ಜಾನ್ ಮಿಲ್ಟನ್ ಕವಿತೆಯ ಅನುವಾದ

ಅಂಧಕಾರದೊಳಗಿಂದ

ಇಂಗ್ಲೀಷ್ ಮೂಲ: ಜಾನ್ ಮಿಲ್ಟನ್

ಕನ್ನಡಕ್ಕೆ ವಿ.ಗಣೇಶ್

ನನ್ನ ಬದುಕಿನ ಬೆಳಕ ಹೇಗೆ ಸವಿದಿಹೆನೆಂದು
ಬಾಳ ಪುಟಗಳ ತಿರುವಿದರೆ ಬರಿ ಕತ್ತಲು
ಬೆಳಕು ಕತ್ತಲೆ ಮಧ್ಯೆ ಕಳೆದ ಬಾಳನು ಈಗ
ಬೆಳಗಿಸಲು ಛಲ ಹೊತ್ತು ನಿಂತೆ ನಾನು

ನನ್ನ ಭಕ್ತಿಗೆ ಮೆಚ್ಚಿ ನೀನಿತ್ತ ವರವೆನಗೆ
ಕಾಣಿಕೆಯ ರೂಪದಲಿ ನಾನು ಪಡೆದಿರುವೆ
ಅದನು ಬಳಸುವ ರೀತಿ ನನಗೆ ತಿಳಿದಿದೆ ಗುರುವೆ
ಬೇರೆ ರೂಪದಿ ಕೊಡಲು ಮುಡುಪನಿಡುವೆ.

`ಕಷ್ಟವೇನೇ ಇರಲಿ ಕಾಯಕವ ನೀ ಮಾಡು
ಅದಕೆ ಫಲ ನೀಡುವುದು ನನ್ನ ಇಚ್ಛೆ’ ಎಂದರಿತೂ
ಅದನು ಮರೆತಿಹ ನಾನು ಬರಿದೆ ಕಾಲವ ಕಳೆದೆ
ವ್ಯರ್ಥವಾಯಿತು ನನ್ನ ಬದುಕು ಹೀಗೆ

ನೀನು ಪ್ರೀತಿಯಲಿತ್ತ ಆ ನಿನ್ನ ನೇಗಿಲನು
ಉಳುವ ಕಾರ್ಯಕೆ ಈಗ ಬಳಸುತಿರುವೆ
ಇದಕಿಂತ ಮಿಗಿಲಾದ ನಿನ್ನ ಸೇರುವ ಮಾರ್ಗ
ನನ್ನ ಮತಿಗೆಟುಕದದು ಕೇಳು ಪ್ರಭುವೆ

ಕಾಯಕವೆ ಕೈಲಾಸ ಎಂಬ ಮಂತ್ರವನರಿತು
ನಿನ್ನ ಸೇವೆಯ ಮಾಡಲೆನ್ನನನುಗೊಳಿಸು ದೇವ
ನಿನ್ನೊಲವಿನಾ ತೊರೆಯು ಶರಧಿಯೋಪಾದಿಯಲಿ
ಹರಿವುದು ಎಲ್ಲೆಡೆಯಿಂದ ನನ್ನ ಕಡೆಗೆ.

*********************************

On His Blindness: John Milton

Leave a Reply

Back To Top