ಅಂಕಣ ಬರಹ

ಕಬ್ಬಿಗರ ಅಬ್ಬಿ 

ರಾಗದ ಬೆನ್ನೇರಿ ಬಂತು

ಭಾವನಾ ವಿಲಾಸ

ಕರ್ನಾಟಕ ಸಂಗೀತದಲ್ಲಿ’ ಕದನ ಕುತೂಹಲ’ ಅನ್ನೋ ರಾಗ ಇದೆ. ಈ ರಾಗದ ಸ್ವರಗಳನ್ನು ಸಾಕಷ್ಟು ವೇಗವಾಗಿ ಹಾಡುತ್ತಾರೆ. ಸಮುದ್ರಮಥನದ ಸಮಯದಲ್ಲಿ ಆಕಡೆ ರಾಕ್ಷಸರು,ಈ ಕಡೆ ದೇವತೆಗಳು ಅಮೃತಕ್ಕಾಗಿ ಕಡಲನ್ನು ಕಡೆಯುವಾಗಲೂ, ಎರಡೂ ವಿರುದ್ಧ ಪಂಗಡಗಳ ನಡುವೆ ಕದನವೇ. ಮನಸ್ಸೊಳಗೂ ಅಷ್ಟೇ, ಯಾವುದೇ ಹೊಸ ಆವಿಷ್ಕಾರದ ಬೆಣ್ಣೆ ಮೂಡುವುದು, ವಿರುದ್ಧ ಚಿಂತನೆಗಳ ಮಂಥನದಿಂದಲೇ. ಈ ರಾಗವನ್ನು ನೀವು ಆಲಿಸುವಾಗ ಒಂದು ಮಂಥನದ ಅನುಭವ ಆಗುತ್ತೆ.

ರಾಗ ಎಂದರೆ ಒಂದು ನಿರ್ದಿಷ್ಟ ಆಯ್ಕೆಯ ಸ್ವರಗಳನ್ನು ಬೇರೆ ಬೇರೆ ಕಾಂಬಿನೇಷನ್ ಗಳಲ್ಲಿ ಹಾಡುವುದು. ಸ ರಿ ಗ ಮ ಪ ದ ನಿ ಎಂಬ ಸಪ್ತ ಸ್ವರಗಳು. ಅವುಗಳಲ್ಲಿ ಎರಡು ಅಥವಾ ಮೂರು ಬಗೆಯ ರಿ, ಗ ಮ, ಧ, ನಿ ಗಳಿವೆ.

ರಿ : ಶುದ್ಧ ರಿ ( ರಿ1),  ಚತುಶ್ರುತಿ ರಿ ( ರಿ2) ಶಟ್ಶ್ರುತಿ ರಿ ( ರಿ3)

ಗ : ಶುದ್ಧ ಗ ( ಗ1), ಸಾಧಾರಣ ಗ ( ಗ2), ಅಂತರ ಗ ( ಗ3)

ಮ : ಶುದ್ಧ ಮ ( ಮ1), ಪ್ರತಿ ಮ ( ಮ2)

ಧ :  ಶುದ್ಧ ಧ ( ಧ1), ಚತುಶ್ರುತಿ ಧ ( ಧ2) ಶಟ್ಶ್ರುತಿ ಧ ( ಧ3)

ನಿ :  ಶುದ್ಧ ನಿ ( ನಿ1), ಕೈಶಿಕಿ ನಿ ( ನಿ2), ಕಾಕಲಿ ನಿ ( ನಿ3)

ಸ ಮತ್ತು ಪ ಗಳನ್ನು ಆಧಾರಕ್ಕಾಗಿ ( ರೆಫರೆನ್ಸ್) ಉಪಯೋಗಿಸುವುದರಿಂದ, ಅವುಗಳಲ್ಲಿ ಒಂದೇ ವಿಧ.

 ಈ ಸ್ವರಗಳ ಲಿಸ್ಟ್ ನಿಂದ, ನಾವು ಬೇಕಾದಂತೆ ಸ್ವರಗಳನ್ನು ಹೆಕ್ಕಿ ಮಾಲೆ ಕಟ್ಟಿದರೆ ಅದು ಒಂದು ರಾಗವಾಗುತ್ತೆ.  ಉದಾಹರಣೆಗೆ, ಸ, ರಿ1, ಗ1, ಮ1, ಪ, ಧ1, ನಿ1,  ಹೆಕ್ಕಿದರೆ ಅದೊಂದು ರಾಗ.

ಹೀಗೆ ನೂರಾರು ಕಾಂಬಿನೇಷನ್ ಗಳನ್ನು ಮಾಡುವ ಮೂಲಕ ನಮಗೆ ಅಷ್ಟೂ ರಾಗಗಳ ಸಾಂಗತ್ಯ ಸಿಗುತ್ತೆ.

ಇಲ್ಲಿ ವೈಜ್ಞಾನಿಕವಾಗಿ ನೋಡಿದರೆ, ಸ್ವರ ಎಂದರೆ ಒಂದು ಫ್ರೀಕ್ವೆನ್ಸಿ. ರಾಗದಲ್ಲಿ ಮೇಲೆ ಹೇಳಿದಂತೆ ಹಲವು ಫ್ರೀಕ್ವೆನ್ಸಿ ಗಳ ಮಾಲೆ ಇದೆ. ಮನುಷ್ಯನ ಕಿವಿಯ ಮೂಲಕ ಗ್ರಾಹ್ಯವಾಗುವ ಒಂದೊಂದು ಫ್ರೀಕ್ವೆನ್ಸಿ ಯೂ ಮಿದುಳಿನಲ್ಲಿ ಒಂದೊಂದು ಸಂವೇದನೆಯಾಗಿ ಮನಸ್ಸನ್ನು ಸ್ಪರ್ಶಿಸುತ್ತೆ. ಈ ಸಂವೇದನೆಯ ಸಾಹಿತ್ಯಿಕ ಹೆಸರೇ ಭಾವ.

ಯಾವುದೇ  ಭಾಷೆಯನ್ನು ಮತ್ತು ಸಾಹಿತ್ಯವನ್ನು ಮೀರಿ, ಸ್ವರಗಳು, ಮನಸ್ಸೊಳಗೆ ಭಾವ ಸ್ಪಂದನೆ ಮಾಡಬಲ್ಲವು. ಶಿವರಂಜಿನಿ ಅಂತ ಒಂದು ರಾಗವಿದೆ.

 ಇದರ ಆಲಾಪನೆಯನ್ನು ನೀವು ಆಲಿಸಿದರೆ ಶೋಕದ ಆರ್ದ್ರ ಭಾವ, ಭಕ್ತಿಯ ಸಮರ್ಪಣಾ ಭಾವ, ವಿರಹದ ನೋವಿನ ಅನುಭವ ಆಗುತ್ತೆ. ಹಾಗೆಯೇ ಮೋಹನ, ಯಮನ್ ಇತ್ಯಾದಿ ರಾಗಗಳು ಪ್ರೀತಿಯ ಉತ್ಕಟತೆಯಲ್ಲಿ, ಒಲವ ಧಾರೆಯಲ್ಲಿ ಮಿಂದ ಅನುಭೂತಿ ಕೊಡುತ್ತದೆ.

ಸಾಹಿತ್ಯದ ಪದಗಳು ತಮ್ಮ ಅರ್ಥಗಳ ಮೂಲಕ, ಭಾವಕ್ಕೆ ಲಿಪಿಯಾದರೆ, ರಾಗಗಳು, ಭಾವದ ಅಮೂರ್ತ, ಅವರ್ಣನೀಯ ಅನುಭೂತಿ ಸ್ಫುರಿಸುತ್ತವೆ.

ಈಗ ಭಾವಪೂರ್ಣ ಸಾಹಿತ್ಯದ ಭಾವಕ್ಕೆ ಹೊಂದುವ ರಾಗದಲ್ಲಿ, ಆ ಕವಿತೆಯನ್ನು ಹಾಡಿದರೆ!. ಅದು ರುಚಿಯಾದ ಅನ್ನ ಸಾರಿಗೆ, ಘಮಗಮ ತುಪ್ಪ ಬಡಿಸಿದ ಹಾಗೆ. ಸಾಹಿತ್ಯದ ಭಾವವನ್ನು ಚಿಂತನಶೀಲ ಮನಸ್ಸು ರಸಹಿಂಡುವಾಗ, ರಾಗದ ಸ್ವರಗಳು ಅದೇ ಹೊತ್ತಿಗೆ ಶ್ರವಣ ಮಾಧ್ಯಮದ ಮೂಲಕ ಎದೆಯೊಳಗೆ ಸ್ಪಂದನೆಯ ಲಬ್ ಡಬ್ ಆಗುತ್ತವೆ. ಹಾಡಿನ ಜತೆಗಿನ ಇತರ ವಾದ್ಯಗಳು, ಲಯ ಕಂಪನಗಳು ನಮ್ಮೊಳಗೆ ಒಂದು ಹೊಸ ಲೋಕ ಸೃಷ್ಟಿ ಮಾಡುತ್ತವೆ.

ಈಗ, ಈ ಹಾಡು, ನಾಟಕದ್ದೋ, ಚಲನ ಚಿತ್ರದ್ದೋ, ಅಥವಾ ನಾಟ್ಯದ್ದೋ ಆಗಿದ್ದರೆ, ಭಾವೋತ್ಕರ್ಷಕ್ಕೆ ಮೂರನೆಯ ಆಯಾಮ ಸಿಗುತ್ತೆ.

ಬರೇ ಅಭಿನಯದಿಂದಲೂ ಭಾವ ಪ್ರಕಟ ಮಾಡಲೂ ಬಹುದು, ಭಾವ ಸಂವಹನ ಮಾಡಬಹುದು ತಾನೇ. ಹಾಲುಗಲ್ಲದ ಬೊಚ್ಚುಬಾಯಿಯ ಮಗುವಿನ ಮುಗುಳು ನಗು ಸಂವಹಿಸುವ ಭಾವಕ್ಕೆ ಸಾಹಿತ್ಯ ಇದೆಯೇ?.

ರಾಗ, ಕವಿತೆ ಮತ್ತು ಅಭಿನಯ ( ಶ್ರವಣ, ಭಾಷೆ ಮತ್ತು ದೃಶ್ಯ, ಮಾಧ್ಯಮ) ಈ ಮೂರೂ ವಿಧಾನದಿಂದ ನಮ್ಮ ಮನಮುಟ್ಟುವ ಪ್ರಯತ್ನ, ಸಿನೆಮಾ ಮತ್ತು ನಾಟಕದ ಹಾಡುಗಳದ್ದು. ಆ ಮೂಲಕ, ಮೂರೂ ರೀತಿಯಲ್ಲಿ  ಹಾಡಿನ ಪ್ರಸ್ತುತಿ, ನಮ್ಮೊಳಗೆ ಕಲ್ಪನಾಶಕ್ತಿಯ ನಾಲ್ಕನೇ ಆಯಾಮವನ್ನು ಸೃಜಿಸುತ್ತೆ. ಅದು ತುಂಬಾ ಹೊಸತಾದ ಅವರ್ಣನೀಯವಾದ ಪಿಕ್ಚರೈಸೇಷನ್ ನ ಕದ  ತೆರೆಯುತ್ತೆ. ಈ ಅನುಭವ ವ್ಯಕ್ತಿಯ ಹಳೆ ನೆನಪುಗಳ ಜತೆಗೆ ಅತ್ಯಂತ ಯುನೀಕ್ ಆಗಿರುತ್ತೆ.

ಲಂಕೇಶ್ ಬರೆದ ಹಾಡು ಕೆಂಪಾದವೋ ಎಲ್ಲ ಕೆಂಪಾದವೋ. ಈ ಕವಿತೆಯನ್ನು ಸುಶ್ರಾವ್ಯವಾಗಿ ಹಾಡಿದ್ದು, ಎಸ್ ಪಿ. ಬಾಲಸುಬ್ರಹ್ಮಣ್ಯಂ. ಹಾಡಿನಲ್ಲಿ ಪುನಃ ಪುನಃ ‘ ಕೆಂಪಾದವೋ’ ಎಂಬ ಸಾಲು ಇಂಪು ಲಹರಿಯಾಗಿ ಹರಿಯುತ್ತೆ. ( ಚಲನ ಚಿತ್ರ: ಎಲ್ಲಿಂದಲೋ ಬಂದವರು, ಸಂಗೀತ : ವಿಜಯ ಭಾಸ್ಕರ್)

**     ***     **

Taking Lankesh legacy forward

ಕೆಂಪಾದವೋ ಎಲ್ಲ ಕೆಂಪಾದವೋ

ಕೆಂಪಾದವೋ ಎಲ್ಲ ಕೆಂಪಾದವೋ

ಹಸುರಿದ್ದ ಗಿಡಮರ

ಬೆಳ್ಳಗಿದ್ದ ಹೂವೆಲ್ಲ

ನೆತ್ತರ ಕುಡೀದ್ಹಾಂಗೆ ಕೆಂಪಾದವೋ

ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೋ

ಊರು ಕಂದಮ್ಮಗಳು ಕೆಂಪಾದವೋ

ಜೊತೆಜೊತೆಗೆ ನಡೆದಾಗ

ನೀಲ್ಯಾಗಿ ನಲಿದಂತ

ಕಾಯುತ್ತ ಕುಂತಾಗ

ಕಪ್ಪಾಗಿ ಕವಿದಂತ

ನುಡಿ ನುಡಿದು ಹೋದಾಗ

ಪಚ್ಚಯ ತೆನೆಯಂತ

ಭೂಮಿಯು ಎಲ್ಲಾನು ಕೆಂಪಾದವೋ

ನನಗಾಗ ಕೆಂಪಾದವೋ

ಕೆಂಪಾದವೋ ಎಲ್ಲ ಕೆಂಪಾದವೋ

ಕೆಂಪಾದವೋ ಎಲ್ಲ ಕೆಂಪಾದವೋ

**     ***     **

ಕೆಂಪು ಬಣ್ಣ, ಕ್ರಾಂತಿಯ ಬಣ್ಣ. ಪರಿವರ್ತನೆಯ ಬಣ್ಣ. ಕ್ರಾಂತಿ, ರಕ್ತಕ್ರಾಂತಿಯೇ ಆಗಬೇಕೆಂದಿಲ್ಲ. ಜಗತ್ತಿನ ಪ್ರತೀ ಜೀವವೂ ಬದಲಾವಣೆಗೆ ಹಾತೊರೆಯುತ್ತೆ.  ಪ್ರಕೃತಿಯಲ್ಲಿ ಎರಡು ರೀತಿಯ ಬದಲಾವಣೆಯನ್ನು ಕಾಣಬಹುದು. ಮೊದಲನೆಯದ್ದು,ನಿಧಾನವಾದ, ನಿರಂತರವಾದ ಬದಲಾವಣೆ. ನಮಗೆ ದಿನ ದಿನ ,ಕ್ಷಣ ಕ್ಷಣ ಕಳೆದಂತೆ ವಯಸ್ಸಾಗುತ್ತಲ್ಲ,ಹಾಗೆ. ನಮ್ಮೊಳಗೆ ಅರಿವಿಲ್ಲದೆಯೇ ನಡೆಯುವ ಜೆನೆಟಿಕ್ ಬದಲಾವಣೆಗಳೂ ಅತ್ಯಂತ ಸೂಕ್ಷ್ಮ. ಜೀವ ವಿಕಾಸಕ್ಕೆ ಅದು ಮೂಲ.

 ಎರಡನೆಯ ಬದಲಾವಣೆ ಪ್ರಳಯದಂತಹಾ ಬದಲಾವಣೆ. ಪ್ರಕೃತಿಯಲ್ಲಿ ಯಾವಾಗಲೂ ಮಲ್ಟಿಪೋಲಾರ್ ಪ್ರಕ್ರಿಯೆಗಳ ನಡುವೆ ಒಂದು ಸಮತೋಲನ ಇರುತ್ತೆ. ಆ ಸಮತೋಲನ ಯಾವುದೋ ಕಾರಣಕ್ಕೆ ( ಕೆಲವೊಮ್ಮೆ ಮಾನವ ನಿರ್ಮಿತ) ಸಮತೋಲನ ತಪ್ಪಿ, ಅಸಮತೋಲನ ಬೆಳೆಯುತ್ತಾ ಹೋಗುತ್ತೆ. ಈ ಅಸಮತೋಲನ, ಹೊರಲಸಾಧ್ಯ ಹೊರೆಯಾದಾಗ, ಹಠಾತ್ತಾದ, ಶಕ್ತಿಯುತವಾದ, ಭೂಕಂಪದಂತಹಾ ಘಟನೆ ನಡೆದು ಒಂದು ಕ್ಷಣಕ್ಕೆ ಎಲ್ಲವೂ ಅಲ್ಲೋಲಕಲ್ಲೋಲವಾಗಿ ಹೊಸ ಸಮತೋಲನಕ್ಕೆ ವ್ಯವಸ್ಥೆ ದಾಟಿಬಿಡುತ್ತೆ. ಇಂತಹ ವಿಪ್ಲವಕಾರೀ ಬದಲಾವಣೆಯಲ್ಲಿ ಸಾಕಷ್ಟು ,ಸಾವು ನೋವು ಸಂಭವಿಸುತ್ತೆ.

ಹೇಗೇ ಇರಲಿ. ಬದಲಾವಣೆ ಮತ್ತು ವಿಕಾಸ ( evolution) ಜಗತ್ತಿನ ಭೂತ,ವರ್ತಮಾನ ಮತ್ತು ಭವಿಷ್ಯದ  ಅಂಗ.

 ಬದಲಾವಣೆಗಾಗಿ ಗಿಡ,ಮರ, ಭೂಮಿ,ಬಾನು, ಪಚ್ಚೆ ಪೈರು ಎಲ್ಲವೂ ಹಾತೊರೆಯುವುದನ್ನು ,ಲಂಕೇಶ್ ಅವರು ಕೆಂಪಾದವೋ ಎಲ್ಲ ಕೆಂಪಾದವೋ ಅನ್ನುವ ಸಾಲುಗಳಲ್ಲಿ ಬಿಂಬಿಸಿದ್ದಾರೆ. ಹಾಡು ಕೇಳಿದಂತೆ, ಈ ಬದಲಾವಣೆಯತ್ತ ತುಡಿತ ಮನಸ್ಸೊಳಗೆ ತೀವ್ರವಾಗಲು,ಇದರ,ಸಂಗೀತ, ಹಾಡಿದ ಬಗೆ, ಲಯ ಕೂಡಾ ಕಾರಣ ಅಲ್ಲವೇ. ಈ ಕವಿತೆಯಲ್ಲಿ ಜನಪದ ಧ್ವನಿ ಹಾಡಿಗೆ ನೆಲದ ಪರಿಮಳ ಕೊಡುತ್ತೆ.

ಈ ಕವಿತೆಯ ಕೊನೆಯ ಸಾಲು,

“ನನಗಾಗ ಕೆಂಪಾದವೋ”

ಲಂಕೇಶ್ ಅವರು ಅನುಭವ, ಸಿದ್ಧಾಂತ, ಮತ್ತು ಚಿಂತನೆ, ವ್ಯಕ್ತಿ ಕೇಂದ್ರಿತ ಎಂದು ನಂಬಿದಂತಿದೆ.

ಕವಿತೆಯಲ್ಲಿ ಹೇಳಿದ ಅಷ್ಟೂ ವಿಷಯಗಳು ಕೆಂಪಾದವೋ ಅಂತ ಕಂಡದ್ದು ವ್ಯಕ್ತಿಯ  ಮನಸ್ಸಿಗೆ.

ಲಂಕೇಶ್ ಅವರು ಇದೇ ಚಿತ್ರಕ್ಕೆ ಬರೆದ ಇನ್ನೊಂದು ಕವಿತೆ “ಎಲ್ಲಿದ್ದೆ ಇಲ್ಲೀ ತನಕ, ಎಲ್ಲಿಂದ ಬಂದ್ಯವ್ವ”

ಹಾಡಾಗಿ ಹರಿದದ್ದು, ಎಸ್.ಪಿ.ಬಿ. ಅವರ ನಾದಬಿಂದುವಿನಿಂದಲೇ.

ಜಾನಪದ ಶೈಲಿಯ ಭಾವಗೀತೆಗಳ ಸಂಕಲನ,ದೊಡ್ಡರಂಗೇ ಗೌಡರ, ಮಾವು- ಬೇವು. ಮಾವಿನ ತಳಿರು ಜನಪದ ಹಬ್ಬಗಳ ತೋರಣವಾದರೆ ಬೇವು ಬೆಲ್ಲ, ಬದುಕಿನ ಸಮತತ್ವ.

Doddarange Gowda - Movies, Biography, News, Age & Photos | BookMyShow

 ಈ ಆಲ್ಬಮ್‌ ನ ಅಷ್ಟೂ ಹಾಡುಗಳು ಹಳ್ಳಿಯ ಶುಭ್ರ ಪರಿಸರದ ಮನಸ್ಸಿನ, ಸಂಭ್ರಮದ, ಪ್ರೀತಿ, ಪ್ರೇಮಗಳ ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’ ಎಂಬಂತೆ ರಸಿಕ ಮನಸ್ಸಿಗೆ ಮುಟ್ಟುತ್ತವೆ. ಇಂತಹ ಹಾಡುಗಳಿಗೆ ಅಶ್ವಥ್ ಅವರು ರಾಗ ಸಂಯೋಜನೆ ಮಾಡಿ, ಎಸ್.ಪಿ

ಬಿ. ಅವರು ಹಾಡಿದರೆ, ಅದು ಜೀವ ಭಾವದ ಔತಣ. ಅದರ ಒಂದು ಹಾಡು ಹೀಗಿದೆ.

**     ***     **

ಮುಂಜಾನೆ ಮಂಜೆಲ್ಲ ಚಂದಾಗೈತೆ

ಸಂಗಾತಿ ತುಟಿ ಹಂಗೆ ಹವಳsದ ಮಣಿ ಹಂಗೆ

ಹೊಳಪಾಗೈತೆ…

ಸಂಪಿಗೆ ತೂಗಿ ಚೆಂಡು ಹೂ ಬಾಗಿ

ನೇಸರ ನಗೆಸಾರ ಶುರುವಾಗೈತೆ

ಸೂಲಂಗಿ ತೆನೆಗೆ ಬಾಳೆಲೆ ಕೊನೆಗೆ

ತಂಗಾಳಿ ಸುಳಿದಾಡಿ ಹಾಡಾಗೈತೆ

ಕಣ್ಣಾಗಿ ಸಂಗಾತಿ ಕುಣಿದ್ಹಂಗೈತೆ..

ಮೋಡದ ದಂಡು ಓಡೋದ ಕಂಡು

ರಂಗೋಲಿ ವೈನಾಗಿ ಬರೆದ್ಹಂಗೈತೆ

ಆಕಾಶದ  ಬದಿಗೆ ಗುಡ್ಡದ ತುದಿಗೆ

ಹೊಂಬಿಸಿಲು ರಂಗಾಗಿ ಬೆಳಕಾಗೈತೆ

ಮೈದುಂಬಿ ಮನಸೋತು ಮೆರೆದಂಗೈತೆ..

**     ***     **

ಇದರ ಪ್ರತಿಯೊಂದು ಪದಗಳೂ ರಾಗ ಹೀರಿ ಗಾಯಕನ ಕಂಠದಿಂದ ಹೊಮ್ಮಿದಾಗ, ಭಾವ ಕಳೆಗಟ್ಟುತ್ತೆ. ಭಾವಮಧುವಿನ ಉನ್ಮತ್ತವಾದ ಸ್ಥಿತಿಯಿಂದ ಹೊರಬರಲಾಗದ ಸ್ಥಿತಿ ರಸಿಕ ಕೇಳುಗನದ್ದು.

S P Balasubrahmanyam Photos, Pictures, Wallpapers,

ಬಾಲಸುಬ್ರಹ್ಮಣ್ಯಂ ಅವರ ರೇಶ್ಮೆ ಸ್ಪರ್ಶದ ಕಂಠ, ತಗ್ಗು ಸ್ಥಾಯಿಯಿಂದ ತಾರಸ್ಥಾಯಿಗೆ ಕ್ಷಣಗಳಲ್ಲಿ ಏರಿಳಿಯುವ ಪ್ರತಿಭೆ ಮತ್ತು ಎದೆತುಂಬಿ ಹಾಡುವ ಸಮರ್ಪಣೆ,  ಚೆನ್ನಾಗಿ ಹದ ಬಂದ ಸಕ್ಕರೆ ಪಾಕದ ನೂಲೆಳೆಯ ಧಾರೆಯಂತೆ ಕಡಿಯದೆ ಹರಿಯುವ ಸರಾಗ, ಕವಿತೆಯ ಅರ್ಥಕ್ಕೆ ವ್ಯೋಮದವಕಾಶ ಒದಗಿಸುತ್ತವೆ. ರಾಗಸ್ವರಗಳು ಮಿಡಿದಾಗ ಅಂತರಂಗದ ತಂತಿಗಳಲ್ಲಿ ಭಾವ ಅನುರಣಿಸುತ್ತವೆ.

ಹೀಗೆಯೇ ‘ ಪರಸಂಗದ ಗಂಡೆ ತಿಮ್ಮ ‘ ಚಿತ್ರದಲ್ಲಿ, ದೊಡ್ಡ ರಂಗೇ ಗೌಡರ ಕವಿತೆ ಹೀಗಿದೆ.

“ನೋಟದಾಗೆ ನಗೆಯಾ ಮೀಟೀ

ಮೋಜಿನಾಗೆ ಎಲ್ಲೆಯ ದಾಟೀ.

ಮೋಡಿಯ ಮಾಡಿದೋಳ ಪರಸಂಗ ಐತೇ  ಪರಸಂಗ ಐತೇ..

ಮೋಹಾವ ತೋರಿದೋಳ ಪರಸಂಗ ಐತೇ  ಪರಸಂಗ ಐತೇ…

ಬರಡಾ..ದ ಬದ್ಕೀ..ಗೆ ಹೊಸಾ ನೇಸ್ರು ಅರಳೈತೇ.”

 ರಾಜನ್-ನಾಗೇಂದ್ರ ಅವರ ರಾಗ ಸಂಯೋಜನೆಯಲ್ಲಿ ಈ ಕವಿತೆಗೆ ನಾದಭಾವ ತುಂಬಿದ್ದು ಎಸ್. ಪಿ.ಬಿ.

ದೊಡ್ಡರಂಗೇಗೌಡರ ಹಳ್ಳಿಯ ಭಾವಚಿತ್ರವನ್ನು ಕಣ್ಣಿಗೊತ್ತಿದ ನಂತರ, ಕೆ.ಎಸ್

ನರಸಿಂಹ ಸ್ವಾಮಿ ಅವರ ಮೈಸೂರು ಮಲ್ಲಿಗೆಯ ಪ್ರೇಮಗೀತೆಯತ್ತ ಹೊರಳೋಣವೇ..

**    ***     ***

Panel to popularise works of K.S. Narasimhaswamy - The Hindu

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ

ನಿನ್ನೊಳಿದೆ ನನ್ನ ಮನಸು ||

ಹುಣ್ಣಿಮೆಯ ರಾತ್ರಿಯಲಿ ಉಕ್ಕುಹುದು ಕಡಲಾಗಿ

ನಿನ್ನೊಲುಮೆ ನನ್ನ ಕಂಡು, ನಿನ್ನೊಳಿದೆ ನನ್ನ ಮನಸು

ಸಾಗರನ ಹೃದಯದಲಿ ರತ್ನ ಪರ್ವತ ಮಾಲೆ

ಮಿಂಚಿನಲಿ ನೇವುದಂತೆ

ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ

ಸಾಗುವುಹು ಕನಸಿನಂತೆ, ನಿನ್ನೊಳಿದೆ ನನ್ನ ಮನಸು

ಅಲೆ ಬಂದು ಕರೆಯುಹುದು ನಿನ್ನೊಲುಮೆ ಅರಮನೆಗೆ

ಹೊರಗಡಲ ರತ್ನಪುರಿಗೆ

ಅಲೆ ಇಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ

ಒಳಗುಡಿಯ ಮೂರ್ತಿಮಹಿಮೆ, ನಿನ್ನೊಳಿದೆ ನನ್ನ ಮನಸು

***    ***    ****

ಈ ಹಾಡಿಗೆ ಸಂಗೀತ ಅಶ್ವಥ್ ಅವರದ್ದು. ಹಾಡು ಮೈಸೂರು ಮಲ್ಲಿಗೆ ಚಲನಚಿತ್ರದ್ದು. ಬಾಲಸುಬ್ರಹ್ಮಣ್ಯಂ ಅವರು ಈ ಹಾಡನ್ನು ಪ್ರೇಮದ ಆರಾಧಕನಾಗಿ ಹಾಡಿದ್ದಾರೆ. ಈ ಹಾಡುಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆಯೇ?!.

 ಇವುಗಳನ್ನು ಅನುಭವಿಸಬೇಕು. ಇವುಗಳ ಭಾವದಬ್ಬಿಯಲಿ ಮೀಯಬೇಕು,ಕರಗಬೇಕು. ಅದು ಸಾಧ್ಯವಾಗುವುದೇ ಗಾಯಕನ ಪ್ರಸ್ತುತಿಯಿಂದ,ರಾಗ ಸಂಯೋಜನೆಯಿಂದ.

ಗಾಯಕ, ನಟ, ಕವಿ,ಚಿತ್ರಕಾರ, ಇಂತಹ ಕಲಾವಿದರು, ಭಾವನೆ ,ಸಂವೇದನೆ ಮತ್ತು ಕಲ್ಪನೆಯ ಪ್ರತಿಭಾಸಂಪನ್ನರು.

ಬ್ರಹ್ಮ, ಜೀವ ಸೃಷ್ಟಿ ಮಾಡಿದರೆ ಕಲಾವಿದರು ಜೀವಭಾವ ಸೃಷ್ಟಿಕರ್ತರು. ಅಮ್ಮ ಮತ್ತು ಅಪ್ಪ,ಎರಡೂ ಏಕಕಾಲದಲ್ಲಿ ಆಗಬಲ್ಲವರೆಂದರೆ ಕಲಾವಿದರೇ. ಹಾಗಾಗಿ ಬಾಲಸುಬ್ರಹ್ಮಣ್ಯಂ ಅವರ ಬದುಕಿನ ಬಟ್ಟೆಯ ನೇಯ್ದ ನೂಲು ನಾದ ಮತ್ತು ಭಾವ.

ಅದ್ಭುತ ಕಂಠದ ಜತೆಗೇ ತನ್ನದೇ ಕಲ್ಪನಾ ಲೋಕವನ್ನು ನಿರ್ಮಿಸಿ, ಕವಿಭಾವವನ್ನು ತನ್ನೊಳಗೆ ಇಳಿಸದ ಹೊರತು, ಇಂತಹಾ ಕವಿತೆಗಳಿಗೆ ದನಿಯಾಗಲು   ಸಾಧ್ಯವೇ?. ಸಿನೆಮಾ ಹಾಡುಗಳಲ್ಲದೇ, ಕಾವ್ಯಗಳಿಗೂ ಸ್ವರವಾದ ಕಾಲಾತೀತ ಶಾರೀರದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಶರೀರ ತೊರೆದಿದ್ದಾರೆ.

ಎಸ್,ಪಿ,ಬಿ.

SPB is stable and recovering slowly, says SP Charan | Tamil Movie News -  Times of India

ಕನ್ನಡದ ಹಾಡುಗಳಲ್ಲಿ ಸ್ವರವಾಗಿ ಅವರು ನಮ್ಮೊಳಗೆ ಸದಾ ಗುನುಗುನಿಸುತ್ತಾರೆ. ಅವರಿಗೆ, ಭಾವಪೂರ್ಣ ಶ್ರದ್ಧಾಂಜಲಿಗಳು.


ಮಹಾದೇವ ಕಾನತ್ತಿಲ

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

2 thoughts on “

  1. ಸಂಗೀತ ಹಾಗೂ ಸಾಹಿತ್ಯದ ಸಮೀಕರಣೆ ಮಾಡುತ್ತಾ, ಪದಗಳ ಸಿರಿ ಹಾಗೂ ರಾಗಧಾರಿಯ ಮಾಧುರ್ಯ ಹೇಗೆ ಭಾವ ಪ್ರಪಂಚದ ಕ್ಷಿತಿಜವನ್ನು ಹಿಗ್ಗಿಸುತ್ತವೆ ಎಂಬ ವಿಚಾರವನ್ನು ಮಹಾದೇವ್ ಅವರು ಪರಿಣಾಮಕಾರಿಯಾಗಿ ತಮ್ಮ ಲೇಖನದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಕನ್ನಡ ನಾಡಿನ ಪ್ರಮುಖ ಸಾಹಿತಿಗಳಿಂದ ರಚಿತವಾದ ವಿವಿಧ ಶೈಲಿಯ ಹಾಡುಗಳನ್ನು ಬಹಳ ಸುಂದರವಾಗಿ ವಿಶ್ಲೇಷಿಸಿದ್ದಾರೆ. ಎಸ್ಪಿ ಅಭಿಷೇಕ್ ಅವರ ಮಧುರ ಕಂಠ ಸಿರಿಯ ಬಗ್ಗೆ ಬರೆದದ್ದು ಬಹಳ ಸೂಕ್ತವಾಗಿದೆ ಹಾಗೂ ಆ ಹಿರಿಯ ಗಾಯಕನಿಗೆ ಅರ್ಪಿಸಿದ ಸಮರ್ಪಕ ಶ್ರದ್ಧಾಂಜಲಿ.

    1. “ಪದಗಳ ಸಿರಿ,ರಾಗಧಾರಿಯ ಮಾಧುರ್ಯ” ತುಂಬಾ ಚೆನ್ನಾಗಿ ಹೇಳಿದಿರಿ ಸರ್.
      ತುಂಬಾ ಧನ್ಯವಾದಗಳು

Leave a Reply

Back To Top