ಅಂಕಣ ಬರಹ

ಲಿಂಗನೆಂಬೆ ಸಂಗನೆಂಬೆ ಮುಖಲಿಂಗಿಗಳೆಂಬೆ

Basavanna | A Man Ahead of his Time | Praveen Hanchinal

ಎಡದ ಕೈಯಲ್ಲಿ ಕತ್ತಿ ಬಲದ ಕೈಯಲಿ ಮಾಂಸ

ಬಾಯಲ್ಲಿ ಸುರೆಯ ಗಡಿಕೆ ಕೊರಳಲಿ ದೇವರಿರಲು

ಅವರ ಲಿಂಗನೆಂಬೆ ಸಂಗನೆಂಬೆ

ಕೂಡಲಸಂಗಮದೇವಾ ಅವರ ಮುಖಲಿಂಗಿಗಳೆಂಬೆ ೧

ಬಸವಣ್ಣನವರ ಈ ವಚನ ರಚನೆಯ ಹಿಂದೆ ವಿಶಾಲವಾದ ಐತಿಹಾಸಿಕ ಹಿನ್ನೆಲೆ ಇರುವುದು ಮೊದಲ ಓದಿಗೇ ತಿಳಿದುಬರುತ್ತದೆ. ಹಾಗೆ ನೋಡಿದರೆ ಎಲ್ಲಾ ವಚನಗಳಿಗೂ ಇದೇ ರೀತಿಯ ಐತಿಹಾಸಿಕ ಹಿನ್ನೆಲೆ ಇರುವುದಾದರೂ, ಈ ವಚನದ ಆಂತರ್ಯದಲ್ಲಿ ತಾಳಿಕೊಳ್ಳುವ, ಸಹಿಸಿಕೊಳ್ಳುವ ಗುಣವಿರುವುದರಿಂದ ಬಹುಮುಖ್ಯವಾದದ್ದಾಗಿದೆ. ಆಚರಣೆ, ಅಭಿರುಚಿ, ಭಿನ್ನ ಅಭಿಪ್ರಾಯ, ಆಹಾರ, ತಾತ್ವಿಕ ಹಿನ್ನೆಲೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೇ ಈ ವಚನವು ಭಿನ್ನ ಅಭಿರುಚಿ ಆಚರಣೆಗಳನ್ನು ಎದುರು ಪಕ್ಷದಲ್ಲಿ ನಿಲ್ಲಿಸಿ ನೋಡದೆ ತಮ್ಮವರೆಂದು ಭಾವಿಸುವ ವೈಶಾಲ್ಯ ಗುಣದಿಂದ ಸದ್ಯದ ಪರಿಸ್ಥಿತಿಗೂ ಬದಲಾಗಬೇಕೆಂಬ ಕರೆಕೊಡುವುದರ ಮೂಲಕ ಈ ವಚನ ಮುಖ್ಯವಾಗುತ್ತದೆ.

ಈ ವಚನಕ್ಕೊಂದು ಬಹುವಿಸ್ತಾರವಾದ ಐತಿಹಾಸಿಕ ಹಿನ್ನೆಲೆ ಇದೆಯೆಂದು ಮೊದಲೇ‌ ಹೇಳಿದ್ದೇನೆ. ವಚನಕಾರರ ಆಗಮನಕ್ಕೂ ಮೊದಲು ಶೈವ ಮತ್ತು ಶಾಕ್ತಪರಂಪರೆಗಳ ಮಹಾಪೂರವೇ ಈ ನೆಲದಲ್ಲಿ ಹರಿದಿದೆ. ಆ ನದಿಯ ಮಹಾಹರಿವನ್ನು ಅರಿತು ಕೃಷ್ಣೆ ಆಚೆ ಈಚೆ ಬದುಕುತ್ತಲೇ ಮಾತನಾಡಿರುವವರು ಶಿವಶರಣರೆನ್ನುವುದನ್ನು ಮರೆಯುವ ಹಾಗೇ ಇಲ್ಲ. ಒಂದು ಮಹಾಪೂರವು ಮತ್ತೊಂದು ಮಹಾಪೂರದೊಡನೆ ಸಾಯುಜ್ಯ ಸಂಬಂಧ ಸಾಧಿಸಿಕೊಂಡು ಬಂದ ವಿವೇಚನಾಯುತ ಹಾದಿಯೇ ಈ ವಚನದ್ದಾಗಿದೆ. ಲಕುಲೀಶ ಪಾಶುಪಥ, ಕಾಳಾಮುಖ, ಕಾಪಾಲಿಕ ಮತ್ತು ಇತರ ಗುಪ್ತ ತಾಂತ್ರಿಕ ಪಂಥಗಳ ಆಚರಣೆಗಳು ಹೀಗೆಯೇ ಸಾಮಾನ್ಯವಾಗಿರದೆ ಅಸಾಮಾನ್ಯ ಆಚರಣೆಗಳಾಗಿದ್ದವು. ತಮ್ಮ ಅಸಾಮಾನ್ಯ ಕ್ರಿಯೆ, ನಂಬಿಕೆ, ಆಚರಣೆಗಳಿಂದಲೇ ಅವು ಸಮಾಜದಿಂದ ಬಹುದೂರ ನಿಲ್ಲುವ ಸಂದರ್ಭಗಳು, ಖಂಡನೆ – ಮಂಡನೆಗೆ ಒಳಗಾಗುವ ಸಮಯವೂ ಬಂದಿದ್ದವು.

ಶ್ರೀಕಂಠ ಎಂಬುವವನಿಂದ ಪ್ರಾರಂಭಗೊಂಡು, ಲಕುಲೀಶ (ನಕುಲೀಶ, ಲಕುೞೀಶ, ಲಕುಲಿನ್, ಲಕುಲೀಶ್ವರ ಎಂಬ ಹೆಸರುಗಳಿಂದಲೂ ಕರೆಯಲಾಗಿದೆ) ಎಂಬುವವನಿಂದ ಉಚ್ಛ್ರಾಯ ಸ್ಥಿತಿಗೆ ತಲುಪಿದ ಪಾಶುಪಥ ಪಂಥವು ತನ್ನ ಆಚರಣೆಗಳಿಂದಲೇ ವಿಶಿಷ್ಟವಾಗಿದೆ. ಕಾರ್ಯ, ಕಾರಣ, ಯೋಗ, ವಿಧಿ ಹಾಗು ದುಃಖಾಂತಗಳೆಂದು ಐದು ವಿಭಾಗಮಾಡಿ ಕೌಂಡಿಣ್ಯನು ಪಾಶುಪಥದ ಸಿದ್ಧಾಂತವನ್ನು ನಿರೂಪಿಸಿರುವನು. ಇದರೊಳಗೆ “ಗಣಗಾರಿಕೆ” ಎನ್ನುವ ಆಚರಣೆಯು ಮಹತ್ವದ್ದಾಗಿದೆ ಮತ್ತು ಮುಂದಿನ ಶೈವ ಆಚರಣೆಗಳ ಮೇಲೆ ಮಹತ್ತರವಾದ ಪ್ರಭಾವ ಬೀರಿದೆ. ಇವರ ಆರು ಬಗೆಯ ವಿಚಿತ್ರ ಆಚರಣೆಗಳನ್ನು ಹೀಗೆ ನೋಡಬಹುದು – ಕ್ರಾಥನ ( ನಿದ್ದೆ ಬಂದಿಲ್ಲದಿದ್ದರೂ ಬಂದವರಂತೆ ಗೊರಕೆ ಹೊಡೆದು ನಟಿಸುವುದು ), ಸ್ಪಂದನ ( ಲಕ್ವ ಹೊಡೆದವರಂತೆ ನಟಿಸುವುದು ), ಮಂಡನ ( ಕುಂಟನಂತೆ ನಟಿಸುವುದು ), ಶೃಂಗಾರಣ ( ಸ್ತ್ರೀ ಎದುರಿನಲ್ಲಿ ಶೃಂಗಾರ ಚೇಷ್ಟೆಗಳನ್ನು ಮಾಡುವುದು ), ಅವಿತ್ಕರಣ ( ತೀರ್ಪಿಲ್ಲದೆ ತೀರ್ಪು ಕೊಡುವವನಂತೆ ನಟಿಸುವುದು ), ಅವಿದತ್ ಭಾಷಣ ( ಪರಸ್ಪರ ವಿರುದ್ಧ ರೀತಿಯಲ್ಲಿ ಪ್ರಜ್ಞೆಯಿದ್ದೂ ಮಾತನಾಡುವುದು ) ಇವೆಲ್ಲವೂ ವಿಚಿತ್ರ ರೀತಿಯ ಆಚರಣೆಗಳು. ಈ ಕಾರಣದಿಂದ ವಚನಕಾರರು ಇವುಗಳನ್ನು ತಿರಸ್ಕರಿಸಿದರು. ೨

ಮಹಾವ್ರತಿ, ಮಹಾಪಾಶುಪಥ ಎಂಬ ಹೆಸರುಗಳಿಂದ ತಮ್ಮನ್ನು ಕರೆದುಕೊಂಡ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳೆಂಬ ಹೆಸರನ್ನು ಬಳಸಿಕೊಳ್ಳುವ ವಿಚಿತ್ರ ಆಚರಣೆಯ ಒಂದು ಪಂಥ ಕಾಳಾಮುಖ. ಇದರ ಸ್ಥಾಪನಾಚಾರ್ಯರು ಯಾರೆಂದು ತಿಳಿಯದು. ಕೆಲವರು ದಕ್ಷಿಣ ಕೇದಾರೇಶ್ವರ ಎಂದು, ಕಾಶ್ಮೀರಿ ಪಂಡಿತ ಎಂದು ಕರೆದುಕೊಳ್ಳುವುದುಂಟು. ಇದೊಂದು ಸಂಚಾರೀ ಪ್ರವಾಚರಕಾಗಿದ್ದ ಗುಂಪು. ಇವರು ಜ್ಞಾನ ಪಕ್ಷಪಾತಿಗಳು. ಸಾಮಾಜಿಕ ಅಸಮಾನತೆ ಹೋಗಲಾಡಿಸುವುದು, ಶಿಕ್ಷಣ, ಲಿಂಗ ತಾರತಮ್ಯ ನಿವಾರಣೆ ಮತ್ತು ಸ್ತ್ರೀ ಸ್ವಾತಂತ್ರದ ಕಡೆಗೆ ಹೆಚ್ಚು ಗಮನ ಕೊಡುವವರು. ಡಾ. ಎಸ್. ವಿದ್ಯಾಶಂಕರರು “ಒಂದು ವಿಧದಲ್ಲಿ ಕಾಳಾಮುಖಶೈವದ ಪರಿಷ್ಕೃತ ರೂಪವೇ ವೀರಶೈವ ಎನಿಸಿದರೂ, ಇವುಗಳ ನಡುವೆ ಸಾಮ್ಯ – ವ್ಯತ್ಯಾಸಗಳು ಸಾಕಷ್ಟು ಪ್ರಮಾಣದಲ್ಲಿವೆ” ಎಂದಿದ್ದಾರೆ. ಅವುಗಳ ಕುರಿತು ಬಹು ವಿಸ್ತಾರವಾದ ವಿವೇಚನೆಯನ್ನೂ ಮಾಡಿದ್ದಾರೆ.೩

ಶೈವಶಾಖೆಗೆ ಸೇರಿದ, ಶಿವ – ಭೈರವ – ಅವನ ಗಣದ ಆರಾಧನೆಯನ್ನು ಮಾಡುವವರು ಕಾಪಾಲಿಕರು. ಕಾಪಾಲಿಕರಿಗಿದ್ದ ಮತ್ತೊಂದು ಹೆಸರು ಮಹಾವ್ರತಿ. ಯಶಸ್ತಿಲಕ ಚಂಪುವಿನಲ್ಲಿ ದೇಹದ ಮಾಂಸವನ್ನೇ ಮಾರುತ್ತಿದ್ದ ಮಹಾವ್ರತಿಗಳ ಪ್ರಸ್ತಾಪವಿದೆ. ಪಾಶುಪಥ ಮತ್ತು ಕಾಳಾಮುಖರಲ್ಲಿ ಮಹಾವ್ರತಗಳು ಬೇರೆ ಬೇರೆಯಾದ ಸಾಧನಾವಸ್ಥೆಯ ವಿಧಿಗಳು. ನರಮಾಂಸದಲ್ಲಿ ಆಸಕ್ತಿಯಿದ್ದವರೆಂದು, ಹಸಿಯ ತಲೆಗಳನ್ನು ಪೋಣಿಸಿ ಹಾರ ಮಾಡಿಕೊಳ್ಳುತ್ತಿದ್ದರೆಂದು, ಹಣೆಯ ಮೇಲೆ ಮೂರು ಸಮಾನ ಕಪ್ಪು ಗೆರೆಗಳು ಇದ್ದವೆಂದೂ, ಅವರು ಕೂದಲನ್ನು ಎತ್ತಿಗಟ್ಟಿ ಗಂಟು ಹಾಕಲಾಗಿತ್ತೆಂದೂ, ಅವರ ಸೊಂಟ ಪಟ್ಟಿ ಮತ್ತು ತೊಡುತ್ತಿದ್ದ ವಸ್ತ್ರವು ಹುಲಿಯ ಚರ್ಮದಿಂದ ಮಾಡಲಾಗಿತ್ತೆಂದೂ ವಿವರಣೆಗಳು ಬರುತ್ತವೆ. ಮಧು, ಮಾಂಸ, ಮೀನು, ಮುದ್ರಾ ಹಾಗೂ ಮೈಥುನಗಳೆಂಬ ಪಂಚ “ಮ” ಕಾರಗಳೊಡನೆ ಸಂಬಂಧ ಹೊಂದಿರುವವರು. ಮೊದಲ ನಾಲಕ್ಕು ಕೊನೆಯದನ್ನು ಉತ್ತೇಜಿಸುವ ಉತ್ತೇಜಕವಾಗಿ ಕೆಲಸ ಮಾಡುತ್ತದೆ. ಮಧ್ಯವು ಶಕ್ತಿಯೆಂದೂ, ಮಾಂಸವು ಶಿವನೆಂದೂ ಇವುಗಳನ್ನು ಅನುಭೋಗಿಸುವವನು ಸ್ವತಃ ಭೈರವನೇ ಅಗಿರುವನೆಂದೂ, ಈ ಎರಡರ ಸಂಯೋಗದಿಂದ ಉದ್ಭವವಾಗುವ ಪರಮಾನಂದವೇ ಮೋಕ್ಷವೆಂದು ನಂಬಿದವರಾಗಿದ್ದಾರೆ. ಮಾಯಾ, ಮಂತ್ರ, ಸಿದ್ಧಿಗಳ ಸಂಪಾದನೆಯಲ್ಲಿ ತಲ್ಲೀನರಾದ ಹಠಯೋಗವನ್ನು ನಂಬಿರುವವರು. ಅಣಿಮಾನ್, ಲಘಿಮಾನ್, ಗರಿಮಾನ್, ಮಹಿಮಾನ್, ಈಶತ್ವ, ಪ್ರಾಕಾಮ್ಯ, ವಾಶಿತ್ವ, ಕಾಮಾವಾಸಾಯಿತ್ವಗಳೆಂಬ ಅಷ್ಟಮಹಾಸಿದ್ಧಿಗಳ ಬೆನ್ನುಹತ್ತಿದವರು. ಊರಿನ ಜನರಿಂದ ದೂರ ಉಳಿಯುತ್ತಿದ್ದವರು ಎಂಬ ಮಾಹಿತಿಗಳು ದೊರೆಯುತ್ತದೆ. ೪

ಈ ಮೇಲಿನ ವಿವರಣೆಗಳೆಲ್ಲವನ್ನೂ ವಚನದ ಪಕ್ಕದಲ್ಲಿಟ್ಟು ನೋಡುವುದು ವಚನದ ಐತಿಹಾಸಿಕ ವಿವೇಚನೆಗೆ ಮುಖ್ಯಾವಾಗುತ್ತದೆ. ಬಸವಣ್ಣನವರ ವ್ಯಕ್ತಿತ್ವದಲ್ಲಿ ಆದ ಒಂದು ವಿಕಾಸವನ್ನೇ ಈ ವಚನ ಸಾದರ ಪಡಿಸುತ್ತಿದೆ. ಘೋರ ಆಚರಣೆಗಳಾದ ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲಿ ಮಾಂಸ, ಬಾಯಲ್ಲಿ‌ ಸುರೆಯ ಗಡಿಗೆಗಳನ್ನು ಹೊತ್ತು ನಡೆಯುತ್ತಿದ್ದ ಕಾಪಾಲಿಕರನ್ನೇ ದೃಷ್ಟಿಯಾಗಿಸಿಕೊಂಡು ಮಾತನಾಡಿರುವ ವಚನವಿದು. ಕಾಪಾಲಿಕ ಶೈವ ಸಾಧಕರನ್ನು ಊರಿನಿಂದ ಹೊರಗೆ ಇಟ್ಟಿದ್ದೇ ಅವರಲ್ಲಿನ ಆಚರಣೆಗಳಲ್ಲಿನ ರೂಕ್ಷತೆಯನ್ನು ಗಮನಿಸಿ. ಆ ರೂಕ್ಷ ಆಚರಣೆಗಳ ನಡುವೆಯೂ ಯಾವುದೋ ಒಂದಂಶ‌ ಒಳಿತಾದುದು ಇರುವುದಾದರೆ (ಕೊರಳಲಿ ಲಿಂಗವಿರಲು) ಅವರನ್ನು ಸಾಕ್ಷಾತ್ ಕೂಲಸಂಗಮದೇವನೆಂದೇ ಕರೆವೆ, ಲಿಂಗವೇ ಎಂಬೆ ೫ ಮುಖಲಿಂಗಿಗಳು ೬ ಎಂಬೆ ಎಂದು ಅತ್ಯುನ್ನತ ಮಟ್ಟದಲ್ಲಿ ನೋಡಿರುವುದು ಕಾಣುತ್ತದೆ. ಮೊದಲೆಲ್ಲಾ ಬಸವಣ್ಣನವರ ವಚನಗಳು ಇಂತಹಾ ಆಚರಣೆಗಳನ್ನು ನೇರಾನೇರವಾಗಿ ಖಂಡಿಸುತ್ತಿತ್ತು. ಈ ಮಾತಿಗೆ ಸಾಕ್ಷಿಯಾಗಿ ಅವರದೇ ಒಂದು ವಚನವನ್ನು ಗಮನಿಸಿ

ಗಂಡ ಶಿವಲಿಂಗದೇವರ ಭಕ್ತ

ಹೆಂಡತಿ ಮಾರಿ ಮಸಣಿಯ ಭಕ್ತೆ

ಗಂಡ ಕೊಂಬುದು ಪಾದೋದಕ ಪ್ರಸಾದ

ಹೆಂಡತಿ ಕೊಂಬುದು ಸುರೆ ಮಾಂಸ

ಭಾಂಡ ಭಾಜನ ಶುದ್ಧವಿಲ್ಲದವರ ಭಕ್ತಿ

ಹೆಂಡದ ಮಡಿಕೆಯ ಹೊಱಗೆ ತೊಳೆದಂತೆ

ಕೂಡಲಸಂಗಮದೇವಾ ೭

ಈ ವಚನದಲ್ಲಿನ ಭಾವವನ್ನೊಮ್ಮೆ ಗಮನಿಸಿ, ವಿವೇಚನೆಗೆ ತೆಗೆದುಕೊಂಡಿರುವ ವಚನದ ಭಾವವನ್ನೊಮ್ಮೆ ಗಮನಿಸಿದರೆ ಒಂದು ಕ್ಷಣ ಬೆರಗಾಗುತ್ತದೆ. ಹೇಗೆ ಇದು ವ್ಯಕ್ತಿಯೊಬ್ಬನಲ್ಲಿ ಸಾಧ್ಯ ? ತನ್ನ ಆಚರಣೆಗಳಿಗಿಂತ ಭಿನ್ನವಾದ ಆಚರಣೆಯನ್ನು ಅದೂ ೧೨ ನೇ ಶತಮಾನದಲ್ಲಿ ಸಹಿಸಿಕೊಳ್ಳುತ್ತಿರುವ ಬಸವಣ್ಣನವರಲ್ಲಾದ ಬದಲಾವಣೆ ಏಕೆ ? ಎಂಬ ಪ್ರಶ್ನೆಗಳು ಮೂಡುತ್ತವೆ. ಅದೂ ಭವಿಯೆಂದು ಕರೆದು, ಶಿವಾಚಾರಕ್ಕೆ ಹೊರಗಾದವನೆಂದು ಕರೆದು ದೂರ ಇಡುತ್ತಿದ್ದ, ಖಂಡಿಸುತ್ತಿದ್ದ ಹಲವಾರು ಉದಾಹರಣೆಗಳು ಅಲ್ಲಮ, ಚೆನ್ನಬಸವಣ್ಣ, ಆದಯ್ಯ ಮುಂತಾದ ವಚನಕಾರರಲ್ಲಿ ಸಾಕ್ಷಿಗಳೇ ಹೊಳೆಯಾಗಿ ಹರಿಯುತ್ತಾ ದೊರೆತಿರುವಾಗ, ಚಳುವಳಿಯೊಂದರ ಮುನ್ನೆಲೆಯಲ್ಲಿ ನಿಂತ ವ್ಯಕ್ತಿಯಲ್ಲಿ ಇಂತಹ ಮಾತುಗಳು ಬರಲು ಹೇಗೆ ಸಾಧ್ಯ ? ಎಂಬ ಪ್ರಶ್ನೆಗಳು ಮೂಡುತ್ತದೆ. ಇದಕ್ಕೆ ಸಾಕ್ಷಿಯಾಗಿ ಬಸವಣ್ಣನವರೊಡನೆ ನಡೆದಿದೆ ಎಂದು ಉಲ್ಲೇಖವಾಗಿರುವ ಪ್ರಖ್ಯಾತ ಸಂದರ್ಭವನ್ನು ಪಕ್ಕದಲ್ಲಿಟ್ಟು ನೋಡಬಹುದು.

ಬಸವಣ್ಣನವರ ಕೀರ್ತಿಯನ್ನು ಕೇಳಿ ಕಿನ್ನರಿ ಬ್ರಹ್ಮಯ್ಯನು ಅವರನ್ನು ಭೇಟಿ ಮಾಡಲು ಬರುವನು. ಬ್ರಹ್ಮಯ್ಯನು ಶಿವನ ಆರೋಗಣೆಗೆ ಉಳ್ಳಿಯನ್ನು ಸುಲಿಯುತ್ತಿರುವುದನ್ನು ಕಂಡು ಬಸವಣ್ಣನು ಆ ವಾಸನೆಯನ್ನು ಹಳಿಯಲು, ಕಿನ್ನರಿ ಬ್ರಹ್ಮಯ್ಯನು ಕೋಪದಿಂದ ಅಲ್ಲಿಂದ ಹೊರಟು ಹೋಗುವನು. ಬಸವಣ್ಣ ಪಶ್ಚಾತ್ತಾಪದಿಂದ ಆತನ‌ ಬಳಿಗೆ ಹೋಗಿ, ಬೇಡಿ ಹಿಂದಕ್ಕೆ ಕರೆತಂದು, ವರ್ಷಕ್ಕೊಮ್ಮೆ ಉಳ್ಳಿಯ ಹಬ್ಬವನ್ನು ಮಾಡುವ ನೇಮವನ್ನು ಆಚರಣೆಗೆ ತಂದನು.‌ ೮

Basava Jayanti - INSIGHTSIAS

ಎಂಬ ಘಟನೆಯು ಹಲವಾರು ಕಡೆಗಳಲ್ಲಿ ಪ್ರಸ್ತಾಪವಾಗಿ ಪ್ರಖ್ಯಾತವೂ ಆಗಿದೆ. ಈ ಘಟನೆಯ ಸತ್ಯಾಸತ್ಯತೆ ಪರೀಕ್ಷಿಸಿ ನೋಡುವುದು ಇಲ್ಲಿನ ಉದ್ದೇಶವಲ್ಲ ಈ ಘಟನೆ ಬಸವಣ್ಣನವರ ಒಲವು ನಿಲುವುಗಳ ಮೇಲೆ ಬೀರಿರಬಹುದಾದ ಬಹುದೊಡ್ಡ ಪರಿಣಾಮ, ಮಾಡಿರಬಹುದಾದ ಬದಲಾವಣೆ ಮೇಲಿನ‌ ವಚನ ರಚನೆಗೆ ಬೀಜರೂಪಿಯೂ ಆಗಿರಬಹುದು. ಮೇಲೆ‌ ವಿವೇಚನೆಗೆ ತೆಗೆದುಕೊಂಡಿರುವ ವಚನ ರಚನೆಯ ಕಾಲವನ್ನು ಎರಡು ರೀತಿಯಾಗಿ ಊಹೆ ಮಾಡಬಹುದು.

೧. ಬಸವಣ್ಣನವರು ಶರಣರನ್ನು ಒಗ್ಗೂಡಿಸುವ ಕಾಯಕಕ್ಕೆ ಆರಂಭ ಮಾಡಿದ ಸಮಯದಲ್ಲಿ ಮೇಲಿನ ವಚನವು ರಚನೆಯಾದದ್ದಿರಬಹುದು.

೨. ಬಸವಣ್ಣನವರು ಕಿನ್ನರಿ ಬ್ರಹ್ಮಯ್ಯನೊಡನೆ ಆದ ಪ್ರಸಂಗದಿಂದ ಬದಲಾವಣೆಗೊಂಡದ್ದರ ಸಾಕ್ಷಿಯಾಗಿ ಈ ವಚನ ರಚನೆ ಆಗಿರಬಹುದು. ಸಣ್ಣದೊಂದು ಉಳ್ಳಿಯ ಘಟನೆಯು ದೊಡ್ಡ ತಾತ್ವಿಕ ಸಂಘರ್ಷವನ್ನು ಅಂತ್ಯಮಾಡುವುದಕ್ಕೆ ಕಾರಣವಾಗಿರಲೂಬಹುದು.

Basavanna Photos, Pictures, Wallpapers,

ಈ ಎರಡು ಊಹೆಗಳಲ್ಲಿ ಮೊದಲನೆಯದನ್ನು ಅಯ್ಕೆ ಮಾಡಿಕೊಂಡರೆ ಧರ್ಮ ಪ್ರಚಾರ, ಪ್ರಸಾರದ ಕಾರಣದಿಂದ ಸಮಯಸಾಧಕರ ಹಾಗೆ ಕಂಡುಬಿಡುತ್ತಾರಾದ ಕಾರಣದಿಂದ ಮೊದಲ ಊಹೆಯನ್ನು ಕೈಬಿಟ್ಟು ಎರಡನೆಯದನ್ನು ಒಪ್ಪಬಹುದು. ಈ ಎರಡನೆಯದನ್ನು ಒಪ್ಪುವುದರಿಂದ ಬಹುದೊಡ್ಡ ಸತ್ಯವೊಂದು ಸದ್ಯದಲ್ಲಿ ಕಣ್ಣ ಮುಂದಿರುವ ತೆರೆಯನ್ನು ತೆರೆಸುತ್ತದೆ.

ಈ ವಚನಕ್ಕೆ ವಿವರಣಾತ್ಮಕ ವ್ಯಾಖ್ಯಾನವನ್ನು ಮಾಡುತ್ತಾ ಡಾ. ಎಸ್. ವಿದ್ಯಾಶಂಕರರು ” ಇಂಥ ವೈಪರೀತ್ಯ ಆಚರಣೆಯ ವ್ಯಕ್ತಿಗಳೂ ವೀರಶೈವದ ತೆಕ್ಕೆಗೆ ಬಂದಿದ್ದರು. ಅವರು ಇಷ್ಟಲಿಂಗಧಾರಿಗಳು ಎನ್ನುವ ಒಂದೇ ಒಂದು ಕಾರಣದಿಂದ ಅವರನ್ನು ಕ್ಷಮಿಸುವ ಔದಾರ್ಯ ಬಸವಣ್ಣನವರದು. ಇದು ಅವರ ಭಾವುಕತೆಯ ಅತಿತನ” ಎಂದಿದ್ದಾರೆ.೯ ಆದರೆ ಇದು ಅತಿತನವಲ್ಲ. ವ್ಯಕ್ತಿಯೊಬ್ಬನ ಬದುಕಿನಲ್ಲಿ ನಡೆಯುವ ಸಣ್ಣ ಸಣ್ಣ ಘಟನೆಗಳು ಮಹತ್ತರವಾದ ಬದಲಾವಣೆಯನ್ನೇ ಮಾಡಿಬಿಡಬಹುದು. ಆದರೆ ಆ ಘಟನೆಗಳ ಆಂತರ್ಯವನ್ನು ಅರಿತು, ಅದು ಉಂಟುಮಾಡುವ ಭಾವದ ಸೂಕ್ಷ್ಮ ತರಂಗಗಳನ್ನು ಅರಿತು ಬದಲಾವಣೆಗೆ ತೆರೆದುಕೊಳ್ಳುವವರಲ್ಲಿ ಸಾಮಾನ್ಯವೆಂದು ಹೇಳಬಹುದು. ಪ್ರತೀ ಕ್ಷಣದ ಬದುಕಿಗೆ ತೆರೆದುಕೊಳ್ಳುವವರಲ್ಲಿ ಮಾತ್ರ ಇಂತಹಾ ಬದಲಾವಣೆಗಳು ಸಾಧ್ಯವೆನ್ನುವುದನ್ನು ಮರೆಯುವ ಹಾಗಿಲ್ಲ.

ಆಹಾರ, ಆಚಾರ, ವಿಚಾರ, ಬದುಕಿನ ಕ್ರಮ, ಧರ್ಮ, ತತ್ವ, ಸಿದ್ಧಾಂತ, ಅಭಿರುಚಿ, ಭಾಷೆ ಹೀಗೆ ಒಡೆಯುತ್ತಲೇ ಬದುಕುವ ನಮಗೆ ಬಸವಣ್ಣನವರ ವಚನವು ಮನುಷ್ಯರು ಒಗ್ಗೂಡಲು ಸಾವಿರ ಕಾರಣಗಳಿವೆ, ಅದಕ್ಕೆ ಮೂಲ ಆಂತರ್ಯದಲ್ಲಿ ಸಹಿಸಿಕೊಳ್ಳುವ ಗುಣ ಬೇಕಿದೆ ಎಂಬುದನ್ನು ತಿಳಿಸುತ್ತದೆ. ಅಭಿರುಚಿಯನ್ನು ಖಂಡಿಸುತ್ತಲೆ ಬದುಕ ದೋಣಿಯನ್ನು ನಡೆಸುತ್ತಿರುವ ನಮಗೆ ಆ ದೋಣಿ ಒಡೆದಿದೆ ಅದನ್ನು ಮುಚ್ಚಬೇಕೆಂಬ ಸತ್ಯ ಕಾಣಿಸುವಂತೆ ಈ ವಚನವಿದೆ. ಮನುಷ್ಯನ ಪ್ರತಿಯೊಂದು ಹೆಜ್ಜೆಯೂ ನದಿಯ ಅಲೆಯಂತೆ, ಪ್ರತೀ ಕ್ಷಣ ಬದಲಾಗುತ್ತದೆಂದು ಕೃಷ್ಣೆಯ ಆಚೆ ಈಚೆಯಲ್ಲಿ ಬದುಕಿದ ಶಿವಶರಣರು ಸಾಧಿಸಿ ತೋರಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಇಂತಹ ವಚನಗಳಿವೆ.


ಅಡಿಟಿಪ್ಪಣಿಗಳು

೧. ಎನ್ನ ನಾ ಹಾಡಿಕೊಂಡೆ.‌ ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ವ ಸಂ ೭೧೯. ಪು ೬೦೯ (೨೦೧೨)

೨. ವಚನಾನುಶೀಲನ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ಬೆಂಗಳೂರು. ಪು ೪ (೧೯೮೯)

೩. ವಚನಾನುಶೀಲನ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ಬೆಂಗಳೂರು. ಪು ೧೪ (೧೯೮೯)

೪. ವಚನಾನುಶೀಲನ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ಬೆಂಗಳೂರು. ಪು ೩೨ (೧೯೮೯)

೫. ವಚನ ಪರಿಭಾಷಾಕೋಶ. ಸಂ. ಡಾ. ಎನ್. ಜಿ. ಮಹಾದೇವಪ್ಪ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು. ಪು ೩೧೭ – ೩೧೮ (೧೯೯೩)

೬. ವಚನ ಪರಿಭಾಷಾಕೋಶ. ಸಂ. ಡಾ. ಮಹಾದೇವಪ್ಪ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು. ಪು ೩೨೩ (೧೯೯೩)

೭. ಎನ್ನ ನಾ ಹಾಡಿಕೊಂಡೆ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ಬೆಂಗಳೂರು. ವ‌ ಸಂ ೧೦೪. ಪು ೮೫ (೨೦೧೨)

೮. ಶಿವಶರಣ ಕಥಾರತ್ನಕೋಶ. ತ. ಸು. ಶಾಮರಾಯ. ತಳುಕು ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಪು ೮೬ (೧೯೬೭)

೯. ಎನ್ನ ನಾ ಹಾಡಿಕೊಂಡೆ.‌ ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ವ ಸಂ ೭೧೯. ಪು ೬೦೯ – ೬೧೦ (೨೦೧೨)

ಹೆಚ್ಚಿನ ಓದಿಗಾಗಿ

೧. ಕಾಪಾಲಿಕ ಮತ್ತು ಕಾಳಾಮುಖ ( ಮರೆಯಾದ ಎರಡು ಶೈವ ಸಂಪ್ರದಾಯಗಳು ) ಇಂಗ್ಲೀಷ್ ಮೂಲ : ಡೇವಿಡ್ ಲಾರೆಂಜೆನ್ ಕನ್ನಡಕ್ಕೆ : ಡಾ. ವಿರೂಪಾಕ್ಷ. ಕನ್ನಡ ವಿಶ್ವವಿದ್ಯಾಲಯ ಹಂಪಿ.

೨. ಸೌಂದರ್ಯ ಲಹರಿ ( ಜಕ್ಕಣಾಮಾತ್ಯ ವಿರಚಿತ ಟೀಕು ಸಹಿತ ) ಸಂ. ವಿದ್ವಾನ್ ಸು. ನಾರಾಯಣಸ್ವಾಮಿ ಶಾಸ್ತ್ರೀ. ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ.

೩. ಅಭಿನವಗುಪ್ತ. ಸಾ. ಕೃ. ರಾಮಚಂದ್ರರಾವ್. ಅಭಿಜ್ಞಾನ ಪ್ರಕಾಶನ. ಬೆಂಗಳೂರು

ಆರ್.ದಿಲೀಪ್ ಕುಮಾರ್

ಹುಟ್ಟಿದ್ದು ೧೯೯೧ ಮಾರ್ಚಿ ೧ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.






Leave a Reply

Back To Top