ಅಂಕಣ ಬರಹ
ಹಲವು ಬಣ್ಣಗಳನ್ನು ಹೊತ್ತ
ಭಾವನೆಗಳ ಕೋಲಾಜ್
ಆಕಾಶಕ್ಕೆ ಹಲವು ಬಣ್ಣಗಳು (ಗಜಲ್ ಸಂಕಲನ)
ಕವಿ- ಸಿದ್ಧರಾಮ ಹೊನ್ಕಲ್
ಬೆಲೆ-೧೩೦/-
ಪ್ರಕಾಶನ- ಸಿದ್ಧಾರ್ಥ ಎಂಟರ್‍ಪ್ರೈಸಸ್
ಇಲ್ಲಿ ಕತ್ತಲೆ ಕಳೆದು ಬೆಳಕು ಮೂಡಿಸಿದವರೆ ಸಂತ ಸೂಫಿಗಳು ಬಸವಾದಿ ಶರಣರು ಸಾಕಿ ಎನ್ನುತ್ತ ತಮ್ಮ ನೆಲದ ಗಟ್ಟಿ ದನಿಗಳನ್ನು ಉಲ್ಲೇಖಿಸಿ ಗಜಲ್‌ಲೋಕಕ್ಕೆ ಬಂದಿರುವ ಕವಿ ಸಿದ್ಧರಾಮ ಹೊನ್ಕಲ್ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಾ ಹಳಬರು. ಕಥೆ, ಕವನ, ಪ್ರವಾಸ ಕಥನ, ಪ್ರಬಂಧಗಳು ಹೀಗೆ ಹತ್ತಾರು ಪ್ರಕಾರಗಳಲ್ಲಿ ಕೈಯಾಡಿಸಿರುವ ಸಿದ್ಧರಾಮ ಹೊನ್ಕಲ್ ತಮ್ಮದೇ ನೆಲದ ಗಜಲ್‌ನ್ನು ಆತುಕೊಳ್ಳಲು ಇಷ್ಟು ತಡಮಾಡಿದ್ದೇಕೆ ಎಂದು ನಾನು ಬಹಳ ಸಲ ಯೋಚಿಸಿದ್ದೇನೆ. ಉತ್ತರ ಕರ್ನಾಟಕದ ಮಣ್ಣಿನಲ್ಲೇ ಹಾಸಿಕೊಂಡಿರುವ ಗಜಲ್‌ಗೆ ಒಲಿಯದವರೇ ಇಲ್ಲ. ಗಜಲ್‌ನ ಶಕ್ತಿಯೇ ಅಂತಹುದ್ದು. ಗಜಲ್‌ನ ಜೀವನ ಪ್ರೀತಿಯೇ ಹಾಗೆ. ಎಲ್ಲವನ್ನೂ ಎಲ್ಲರನ್ನೂ ಒಳಗೊಳ್ಳುವ ಸಮಷ್ಠಿ ಅದು. ಜಿಂಕೆಯ ಆರ್ತನಾದದ, ಮನದ ಮಾತುಗಳನ್ನು ನವಿರಾಗಿ ಹೇಳುವ, ಗೇಯತೆಯೊಂದಿಗೆ ಸಕಲರನ್ನು ಸೆಳೆದಿಟ್ಟುಕೊಳ್ಳುವ ಗಜಲ್ ಎನ್ನುವ ಮೋಹಪಾಶ ಹಾಗೆ ಯಾರನ್ನೂ ಬಿಡುವುದಿಲ್ಲ. ಇಲ್ಲಿ ಸಿದ್ಧರಾಮ ಹೊನ್ಕಲ್ ಆಕಾಶದ ಹಲವು ಬಣ್ಣಗಳನ್ನು ತಮ್ಮ ಪುಸ್ತಕದಲ್ಲಿ ಹಿಡಿದಿಟ್ಟುಕೊಂಡು ನಮ್ಮೆದುರಿಗೆ ನಿಂತಿದ್ದಾರೆ.
ಒಂದು ಹಂತಕೆ ಬರುವವರೆಗೆ ಯಾರೂ ಗುರ್ತಿಸುವುದಿಲ್ಲ
ಹಾಗಾಗಿ ಯಾರ ಮೆಚ್ಚುಗೆಗಾಗಿ ಕಾಯಬೇಡ
ಎಂದು ತಮಗೆ ತಾವೇ ಹೇಳಿಕೊಂಡಂತೆ ಗಜಲ್ ಲೋಕದಲ್ಲಿ ಗುರುತಿಸಿಕೊಳ್ಳುವುದು ಅಷ್ಟೇನು ಸುಲಭದ್ದಾಗಿರಲಿಲ್ಲ ಎನ್ನುವ ವೈಯಕ್ತಿಕ ಮಾತಿನ ಜೊತೆಗೇ ಸಾಮಾಜಿಕ ಸತ್ಯವೊಂದನ್ನು ನಾಜೂಕಾಗಿ ಹೇಳಿಬಿಡುತ್ತಾರೆ. ಯಾವುದೇ ಒಂದು ಕ್ಷೇತ್ರವಿರಲಿ ಆರಂಭದಲ್ಲಿ ಯಾರು ಗುರುತಿಸುತ್ತಾರೆ ಹೇಳಿ? ಅದು ಸಾಹಿತ್ಯ ಕ್ಷೇತ್ರವಿರಬಹುದು, ಕ್ರೀಡೆಯಾಗಿರಬಹುದು ಅಥವಾ ಇನ್ಯಾವುದೇ ವಲಯದಲ್ಲಾಗಿರಬಹುದು. ಒಂದು ವ್ಯಕ್ತಿಯನ್ನು ಗುರುತಿಸಲು ಹಲವಾರು ವರ್ಷಗಳ ಕಾಲ ಕಾಯಬೇಕು. ಒಂದು ಹಂತಕ್ಕೆ ಬಂದಮೇಲೆ ತಾನೇ ತಾನಾಗಿ ಎಲ್ಲರಿಂದ ಗುರುತಿಸಲ್ಪಟ್ಟರೂ ಆರಂಭದಲ್ಲಿ ಮೂಲೆಗುಂಪಾಗುವುದು ಸಹಜ. ಹೀಗಾಗಿ ಯಾರ ಮೆಚ್ಚುಗೆಗಾಗಿ ಕಾಯುವ ಅಗತ್ಯವಿಲ್ಲ. ನಮ್ಮ ಆತ್ಮಬಲವೇ ನಮ್ಮನ್ನು ಕಾಪಾಡಬೇಕು ಎಂಬ ಮಾತು ಎಲ್ಲರಿಗೂ ಅನ್ವಯಿಸುವ ಮಾತು.
ಗಜಲ್ ಹಾಗೆ ಎಲ್ಲ ಭಾವಗಳನ್ನು ತನ್ನೊಳಗೆ ಬಿಟ್ಟುಕೊಳ್ಳುವುದಿಲ್ಲ. ಅದಕ್ಕೆ ಅದರದ್ದೇ ಆದ ಹತ್ತಾರು ನಿಯಮಗಳಿವೆ. ತನ್ನದೇ ಆದ ಸಿದ್ಧ ಮಾದರಿಯ ಭಾವಗಳಿವೆ. ಪ್ರೀತಿ ಪ್ರೇಮ ಕ್ಕೆ ಒಗ್ಗಿಕೊಳ್ಳುವ ಗಜಲ್ ಅದಕ್ಕಿಂತ ವಿರಹಕ್ಕೆ ಹೆಚ್ಚು ಹತ್ತಿರವಾಗುತ್ತದೆ. ಹಾಗೆಂದು ತರ್ಕಕ್ಕೆ, ಆಧ್ಯಾತ್ಮಿಕಕ್ಕೆ ಗಜಲ್ ಒಗ್ಗುವುದಿಲ್ಲ ಎಂದಲ್ಲ. ಗಜಲ್‌ನ ಮೂಲವೇ ಅಲ್ಲಿದೆ. ಪ್ರೇಮದೊಳಗಿನ ತಾರ್ಕಿಕತೆಗೆ ಹಾಗೂ ಪ್ರೇಮದೊಳಗಿನ ಆಧ್ಯಾತ್ಮಿಕತೆಗೆ ಗಜಲ್‌ನ ಪೂರ್ವಸೂರಿಗಳು ಹೆಚ್ಚು ಒತ್ತು ನೀಡಿದ್ದನ್ನು ಗಮನಿಸಬೇಕು. ಪ್ರೇಮದ ಕೊನೆಯ ಗುರಿಯೇ ಆಧ್ಯಾತ್ಮ ಎಂಬುದನ್ನು ಮರೆಯುವಂತಿಲ್ಲ. ಹಾಗೆಂದು ಗಜಲ್ ಸಾಮಾಜಿಕ ಕಳಕಳಿಯನ್ನು ಬೇಡ ಎನ್ನುವುದೇ? ಖಂಡಿತಾ ಇಲ್ಲ. ಹಿತವಾದ ಮಾತಿನ ಎಲ್ಲವನ್ನೂ ಗಜಲ್ ಅಪ್ಪಿಕೊಳ್ಳುತ್ತದೆ. ಅದು ಸಾಮಾಜಿಕ ಅಸಮಾನತೆ ಇರಲಿ, ಪರಿಸರ ರಕ್ಷಣೆ ಇರಲಿ ಎಲ್ಲವೂ ಗಜಲ್‌ಗೆ ಸಮ್ಮತವೇ.
ಸಸಿಯೊಂದು ಹಚ್ಚಿದರೆ ತಾನೆ ಬೆಳೆದು ಹೆಮ್ಮರವಾಗಿ ಹೂ ಹಣ್ಣು ಕೊಡುವುದು
ಹಚ್ಚುವ ಮುಂಚೆ ಭೂಮಿಯ ಹಸನಾಗಿಸುವುದು ನೀ ಕಲಿ ಗೆಳೆಯಾ
ಎನ್ನುತ್ತಾರೆ ಕವಿ. ಸಸಿಯನ್ನು ನೆಟ್ಟರೆ ಮಾತ್ರ ಭೂಮಿ ಹಸನಾಗುವ ಮಾತು ಎಷ್ಟು ಮಾರ್ಮಿಕವಾಗಿ ಇಲ್ಲಿ ಮೂಡಿದೆ. ಸಸಿಯನ್ನೇ ನೆಡದೇ ಹಣ್ಣು ಬೇಕು ಹೂವು ಬೇಕು ಎಂದರೆ ಎಲ್ಲಿಂದ ತರಲಾದೀತು? ಕೃಷಿಯನ್ನು ಕೀಳಾಗಿ ಕಾಣುವ ಎಲ್ಲರ ಕುರಿತಾಗಿ ಈ ಮಾತು ಅನ್ವಯಿಸುತ್ತದೆ. ಕವಿಗೆ ಸಮಾಜದ ರೀತಿ ನೀತಿಗಳು ಗೊತ್ತಿದೆ. ಇಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ. ಯಾರೋ ಬಂದು ನಮ್ಮ ಒಳ್ಳೆಯ ಕೆಲಸಕ್ಕೆ ಬೆನ್ನು ತಟ್ಟುತ್ತಾರೆ ಎಂಬ ಭ್ರಮೆಯಲ್ಲಿ ಇರಬೇಕಿಲ್ಲ. ಯಾರೂ ನಮ್ಮನ್ನು ಪ್ರೋತ್ಸಾಹಿಸುವುದಿಲ್ಲ. ಯಾರಾದರೂ ಸ್ವಲ್ಪ ಬೆಳವಣಿಗೆ ಕಂಡರೆ ಅವರ ಕಾಲು ಹಿಡಿದು ಎಳೆಯುವ ಮನೋಭಾವವೇ ಈ ಸಮಾಜದಲ್ಲಿ ತುಂಬಿಕೊಂಡಿದೆ. ಹೀಗಾಗಿಯೇ ಕವಿ,
ಸಹಜ ಬೆನ್ನು ತಟ್ಟಿ ನಗು ಅರಳಿಸುವವರು ಜಗದಲ್ಲಿಲ್ಲ
ಎಲ್ಲರೂ ಮಾನವೀಯರಿದ್ದಾರೆಂಬ ಭ್ರಮೆ ನಿನಗೆ ಬೇಡ ಗೆಳೆಯ
ಎನ್ನುತ್ತಾರೆ. ನಮ್ಮ ಬೆನ್ನು ತಟ್ಟಿ ನಗು ಅರಳಿಸುವವರು ಸಿಗುವುದಿಲ್ಲ. ಕೇವಲ ನೋವು ನೀಡಿ ಸಂಭ್ರಮಿಸುವವರು ಮಾತ್ರ ನಮ್ಮ ಸುತ್ತಮುತ್ತ ತುಂಬಿಕೊಂಡಿದ್ದಾರೆ. ನಮ್ಮ ಸಮಾಜ ಜಾತಿ, ಧರ್ಮ ಮುಂತಾದ ಬೇಡದ ವ್ಯಾಧಿಯನ್ನು ತಲೆಯಲ್ಲಿ ತುಂಬಿಕೊಂಡು ನರಳುತ್ತಿದೆ.
ಈ ಭೂಮಿಯಲ್ಲಿ ಗೀತೆ ಕುರಾನ್ ಬೈಬಲ್ ಗುರುವಾಣಿ ಹೀಗೆ ಏನೆಲ್ಲ ಒಳ್ಳೆಯದು ಬಿತ್ತಿಹರು
ಈ ಸಮಾನತೆಯ ಸಾಮರಸ್ಯ ಹೊಸ ಹೂವು ಏಕೆ ಮತ್ತೆ ಮತ್ತೆ ಅರಳುತ್ತಿಲ್ಲ ಸಾಕಿ
ಪ್ರತಿ ಧರ್ಮದಲ್ಲೂ ಮನುಷ್ಯತ್ವವನ್ನೇ ಬೋಧಿಸಿದ್ದಾರೆ. ಮಾನವನ ಏಳ್ಗೆ ಇರುವುದೇ ಪ್ರೀತಿ ಮ,ತ್ತು ಸಹಬಾಳ್ವೆಯಲ್ಲಿ ಎಂದಿದ್ದರೂ ನಾವು ಮಾತ್ರ ಜಾತಿ ಧರ್ಮದ ಹೆಸರು ಹೇಳಿಕೊಂಡು ಕಚ್ಚಾಡುತ್ತಿದ್ದೇವೆ. ಗೀತೆ ಇರಲಿ, ಕುರಾನ್ ಇರಲಿ, ಬೈಬಲ್ ಇರಲಿ ಅಥವಾ ಗುರುವಾಣಿಯೇ ಇರಲಿ. ಎಲ್ಲರೂ ಪ್ರೀತಿಯೇ ಜಗದಲ್ಲಿ ಸರ್ವೋತ್ತಮ ಎಂದರೂ ಅದನ್ನು ಯಾರೂ ಆಚರಣೆಗೆ ತರುತ್ತಿಲ್ಲ. ನಾವು ಗೀತೆಯನ್ನು ನಂಬುತ್ತೇವೆ. ಅಂತೆಯೇ ಕುರಾನ್ ಹಾಗು ಬೈಬಲ್‌ನ್ನೂ ಕೂಡ. ಗೀತೆ, ಕುರಾನ್ ಬೈಬಲ್‌ನಲ್ಲಿರುವುದೇ ಪರಮಸತ್ಯ ಎಂದು ಭಾವಿಸುತ್ತ ಅದನ್ನು ಆಚರಣೆಗೆ ತರುತ್ತಿರುವುದಾಗಿ ಭ್ರಮೆಗೊಳಗಾಗಿದ್ದೇವೆ. ಆದರೆ ವಾಸ್ತವದಲ್ಲಿ ನಾವ್ಯಾರೂ ನಮ್ಮ ಧರ್ಮಗ್ರಂಥಗಳನ್ನು ತಿಳಿದೇ ಇಲ್ಲ. ಅದು ಬೋಧಿಸಿದ ಪ್ರೇಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡೇ ಇಲ್ಲ ಎಂಬ ವಿಷಾದ ಕವಿಗಿದೆ. ಸತ್ಯವಾಡಿದ ಹರಿಶ್ಚಂದ್ರ ಚಂದ್ರಮತಿಯನ್ನ ಮಾರಿಕೊಂಡದ್ದು, ಧರ್ಮರಾಯ ಧರ್ಮವನ್ನು ಉಳಿಸಲು ಹೋಗಿ ದ್ರೌಪದಿಯನ್ನೇ ಪಣಕ್ಕಿಟ್ಟು ಕಳೆದುಕೊಂಡಿದ್ದನ್ನು ಹೇಳುತ್ತ ಸಮಾಜದಲ್ಲಿ ಯಾರಂತೆ ಇರಬೇಕು ಎಂದು ಕೇಳುತ್ತಾರೆ. ಧರ್ಮ ಎಂದರೆ ಎಲ್ಲವನ್ನೂ ಒಳಗೊಂಡದ್ದು ಎನ್ನುವ ವಿಶ್ವ ಕುಟುಂಬದ ಮಾತು ಇಲ್ಲಿ ಕೇಳಿಸುತ್ತದೆ. ಹೀಗಾಗಿಯೇ ಜಾತಿ ಧರ್ಮದ ಹೆಸರಿನಲ್ಲಿ ‘ಮಾತು ಮಾತಲ್ಲಿ ಕೊಳ್ಳಿ ಇಟ್ಟು ಮನಸ್ಸು ಮುರಿಯುವುದು ಬೇಕಿರಲಿಲ್ಲ ಈಗ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಕೆಲವರಿಗೆ ಜಾತಿಯದು ಹಲವರಿಗೆ ಧರ್ಮದ್ದು ಹೀಗೆ ಹೆಣ್ಣು ಮಣ್ಣಿನ ಹುಚ್ಚು
ಹೀಗೆ ಬಹುತೇಕರಿಗೆ ಹಣ ಅಧಿಕಾರ ಅಂತಸ್ತಿನ ಹುಚ್ಚು ತಲೆ ಕೆಡಿಸಿಕೊಬೇಡ ಸಖಿ
ಎನ್ನುವ ಮಾತುಗಳಲ್ಲಿ ಸಮಾಜದ ಸತ್ಯ ಅಡಗಿದೆ. ಕೆಲವರು ಧರ್ಮ ಜಾತಿಯ ಉನ್ಮಾದದಲ್ಲಿ ತೇಲುತ್ತಿದ್ದರೆ ಕೆಲವರು ಹಣ, ಅಧಿಕರ ಹಾಗೂ ಅಂತಸ್ತಿನ ಗುಲಾಮರಾಗಿದ್ದಾರೆ. ಇನ್ನು ಕೆಲವರಿಗೆ ಹೆಣ್ಣಿನ ಹುಚ್ಚು. ಭಾರತ ಹೆಣ್ಣಿನ ಯೋನಿಯಿಂದ ಹರಿಯುವ ರಕ್ತದಲ್ಲಿ ಶುಭ್ರಸ್ನಾನ ಮಾಡುತ್ತಿದೆ. ಅತ್ಯಾಚಾರಗಳು ಹೆಚ್ಚಾಗಿರುವ ಈ ಕಾಲದಲ್ಲಿ ಇಂತಹ ಸಾಲುಗಳು ನಮ್ಮನ್ನು ಪದೇಪದೇ ಎಚ್ಚರಿಸುತ್ತವೆ. ‘ತನ್ನ ಹೆತ್ತವಳು ಒಡಹುಟ್ಟಿದವಳು ಒಂದು ಹೆಣ್ಣಂದರಿಯದ ಅವಿವೇಕಿ ಮೃಗಗಳಿವು’ ಎಂದು ವಿಷಾದಿಸುತ್ತಲೇ ಹೆಣ್ಣು ಪ್ರತಿ ಜೀವಕ್ಕೂ ನೀಡುವ ಸುಖವನ್ನು ನವಿರಾಗಿ ಹೇಳುತ್ತಾರೆ.
ಕತ್ತಲೆಯಲಿ ಕಳೆದವನ ಬದುಕಿಗೆ ಬೆಳಕಾಗಿ ಬಂದವಳು ನೀ ಸಖಿ
ಕಮರಿದ ಈ ಬದುಕಿಗೆ ಜೀವರಸ ತುಂಬಿದವಳು ನೀ ಸಖಿ
ಹೆಣ್ಣು ಬದುಕಿನ ಕತ್ತಲೆಯನ್ನು ಹೋಗಲಾಡಿಸಿದವಳು. ಬದುಕಿಗೆ ಬೆಳಕಾಗಿ, ಬೆಳದಿಂಗಳಾಗಿ ಬಂದವಳು. ಬೇಸರದ ಬದುಕಿಗೆ ಆ ಪ್ರಿಯತಮೆ ಜೀವರಸವನ್ನು ತುಂಬುತ್ತಾಳೆ. ಜೀವಕ್ಕೆ ಜೀವವಾದ ಪ್ರಿಯತಮೆ ನಮ್ಮ ಬಾಳಿಗೆ ಬೆಳಕನ್ನು ತರುವ ಕಂದಿಲು ಎನ್ನುವುದು ತಪ್ತಗೊಂಡ ಎದೆಯೊಳಗೆ ಒಂದಿಷ್ಟು ತಂಪು ಸೂಸುತ್ತಾರೆ.
ಕನಸಿನಲ್ಲಿ ಕಾಡುವಳು ಖುಷಿಯಲ್ಲೂ ಕುದಿಯುವಳು
ಬಿಸಿಲನ್ನೇ ಉಂಡು ಎಲ್ಲೆ ನೆರಳಾದಳು ಸಾಕಿ
ಎನ್ನುವ ಮಾತಿನಲ್ಲಿಯೂ ಆ ಗೆಳತಿ ಉರಿಬಿಸಿಲಿನಲ್ಲೂ ತಮ್ಮನ್ನು ಸಲಹುವ ಕುರಿತು ಮನಸ್ಸು ಬಿಚ್ಚಿ ಹೇಳುತ್ತಲೇ ಕನಸಿನಲ್ಲಿ ಕಾಡುವ ಈ ಸುಂದರಿ ವಿರಹವನ್ನೂ ಕೊಡಬಲ್ಲಳು ಎನ್ನುತ್ತಾರೆ. ಹಾಗೆ ನೋಡಿದರೆ ವಿರಹವಿಲ್ಲದ ಪ್ರೇಮಕ್ಕೆ ಸವಿ ಎಲ್ಲಿದೆ? ವಿರಹವೇ ಪ್ರೇಮದ ಮಧುರತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಈ ಜಗತ್ತಿನ ಎಲ್ಲ ಪ್ರೇಮಿಗಳೂ ಒಪ್ಪಿಕೊಂಡಿದ್ದಾರೆ. ಹಾಗಿದ್ದ ಮೇಲೆ ಈಗಾಗಲೇ ಹೇಳಿದಂತೆ ವಿರಹಕ್ಕೆಂದೇ ರಚಿತವಾಗಿರುವ ಗಜಲ್‌ನಲ್ಲಿ ವಿರಹವಿರದಿದ್ದರೆ ಏನು ಚೆನ್ನ ಹೇಳಿ?
ಹತ್ತಿರವಿದ್ದೂ ಅಪರಿಚಿತರಂತೆ ದೂರವಾದವರ ಬಗ್ಗೆ ಕೇಳಿದ್ದೆ
ದೂರವಿದ್ದೂ ಹತ್ತಿರವಾಗಿ ನಿನ್ನ ಸೇರುವಷ್ಟರಲಿ ನೀ ಕನಸಾದೆ
ಈ ಹುಡುಗಿಯರೇನೂ ಕಡಿಮೆಯವರಲ್ಲ. ಹುಡುಗರನ್ನು ಕಾಡುವುದೇ ತಮ್ಮ ಜೀವನದ ಮಹದೋದ್ದೇಶ ಎಂದುಕೊಂಡವರು. ಹೀಗಾಗಿ ಇನ್ನೇನು ತನ್ನವಳಾದಳು ಎಂದುಕೊಳ್ಳುವಾಗಲೇ ದೂರ ಸರಿದು ತಮಾಷೆ ನೋಡುತ್ತಾರೆ. ಅಪರಿಚಿತಳು ಎಂದು ಸುಮ್ಮನಾದರೆ ತಾವಾಗಿಯೇ ಹತ್ತಿರ ಬಂದು ಆತ್ಮೀಯರಾಗುತ್ತಾರೆ. ದೂರವನ್ನು ಕ್ಷಣ ಮಾತ್ರದಲ್ಲೇ ಕರಗಿಸಿದರೂ ಕೈಗೆಟುಕದಂತೆ ಕನಸಾಗಿಬಿಡುವ ಕಲೆ ಹುಡುಗಿಯರಿಗಷ್ಟೇ ಗೊತ್ತಿದೆ. ಕವಿಗೆ ಹೀಗೆ ಪುಳಕ್ಕನೆ ಮಿಂಚಂತೆ ಮಿಂಚಿ ಮಾಯವಾಗುವ ಈ ಹುಡುಗಿಯರ ಕುರಿತು ವಿಚಿತ್ರ ತಲ್ಲಣವಿದೆ.
ಈ ಪ್ರೀತಿ ಪ್ರೇಮ ವಿರಹ ಕಾಮದ ಬಗ್ಗೆ ಅನೇಕ ಕಥೆಗಳು ಗೊತ್ತು
ಹೊನ್ನಸಿರಿಯ ಈ ಅಲೌಕಿಕ ಪ್ರೀತಿ ಅರಿವಾಗುವಷ್ಟರಲಿ ನೀ ನಕ್ಷತ್ರವಾದೆ
ಸದಾ ಜೊತೆಗಿರುತ್ತೇನೆ ಎಂದು ಆಣೆ ಕೊಟ್ಟು ಭಾಷೆಯಿತ್ತವರು ಹೀಗೆ ಒಮ್ಮೆಲೆ ದೂರ ಸರಿದು ನಕ್ಷತ್ರಗಳಾಗಿಬಿಡುವುದನ್ನು ಸಲೀಸಾಗಿ ಒಪ್ಪಿಕೊಳ್ಳಲಾಗುವುದಿಲ್ಲ. ಆದರೂ ಕವಿ ‘ಕಂದಿಲು ಬೇಡ ಕಣ್ಣ ಕಾಂತಿಯಲ್ಲಿ ಬಾ’ ಎನ್ನುತ್ತಾರೆ. ಇದು ಪ್ರೇಮದ ಪರಾಕಾಷ್ಟೆ. ತನ್ನ ಪ್ರೇಯಸಿಯ ಕಣ್ಣಿನ ಕಾಂತಿ ಎಲ್ಲ ಕಂದಿಲುಗಳ ಬೆಳಕನ್ನೂ ಮೀರಿಸುವಂತಹುದ್ದು ಎನ್ನುವುದು ಸಹಜ.
ಕಾಯುವಲ್ಲಿ ಇರುವ ಕಾತರ ಸನಿಹದಲ್ಲಿ ಇರುವುದಿಲ್ಲ
ಸಾಂಗತ್ಯಕ್ಕಾಗಿ ಸದಾ ಬಯಸಿ ಕಾಯುತ್ತಾನೆ
ಹೀಗೆ ಕಾಯುವಿಕೆಯನ್ನು ನಿರಂತರವಾಗಿಸುತ್ತ, ಕಾಯುವುದೇ ತಪಸ್ಸು ಎಂದು ತಿಳಿದುಕೊಳ್ಳುವ ಕವಿಗೆ ಪ್ರೇಮ ಕೂಡ ಜೀವನದಲ್ಲಿ ಬೇಕಾಗಿರುವ ಭಾವಗಳಲ್ಲಿ ಒಂದು ಎಂಬ ಅರಿವಿದೆ. ಹೀಗಾಗಿ
ಪ್ರೇಮಿಸಲಾಗದು ವಂಚಿಸಲಾಗದು ನಿನಗೆ ಮರೆತುಬಿಡು
ಹಂಬಲಿಸಿರಬಹುದು ಅಂಗಲಾಚಲಾಗದು ನಿನಗೆ ಮರೆತುಬಿಡು.
ಎಂದು ಕೈಗೆ ಸಿಗದ್ದನ್ನು ಮರೆತು ಮುಂದೆ ಸಾಗಬೇಕಾದ ಜೀವನದ ಕುರಿತು ಎಚ್ಚರವಹಿಸುತ್ತಾರೆ. ಕೈಕೊಟ್ಟ ಪ್ರೇಮಿಯ ಬಗ್ಗೆ ಬೇಸರವಾಗುತ್ತದೆ ಎಂಬುದೇನೋ ನಿಜ. ಹಾಗೆಂದು ಅದೆಷ್ಟು ಸಮಯ ಕೊರಗಲಾದೀತು ಹೇಳಿ? ಹೀಗಾಗಿ ಆದದ್ದನ್ನೆಲ್ಲ ಮರೆತು ಮುಂದೆ ಸಾಗಬೇಕಾದ ಅನಿವಾರ್‍ಯತೆಯನ್ನು ಹೇಳುತ್ತಲೇ
ಒಪ್ಪತ್ತಿನ ಗಂಜಿಗೂ, ತುಂಡು ರೊಟ್ಟಿಗೂ ಹೋರಾಟವಿದು
ಹಸಿವೆಯೇ ಖೋಡಿ ಏನೆಲ್ಲ ಮಾಡಿ ಹೆಣಗುತಿಹಳು ತಾಯಿ
ಎಂದು ನಮ್ಮ ನಡುವೆ ತುತ್ತು ಕೂಳಿಗೂ ಕಷ್ಟ ಅನುಭವಿಸುತ್ತಿರುವವರ ವೇದನೆಯನ್ನು ಕಟ್ಟಿಕೊಡುತ್ತಾರೆ. ಮನೆ ನಡೆಸಲು ತಾಯಿ ಎಂಬ ಹೆಣ್ಣು ಅನುಭವಿಸುವ ಕಷ್ಟವನ್ನು ಗಂಡು ಅನುಭವಿಸಲಾರ. ಎಷ್ಟೋ ಮನೆಗಳಲ್ಲಿ ಹೆತ್ತಿಕೊಂಡ ತಪ್ಪಿಗಾಗಿ ಮಕ್ಕಳನ್ನು ಸಾಕುವ ಕರ್ಮ ತಾಯಿಯದ್ದೇ ಆಗಿರುತ್ತದೆ. ತನ್ನ ಕಾಮಕ್ಕಾಗಿ ಅವಳನ್ನು ಬಳಸಿಕೊಂಡು ತಾಯಿಯನ್ನಾಗಿ ಮಾಡಿದ ಮನೆಯ ಯಜಮಾನ ಎನ್ನಿಸಿಕೊಂಡ ಗಂಡಸು ಆ ಎಲ್ಲ ಜವಾಬ್ಧಾರಿಯನ್ನು ತಾಯಿಯ ತಲೆಗೆ ಕಟ್ಟಿ ನಿರುಮ್ಮಳವಾಗಿ ಬಿಡುವುದು ಈ ಸಮಾಜದ ಚೋದ್ಯಗಳಲ್ಲಿ ಒಂದು
ಈ ಎಲ್ಲದರ ನಡುವೆ ನಮ್ಮ ಗೋಮುಖ ವ್ಯಾಘ್ರತನವೊಂದು ಇದೆಯಲ್ಲ ಅದು ಈ ಸಮಾಜಕ್ಕೆ ಕಂಟಕ. ಬದುಕಿನಲ್ಲಿ ಯಾವ್ಯಾವುದೋ ಕಾರಣಕ್ಕಾಗಿ ಮುಖವಾಡ ಹಾಕುವವರ ಸಂಖ್ಯೆ ಬಹುದೊಡ್ಡದಿದೆ. ಆದರೆ ಸತ್ತ ಮೇಲೂ ‘ಸೇರಿದರೆ ಸೇರಲಿ ತಮ್ಮ ದೇಹದ ಬೂದಿಯು ಗಂಗೆಯಲಿ ಅನ್ನುವವರ ಬಹುದೊಡ್ಡ ಸಾಲುಂಟು’ ಎಂದು ಕವಿ ಬೇಸರಿಸುತ್ತಾರೆ. ಗಂಗೆಯನ್ನು ಸ್ವಚ್ಛಗೊಳಿಸಬೇಕಿದೆ ಎನ್ನುತ್ತಲೇ ತಮ್ಮ ದೇಹದ ಬೂದಿಯೂ ಗಂಗೆಯಲ್ಲಿ ಸೇರಿ ಜೀವಿತಾವಧಿಯಲ್ಲಿ ಮಾಡಿದ ಪಾಪಗಳೆಲ್ಲ ಕಳೆದುಹೋಗಲಿ ಎನ್ನುತ್ತ ಸ್ವರ್ಗ ಬಯಸುವವರ ಕುರಿತಾಗಿ ಹೇವರಿಕೆಯಿದೆ.
ಸುತ್ತ ಪರಸ್ಪರರು ಬೆನ್ನು ನೀವಿಕೊಳ್ಳುವುದು ಇವನಿಗೇಕೆ ಅರ್ಥವಾಗುವುದಿಲ್ಲ
ನೀ ನನಗಿದ್ದರೆ ನಾ ನಿನಗೆ ಎಂಬ ಸೋಗಲಾಡಿಗಳ ಮಧ್ಯೆ ಭ್ರಮ ನಿರಸನವಾಗುತ್ತಿದೆ ಸಾಕಿ
ಎಂಬ ಸಾಲು ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಾಗಿ ಕಾಣುತ್ತದೆ. ಎಲ್ಲೆಡೆಯೂ ಗುಂಪುಗಳದ್ದೇ ಸಾಮ್ರಾಜ್ಯ. ನೀವು ನಮ್ಮ ಪರವಾಗಿದ್ದರೆ ಮಾತ್ರ ನಾವು ನಿಮ್ಮ ಪರವಾಗಿರುತ್ತೇವೆ ಎನ್ನುವ ದೊಡ್ಡವರು ಎನ್ನಿಸಿಕೊಂಡಿರುವವರ ಮಾತು ತೀರಾ ಅಸಹ್ಯ ಹುಟ್ಟಿಸುವಂತಹುದ್ದು. ತಮ್ಮ ಗುಂಪಿಗೆ ಸೇರಿದವರಿಗೆ ಎಲ್ಲ ಅನುಕೂಲಗಳನ್ನು ಮಾಡಿಕೊಡುತ್ತ, ಪ್ರಶಸ್ತಿಗಳ ಸರಮಾಲೆಯನ್ನೇ ಕಟ್ಟಿ ಕೊರಳಿಗೆ ಹಾಕುವ ಬಲಾಢ್ಯರಿಗೆ ಅವರ ಹಿಂಬಾಲಕರ ಸಂಖ್ಯೆ ಹೆಚ್ಚಾಗಬೇಕಿದೆ. ಇದಕ್ಕೆ ಇಂದಿನ ಸಾಹಿತ್ಯ ಲೋಕ ಕೂಡ ಹೊರತಾಗಿಲ್ಲ. ಕವಿ ತಮ್ಮ ಸಾಲುಗಳಲ್ಲಿಯೇ ಇಂತಹ ಸೋಕಾಲ್ಡ್ ಪ್ರಮುಖರನ್ನು ವ್ಯಂಗ್ಯವಾಡುತ್ತಾರೆ. ಸಿದ್ಧರಾಮ ಹೊನ್ಕಲ್ ಅಪರೂಪವೆನಿಸುವ ಸಾಲು ಮಿಂಚನ್ನು ನಮ್ಮೆದುರು ತೆರೆದಿಟ್ಟು ಇಲ್ಲಿವೆ ನೋಡಿ ಕಾವ್ಯದ ಮಿಂಚು ಎಂದು ಕೈ ಬೀಸಿ ಓದುಗರನ್ನು ಅಂತಹ ಬೆಳಕಲ್ಲಿ ಸುತ್ತಾಡಿಸುತ್ತಿದ್ದಾರೆ. ಗಜಲ್ ಲೋಕದ ಮಿಂಚುಗಳನ್ನು ಈ ಸಂಕಲನ ಓದಿಯೇ ಅರಿಯಬೇಕು.
ಆದರೂ ಗಜಲ್ ಎನ್ನುವುದು ನಿಯಮಬದ್ಧವಾದ ಕಾವ್ಯ ಪ್ರಕಾರ. ಅದಕ್ಕೆ ಅದರದ್ದೇ ಆದ ರೀತಿ ನಿಯಮಗಳು ಇರುವುದು ಎಲ್ಲರಿಗೂ ಗೊತ್ತಿದೆ. ಗಜಲ್ ಬರೆಯುವಾಗ ತೀರಾ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಅದರಲ್ಲೂ ಗಜಲ್‌ನ ರದೀಫ್ ಹಾಗೂ ಕಾಫಿಯಾಗಳು ಪರಸ್ಪರ ಹೊಂದಿಕೊಳ್ಳಬೇಕು. ಹಾಗಿಲ್ಲದೇ ಹೋದರೆ ರಸಗ್ರಾಹದಲ್ಲಿ ಎಡವಿದಂತಾಗುತ್ತದೆ. ಸಿಹಿಯಾದ ಕಬ್ಬಿನಹಾಲು ಕುಡಿಯುವಾಗ ಹಾಗಲಕಾಯಿಯ ಕಷಾಯ ಕುಡಿದಂತಾದರೆ ಇಡೀ ಗಜಲ್‌ನ ಮೂಲ ಅರ್ಥವೇ ಕಳೆದುಹೋಗುತ್ತದೆ. ಇಲ್ಲಿಯೂ ಕೆಲವೆಡೆ ರದೀಫ್‌ನ್ನು ಒತ್ತಾಯ ಪೂರ್ವಕವಾಗಿ ತಂದು ಸೇರಿಸಿದಂತೆ ಭಾಸವಾಗುತ್ತದೆ. ಉದಾಹರಣೆಗೆ ಗಜಲ್-೩ನ್ನು ನೋಡಿ. ಇದು ಚಂದದ ಭಾವ ಹೊಂದಿದೆ. ಇಲ್ಲಿ ರದೀಫ್ ‘ಏನು ಮರೆತುಬಿಡುವುದು’. ಆದರೆ ಸಾಲುಗಳಿಗೆ ಹಾಗೂ ರದೀಫ್‌ಗೆ ಹೊದಿಕೆಯಾಗುತ್ತಿಲ್ಲ.
ಕಣ್ಣ ನೋಟ ಮೈಮನದ ಸ್ಪರ್ಶ ಹೂ ಮಂಚವಿಲ್ಲ ಅದೆಂಥಹ ಅನುಬಂಧವಿದು
ಮಧು ಬಟ್ಟಲಿಗೆ ತುಟಿಯು ಹಚ್ಚಲಿಲ್ಲ ನೀ ಕೆಳುವುದು ಏನು ಮರೆತುಬಿಡುವುದು
ಇಲ್ಲಿನ ಭಾವ ತೀವ್ರತೆಯನ್ನು ಗಮನಿಸಿ. ಇಬ್ಬರ ನಡುವೆ ಕಣ್ಣ ನೋಟವೂ ಇಲ್ಲ. ಮೈ ಹಾಗೂ ಮನಸ್ಸುಗಳೂ ಸ್ಪರ್ಶಗೊಂಡಿಲ್ಲ ಅಂದರೆ ಯಾವ ಭಾವನೆಯೂ ಅವರೀರ್ವರ ನಡುವೆ ಇಲ್ಲ. ಹೀಗಿರುವಾಗ ಹೂ ಮಂಚ ಎಲ್ಲಿರಲು ಸಾಧ್ಯ ಬಿಡಿ. ಆದರೂ ಅಲ್ಲಿ ಅಪರೂಪದ ಅನುಬಂಧವಿದೆ ಎಂಬ ದನಿಯನ್ನು ಊಲಾ ಮಿಸ್ರಾ ಹೊಮ್ಮಿಸುತ್ತದೆ. ಇನ್ನು ಸಾನಿ ಮಿಸ್ರಾ ಕೂಡ ಗಜಲ್‌ನ ಸರಿಯಾದ ಜಾಡಿನಲ್ಲಿಯೇ ಸಾಗಿದೆ. ಮಧು ಬಟ್ಟಲಿಗೆ ತುಟಿ ಹಚ್ಚಲಿಲ್ಲ. ನಿಜ, ಗಜಲ್ ಬರೆಯುವವ ಸುರೆಯ ಬಟ್ಟಲನ್ನು ಎದುರಿಗಿಟ್ಟುಕೊಳ್ಳದಿದ್ದರೆ, ಮದಿರೆಯನ್ನು ಹನಿಹನಿಯಾಗಿ ಆಸ್ವಾದಿಸದೇ ಇದ್ದರೆ ಗಜಲ್ ಬರೆಯಲು ಸಾಧ್ಯವೇ? ಹಾಗೊಂದು ವೇಳೆ ಸಾಧ್ಯವೆಂದಾದರೂ ಪ್ರೇಮದ ಮಧುವಿಗೂ ತುಟಿ ಹಚ್ಚದಿರುತ್ತಾರೆಯೇ? ಆದರೆ ಇಲ್ಲಿ ಗಜಲ್‌ಕಾರ ಪ್ರೇಮದ ಮಧು ಬಟ್ಟಲೂ ತುಟಿಗೆ ತಾಗಲಿಲ್ಲ ಎನ್ನುತ್ತಾರೆ. ಅದೊಂದು ಅನೂಹ್ಯತೆ. ಓದುಗ ಈ ಭಾವದಲ್ಲಿ ಕಳೆದುಹೋಗುವಾಗಲೇ ಮುಂದಿನ ಶಬ್ಧ ಅಂದರೆ, ‘ನೀ ಕೇಳುವುದು ಏನು ಮರೆತು ಬಿಡುವುದು’ ಎಂಬ ಮಾತು ತಟ್ಟನೆ ಸ್ವರ್ಗದಿಂದ ಭೂತಳಕ್ಕೆ ತಳ್ಳಿದಂತೆ ಭಾಸವಾಗುತ್ತದೆ. ರದೀಫ್ ಹಾಗೂ ಕಾಫಿಯಾಗಳು ಪರಸ್ಪರ ಹೊಂದಿಕೊಳ್ಳದೇ ಸಹೃದಯ ಓದುಗನನ್ನು ಕಕ್ಕಾಬಿಕ್ಕಿಯಾಗಿಸುತ್ತದೆ. ಇದನ್ನೇ ಪ್ರತಿ ಗಜಲ್‌ಕಾರರೂ ಗಮನಿಸಬೇಕು. ತಾವು ಆಯ್ಕೆ ಮಾಡಿಕೊಂಡ ರದೀಫ್‌ಗೆ ಕಾಫಿಯಾ ಹೊಂದುವಂತಿರಬೇಕು. ಕಾಫಿಯಾ ಹಾಗೂ ರವಿಶ್‌ನ ಆಯ್ಕೆಯೂ ರದೀಫ್‌ನ ಆಯ್ಕೆಯಷ್ಟೇ ಮುಖ್ಯವಾಗುತ್ತದೆ. ಇಲ್ಲ, ರದೀಫ್‌ನ ಆಯ್ಕೆಗಿಂತ ಈ ಕಾಫೀಯಾ ಹಾಗೂ ರವಿಶ್‌ನ ಆಯ್ಕೆಯೇ ಹೆಚ್ಚು ಮುಖ್ಯ. ಯಾಕೆಂದರೆ ತಿಳಿದವರು ಹೇಳುತ್ತಾರೆ ಒಂದು ಶುದ್ಧವಾದ ಗಜಲ್‌ಗೆ ರದೀಫ್ ಇಲ್ಲದೇ ಹೋದರೂ ನಡೆದೀತು. ಆದರೆ ಕಾಫಿಯಾ ಇಲ್ಲದೇ ಹೋದರೆ ನಡೆಯಲಾರದು. ಯಾಕೆಂದರೆ ಕಾಫಿಯಾ ಗಜಲ್‌ನ ಹೃದಯವಿದ್ದಂತೆ. ರದೀಫ್ ಹಾಗೂ ಕಾಫಿಯಾಗಳು ಪರಸ್ಪರ ಹಾಲು ಜೇನಿನಂತೆ ಬೆರೆತುಕೊಂಡರೆ ಮಾತ್ರ ಒಂದು ಉತ್ತಮ ಗಜಲ್ ಹೊಮ್ಮಲು ಸಾಧ್ಯ. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬಂತಾಗದಿರಲಿ ಎನ್ನುವ ಕಾರಣಕ್ಕಾಗಿ ಹೊಸ ಗಜಲ್‌ಕಾರರು ಇದನ್ನು ಗಮನಿಸಿ ಗಜಲ್‌ರಚನೆಯಲ್ಲಿ ತೊಡಗಿಸಿಕೊಂಡರೆ ಅನುಕೂಲ ಎಂಬ ಕಾರಣಕ್ಕಾಗಿ ಹಾಗೂ ಹಿರಿಯ ಕವಿಗಳ ಗಜಲ್‌ನ್ನೇ ಆಯ್ಕೆ ಮಾಡಿ ಹೇಳಿದ್ದರಿಂದ ಕಿರಿಯರು ಹಾಗೂ ಹೊಸದಾಗಿ ಗಜಲ್ ಬರೆಯುತ್ತೇನೆ ಎಂದು ಹೊರಟಿರುವ ಆರಂಭಿಕ ಗಜಲ್‌ಕಾರರು ತಿದ್ದಿಕೊಳ್ಳಬಹುದು ಎಂಬ ಆಶಾಭಾವನೆಯಿಂದ ಇದನ್ನು ಹೇಳಿದ್ದೇನೆ. ಇನ್ನು ರದೀಫ್ ಆಯ್ಕೆ ಮಾಡಿಕೊಳ್ಳುವಾಗಲೂ ಸಹ ಒಂದು ಸಂಕಲನದಲ್ಲಿ ಒಂದು ರದೀಫ್ ಒಂದಕ್ಕಿಂತ ಹೆಚ್ಚುಸಲ ಬರದಂತೆ ನೋಡಿಕೊಳ್ಳಬೇಕಿದೆ.
ಆದರೆ ಸಿದ್ಧರಾಮ ಹೊನ್ಕಲ್‌ರ ಗಜಲ್‌ಗಳು ಇಂತಹ ಒಂದೆರಡು ಅಪವಾದದ ಹೊರತಾಗಿ ನಮ್ಮನ್ನು ಬೇರೆಲ್ಲಿಯೂ ನಿರಾಸೆ ಮಾಡುವುದಿಲ್ಲ. ಇದರೊಟ್ಟಿಗೆ ಪ್ರತಿ ಗಜಲ್‌ಕಾರರೂ ಛಂದಸ್ಸಿನ ಕಡೆ ಗಮನ ಕೊಡುವುದು ಅತ್ಯವಶ್ಯ ಎಂದೇ ನನಗೆ ಅನ್ನಿಸುತ್ತದೆ. ಮೂಲ ಉರ್ದು ಗಜಲ್‌ಗಳನ್ನು ಛಂದೋಬದ್ಧವಾಗಿ ಬರೆದಿರುತ್ತಾರೆ. ಆವರ್ತನಿಗಳನ್ನು ಬಳಸಿರುತ್ತಾರೆ. ಹೀಗಾಗಿ ಗಜಲ್ ರಚನೆಗೆ ತೊಡಗುವವರು ತಮ್ಮ ಪೂರ್ವಸೂರಿಗಳನ್ನು ಓದಿಕೊಳ್ಳಬೇಕಾದುದು ಅತ್ಯವಶ್ಯ. ಗಜಲ್‌ಗೆ ಮಾತ್ರೆ ಛಂದಸ್ಸಿನ ಅವಶ್ಯಕತೆಯಿಲ್ಲ ಎನ್ನು ಒಂದು ಗುಂಪು ಕನ್ನಡದಲ್ಲಿ ಸೃಷ್ಟಿಯಾಗಿದೆ. ನಾನು ನನ್ನ ಮನಸ್ಸಿಗೆ ಬಂದಂತೆ ಗಜಲ್ ಬರೆಯುತ್ತೇನೆ ಅದಕ್ಕೆ ಮಾತ್ರೆ, ಗಣ, ಛಂದಸ್ಸು, ಆವರ್ತನಿಗಳ ಹಂಗಿಲ್ಲ ಅಷ್ಟೇ ಏಕೆ, ರದೀಫ್, ಕಾಫಿಯಾ, ರವಿಶ್, ಅಲಾಮತ್ ಮುಂತಾದ ಮೂಲ ಸಿದ್ಧಾಂತವೂ ಬೇಡ ಎಂದು ಮೂಗು ಮುರಿಯುತ್ತ, ಎಲ್ಲವನ್ನೂ ಮುರಿದು ಹೊಸದಾಗಿ ಕಟ್ಟುತ್ತೇವೆ ಎನ್ನುವವರನ್ನೂ ಕಾಣುತ್ತಿದ್ದೇವೆ. ಷಟ್ಪದಿಗೆ ಆರು ಸಾಲೇಕೆ? ಭಾಮಿನಿ ಷಟ್ಪದಿಗೆ ಮೂರು-ನಾಲ್ಕರ ಹದಿನಾಲ್ಕು ಮಾತ್ರೆಗಳೇಕೆ? ಸ್ವಚ್ಛಂದವಾದ ಕವಿತೆ ಬರೆದು ಅದನ್ನು ಭಾಮಿನಿ ಎಂದರಾಗದೇ ಎನ್ನುವ ವಿತಂಡವಾದದಂತೆ ಇಂತಹ ಮಾತುಗಳು ಕೇಳಿಸುತ್ತವೆ. ಮಾತ್ರೆಗೆ ಅನುಗುಣವಾಗಿ ಬರೆಯುವುದರಿಂದ ಇನ್ನೊಂದು ಲಾಭವಿದೆ. ಎಲ್ಲಿಯೂ ಅನಾವಶ್ಯಕ ಶಬ್ಧ, ಸ್ವರಗಳು ಸೇರಿಕೊಳ್ಳುವುದಿಲ್ಲ. ಹೇಳಬೇಕಾದುದ್ದನ್ನು ತುಂಬ ಕಡಿಮೆ ಶಬ್ಧಗಳಲ್ಲಿ ಪರಿಣಾಮಕಾರಿಯಾಗಿ ಹೇಗೆ ಹೇಳಬಹುದು ಎನ್ನುವುದು ಅರಿವಾಗುತ್ತದೆ.
ಸಿದ್ಧರಾಮ ಹೊನ್ಕಲ್‌ರು ಮಾತ್ರೆಗಳ ಕುರಿತಾಗಿ ತುಂಬ ಕುತೂಹಲಿಗಳಾಗಿರುವುದು ಮತ್ತು ಅದನ್ನು ಕಲಿತುಕೊಳ್ಳಲು ಬಯಸುತ್ತಿರುವುದು ನನಗೆ ಗೊತ್ತಿದೆ. ಹೀಗಾಗಿ ಮುಂದಿನ ಸಂಕಲನ ಖಂಡಿತವಾಗಿಯೂ ಛಂದೋಬದ್ಧವಾಗಿಲ್ಲದಿದ್ದರೂ ಮಾತ್ರಾಗಣಕ್ಕನುಸಾರವಾಗಿಯಾದರೂ ಇರುತ್ತದೆ ಎನ್ನುವ ನಂಬಿಕೆ ನನಗಿದೆ. ಬರೆಯಹೊರಟರೆ ತಿವಿಕ್ರಮನಾಗುವ, ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಹೆಜ್ಜೆಗುರುತನ್ನು ಮೂಡಿಸಿರುವ ಸಿದ್ಧರಾಮ ಹೊನ್ಕಲ್ ತಮ್ಮ ಮೊದಲ ಗಜಲ್ ಸಂಕಲನದಲ್ಲಿಯೇ ಮಹತ್ತರವಾದುದ್ದನ್ನು ಸಾಧಿಸಿ ತಾನು ಉತ್ತಮ ಗಜಲ್‌ಕಾರ ಎಂಬುದನ್ನು ಸಿದ್ಧಪಡಿಸಿ ತೋರಿಸಿದ್ದಾರೆ. ಅವರ ಮುಂದಿನ ಸಂಕಲನಗಳಿಗಾಗಿ ತೀವ್ರ ಕುತೂಹಲದಿಂದ ಕಾಯುವಂತೆ ಮಾಡಿದ್ದಾರೆ. ಆಶಾವಾದಿ ಕವಿ ಸಿದ್ಧರಾಮ ಹೊನ್ಕಲ್‌ರವರು ‘ಕಾರ್ಮೋಡ ಕಳೆದು ಇಂದಲ್ಲ ನಾಳೆ ಹೊಸಬೆಳಕು ಮೂಡಿತು ಕಾಯಬೇಕು’ ಎನ್ನುತ್ತ ನಮ್ಮನ್ನು ಹೊಸದೊಂದು ಬೆಳಕಿಗಾಗಿ ಕಾಯುವಂತೆ ಮಾಡುತ್ತಾರೆ.
*****************************************************
ಶ್ರೀದೇವಿ ಕೆರೆಮನೆ
ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು
ಮೇಡಂ, ತುಂಬಾ ದೀರ್ಘವಾಗಿ,ಪರಿಣಾಮಕಾರಿಯಾಗಿ ಎಲ್ಲ ಗಜಲ್ ಗಳನ್ನು ಅವಲೋಕಿಸಿ ತುಂಬಾ ಮಹತ್ವದ ಮಾತುಗಳನ್ನು ನನ್ನ ಸಂಕಲನದ ಹಿನ್ನೆಲೆಯಲ್ಲಿ ಹಲವು ಹೊಸಬರಿಗೂ ಸಹ ಗಜಲ್ ರಚನೆ ಹೇಗೆ ಏಕೆ ಹೇಗಿದ್ದರೇ ಅರ್ಥಪೂರ್ಣವಾಗಿ ಇರುತ್ತವೆ ಅಂತ ಸಮರ್ಥವಾಗಿ ತಮ್ಮ ಗಜಲ್ ದ ಓದು,ಸಾಧನೆ ಅನುಭವದ ಹಿನ್ನೆಲೆಯಲ್ಲಿ ಸಾರ್ಥಕವಾಗಿ ತಿಳಿಸಿದ್ದೀರಿ.
ಈ ಕೃತಿಯ ಮೂಲಕವೇ ನನಗೊಂದಿಷ್ಟು ಖುಷಿ ಮೂಡುವಂತೆ ಬರೆದಿರುವೀರಿ.ಹೊಸ ಗಜಲ್ ಬರಹಗಾರರು ಈ ಬರಹ ಓದಿದರೆ ಅವರ ರಚನೆಗಳಿಗೆ ಹೊಸ ಹೊಳವು ಸಿಗಬಹುದು.ನನಗೂ ನನ್ನ ಮುಂದಿನ ದಾರಿಯ ಪರಿಚಯ ಮಾಡಿಸಿರುವೀರಿ.
ದೇರ ಹೈ ಮಗರ ಅಂಧೇರ ನಹಿ ಹೈ ಎಂಬಂತೆ ಸ್ವಲ್ಪ ತಡ ಆದರೂ ಪರವಾಗಿಲ್ಲ.ತುಂಬಾ ಚೆಂದ ಕೃತಿ ಪರಿಚಯ ಮಾಡಿಸಿದ್ದೀರಿ.ಈ ಸಂಕಲನದ ಮೊದಲ ಗಜಲ್ ನೀವೆಲ್ಲ ಮೆಚ್ಚಿಕೊಂಡ ಮೇಲೇನೇ ನಾ ಮುಂದಿನ ಗಜಲ್ ಬರೆಯಲು ಆರಂಭಿಸಿದ್ದು ಮೇಡಂ.
ಎರಡನೇ ಸಂಕಲನವು ರೆಡಿಯಾಗುತ್ತಿದೆ… ನಿಮ್ಮ ನಿರೀಕ್ಷೆ ಹುಸಿ ಆಗದಿರಬಹುದು ಅಂದುಕೊಂಡಿರುವೆ.ಈ ಬರಹ ಕಾಪಿ ಪೇಸ್ಟ್ ಮಾಡಿ ನನ್ನ ಖಾಸಗಿ ವ್ಯಾಟ್ಸಾಪ್ ಹಾಕಿದರೆ ನನ್ನ ಆತ್ಮಚರಿತ್ರೆ ಸಂಕಲನದ ಎರಡನೇ ಭಾಗದಲ್ಲಿ ಬಳಸಿಕೊಳ್ಳುವೆ.ತಮ್ಮ ಈ ಸಲಹೆ, ಪ್ರೋತ್ಸಾಹ ಸದಾ ಇರಲಿ.ತುಂಬು ಹೃದಯದ ಧನ್ಯವಾದಗಳು.
ಸುಂದರವಾದ ವಿಶ್ಲೇಷಣೆ.. ಮೇಡಂ
ವಿಶ್ಲೇಷಣೆ ಚೆನ್ನಾಗಿದೆ ಶ್ರೀ…
ಇಬ್ಬರಿಗೂ ಅಭಿನಂಧನೆಗಳು ಮೇಡಂ. ನಿಮ್ಮ ವಿಮರ್ಶಾತ್ಮಕ ಲೇಖನವು ಓದಲು ಆಪ್ತವಾಗಿದ್ದು ಸಂಕಲನಕ್ಕೆ ಸಲ್ಲಬೇಕಾದ ನ್ಯಾಯ ಒದಗಿಸಿದೆ..
ನಿಮ್ಮಂಥವರ ವಿಮರ್ಶೆಯಿಂದ ಕೃತಿಗೆ ಇನ್ನಷ್ಟು ಬಣ್ಣ ಮೂಡಬಹುದು. ಕೃತಿ ಹೇಗೇ ಇರಲಿ. ಹೆಸರು ಗಳಿಸಿದವರು ಬರೆದು ಕೊಡುವ ಮುನ್ನುಡಿ, ಹಾಗೆಯೇ ಅನಿಸಿಕೆ, ಅಭಿಪ್ರಾಯಗಳೇ ಕೃತಿಯನ್ನು ಮೇಲ್ಮಟ್ಟಕ್ಕೆ ನಿಸ್ಸಂಶಯವಾಗಿ ಒಯ್ದು ಬಿಡುತ್ತೆ ! ಇರಲಿ, ಕೊನೆಯ ಒಂದೆರಡು ಪ್ಯಾರಾಗಳಲ್ಲಿ ಸೂಚ್ಯವಾಗಿ ಬರೆದ ಗಜಲ್ ನ ಪಾಠದ ಬಗ್ಗೆ ಗಜಲ್ ಕಾರರು ಗಮನ ಹರಿಸಿದರೆ ಒಳಿತು!