ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು
2020 ಎಂಬ ‘ಮಾಯಾವಿ ವರ್ಷ’
ಚಂದ್ರ ಪ್ರಭಾ.ಬಿ.
.
2020 ಎಂಬ ‘ಮಾಯಾವಿ ವರ್ಷ’ ಕುದುರೆಯಂತೆ ಕೆನೆಯುತ್ತ ಆಗಮಿಸಿ ವ್ಯಾಘ್ರನಾಗಿ ಮನುಕುಲವನ್ನು ನುಂಗಿ ಆಪೋಶನ ತೆಗೆದುಕೊಂಡುದು ಇಷ್ಟರಲ್ಲೇ ಇತಿಹಾಸದ ಪುಟ ಸೇರಲಿದೆ. ಆಗಮನಕ್ಕೂ ಮುನ್ನ ಆ ಕುರಿತು ಒಬ್ಬೊಬ್ಬರಲ್ಲಿ ಒಂದೊಂದು ಬಗೆ ವಿಸ್ಮಯಕಾರಿ ನಿರೀಕ್ಷೆ ಇದ್ದುದು ನಿಜ. T20 ಎಂಬ ಚುಟುಕು ಕ್ರಿಕೆಟ್ ಮೂಡಿಸಿದ ಸಂಚಲನ ಅದಕ್ಕೆ ಕಾರಣ.
T20 ಮನೆ ಮನ ಮೈದಾನ ಪ್ರವೇಶಿಸಿದ ಹೊಸತರಲ್ಲಿ ಇಷ್ಟು ಕಡಿಮೆ ಓವರ್ ನಲ್ಲಿ ಅದೆಂಥ ಆಟ? 50 ಓವರಿನಲ್ಲಿ ನಿಜವಾದ ಆಟ ಶುರುವಾಗುವುದು 20 ಓವರ್ ನಂತರ..ಅಂಥದರಲ್ಲಿ ಕೇವಲ 20 ಓವರ್ ಆಟ ಹೇಗಿದ್ದೀತು ಎಂಬುದು ಕಲ್ಪನೆಗೂ ನಿಲುಕದಂತಿತ್ತು.. ಆಟದ ಜಟಾಪಟಿ ಕಣ್ಣಿಗೆ ಕಟ್ಟುವಂತೆ ಸುಳಿದಾಡತೊಡಗಿದಂತೆಲ್ಲ ಆಟದ ಕ್ರೇಜ್ ಇನ್ನಿಲ್ಲದಂತೆ ಹೆಚ್ಚಿತು. ಸಿಕ್ಸರು,ಬೌಂಡರಿಗಳ ಭರ್ಜರಿ T20 ಆಟದ ಹಾಗೇ 2020 ರ ವರ್ಷ ನೋಡನೋಡುತ್ತಲೇ ಸರಿದು ಹೋಗುವ ಮೊದಲು ಬದುಕಿಗೆ ಭರ್ಜರಿ ಬಂಪರ್ ಕೊಟ್ಟೇ ಹೋಗುತ್ತದೆ ಎಂಬ ಉತ್ಸಾಹ, ಉಲ್ಲಾಸಭರಿತ ಚರ್ಚೆ ವಿದ್ಯಾರ್ಥಿಮಿತ್ರರು, ಸಹೋದ್ಯೋಗಿಗಳ ನಡುವೆ ಹರಿಯುತ್ತ ಇರುವಂತೇ ವರ್ಷದ ಮೂರನೇ ತಿಂಗಳ ಇಪ್ಪತ್ಮೂರನೇ ದಿನ ಬದುಕು ಲಾಕ್ಡೌನ್ ಆಗಿತ್ತು!!
ಅದಕ್ಕೆ ಕಾರಣ ಏನೇ ಆಗಿರಬಹುದು. ಆದರೆ ಪರಿಣಾಮ ಮಾತ್ರ ಕಂಡು ಕೇಳರಿಯದಂಥದು. ಚಲಿಸುತ್ತಿರುವ ಸಿನಿಮಾದ ದೃಶ್ಯವೊಂದು ಗಕ್ಕನೆ ನಿಂತು ಸ್ಟಿಲ್ ಆದಂತೆ ಬದುಕು ಚಲನೆ ತೊರೆಯಿತು. ಆಗಲೇ ಆರಂಭವಾದ ಪರೀಕ್ಷೆಗಳು ಮುಂದೂಡಲ್ಪಟ್ಟವು. ಇನ್ನೂ ಆರಂಭವಾಗಬೇಕಿದ್ದ ಪರೀಕ್ಷೆ ಅನಿಶ್ಚಿತತೆಗೆ ದೂಡಲ್ಪಟ್ಟವು. ಹತ್ತಾರು ಕಾರಣದಿಂದ ಊರು ತೊರೆದ ಜೀವಗಳಿಗೆ ತವರ ಸೇರುವ ತುಡಿತ ಕಾಡಿತು. ನೂರಾರು ಸಾವಿರಾರು ಮೈಲಿ ನಡೆದು ಸೋರುವ ಹಿಮ್ಮಡಿ, ಸೋತ ದೇಹ ಹೊತ್ತು ಉಸಿರು ಬಿಟ್ಟರೂ ತವರ ನೆಲದಲ್ಲಿ ಬಿಟ್ಟೇನು ಎನುವ ಹಂಬಲದಲ್ಲಿ ಜೀವಗಳು ಬಸವಳಿದವು. ಬಸುರಿ ಬಾಣಂತಿಯರು, ಎಳೆಯ ಜೀವಗಳು, ವೃದ್ಧರು ದಾರಿ ಮಧ್ಯೆ ಅಸು ನೀಗಿದರು. ರೈತಾಪಿ ಜನರು ತಮ್ಮ ಬೆಳೆಗೆ ಪೇಟೆ ಇಲ್ಲದೇ ಕಂಗಾಲಾದರು. ಕಾರ್ಮಿಕರು ಬೀದಿಗೆ ಬಿದ್ದರು. ಟೊಮ್ಯಾಟೊ, ಕೋಸು, ತರಾವರಿ ಬೆಳೆಗಳನ್ನು ಬೀದಿಯಲ್ಲಿ ಎಸೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಯ್ತು. ಮೊದಲೇ ಕಂಗೆಟ್ಟು ಹೋದ ಬದುಕಿನ ಬಂಡಿ ಮತ್ತಷ್ಟು ಹಳ್ಳ ಹಿಡಿಯಿತು.
ನಾಳೆ ಹೇಗೆ ಎಂಬ ಚಿಂತೆಗಿಂತ ” ಇಂದು ” ಇನ್ನಿಲ್ಲದಂತೆ ಎಲ್ಲರನ್ನೂ ಕಾಡಿತು. ತೆರೆದರೆ ಬಾಗಿಲ ಸಂದಿಯಿಂದಲೂ ವೈರಸ್ಸು ಮನೆ ಸೇರೀತು ಎಂಬ ಆತಂಕದಲ್ಲಿ ಸರಿಯಿತು ತಿಂಗಳೊಪ್ಪತ್ತು. ಕೈಯಲ್ಲಿದ್ದ ಕಾಸು ಕರಗಿ ತಾತ್ಕಾಲಿಕ ನಿರುದ್ಯೋಗ ಕಾಡತೊಡಗಿತು. ಹಲವರಿಗೆ ಅದೇ ಶಾಶ್ವತವೂ ಆಗಿ ಪರಿಣಮಿಸಿ ಬದುಕು ದುರ್ಭರವಾಯ್ತು. ದಿಕ್ಕೆಟ್ಟ ಪ್ರಭುತ್ವ ಏನು ಮಾಡಲೂ ತೋಚದೆ ಹೆಜ್ಜೆ ಹೆಜ್ಜೆಗೂ ಎಡವಿ ಟೀಕೆಗೊಳಗಾಯ್ತು.
ತಿಂಗಳುಗಳು ಕಳೆದು ಕಾರ್ಪೊರೇಟ್ ಜಗತ್ತಿನ ಎಲ್ಲ ಸನ್ಮಿತ್ರರು ಸೇಫ್ ಆದ ನಂತರ ಲಾಕ್ಡೌನ್ ರೂಪಾಂತರ ಹೊಂದಿ ಸುಳಿದಾಡತೊಡಗಿತು. ಜನಸಾಮಾನ್ಯನ ಗೋಳು ಅಂತ್ಯವಿಲ್ಲದ್ದಾಯ್ತು. ಹೊರ ಬಿದ್ದರೆ ಬೆತ್ತದ ರುಚಿ ನೋಡಬೇಕು. ಮನೆ ಒಳಗೆ ಕುಳಿತರೆ ದುಡಿವೆಯಿಲ್ಲ. ಹೊಟ್ಟೆ ಹಸಿವಿಗೆ ಚೀಲದಲ್ಲಿ ಏನಾದರೂ ತುಂಬಲೇಬೇಕು. ತುಂಬಲೇನೂ ಇಲ್ಲ!
ಆ ಓಣಿಯ ಆತ ಈ ಓಣಿಯ ಈಕೆ.. ಚಿಕ್ಕ ವಯಸ್ಸಿನವರು, ವಯಸ್ಸಾದವರು ನೋಡ ನೋಡುತ್ತ ವೈರಸ್ಸಿಗೆ ಆಹುತಿಯಾದರು. ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದವರ ಹೆಸರಿನಲ್ಲಿ ಹಲವರ ಜೇಬು ತುಂಬಿದವು. ಖಾಸಗಿ ಆಸ್ಪತ್ರೆಗಳ ಬಿಲ್ಲು ವೈರಸ್ ದಾಳಿಗಿಂತ ಭಾರವೆನಿಸಿತು.
ಕಾರಣವಿಲ್ಲದೆ ಸಮುದಾಯವೊಂದನ್ನು ಟೀಕೆಗೆ ಗುರಿಪಡಿಸಿದರು ಹಲವರು. ನರಕವಾಯಿತು ಬದುಕು. ಶಾಲೆ, ಕಾಲೇಜು, ಕಚೇರಿ, ಮಿಲ್ಲು, ಫ್ಯಾಕ್ಟರಿ ಎಲ್ಲ ಕದ ಮುಚ್ಚಿದವು. ಗಿಜಿಗುಡುವ ಸಂತೆ, ಪೇಟೆ, ಚೌಕ, ವೃತ್ತಗಳು ನಿಶ್ಶಬ್ದವಾದವು. ಉದ್ದಕ್ಕೆ ಚಾಚಿಕೊಂಡ ನೀರವ ರಸ್ತೆಗಳಲ್ಲಿ ಕಾಡಿನ ಪ್ರಾಣಿಗಳು ನಿರಾತಂಕವಾಗಿ ಸಂಚಾರಗೈಯಲು ತೊಡಗಿದವು. ಫೇಸ್‌ಬುಕ್, ಟ್ವಿಟರ್ ನಂತಹ ಮಾಧ್ಯಮಗಳು ಸುರಕ್ಷಿತ ಅಂತರ ಕಾಯ್ದುಕೊಂಡೇ ಜನರನ್ನು ಬೆಸೆಯುವ ಜನಪ್ರಿಯ ಮಾಧ್ಯಮಗಳಾದವು. ಉದ್ಯೋಗಸ್ಥ ಹೆಣ್ಮಕ್ಕಳಿಗೆ ಅಡುಗೆ ಮನೆಯಲ್ಲಿ ಒಂದಷ್ಟು ಹೊತ್ತು ನಿರಾತಂಕ, ” ಕ್ವಾಲಿಟಿ ” ಸಮಯ ಕಳೆಯುವ ಅವಕಾಶ ನಿರಾಯಾಸವಾಗಿ ಒದಗಿತು. ಒಂದರ್ಥದಲ್ಲಿ ಬಗೆ ಬಗೆ ತಿಂಡಿ ತಿನಿಸು ಮಾಡಿ ಪರಿವಾರದೊಂದಿಗೆ ಸಂಭ್ರಮಿಸುವ ಅನಿರೀಕ್ಷಿತ ಲಾಟರಿ ದಕ್ಕಿತು. ಯೂ ಟ್ಯೂಬ್ ಗೆಳತಿಯರ ನೆರವಿನಿಂದ ದಿನಕ್ಕೊಂದು ಬಗೆಯ ರೆಸಿಪಿ ಪ್ರಯೋಗಗಳು ಶುರುವಿಟ್ಟುಕೊಂಡವು. ಪ್ರೀತಿ ಪಾತ್ರರ ಆರೋಗ್ಯ ಇನ್ನಿಲ್ಲದಂತೆ ಸುಧಾರಿಸಿತು. ಬೇಕಿದ್ದರೂ ಬೇಡದಿದ್ದರೂ ಪ್ರತಿಯೊಬ್ಬರೂ ಕೆಲವಷ್ಟು ಕೆ.ಜಿ. ತೂಕ ಹೆಚ್ಚಿಸಿಕೊಳ್ಳುವಂತಾಯ್ತು. ಒಂದೇ ಪೇಜಿನಲ್ಲಿ ಬಗೆ ಬಗೆ ವ್ಯಂಜನಗಳು ಸಚಿತ್ರ ಪ್ರಕಟವಾಗುವಾಗಲೇ ಹಸಿದ ಹೊಟ್ಟೆಯ, ನಿಸ್ತೇಜ ಕಂಗಳ ಕರುಳು ಹಿಂಡುವ ಚಿತ್ರಗಳೂ ಪ್ರಕಟವಾದವು. ಸಹೃದಯರು ಹಲವರು ಗುಂಪು ಕಟ್ಟಿಕೊಂಡು ಹಸಿದ ಹೊಟ್ಟೆಗೆ ಕೈಲಾದಷ್ಟು ಸಹಾಯ ಮಾಡಿ ಮಾನವೀಯತೆ ತೋರಿದರು. ಮೂರು ಹೊತ್ತು ಅಡುಗೆ ಮನೆಯಲ್ಲಿ ಸವೆಯುವುದು ಹೆಂಗಳೆಯರಿಗೆ ಬೇಸರಿಕೆಯಾಯ್ತು.
ವಿಶ್ವದಾದ್ಯಂತ ನದಿ, ಸರೋವರ, ನಾಲೆಗಳ ನೀರು ಜನ ಸಂಪರ್ಕದಿಂದ ದೂರಾಗಿ ಮಾಲಿನ್ಯ ಕಳಚಿಕೊಂಡು ಫಳಫಳಿಸಿದವು. ದಕ್ಷಿಣ ಉತ್ತರ ಧ್ರುವದ ತುತ್ತ ತುದಿ ಶುಭ್ರಗೊಂಡವು, ದೆಹಲಿಯಂಥ ನಗರಗಳು ತುಸುವಾದರೂ ಮಾಲಿನ್ಯಮುಕ್ತವಾದೆವು, ಗಂಗೆ ಯಮುನೆಯರ ಶತಮಾನದ ಕೊಳೆ ಕಳೆಯಿತೆಂದು ಪತ್ರಿಕೆಗಳಲ್ಲಿ ವರದಿಯಾಯ್ತು.
ಗೆಳತಿಯರು ಅಚ್ಚರಿ ಮೂಡಿಸುವ ಅನುಭವ ಹಂಚಿಕೊಂಡರು. ನೌಕರಿ ಅಂಬೊ ಚಾಕರಿ ಶುರುವಾದಾಗಿನಿಂದ ಶುರುವಾದ ಬಸ್ ಪ್ರಯಾಣ ತಂದ ಬೆನ್ನು ನೋವು ತಿಂಗಳಾನುಗಟ್ಚಲೆ ವಿರಾಮದಿಂದ ಕಡಿಮೆಯಾಗಿತ್ತು ಗೆಳತಿಗೆ. ಬಿದ್ದು ಕಾಲಿಗೆ ಪ್ಲಾಸ್ಟರ್ ಹಾಕಿಸಿಕೊಂಡ ಮತ್ತೊಬ್ಬಾಕೆಗೆ ಕಾಲಿನ ಉಳುಕು ಅಕ್ಷರಶಃ ಮಾಯವಾಗಿತ್ತು. ಪಾಠಗಳಿಲ್ಲದೆ ಸೊರಗಿದ ತರಗತಿಗಳಿಗೆ ತಾತ್ಕಾಲಿಕ ಪರ್ಯಾಯ ಮಾರ್ಗಗಳು ಒದಗಿ ಬಂದವು. ಪರಿಪೂರ್ಣ ಅಲ್ಲದಿದ್ದರೂ ಅಷ್ಟೋ ಇಷ್ಟೋ ಆಸರಾಯಿತು ಆನ್‌ಲೈನ್. ನಗರಗಳ ನೌಕರಿ ತೊರೆದು ಹಳ್ಳಿಗಳಿಗೆ ಹಿಂದಿರುಗಿದ ಯುವಕರು ಪಿಕಾಸಿ, ಹಾರೆ, ಗುದ್ದಲಿ ಹಿಡಿದು ಬಾವಿ, ಹಳ್ಳ, ಕಾಲುವೆ ತೋಡಿದರು. ಒಕ್ಕಲುತನದಲ್ಲಿ ಬದುಕಿದೆ ಎಂದು ಮನಗಂಡರು. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಕಳಕೊಂಡ ಹಲವಾರು ಮಿತ್ರರು ತಳ್ಳು ಗಾಡಿಯಲ್ಲಿ ಹಣ್ಣು ತರಕಾರಿ ಮಾರಾಟಕ್ಕೆ ತೊಡಗಿದರು. ಅಕ್ಷರಶಃ ಗುಡಿ ಕೈಗಾರಿಕೆ ಎಂಬುದು ಸಾಕಾರಗೊಂಡಿತು. ಹಲವರು ಗೃಹ ಉದ್ಯೋಗ ಆರಂಭಿಸಿದರು. ಇಲೆಕ್ಟ್ರಾನಿಕ್ ಮಾಧ್ಯಮಗಳನ್ನು ಮಾರಾಟಕ್ಕೆ ವೇದಿಕೆಯಾಗಿ ಬಳಸಿಕೊಂಡರು. ಅಂಚೆಯಣ್ಣ ಹೆಚ್ಚೆಚ್ಚು ಆಪ್ತನಾದ. ಆಡಂಬರ ತೆರೆಗೆ ಸರಿದು ಖರ್ಚಿಲ್ಲದ ಮದುವೆಗಳಾದವು. ಮದುವೆಗೆ ಕರೆಯದಿದ್ದರೆ ಯಾರೂ ಅನ್ಯಥಾ ಭಾವಿಸುವುದಿಲ್ಲ ಎಂಬುದು ಎಲ್ಲರಿಗೂ ಸುಲಭವಾಗಿ ಅರ್ಥವಾಯಿತು.
ವೈದ್ಯೆ ಗೆಳತಿಗೆ ಫೋನ್ ಸಂಭಾಷಣೆಯಲ್ಲಿ ಕೇಳಿದ್ದೆ, “ಈ ಲಾಕ್ಡೌನ್ ಯಾವೆಲ್ಲ ರೀತಿ ಪರಿಣಾಮ ಬೀರಬಹುದು” ಅಂತ. “ಗಾಯ ಅಳಿದರೂ ಅಳಿಯದೇ ಉಳಿವ ಅದರ ಕಲೆಗಳಂತೆ ಶಾಶ್ವತ ವೈಕಲ್ಯ ಉಳಿಯುತ್ತೆ ಕಣೇ” ಅಂತ ನೋವಿನಿಂದ ನುಡಿದಿದ್ದಳಾಕೆ. ಅದು ದಿನ ದಿನವೂ ಮನದಟ್ಟಾಗುತ್ತ ಸಾಗಿತು.
ಎಂದಿಗಿಂತ ಹೆಚ್ಚು ಆತಂಕಕಾರಿ ಎನಿಸುವ ಆರ್ಥಿಕತೆ, ನಿರುದ್ಯೋಗ ಹೆಗಲೇರಿ ಕುಳಿತಿವೆ. ಕೊರೊನಾವನ್ನು ಹಿಂಬಾಲಿಸಿ ಬಂದ ಪ್ರವಾಹ ಗಾಯದ ಮೇಲೆ ಬರೆ ಎಳೆದಿದೆ. ಬೇರೆ ಯಾವುದೂ ಅಲ್ಲ ಕೇವಲ ಸೌಹಾರ್ದ, ಭೃಾತೃತ್ವ, ಹೊಂದಾಣಿಕೆ ಬದುಕು ಕಟ್ಟಿಕೊಳ್ಳುವ ದಾರಿಗಳು ಎಂಬುದು ಎದೆಗಿಳಿದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯರ ಮುಖವಾಡ ಕಳಚಿದೆ. ತಿದ್ದಿಕೊಳ್ಳಲು ಇರುವ ದಾರಿ ಹುಡುಕುತ್ತ ನಿಜ ಅರ್ಥದಲ್ಲಿ ಬದುಕು ಕಟ್ಟಿಕೊಳ್ಳುವ ಹೊಣೆ ಹೊತ್ತು 2021 ನ್ನು ಸ್ವಾಗತಿಸಬೇಕಿದೆ.
***********
ಹೌದು, ಹೊಸ ವರ್ಷ ಎಲ್ಲ ಆತಂಕಗಳನ್ನು ದೂರ ಮಾಡಿ ಕಿಂಚಿತ್ತಾದರೂ ನೆಮ್ಮದಿ, ಸುಖ ತರಲಿ. 2020ರಲ್ಲಿ ಕಂಡುಂಡ ಕಷ್ಟಗಳನ್ನು, ಹಠಾತ್ತನೆ ಎದುರಾದ ಸಮಸ್ಯೆಗಳ ಬಗ್ಗೆ ಸೊಗಸಾಗಿ ಬರೆದಿದ್ದೀರಿ ಮೇಡಂ. ಶುಭಾಶಯಗಳು ನಿಮಗೆ.