ಅಂಕಣ ಬರಹ
ಪ್ರಾಮಾಣಿಕರ ಅಹಮಿಕೆ
ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ಮಲೆನಾಡಿನ ಗಾಂಧಿ ಎಂದೂ ಕರೆಯಲಾಗುತ್ತಿದ್ದ ಕಡಿದಾಳು ಮಂಜಪ್ಪನವರು ಲೇಖಕರೂ ಆಗಿದ್ದರೆಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಅವರು `ಪಂಜರವಳ್ಳಿಯ ಪಂಜು’ `ನಾಳೆಯ ನೆಳಲು’ `ಕ್ರಾಂತಿಕೂಟ’ ಕಾದಂಬರಿಗಳನ್ನು ಬರೆದರು. ಆದರೆ ಇವಕ್ಕಿಂತ ಅವರ ಆತ್ಮಕಥೆಯೇ (`ನನಸಾಗದ ಕನಸು’) ಚೆನ್ನಾಗಿದೆ. ಅದರಲ್ಲಿ 40-50ರ ದಶಕದ ರಾಜಕಾರಣದ ಸ್ಮøತಿಗಳಿವೆ; 20ನೇ ಶತಮಾನದ ಮೊದಲ ಭಾಗದ ಮಲೆನಾಡಿನ ಚಿತ್ರಗಳಿವೆ. ಕುತೂಹಲ ಹುಟ್ಟಿಸುವುದು ಅದರ ನಿರೂಪಣೆ ಮತ್ತು ಆ ಮೂಲಕ ಹೊಮ್ಮುವ ಲೋಕದೃಷ್ಟಿ.
ಮಂಜಪ್ಪನವರು ಆತ್ಮಕತೆಯನ್ನು “ನಾನು ಜನ್ಮ ತಾಳಿದ್ದು ನಮ್ಮ ಕುಟುಂಬದ ಮನೆಯ ಪಕ್ಕದಲ್ಲಿದ್ದ ಕೋಳಿಕೊಟ್ಟಿಗೆಯಲ್ಲಿ. ಅಂದಿನ ಕಾಲದಲ್ಲಿ ವಾಸದ ಮನೆಯಲ್ಲಿ ಹೆರಿಗೆಯಾಗುವುದು ನಿಷಿದ್ಧವಾಗಿತ್ತು. ಆ ಕಾರಣ ಹೆಂಗಸರಿಗೆ ಪ್ರಸವ ವೇದನೆ ಪ್ರಾರಂಭವಾದ ತಕ್ಷಣ ವಾಸದ ಮನೆಯಿಂದ ಹೊರಗಡೆ ಇಡುತ್ತಿದ್ದರು’’ ಎಂದು ಆರಂಭಿಸುತ್ತಾರೆ. ಅವರಿಗೆ ಆತ್ಮಕತೆಯ ಜತೆಗೆ ತಮ್ಮ ಕಾಲದ ಮಲೆನಾಡಿನ ಸಂಪ್ರದಾಯಗಳನ್ನೂ ಕಾಣಿಸುವ ಉದ್ದೇಶವಿದೆ. ಅವರು ಕಾಣಿಸುವ ಕೆಲವು ಸಂಪ್ರದಾಯ ಮತ್ತು ಆಚರಣೆಗಳಂತೂ ಭೀಕರವಾಗಿವೆ. ಅವುಗಳಲ್ಲಿ ಮಹಿಳೆಯರ ಸಾವು ಮತ್ತು ಗಂಡಸರ ಮರುಮದುವೆಯೂ ಒಂದು:
“ಆಗಿನ ಕಾಲದಲ್ಲಿ ಮಲೆನಾಡಿನಲ್ಲಿ ಮಲೇರಿಯಾ ಹಾವಳಿಯಿಂದ ಗರ್ಭಿಣಿಯರೂ ಬಾಣಂತಿಯರೂ ಹೆಚ್ಚು ಸಂಖ್ಯೆಯಲ್ಲಿ ಸಾಯುತ್ತಿದ್ದರು. ಇದರ ಪರಿಣಾಮವಾಗಿ ಹೆಂಗಸರ ಸಂಖ್ಯೆ ದಿನೇದಿನೇ ಕ್ಷೀಣವಾಗುತ್ತಿತ್ತು. ಆದ್ದರಿಂದ ಹೆಣ್ಣುಗಳಿಗಾಗಿ ಬಹಳ ಪೈಪೋಟಿ ಇತ್ತು. ಶ್ರೀಮಂತ ವಿಧುರರು ಎರಡು ನೂರು ರೂಪಾಯಿಗಳಿಂದ ಐದುನೂರರ ರೂಪಾಯಿಗಳವರೆಗೆ ಹೆಣ್ಣುಗಳಿಗೆ ತೆರಕೊಟ್ಟು ಮದುವೆಯಾಗುತ್ತಿದ್ದರು. ಈ ಕಾರಣದಿಂದ ನಮ್ಮ ತಂದೆಗೆ ತಮ್ಮ ಸಹೋದರಿಯರ ಮದುವೆ ಮಾಡಲು ಯಾವ ತೊಂದರೆಯೂ ಆಗಲಿಲ್ಲ.’’ ಒಂದು ಪ್ರದೇಶದ ಭೌಗೋಳಿಕ ಸನ್ನಿವೇಶಕ್ಕೂ ಪುರುಷರ ಬಹುಪತ್ನಿತ್ವಕ್ಕೂ, ಅವರ ಸಿರಿವಂತಿಕೆಗೂ, ಗರ್ಭಧಾರಣೆ ಹೆರಿಗೆ ಮುಂತಾದ ಮಹಿಳೆಯರ ಜೈವಿಕ ಆವರ್ತನಗಳಿಗೂ ಇಲ್ಲಿ ಏರ್ಪಟ್ಟಿರುವ ಸಂಬಂಧ ವಿಶಿಷ್ಟವಾಗಿದೆ. ಪುರುಷ ವ್ಯವಸ್ಥೆ ಮಲೇರಿಯಾದಂತಹ ಸನ್ನಿವೇಶವನ್ನೂ ತನಗೆ ಬೇಕಾದಂತೆ ಬಳಸಿಕೊಂಡಿರುವ ಪರಿ ದಿಗ್ಭ್ರಮೆ ತರುತ್ತದೆ.
ಮಲೆನಾಡಲ್ಲಿ ಹೆರಿಗೆಯಿಂದ ಮಾತ್ರವಲ್ಲ, ಹಾವು ಕಚ್ಚಿ, ಸೇತುವೆಯಂತಿದ್ದ ಸಂಕಮುರಿದು, ನೆರೆಯಲ್ಲಿ ಕೊಚ್ಚಿಹೋಗಿ- ನಾನಾ ಕಾರಣಕ್ಕೆ ಜನ ಸಾಯುವುದನ್ನು ಮಂಜಪ್ಪ ದಾಖಲಿಸುತ್ತಾರೆ. ಈ ದುರಂತಗಳಿಗೆ ನಾಗರಿಕ ಸೌಲಭ್ಯಗಳಿಲ್ಲದೆ ಇರುವುದು ಅರ್ಧ ಕಾರಣವಾದರೆ, ದಲಿತರು ಬಡವರು ಸ್ತ್ರೀಯರನ್ನು ಕುರಿತ ಸಾಮಾಜಿಕ ಧೋರಣೆ ಇನ್ನರ್ಧ ಕಾರಣ. ಗರ್ಭಿಣಿಯರಾಗುತ್ತಿದ್ದ ವಿಧವೆಯರಿಗೆ ವಿಧಿಸುತ್ತಿದ್ದ ಶಿಕ್ಷೆ ಹಾಗೂ ಅಸ್ಪøಶ್ಯತೆಯ ಆಚರಣೆಗಳಂತೂ ಅಮಾನುಷ. ಗತಕಾಲದ ಕರ್ನಾಟಕವನ್ನು ಎಗ್ಗಿಲ್ಲದೆ ಕೀರ್ತಿಸುವ ಸಂಸ್ಕøತಿ ಚಿಂತಕರು, ಎಷ್ಟೊಂದು ಆತ್ಮವಂಚಕ ಬರೆಹಗಳನ್ನು ಮಾಡಿದರು ಎಂದು ಕಸಿವಿಸಿಯಾಗುತ್ತದೆ. ಬಹುಶಃ ಬ್ರಿಟಿಶರ ಜತೆ ಬಂದ ಪಾಶ್ಚಿಮಾತ್ಯ ಆಧುನಿಕತೆ, ದಲಿತರ ಮತ್ತು ಮಹಿಳೆಯರ ಪಾಲಿಗೆ ಬಿಡುಗಡೆಕೋರನಾಗಿ ಕಾಣಿಸಿದ್ದು ಸಹಜವಾಗಿದೆ. ಲೇಖಕರು ವಸ್ತುಸ್ಥಿತಿಯನ್ನು ಅಡಗಿಸದೆ ಎಲ್ಲವನ್ನೂ ದಾಖಲಿಸುತ್ತಾರೆ.
ಲೇಖಕರು ವಕೀಲರಾಗಿದ್ದರಿಂದ ದಿನಾಂಕ, ಮೊಕದ್ದಮೆಯ ಸಂಖ್ಯೆ, ಸಮಯ, ವ್ಯಕ್ತಿಯ ಮತ್ತು ಊರಿನ ಹೆಸರು, ಹಣದ ಮೊಬಲಗು ಇತ್ಯಾದಿಯನ್ನು ಅಂಕಿಸಂಖ್ಯೆ ಸಮೇತ ಕೊಡುತ್ತಾರೆ. “ಉತ್ತರೋತ್ತರ ನಮ್ಮ ತಂದೆ ತಾರೀಖು 24.10.1887ರಂದು ರಿಜಿಸ್ಟರ್ ಆಗಿದ್ದ ಮೂಲಗೇಣಿ ಕರಾರಿನ ಪ್ರಕಾರ ಶ್ರೀರಾಮಚಂದ್ರಾಪುರದ ಮಠದಿಂದ 5 ಎಕರೆ 38ಗುಂಟೆ ತರಿ ಜಮೀನನ್ನೂ 38ಗುಂಟೆ ಅಡಿಕೆ ಬಾಗಾಯ್ತನ್ನು 3 ಗುಂಟೆ ಖುಷ್ಕಿ ಭೂಮಿಯನ್ನೂ ಮೂಲಗೇಣಿಗೆ ಪಡೆದರು’’-ತರಹದ ವಾಕ್ಯಗಳು ಇಲ್ಲಿ ಸಾಕಷ್ಟಿವೆ. ಇವುಗಳಿಂದ ಬರೆಹಕ್ಕೆ ಒಂದು ನಮೂನೆಯ ಖಚಿತತೆ ಬಂದಿದೆ. ಇದುವೇ ಬರೆಹವು ಕಲ್ಪನಾಶಕ್ತಿಯನ್ನು ಬಳಸಿಕೊಳ್ಳುವುದಕ್ಕೆ ತೊಡಕನ್ನೂ ಒಡ್ಡಿದೆ. ತಾವು ಓದುತ್ತಿದ್ದ ಶಾಲೆ ಮೂರು ತಿಂಗಳಿಗೊಮ್ಮೆ ಸುಟ್ಟುಹೋಗುತ್ತಿತ್ತು ಎಂದು ಲೇಖಕರು ನಿರ್ಲಿಪ್ತವಾಗಿ ದಾಖಲಿಸಿ ಮುಂದೆ ಹೋಗುತ್ತಾರೆ. ಅವರೇ ಪ್ರಸ್ತಾಪಿಸುವ ಕ್ರೂರ ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ಸೇಡು ತೀರಿಸಿಕೊಳ್ಳುತ್ತಿದ್ದ ಬಗೆ ಇದ್ದೀತು ಇದು ಎಂದು ಊಹಿಸಲು ಮರೆಯುತ್ತಾರೆ. ಆತ್ಮಕತೆಗಳಲ್ಲಿ ಮುಖ್ಯವಾದುದು ಗತಕಾಲದ ಖಚಿತ ವಿವರಗಳಷ್ಟೇ ಅಲ್ಲ; ಅವನ್ನು ಮಂಡಿಸುವ ದೃಷ್ಟಿಕೋನ, ಅವನ್ನು ವಿಶ್ಲೇಷಿಸಿ ವ್ಯಾಖ್ಯಾನಿಸಿ ಸಮಕಾಲೀನ ಬದುಕನ್ನು ಜೀವಂತಗೊಳಿಸುವ ದಾರ್ಶನಿಕತೆ ಕೂಡ.
ಮಲೆನಾಡನ್ನೂ ತಮ್ಮ ಬದುಕನ್ನೂ ಒಟ್ಟಿಗೇ ಮಂಡಿಸುತ್ತಿರುವ ಮಂಜಪ್ಪನವರದು ಉದಾರ ಮಾನವತಾವಾದಿ ದೃಷ್ಟಿಕೋನ. ಕುವೆಂಪು ಸಮಕಾಲೀನರಾಗಿದ್ದ ಅವರು ತಕ್ಕಮಟ್ಟಿಗೆ ವೈಚಾರಿಕ ಮನೋಭಾವ ರೂಢಿಸಿಕೊಂಡಿದ್ದರು. ಆದರೆ ಅವರ ವೈಚಾರಿಕತೆ ಕೆಳಜಾತಿಯ ಸಂಪ್ರದಾಯಗಳನ್ನು ಮೌಢ್ಯವೆಂದು ಹೀಗಳೆಯುವಂತಹದ್ದು; ಗಣ ಬರಿಸುವುದನ್ನು ಅವರು ಕ್ಷುದ್ರದೇವರು ಎಂದು ಕರೆಯುತ್ತಾರೆ. ಆದರೂ ಮಲೆನಾಡಿನ ಕೆಲವು ಆಚರಣೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ. “ಜನಸಾಮಾನ್ಯರಲ್ಲಿ ಅಗಾಧ ಮೌಢ್ಯವಿದ್ದರು ಕೂಡ ಅವರಲ್ಲಿ ಸುಸಂಸ್ಕøತಿಯಿತ್ತು” ಎನ್ನುತ್ತಾರೆ. ಮಲೆನಾಡಿಗರು ಹೆಂಡ ಕುಡಿಯುವುದನ್ನು ವ್ಯಾಖ್ಯಾನಿಸುತ್ತ “ನಾಟಿಕಾಲದಲ್ಲಿ ವಿಪರೀತ ಮಳೆ ಬರುತ್ತಿದುದರಿಂದ ನಾಟಿ ಕೆಲಸಕ್ಕೆ ಹೋಗಿ ಮನೆಗೆ ಬಂದ ನಂತರ ಸಾಮಾನ್ಯವಾಗಿ ಎಲ್ಲರೂ ಅಕ್ಕಿಹೆಂಡವನ್ನು ಸೇವಿಸುತ್ತಿದ್ದರು. ಅಕ್ಕಿಯ ಹೆಂಡ ಕುಡಿದವರು ದೃಢಕಾಯರಾಗಿ ಆರೋಗ್ಯವಂತರಾಗಿದ್ದರು. ಅವರುಗಳ ಮುಖದಲ್ಲಿ ರಕ್ತ ಚಿಮ್ಮುವಂತಿತ್ತು’’ ಎಂದು ವ್ಯಾಖ್ಯಾನಿಸುತ್ತಾರೆ. ಮಿತಿಯೆಂದರೆ, ಅವರೊಳಗೆ ಹೊಕ್ಕಿರುವ ಕುವೆಂಪು ಚಿಂತನೆ ಪುರೋಹಿತಶಾಹಿ ವಿರೋಧದ ವೈಚಾರಿಕ ಪ್ರಜ್ಞೆಯಾಗಿ ಬದಲಾಗದೆ ಹೋಗುವುದು.
ಲೇಖಕರು ಆರಂಭದಲ್ಲೇ “ನನ್ನ ಬರವಣಿಗೆಯಲ್ಲಿ ಅಸತ್ಯದ ಮಾತುಗಳು ಸೇರದಿರುವಂತೆ ಅನುಗ್ರಹಿಸಬೇಕೆಂದು” ದೇವರಲ್ಲಿ ಪ್ರಾರ್ಥಿಸುತ್ತಾರೆ. ತನ್ನನ್ನು ಸತ್ಯದ ಪ್ರತಿಪಾದಕನೆಂದು ಬಿಂಬಿಸಿಕೊಳ್ಳುವ ಈ ಧೋರಣೆ ಬಂದಿದ್ದು, ತನ್ನ ವೈಯಕ್ತಿಕ ಮಿತಿಗಳನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಬಲ್ಲ ಗಾಂಧೀಜಿಯ ಪ್ರಾಮಾಣಿಕತೆಯಿಂದ; ಅವರ `ಸತ್ಯದೊಡನೆ ನನ್ನ ಪ್ರಯೋಗಗಳು’ ಎಂಬ ಆತ್ಮಕತೆಯಿಂದ. “ನಾನೊಬ್ಬ ಯಃಕಶ್ಚಿತ್ ವ್ಯಕ್ತಿ. ಭೂಹೀನ ಗೇಣಿದಾರನೊಬ್ಬನ ಮಗನಾಗಿ ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳೆದು ಜೀವನದಲ್ಲಿ ಹಲವು ವಿಧವಾದ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದವನು. ಅನೇಕ ಎಡರು ತೊಡರುಗಳನ್ನು ಎದುರಿಸಿದ್ದ ನಾನು ಅಂದು ಕಷ್ಟಪಟ್ಟಂತೆಯೇ ತಮ್ಮ ಜೀವನದಲ್ಲಿ ಇಂದು ಕಷ್ಟ ಪಡುತ್ತಿರುವ ಜನರಿಗೆ ನನ್ನ ಅನುಭವದಿಂದ ಅಲ್ಪಸ್ವಲ್ಪವಾದರೂ ಪ್ರಯೋಜನವಾಗಬಹುದು ಎಂಬ ಆಶೆ’’ಯಿಂದ ಆತ್ಮಕತೆ ಬರೆದಿರುವುದಾಗಿ ಲೇಖಕರು ಹೇಳಿಕೊಳ್ಳುತ್ತಾರೆ. ಈ ಉದ್ದೇಶವು ತನ್ನ ಆದರ್ಶ ವ್ಯಕ್ತಿತ್ವವನ್ನು ಪ್ರಜ್ಞಾಪೂರ್ವಕವಾಗಿ ಮಂಡಿಸುವುದಕ್ಕೆ ಪೂರ್ವಪೀಠಿಕೆಯಂತಿದೆ. ತನ್ನನ್ನು ಚಾರಿತ್ರ್ಯವಂತನೆಂದು ಬಿಂಬಿಸಿಕೊಳ್ಳುವ ಇಲ್ಲಿನ ಗುಣವೇ ಬರೆಹದ ಪ್ರಾಮಾಣಿಕತೆಗೆ ಚ್ಯುತಿ ತರುತ್ತದೆ.
ಆತ್ಮಕತೆ ಬರೆಯುವವರ ಬಾಳು ಪ್ರಾಮಾಣಿಕತೆಯಿಂದ ಕೂಡಿರಬಹುದು. ಅದನ್ನು ಕಟ್ಟಿಕೊಡುವಾಗ ನೈತಿಕ ಅಹಂಕಾರ ಕೂಡಿಕೊಂಡರೆ, ಅಲ್ಲಿನ ವಿನಯ ಕೃತಕವಾಗುತ್ತದೆ. ಸ್ವಂತ ಬದುಕನ್ನು ಶೋಧಿಸಿ ಮರುಮೌಲ್ಯಮಾಪನ ಮಾಡಿಕೊಳ್ಳುವ ಆತ್ಮಕತೆಗಳು ಆತ್ಮಸಂಭಾವಿತನವಿಲ್ಲದ ಕಾರಣದಿಂದಲೇ ಸಹಜವಾಗಿ ಕಾಣುತ್ತವೆ. ಇಂದಿರಾ ಲಂಕೇಶ್, ಇಳಾವಿಜಯಾ, ಸಿಎನ್ಆರ್, ನವರತ್ನ ರಾಮರಾವ್ ಮುಂತಾದವರ ಆತ್ಮಕತೆಗಳು ತಟ್ಟನೆ ನೆನಪಾಗುತ್ತಿವೆ. ಕುವೆಂಪು ಅವರಲ್ಲೂ ಆತ್ಮಸಂಭಾವಿತನವಿದೆ. ಆದರೆ ಅದನ್ನು ದಾಟಿ ಸ್ವಮಿತಿಯನ್ನು ಹೇಳಿಕೊಳ್ಳಬಲ್ಲ ದಿಟ್ಟತನವೂ ಅವರಲ್ಲಿದೆ. ಆತ್ಮಕತೆಗಳು ಬರೆದವರ ವ್ಯಕ್ತಿತ್ವದ ಕನ್ನಡಿಗಳೇನೂ ಹೌದು. ಆದರೆ ಕೆಲವು ಕನ್ನಡಿಗಳು ತೋರಿಸುವ ಬಿಂಬಗಳು ಪೂರ್ತಿ ಅವರವೇ ಆಗಿರುವುದಿಲ್ಲ. ಈ ಅರಕೆಯಿಂದ ಆತ್ಮಕತೆಗಳಿಗೆ ಬಿಡುಗಡೆಯೂ ಇಲ್ಲ. ಅವು ಓದುಗರ ಮೆಚ್ಚುಗೆ ಮತ್ತು ಸಣ್ಣಸಂಶಯದಲ್ಲೇ ತಮ್ಮ ಅಸ್ತಿತ್ವವನ್ನು ಪಡೆದುಕೊಂಡಿರುತ್ತವೆ.
********************************************************
ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ