಾಸರಿ 87 ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ.ಪ್ರತಿ 15 ನಿಮಿಷಕ್ಕೆ ಒಬ್ಬ ಮಹಿಳೆಯ ಮೇಲೆ ಅತ್ಯಚಾರ ನಡೆಯುತ್ತಿದೆ ಎಂದು 2017 ರ (ಎನ್ ಸಿ ಆರ್ ಬಿ) ತಿಳಿಸಿದೆ. 1971ರಿಂದೀಚೆಗೆ ಬಾರತದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು 1200% ಏರಿಕೆಯಾಗಿವೆ. 1 ಲಕ್ಷ ಮಹಿಳೆಯರಲ್ಲಿ 62.4ರಷ್ಟು ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಎಂಬ ಮಾಹಿತಿಗಳು ಬೆಚ್ಚಿಬೀಳಿಸುತ್ತವೆ. ಮಹಿಳೆ ತನ್ನ ಆಧೀನದಲ್ಲಿರಬೇಕೆಂದು 21.84 ರಷ್ಟು ಹಲ್ಲೆ ಪ್ರಕರಣಗಳು ನಡೆದಿವೆ. 2018ರಿಂದ ದಾಖಲಾದ ಅಪರಾಧ ಕೃತ್ಯಗ¼ನ್ನು ಹೋಲಿಸಿದಾಗ 2019 ರಲ್ಲಿ ಒಟ್ಟಾರೆ ಪ್ರಮಾಣದಲ್ಲಿ ಶೇ 7.3ರಷ್ಟು ಏರಿಕೆಯಾಗಿದೆ. ಆ ಪೈಕಿ ಉತ್ತರ ಪ್ರದೇಶವೊಂದರಲ್ಲೇ 59,583 ಪ್ರಕರಣಗಳು ವರದಿಯಾಗಿವೆ. 2017 g ಅಂತ್ಯದವರೆಗೆ 1,28,000 ಪ್ರಕರಣಗಳ ವಿಚಾರಣೆ ಬಾಕಿ ಇವೆ. ಮತ್ತು ಶೇ 32 ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ ಸಮೀಕ್ಷೆ ಅಪ್ಘಾನಿಸ್ತಾನ ಮತ್ತು ಸಿರಿಯಾಗಿಂತ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂದು ತಿಳಿಸಿತ್ತು. ಹಾಗೆಯೇ ಇನ್ನೊದು ವರದಿಯು ಒಬ್ಬಂಟಿ ಹೆಣ್ಣುಮಕ್ಕಳ ಪ್ರವಾಸಕ್ಕೆ ಭಾರತ ವಿಶ್ವದಲ್ಲಿ 9 ನೇ ಅಪಾಯಕಾರಿ ದೇಶ ಎಂದಿದೆ.
ಮಾಡಬೇಕಾದ್ದೇನು?
ಗಂಡಸಿನ ದುಶ್ಚಟಗಳು ದುರಭ್ಯಾಸಗಳು ಆತನ ಸ್ವ ನಿಯಂತ್ರಣ ತಪ್ಪಿಸುತ್ತಿವೆ. ಕೊಲೆ ಸುಲಿಗೆ ಅತ್ಯಾಚಾರದಂತಹ ಅಪರಾಧ ಲೋಕಕ್ಕೆ ತಳ್ಳುತ್ತಿವೆ. ಈ ದಿಶೆಯಲ್ಲಿ ಗಂಡು ಮಕ್ಕಳಿಗೆ ಸಂಸ್ಕøತಿ ಸಂಸ್ಕಾರದ ಪಾಠ ಕಲಿಸುವ ಅನಿವಾರ್ಯತೆಯಿದೆ. ಜಾಗೃತರಾಗಿ ಸನ್ನಡತೆಯನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಕಾನೂನಾಗಲಿ ಮಹಿಳಾ ರಕ್ಷಣಾ ವೇದಿಕೆಯಾಗಲಿ ಇಂಥ ಅಮಾನವೀಯ ಕೃತ್ಯಗಳನ್ನು ಎಂದಿಗೂ ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂಬುದನ್ನು ಮನಗಂಡು ನಡೆದುಕೊಳ್ಳಬೇಕು. ಗಂಡು ಹೆಣ್ಣೆಂಬ ತಾರತಮ್ಯ ತೊರೆದು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಬೇಕಿದೆ. ಹೆಂಗಳೆಯರು ವಿದ್ಯಾರ್ಥಿನಿಯರು ಹೆದರದೇ ಸದಾ ಎಚ್ಚರಿಕೆಯಲ್ಲಿರಬೇಕು. ಮೊಬೈಲಿನಲ್ಲಿ ಸುರಕ್ಷತಾ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದು ಅತ್ಯುತ್ತಮ ಮಾರ್ಗ. ಇದರಿಂದ ಕೇವಲ ಏಳು ನಿಮಿಷಗಳಲ್ಲಿ ಪೋಲಿಸರು ಸ್ಥಳಕ್ಕೆ ಧಾವಿಸಿ ರಕ್ಷಿಸುವುದಕ್ಕೆ ಸಹಕಾರಿಯಾಗುತ್ತದೆ.ಸ್ವರಕ್ಷಣೆಗಾಗಿ ಕರಾಟೆ ಇನ್ನಿತರ ಕಲೆಗಳನ್ನು ಕಲಿತುಕೊಳ್ಳಬೇಕು. ಆಧುನಿಕತೆ ಕಾಲದಲ್ಲಿದ್ದೇವೆ ಎಂದು ಬೀಗುವ ಜಮಾನಾದಲ್ಲೂ ಹೆಣ್ಣಿನ ಸ್ಥಿತಿಗತಿ ಸ್ಥಾನಮಾನ ಸುರಕ್ಷತೆ ಸಮಾನತೆ ಇನ್ನಷ್ಟು ಬಿಗಡಾಯಿಸಿದೆ ಎಂಬುದು ಶೋಚನೀಯ ಸಂಗತಿ. ನಮ್ಮ ಸಂವಿಧಾನ ಸಮಾನತೆ ಬಯಸುತ್ತದೆ. ಹೀಗಿದ್ದಾಗ್ಯೂ ಲಿಂಗ ಅಸಮಾನತೆ ಅಭದ್ರತೆ ಕಗ್ಗಂಟಿನ ಸಮಸ್ಯೆಯಾಗಿ ಬೆಳೆದಿದೆ. ಮುಳ್ಳಿನ ಮೇಲೆ ಬಿದ್ದ ಬಟ್ಟೆಯನ್ನು ಸಾವಕಾಶವಾಗಿ ತೆಗೆದಂತೆ ಹೆಣ್ಣನ್ನು ದುಷ್ಟರಿಂದ ರಕ್ಷಿಸಬೇಕು. ಹಾಗಾದಾಗ ಮಾತ್ರ ಮಾನಿನಿ ಮುಖದ ಮೇಲೆ ಸುಂದರ ನಗೆ ಮೂಡಬಲ್ಲದು.
***********************************
Super mam
ಅತ್ಯಂತ ಒಳ್ಳೆಯ ಲೇಖನ ಮೇಡಂ… ಎಷ್ಟೊಂದು ಸತ್ಯಗಳಿವೆ…