ಅಂಕಣ ಬರಹ-01

ಆತ್ಮಕತೆಯ ಮೊದಲ ಕಂತು..

ಅಸ್ತಿತ್ವವಿಲ್ಲದ ಅವ್ವನ ಹೆಜ್ಜೆಗಳು

ಅಕ್ಟೋಬರ್, ೧, ೨೦೦೮ ಕಾರವಾರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲನಾಗಿ ಕರ್ತವ್ಯಕ್ಕೆ ಹಾಜರಾದೆ. ಕಳೆದ ಮೂವತ್ಮೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿರುವಾಗಿನ ಸಿಹಿ ಕಹಿ ನೆನಪುಗಳ ಚಿಪ್ಪಿನಿಂದ ಪೂರ್ತಿಯಾಗಿ ಹೊರಬರುವುದು ಇನ್ನೂ ಸಾಧ್ಯವಾಗಿರಲಿಲ್ಲ. ಮುಂದಿನ ವೃತ್ತಿನಿರತ ಬದುಕಿನ ನಾಲ್ಕು ವರ್ಷಗಳನ್ನು ಕಾರವಾರದ ಹೊಸ ಪರಿಸರದಲ್ಲಿ ಹೇಗೆ ಹೊಂದಿಸಿಕೊಳ್ಳಬೇಕೆಂಬ ಆಲೋಚನೆ ಒಂದುಕಡೆ ಮನಸ್ಸನ್ನು ಕೊರೆಯುತ್ತಿತ್ತು.

            ಕಾಲೇಜ್ ಕ್ಯಾಂಪಸ್ಸಿನ ಆವರಣದಲ್ಲಿಯೇ ಪ್ರಾಚಾರ್ಯರ ವಸತಿ ಗ್ರಹದ ಅನುಕೂಲತೆಯಿದೆ. ಅಗತ್ಯವೆನಿಸುವ ಎಲ್ಲ ಮೂಲಭೂತ ಸೌಲಭ್ಯಗಳೂ ಇದ್ದವು. ಸಮುದ್ರ ತೀರದ ನಿಸರ್ಗದ ಸಹಜ ಸುಂದರ ವಾತಾವರಣವೂ ಇದೆ. ಕೇವಲ ನಮ್ಮ ಮನಸ್ಸುಗಳನ್ನು ಇಲ್ಲಿಯ ಪರಿಸರ ಮತ್ತು ಮನುಷ್ಯ ಸಂಬಂಧ ಗಳೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಸಜ್ಜಾಗುತ್ತಿದ್ದೆವು.

            ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಹಿರಿಯ ಮಗ ಸಚಿನ್, ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಇಂಜಿನಿಯಿಂಗ್ ಓದುತ್ತಿರುವ ಎರಡನೆಯ ಮಗ ಅಭಿಷೇಕ್ ನಮ್ಮ ವಸತಿಗ್ರಹ ಮತ್ತು ಕಾಲೇಜ್ ಕ್ಯಾಂಪಸ್ ನೋಡುವುದಕ್ಕಾಗಿಯೇ ಕಾರವಾರಕ್ಕೆ ಬಂದಿದ್ದರು.

            ಒಂದು ರಾತ್ರಿ ಊಟ ಮುಗಿಸಿ ಕಾಲೇಜು ಮೈದಾನದಲ್ಲಿ ಹೆಂಡತಿ ಮಕ್ಕಳೊಡನೆ ಹೀಗೆ ಹರಟುತ್ತಾ ತಿರುಗಾಡುತ್ತಿದ್ದೆ. ಮೈದಾನದ ಎದುರುಗಡೆ ರಾಷ್ಟ್ರೀಯ  ಹೆದ್ದಾರಿ ಹದಿನೇಳರ ಆಚೆ ಸ್ಮಶಾನದ ಕಂಪೌಂಡಿನ ಹೆಬ್ಬಾಗಿಲು ಸರಿಯಾಗಿ ಗೋಚರಿಸುತ್ತಿತ್ತು. ಐದಾರು ದಶಕಗಳ ಹಿಂದೆ ಬರಿಯ ಸಮುದ್ರದ ಬೇಲೆಯಾಗಿದ್ದ ಇದೇ ಸ್ಮಶಾನ ಭೂಮಿಯಲ್ಲಿ ಅಜ್ಜಿಯನ್ನು ಮಣ್ಣುಮಾಡಿದ ಘಟನೆಯನ್ನು ಅವ್ವನ ಬಾಯಿಂದ ಕೇಳಿದ್ದು ನೆನಪಾಯಿತು. ಮಕ್ಕಳಿಗೆ ಹೇಳಿದೆ, “ಐವತ್ತಾರು ವರ್ಷಗಳ ಹಿಂದೆ ನಿಮ್ಮ ಮುತ್ತಜ್ಜಿ ಇದೇ ಸ್ಮಶಾನದಲ್ಲಿ ಮಣ್ಣಾಗಿದ್ದಾಳೆ. ನಾನಾವಾಗ ಎರಡು ತಿಂಗಳ ತೊಟ್ಟಿಲ ಮಗುವಾಗಿದ್ದೆ. ಈಗ ಇಷ್ಟು ವರ್ಷಗಳ ಬಳಿಕ ಈ ಸ್ಥಿತಿಯಲ್ಲಿ ಇಲ್ಲಿಗೆ ಬಂದು ಅಜ್ಜಿಯ ಸಮಾಧಿ ಸ್ಥಳ ನೋಡಬಹುದೆಂದು ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ. ಜೀವನ ಅಂದ್ರೆ ಹೀಗೆಯೇ ಚಿತ್ರವಿಚಿತ್ರ ತಿರುವುಗಳು ನೋಡಿ,” ಎಂದು ಮಾತು ಮುಗಿಸುವಾಗ ನಾನು ಅನಪೇಕ್ಷಿತವಾಗಿ ಭಾವುಕನಾಗಿದ್ದೆ. ಹೆಂಡತಿ ಮಕ್ಕಳಿಗೆ ಸಖೇದಾಶ್ಚರ್ಯ!. ಕುಟುಂಬದವರಿಲ್ಲ. ಜಾತಿ ಬಾಂಧವರಿಲ್ಲ. ಇಂಥಲ್ಲಿ ಅಜ್ಜಿಯ ಹೆಣ ಮಣ್ಣು ಮಾಡಿದ್ದಾರೆ ಅಂದರೆ ನಂಬುವುದಕ್ಕೆ ಆಗದ ಸ್ಥಿತಿಯಲ್ಲಿದ್ದರು. ಅವರಿಗೆ ಆರು ದಶಕಗಳ ಹಿಂದಿನ ಇತಿಹಾಸದ ತುಣುಕೊಂದನ್ನು ಕಥೆಯಾಗಿಸಿ ಹೇಳಬೇಕಾಯಿತು. ಮೈದಾನದ ಕಲ್ಲು ಬೆಂಚಿನ ಮೇಲೆ ಅವರನ್ನು ಕೂಡ್ರಿಸಿಕೊಂಡು ನಮ್ಮ ಅವ್ವನ ನತದ್ರಷ್ಟ ತಾಯಿ ನಾಗಮ್ಮಜ್ಜಿಯ ಪುರಾಣ ಬಿಚ್ಚಿದೆ….

            ಕುಮಟಾ ತಾಲೂಕಿನ ನಾಡುಮಾಸ್ಕೇರಿ ಎಂಬ ಪುಟ್ಟ ಗ್ರಾಮದ ಕೃಷಿಕೂಲಿಕಾರ ದಂಪತಿಗಳಾದ ಕೃಷ್ಣ-ನಾಗಮ್ಮ ನಮ್ಮ ಅವ್ವ ತುಳಸಿಯ ತಂದೆ ತಾಯಿಯರು. ತಂದೆ ಕೃಷ್ಣ ಆಗೇರ ನಿರಕ್ಷರಿಯಾದರೂ ಉತ್ತಮ ಯಕ್ಷಗಾನ ಕಲಾವಿದನಾಗಿದ್ದ. ಶೃಂಗಾರ ಪಾತ್ರಗಳಿಗೆ ಹೇಳಿ ಮಾಡಿಸಿದಂತ ವ್ಯಕ್ತಿತ್ವ ಅವನದ್ದಾಗಿತ್ತೆಂದು ಅವ್ವ ಆಗಾಗ ನೆನಪಿಸಿಕೊಳ್ಳುತ್ತಿದ್ದಳು.

            ತಮ್ಮ ಒಬ್ಬಳೇ ಮಗಳು ತುಳಸಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದೇ ಕನಸು ಕಟ್ಟಿಕೊಂಡು ತಾಯಿ ತಂದೆಯರಿಬ್ಬರೂ ಮಗಳನ್ನು ಶಾಲೆಗೆ ಸೇರಿಸಿದ್ದರು. ಆದರೆ ದೈವೇಚ್ಛೆ ಹಾಗಿರಲಿಲ್ಲ. ದುರ್ದೈವದಿಂದ ತಂದೆ ಕೃಷ್ಣ ಆಗೇರ ಖಚದೇವಯಾನಿ’ ಯಕ್ಷಗಾನ ಬಯಲಾಟದಲ್ಲಿ ಖಚನ ಪಾತ್ರ ಮಾಡುತ್ತಿದ್ದಾಗ ರಂಗದಲ್ಲಿಯೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ. ನಾಲ್ವತ್ತರ ಹರೆಯದ ತಂದೆ ತೀರಿಕೊಂಡಾಗ ಮಗಳು ತುಳಸಿ ಇನ್ನೂ ಮೂರನೆಯ ತರಗತಿಯ ಮುಗ್ಧ ಬಾಲಕಿ.

            ಊರಿನ ಕೆಲವು ದಲಿತರಿಗೆ ಅಂಕೋಲಾ ತಾಲೂಕಿನ ಹಿಲ್ಲೂರಿನ ಅರಣ್ಯಭೂಮಿಯನ್ನು ಬೇಸಾಯಕ್ಕಾಗಿ ಸರಕಾರ ಮಂಜೂರಿ ನೀಡಿತು. ನಾಡುಮಾಸ್ಕೇರಿಯಲ್ಲದೆ ಸುತ್ತಲಿನ ಹೆಗ್ರೆ, ಅಗ್ರಗೋಣ ಮುಂತಾದ ಗ್ರಾಮಗಳಲ್ಲಿ ಕೂಲಿಮಾಡಿಕೊಂಡಿದ್ದ ಆರೆಂಟು ದಲಿತ ಕುಟುಂಬಗಳು ಸ್ವಂತ ಜಮೀನು ಹೊಂದುವ ಉತ್ಸಾಹದಲ್ಲಿ ಹಿಲ್ಲೂರಿಗೆ ಹೊರಟು ನಿಂತವು.

            ವಿಧವೆ ನಾಗಮ್ಮಜ್ಜಿ ತನ್ನ ಮಗಳನ್ನು ಕಟ್ಟಿಕೊಂಡು ತಾನೂ ಹಿಲ್ಲೂರಿನೆಡೆಗೆ ಮುಖ ಮಾಡಿದಳು. ಅಲ್ಲಿಗೆ ಅವ್ವನ ಓದುವ ಕನಸು ಭಗ್ನವಾಯಿತು.

            ನಾಗಮ್ಮಜ್ಜಿ ತಾನೂ ಸ್ವಂತ ಜಮೀನು ಹೊಂದುವ ಆಸೆಯಿಂದ ತನ್ನ ಮಗಳೊಂದಿಗೆ ಹಿಲ್ಲೂರಿಗೆ ಬಂದಳಾದರೂ ಅವಳಿಗೆ ಜಮೀನು ಮಂಜೂರಿಯಾಗಲಿಲ್ಲ. ಸಂಬಂಧಿಕರ  ಇದ್ದುಕೊಂಡು ಜಮೀನು ಪಡೆದವರ ಭೂಮಿಯನ್ನು ಹದಗೊಳಿಸುವ ಕಾರ್ಯದಲ್ಲಿ ಕೂಲಿಯಾಗಿ ದುಡಿದಳು. ಗಟ್ಟಿಗಿಟ್ಟಿಯಾದ ನಾಗಮ್ಮಜ್ಜಿ ಬೆಟ್ಟದ ಭೂಮಿಯ ಬಿದಿರು ಹಿಂಡುಗಳನ್ನು ಕಡಿದು ಬೆಂಕಿಯಿಟ್ಟು ಬಯಲು ಮಾಡಿ, ಕುಠಾರಿ ಹಿಡಿದು ನೆಲ ಅಗೆಯುವ ಕಾಯಕ ನಿಷ್ಠೆಯನ್ನು ಕಂಡ ಬ್ರಿಟಿಷ್ ಅಧಿಕಾರಿಯೊಬ್ಬರು “ನಾಗಮ್ಮನಿಗೆ ಲ್ಯಾಂಡ್ ಸ್ಯಾಂಕ್ಶನ್ ಮಾಡಲೇಬೇಕು” ಎಂದು ಹಠ ಹಿಡಿದು ಅವಳ ಹೆಸರಿಗೂ ಹತ್ತು ಎಕರೆ ಅರಣ್ಯ ಭೂಮಿ ಮಂಜೂರಿ ಮಾಡಿಸಿದರು. ತನ್ನದೇ ಎಂಬ ಭೂಮಿ ದೊರೆತ ಬಳಿಕ ಇನ್ನಷು ಕಷ್ಟಪಟ್ಟು ದುಡಿದ ನಾಗಮ್ಮಜ್ಜಿ ಭೂಮಿಯನ್ನು ಹದಗೊಳಿಸಿಕೊಂಡು ಬೇಸಾಯಕ್ಕೆ ಅಣಿಗೊಳಿಸಿದಳು. ಆದರೆ ಪಟ್ಟಾ ಬರೆಯುವ ಸ್ವಜಾತಿ ಬಂಧು ಶಾನುಭೋಗನೊಬ್ಬ ದಾಖಲೆಗಳಲ್ಲಿ ಈ ಎಲ್ಲ ಜಮೀನನ್ನು ನಾಗಮ್ಮ ಎಂಬ ತನ್ನ ಹೆಂಡತಿಯ ಹೆಸರಿಗೆ ದಾಖಲಿಸಿದ್ದ:

            ಆರೆಂಟು ವರ್ಷಗಳು ಕಳೆದ ಮೇಲೆಯೇ ತನಗೆ ವಂಚನೆಯಾದ ಸಂಗತಿ ನಾಗಮ್ಮಜ್ಜಿಯ ಅರಿವಿಗೆ ಬಂತಾದರೂ ತನ್ನ ಭೂಮಿಗಾಗಿ ಕಾನೂನು ಇತ್ಯಾದಿ ಬಳಸಿಕೊಂಡು ಹೋರಾಟ ಮಾಡಲು ಅವಳ ಬೆಂಬಲಕ್ಕೆ ಯಾರೂ ಇರಲಿಲ್ಲ. ಬೇರೆದಾರಿಯಿಲ್ಲದೆ ನಾಗಮ್ಮಜ್ಜಿ ತನ್ನ ಮಗಳೊಂದಿಗೆ ಸ್ವಂತ ಊರು ನಾಡುಮಾಸ್ಕೇರಿಗೆ ಮರಳಿದಳು.

*****************************************************

ಡಾ.ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ…

15 thoughts on “

  1. ಸರ್ ಓದುವ ಕುತೂಹಲವಿದೆ. ನಮಸ್ಕಾರ ಸರ್.

  2. ಮುಂದಿನ ಕಂತನ್ನು ಕಾಯುತ್ತಿರುವೆ ನಮಸ್ಕಾರ ಸರ್

    1. ಮುಂದಿನ ಕಂತನ್ನು ಕುತೂಹಲದಿಂದ ನಿರೀಕ್ಷಿಸುತಿರುವೆ

  3. ಸರ್, ಓದಿದೆ ತುಂಬಾ ಚೆನ್ನಾಗಿದೆ ಮೊದಲು ಓದಿದಾಗ ನನಗೆ ಇದು ಏನು ಅರ್ಥ ಮಾಡಿಕೊಳ್ಳಲು ಆಗಲಿಲ್ಲ ಪುನಃ ಪುನಃ ಸುಮಾರು ನಾಲ್ಕೈದು ಬಾರಿ ಓದಿದೆ.
    ಮುಂದಿನ ಭಾಗಕ್ಕೆ ಕಾಯುತ್ತಿರುವೆ.

  4. ಒಡಲಾಳದಲಿ ಅಡಗಿದ ವಾಸ್ತವ ಕಥೆಯ ಕಂತು ಮುಂದುವರಿಯಲಿ ಸರ್ ಧನ್ಯವಾದಗಳು

  5. ಸಹಜ,ವಾಸ್ತವಿಕ ಕಥೆಗಳು ಚೆನ್ನಾಗಿವೆ .ಅಭಿನಂದನೆಗಳು ಸರ್.

  6. ನಾನು ಓದಲಿಲ್ಲ. ಅದೇ ಓದಿಸಿಕೊಂಡು ಹೋಯಿತು. ಮುಂದುವರಿಯಲಿ ಪಯಣ.

  7. ಕಣ್ಣುಗಳು ಹನಿಗೂಡಲೇಬೇಕು ಹಾಗಿದೆ ಸರ್ ನಿಮ್ಮ ಬರಹ.ಅಜ್ಜಿಯವರನ್ನು ನೆನೆದು ಅವರು ಪಟ್ಟ ಕಷ್ಟಕ್ಕೆ ಅತೀವ ದುಃಖವಾಯಿತು.

  8. ಮನದಾಳದಲ್ಲಿ ಹುದುಗಿದ್ದ ನಾಗಮ್ಮಜ್ಜಿಯ ಬದುಕಿನ ಬವಣೆಯನ್ನು ಆ ಕಾಲದ ಸತ್ಯವನ್ನು ಓದುಗರ ಎದುರಿಗೆ
    ಮನಮುಟ್ಟುವ ರೀತಿಯಲ್ಲಿ ಬಿಚ್ಚಿಟ್ಟಿರುವಿರಿ.

Leave a Reply

Back To Top