ಮೊನ್ನೆ ಇಡ್ಲಿ ದಿನ ಅಂತೆ!

ವಿಶೇಷ ಲೇಖನ

ಮೊನ್ನೆ ಇಡ್ಲಿ ದಿನ ಅಂತೆ!

ಶೀಲಾ ಭಂಡಾರ್ಕರ್.

ಎಲ್ಲಾರಿಗೂ ಒಂದೊಂದು ದಿನ ಬರುತ್ತೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಂದ ಹಾಗೆ ಮೊನ್ನೆ ಇಡ್ಲಿ ದಿನ  ಇತ್ತಂತೆ.

ನಮ್ಮನೇಲಿ ಇವತ್ತು ದೋಸೆ, ಪಾಪ ಬೆಳಿಗ್ಗೇನೆ ಹೇಳಿದೆ ಅದಕ್ಕೆ, ಬೇಜಾರಾಗ್ಬೇಡ ನಿಂಗೂ ಒಂದು ಡೆ ಬರುತ್ತೆ ಅಂದೆ.

ದೋಸೆ ಡೇ ಬಂದ್ರೆ ಯೋಚನೆ ಇಲ್ಲ. ರಾತ್ರಿ ರುಬ್ಬಿಟ್ಟಿಲ್ಲ ಅಂದ್ರೂ ಬೆಳಿಗ್ಗೆ ಬಗೆಬಗೆ ಹಿಟ್ಟು ಬೆರೆಸಿ ಮಾಡುವ ಸಾಕಷ್ಟು ರೆಸಿಪಿಗಳಿವೆ ನನ್ನ ಭಂಡಾರದಲ್ಲಿ. ಅಗತ್ಯ ಬಂದಾಗ ನನ್ನನ್ನು ವಿಚಾರಿಸಿದರೆ ಹಂತ ಹಂತವಾದ ವಿಧಾನವನ್ನು ಹೇಳಿಕೊಡ್ತೇನೆ.

ಇಡ್ಲಿ ದಿನ ಅಂತ ಇವತ್ತು ಬೆಳಿಗ್ಗೆ ಗೊತ್ತಾದ್ರೆ ಏನು ಮಾಡೋಕಾಗುತ್ತೆ. ರೆಡಿಮೇಡ್ ಹಿಟ್ಟು ಸಿಗುತ್ತೆ. ಆದರೆ ಅದರಿಂದ ಬೇಯಿಸಿದ ಇಡ್ಲಿ ರೈಲ್ವೇ ಸ್ಟೇಷನ್ ಯಾವುದಾದರೂ ಹತ್ತಿರ ಇದ್ದರೆ ತಗೊಂಡು ಹೋಗಿ ಹಳಿಗಳ ಮೇಲೆ ಸಾಲಾಗಿ ಇರಿಸಿ, ರೈಲು ಬಂದು ಹೋಗುವ ವರೆಗೆ ಕಾದು ಹೋದ ಮೇಲೆ ಮತ್ತೆ ಹೆಕ್ಕಿ ತಂದು ತಿನ್ನಬಹುದು. ಆಗ ನಿಮಗೆ ಮೃದುವಾದ ಇಡ್ಲಿ ತಿನ್ನಲು ರೆಡಿಯಾಗುತ್ತದೆ.

ಅಥವಾ ನಾಳೆ ಎಲ್ಲಾದರೂ ಚೈನಾದವರು ಮತ್ತೆ ಬಾಲ ಬಿಚ್ಚಿದರೆ ಅವರ ಮೇಲೆ ದಾಳಿ ಮಾಡಲು ಯಥೇಚ್ಛವಾಗಿ ಈ ಪ್ಯಾಕೇಟ್ ಹಿಟ್ಟಿನ ಇಡ್ಲಿಗಳನ್ನು ಬೇಯಿಸಿ ತುಂಬಿಸಿ ಕೊಟ್ಟರೆ ಒಂದೊಂದು ಇಡ್ಲಿ ಒಂದೊಂದು ಬಾಂಬ್ ಆಗಿ ಕೆಲಸ ಮಾಡಬಹುದು ಎಂದು ನನ್ನ ಅಭಿಪ್ರಾಯ.

ಇಷ್ಟು ಓದುವಾಗಲೇ ನನಗೆ ಭಯೋತ್ಪಾದಕಿಯ ಪಟ್ಟ ಬಂದರೂ ಬರಬಹುದು.

ಬಂದರೆ ಚಿಂತೆ ಇಲ್ಲ.

ಜೀವಮಾನದಲ್ಲಿ ನನಗೆ ಯಾರೂ ಹೆದರಿಲ್ಲ. ಈಗಲಾದರೂ ಯಾರಾದರೂ ಹೆದರಬಹುದೆಂಬ ಸಣ್ಣ ಆಸೆ.

ನಾನು ಸ್ವಲ್ಪ ಹೀಗೆಯೇ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಅಂದ ಹಾಗೆ ಏನೋ ಶುರು ಮಾಡಿ ಕೊನೆಗೆ ಬಂದು ನಿಲ್ಲುವಾಗ ಎಲ್ಲೋ ಇರುತ್ತೇನೆ.

ಶುರುವಾದಾಗ ಇಡ್ಲಿ, ಜೊತೆಗೆ ದೋಸೆ, ಕೊನೆಯಾದಾಗ ಪೂಲನ್ ದೇವಿ ಬರುವ ಸೂಚನೆ ಕಂಡಿತು.

ಇಡ್ಲಿ, ದೋಸೆ ಮತ್ತು ಪೂಲನ್ ದೇವಿ ಅನ್ನೋ ಶೀರ್ಷಿಕೆ ಕೊಡಬೇಕಾದೀತು.

ಮತ್ತೆ ಇಡ್ಲಿಗೇ ಬರೋಣ. ಸತ್ಯ ಹೇಳುತ್ತೇನೆ ನನಗೆ ಮೊದಲು ಇಡ್ಲಿ ಎಂದರೆ ಅಷ್ಟು ಇಷ್ಟ ಇರಲಿಲ್ಲ. ಅಮ್ಮನಿಗೆ ಭಾಳ ಪ್ರೀತಿ ಇತ್ತು. ವಾರಕ್ಕೆ ಎರಡು ಸಲವಾದರೂ ಇಡ್ಲಿ, ಖೊಟ್ಟೆ, ಮೂಡೆ ಅಂತ ಮಾಡುತಿದ್ದರು. ಹನ್ನೊಂದು ಗಂಟೆಯ ಚಹಾದ ಜೊತೆ ತಿನ್ನಲು ಸಣ್ಣ ಕಬ್ಬಿಣದ ಬಾಣಲೆಯೊಳಗೆ ಸಾಸಿವೆ ಒಗ್ಗರಣೆ ಇಟ್ಟು, ಅದರೊಳಗೆ ಇಡ್ಲಿ ಹಿಟ್ಟು ಹುಯ್ದು ಸಣ್ಣ ಉರಿಯಲ್ಲಿ ಬೇಯಿಸಿ ಎರಡೂ ಬದಿ ಕುರುಕುರು ಆಗೋವರೆಗೆ ಅಲ್ಲಿಯೇ ಬಿಟ್ಟು, ಆಮೇಲೆ  ಸಟ್ಟುಗದಿಂದ ಚಹಾ ಪಾನಕ್ಕೆ ಎಷ್ಟು ಜನರಿದ್ದಾರೋ ಅಷ್ಟು ತುಂಡುಗಳಾಗಿ ಮಾಡಿ ಕೊಡುತಿದ್ದರು. ಅದಕ್ಕೆ ನಾವು ದೊಡ್ಡಕ ಅಂತೀವಿ.

ಆಗ ಅಮ್ಮ ಆಸೆಯಿಂದ ಪ್ರೀತಿಯಿಂದ ಮಾಡಿ ಕೊಟ್ಟದ್ದನ್ನು ತಿನ್ನಲು ನಮಗೆ ಭಾರೀ ದೊಡ್ಡಸ್ತಿಕೆ ಇತ್ತು. ಈಗ ಯಾರಾದರೂ ಮಾಡಿಕೊಟ್ಟರೆ ಆಹಾ! ಅನಿಸುತ್ತೆ. ನಾವು ಆಗ ಮಾಡುತಿದ್ದಂಥದ್ದೇ ಜಂಭ ಈಗ ನಮ್ಮ ಮಕ್ಕಳು ನಮಗೆ ತೋರಿಸ್ತಾರೆ.

ಈಗ ನನಗೆ ಇಡ್ಲಿ, ಇಡ್ಲಿ ಉಸ್ಲಿ, ಹುರಿದ ಇಡ್ಲಿ , ಇಡ್ಲಿ ಹಿಟ್ಟಿನ ದೊಡ್ಡಕ ಎಲ್ಲಾ ಭಾರೀ ಪ್ರೀತಿ.

ಎಲ್ಲೇ ಹೋದರೂ, ಯಾವ ಊರಿಗೆ ಹೋದರೂ ಯಾವ ಹೊಟೇಲ್ ಗೆ ಹೋದರೂ ಇಡ್ಲಿ ವಡಾ ಸಾಂಬಾರ್ ತಿಂದ್ರೆನೇ ತೃಪ್ತಿ.

ಇಡ್ಲಿ ಅಂದಾಗ ನನಗೆ ನೆನಪಿಗೆ ಬರುವ ಒಂದು ಪ್ರಸಂಗ ಇದೆ.

ಮದ್ಯಾಹ್ನ ಶಾಲೆಯಿಂದ ಮನೆಗೆ ಬಂದು ಊಟ ಮಾಡುವಷ್ಟು ಹತ್ತಿರದಲ್ಲಿ ಮನೆಯಿತ್ತು. ಅಷ್ಟು ಸಮಯವೂ ಇರುತಿದ್ದುದರಿಂದ ಡಬ್ಬಿ ತಗೊಂಡು ಹೋಗುವ ಪ್ರಮೇಯ ನಮಗಿರಲಿಲ್ಲ. ಆದರೆ ನನಗೆ ಮಾತ್ರ ಬುತ್ತಿ ತಗೊಂಡು ಹೋಗಬೇಕೆನ್ನುವ ಜೋರು ಆಸೆ ಇತ್ತು.

ಒಮ್ಮೆ ಏನಾಯ್ತು..! ನಮಗೆ ಒಂದು ರಜಾದಿನ ಸ್ಪೆಷಲ್ ಕ್ಲಾಸ್. ಟೀಚರ್ ಹೇಳಿದ್ರು ಬುತ್ತಿ ತರುವವರು ತನ್ನಿ ಅಂತ.

ನನ್ನ ಆಸೆ ಭುಗಿಲೆದ್ದಿತು. ನಾನು ಹೋಗಿ ಅಮ್ಮನಿಗೆ ಹೇಳಿದೆ. ನಾಳೆ ಸ್ಪೆಷಲ್ ಕ್ಲಾಸ್ ಇದೆ, ಎಲ್ಲರೂ ಬುತ್ತಿ ತರಬೇಕಂತೆ.

ಹೌದಾ ಎಂದವರೇ ನಮ್ಮಮ್ಮ ಎದ್ದು ಇಡ್ಲಿಗೆ ನೆನೆಸಲು ಹೋದರು. ಅವರಿಗೂ ಇಡ್ಲಿ ಮಾಡಲು ಒಂದು ನೆಪ ಸಿಕ್ಕಿತಿರಬೇಕು.

ಪಕ್ಕದ ಮನೆಯ ಲಿಲ್ಲಿ ಮಾಯಿಯ ಹತ್ರ ನಿಮ್ಮ ಮನೆಯಲ್ಲಿ ನೇತಾಡಿಸಿಕೊಂಡು ಹೋಗುವಂಥ ಪಾತ್ರೆ ಇದೆಯಾ ಮುಚ್ಚಳ ಇರುವಂಥದ್ದು? ಎಂದು ಕೇಳಿದರು.

ಇದೆ ಇದೆ ಅಂತ ನೀವು ಕೇಳೋದು ಹೆಚ್ಚೋ ನಾವು ಕೊಡೋದು ಹೆಚ್ಚೊ ಅನ್ನೋ ರೀತಿ ಮೇಲೆ ಅಟ್ಟಕ್ಕೆ ಮಗನನ್ನು ಹತ್ತಿಸಿ ಪಾತ್ರೆ ತೆಗೆದು ತಿಕ್ಕಿ ತಿಕ್ಕಿ ತೊಳೆದು ತಂದು ಕೊಟ್ಟರು. ಐವತ್ತು ಇಡ್ಲಿ ಹಿಡಿಸುವ ಪಾತ್ರೆ ಅದು.

ಇನ್ನೊಂದು ಬೇಕಾದರೆ ಇದೆ ಚಿಕ್ಕದು ಅಂದರು ಲಿಲ್ಲಿ ಮಾಯಿ. ಕೊಡಿ ಚಟ್ನಿ ಹಾಕಲು ಆಗುತ್ತೆ ಅಂದ್ರು ಅಮ್ಮ.

ನಾನಾಗ ಐದನೆ ಕ್ಲಾಸ್, ಮನೆಯಲ್ಲಿ ಎರಡು ಇಡ್ಲಿ ತಿಂದರೆ ಹೆಚ್ಚು. ಇಷ್ಟು ದೊಡ್ಡ ಪಾತ್ರೆಯಲ್ಲಿ ಯಾರಿಗೆ ಬುತ್ತಿ ಇದು. ದೇವರೇ ಈ ಅಮ್ಮನಿಗೆ ಒಂದು ಹೇಳಿದರೆ ಒಂದು ಮಾಡ್ತಾರಲ್ಲಾ ಅಂತ ನನಗೆ ಕೋಪ, ಆಕ್ರೋಷ, ಅಳು, ಸಂಕಟಗಳ ಮಿಶ್ರ ಭಾವ. ಅಮ್ಮನಿಗೆ ಎದುರು ಮಾತನಾಡಲು ಇದೆಯೇ?

ಬೆಳಿಗ್ಗೆ ಬಹಳ ಸಂಭ್ರಮದಿಂದ ಅಮ್ಮ ಆ ಪಾತ್ರೆಯೊಳಗೆ ಇಡ್ಲಿ ಮತ್ತು ಅದಕ್ಕಿಂತ ಸ್ವಲ್ಪ ಚಿಕ್ಕದರಲ್ಲಿ ಚಟ್ನಿ ಹಾಕಿ, ಒಂದು ದೊಡ್ಡ ಪ್ಲಾಸ್ಟಿಕ್ ವಯರ್‌ನ ಬುಟ್ಟಿಯೊಳಗೆ ಇಟ್ಟು ಕೊಟ್ಟರು.

 ಒಂಚೂರು ಧೈರ್ಯ ತಂದುಕೊಂಡು ಇಷ್ಟು ಬೇಡ ಸ್ವಲ್ಪ ಸಾಕು ಅಂದೆ.

ಎಲ್ಲರೂ ಅಂದ್ರೆ ಇಡೀ ಕ್ಲಾಸ್ ಮಕ್ಕಳು ಇರ್ತಾರಲ್ಲ. ಇದೂ ಸಾಕಾಗುತ್ತೋ ಇಲ್ವೊ. ಎಲ್ಲರಿಗೂ ಹಂಚು ಅಂದರು ಅಮ್ಮ.

ದೇವರೇ ಯಾರಾದರೂ ನನ್ನನ್ನು ಕಾಪಾಡಬಾರದೇ. ನನಗೆ ಗೊತ್ತಿದ್ದ ದೇವರಿಗೆಲ್ಲಾ ಬೇಡಿಕೊಂಡರೂ ನನ್ನನ್ನು ಕಾಪಾಡಲು ಯಾರೂ ಬಂದಿರಲಿಲ್ಲ. ಎಲ್ಲೋ ಅವನು ಹೋಗಲಿ, ನಾನೇ ಯಾಕೆ ಹೋಗಬೇಕು. ಅಷ್ಟು ದೇವರಲ್ಲಿ ನಾನು ಮಾತ್ರ ಸುಮ್ಮನೆ ಕೂತಿರುವುದಾ ಎಂದು ನಾನು ಬೇಡಿದ ಪ್ರತೀ ದೇವರೂ ಅಂದುಕೊಂಡಿರಬೇಕು . ಹಾಗಾಗಿ ಯಾರೂ ಎದ್ದು ಬಂದು ನೋಡುವ ಕಷ್ಟ ತಗೊಳ್ಳಲಿಲ್ಲ.

ಅಷ್ಟು ದೊಡ್ಡ ಬುಟ್ಟಿಯನ್ನು ಇಷ್ಟು ಚಿಕ್ಕ ಹುಡುಗಿ ಹೇಗೆ ಎತ್ತಿಕೊಂಡು ಹೋಗಬೇಕು ಅನ್ನುವ ಸಾಮಾನ್ಯ ಜ್ಞಾನವೂ ಯಾರಿಗೂ ಇರಲಿಲ್ಲವೇನೋ.

ಕಷ್ಟ ಪಟ್ಟು ಎತ್ತಿಕೊಂಡು ಹೋಗುತಿದ್ದರೆ ಆವತ್ತು ದಾರಿಯಲ್ಲಿ ಯಾವತ್ತೂ ಸಿಗದವರೆಲ್ಲ ಸಿಕ್ಕಿ ನಿಲ್ಲಿಸಿ ಅದು ಏನು ಎಂದು ಕೇಳಿ ನಕ್ಕು ಹೋಗುತಿದ್ದರೆ ನನಗೆ ಎಷ್ಟು ಅವಮಾನ ಆಗ್ತಾ ಇತ್ತು. ಗೊತ್ತಾ!?

ಶಾಲೆ ತಲುಪಿದ ಮೇಲೂ ಟೀಚರುಗಳೂ ಕೇಳಿದ್ದೇ ಕೇಳಿದ್ದು. ಏನಿದು ಇಡೀ ಶಾಲೆಗೆ ಹಂಚಲು ತಂದಿದ್ದಿಯಾ ಅಂತ.

ನನಗೆ ಭೂಮಿ ಬಾಯ್ಬಿಡಬಾರದೇ ಎನ್ನುವ ಮಾತಿನ ನಿಜವಾದ ಅರ್ಥ ಆವತ್ತು ತಿಳಿಯಿತು.

ಅಂತೂ ಇಂತೂ ಮದ್ಯಾಹ್ನ ಇಡ್ಲಿ ಚಟ್ನಿ ಎಲ್ಲರಿಗೂ ಹಂಚಿ ತಿಂದು ಮತ್ತೆ ಪಾತ್ರೆಯನ್ನು ಬುಟ್ಟಿ ಸಮೇತ ಹೊತ್ತು ತಂದು ತಲುಪಿಸುವವರೆಗೆ ನನ್ನನ್ನು ನಾನು ನೂರು ಸಲ ಬೈಕೊಂಡೆ.. ಬುತ್ತಿಯ ಆಸೆ ಇನ್ನೂ ಉಳಿದಿದೆಯಾ ಅಂತ ನನ್ನ ನಾನೇ ಕೇಳಿಕೊಂಡೆ.

ಆಮೇಲಿಂದ ಸ್ಪೆಷಲ್ ಕ್ಲಾಸ್ ಇದ್ದಾಗ ಬುತ್ತಿ ತರುವವರು ತರಬಹುದು. ಅವರವರಿಗೆ ಮಾತ್ರ. ಇಡೀ ಕ್ಲಾಸಿಗಲ್ಲ ಎಂದು ಓರೆ ಕಣ್ಣಲ್ಲಿ ನನ್ನ ನೋಡಿ ಟೀಚರ್ ಹೇಳುವಾಗ ಪದೇ ಪದೇ ಅವಮಾನ.

ಎಷ್ಟೋ ವರ್ಷದವರೆಗೆ ಇಡ್ಲಿ ಅಂದರೆ ಸಾಕು ಲಿಲ್ಲಿ ಮಾಯಿಯ ಅಟ್ಟದ ಮೇಲಿಟ್ಟಿದ್ದ ಆ ದೊಡ್ಡ ನೇತಾಡಿಸುವ ಪಾತ್ರೆ ಜೊತೆಗೆ ದಾರಿಯಲ್ಲಿ ನನಗಾದ ಘೋರ ಅಪಮಾನದ ಕಹಿ ನೆನಪು.

ಆಮೇಲೆ ಈ ಅಮ್ಮನ ಅತೀಯಾದ ಸಂಭ್ರಮದಿಂದ ಹೀಗಾದದ್ದು, ಪಾತ್ರೆಯದಾಗಲೀ, ಇಡ್ಲಿಯದಾಗಲೀ ಏನೂ ತಪ್ಪಿಲ್ಲ. ಎಂದು ಸಮಾಧಾನ ಮಾಡಿಕೊಂಡ ಮೇಲೆ ನಿಧಾನವಾಗಿ ಇಡ್ಲಿಯ ಮೇಲೆ ಪ್ರೀತಿ ಅಂಕುರಿಸಿತು.

ಎಲ್ಲರೂ ಇಡ್ಲಿ ಬಗ್ಗೆ ಬರೆದಾಗ ನನ್ನದೂ ಒಂದಿರ್ಲಿ ಅಂತ ಬರೆದಿದ್ದು. ಪಿರಿಪಿರಿ ಓದಿ ಬಹಳ ದಿನ ಆಗಿತ್ತು ಅಲ್ವಾ ನೀವೂ.

-.

Leave a Reply

Back To Top