ಅಂಕಣ ಬರಹ

ಡಾ ಶ್ರೀಧರ್ ಗೌಡ ಉಪ್ಪಿನ ಗಣಪತಿ

ಲೇಖಕರ ಪರಿಚಯ :

ಡಾ ಶ್ರೀಧರ್ ಗೌಡ ಉಪ್ಪಿನ ಗಣಪತಿ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ.
ಸಾಹಿತ್ಯ ಬರಹ ಹವ್ಯಾಸ.
“ಕಡಲಿಗರ ಸಂಸ್ಕೃತಿ” ಸಂಶೋಧನ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರ್ ಪ್ರದಾನ ಮಾಡಿದೆ. ಡಾಕ್ಟರ್ ಸೈಯದ್ ಜಮೀರುಲ್ಲಾ ಷರೀಫ್ ಮಾರ್ಗದರ್ಶಕರು.
ಸಂಶೋಧನಾ ಮಹಾಪ್ರಬಂಧ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಕುಮಟಾ
ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ
ಮೂರು ತಾಲೂಕು ಸಾಹಿತ್ಯ ಸಮ್ಮೇಳನ ಸಂಘಟನೆ
ಪ್ರತಿ ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ಎರಡು ದಿನಗಳ ಕಾಲ ಸಂಘಟಿಸಿ ದ್ದು ಹೆಗ್ಗಳಿಕೆ ಇವರದ್ದು.
ಎರಡು ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಿದ್ದಾರೆ.

ಕಳೆದ ವರ್ಷ ಅವರು ಕರ್ತವ್ಯ ನಿರ್ವಹಿಸುವ ಶಾಲೆಯ ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಆ ಕಾರ್ಯಕ್ರಮಕ್ಕೆ ಈ ವರ್ಷ ಭಾಗವಹಿಸಲಿದ್ದಾರೆ.
2019 20 ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
“ಹಾಲಕ್ಕಿ ರಾಕು” ಕಥಾಸಂಕಲನ ಅಚ್ಚಿನಲ್ಲಿದೆ.‌


ಡಾ.ಶ್ರೀಧರ ಗೌಡ ಅವರ ಜೊತೆ ಮುಖಾಮುಖಿ


” ಮನಸ್ಸಿನ ತುಮುಲತೆ ಸಾಕ್ಷಿಕರಿಸಲು ಕವಿತೆಗೆ ಮೊರೆ “


ಕವಿತೆಗಳನ್ನು ಏಕೆ ಬರೆಯುವಿರಿ?

ನನ್ನ ಮನಸ್ಸಿನ ತುಮುಲತೆ, ದುಗುಡುತೆ ಗಳನ್ನು ಸಾಕ್ಷಿ ಕರಿಸಲು ಕವಿತೆಗಳಿಗೆ ಮೋರೆ ಹೋಗಿ , ಕವಿತೆ ಬರೆಯುತ್ತಿದ್ದೇನೆ.

ಕವಿತೆ ಹುಟ್ಟುವ ಕ್ಷಣ ಯಾವುದು ?

ಕವಿತೆ ಹುಟ್ಟಲ್ಲ ಇಂತಹದ್ದೆ ಸಮಯ ಅಂತಿಲ್ಲ.
ಒಂದು ಘಟನೆ ಮತ್ತೆ ಮತ್ತೆ ಮನಸ್ಸನ್ನು ಕಾಡುತ್ತಿದ್ದಾಗ ಅದರ ತೀವ್ರತೆಯನ್ನು ಹತ್ತಿಕ್ಕಲಾಗದೆ ಅಸಹಾಯಕ ಸ್ಥಿತಿಗೆ ತಲುಪಿದಾಗ ಅದರಿಂದ ಪರಿಹಾರ ಕಂಡುಕೊಳ್ಳಲು ಹೊಸ ಹೊಸ ಆಲೋಚನೆಗಳಿಂದ ಹೊರಬರುವ ಸಂದರ್ಭದಲ್ಲಿ ಕವಿತೆ ಹುಟ್ಟುತ್ತ ದೇ. ಕೆಲವೊಮ್ಮೆ ಬೈಕ್ ರೈಡಿಂಗ್ ಮಾಡುವಾಗಲು ಕವಿತೆ ಹುಟ್ಟಿದ್ದು ಇದೆ.

ಕವಿತೆಯ ವಸ್ತು ಏನು? ಪದೇ ಪದೇ ಕಾಡುವ ವಿಷಯ ಯಾವುದು?

ನನ್ನ ಕವಿತೆಗಳಲ್ಲಿ ವಸ್ತು ನನ್ನ ಸುತ್ತಲ ಪರಿಸರ. ನಮ್ಮ ಜನಾಂಗ .‌
ನನ್ನನ್ನು ಮತ್ತೆ ಮತ್ತೆ ಕಾಡುವ ವಿಷಯವೇನೆಂದರೆ ,
ಬಾಲ್ಯ ಕಳೆದು ಹರೆಯಕ್ಕೆ ಕಾಲಿಟ್ಟ ಯುವಜನತೆ ಹೆತ್ತು ಹೊತ್ತು ಸಾಕಿದ ತಂದೆತಾಯಿಗಳನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಅವರ ಆಸ್ತಿಗೆ ಮಾತ್ರ, ವಾರಸುದಾರರಾಗಿ ರುವ ಸಂಗತಿ

ನಿಮ್ಮ ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೇ ?

ನನ್ನ ಕವಿತೆಗಳಲ್ಲಿ ಬಾಲ್ಯ ಹರೆಯ ಎರಡರ ಜೊತೆ ಮುಪ್ಪು ಕೂಡ ಇಣುಕಿದೆ.

ಪ್ರಸ್ತುತ ರಾಜಕೀಯ ಸನ್ನಿವೇಶಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಪ್ರಸ್ತುತ ಸಂದರ್ಭದ ರಾಜಕೀಯ ಸನ್ನಿವೇಶಗಳು ನ್ಯಾಯಾಂಗ ಮತ್ತು ಕಾರ್ಯಾಂಗ ವನ್ನು ಮೀರಿ ಪ್ರಾಮುಖ್ಯತೆ ಪಡೆದು ಕೊಂಡಂತೆ ಭಾಸವಾಗುತ್ತದೆ.

ಧರ್ಮ ಮತ್ತು ದೇವರ ವಿಷಯದಲ್ಲಿ ನಿಮ್ಮ ನಿಲುವೇನು?

ಜಾತಿಗೊಂದು ಧರ್ಮ ವಾಗದೆ ಮನುಷ್ಯ-ಮನುಷ್ಯರ ನಡುವಿನ ಧರ್ಮ ಒಂದಾಗಬೇಕು.
ಪ್ರಕೃತಿಯಲ್ಲಿ ಅಗೋಚರವಾಗಿರುವ ಅತೀಂದ್ರಿಯವಾದ ಒಂದು ಶಕ್ತಿ ಇದೆ ಎಂದು ಭಾವಿಸಿ ಕೊಳ್ಳುವುದಾದರೆ, ಅದನ್ನು ದೇವರು ಎಂಬ ಮೂರ್ತ ಸ್ವರೂಪದಲ್ಲಿ ನೋಡಬಹುದು. ದೇವರ ಕಲ್ಪನೆ ಅವರವರ ಭಾವಕ್ಕೆ ಬಿಟ್ಟದ್ದು. ಆದಾಗ್ಯೂ ದೇವರು ಎಂಬ ಭಾವನೆ ನಮ್ಮ ಒಳಗೆ ಒಂದಿಷ್ಟು ಭಕ್ತಿಯನ್ನು ಹುಟ್ಟಿಸುತ್ತದೆ ಭಕ್ತಿ ಮನಸ್ಸಿನ ಏಕಾಗ್ರತೆ ಯಾಗುತ್ತದೆ.
ಅದು ಸಂಸ್ಕಾರದ ಮೂಲವಾಗುತ್ತದೆ.

ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಹೇಗಿದೆ ?

ಸಂಸ್ಕೃತಿಯ ಕುರುಹುಗಳು ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುತ್ತದೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕೇವಲ ಮನರಂಜನೆಗೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ.
ಮೈಸೂರು ದಸರಾ ಹಂಪಿ ಉತ್ಸವ ಅವೆಲ್ಲ ಬಿಡಿ ,ಕರಾವಳಿ ಉತ್ಸವದಲ್ಲಿ ಕೂಡ ಜನಾಂಗಿಕ ವಾಗಿರುವ ಕಲೆ ಸಂಪ್ರದಾಯಗಳು ಮುಖ್ಯವಾಹಿನಿಯಿಂದ ದೂರ ಸರಿಸಲು ಪಟ್ಟಿರುತ್ತದೆ. ಉದಾಹರಣೆಗೆ ಹಾಲಕ್ಕಿಗಳ ಸುಗ್ಗಿ ಕುಣಿತ ತಾರ್ಲೆ ಕುಣಿತ ಗುಮಟೆ ಪಾಂಗ್ ಮರಗಾಲ ಕುಣಿತ ಇತ್ಯಾದಿ ಸಾಂಸ್ಕೃತಿಕ ಕುರುಹುಗಳಿಗೆ ಜಾಗವಿಲ್ಲ.
ಸಂಸ್ಕೃತಿಕ ಸಂಜೆ ಎಂದರೆ ಸಿನಿಮಾ
ನಟರನ್ನು ರಾಜ್ಯ ರಾಷ್ಟ್ರ ಮಟ್ಟದ ಗಾಯಕರನ್ನು ಕರೆಯಿಸಿ ಕುಣಿಸುವುದು ಹಾಡಿಸುವುದು ಎಂಬ ಕಲ್ಪನೆ ಆಯೋಜಕ ರಿಗೂ ಬಂದಿರುವುದು ದುರಂತ.

ಸಾಹಿತ್ಯದ ರಾಜಕೀಯ ಹೇಗಿದೆ? ನಿಮ್ಮ ಪ್ರತಿಕ್ರಿಯೆ ಏನು?

ಸಾಹಿತ್ಯದಲ್ಲಿ ಪ್ರತ್ಯೇಕತೆ ಬೇಕು, ಆದರೆ ಸಾಹಿತಿಗಳ ನಡುವೆ ಅಲ್ಲ. ಸಾಹಿತ್ಯದಲ್ಲಿ ವಲಯದ ರಾಜಕಾರಣ ಅಂದರೆ ಅಚ್ಚರಿ ಪಡಬೇಕಾದ ದಿನಗಳು ಇದ್ದವು. ಅಂದರೆ ಸಾಹಿತ್ಯದಲ್ಲಿ ರಾಜಕಾರಣವೇ ಅದು ಹೇಗೆ ಎಂದು ಪ್ರಶ್ನಿಸುತ್ತಿದ್ದರು.
ಆದರೆ ಇವತ್ತು ರಾಜಕೀಯದ ರಾಜಕಾರಣ ಗಿಂತಲೂ , ಸಾಹಿತ್ಯದ ರಾಜಕಾರಣದಲ್ಲಿ ಹೆಚ್ಚು ರಾಡಿ ತುಂಬಿಕೊಂಡಿದೆ. ಚುನಾವಣೆಗಳು ಬಂದಾಗ ಅವರವರ ವ್ಯಕ್ತಿಗೆ ಅವರ ಇಷ್ಟಕ್ಕೆ ಸಂಬಂಧಪಟ್ಟಂತೆ ಬೆಂಬಲ ನೀಡುವುದು ಸಹಜ ಗುಣ. ಆದರೆ ಅದನ್ನೇ ನೆಪ ಮಾಡಿಕೊಂಡು ಚುನಾವಣೆಯಲ್ಲಿ ನಮ್ಮ ವಿರುದ್ಧ ಮಾಡಿದವರು ಎಂದು ಭಾವಿಸಿ ಅಂತರ ಕಾಯ್ದುಕೊಳ್ಳುವುದು ಸಾಹಿತ್ಯದ ಬೆಳವಣಿಗೆ ಯಂತೂ ಅಲ್ಲ.
ಸಾಹಿತ್ಯ ವಲಯ ಒಂದಿಷ್ಟು ಚುರುಕುತನದಿಂದ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯ.

ದೇಶದ ಚಲನೆಯ ಬಗ್ಗೆ ಏನನಿಸುತ್ತದೆ ?

ಈ ದೇಶದ ಚಲನ ಶೀಲ ವಾಗಿರದೆ , ಎಲ್ಲೋ ಒಂದು ಕಡೆ ಕೇಂದ್ರೀಕೃತವಾಗಿ ನಿಂತುಬಿಟ್ಟಿದೆ ಎಂಬ ಭಾವನೆ ಬರುತ್ತಿದೆ. ಬಹುಶಃ ಚುನಾವಣೆಗಳು ನಡೆಯದಿದ್ದರೆ ಪ್ರಜಾಪ್ರಭುತ್ವ ಮರೆತು ಮತ್ತೆ ವ್ಯಕ್ತಿ ಆಧಾರಿತ ಸರ್ಕಾರದಲ್ಲಿ ನಾವಿದ್ದೆವು ಎಂಬ ಭಾವನೆ ಬಂದರು ಅಚ್ಚರಿಯಿಲ್ಲ.

ನಿಮ್ಮ ಮುಂದಿನ ಕನಸೇನು?

ಈ ನೆಲ ಮಣ್ಣಿನ ಸಂಸ್ಕೃತಿಯ ಬೆವರಿನ ಹೊದಿಕೆ ಹೊದ್ದುಕೊಂಡಿರುವ ನಮ್ಮ ಜನಾಂಗದ ಕುರಿತು ಒಂದು ಅದ್ಭುತ ಕೃತಿ ಹೊರತರಬೇಕು ಎಂಬ ಕನಸಿದೆ.

ನಿಮ್ಮ‌ ಇಷ್ಟದ ಲೇಖಕರು ಯಾರು?

ಕನ್ನಡದಲ್ಲಿ ಕುವೆಂಪು ,ಭೈರಪ್ಪ, ದೇವನೂರು ಮಹದೇವ ಮತ್ತು ಸೈಯದ್ ಜಮೀರುಲ್ಲಾ ಷರೀಫ್.
ಇಂಗ್ಲಿಷ್ ಕವಿಗಳ ಬಗ್ಗೆ ಅಷ್ಟೊಂದು ಆಳವಾದ ಅಧ್ಯಯನ ನನ್ನಿಂದ ನಡೆದಿಲ್ಲ. ಷೇಕ್ಸ್ ಪಿಯರ್ ನನ್ನಿಷ್ಟದ ಕವಿ ಅವರ Mid summer Night ನನ್ನನ್ನು ಬಹಳ ಕಾಡಿದ ಕೃತಿ.

ಈಚೆಗೆ ಓದಿದ ಕೃತಿಗಳಾವವು?

ಶಾಮಿಯಾನ ಕವಿ ಇದು ಡಾಕ್ಟರ್ ಸೈಯದ್ ಜಮೀರುಲ್ಲಾ ಷರೀಫ್ ಅವರ ಸಮಗ್ರ ಸಾಹಿತ್ಯದ ಕೃತಿ . ಡಾ. ಸುರೇಶ ನಾಯಕ್ ಸಂಪಾದಕತ್ವದಲ್ಲಿ ಮೂಡಿಬಂದಿದೆ.
“ಹುಡುಕಿ ಕೊಡುವಿರಾ ಕಾಣೆಯಾಗಿರುವ ದರ್ಜೆಯವನ ಹೊಲಿಯಲು ಬೇಕಾಗಿದೆ ಕೇಸರಿ ಬಿಳಿ ಹಸಿರು ಕೆಂಪು ಗುಲಾಬಿ ಬಣ್ಣದ ತುಂಡು ಬಟ್ಟೆಗಳ ಶಾಮಿಯಾನ “
ಮನುಷ್ಯ-ಮನುಷ್ಯರ ನಡುವಿನ ಸಂಬಂಧವನ್ನು ಕವಿ ಶರೀಫರು ಮಾರ್ಮಿಕವಾಗಿ ಚಿತ್ರಿಸಿದ್ದು ಭಟ್ಕಳದಲ್ಲಿ ಕೋಮುದಳ್ಳುರಿ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲಿ. ಸಾಹಿತ್ಯದಿಂದ ಸೌಹಾರ್ದತೆ ಸಾಧಿಸಿದ ಸಾಲುಗಳು.

ನಿಮಗೆ ಇಷ್ಟದ ಕೆಲಸ ಯಾವುದು?

ನನಗೆ ಇಷ್ಟವಾದ ಕೆಲಸ ತರಗತಿಯಲ್ಲಿ ಪಾಠ ಬೋಧನೆ.

ಇಷ್ಟದ ಸ್ಥಳ ಯಾವುದು ?

ನನಗೆ ಇಷ್ಟವಾದ ಸ್ಥಳ ನನ್ನೂರು ಉಪ್ಪಿನ ಗಣಪತಿ.

ನಿಮ್ಮ ಇಷ್ಟದ ಸಿನಿಮಾ ಯಾವುದು?

ನನ್ನ ಇಷ್ಟವಾದ ಸಿನಿಮಾ ಶಂಕರ್ ನಾಗ ಅಭಿನಯದ ಮೂಗನ ಸೇಡು

ನಿಮ್ಮ ಜೀವನದಲ್ಲಿ ಮರೆಯಲಾಗದ ಘಟನೆ ಯಾವುದು ?

ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ನೇಮಕಗೊಂಡ ಹೊನ್ನಾವರದ ಜನ್ನ ಕಡಕಲ್ ಶಾಲೆ ಹುಡುಕಲು ಹರಸಾಹಸ ಪಟ್ಟಿದ್ದು ಎಂದು ಮರೆಯದ ಘಟನೆಯಾಗಿ
ಇಂದಿಗೂ ಉಳಿದುಕೊಂಡಿದೆ.

ಅಂತಿಮವಾಗಿ ನಿಮಗೆ ಏನು ಹೇಳಬೇಕು ಅನ್ಸತದ ?

ಇಂದು ಸಾಹಿತ್ಯ ವ್ಯಾಪಾರವಾಗುತ್ತಿದೆ ಎಂಬ ಭಾವನೆ ಎಲ್ಲೆಡೆ ಭಾಸವಾಗು ತ್ತಿದೆ . ಶಾಲೆಯಲ್ಲೂ ಕೂಡ ಅಂಕಗಳಿಗೆ ಸೀಮಿತವಾಗಿ ಪಠ್ಯವನ್ನು ಸಿದ್ಧಪಡಿಸಿರುವುದು ಸಾಹಿತ್ಯದ ಬೆಳವಣಿಗೆ ಯಂತೂ ಅಲ್ಲಾ. ಮಕ್ಕಳ ಬೌದ್ಧಿಕ ಬೆಳವಣಿಗೆ ವಾಕ್ ಚಾತುರ್ಯಕ್ಕೆ ವಿಷಯ ವಿಶ್ಲೇಷಣೆಗೆ ಪಠ್ಯದಲ್ಲಿ ಅವಕಾಶಗಳು ತುಂಬಾನೇ ಕಡಿಮೆ.
ಕುವೆಂಪು ಬೇಂದ್ರೆ ಕಾರ್ನಾಡ್ ಕಂಬಾರ್ ಮಾಸ್ತಿ ಕಾರಂತ ಸೇರಿದಂತೆ ನಾಡಿನ ಸಾಹಿತಿಗಳ ಸಾಹಿತ್ಯದ ಚರ್ಚೆ ವಿಮರ್ಶೆಗಳಿಗೆ ಪಠ್ಯ ದಲ್ಲಿ ಅವಕಾಶ ನೀಡಬೇಕು.
ಸಾಹಿತ್ಯದ ವಿಚಾರ ಕಮ್ಮಟಗಳು ಹೆಚ್ಚೆಚ್ಚು ಪ್ರತಿ ಗ್ರಾಮಮಟ್ಟದಿಂದ ನಡೆಯಬೇಕು. ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಪರ ಸಂಘಟನೆಗಳು ಒಂದೆಡೆ ಸೇರಿ ಕನ್ನಡ ಸಾಹಿತ್ಯದ ಕುರಿತು ಚರ್ಚೆ ವಿಮರ್ಶೆ ನಡೆಸಿ ಸಾಹಿತ್ಯ ಕುರಿತು ಆಸಕ್ತಿ ಮೂಡುವಂತೆ ಮಾಡಬೇಕು.
*******************

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Leave a Reply

Back To Top