ದಾರಾವಾಹಿ

ಅದ್ಯಾಯ-10

Person Holding Black Ceramic Pig Coin Bank

ಸಂತಾನಪ್ಪನ ಶ್ರೀಮಂತಿಕೆಯನ್ನು ಕಂಡು ಶಂಕರ ಬೆಕ್ಕಸ ಬೆರಗಾಗಿದ್ದ! ಹಿಂದೊಮ್ಮೆ ತನ್ನೊಂದಿಗೆ ಮೂರುಕಾಸಿಗೆ ದುಡಿಯುತ್ತಿದ್ದಂಥ ಆ ಗಂಡ, ಹೆಂಡತಿ ಒಮ್ಮೆ ಹೇಳದೆ ಕೇಳದೆ ಓಡಿ ಹೋಗಿದ್ದು ಮಾತ್ರವಲ್ಲದೇ ತನ್ನ ಬದ್ಧ ವೈರಿ ರಘುಪತಿಯೊಂದಿಗೆ ಸೇರಿಕೊಂಡಿದ್ದನ್ನು ತಿಳಿದು ಅವರ ಮೇಲೆ ವಿಪರೀತ ಕುಪಿತನಾಗಿದ್ದ. ಆದರೆ ರಘುಪತಿಯೊಂದಿಗೆ ಮರಳಿ ಜಗಳವಾಡಲು ಅವನಿಗೆ ಧೈರ್ಯವಿರಲಿಲ್ಲ. ಆದ್ದರಿಂದ ತಾನು ಮನಸ್ಸು ಮಾಡಿದರೆ ಸಂತಾನಪ್ಪನಂಥ ಸಾವಿರ ಕೂಲಿಯಾಳುಗಳನ್ನು ಉತ್ತರ ಕರ್ನಾಟಕದಿಂದಲ್ಲದೇ ಉತ್ತರ ಭಾರತದಿಂದಲೂ ತರಿಸಿಕೊಳ್ಳಬಲ್ಲೆ! ಎಂದು ತನ್ನನ್ನು ತಾನೇ ಸಮಾಧಾನಿಸಿಕೊಂಡವನು ತನ್ನನ್ನು ತೊರೆದು ಹೋಗುತ್ತಿದ್ದ ಇತರ ಕೂಲಿಯಾಳುಗಳಂತೆಯೇ ಸಂತಾನಪ್ಪ ದಂಪತಿಯನ್ನೂ ಕಡೆಗಣಿಸಿದ್ದ.

   ಆದರೆ ಅದೇ ಸಂತಾನಪ್ಪ, ಡೇಸಾರ ಮನೆ ಸೇರಿಕೊಂಡಿದ್ದನ್ನೂ ಅವರ ಐಶ್ವರ್ಯವೆಲ್ಲ ಅವನ ಪಾಲಾದುದನ್ನೂ ಮತ್ತು ಆನಂತರ ಅವನು ತನ್ನೆದುರಿಗೇ ಆಗರ್ಭ ಶ್ರೀಮಂತನಂತೆ ಮೆರೆಯತೊಡಗಿದ್ದನ್ನೂ ಕಾಣುತ್ತ ಬಂದ ಶಂಕರ ಯದ್ವಾತದ್ವ ಹೊಟ್ಟೆ ಉರಿಸಿಕೊಂಡ. ಅಷ್ಟಲ್ಲದೇ ಅವನೂ ತನ್ನಂತೆ ಮನೆ, ಕಟ್ಟಡ ಕಾಮಗಾರಿಯ ಗುತ್ತಿಗೆ ವಹಿಸಿಕೊಳ್ಳಲಾರಂಭಿಸಿದ್ದಂತೂ ಶಂಕರನನ್ನು ರೊಚ್ಚಿಗೆಬ್ಬಿಸಿಬಿಟ್ಟಿತು. ಆದ್ದರಿಂದ, ಒಂದೆರಡು ವರ್ಷಗಳ ಹಿಂದಷ್ಟೇ ಯಾವನೋ ಭಿಕಾರಿಯೊಬ್ಬ ತನ್ನಲ್ಲಿಗೆ ಕೂಲಿನಾಲಿಗೆ ಬಂದು, ತನಗೆ ಸಲಾಂ ಹೊಡೆಯುತ್ತಿದ್ದಂಥವನು ಇವತ್ತು ತನಗೇ ಪ್ರತಿಸ್ಪರ್ಧಿಯಾಗಿ ನಿಂತಿದ್ದಾನೆ ಮಾತ್ರವಲ್ಲದೇ ನಮ್ಮೂರಿವರ ಆಸ್ತಿಪಾಸ್ತಿಯನ್ನೇ ಲಪಟಾಯಿಸಿ ತನ್ನ ಕಣ್ಣಮುಂದೆಯೇ ಮೆರೆದಾಡುತ್ತಿದ್ದಾನೆಂದರೆ ಅವನಿಗೆಷ್ಟು ಅಹಂಕಾರವಿರಬೇಕು! ಅಂಥವನನ್ನು ಸುಮ್ಮನೆ ಬಿಡಲಿಕ್ಕುಂಟಾ? ಈಶ್ವರಪುರದ ಜನರು ನಾವೆಲ್ಲ ಅಷ್ಟೊಂದು ಮೂರ್ಖರೆಂದು ಭಾವಿಸಿದನೇ ಆ ಬೋಳಿಮಗ! ಈ ಊರಲ್ಲೇ ಹುಟ್ಟಿ ಬೆಳೆದವನು ನಾನು. ನನ್ನ ಈಗಿನ ಹಂತಕ್ಕೆ ತಲುಪಬೇಕಾದರೆ ಅದೆಷ್ಟು ಕಷ್ಟಪಟ್ಟಿದ್ದೇನೆ! ಆದರೂ ಒಂದೊಳ್ಳೆಯ ತೃಪ್ತಿಯ ಮಟ್ಟಕ್ಕಿನ್ನೂ ಬೆಳೆಯಲಾಗಲಿಲ್ಲ. ಅಂಥದ್ದರಲ್ಲಿ ಯಾವನೋ ಒಬ್ಬ ಲಾಟರಿ ಹೊಡೆದಂತೆ ತನ್ನ ಕಣ್ಣೆದುರೇ ಇನ್ನೊಬ್ಬರ ಸಂಪತ್ತನ್ನು ಅನುಭವಿಸಲು ಬಿಟ್ಟೇನೇ…? ಅದೂ ತನ್ನ ಶತ್ರುವಿನ ಸಂಗ ಮಾಡಿದಂಥವನಿಗೆ! ಖಂಡಿತಾ ಇಲ್ಲ. ಹೇಗಾದರೂ ಮಾಡಿ ಅವನಿಂದ ಡೇಸಾರ ಆಸ್ತಿಯ ಸಣ್ಣ ಕವಡೆಯನ್ನೂ ಬಿಡದೆ ಕಿತ್ತುಕೊಳ್ಳಬೇಕು! ಎಂದು ಶಂಕರ ಒಮ್ಮೆ ಉದ್ರಿಕ್ತನಾಗಿ ಯೋಚಿಸಿದವನು ಸಂತಾನಪ್ಪನನ್ನು ಹೊಸಕಿ ಹಾಕಲು ವ್ಯವಸ್ಥಿತ ಸಂಚೊಂದನ್ನು ರೂಪಿಸಿದ. ಸಂತಾನಪ್ಪನಂತೆಯೇ ತನ್ನ ಕೈಕೆಳಗೆ ನೂರಾ ಒಂದನೆಯ ಆಳಾಗಿ ದುಡಿಯುತ್ತ ಕಾರಣವಿಲ್ಲದೆ ತನ್ನಿಂದ ಒದೆಸಿಕೊಳ್ಳುತ್ತ ಕೊನೆಗೊಮ್ಮೆ ರೋಸಿ ಓಡಿ ಹೋಗಿದ್ದಂಥ ಹನುಮಪ್ಪ ಎಂಬವನಿಂದ ತನ್ನ ಕಾರ್ಯ ಸಾಧಿಸಿಕೊಳ್ಳಲು ಮುಂದಾದ. ಆದ್ದರಿಂದ ಒಬ್ಬ ಕೂಲಿಯಾಳಿನೊಂದಿಗೆ, ಹನುಮಪ್ಪ ಕೂಡಲೇ ತನ್ನನ್ನು ಕಾಣಲು ಬರುವಂತೆ ಹೇಳಿ ಕಳುಹಿಸಿದ.

   ಆದರೆ ಶಂಕರನ ಕಿಡಿಗೇಡಿತನದ ಅರಿವಿದ್ದ ಹನುಮಪ್ಪನಿಗೆ ಅವನ ಹೆಸರೆತ್ತುತ್ತಲೇ ಚೇಳು ಕುಟುಕಿದಂತಾಯಿತು. ಅವನು ಹೇಳಿಕೆ ತಂದವನನ್ನು ಕೋಪದಿಂದ ಧುರುಗುಟ್ಟುತ್ತ, ‘ಹೇ, ಹೋಗಲೇ ಅವನೌವ್ವನಾ! ಸತ್ತರೂ ಇನ್ನೊಂದ್ ದಪಾ ಆ ಹಡೀ ಸೂಳೀಮಗನ ಮಖಾ ನೋಡಕ್ಕಿಲ್ಲಂತ ಓಗೇಳು ಅವ್ನುಗೇ…!’ ಎಂದು ಗದರಿಸಿಬಿಟ್ಟ. ಕೆಲಸದಾಳು ಹಾಗೆಯೇ ಹಿಂದಿರುಗಿದ. ಆದರೆ ಹನುಮಪ್ಪ ಬೈದುದನ್ನು ಶಂಕರನಿಗೆ ಹೇಳಲಿಲ್ಲ. ಬದಲಿಗೆ, ‘ಅವ್ನು ಬರಾಕಿಲ್ಲಾಂದ ಧಣೇರಾ…!’ ಎಂದಷ್ಟೆ ಹೇಳಿದ. ತನ್ನ ಆದೇಶವನ್ನು ತಿರಸ್ಕರಿಸಿದ ಹನುಮಪ್ಪನ ಕೊಬ್ಬನ್ನು ನೆನೆದ ಶಂಕರನಿಗೆ, ಈ ಕ್ಷಣವೇ ಹೋಗಿ ಆ ಬೇವರ್ಸಿಯನ್ನು ಹೊತ್ತು ತಂದು ತುಳಿದು ಹಾಕಲಾ…? ಎಂದೆನ್ನಿಸಿತು. ಆದರೂ ‘ಕಾರ್ಯವಾಸಿ ಕತ್ತೆ ಕಾಲು!’ ಎಂದುಕೊಂಡು ಅವುಡುಗಚ್ಚಿದ. ಆವತ್ತೊಂದು ಭಾನುವಾರ ಸಂಜೆ ತಾನೇ ಖುದ್ದಾಗಿ ಮಸಣದಗುಡ್ಡೆಯ ಹನುಮಪ್ಪನ ಗುಡಿಸಲಿನತ್ತ ಹೊರಟ. ಹನುಮಪ್ಪ ಆಹೊತ್ತು ಕುಡಿದು ಮತ್ತನಾಗಿ ತನ್ನ ಕಾಲೋನಿಯ ಅಶ್ವತ್ಥಮರದ ಕಟ್ಟೆಯಲ್ಲಿ ಕುಳಿತುಕೊಂಡು ನೆರೆಕರೆಯವರೊಡನೆ ಪಟ್ಟಾಂಗ ಹೊಡೆಯುತ್ತಿದ್ದ. ಶಂಕರನ ಕಾರು ಬಂದು ಮರದ ಹತ್ತಿರ ನಿಲ್ಲುತ್ತಲೇ ಬೆಚ್ಚಿಬಿದ್ದು ಎದ್ದು ನಿಂತ. ‘ಮೊನ್ನೆ ತಾನು ಸಿಟ್ಟಿನ್ ಬರದಾಗ ಈ ದುಷ್ಟನಿಗೆ ಬೈದಿದ್ದನ್ನು ಇವನ ಎಂಚಿಲು ನೆಕ್ಕುವ ಆ ನಾಯಿ ಹಾಗೆಯೇ ಒದರಿಬಿಟ್ನೇನೋ! ಇವ ಮೊದಲೇ ತಲೆಕೆಟ್ಟ ಮುಳ್ಳುಹಂದಿ. ಈಗ ನೆರೆಕರೆಯವರ ಮುಂದೆ ಅದೇನ್ ಮಾಡ್ತಾನೋ…?’ ಎಂದು ಯೋಚಿಸಿ ತಣ್ಣಗೆ ಬೆವರಿದ.

   ಶಂಕರ ಗಂಭೀರವಾಗಿ ಕಾರಿನಿಂದಿಳಿದವನು ಹನುಮಪ್ಪನನ್ನೊಮ್ಮೆ ದುರುಗುಟ್ಟಿ ನೋಡಿದ. ಆಗ ಇನ್ನಷ್ಟು ಕುಗ್ಗಿದ ಅವನ ದೃಷ್ಟಿಯು ತಟ್ಟನೆ ನೆಲಕಚ್ಚಿತು. ‘ಲೇ, ಮಗನಾ ಲಘೂನ ಓಡಿ ಹೋಗಲೇ ಇಲ್ಲಿಂದ…!’ ಎಂದು ಅವನೊಳಗೆ ಯಾರೋ ಕೂಗಿ ಹೇಳಿದಂತಾಯಿತು. ಪಟ್ಟನೇ ತಲೆ ಎತ್ತಿ ಶಂಕರನತ್ತ ನೋಡಿದ. ಆದರೆ ಅವನಾಗಲೇ ಇವನೆದುರು ಬಂದು ನಿಂತಿದ್ದ. ಹನುಮಪ್ಪ ದೆವ್ವ ದರ್ಶನವಾದಂತೆ ಬೆದರಿ ಕುಸಿದು ಬೀಳುವುದೊಂದೇ ಬಾಕಿಯಿತ್ತು! ಅದೇ ಹೊತ್ತಿಗೆ ಅವನೊಂದಿಗೆ ಕುಳಿತಿದ್ದ ನೆರೆಕರೆಯವರು, ‘ಈಗೇನೋ ಗಮ್ಮತ್ತು ನಡೆಯಕೈತಿ!’ ಎಂದು ಕುತೂಹಲ, ಭಯದಿಂದ ರಪ್ಪನೆದ್ದವರು ಶಂಕರನತ್ತ ಹಲ್ಲು ಗಿಂಜುತ್ತ ಹಿಂದೆ ಸರಿದು ನಿಂತು ಅವನಾಟಕ್ಕೆ ಅನುವು ಮಾಡಿಕೊಟ್ಟರು.

‘ಯಾಕಾ ಹನುಮಪ್ಪಾ ಆವತ್ತು ಹೇಳದೆ ಕೇಳದೆ ಕೆಲಸ ಬಿಟ್ಟು ಹೋದವನದ್ದು ಆಮೇಲೆ ಪತ್ತೇನೇ ಇಲ್ಲವಲ್ಲಾ ಮಾರಾಯಾ?’ ಎಂದು ಶಂಕರ ಮುಗುಳ್ನಗುತ್ತ ಪ್ರಶ್ನಿಸಿದ. ಆಗ ಹನುಮಪ್ಪನಿಗೆ ಜೀವ ಬಂದಂತಾಯಿತು. ಆದರೂ ವಿಪರೀತ ಭಯಪಟ್ಟಿದ್ದರಿಂದಲೋ ಏನೋ ಅವನ ಯೋಚನೆಯೇ ನಿಂತುಹೋಗಿತ್ತು. ಶಂಕರನ ಮಾತಿಗೆ ಪಕ್ಕನೇ ಏನುತ್ತರಿಸಬೇಕೆಂದು ತಿಳಿಯದೆ, ‘ಹ್ಞಾಂ… ಅದೂ, ಹಾಗೇನಿಲ್ರೀ ಧಣೇರಾ…!’ ಎಂದು ಹಲ್ಲು ಗಿಂಜಿದ.

‘ಎಂಥದು ಹಾಗೇನಿಲ್ಲ? ನನ್ನೊಂದಿಗೆ ನೀನು ಎಷ್ಟು ವರ್ಷಗಳಿಂದ ದುಡಿಯುತ್ತಿದ್ದಿ ಮಾರಾಯಾ? ಆದರೂ ನನ್ನ ಸ್ವಭಾವ ಎಂಥದ್ದು ಅಂತ ಅರ್ಥವಾಗಲಿಲ್ಲವಲ್ಲಾ ನಿಂಗೆ…? ಆವತ್ತೇನೋ ಕೋಪದ ಭರದಲ್ಲಿ ಎರಡೇಟು ಹೊಡೆದುಬಿಟ್ಟೆ. ಅಷ್ಟಕ್ಕೇ ಎದ್ದು ಹೋಗಿಬಿಡುವುದಾ! ಆನಂತರ ನಾನೆಷ್ಟು ಸಂಕಟಪಟ್ಟೆ ಅಂತ ನಿನಗೇನಾದರೂ ಗೊತ್ತುಂಟಾ?’ ಎಂದು ವಿಷಾದ ವ್ಯಕ್ತಪಡಿಸಿದ.

ಶಂಕರನ ಕುತಂತ್ರ ಅರಿಯದ ಅಮಾಯಕ ಹನುಮಪ್ಪ ಅವನ ಶರಣಾಗತಿಯನ್ನು ಕಂಡು ವಿಸ್ಮಯಗೊಂಡ. ಬಳಿಕ, ‘ಎಷ್ಟಾದರೂ ಕಷ್ಟಕಾಲದಲ್ಲಿ ಕೆಲ್ಸ ಕೊಟ್ಟು ಕಾಪಾಡ್ದ ಧಣಿ ಇವ್ರು. ಅಷ್ಟಲ್ಲದೇ ಸ್ವತಃ ತಾವೇ ಹುಡುಕೊಂಬಂದು ತಪ್ಪೊಪ್ಕೊಂಡಿದ್ದಾರೆ. ಇಂಥವರನ್ನು ಬೈದ್ ಬಿಟ್ನಲ್ಲ!’ ಎಂದು ಕೊರಗಿ, ಸಂಕೋಚದಿಂದ ಹಿಡಿಯಾಗಿ ಏನೋ ಹೇಳಲು ಬಾಯಿ ತೆರೆದ. ಅಷ್ಟರಲ್ಲಿ, ‘ನೋಡು ಹನುಮಪ್ಪ, ಇನ್ನೇನೂ ಮಾತಾಡಬೇಡ. ನನಗೆ ನಿನ್ನ ಅವಶ್ಯಕತೆ ತುಂಬಾ ಇದೆ. ನಾಳೆಯಿಂದ ಮರುಮಾತಾಡದೆ ಕೆಲಸಕ್ಕೆ ಬಂದುಬಿಡು. ಹ್ಞಾಂ, ಇನ್ನೊಂದು ಮಾತು. ಇಷ್ಟು ವರ್ಷ ನನ್ನೊಂದಿಗೆ ಕೂಲಿಯವನಾಗಿ ದುಡಿದೆ. ಆದರೆ ನಾಳೆಯಿಂದ ಮೇಸ್ತ್ರಿಯಾಗಿ ದುಡಿಯಬೇಕು. ಅದು ನಿನ್ನಿಂದ ಸಾಧ್ಯವಾ?’ ಎಂದು ಹಸಿದ ನಾಯಿಯ ಮುಂದೆ ಮಾಂಸದ ಚೂರನ್ನೆಸೆದಂತೆ ಆಸೆ ತೋರಿಸಿದ. ಮೇಸ್ತ್ರಿ ಎಂದ ಕೂಡಲೇ ಹನುಮಪ್ಪ ಖುಷಿಯಿಂದ ಆಕಾಶಕ್ಕೆ ನೆಗೆದುಬಿಟ್ಟ. ಏಕೆಂದರೆ ಅವನು ಈಶ್ವರಪುರಕ್ಕೆ ಕಾರ್ಮಿಕನಾಗಿ ಬಂದು ದುಡಿಯಲಾಂಭಿಸಿ ಹದಿನೈದು ವರ್ಷಗಳು ಕಳೆದಿದ್ದವು. ಮನೆ, ಕಟ್ಟಡ ಕಟ್ಟುವ ಕೆಲಸವೆಲ್ಲವನ್ನೂ ಕಲಿತಿದ್ದ. ಇಂದಲ್ಲ ನಾಳೆ ದೊಡ್ಡ ಮೇಸ್ತ್ರಿಯಾಗಬೇಕು ಎಂಬ ಕನಸನ್ನೂ ಕಾಣುತ್ತಿದ್ದ. ಅದಕ್ಕಾಗಿ ಹಲವು ಗುತ್ತಿಗೆದಾರರೊಡನೆ ಆಗಾಗ ಅಂಗಲಾಚುತ್ತಲೂ ಇದ್ದ. ಆದರೆ ಅವರು ಯಾರೂ ಇವನ ಕೆಲಸದ ಮೇಲೆ ವಿಶ್ವಾಸಬಾರದೆ ನಿರಾಕರಿಸುತ್ತಿದ್ದರು. ಹಾಗಾಗಿ ಹೊಟ್ಟೆಪಾಡಿಗೆ ಮಾತ್ರವೇ ಎಂಬಂತೆ ದುಡಿಯಲು ಹೋಗುತ್ತಿದ್ದ. ಇಂದು ಶಂಕರನಂಥ ದೊಡ್ಡ ಗುತ್ತಿಗೆದಾರನೊಬ್ಬ, ‘ನನ್ನ ಮೇಸ್ತ್ರಿಯಾಗುತ್ತೀಯಾ?’ ಎನ್ನುತ್ತಿದ್ದಾನೆ! ಎಂದು ಯೋಚಿಸಿದವನು ಆನಂದದಿಂದ ಉಬ್ಬಿ ಹೋದ.

   ನಿಜ ಹೇಳಬೇಕೆಂದರೆ ಆಗ ಶಂಕರನಿಗೂ ಮೇಸ್ತ್ರೀಗಳ ಜರೂರತ್ತಿತ್ತು. ಆದ್ದರಿಂದಲೇ ಅವನು ಒಂದೇ ಹೊಡೆತಕ್ಕೆ ಎರಡು ಮಿಕಗಳನ್ನು ಹೊಡೆಯುವ ಹುನ್ನಾರದಿಂದ ಬಂದಿದ್ದ. ಆದರೆ ಕುಕ್ಕುಟಗಳಂತೆ ತಂತಮ್ಮ ಕಾಲ ಬುಡಕ್ಕೇ ಕೆದಕಿಕೊಳ್ಳುವಂಥ ಬಂಡವಾಳಶಾಹಿಗಳ ಸ್ವಾರ್ಥ, ಕುತ್ಸಿತ ಬುದ್ಧಿಯನ್ನು ಒಂದಷ್ಟು ಬಡವರ್ಗವು ಎಂದೂ ತಿಳಿಯುವ ಗೋಜಿಗೆ ಹೋಗುವುದಿಲ್ಲ ಅಥವಾ ತಿಳಿದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬಂತೆ ಹನುಮಪ್ಪನೂ ಹಿಂದುಮುಂದು ಯೋಚಿಸದೆ, ‘ಇಲ್ಲ ಧಣೇರಾ, ಆವತ್ತು ನೀವೊಂದೇಟು ಬಡ್ದದ್ದು ನನ್ನ ಒಳ್ಳೆಯದಕ್ಕಾತು ಅಂತ ತಿಳಕೊಂಡಿನ್ರೀ. ಆತ್ರಿಯಪ್ಪಾ, ನಾಳಿಂದ ನಾ ಮೇಸ್ತ್ರೀಯಾಗೇ ನಿಮ್ಮ ಕೂಡೆ ಕೆಲಸಕ್ಕ ಬರ್ತೀನ್ರೀ. ನೀವೀಗ ಲಘೂನ ಮನಿ ಕಡೀ ಹೊಂಡ್ರೀ ಧಣೇರಾ…!’ ಎಂದು ಸೌಜನ್ಯದಿಂದ ಕೈಮುಗಿಯುತ್ತ ಅಂದ.

‘ಹಾಗೆ ಹೇಳು ಮತ್ತೆ…! ಸರಿ ಹಾಗಾದರೆ, ನಾಳೆ ಬೆಳಿಗ್ಗೆ ಮನೆಯ ಕಡೆ ಬಂದುಬಿಡು. ಕೆಲಸ ಎಲ್ಲೀಂತ ಹೇಳುತ್ತೇನೆ’ ಎಂದ ಶಂಕರ ನೂರರ ನೋಟೊಂದನ್ನು ತೆಗೆದು ಅವನ ಕೈಗೆ ತುರುಕಿಸಿ ನಗುತ್ತ ಹಿಂದಿರುಗಿದ. ತಾನು ಅಂದಂತೆಯೇ ಮರುದಿನ ಅವನಿಗೆ ಮೇಸ್ತ್ರಿ ಕೆಲಸವನ್ನು ಕೊಟ್ಟವನು, ಕೆಲವೇ ದಿನದೊಳಗೆ ಅವನ ಆಪ್ತತೆಯನ್ನೂ ಗಳಿಸಿಕೊಂಡ. ಕಾರಣ ಹನುಮಪ್ಪ, ಸಂತಾನಪ್ಪನ ಸಮೀಪದ ಬಂಧುವೂ ಮೇಲಾಗಿ ಆತ್ಮೀಯ ಮಿತ್ರನೂ ಆಗಿದ್ದ. ಆದ್ದರಿಂದ ಶಂಕರ ಹನುಮಪ್ಪನ ಸಹಾಯದಿಂದಲೇ ಸಂತಾನಪ್ಪನ ವಿಶ್ವಾಸವನ್ನು ಮರಳಿ ಗಳಿಸಿ, ತನ್ನ ಕಾರ್ಯ ಸಾಧಿಸಿಕೊಳ್ಳಲು ನಿರ್ಧರಿಸಿದ. ಹಾಗಾಗಿ ಸಂತಾನಪ್ಪನ ವೃತ್ತಿನಿಷ್ಠೆಯನ್ನೂ ಪ್ರಾಮಾಣಿಕತೆಯನ್ನೂ ಹನುಮಪ್ಪನೊಡನೆ ಮಿತಿಮೀರಿ ಹೊಗಳುತ್ತ ತನ್ನ ಸಾರಾಯಿ ಪಾರ್ಟಿಗಳಿಗೆ ಅವನನ್ನು ಉಪಾಯವಾಗಿ ಆಹ್ವಾನಿಸತೊಡಗಿದ. ಆದರೆ ಶಂಕರ ಹೇಗೆ ಹೇಗೆ ಪ್ರಯತ್ನಿಸಿದರೂ ಸಂತಾನಪ್ಪ ಅವನನ್ನು ನಂಬಲು ತಯಾರಿರಲಿಲ್ಲ. ಕಾರಣ ಶಂಕರ ಮಹಾದುಷ್ಟನೆಂಬ ಭಯವೊಂದು ಕಡೆಯಾದರೆ ಹಿಂದೆ ಒಂದಷ್ಟು ಕಾಲವಾದರೂ ತನಗೂ, ತನ್ನ ಸಂಸಾರಕ್ಕೂ ಅನ್ನ ನೀಡಿದ ಧಣಿಯೆಂಬ ಗೌರವಕ್ಕೋ ಏನೋ ಅವನು ಶಂಕರನ ಸ್ನೇಹದ ಹಸ್ತವನ್ನು ಪುರಸ್ಕರಿಸಲು ಇಷ್ಟಪಡಲಿಲ್ಲ. ಆದರೂ ಹನುಮಪ್ಪನ ಮೂಲಕ ಶಂಕರನ ನಿರಂತರ ಪ್ರಯತ್ನವು ಕೊನೆಗೂ ಒಮ್ಮೆ ಸಂತಾನಪ್ಪನ ಬುದ್ಧಿಯನ್ನು ಮಂಕು ಬಡಿಸಿಬಿಟ್ಟಿತು. ಅದೇ ಸಮಯಕ್ಕೆ ಸರಿಯಾಗಿ ಶಂಕರನೂ ಕೊನೆಯ ಪ್ರಯತ್ನವೆಂಬಂತೆ ಆವತ್ತು ಕಡೆಪಾಡಿಬೆಟ್ಟಿನ ತನ್ನ ಹೊಸ ಫ್ಲ್ಯಾಟ್‍ನಲ್ಲಿ ಸಂತಾನಪ್ಪನಿಗಾಗಿಯೇ ಸಣ್ಣದೊಂದು ಔತಣ ಕೂಟವನ್ನು ಆಯೋಜಿಸಿ ಅವನನ್ನು ವಿಶೇಷ ಆದರದಿಂದ ಆಹ್ವಾನಿಸಿದ.

   ಸಂತಾನಪ್ಪ ಒಲ್ಲದ ಮನಸ್ಸಿನಿಂದ ಹನುಮಪ್ಪನೊಂದಿಗೆ ಶಂಕರನ ಫ್ಲ್ಯಾಟ್‍ಗೆ ಆಗಮಿಸಿದ. ಶಂಕರನ ಊರ ಐವರು ಆಪ್ತ ಸ್ನೇಹಿತರೊಂದಿಗೆ ಬರೇ ಎಂಟು ಜನರಿಂದ ಕೂಡಿದ ಸಣ್ಣ ಔತಣಕೂಟ ಅದಾಗಿದ್ದರಿಂದ ಸಂತಾನಪ್ಪನೂ ಮುಜುಗರ ಬಿಟ್ಟು ಅವರೊಂದಿಗೆ ಬೆರೆತ. ವಿದೇಶಿ ಮದ್ಯದ ಬಾಟಲಿಗಳು ಮತ್ತು ಆಡು, ಕೋಳಿಯ ಹುರಿದ ಮಾಂಸದ ಖಾದ್ಯಗಳು ಕೋಣೆಯೊಳಗೆಲ್ಲ ಘಮಘಮಿಸುತ್ತ ಹಭೆಯಾಡುತ್ತಿದ್ದವು. ಶಂಕರ ಎಲ್ಲರೊಂದಿಗೆ ಸಂತಾನಪ್ಪನಿಗೂ ಸಾರಾಯಿ ಕೊಟ್ಟ. ಸಂತಾನಪ್ಪ ಸಂಕೋಚದಿಂದ ಒಂದು ಪೆಗ್ಗು ಹೊಟ್ಟೆಗಿಳಿಸಿದ. ತುಸು ಮತ್ತೇರುತ್ತಲೇ ನಿರ್ಭಿಡೆಯಿಂದ ಕೈಕಾಲು ಚಾಚಿ ಕುಳಿತು ಶಂಕರ ಬಗ್ಗಿಬಗ್ಗಿಸಿ ಕೊಡುತ್ತಿದ್ದ ಪೆಗ್ಗನ್ನು ಅಡಿಗಡಿಗೆ ಹೀರುತ್ತ ಗತ್ತಿನಿಂದ ಎಲ್ಲರೊಂದಿಗೆ ಹರಟತೊಡಗಿದ. ಶಂಕರ, ಸಂತಾನಪ್ಪನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಕಾದ ಕಬ್ಬಿಣ ಬಡಿಯಲು ಇದೇ ಸರಿಯಾದ ಸಮಯ ಎಂದು ಖಚಿತವಾಗುತ್ತಲೇ, ‘ಏನೋ ಸಂತಾನಪ್ಪಾ ನನ್ನ ಮೇಲೆ ನಿನಗಿನ್ನೂ ಹಿಂದಿನ ಬೇಸರ ಹೋಗಲಿಲ್ಲವಾ ಮಾರಾಯ? ನನ್ನ ಸ್ನೇಹ ಮಾಡಲೇ ಹೆದರುವಂಥ ದ್ರೋಹವನ್ನು ನಿನಗೆ ನಾನು ಮಾಡಿದ್ದಾದರೂ ಏನು ಹೇಳು…?’ಎಂದು ಬೇಸರದ ಧ್ವನಿಯಿಂದ ಕೇಳಿದ. ಶಂಕರನ ಆ ಬಗೆಯ ಆತ್ಮೀಯತೆಯ ಮಾತನ್ನು ಕೇಳಿದ ಸಂತಾನಪ್ಪನಿಗೆ ರಪ್ಪನೆ ಉತ್ತರಿಸಲು ತುಸು ಸಂಕೋಚವಾಯಿತು. ಆದರೆ ಈಗ ತಾನೂ ಶಂಕರನಷ್ಟೇ ಶ್ರೀಮಂತನಲ್ಲವೇ! ಎಂದುಕೊಂಡವನು ಅದೇ ವರ್ಚಸ್ಸಿನಿಂದ, ‘ಹೇ, ಹಾಗೇನಿಲ್ರೀ ಶಂಕ್ರಣ್ಣಾ, ನಿಮ್ಮ್ ಮ್ಯಾಲೆ ಈವಾಗ ನಂಗೇನೂ ಬ್ಯಾಸರ ಇಲ್ಲ ಬಿಡ್ರೀ…!’ ಎಂದ ನಗುತ್ತ.

‘ಹಾಗಾದರೆ ಮತ್ಯಾಕೆ ಆವತ್ತು ಹನುಮಪ್ಪನೊಡನೆ ನಾನು ಎಷ್ಟೊಂದು ಬಾರಿ ಹೇಳಿ ಕಳುಹಿಸಿದರೂ ನೀನು ಬರಲಿಲ್ಲ ಯಾಕೆ ಮಾರಾಯಾ? ಅದರರ್ಥ ನನ್ನ ಮೇಲೆ ನಿನಗಿನ್ನೂ ವಿಶ್ವಾಸ ಬಂದಿಲ್ಲ ಎಂದೇ ಅಲ್ಲವಾ?’

‘ಯಪ್ಪಾ ವಿಶ್ವಾಸ ಅದೇರೀ… ಆದ್ರಾ ಒಂದ್ಕಾಲದಾಗ ನೀವ್ ನಮ್ ಧಣಿಯಾಗಿದ್ರಲ್ರೀ, ಅದಕ್ಕಾ ಸ್ವಲ್ಪ ಮುಜುಗರ ಆಗ್ತಿತ್ತ್ ಅಷ್ಟೇರೀ!’

‘ಓಹೋ ಅಷ್ಟೇನಾ ವಿಷ್ಯಾ. ನೋಡು ಸಂತಾನಪ್ಪ ಈ ಹಿಂದೆ ನೀನು ನನ್ನೊಂದಿಗೆ ಕೂಲಿಯವನಾಗಿ ದುಡಿದಿದ್ದಿ ಅಂತ ನಿನ್ನ ಮನಸ್ಸಿನಲ್ಲಿದ್ದರೆ ಅದನ್ನೀಗಲೇ ತೆಗೆದು ಹಾಕು ಮಾರಾಯಾ. ಯಾಕೆಂದರೆ ನೀನೂ ನನ್ನ ಮಟ್ಟಕ್ಕೆ ಬೆಳೆಯಲು ಕಷ್ಟಪಟ್ಟಿದ್ದಿಯೋ ಇಲ್ಲವೋ ಗೊತ್ತಿಲ್ಲ. ಆದರೂ ಬೆಳೆದುಬಿಟ್ಟಿದ್ದಿ ನೋಡು. ಹೀಗಿರುವಾಗ ಆವತ್ತಿನ ಭೇದಭಾವವನ್ನು ಇನ್ನೂ ಇಟ್ಟುಕೊಳ್ಳುವುದರಲ್ಲಿ ಅರ್ಥ ಉಂಟಾ ಹೇಳು? ಅಂದು ನಿನಗೂ ನಿನ್ನ ಹೆಂಡತಿಗೂ ನಾನೊಂದಿಷ್ಟು ಬೈದಿರಬಹುದು. ಅದು ನನ್ನ ಸ್ವಭಾವ. ಅದನ್ನೆಲ್ಲ ನಾನೂ ಮನಸ್ಸಲ್ಲಿಟ್ಟುಕೊಂಡಿಲ್ಲ. ನೀನೂ ಇಟ್ಟುಕೊಳ್ಳಬಾರದು. ನಾವಿಬ್ಬರೂ ಒಂದೇ ವ್ಯವಹಾರದಲ್ಲಿ ಇರುವವರಾದ ಕಾರಣ ನಮ್ಮ ನಡುವೆ ಯಾವ ನಿಷ್ಠೂರವೂ ಇರಕೂಡದು. ಅದೆಂಥ ಮನಸ್ತಾಪವಿದ್ದರೂ ಎಲ್ಲ ಇವತ್ತೇ ಕೊನೆಯಾಗಬೇಕು! ಈ ಮಾತು ಹೇಳುವುದರಲ್ಲಿ ನನ್ನದೊಂದು ಸ್ವಾರ್ಥವೂ ಇದೆ ಮಾರಾಯಾ. ಏನು ಅಂತ ಕೇಳ್ತೀಯಾ? ಇನ್ನು ಮುಂದೆ ನಾನು ಹಿಡಿಯಲಿರುವ ದೊಡ್ಡ ದೊಡ್ಡ ಬಿಲ್ಡಿಂಗ್ ಪ್ರಾಜೆಕ್ಟ್‍ಗಳಿಗೆ ನಿಮ್ಮೂರಿನ ಕೂಲಿಯಾಳುಗಳ ಅಗತ್ಯ ನನಗೂ ಬೀಳುತ್ತಿರುತ್ತದೆ ಮಾರಾಯಾ. ಅವರನ್ನೆಲ್ಲ ನೀನೇ ಒದಗಿಸಿಕೊಡಬೇಕಲ್ವಾ!’ ಎಂದು ನಗುತ್ತ ಅಂದವನು, ‘ಹ್ಞಾಂ ಇನ್ನೊಂದು ವಿಷಯ ಮಾರಾಯ, ನಮ್ಮೂರಿನ ಒಂದಷ್ಟು ಬುದ್ಧಿವಂತ ಜನರೊಡನೆ ಪಕ್ಕಕ್ಕೆ ಯಾರೂ ವ್ಯವಹರಿಸಲು ಸಾಧ್ಯವಿಲ್ಲ ಅನ್ನೋದು ನಿನಗೂ ಈಗಾಗಲೇ ಗೊತ್ತಾಗಿರಬಹುದು. ಹಾಗಾಗಿ ನಿನಗಿರುವ ಅಷ್ಟು ದೊಡ್ಡ ಆಸ್ತಿಯನ್ನು ನಿಭಾಯಿಸಬೇಕಾದರೆ ಅದಕ್ಕೆ ತಕ್ಕಂಥ ಬುದ್ಧಿವಂತಿಕೆಯೂ ಬೇಕಲ್ಲವಾ. ಇಲ್ಲದಿದ್ದರೆ ಇಲ್ಲಿನವರು ನಿನ್ನನ್ನು ನಾಲ್ಕಾಣೆಗೆ ಮಾರಿಬಿಡುತ್ತಾರಲ್ಲದೇ ಇಲ್ಲಿನ ನಮ್ಮ ಕೆಲವು ಖದೀಮರ ದೃಷ್ಟಿಗೆ ನಿನ್ನ ಆಸಿಪಾಸ್ತಿ ಬಿದ್ದಿತೆಂದರೆ ಒಂದಲ್ಲ ಒಂದು ದಿನ ಅವರು ನಿನ್ನನ್ನು ದೋಚಿ ಓಡಿಸಿಬಿಡುವುದಂತೂ ಗ್ಯಾರಂಟಿ! ಇಂಥ ವಿಷಯಗಳಿಗಾದರೂ ನಾವು ಒಬ್ಬರಿಗೊಬ್ಬರು ಸ್ನೇಹಿತರಾಗಿರುವುದು ಒಳ್ಳೆಯದು ಅಂತ ನನ್ನ ಅಭಿಪ್ರಾಯ ಏನಂತೀಯಾ?’ ಎಂದು ಶಂಕರ ತನ್ನ ಕುಟಿಲತನಕ್ಕೆ ಸ್ನೇಹದ ಭಾವವನ್ನು ಬೆರೆಸಿ ಅವನೊಳಗೆ ಭಯವನ್ನೂ ಹುಟ್ಟಿಸುತ್ತ ಉತ್ಕಟತೆಯಿಂದ ಮಾತನಾಡಿದ.

   ಶಂಕರನ ಸ್ನೇಹಪೂರಿತವಾದ ಉದ್ವೇಗದ ಮಾತುಗಳು ಅನಕ್ಷರಸ್ಥ ಸಂತಾನಪ್ಪನಿಗೆ ಅಕ್ಷರಶಃ ಸತ್ಯವೆನಿಸಿಬಿಟ್ಟಿತು. ‘ಹೌದು, ಇವ ಹೇಳುದು ಖರೆ! ಇನ್ ಮುಂದಾ ತಾನೂ ರೀಯಲ್ ಎಸ್ಟೇಟ್ ವ್ಯವಹಾರ ಮಾಡ್ಬೇಕಂತಿರೋನು. ಇಲ್ಲಿನ್ ಮಂದಿ ನಮ್ಮವರಷ್ಟು ಅಮಾಯಕರಲ್ಲ. ಇವ್ನು ಗೆಳೆತನ ಮಾಡಿದ್ರೆ ಬಾಳಾ ಲಾಭ ಐತೀ!’ ಎಂದು ಯೋಚಿಸಿದವನು, ಅಮಲೇರಿದ ತನ್ನ ಕಣ್ಣುಗಳಿಗೆ ಹೂವಿನಂಥ ಕೋಮಲಭಾವವನ್ನು ತಂದುಕೊಂಡು ಶಂಕರನನ್ನು ದಿಟ್ಟಿಸುತ್ತ, ‘ಹೌದು ಶಂಕರಣ್ಣಾ ನಿಮ್ ಮಾತ್ ಖರೇರೀ. ಇನ್ ಮುಂದಾ ನಾವಿಬ್ಬರು ಕೂಡೇ ವ್ಯವಹಾರ ನಡೆಸೂನ್‍ಡ್ರೀ!’ ಎಂದು ಹೇಳುತ್ತ ತಮ್ಮ ಗೆಳೆತನದ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆದ. ಅಂದಿನಿಂದ ಇಬ್ಬರೂ ಗಳಸ್ಯ ಕಂಠಸ್ಯವೆಂಬಷ್ಟು ಆತ್ಮೀಯರಾಗಿಬಿಟ್ಟರು. ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಭೇಟಿಯಾಗುತ್ತ, ವ್ಯವಹಾರದ ಕುರಿತು ಹೆಚ್ಚು ಹೆಚ್ಚು ಚರ್ಚಿಸುತ್ತ, ತಾವು ವಹಿಸಿಕೊಂಡ ಕಾಮಗಾರಿಗಳಿಗೆ ಕಾರ್ಮಿಕರ ಕೊರತೆಯಾದಾಗಲೆಲ್ಲ ಒಬ್ಬರಿಗೊಬ್ಬರು ಒದಗಿಸಿಕೊಡುತ್ತ ವಿಶ್ವಾಸವೆಂಬ ಪದಕ್ಕೆ ಅನ್ವರ್ಥರಂತಾದರು. ವಾರಕ್ಕೊಂದು ಬಾರಿ ಶನಿವಾರ ಸಂಜೆ ತಪ್ಪದೆ ಉನ್ನತ ಮಟ್ಟದ ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲೂ ಮತ್ತು ಈಶ್ವರಪುರದಿಂದ ಒಂದಷ್ಟು ದೂರದ ಪಶ್ಚಿಮಘಟ್ಟದ ತಪ್ಪಲುಗಳಲ್ಲಿ ಸಿರಿವಂತರ ಸ್ವೇಚ್ಛಾಚಾರಕ್ಕೆಂದೇ ಹಸಿರುಭೂಮಿ ಮತ್ತು ಬೆಟ್ಟಗುಡ್ಡಗಳನ್ನು ಕಡಿದು, ಸಿಡಿಲಣಬೆಗಳಂತೆ ಸದ್ದಿಲ್ಲದೆ ತಲೆಯೆತ್ತುತ್ತಿದ್ದ ಹವಾನಿಯಂತ್ರಿತ ಹೋಮ್‍ಸ್ಟೇಗಳಲ್ಲೂ ಹಗಲು ರಾತ್ರಿ ಬೀಡು ಬಿಟ್ಟು ಬ್ರ್ಯಾಂಡೆಡ್ ವಿಸ್ಕಿ, ಬ್ರಾಂದಿಗಳನ್ನು ಹೀರುತ್ತ, ತಮ್ಮ ಕೈಕೆಳಗೆ ದುಡಿಯುವ ಅಂದ ಚಂದದ ಹೆಣ್ಣಾಳುಗಳ ಮನವೊಲಿಸಿ ಹೊತ್ತೊಯ್ದು ಸುಖಪಡುತ್ತ ಕಾಲ ಕಳೆಯುವಷ್ಟು ಹತ್ತಿರವಾಗಿಬಿಟ್ಟರು. ಹೀಗೆ ಶಂಕರ, ಸಂತಾನಪ್ಪನೆಂಬ ಮಿಕವನ್ನು ತನ್ನ ದೃಷ್ಟಿಯಳತೆಯಲ್ಲೇ ಬೆಳೆಸುತ್ತ ಪೂರ್ಣ ವಿಶ್ವಾಸದ ಬಲೆಗೆ ಕೆಡಹಿಕೊಳ್ಳುವವರೆಗೆ ಮುಗ್ಧ ಗೋವಿನ ಮುಖವಾಡ ತೊಟ್ಟು ವ್ಯವಹರಿಸಿದ. ಬಲಿಪಶು ಇನ್ನೇನು ತನ್ನನ್ನು ಬಲವಾಗಿ ನಂಬಿಬಿಟ್ಟಿತು ಎಂದೆನ್ನಿಸುತ್ತಲೇ ವ್ಯವಸ್ಥಿತವಾಗಿ ಅದನ್ನು ಬೇಟೆಯಾಡಲು ಶುಭದಿನವೊಂದನ್ನು ಗೊತ್ತುಪಡಿಸಿದ. ಆವತ್ತು ಶನಿವಾರ ರಾತ್ರಿ ಘಟ್ಟದ ಕೆಳಗಿನ, ‘ಶ್ರೀಮಾತಾ ಹೋಮ್ ಸ್ಟೇ’ ಯ ತಂಪಾದ ಕೊಠಡಿಯಲ್ಲಿ ಕುಳಿತಿದ್ದ ಶಂಕರ ಸಂತಾನಪ್ಪನಿಗೆ ಕರೆ ಮಾಡಿದ.

‘ಹೇ, ಸಂತಾನಪ್ಪಾ ಎಲ್ಲಿದ್ದಿ ಮಾರಾಯಾ…?’

‘ಹ್ಞಾಂ, ಶಂಕರಣ್ಣಾ ನಾನು ಸಿಟಿ ಬಸ್ಟ್ಯಾಂಡಿನ ಮಾಮೂಲಿ ಜಾಗದಾಗ ಕೆಲಸಗಾರರಿಗೆ ಕೂಲಿ ಬಟವಾಡೆ ಮಾಡ್ತಿದ್ದೀನ್ರೀ. ಏನ್ ವಿಶೇಷ…?’

‘ವಿಶೇಷ ಇದೆ ಮಾರಾಯಾ. ನಾನೀಗ ಶ್ರೀಮಾತಾದಲ್ಲಿದ್ದೇನೆ. ಬಟವಾಡೆ ಮುಗಿದ ತಕ್ಷಣ ಬಂದುಬಿಡು. ಎಲ್ಲಾ ನಿನಗೇ ತಿಳಿಯುತ್ತದೆ!’

‘ಓಹೋ, ಹೌದಾ ಶಂಕರಣ್ಣಾ, ಆಯ್ತು ಈಗಲೇ ಹೊಂಟೆ ನೋಡ್ರಿ…!’ ಎಂದ ಸಂತಾನಪ್ಪ ತರಾತುರಿಯಲ್ಲಿ ಕೆಲಸ ಮುಗಿಸಿ ಕಾರು ಹತ್ತಿದವನು ಮುಕ್ಕಾಲು ಗಂಟೆಯಲ್ಲಿ ಶಂಕರ ಸೂಚಿಸಿದ ಸ್ಥಳಕ್ಕೆ ತಲುಪಿದ. ಅಭಯಾರಣ್ಯಕ್ಕೆ ತಾಗಿಕೊಂಡಿದ್ದ ಹೋಮ್ ಸ್ಟೇಯ ಸುತ್ತಮುತ್ತ ಮಾಲಕರದ್ದೇ ವಿಶಾಲ ತೋಟವಿದ್ದುದರಿಂದ ದಿನಪೂರ್ತಿ ಹಿತವಾದ ತಂಗಾಳಿ ಬೀಸುತ್ತ ನೂರಾರು ಪಕ್ಷಿಸಂಕುಲದ ಇಂಪಾದ ಕಲರವವು ಎಂಥ ಅರಸಿಕರಲ್ಲೂ ರಸಿಕತೆಯನ್ನು ಸೃಷ್ಟಿಸುವ ವಾತಾವರಣವಿತ್ತು. ಸಂತಾನಪ್ಪನೂ ಅದಕ್ಕೆ ಹೊರತಾಗಿರಲಿಲ್ಲವಾದ್ದರಿಂದ ಶಂಕರನೊಡನೆ ಉಲ್ಲಸಿತನಾಗಿ ಹರಟುತ್ತ ಕುಡಿಯತೊಡಗಿದ. ಶಂಕರ ಆಹೊತ್ತು ತುಸು ಹೆಚ್ಚೇ ಅವನಿಗೆ ಕುಡಿಸಿದ. ಅವನು ಹದವಾಗಿ ಮತ್ತನಾಗುತ್ತಲೇ ಶಂಕರನ ಆಪ್ತನೊಬ್ಬ ಮೆಲ್ಲನೆ ಒಳಗೆ ಬಂದು ಅವನ ಕಿವಿಯಲ್ಲೇನೋ ಉಸುರಿದ. ಆಗ ಶಂಕರನ ಮುಖ ಅರಳಿತು. ‘ಹೌದಾ, ಸರಿ. ಒಳಗೆ ಕರೆದುಕೊಂಡು ಬಾ!’ ಎಂದು ಆಜ್ಞಾಪಿಸಿದ.

   ಒಂದೆರಡು ಕ್ಷಣದಲ್ಲಿ ಅವನು ಹಿಂದಿರುಗಿದ. ಅವನ ಹಿಂದೆ ಅಪ್ಸರೆಯಂಥ ಹದಿಹರೆಯದ ಹುಡುಗಿಯೊಬ್ಬಳು ನಾಚುತ್ತ ಒಳಗೆ ಬಂದಳು. ಅವನು ಅವಳನ್ನು ಬಿಟ್ಟು ಹೊರಟುಹೋದ. ಆದರೆ ಅವಳನ್ನು ಕಂಡ ಸಂತಾನಪ್ಪ ರೋಮಾಂಚಿತನಾದ. ಅವಳ ಸೌಂದರ್ಯ ಅವನ ಸಾರಾಯಿ ನಶೆಯನ್ನು ಜರ್ರನೆ ಇಳಿಸಿಬಿಟ್ಟಿತು. ತನ್ನೂರಿನ ಬಿಸಿಲಬೇಗೆಯಿಂದ ಬೇಯುತ್ತ ಹೊಲಗದ್ದೆ, ಒಣ ಮೈದಾನಗಳಲ್ಲಿ ದುಡಿದು ಒರಟೊರಟಾದ ದೇಹವನ್ನು ಹೊಂದಿದ್ದ ಹೆಣ್ಣು ಹೆಂಗಸರೊಂದಿಗೆ ಆಗಾಗ ಸುಖಿಸುತ್ತ ಜಿಗುಪ್ಸೆ ಪಡುತ್ತಿದ್ದವನಿಗೆ ಈಶ್ವರಪುರದ ಸುಂದರ ಬೆಡಗಿಯರನ್ನು ಕಾಣುವಾಗಲೆಲ್ಲ ಮೈಬಿಸಿಯೇರುತ್ತಿತ್ತು. ಸಂತಾನಪ್ಪನ ಅಂಥ ಚಪಲವನ್ನು ಶಂಕರನೂ ಆಗಾಗ ಗ್ರಹಿಸುತ್ತಿದ್ದ. ಆದ್ದರಿಂದಲೇ ಇಂದು ಅಂಥ ಹೊಣ್ಣೊಬ್ಬಳನ್ನು ಅವನು ಕರೆಸಿದ್ದ. ಆ ಚೆಲುವೆಯನ್ನು ಕಂಡ ಸಂತಾನಪ್ಪನಿಗೆ ತನ್ನ ಯೌವನವೀಗಷ್ಟೇ ಅರಳಿದಂಥ ಅನುಭವವಾಗಿ ಅವಳನ್ನನುಭವಿಸಲು ಹಾತೊರೆದ. ಅದನ್ನು ಗಮನಿಸಿದ ಶಂಕರ ಹುಡುಗಿಗೇನೋ ಸಂಜ್ಞೆ ಮಾಡಿದ. ಅವಳು ವಯ್ಯಾರದಿಂದ ನಡೆದು ಹೋಗಿ ಸಂತಾನಪ್ಪನಿಗೆ ಒತ್ತಿ ಕುಳಿತಳು.

   ಅವಳ ಮೃದುವಾದ ನಡುವು ತನ್ನ ಒರಟು ಸೊಂಟವನ್ನು ಸ್ಫರ್ಶಿಸಿದ ಸುಖಕ್ಕೆ ಸಂತಾನಪ್ಪ ಉನ್ಮತ್ತನಾಗಿ ಶಂಕರನನ್ನು ಕಣ್ಣಿನಲ್ಲೇ ಹೊರಗೆ ನಡೆಯುವಂತೆ ಆಲಾಪಿಸಿದ. ಶಂಕರನೂ ಅದೇ ಸಮಯವನ್ನು ಬಳಸಿಕೊಂಡ. ‘ಅಂದಹಾಗೆ ಸಂತಾನಪ್ಪಾ ನಾವು ಮೊನ್ನೆ ಅಚ್ಚಡಪಾಡಿಯಲ್ಲಿ ಖರೀದಿಸಿದ ಜಮೀನೊಂದಿದೆಯಲ್ಲ ಅದರ ಕನ್ವರ್ಶನ್‍ಗೆ ನಿನ್ನ ಕೆಲವು ಹೆಬ್ಬೆಟ್ಟುಗಳು ಬೇಕಿದ್ದವು ಮಾರಾಯಾ. ನಾಳೆನೇ ಅದನ್ನು ಕಂದಾಯ ಇಲಾಖೆಗೆ ಕೊಡಲಿಕ್ಕಿದೆ. ಆದರೆ ನಿನಗಿನ್ನು ಸ್ವಲ್ಪ ಹೊತ್ತಲ್ಲಿ ಅದೆಲ್ಲ ಮರೆತು ಬಿಡಲಿಕ್ಕಿತ್ತದೆ!’ ಎನ್ನುತ್ತ ವಿಲಾಸಿ ನಗೆ ನಕ್ಕವನು, ‘ತಗೋ ಈಗಲೇ ಸಹಿ ಹಾಕಿ ಬಿಡು…!’ ಎಂದು ಕೆಲವು ಠಸ್ಸೆ ಪೇಪರುಗಳನ್ನು ತೆಗೆದು ಅವನ ಮುಂದಿಟ್ಟ. ಆದರೆ ಅವನು, ‘ಅಯ್ಯೋ, ಅದೆಲ್ಲ ನಾಳೆ ನೋಡೋನ್ರೀ ಶಂಕರಣ್ಣಾ…?’ ಎಂದ ಅಸಡ್ಡೆಯಿಂದ. ಅಷ್ಟು ಕೇಳಿದ ಶಂಕರನ ಎದೆಯೊಮ್ಮೆ ನಿರಾಶೆಯಿಂದ ಧಸಕ್ ಎಂದಿತು. 

‘ಅರೇ ನಾಳೆ ಯಾವಾಗ? ನಾಳೆ ಬೆಳಿಗ್ಗೆ ಇಲ್ಲಿಂದಲೇ ಕಂದಾಯ ಇಲಾಖೆಗೆ ಹೋಗಿ ಫೈಲ್ ಮೂವ್ ಮಾಡಬೇಕೆಂದಿದ್ದೇನೆ ಮಾರಾಯಾ!’ ಎಂದು ಆತಂಕವನ್ನು ತೋರಿಸಿಕೊಳ್ಳದೆ ಒತ್ತಾಯಿಸಿದ. ಅಂದು ಸಮುದ್ರ ಮಂಥನದ ಸನ್ನಿವೇಶದಲ್ಲಿ ರಾಕ್ಷಸರು ವಿಷ್ಣುವಿನ ಮೋಹಿನಿ ರೂಪಕ್ಕೆ ಮರುಳಾಗಿಯೇ ಅಮರತ್ವದಿಂದ ವಂಚಿತರಾದರು! ಎಂಬ ಕಥೆಯನ್ನು ತಾನು ಕೇಳಿಯೇ ಇಲ್ಲವೆಂಬಂತೆ ಸಂತಾನಪ್ಪನೂ ಶಂಕರ ತೋರಿಸಿದ ಪತ್ರಗಳಿಗೆಲ್ಲಾ ಪಟಪಟನೇ ಹೆಬ್ಬೆಟ್ಟು ಒತ್ತಿದಾಗ ಶಂಕರನು ಸಂತೃಪ್ತನಾದ. ‘ಇಲ್ಲಿಗೆ ನನ್ನ ಕೆಲಸ ಮುಗಿಯಿತು ನೋಡು. ಇನ್ನು ನಿನ್ನ ಆಟಕ್ಕೆ ಶುರುವಿಟ್ಟುಕೋ!’ ಎಂದು ವ್ಯಂಗ್ಯವಾಗಿ ನಗುತ್ತ ಶಂಕರ ಹೊರಗೆ ಹೋದ. ಅವನು ಹೋಗಿ ಹೊರಗಿನಿಂದ ಬಾಗಿಲೆಳೆದುಕೊಳ್ಳುತ್ತಲೇ ಸಂತಾನಪ್ಪನೂ ಹುಡುಗಿಯನ್ನು ಹಾಸಿಗೆಗೆ ಸೆಳೆದುಕೊಂಡ.

   ಮರುದಿನ ಮುಂಜಾನೆ ಮೊದಲ ಜಾವದವರೆಗೆ ಸಂತಾನಪ್ಪ ಆ ಹುಡುಗಿಯ ಕಣ್ಣರೆಪ್ಪೆ ಮುಚ್ಚಲು ಬಿಡದೆ ಹರಿದು ತಿನ್ನುವಂಥ ಆವೇಶದಿಂದ ಅನುಭವಿಸತೊಡಗಿದ. ಆದರೆ ಅವಳು ಆ ವೃತ್ತಿಯಲ್ಲಿ ಪಳಗಿದ ಚತುರೆ. ಹಾಗಾಗಿ ಸಂತಾನಪ್ಪನ ಆತುರದ ಚಪಲ ಅವಳಿಗೆ ತಮಾಷೆಯದ್ದಾಗಿ ಕಂಡಿತು. ಆದ್ದರಿಂದ, ‘ಹ್ಞಾಂ, ಹ್ಞಾಂ! ಮೆತ್ತಗೆ ಸಾಹುಕಾರ್ರೇ…! ನಾನಿನ್ನು ನಾಳೆ ಬೆಳಿಗ್ಗೆಯವರೆಗೆ ನಿಮ್ಮವಳೇ…!’ ಎಂದು ನಗುತ್ತ ಉಸುರುತ್ತ ಸಹಕರಿಸತೊಡಗಿದಳು. ಆದರೆ ಆತ ಅವಳ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಮುಗುಳ್ನಗುತ್ತ ಕ್ರಿಯಾಶೀಲನಾದವನು ಬೆಳಕಾಗಲು ಒಂದಿಷ್ಟು ಸಮಯವಿದೆ ಎನ್ನುವಾಗ ಸೋತು ಗಾಢ ನಿದ್ರೆಗೆ ಜಾರಿದ. ಅದನ್ನು ಗಮನಿಸಿದ ಅವಳೂ ಆಯಾಸದಿಂದ ಎದ್ದು ಹೊರಗೆ ನಡೆದಳು. ಅಲ್ಲಿಗೆ ಎಲ್ಲವೂ ಶಂಕರನ ಎಣಿಕೆಯಂತೆಯೇ ನಡೆದು ಹೋಯಿತು. ಮರುದಿನ ನಡು ಮಧ್ಯಾಹ್ನದ ಹೊತ್ತಿಗೆ ಸಂತಾನಪ್ಪನ ಕೋಣೆಯ ಪರಿಚಾರಕ ಬಂದು ಬಾಗಿಲು ತಟ್ಟಿದಾಗ ಅವನಿಗೆ ಎಚ್ಚರವಾಯಿತು. ಉದಾಸೀನದಿಂದ ಎದ್ದು ಕುಳಿತ. ಅತ್ತ ತೆರೆದೇ ಇದ್ದ ಬಾಗಿಲನ್ನು ತಳ್ಳಿಕೊಂಡು ಹುಡುಗ ಒಳಗೆ ಬಂದವನು, ‘ಊಟ ತರಲೇ ಸಾರ್…?’ ಎಂದು ನಮ್ರವಾಗಿ ಕೇಳಿದ.

ಆಗ ಸಂತಾನಪ್ಪ ಗಡಿಯಾರ ನೋಡಿಕೊಂಡು ಅವಕ್ಕಾದವನು, ‘ಈಗ್ ಬ್ಯಾಡ. ಇಕ್ಕಾಟ್ (ಆಮೇಲೆ) ಕರಿತೀನ್ ಹೋಗ್!’ ಎಂದು ಸಿಡುಕಿ ಅವನನ್ನು ಕಳುಹಿಸಿದ. ಮರುಕ್ಷಣ ತನ್ನ ಕೋಣೆಗೆ ಒಳಗಿನಿಂದ ಚಿಲಕ ಹಾಕದಿದ್ದುದು ಮತ್ತು ತಾನೊಬ್ಬನೇ ಇದ್ದುದು ತಿಳಿದವನು ಒಮ್ಮೆಲೇ ಆತಂಕಗೊಂಡ. ಬಳಿಕ ಹಿಂದಿನ ರಾತ್ರಿ ನಡೆದುದನ್ನೆಲ್ಲ ಜ್ಞಾಪಿಸಿಕೊಂಡ. ಹುಡುಗಿಯೊಂದಿಗೆ ಆಡಿದ ಸರಸ ಸಲ್ಲಾಪ ನೆನೆದವನ ಮೈಮನಸ್ಸು ಮತ್ತೊಮ್ಮೆ ಬಿಸಿಯೇರಿತು. ಆದರೆ ಶಂಕರ ತನ್ನ ಮುಂದಿಟ್ಟ ದೊರಗಾದ ಠಸ್ಸೆ ಪೇಪರುಗಳು ಮತ್ತು ಅವಕ್ಕೆ ತಾನು ಅಮಲುಗಣ್ಣಿನಲ್ಲಿ ಒತ್ತಿದ ಹೆಬ್ಬೆಟ್ಟುಗಳೂ ಮುನ್ನೆಲೆಗೆ ಬರುತ್ತಲೇ ದಿಗಿಲಾಗಿಬಿಟ್ಟ. ‘ಅಯ್ಯೋ ಶಂಭುಲಿಂಗಾ..! ಆ ಪತ್ರಗಳನ್ನು ಸರಿಯಾಗಿ ನೋಡ್ದೇ ಹೆಬ್ಬೆಟ್ಟು ಒತ್ ಬಾರ್ದಿತ್ತು! ನಂಗ್ ಯಾಕ್ ಮಂಕ್ ಬಡಿತೋ? ಆ ಹಲ್ಕಟ್ ನನ್ಮಗ ಏನಾರೂ ಹುನ್ನಾರ ಮಾಡಿದ್ರೇ…?’ ಎಂಬ ಯೋಚನೆ ಮುತ್ತಿಕೊಂಡು ಬೆವರಿದ. ಮುಂದಿನಕ್ಷಣ ಬಲವಾದ ಅನುಮಾನವೊಂದು ಕಾಡತೊಡಗಿ ರಪ್ಪನೆದ್ದು ಹೊರಗೆ ಬಂದ. ಹೊಟೇಲ್ ಕೋಣೆಯ ಬಾಡಿಗೆ ಚುಕ್ತಾ ಮಾಡಿ ಕಾರು ಹತ್ತಿ ಶಂಕರ ಮನೆಗೆ ಧಾವಿಸಿದ. ಆದರೆ ಶಂಕರ ಮನೆಯಲ್ಲಿರಲಿಲ್ಲ. ಅವನ ಪತ್ನಿ ವಿನೋದಾ ಕಾಲು ಚಾಚಿ ಕುಳಿತುಕೊಂಡು ಯಾವುದೋ ಧಾರಾವಾಹಿ ವೀಕ್ಷಿಸುತ್ತಿದ್ದವಳು ಅಲ್ಲಿಂದಲೇ, ‘ನಂಗೊತ್ತಿಲ್ಲ. ಈಗಷ್ಟೇ ಎಲ್ಲೋ ಹೊರಗೆ ಹೋದರು!’ ಎಂದು ಒರಟಾಗಿ ಅಂದಾಗ ಸಂತಾನಪ್ಪನ ತಲೆ ಗಿರ್ರೆಂದಿತು. ‘ಈ ಹಾದರಕ್ ಹುಟ್ಟಿದ್ ನನ್ಮಗ, ಯಾವ್ಯಾವ್ ಪತ್ರಕ್ ಹೆಬ್ಬೆಟ್ಟು ಹಾಕಿಸ್‍ಕೊಂಡಿದ್ನೋ? ಅವೆಲ್ಲ ನನ್ ಆಸ್ತಿಪಾಸ್ತಿ ಪತ್ರಗಳಾಗಿದ್ದರೆ ನಾನು ಪೂರಾ ಎಕ್ಕುಟ್ಟು ಹೋದಂಗೆಯಾ! ಯಪ್ಪಾ ಏನಪ್ಪಾ ಮಾಡೋದೀಗಾ…!’ ಎಂದು ತನ್ನ ಎಡವಟ್ಟಿಗೆ ಹಳಿದುಕೊಳ್ಳುತ್ತ ಹಗಲಿಡೀ ಶಂಕರ ಇರುತ್ತಿದ್ದ ಸ್ಥಳಗಳನ್ನೆಲ್ಲ, ತನ್ನೂರಿನ ಟಗರು ಕೊಚ್ಚುವ ಮಚ್ಚೊಂದನ್ನು ಮಸೆದು ಹಿಡಿದುಕೊಂಡೇ ಹುಡುಕಾಡಿದ. ಆದರೂ ಅವನಿಗೆ ಶಂಕರನ ಸುಳಿವು ಸಿಗಲಿಲ್ಲ.


(ಮುಂದುವರೆಯುವುದು)

**************************************

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

4 thoughts on “

  1. ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪರಿಶ್ರಮ ಹಾಗೂ ಪ್ರಾಮಾಣಿಕತೆ ಗೆ ತಕ್ಕಂತೆ ಒಳ್ಳೆಯ ಅವಕಾಶಗಳು ಒದಗಿ ಬರುತ್ತವೆ. ಅಂತೆಯೇ ಸಂತಾನಪ್ಪನಿಗೂ ಓರ್ವ ಬಡ ಶ್ರಮಿಕನಿಂದ ಧನಿಕನಾಗುವ ಅದೃಷ್ಟ ಅವನ ಪಾಲಿಗೆ ಒದಗಿ ಬಂದಿತ್ತು. ಆದರೆ ಅದನ್ನು ಉಳಿಸಿಕೊಳ್ಳುವಲ್ಲಿ ವಿಫಲನಾಗುತ್ತಾನೆ. ಸಂಪತ್ತು ಹೇಗೆ ಓರ್ವ ಸಾಮಾನ್ಯ ವ್ಯಕ್ತಿಯ ಜೀವನವನ್ನು ಬದಲಿಸಬಹುದು, ಅಂತೆಯೇ ಅವಕಾಶಗಳು ತಮ್ಮನ್ನರಸಿ ಬಂದಾಗ ಅದನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆನ್ನುವ ಸೂಕ್ಷ್ಮ ಚಿತ್ರಣ ಈ ಅಧ್ಯಾಯದಲ್ಲಿ ಮೂಡಿ ಬಂದಿದೆ. ಅಭಿನಂದನೆಗಳು.

    1. ನಿಮ್ಮ ಓದಿನ ಸೂಕ್ಷ್ಮ ಮತ್ತು ಪ್ರೋತ್ಸಾಹಕ್ಕೆ ನಾನು ಕೃತಜ್ಞ…

Leave a Reply

Back To Top