ಅಂಕಣ ಬರಹ
ಬಸ್ ಸ್ಟ್ಯಾಂಡೆನ್ನುವ
ಮಾಯಾಲೋಕ
ಚಲನೆ ಎನ್ನುವ ಪದದ ನಿಜವಾದ ಅರ್ಥವೇನೆಂದು ತಿಳಿಯಬೇಕಾದರೆ ಈ ಬಸ್ ಸ್ಟ್ಯಾಂಡಿನಲ್ಲಿ ಅರ್ಧ ಗಂಟೆ ಸುಮ್ಮನೆ ನಿಂತುಬಿಡಬೇಕು; ಅವಸರದಲ್ಲಿ ಅತ್ತಿತ್ತ ಓಡಾಡುತ್ತ ಬೋರ್ಡು ಹುಡುಕುವವರನ್ನು, ಕಂಟ್ರೋಲ್ ರೂಮಿನಿಂದ ಅಶರೀರವಾಣಿಯಂತೆ ಮೊಳಗುವ ಅನೌನ್ಸ್‌ಮೆಂಟಿಗೆ ಬ್ಯಾಗನ್ನೆತ್ತಿಕೊಂಡು ಬಸ್ಸಿನೆಡೆಗೆ ಓಡುವವರನ್ನು, ಒಂದು ನಿಮಿಷವೂ ಆಚೀಚೆಯಾಗದಂತೆ ಅದೆಲ್ಲಿಂದಲೋ ಓಡಿಬಂದು ಹೊರಡುತ್ತಿರುವ ಬಸ್ಸನ್ನು ಹತ್ತಿಕೊಳ್ಳುವವರನ್ನು ಸಹನೆಯಿಂದ ಗಮನಿಸಬೇಕು! ಬಸ್ಸಿನ ಹಾಗೂ ಅದರ ಚಲನೆಯ ಹೊರತಾಗಿ ಬೇರಾವ ವಿಷಯಗಳೂ ಆ ಕ್ಷಣದ ಅಲ್ಲಿನ ಬದುಕುಗಳ ಎಣಿಕೆಗೆ ಸಿಕ್ಕುವುದಿಲ್ಲ. ಭೂಮಿ ಸೂರ್ಯನನ್ನು ಪರಿಭ್ರಮಿಸುವ, ಇನ್ಯಾವುದೋ ಉಪಗ್ರಹವೊಂದು ಭೂಮಿಯನ್ನು ಸುತ್ತುತ್ತಿರುವ ಯಾವುದೇ ನಿರ್ಣಯಾತ್ಮಕ ತತ್ವಗಳಿಗೆ ಒಳಪಡದ ಸರಳವಾದ ಚಲನೆಯ ಸಿದ್ಧಾಂತವೊಂದು ಬಸ್ಸಿನ ಅಸ್ತಿತ್ವದೊಂದಿಗೆ ನಿರ್ಣಯಿಸಲ್ಪಡುತ್ತದೆ. ಬಸ್ಸು ಯಾವ ಸಮಯಕ್ಕೆ ಬಸ್ ಸ್ಟ್ಯಾಂಡನ್ನು ತಲುಪಿತು, ಅದರ ಬೋರ್ಡು ಯಾವಾಗ ಬದಲಾಯಿತು, ಅದರ ನಿರ್ಗಮನಕ್ಕೆ ನಿಗದಿಯಾದ ಅವಧಿಯೇನು ಹೀಗೆ ಸಮಯದ ಸುತ್ತ ಸುತ್ತುವ ಮಾಹಿತಿಗಳೇ ಅತ್ತಿತ್ತ ಸುಳಿದು ಚಲನೆಯ ದಿಕ್ಕುಗಳನ್ನು ನಿರ್ಧರಿಸುತ್ತಿರುತ್ತವೆ. ಅಂತಹ ನಿರ್ಣಾಯಕ ಹಂತದಲ್ಲಿ ಬಸ್ ಸ್ಟ್ಯಾಂಡೊಂದು ಪುಟ್ಟ ಗ್ರಹದಂತೆ ಗೋಚರವಾಗಿ, ತನ್ನ ನಿಯಮಗಳಿಗನುಸಾರವಾಗಿ ಬದುಕುಗಳ ಚಲನೆಯ ಬೋರ್ಡನ್ನು ಬದಲಾಯಿಸುತ್ತಿರುವಂತೆ ಭಾಸವಾಗುತ್ತದೆ.
ನಾನು ಬಸ್ಸಿಗಾಗಿ ಕಾಯುತ್ತ ನಿಂತಿರುತ್ತಿದ್ದ ಕಾಲದಲ್ಲಿ ಈ ಬಸ್ಸಿನ ಬೋರ್ಡುಗಳೆಡೆಗೆ ನನಗೊಂದು ವಿಚಿತ್ರವಾದ ಕುತೂಹಲವಿತ್ತು. ಬೋರ್ಡೇ ಇರದ ಬಸ್ಸೊಂದು ತುಂಬಾ ಸಮಯದಿಂದ ಸ್ಟ್ಯಾಂಡಿನಲ್ಲಿಯೇ ನಿಂತಿದೆಯೆಂದರೆ ಅದು ಡಿಪೋಗೆ ಹೋಗುವ ಬಸ್ಸು ಎಂದು ಅದ್ಹೇಗೋ ತೀರ್ಮಾನವಾಗಿ ಆ ಬಸ್ಸಿನ ನಂಬರನ್ನಾಗಲೀ, ಅದರ ಆಗುಹೋಗುಗಳನ್ನಾಗಲೀ ಯಾರೂ ಗಮನಿಸುತ್ತಲೇ ಇರಲಿಲ್ಲ; ಡ್ರೈವರೊಬ್ಬ ಆ ಬಸ್ಸಿನೆಡೆಗೆ ನಡೆದುಕೊಂಡು ಹೋಗುತ್ತಿದ್ದರೂ ಅಲ್ಲಿರುವ ಯಾರ ಗಮನವೂ ಅದರ ಕಡೆಗೆ ಹರಿಯುತ್ತಿರಲಿಲ್ಲ. ಅದೇ ಬೋರ್ಡು ಹಾಕುವವ ಬಸ್ಸಿನೆಡೆಗೆ ಚಲಿಸಿದಾಗ ಮಾತ್ರ ಅಲ್ಲಿರುವವರೆಲ್ಲರ ದೃಷ್ಟಿಯೂ ಅವನನ್ನೇ ಅನುಸರಿಸುತ್ತ ತೀಕ್ಷ್ಣವಾಗತೊಡಗುತ್ತಿತ್ತು. ಅಷ್ಟು ಹೊತ್ತು ಅಲ್ಲಿಯೇ ನಿಂತಿರುತ್ತಿದ್ದ ಬಸ್ಸಿನ ಅಸ್ತಿತ್ವಕ್ಕೊಂದು ಬೆಲೆಯೇ ಇಲ್ಲದಂತೆ ಭಾಸವಾಗಿ, ನಾಲ್ಕಾರು ಅಕ್ಷರಗಳ ಬೋರ್ಡೊಂದು ನಿಮಿಷಾರ್ಧದಲ್ಲಿ ಅದರ ಇರುವಿಕೆಯ ಸ್ವರೂಪವನ್ನು ಬದಲಾಯಿಸಿಬಿಡುವುದನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿತ್ತು. ಈ ಬೋರ್ಡುಗಳೆಲ್ಲ ಅದ್ಯಾವ ಫ್ಯಾಕ್ಟರಿಯಲ್ಲಿ ತಯಾರಾಗಬಹುದು, ಅದರ ಮೇಲೆ ಅಕ್ಷರಗಳನ್ನು ಬರೆಯುವವ ಯಾವ ಊರಿನವನಾಗಿರಬಹುದು, ತಾನೇ ಬರೆದ ಬೋರ್ಡನ್ನು ಹೊತ್ತು ಹೊರಡಲು ರೆಡಿಯಾದ ಬಸ್ಸನ್ನೇರುವಾಗ ಅವನ ಮನಸ್ಸಿನ ಭಾವನೆಗಳೇನಿರಬಹುದು ಎನ್ನುವಂತಹ ವಿಚಿತ್ರವಾದ ಆಲೋಚನೆಗಳೂ ಆಗಾಗ ಸುಳಿಯುತ್ತಿದ್ದವು. ಕಂಟ್ರೋಲ್ ರೂಮಿನ ಪಕ್ಕ ಒಂದಕ್ಕೊಂದು ಅಂಟಿಕೊಂಡು ನಿಂತಿರುತ್ತಿದ್ದ ಬೋರ್ಡುಗಳಲ್ಲಿ ತನಗೆ ಬೇಕಾಗಿದ್ದನ್ನು ಮಾತ್ರ ಎತ್ತಿಕೊಂಡು ವಿಚಿತ್ರವಾದ ಗತ್ತಿನಲ್ಲಿ ಓಡಾಡುತ್ತಿದ್ದ ಬೋರ್ಡು ಹಾಕುವವನೇ ಸ್ಟ್ಯಾಂಡಿನಲ್ಲಿ ಕಾಯುತ್ತಿರುವವರೆಲ್ಲರ ಬದುಕಿನ ಚಲನೆಯನ್ನು ನಿರ್ಧರಿಸುತ್ತಿರುವಂತೆ ಭಾಸವಾಗುತ್ತಿತ್ತು.
ಈ ಕಂಟ್ರೋಲ್ ರೂಮ್ ಎನ್ನುವುದೊಂದು ಮಾಯಾಲೋಕದ ಕಲ್ಪನೆಯನ್ನು ಕಣ್ಣೆದುರು ತೆರೆದಿಡುವ ಜಾಗ. ಅಸಾಧಾರಣವಾದ ಲವಲವಿಕೆಯ ಆ ಸ್ಥಳದಲ್ಲಿ ನಡೆಯುವ ಮಾತುಕತೆಗಳು, ಅದ್ಯಾವುದೋ ಗುರುತು-ಪರಿಚಯಗಳಿಲ್ಲದ ಊರಿನಲ್ಲಿ ಸಂಜೆಯ ಹೊತ್ತು ನಡೆದ ಘಟನೆಗಳನ್ನು ತಮ್ಮದಾಗಿಸಿಕೊಂಡ ಜೋಕುಗಳು, ಬಸ್ಸಿನ ಆಗಮನವನ್ನೇ ಕಾಯುತ್ತಿರುವಂತೆ ತೋರುವ ಬಾಯಿಪಾಠದಂತಹ ಅನೌನ್ಸ್‌ಮೆಂಟುಗಳು ಎಲ್ಲವೂ ಸೇರಿಕೊಂಡು ಅಲ್ಲೊಂದು ವಿಶಿಷ್ಟವಾದ ಜೀವಂತಿಕೆಯ ಸಂವಹನವೊಂದು ಪ್ರತಿನಿಮಿಷವೂ ಹುಟ್ಟಿಕೊಳ್ಳುತ್ತಿರುತ್ತದೆ. ರೂಮಿನ ಒಳಹೋಗುತ್ತಿರುವ ಡ್ರೈವರಿನೊಂದಿಗೆ ಹೊರಬರುತ್ತಿರುವ ಕಂಡಕ್ಟರ್ ಒಬ್ಬ ಮುಖಾಮುಖಿಯಾಗಿ, ಬಾಗಿಲಿನಲ್ಲಿ ನಗುವೊಂದರ ವಿನಿಮಯವಾಗಿ, ಯಾರೋ ನಿರ್ಧರಿಸಿದ ಚಲನೆಯೊಂದು ಪರಿಚಯವೇ ಇಲ್ಲದ ಇಬ್ಬರ ನಗುವಿನಲ್ಲಿ ಸಂಧಿಸುತ್ತಿರುವಂತೆ ಅನ್ನಿಸುತ್ತದೆ. ಬೆಂಚಿನ ಮೇಲೆ ಬಸ್ಸಿಗಾಗಿ ಕಾಯುತ್ತ ಕುಳಿತಿದ್ದ ಶಾಲೆಗೆ ಹೋಗುವ ಮಗುವೊಂದು ಎದ್ದುಬಂದು, ಕಂಟ್ರೋಲ್ ರೂಮಿನ ಸರಳುಗಳನ್ನು ಹಿಡಿದುಕೊಂಡು ತಲೆ ಮೇಲೆತ್ತಿ ಬಸ್ಸಿನ ನಂಬರನ್ನು ವಿಚಾರಿಸುವಾಗಲೆಲ್ಲ ಕಾರಣವಿಲ್ಲದೆ ಆ ಮಗುವಿನ ಮೇಲೊಂದು ಪ್ರೀತಿ ಹುಟ್ಟಿಕೊಳ್ಳುತ್ತದೆ. ಪಡ್ಡೆ ಹುಡುಗರೆಡೆಗೆ ಒಂದು ಅಸಡ್ಡೆಯನ್ನು ತೋರಿಸುವ ಕಂಟ್ರೋಲ್ ರೂಮಿನ ಯಜಮಾನ ಮಗುವಿನ ಪ್ರಶ್ನೆಗೆ ನಗುನಗುತ್ತ ಉತ್ತರಿಸುವಾಗ, ಸರಳುಗಳ ಒಳಗೆ ಕುಳಿತೇ ಇರುವ ಮಾನವೀಯ ಧ್ವನಿಯೊಂದು ಸರಳುಗಳಾಚೆ ಹರಿದು ಕಾಯುವಿಕೆಯ ಅಸಹನೆಗಳೆಲ್ಲವನ್ನೂ ಕಡಿಮೆ ಮಾಡುತ್ತದೆ. ಬಾಗಿಲನ್ನೇ ಮುಚ್ಚದ ಕಂಟ್ರೋಲ್ ರೂಮಿನ ಗೋಡೆಯ ಮೇಲಿನ ದೊಡ್ಡ ಗಡಿಯಾರವೊಂದು ಬಾಗಿಲಿನಲ್ಲಿ, ಮೈಕಿನಲ್ಲಿ, ಸರಳುಗಳ ಸಂದಿಗಳಲ್ಲಿ ಸಂಧಿಸುವ ಸಂವಹನಗಳ ಸಮಯವನ್ನು ತನ್ನದಾಗಿಸಿಕೊಳ್ಳುತ್ತ ಚಲಿಸುತ್ತಲೇ ಇರುತ್ತದೆ.
ಬಸ್ ಸ್ಟ್ಯಾಂಡೊಂದು ತನ್ನೊಳಗಿನ ಚುರುಕುತನವನ್ನು ಕಂಪೌಂಡಿನಾಚೆಯೂ ವಿಸ್ತರಿಸಿಕೊಳ್ಳುವ ರೀತಿ ಅಚ್ಚರಿ ಹುಟ್ಟಿಸುವಂಥದ್ದು. ನಾಲ್ಕೇ ಅಡಿಗಳ ಜಾಗದಲ್ಲಿ ಅಕ್ಕಪಕ್ಕದವರಿಗೆ ಒಂದು ಹನಿಯೂ ಸಿಡಿಯದಂತೆ ಎಳನೀರು ಕತ್ತರಿಸುವವನ ಪಕ್ಕದ ಮೂರಡಿಯಲ್ಲಿ ಹೂ ಮಾರುವವನ ಬುಟ್ಟಿ, ಹಣ್ಣಿನ ಅಂಗಡಿಯೊಂದಿಗೆ ಅಂಟಿಕೊಂಡಂತೆ ಕಾಣುವ ಜ್ಯೂಸ್ ಪಾರ್ಲರು, ಜೊತೆಗೊಂದು ಬೀಡಾ ಅಂಗಡಿಯ ರೇಡಿಯೋ ಸೌಂಡು, ಸಂಜೆಯಾಗುತ್ತಿದ್ದಂತೆ ಬೇಕರಿಯ ಗಾಜಿನ ಬಾಕ್ಸುಗಳ ಮೇಲೆ ಹಾಜರಾಗುವ ಬೋಂಡಾ-ಬಜ್ಜಿಗಳೆಲ್ಲವೂ ಬಸ್ ಸ್ಟ್ಯಾಂಡಿನ ಲೋಕದೊಂದಿಗೆ ಒಂದಾಗಿಹೋಗಿ ಸೌಂದರ್ಯಪ್ರಜ್ಞೆಯ ಹೊಸದೊಂದು ಪರಿಕಲ್ಪನೆಯನ್ನು ಹುಟ್ಟುಹಾಕುತ್ತವೆ. ಬಸ್ಸಿನ ಓಡಾಟದಿಂದಾಗಿ ನೆಲಬಿಟ್ಟು ಮೇಲೆದ್ದ ಬೇಸಿಗೆಯ ಧೂಳಾಗಲೀ, ಮಳೆಗಾಲದ ರಾಡಿಯಾಗಲೀ, ಬೇಕರಿಯ ಚಹಾದ ಕಪ್ಪನ್ನು ಮುತ್ತಿಕೊಳ್ಳುವ ನೊಣಗಳಾಗಲೀ ಆ ಸೌಂದರ್ಯದ ಭಾವವನ್ನು ಕೊಂಚವೂ ಅಲ್ಲಾಡಿಸುವುದಿಲ್ಲ. ಬೇಕರಿಯೆದುರು ನಿಂತಿರುವ ಕಾಲೇಜು ಹುಡುಗರ ಗ್ಯಾಂಗೊಂದು ಜ್ಯೂಸು ಕುಡಿಯುತ್ತಿರುವ ಹುಡುಗಿಯರೆಡೆಗೆ ಕಳ್ಳದೃಷ್ಟಿ ಬೀರುವ ಅಪ್ರತಿಮ ನೋಟಕ್ಕೆ ಸಾಲುಸಾಲು ಅಂಗಡಿಗಳ ಪಕ್ಕದಲ್ಲಿ ನಿಧಾನವಾಗಿ ಚಲಿಸುವ ಬಸ್ಸು ಸಾಕ್ಷಿಯಾಗುತ್ತದೆ. ಆ ಸಾಲು ಅಂಗಡಿಗಳ ನಡುವೆಯೇ ಅಲ್ಲೊಂದು ಇಲ್ಲೊಂದು ಪ್ರೇಮವೂ ಮೊಳಕೆಯೊಡೆದು ಕಳ್ಳಹೆಜ್ಜೆಗಳನ್ನಿಡುತ್ತ ಬಸ್ ಸ್ಟ್ಯಾಂಡಿನೆಡೆಗೆ ಚಲಿಸುತ್ತದೆ. ಹಾಗೆ ಚಿಗುರಿದ ಒಲವೊಂದು ಅದೇ ಬಸ್ ಸ್ಟ್ಯಾಂಡಿನ ಬೆಂಚುಗಳ ಮೇಲೆ ಬೆಳೆದು, ಬದಲಾದ ಬೋರ್ಡಿನ ಬಸ್ಸನ್ನೇರಿ ತಂಟೆ-ತಕರಾರುಗಳಿಲ್ಲದೆ ಊರು ಸೇರಿ ಬೇರೂರುತ್ತದೆ.
ಈ ಬಸ್ ಸ್ಟ್ಯಾಂಡುಗಳಲ್ಲಿ ಹುಟ್ಟಿಕೊಳ್ಳುವ ಅನುಬಂಧಗಳ ಬಗ್ಗೆ ವಿಚಿತ್ರವಾದ ಆಸಕ್ತಿಯೊಂದು ನನ್ನಲ್ಲಿ ಈಗಲೂ ಉಳಿದುಕೊಂಡಿದೆ. ಸ್ಟ್ಯಾಂಡಿಗೆ ಬಂದ ಪ್ರತಿಯೊಂದು ವಿದ್ಯಾರ್ಥಿಯನ್ನೂ ಸಮಯಕ್ಕೆ ಸರಿಯಾಗಿ ಕಾಲೇಜು ತಲುಪಿಸುವುದು ತಮ್ಮ ಗುರುತರವಾದ ಜವಾಬ್ದಾರಿಯೆನ್ನುವಂತೆ ಹಾಜರಾಗುತ್ತಿದ್ದ ಸಿಟಿ ಬಸ್ಸಿನ ಡ್ರೈವರು-ಕಂಡಕ್ಟರುಗಳನ್ನು ಕಂಡಾಗ ಆಗುತ್ತಿದ್ದ ನೆಮ್ಮದಿ-ಸಮಾಧಾನಗಳ ಅನುಭವವನ್ನು ಜಗತ್ತಿನ ಬೇರಾವ ಸಂಗತಿಯೂ ದೊರಕಿಸಿಕೊಟ್ಟ ನೆನಪಿಲ್ಲ. ಬಸ್ಸಿಗಾಗಿ ಕಾಯುತ್ತಿದ್ದ ಸಮಯದಲ್ಲಿ ಡಿಪೋಗೆ ಹೋಗಲೆಂದು ನಿಂತಿರುತ್ತಿದ್ದ ಖಾಲಿ ಬಸ್ಸಿನೊಳಗೆ ಕುಳಿತು, ಬೇರೆ ಕಾಲೇಜಿನ ಹುಡುಗಿಯರೊಂದಿಗೆ ಮಾಡುತ್ತಿದ್ದ ಕಾಲಕ್ಷೇಪದ ಮಾತುಕತೆಯ ಭಾಗವಾಗುತ್ತಿದ್ದ ಹುಡುಗರ ಚಹರೆಗಳು ನೆನಪಿನಿಂದ ಮರೆಯಾಗುವುದಿಲ್ಲ. ಆ ಗ್ಯಾಂಗಿನಲ್ಲಿದ್ದ ಹುಡುಗನೊಬ್ಬನ ಮೇಲೆ ಚಿಕ್ಕದೊಂದು ಪ್ರೇಮವೂ ಹುಟ್ಟಿ, ಆತನ ಬಸ್ಸು ಹೊರಟುಹೋಗುವ ಸಮಯದಲ್ಲಿ ಕದ್ದುನೋಡುತ್ತಿದ್ದಾಗ, ಅಚಾನಕ್ಕಾಗಿ ಆತನೂ ತಿರುಗಿನೋಡಿ ಸೃಷ್ಟಿಯಾಗುತ್ತಿದ್ದ ನೈಜವಾದ ರೋಮಾಂಚಕ ದೃಶ್ಯವೊಂದು ಯಾವ ಸಿನೆಮಾದಲ್ಲಿಯೂ ಕಾಣಿಸಿಕೊಂಡಿಲ್ಲ. ಹೊಟೆಲಿನ ಎಸಿ ರೂಮಿನಲ್ಲಿ ಕುಳಿತು ದೋಸೆ ತಿನ್ನುವಾಗಲೆಲ್ಲ ಬಸ್ ಸ್ಟ್ಯಾಂಡಿನ ಕ್ಯಾಂಟೀನಿನಲ್ಲಿ ಮಸಾಲೆದೋಸೆ ತಿನ್ನುವ ಆಸೆಯೊಂದು ಆಸೆಯಾಗಿಯೇ ಉಳಿದುಹೋದದ್ದು ನೆನಪಾಗಿ, ತಿನ್ನುತ್ತಿರುವ ದೋಸೆಯ ರುಚಿ ಹೆಚ್ಚಿದಂತೆ ಅನ್ನಿಸುವುದೂ ಸುಳ್ಳಲ್ಲ. ಪ್ರತಿದಿನ ಬೆಳಗ್ಗೆ ರಸ್ತೆಯಲ್ಲಿ ತರಕಾರಿ ಮಾರುವವನ ಧ್ವನಿವರ್ಧಕದಲ್ಲಿ ತರಕಾರಿಯ ಹೆಸರುಗಳನ್ನು ಕೇಳುವಾಗಲೆಲ್ಲ, ಕಂಟ್ರೋಲ್ ರೂಮಿನ ಮೈಕಿನಿಂದ ಹೊರಬರುತ್ತಿದ್ದ ಊರಿನ ಹೆಸರುಗಳೆಲ್ಲ ಒಂದೊಂದಾಗಿ ನೆನಪಾಗುತ್ತವೆ. ಆ ಹೆಸರುಗಳನ್ನು ಹೊತ್ತ ಬೋರ್ಡುಗಳೆಲ್ಲ ಡಿಪೋದಿಂದ ಸ್ಟ್ಯಾಂಡಿಗೆ ಬರುವ ಫಸ್ಟ್ ಬಸ್ಸುಗಳಿಗಾಗಿ ಕಾಯುತ್ತಿರಬಹುದು ಎನ್ನುವ ಯೋಚನೆಯೊಂದು ಹಾದುಹೋಗಿ, ಮಾಯಾಲೋಕದಂತಹ ಬಸ್ ಸ್ಟ್ಯಾಂಡಿನ ಸಹಜಸುಂದರ ನೆನಪನ್ನು ನನ್ನದಾಗಿಸಿಕೊಳ್ಳುತ್ತೇನೆ.
*************************************************
ಇದು ಈಅಂಕಣದ ಕೊನೆಯ ಕಂತು
– ಅಂಜನಾ ಹೆಗಡೆ
ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ಎಷ್ಟು ಚೆಂದಕ್ಕೆ barediruviri ಅಂಜನಾ…ಇಷ್ಟ ಆಯ್ತು.
ಥ್ಯಾಂಕ್ಯೂ ಸ್ಮಿತಾ !!
Ahaaa super madam
Very nice
Rajani
ಥ್ಯಾಂಕ್ಯೂ ರಜನಿ !!
ಚಂದದ ಬರಹ ಅಂಜನಾ ❤️
ಥ್ಯಾಂಕ್ಯೂ ಸುಧಾ !!
ನಿಮ್ಮ ಯೋಚನಾ ರೀತಿ ಮತ್ತದನ್ನು ಬರಹವಾಗಿಸುವ ಪರಿ ತುಂಬಾ ಚೆನ್ನಾಗಿದೆ
ಥ್ಯಾಂಕ್ಯೂ ಹೆಗಡೆ ಸರ್ !!
ದೈನಂದಿನ ರಗಳೆ ಅಂತ ಪರಿಗಣಿಸಿದ ಜಗತ್ತಿನಲ್ಲಿನ ಘನತೆಯ ಹುಡುವ ಇಂತಹ ಬರಹಗಳೇ ಪರಿಚಿತ ಜಗತ್ತನ್ನು ಅಪರಿಚಿತಗೊಳಿಸುವದು. ಚಂದದ ತುಂತುರು ಸ್ಪರ್ಶ
ಸಣ್ಣ ಸಣ್ಣ ವಿಷಯಗಳಲ್ಲಿ ಜೀವನ ಪ್ರೀತಿ ಹುಡುಕುವುದೆಂದರೆ ಇದೇ ಅಲ್ವ? One of the best writeup Anjana. Loved it.
ನಿಮ್ಮ ಮೊದಲ ಬರಹ ಓದಿದ್ದೆ ಈಗ ಅಚಾನಕ್ಕಾಗಿ ಕೊನೆಯ ಬರಹ ಓದಿದೆ. ನಡು ಮಧ್ಯ ಎಷ್ಟು ಬರಹ ಬಸ್ ಸ್ಟ್ಯಾಂಡನಲ್ಲಿನ ಬಸ್ ಅಂತೆ ಹಾದು ಹೋದವೋ ನಾನೇ ಬಸ್ ಮಿಸ್ ಮಾಡಿಕೊಂಡಂತೆ ಬರಹ ಮಿಸ್ ಮಾಡಿಕೊಂಡೆನೋ… ಅಂತೂ ಅಂಕಣ ಬರಹದ ಒಂದು ಪಯಣ ಮುಗಿಸಿದಿರಿ. ಬರೆಯುತ್ತಿರಿ ಬರಹ ಓದಿಸಿಕೊಂಡು ಹೋಗುವ ಕಲೆ ನಿಮ್ಮಲ್ಲಿದೆ ಶುಭವಾಗಲಿ…
Nailed it ❤️