ಗಜಲ್
ರತ್ನರಾಯಮಲ್ಲ
ಅಳಬೇಕು ಎಂದಾಗಲೆಲ್ಲ ಕನ್ನಡಿಯ ಮುಂದೆ ನಿಲ್ಲುವೆ
ನಗಬೇಕು ಅನಿಸಿದಾಗಲೆಲ್ಲ ಸಮಾಧಿಯ ಮುಂದೆ ನಿಲ್ಲುವೆ
ಎಲ್ಲರೂ ಬೇಕೆನಿಸಿದಾಗಲೆ ಯಾರೂ ಬೇಡವೆನಿಸುತ್ತಾರೆ
ಶಾಂತಿ ಬಯಸಿದಾಗಲೆಲ್ಲ ಮಸಂಟಿಗೆಯ ಮುಂದೆ ನಿಲ್ಲುವೆ
ಬದುಕು ಆಟವಾಡುತಿದೆ ಹೆಜ್ಜೆ ಹೆಜ್ಜೆಗೂ ನನ್ನ ಜೊತೆಯಲ್ಲಿ
ಬಾಳು ಬೇಡವೆನಿಸಿದಾಗಲೆಲ್ಲ ಗೋರಿಯ ಮುಂದೆ ನಿಲ್ಲುವೆ
ಉಸಿರಾಡಲು ನನ್ನ ಗಾಳಿಗಾಗಿ ನಾನು ಹುಡುಕುತಿರುವೆ ಇಲ್ಲಿ
ಪ್ರೀತಿ ಬೇಕೆನಿಸಿದಾಗಲೆಲ್ಲ ನಿನ್ನ ಮನೆಯ ಮುಂದೆ ನಿಲ್ಲುವೆ
ಜೀವನವು ತೂಗುಯ್ಯಾಲೆಯಲ್ಲಿ ಕಣ್ಣಾಮುಚ್ಚಾಲೆ ಆಡುತಿದೆ
ಸಾಯಬೇಕು ಎನಿಸಿದಾಗಲೆಲ್ಲ ‘ಮಲ್ಲಿ’ಯ ಮುಂದೆ ನಿಲ್ಲುವೆ
************************************