ಕಬ್ಬಿಗರ ಅಬ್ಬಿ.-13

ಗಗನ ಚುಂಬಿ ಮತ್ತು ಲಿಫ್ಟು

बुबका लड़ेंगे ओलंपिक चुनाव | खेल | DW | 29.05.2013

ಸರ್ಗೇಯಿ ಬೂಬ್ಕಾ ,ಎಂಬ ಸೋವಿಯತ್ ಯುನಿಯನ್ ನ ಹುಡುಗ ಉದ್ದ ಕೋಲು ಹಿಡಿದು ಪೋಲ್ ವಾಲ್ಟ್ ಹಾರಲು ಸಿದ್ಧನಾಗಿದ್ದ.  ಇದೊಂದು ಥರದ ಹೈ ಜಂಪ್ ಸ್ಪರ್ಧೆ. ಈ ಆಟದಲ್ಲಿ ಒಂದು ಕೋಲಿನ ಸಹಾಯದಿಂದ ಜಿಗಿಯಲಾಗುತ್ತೆ, ಆ ಕೋಲನ್ನು ಹಾರುಗೋಲು ಎಂದು ಕರೆಯೋಣ.

ಹೈಜಂಪ್ ಮಾಡೋವಾಗ ಮೊದಲೇ ನಿರ್ಧರಿಸಿದ ಎತ್ತರದಲ್ಲಿ ನೆಲಕ್ಕೆ ಸಮಾನಾಂತರವಾಗಿ ಒಂದು ಕೋಲು ( ಅಳೆಗೋಲು) ಇಟ್ಟಿರುತ್ತಾರೆ.

ಉದ್ದದ ಹಾರುಗೋಲು ಹಿಡಿದು, ಓಡುತ್ತಾ ಬಂದು, ಕೋಲನ್ನು ಹೈ ಜಂಪ್ ನ ಎತ್ತರದ ಅಳೆಗೋಲಿನ ಹತ್ತಿರ ಬಂದಾಗ ನೆಲಕ್ಕೂರಿ, ಹಾರುಕೋಲಿನ ಸಹಾಯದಿಂದ  ಎತ್ತರಕ್ಕೆ ಜಿಗಿದು,ಅಳೆಗೋಲಿನ ಆಚೆಗೆ ಧುಮುಕುವ ಆಟ ಅದು.

ಸಾಧಾರಣವಾಗಿ, ಕೋಲನ್ನೆತ್ತಿ ಓಡಿ ಬರುವಾಗ,  ವೇಗದಿಂದ ಉತ್ಪನ್ನವಾದ  ಶಕ್ತಿಯನ್ನೆಲ್ಲಾ ಮೊಣಕಾಲು ಮತ್ತು ತೊಡೆಗಳ ಸ್ನಾಯುಗಳಿಗೆ ನೀಡಿ,  ದೇಹವನ್ನು ಆಕಾಶದತ್ತ ಚಿಮ್ಮಿಸಬೇಕು. ಅಷ್ಟಾದರೆ ಸಾಕೇ?. ಆಕಾಶದಲ್ಲಿದ್ದಾಗಲೇ ಊರಿದ ಏರುಕೋಲನ್ನು ಗಟ್ಟಿಯಾಗಿ ಹಿಡಿದು, ಹೈಜಂಪ್ ನ ಅಳೆಗೋಲಿನ ಹತ್ತಿರ ದೇಹ ತಲಪಿದಾಗ, ಎದೆಯುಬ್ಬಿಸಿ ಬಿಗಿದ ರಟ್ಟೆಯ ಸಹಾಯದಿಂದ ದೇಹವನ್ನು ನೆಲಕ್ಕೆ ಸಮಾನಾಂತರವಾಗಿ  (parallel) ಬ್ಯಾಲೆನ್ಸ್ ಮಾಡಿ ಅಳೆಗೋಲನ್ನು ಸ್ಪರ್ಷಿಸದೆಯೇ ಮುಂದಕ್ಕೆ ಹೊರಳಿ ಅಳೆಗೋಲನ್ನು ದಾಟಿ ಆಚೆಕಡೆಯ ಮರಳು ಹಾಸಿಗೆ ಮೇಲೆ ಬೀಳಬೇಕು.

ಬುಬ್ಕಾ ಹಾರಲು ಆರಂಭದ ಬಿಂದುವಿನಲ್ಲಿ ನಿಂತಾಗ ಅಮ್ಮನ ಮಾತುಗಳು ಕಿವಿಯೊಳಗೆ ಅನುರಣಿಸುತ್ತಿದ್ದವು. ಶಾಲೆಯಲ್ಲಿದ್ದಾಗ ಹೈಜಂಪ್ ಸ್ಪರ್ಧೆಯಲ್ಲಿ ಸೋತಾಗ ಆಕೆ ಹೇಳಿದ ಮಾತುಗಳವು.

” ಮಗನೇ! ನೀನು ಸೋತಿಲ್ಲ! ನೀನು ಜಿಗಿದ ಮಟ್ಟ ಕಡಿಮೆಯಿತ್ತಷ್ಟೇ..ಜಿಗಿಯುವ ಎತ್ತರವನ್ನು ದಿನಕ್ಕೆ ಕೂದಲೆಳೆಯಷ್ಟೆತ್ತರ ಹೆಚ್ಚು ಮಾಡುತ್ತಾ ಹೋಗು! ಜಗತ್ತು ಕಾಯುತ್ತೆ ನಿನ್ನ ಗೆಲುವಿಗಾಗಿ!”

ಹಾಗೆ ಎತ್ತರದಿಂದ ಎತ್ತರಕ್ಕೆ ಹಾರಿದ ಹುಡುಗ ಬುಬ್ಕಾ, ತನ್ನ ಮೊದಲ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಜಿಗಿಯಲು ನಿಂತಿದ್ದ. ಕ್ರಿ.ಶ. 1983 ನೇ ಇಸವಿ, ಹೆಲ್ಸಿಂಕಿಯಲ್ಲಿ ನಡೆದ ಸ್ಪರ್ಧೆ ಅದು.

ಸ್ಟಾರ್ಟ್!… ಹಾರಲು ಸಿಕ್ಕಿದ ಗ್ರೀನ್ ಸಿಗ್ನಲ್! ಬ್ಯುಗಿಲ್ ಮೊಳಗಿತ್ತು!

ಬೂಬ್ಕಾ ಹಾರು ಕೋಲನ್ನು ಎತ್ತಿ ಹಿಡಿದು ಓಡ ತೊಡಗಿದ. ಆ ಹೆಜ್ಜೆಗಳಲ್ಲಿ ಚಿರತೆಯ ಧೃಡತೆ. ಕಣ್ಣುಗಳು ಹಾರಬೇಕಾದ ಅಳೆಗೋಲನ್ನು ನೋಟದಲ್ಲೇ ಸೆರೆಹಿಡಿದು ಗುರಿ ಸಮೀಪಿಸಿದ ಬೂಬ್ಕಾ.  ಕೋಲನ್ನು ನೆಲಕ್ಕೂರಿ ನೆಲಕ್ಕೆ ಎರಡೂಪಾದಗಳ ಸಂಯೋಜಿತ ಜಿಗಿತುಳಿತಕ್ಕೆ ರಾಕೆಟ್ಟಿನಂತೆ ಆತನ ದೇಹ ಆಗಸಕ್ಕೆ ಚಿಮ್ಮಿತ್ತು.

ಬೂಬ್ಕಾ ಕೊನೆಯ ಕ್ಷಣದಲ್ಲಿ ಒಂದು ಅದ್ಭುತ ತಂತ್ರ ಉಪಯೋಗಿಸಿದ್ದು ಇಂದಿಗೂ ಮನೆಮಾತು. ಸಾಧಾರಣವಾಗಿ ನೆಲಕ್ಕೆ ದೇಹದುದ್ದವನ್ನು ಸಮಾನಾಂತರ ಮಾಡಿ ಅಳೆಗೋಲಿನ ಅತ್ತಕಡೆ ಹೊರಳುವ ಬದಲು,ಈ ಕನಸುಗಾರ, ಬಿದಿರ ಕೋಲಿನ ತುದಿಯಲ್ಲಿ ಅಂಗೈ ಊರಿ, ತಲೆ ಕೆಳಗೆ ಕಾಲು ಮೇಲೆ ಮಾಡಿದ ಪೋಸ್ಚರ್ ನಲ್ಲಿ ರಟ್ಟೆಯಲ್ಲಿ ಇದ್ದ ಅಷ್ಟೂ ಬಲ ಸೇರಿಸಿ ದೇಹವನ್ನು ಎರಡನೇ ಬಾರಿ ಎತ್ತರಕ್ಕೆ ಚಿಮ್ಮಿಸಿದ್ದ. ಅಂದು ಆತ ಹಾರಿದ ಎತ್ತರ ವಿಶ್ವ ದಾಖಲೆಯನ್ನು ಮುರಿದು ಹೊಸತು ಬರೆದಿತ್ತು.

ಆ ನಂತರದ ಎರಡು ದಶಕಗಳಲ್ಲಿ ಆತ 34 ಬಾರಿ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದ!. ಆರು ಬಾರಿ ವಿಶ್ವ ಚಾಂಪಿಯನ್, ಒಂದು ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ಆತನ ಕೊರಳೇರಿದ್ದವು

ಮನುಷ್ಯ ಚೇತನವೇ ಊರ್ಧ್ವ ಮುಖಿ. ಸಾಧನೆಯ ಶಿಖರದ ಎತ್ತರ ಏರಿಸುತ್ತಲೇ ಇರುವ ಹಟಮಾರಿ ಪ್ರಜ್ಞೆ. ಹೀಗೇ ಏರುವಾಗ, ಏರುವ ವಿಧಾನ, ಏರುವ ಎತ್ತರ, ಗುರಿ, ಇವುಗಳ ಜತೆಗೆ,  ಬದುಕಿಗೆ ಮತ್ತು ಸಮಾಜಕ್ಕೆ, ಈ ಚಾರಣ ಧಮಾತ್ಮಕವೇ, ಋಣಾತ್ಮಕವೇ ಎಂಬ ಜಿಜ್ಞಾಸೆ ಹುಟ್ಟುತ್ತೆ.

ದಿನಕ್ಕೊಂದು ದಾಖಲೆ ಮಾಡುವ, ಮರುದಿನ ಇನ್ನಾರೋ ಮುರಿಯುವ ಓಟ. ವಿಜ್ಞಾನ, ತಂತ್ರಜ್ಞಾನವೂ ಅಷ್ಟೇ. ಗಗನಕ್ಕೆ ಸವಾಲೆಸೆಯುವ ಗಗನ ಚುಂಬೀ ಕಟ್ಟಡಗಳು, ಸಮುದ್ರದಾಳದಲ್ಲಿ ಓಡುವ ರೈಲು, ಜಾಣ ಫೋನ್ ಮೂಲಕ ಭೂಮಿಯ ಆ ಭಾಗದ ಅಮೆರಿಕಾದ ಮೊಮ್ಮಗುವಿಗೆ  ಹೈದರಾಬಾದ್ ನಿಂದ ಹ್ಯಾಪ್ಪೀ ಬರ್ತ್ ಡೇ ಹಾಡುವ   ಅಜ್ಜಿ, ಇತ್ಯಾದಿ ನಮ್ಮ ವಿಕಸನ? ದ ಕಹಾನಿಗಳು.

ಅನವರತ ಪ್ರಯತ್ನದಲ್ಲಿ ಫಲಿಸಿದ ಅವಿಷ್ಕಾರಗಳು ನಮ್ಮನ್ನು ಮಂಗಳನ ಅಂಗಳಕ್ಕೆ ತಲಪಿಸಿದೆ. ಅದೇ ಹೊತ್ತಿಗೆ ಓಟದಲ್ಲಿ ನೋಟ ನೆಟ್ಟ ಕನ್ನಡಕದ ಹಿಂದಿನ ಕಣ್ಣುಗಳಿಗೆ ಪಕ್ಕದಲ್ಲಿ ಹಸಿವಿನಿಂದ ಅಳುವ ಮಗುವಿನ ಮುಖ ಕಾಣಿಸುತ್ತಿಲ್ಲವೇ?. ವೃದ್ಧಾಶ್ರಮದಲ್ಲಿ ಹಣ ಕಟ್ಟಿ ಬಿಟ್ಟು ಬಂದ ವಯಸ್ಸಾದ ತಂದೆತಾಯಂದಿರ ಒಬ್ಬಂಟಿತನದಿಂದ ಸುಕ್ಕಿದ ಕೆನ್ನೆಗಳಲ್ಲಿ ಜಾರಿ, ಆರಿ ಹೋಗುವ ಕಣ್ಣೀರ ಬಿಂದುಗಳ ಅರಿವಿಲ್ಲವೇ?.

ಹೀಗೇ ಬನ್ನಿ, ಇಲ್ಲಿದೆ ಸುಬ್ರಾಯ ಚೊಕ್ಕಾಡಿಯವರ ಕವಿತೆ.

***      ***       ***

Lucozade Lift, Katargam - Internet Website Designers in Surat - Justdial

ಲಿಫ್ಟು

ಏರುತ್ತ ಹೋದರು ಗಗನ ಚುಂಬಿಯ ತುದಿಗೆ

ನೆಲದ ಸಂಪರ್ಕವನೆ ಕಡಿದುಕೊಂಡು

ಪಿರೆಮಿಡ್ಡಿನಾಕೃತಿಯ ತುದಿಯಲೇಕಾಂತದಲಿ

ತನ್ನ ತಾನೇ ಧ್ಯಾನ ಮಾಡಿಕೊಂಡು.

ಯಾವುದೇ ಗಜಿಬಿಜಿಯ ಸದ್ದುಗದ್ದಲವಿಲ್ಲ

ಬಳಿ ಸೆಳೆವ ಬಳಗಗಳ ಸೂತ್ರವಿಲ್ಲ

ಸಂಬಂಧಗಳ ಬಂಧ ಕಡಿದುಮುನ್ನಡೆದಾಯ್ತು

ಸ್ವರ್ಗ ಸೀಮೆಗೆ ಈಗ ಮೆಟ್ಟಿಲೊಂದೆ.

ಹಳೆಯ ಮೌಲ್ಯಗಳೆಲ್ಲ ಅಪಮೌಲ್ಯಗೊಂಡೀಗ

ತಳದಲ್ಲಿ ಬಿದ್ದಿವೆ ಅನಾಥವಾಗಿ

ತಾನು ತನ್ನದು ಎಂಬ ಸಸಿಯ ಊರಿದ್ದಾಯ್ತು

ಕುಂಡದಲಿ ಇಲ್ಲಿ ತುದಿಹಂತದಲ್ಲಿ.

ಒಂದೊಂದೆ ಮೆಟ್ಟಿಲನು ಹತ್ತಿ ಬಂದರು ಕೂಡಾ

ಬೇಡ ಅವು ಇನ್ನು ಲಿಫ್ಟೊಂದೆ ಸಾಕು

ನಡೆದ ದಾರಿಯ ಮತ್ತೆ ನೋಡದೇ ನಡೆವವಗೆ

ಕಾಂಚಾಣದೇಕಾಂತವಷ್ಟೆ ಸಾಕು.

ಅರಿವಿರದ ಯಾವುದೋ ಬಂದು ‌ಹೊಡೆದರೆ ಢಿಕ್ಕಿ

ತುದಿಯಲುಗಿ,ಒಂದೊಂದೆ ಹಂತ ಕುಸಿದು

ಎದ್ದ ಬೆಂಕಿಯ ನಡುವೆ,ಕೆಟ್ಟಿರುವ ಲಿಫ್ಟೊಂದು

ನಿಂತಿದೆ ಅನಾಥ–ನೆಲಬಾನ ನಡುವೆ.

***      ***       ***

Subraya chokkadi ( ಸುಬ್ರಾಯ ಚೊಕ್ಕಾಡಿ ) | Bookbrahma.com

ಕವಿತೆಯ ಹೆಸರು ಲಿಫ್ಟು. ಈ ಪದ ಆಂಗ್ಲಪದ. ಮೆಟ್ಟಿಲು ಹತ್ತುವ ಬದಲು, ನಿಂತಲ್ಲಿಯೇ ಮೇಲೆತ್ತುವ ಯಂತ್ರ! ಎಂದಾಗ ಇದು ನಾಮ ಪದ. ಮೇಲಕ್ಕೆತ್ತುವ ಕ್ತಿಯಾಸೂಚಕವಾಗಿ ಇದು ಕ್ರಿಯಾ ಪದವೂ ಹೌದು. ತಂತ್ರಜ್ಞಾನ, ಮನುಷ್ಯನ ಹತ್ತುವ ಇಳಿಯಿವ, ತೊಳೆಯುವ, ನಡೆಯುವ, ಓಡುವ ಇತ್ಯಾದಿ ಹಲವು ಕ್ತಿಯೆಗಳನ್ನು ಸುಲಭ ಮಾಡಲು, ಯಂತ್ರಾವಿಷ್ಕಾರ ಮಾಡಿದೆ. ಎಷ್ಟೆಂದರೆ, ಯಂತ್ರಗಳಿಲ್ಲದೆ ಬದುಕು ಅಸಾಧ್ಯ ಎನ್ನುವಷ್ಟು.

ಮನುಷ್ಯನ, ವಿಕಸನದ ಹಲವು ಘಟ್ಟಗಳನ್ನು ವರ್ಗೀಕರಿಸುವಾಗ, ಶಿಲಾಯುಗ, ಲೋಹಯುಗ, ಹೀಗೆಯೇ ಮುಂದುವರೆದರೆ, ಈ ಯಂತ್ರಯುಗವೂ ಒಂದು ಮಹಾ ಲಂಘನವೇ. ಹಾಗಾಗಿ, ಈ ಕವಿತೆಯ ಶೀರ್ಷಿಕೆ, ಯಂತ್ರಯುಗದ ಅಷ್ಟೂ ಅಂಶಗಳ ಅಭಿವ್ಯಕ್ತಿ. ಕವಿತೆ ಓದುತ್ತಾ ಹೋದಂತೆ, ಈ ಶೀರ್ಷಿಕೆ, ಯಂತ್ರಯುಗದ ಮೊದಲು ಮತ್ತು ನಂತರದ ಸಾಮಾಜಿಕ ಪ್ರಕ್ರಿಯೆಗಳ ಮತ್ತು ಸಮಗ್ರಪ್ರಜ್ಞೆಗಳ ತಾಕಲಾಟವನ್ನೂ ಚಿತ್ರಿಸುತ್ತೆ.

“ಏರುತ್ತ ಹೋದರು ಗಗನ ಚುಂಬಿಯ ತುದಿಗೆ

ನೆಲದ ಸಂಪರ್ಕವನೆ ಕಡಿದುಕೊಂಡು

ಪಿರೆಮಿಡ್ಡಿನಾಕೃತಿಯ ತುದಿಯಲೇಕಾಂತದಲಿ

ತನ್ನ ತಾನೇ ಧ್ಯಾನ ಮಾಡಿಕೊಂಡು.”

ಮನುಷ್ಯ ತನ್ನ ಪ್ರಯತ್ನದಿಂದ ಏರುತ್ತಲೇ ಹೋದ. ಗಗನ ಚುಂಬಿ ಎನ್ನುವುದು ಆಗಸಕ್ಕೆ ಮುತ್ತಿಡುವ ಎತ್ತರದ ಕಟ್ಟಡ. ಹತ್ತಲು ಉಪಯೋಗಿಸಿದ್ದು ಲಿಫ್ಟ್ ಎಂಬ ಯಂತ್ರ. ಎರುತ್ತಾ ಹೋದಂತೆ, ನೆಲ ಕಾಣಿಸಲ್ಲ. ನೆಲ ಎಂಬುದು, ಮೂಲ, ಆಧಾರಕ್ಕೆ ಪ್ರತಿಮೆ. ಏರುತ್ತಾ ಹೋದಂತೆ ತನ್ನ ಅಡಿಪಾಯವೇ ಮರೆತುಹೋಗಿ,ಅದರ ಸಂಪರ್ಕ ಕಡಿದುಹೋಯಿತು.

ಗಗನಚುಂಬಿ ಕಟ್ಟಡದ ತುದಿಯಲ್ಲಿ ಪಿರಮಿಡ್ ಆಕೃತಿ ಇದೆ. ಈ ಪದವನ್ನು ಕವಿ ಉಪಯೋಗಿಸಿ ಕವಿತೆಗೆ ಅಚಾನಕ್ ಆಗಿ ಹೊಸ ದಿಕ್ಕು ಕೊಡುತ್ತಾರೆ. ಈಜಿಪ್ಟ್‌ನಲ್ಲಿ ಪಿರಮಿಡ್ ಒಳಗೆ ಮೃತದೇಹವನ್ನು ” ಮಮ್ಮಿ” ಮಾಡಿ ಸಮಾಧಿ ಮಾಡುತ್ತಿದ್ದರು. ಅಂದರೆ ಈ ಗಗನಚುಂಬಿ ಕಟ್ಟಡದ ತುದಿಯಲ್ಲಿ ಪಿರಮಿಡ್ ಇದ್ದರೆ, ಈ ಕಟ್ಟಡದ ನೆಲತಲದಿಂದ ಹತ್ತಿದ್ದು,ಬದುಕಿನ ಆದಿ ಮತ್ತು ಪಿರಮಿಡ್ ನಲ್ಲಿ, ಏಕಾಂತದಲ್ಲಿ, ತನ್ನ ತಾನೇ ಏಕಾಂತದಲ್ಲಿ ಸಮಾಧಿಯಾದ ಬದುಕಿನ ಅಂತ್ಯವೇ.

ಹತ್ತುತ್ತಾ, ಕೊನೆಗೆ ನೆಲದ ಸಂಪರ್ಕ ಕಸಿದುಕೊಳ್ಳುವುದು ಎಂದರೆ, ಭೌತಿಕ ಜಗತ್ತಿನ ಸಂಪರ್ಕವಾದ,ದೇಹ ತೊರೆಯುವ ಕ್ರಿಯೆಯೇ?.

ಪಿರಮಿಡ್ ಆಕೃತಿಯೊಳಗೆ ಜೀವಿಸುವ ದೇಹ, ಜೀವವಿದ್ದೂ ಸತ್ತಂತೆ,ಎಂಬ ಅರ್ಥವನ್ನೂ ಈ ಸಾಲುಗಳು ಪಡೆಯಬಹುದು

ತಾನು ಏರಲು ಆರಂಭಿಸಿದ ಮೂಲ ಆಧಾರ, ತಂದೆ,ತಾಯಿ, ಶಾಲೆ,ಗುರುಗಳು, ಸಮಾಜ ಇವುಗಳ ಸೂತ್ರಗಳನ್ನು ಕಡಿದುಕೊಂಡು, ಏರಿದ ದಾರಿಯನ್ನು ಮರೆತು ಡಿಸ್ಕನೆಕ್ಟ್ ಆಗಿ ಬದುಕುವ ಜೀವನ, ಜೀವಮುಖೀ ಜೀವನವೇ? ಅಲ್ಲಾ,ಪಿರಮಿಡ್ ಒಳಗಿನ “ಮಮ್ಮಿ”   ಬದುಕೇ?.

Top 9 tallest skyscrapers completing in 2016

ಇನ್ನೊಂದು ರೀತಿ ಅರ್ಥೈಸುವುದಿದ್ದರೆ, ಭೌತಿಕ ಬದುಕನ್ನು ತ್ಯಜಿಸಿ, ಧ್ಯಾನಮಾರ್ಗದತ್ತ ಏರಿದ ಸಂತನ ಅನುಭವಕ್ಕೆ, ತುದಿಯಲೇಕಾಂತದಲಿ, ಧ್ಯಾನಕ್ಕೆ ಅಣಿಯಾಗುವ ಪ್ರಯತ್ನ ಇದು. ಈ ಅರ್ಥಕ್ಕೆ ಕವಿತೆಯ ಉಳಿದ ಸಾಲುಗಳ ಸಮರ್ಥನೆ ದೊರಕುವುದಿಲ್ಲ.

“ಯಾವುದೇ ಗಜಿಬಿಜಿಯ ಸದ್ದುಗದ್ದಲವಿಲ್ಲ

ಬಳಿ ಸೆಳೆವ ಬಳಗಗಳ ಸೂತ್ರವಿಲ್ಲ

ಸಂಬಂಧಗಳ ಬಂಧ ಕಡಿದು ಮುನ್ನಡೆದಾಯ್ತು

ಸ್ವರ್ಗ ಸೀಮೆಗೆ ಈಗ ಮೆಟ್ಟಿಲೊಂದೆ.”

ಈ ಗಗನಚುಂಬಿಯ ಮೇಲೆ ನೆಲದಲ್ಲಿ ನಡೆಯುವ ಅಷ್ಟೂ ಸಮಾಜಮುಖೀ ಶಬ್ಧಗಳು ಇಲ್ಲ. ಸ್ಪಂದನೆಯಿಲ್ಲ, ಬಂಧು ಬಳಗಗಳ,ಸಮಾಜದ ಕಟ್ಟುಪಾಡುಗಳಿಲ್ಲ. ಸಂಬಂಧಗಳ ಕಡಿದು ಮುನ್ನಡೆದಾಯ್ತು ಅಂತ ಕವಿವಾಣಿ. ಸಂಬಂಧ ಅದರಷ್ಟಕ್ಕೇ ಕಡಿದು ಹೋದದ್ದಲ್ಲ. ಎತ್ತರಕ್ಕೆ ಏರುವ ಭರದಲ್ಲಿ,ಆರೋಹಿಯೇ ಕಡಿದದ್ದು. ಇಲ್ಲೊಂದು ಧರ್ಮ ಸೂಕ್ಷ್ಮ ಇದೆ!. ಸಂಬಂಧಗಳ ಬಂಧ ಕಡಿಯದಿದ್ದರೆ ಹತ್ತಲು ಬಹುಷಃ ಕಷ್ಟವಾಗುತ್ತಿತ್ತು. ಆ ಸೂತ್ರಗಳು ಕೈ ಕಾಲುಗಳನ್ನು ಕಟ್ಟಿ ಹಾಕುತ್ತಿದ್ದವು. ಬಿಂದಾಸ್ ಆಗಿ ಅಷ್ಟೆತ್ತರ ಏರಲು ಸಂಪೂರ್ಣ ಸ್ವಾತಂತ್ರ್ಯ ಬೇಕಿತ್ತು. ಆದರೆ ಪ್ರಶ್ನೆ, ಏರಿದ ಎತ್ತರಕ್ಕೆ ಅರ್ಥ ಇದೆಯೇ?.

ಬಹುಜನಬಳಗದ ಬಂಧನದಿಂದ, ಕಸಿದುಕೊಂಡು ತನ್ನದೇ ಆದ ಚಿಕ್ಕ ಕುಟುಂಬಕ್ಕೆ ಸೀಮಿತವಾದ, ತಾನು,ತನ್ನ ಸಾಧನೆ ಮತ್ತು ತನ್ನ ಬದುಕಿನ ಮಿತಿಯೊಳಗೆ ಸ್ವರ್ಗ ಹುಡುಕುವ ಪ್ರಯತ್ನ ಇದು.

“ಹಳೆಯ ಮೌಲ್ಯಗಳೆಲ್ಲ ಅಪಮೌಲ್ಯಗೊಂಡೀಗ

ತಳದಲ್ಲಿ ಬಿದ್ದಿವೆ ಅನಾಥವಾಗಿ

ತಾನು ತನ್ನದು ಎಂಬ ಸಸಿಯ ಊರಿದ್ದಾಯ್ತು

ಕುಂಡದಲಿ ಇಲ್ಲಿ ತುದಿಹಂತದಲ್ಲಿ”

ಈ ಗಗನಚುಂಬಿ ಕಟ್ಟಡದ ತುದಿಗೆ ತಲಪಿದ ವ್ಯಕ್ತಿಗೆ, ಕಟ್ಟಡದ ತಳಪಾಯವಾದ ಹಳೆಯ ಮೌಲ್ಯಗಳು ಅಪಮೌಲ್ಯವಾಗಿವೆ. ಇಲ್ಲಿ ಅಪಮೌಲ್ಯ ಎಂಬ ಪದ ವ್ಯಾಪಾರೀ ಜಗತ್ತಿನ ಕರೆನ್ಸಿಯನ್ನು ಡಿವೇಲ್ಯುವೇಷನ್ ಅನ್ನೋ ಶಬ್ಧ. ಲಿಫ್ಟ್ ಎಂಬ ಯಾಂತ್ರಿಕ ವ್ಯವಸ್ಥೆಯಲ್ಲಿ ಮೇಲೇರುತ್ತಾ ಹೋದಂತೆ, ಕುರುಡು ಕಾಂಚಾಣ ಮುಖ್ಯವಾಗಿ, ಮೌಲ್ಯಗಳು ತಳದಲ್ಲಿ ಬಿದ್ದಿವೆ ಅನಾಥವಾಗಿ.

ತುದಿಯಲ್ಲಿ ತಾನು,ತನ್ನದು ಎಂಬ ಸ್ವಾರ್ಥವೇ ಮುಖ್ಯವಾಗಿ, ಆರ್ಟಿಫಿಶಿಯಲ್ ಆದ ಹಸಿರಿನ ವ್ಯವಸ್ಥೆ, ಹೂ ಕುಂಡದಲ್ಲಿ ಸಸಿ ಊರಿ ನಿರ್ಮಿಸಿ, ಅದನ್ನೇ ನೆಲದ ಮರಗಳಾಗಿ ಕಾಣುವ ಅವಸ್ಥೆ ಇದು. ಕವಿ ರೂಪಕವಾಗಿ,’ತಾನು ತನ್ನದು ಎಂಬ ಸಸಿ’ ಎನ್ನುತ್ತಾರೆ!.

ತುದಿಹಂತದಲ್ಲಿ ಅಂತ ಕವಿ ಸೂಕ್ಷ್ಮವಾಗಿ ಹೇಳುವುದೇನು?. ಇಂತಹ ಬೆಳವಣಿಗೆಗೆ ಅಂತ್ಯವಿದೆ. ಇಂತಹ ಬೆಳವಣಿಗೆ ಕೊನೆಯಾಗುವುದು,ತಾನು ಮತ್ತು ತನ್ನದು ಎಂಬ “ಸಿಂಗ್ಯುಲಾರಿಟಿ” ಯಲ್ಲಿ ಎಂದೇ?

“ಒಂದೊಂದೆ ಮೆಟ್ಟಿಲನು ಹತ್ತಿ ಬಂದರು ಕೂಡಾ

ಬೇಡ ಅವು ಇನ್ನು ಲಿಫ್ಟೊಂದೆ ಸಾಕು

ನಡೆದ ದಾರಿಯ ಮತ್ತೆ ನೋಡದೇ ನಡೆವವಗೆ

ಕಾಂಚಾಣದೇಕಾಂತವಷ್ಟೆ ಸಾಕು.”

ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತಿ ಗಗನ ಚುಂಬಿ ಎತ್ತರಕ್ಕೆ ಏರಿದರೂ ಆ ಹತ್ತಿದ ದಾರಿ ಮರೆತು, ಯಾಂತ್ರೀಕೃತ, ಯಾಂತ್ರಿಕ ಬದುಕಿಗೆ ಮನುಷ್ಯ ಒಗ್ಗಿಕೊಳ್ಳುವ, ಒಪ್ಪಿಸಿಕೊಳ್ಳುವ, ಅವಸ್ಥೆಯ ಚಿತ್ರಣ. ಕಾಂಚಾಣದೇಕಾಂತ! ಇದಕ್ಕೆ ವಿವರಣೆ ಬೇಕೇ?!

“ಅರಿವಿರದ ಯಾವುದೋ ಬಂದು ‌ಹೊಡೆದರೆ ಢಿಕ್ಕಿ

ತುದಿಯಲುಗಿ,ಒಂದೊಂದೆ ಹಂತ ಕುಸಿದು

ಎದ್ದ ಬೆಂಕಿಯ ನಡುವೆ,ಕೆಟ್ಟಿರುವ ಲಿಫ್ಟೊಂದು

ನಿಂತಿದೆ ಅನಾಥ–ನೆಲಬಾನ ನಡುವೆ.”

ಈ ಪ್ಯಾರಾ ಓದುವಾಗ, ಅಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್ ನ ಗಗನಚುಂಬಿ ಅವಳಿ ಟವರ್ ಮೇಲೆ ಆದ ಅಟ್ಯಾಕ್ ನ ನೆನಪು ಬರುತ್ತೆ. ಗಗನಚುಂಬಿ ಕಟ್ಟಡ ಅದರ ಎತ್ತರದಲ್ಲಿ ಏರಿ ವಾಸವಾದವರು ಒಪ್ಪಲಿ ಬಿಡಲಿ, ಅದು ನಿಂತಿರುವುದಂತೂ ನೆಲದ ಮೇಲೆ. ಅರಿವಿರದ ಯಾವುದೇ ಹೊಡೆತಕ್ಕೆ, ಕಟ್ಟಡ ತುದಿಯಲುಗಿ ಕುಸಿಯುತ್ತೆ. ಈ ಅರಿವಿರದ ಹೊಡೆತ, ಭೂಕಂಪವೂ ಆಗಬಹುದು.

ಕುಸಿಯುವುದೂ ಒಂದು ಕ್ರಾಂತಿಯೇ. ಆ ಹಠಾತ್ ಬದಲಾವಣೆಯ ಬೆಂಕಿಯ ನಡುವೆ ಲಿಫ್ಟ್ ಕೆಟ್ಟು ನಿಂತಿದೆ! ಅದು ಅನಾಥವಾಗಿ ನಿಂತಿದೆ. ನೆಲಬಾನ ನಡುವೆ! ಗಮನಿಸಿ, ಇಲ್ಲಿ ನೆಲಬಾನು ಒಂದೇ ಪದವಾಗಿದೆ! ಲಿಫ್ಟ್ ಕೆಲಸಮಾಡುವಷ್ಟು ಸಮಯ, ನೆಲ ಮತ್ತು ಬಾನು ನಡುವೆ ಅಂತರವಿತ್ತು. ಗಗನ ಚುಂಬಿ ಇತ್ತು.

ಗಗನ ಚುಂಬಿ ಬಿದ್ದಾಗ, ಲಿಫ್ಟ್ ಕೆಟ್ಟಾಗ, ನೆಲಬಾನು ಒಂದಾಯಿತು!

ಬುಬ್ಕಾ ನ ಕನಸು, ಸಾಧನೆ ಧನಾತ್ಮಕ. ಸ್ವಪ್ರಯತ್ನ, ಸ್ವಪ್ರೇರಣೆಯ ಹಾದಿಯಲ್ಲಿ ಸಮಾಜದ ಜತೆಗೆ, ಸಹಜೀವನ,ಸಮಜೀವನ, ಸಮರಸ ಜೀವನ ಮತ್ತು ಸಮನ್ವಯ ಜೀವನದ ಅನುಭವ ಅದು.ಎತ್ತರದ ಯಶಸ್ಸಿನ ನಡುವೆಯೂ ನೆಲದ ಜತೆಗೆ ಸದಾ ಗ್ರೌಂಡೆಡ್ ಆದ ಬದುಕು ಅದು.

 ಕವಿತೆಯಲ್ಲಿ,  ಯಾಂತ್ರಿಕ ಲಿಫ್ಟ್, ಅದನ್ನೇರಿ ಹತ್ತಿದ ಗಗನ ಚುಂಬಿ. ನೆಲದಿಂದ ದೂರವಾಗಿ ಸಂಪರ್ಕ ಕಡಿದ ಏಕಾಂಗೀ ಬದುಕು. ಈ‌ ಬದುಕಿನಲ್ಲಿ ಸತ್ವ ಇಲ್ಲದೇ ಇದು ಕುಸಿಯುತ್ತೆ. ಕೆಟ್ಟು ಹೋದ ಲಿಫ್ಟ್ ಕೊನೆಗೂ ಈ ವಿಧಾನದ ಶುಷ್ಕತೆಯನ್ನು, ಪ್ರತಿನಿಧಿಸುವಾಗ ಕವಿತೆ  ಹಲವು ಪ್ರಶ್ನೆಗಳ ಪತ್ರಿಕೆಯಾದರೂ,  ಸಮುದ್ರ ಮಧ್ಯದ ಹಡಗಿಗೆ ದಿಶೆ ತೋರಿಸುವ ದಿಕ್ಸೂಚಿಯೂ ಆಗುತ್ತೆ.

****************************************

ಮಹಾದೇವ ಕಾನತ್ತಿಲ

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

5 thoughts on “

  1. ಸರ್ಗೆಯಿ ಬೂಬ್ಕಾನ ಊರ್ಧ್ವಗಾಮಿ ಜಿಗಿತದ ಧನಾತ್ಮಕ ಉಡ್ಯಾಣ ದೊಂದಿಗೆ ಚೊಕ್ಕಾಡಿಯವರ ಲಿಫ್ಟ್ ಕವಿತೆಯ ಕಾಂಚಾಣದ ಪಿರಮಿಡ್ಡಿನ ಮಮ್ಮಿ ಯಾಗುವ ಅವನತಿಯ ಪತನದ ಜೊತೆ ಕಟ್ಟಿದ ಸಂಬಂಧದ ಎಳೆ, ವಿವರಣೆ ತುಂಬಾ ಸೊಗಸಾಗಿದೆ. ನಿಮ್ಮ ಪದ ಭಾವಗಳ ಬಲೆಗೆ ಕವಿ ಮನಸ್ಸು ಸಿಲುಕಿ ಬಂಧಿಯಾಗದೆ ಗತ್ಯಂತರವಿಲ್ಲ .ಚೆಂದದ ಬರಹ ಧನ್ಯವಾದಗಳು.

    ” ನಡೆದ ದಾರಿಯ ಮತ್ತೆ ನೋಡದೆ ನಡೆದವರಿಗೆ ಕಾಂಚಾಣ ದೇಕಾಂತವಷ್ಟೇ ಸಾಕು” ಎಷ್ಟು ಮನಮುಟ್ಟುವ ಸಾಲುಗಳು !

    1. ಸುಜಾತಾ ಅವರೇ, ನೀವು ಬರೆದ ಸಾಲುಗಳು ತುಂಬಾ ಕಾವ್ಯಾತ್ಮಕವಾಗಿವೆ.
      ನಡೆಯುವ ಪ್ರತೀ ಹಜ್ಜೆಯ ಹಿಂದೆ ಪ್ರಜ್ಞೆಯ ದಿಶೆ ಮಾರ್ಗದರ್ಶಿಯಾಗೋದರ ಅಗತ್ಯ ನನಗೆ ಈ ಕವಿತೆಯಿಂದ ಅರ್ಥವಾಯಿತು. ಕವಿತೆಯ ಧ್ವನಿಗೆ ಕಾಂಟ್ರಾಸ್ಟ್ ಕೊಡಲು ಬೂಬ್ಕಾ ನ ಉದಾಹರಣೆ ಕೊಟ್ಟೆ
      ಅದನ್ನು ನೀವು ಗುರುತಿಸಿದ ನಿಖರತೆಗೆ ನಮನ.

      ಧನ್ಯವಾದಗಳು

  2. ಬೂಬ್ಕಾನ ತಾಯಿ ಹೇಳಿದ,ಮಗನೇ! ನೀನು ಸೋತಿಲ್ಲ! ನೀನು ಜಿಗಿದ ಮಟ್ಟ ಕಡಿಮೆಯಿತ್ತಷ್ಟೇ..ಜಿಗಿಯುವ ಎತ್ತರವನ್ನು ದಿನಕ್ಕೆ….. ಜಗತ್ತು ಕಾಯುತ್ತೆ ನಿನ್ನ ಗೆಲುವಿಗಾಗಿ!”ತಾಯಿಯ ಇಂಥ ಮಮತೆಯುಕ್ತ ಚೇತನಾತ್ಮಕ ಮಾತುಗಳೇ ಯಶಸ್ವೀಯಾಗಲು ವೇಗವರ್ಧಕದಂತೆ ಕೆಲಸ ಮಾಡಿರಲು ಸಾಕು.ಗಗನಕ್ಕೆ ಹಾರ ಬಯಸುವ ಬೆಕ್ಕು ಮೊದಲು ನೆಲುವಿಗೆ ಹಾರಲು ಕಲಿಯಬೇಕೆಂಬುದು ಸರಿಯಲ್ಲವೇ.ಸುಬ್ರಾಯ ಚೊಕ್ಕಾಡಿಯವರ ಲಿಫ್ಟ ಕವನಕ್ಕೆ ಬುಬ್ಕಾನ ಉದಾಹರಣೆ ಕೇವಲ ಸಮಂಜಸವಾದ ಪೂರ್ವಪೀಠಿಕೆಯಾಗಿರದೇ ಓದುಗರಿಗೆ ,ಜೀವನದಲ್ಲಿ ಸಾಧಿಸಬೇಕೆನ್ನುವವರ ನಿಶ್ಚಯಕ್ಕೆ ಭದ್ರ ಧೃಡತೆಯನ್ನು ಕೊಡುವ ಮಾತುಗಳಾಗಿವೆ. ಮುಂದೆ ಕವಿ ಲಿಫ್ಟ ಕವಿತೆಯನ್ನು ನೀವು ವಿಶ್ಲೇಷಿಸಿದ ಪರಿ ಅನನ್ಯ.ಜೀವನವನ್ನು ಸಾಗಿಸಲು ಕಾಂಚಾಣ ಬೇಕು ನಿಜ ಆದರೆ ಕಾಂಚಾಣಕ್ಕಾಗಿಯೇ ಜೀವನವೆಂಬಂತೆ ಗಗನ ಚುಂಬಿ ಎತ್ತರವನ್ನೇರಿ ಬೇರನ್ನೇ ಮರೆಯುವ ಜನರಿಗೆ ಕವಿಯ “ಬಳಿ ಸೆಳೆವ ಬಳಗಗಳ ಸೂತ್ರವಿಲ್ಲ
    ಸಂಬಂಧಗಳ ಬಂಧ ಕಡಿದು ಮುನ್ನಡೆದಾಯ್ತು” ಎಂಬ ಸಾಲುಗಳು ಎಷ್ಟೊಂದು ಅನ್ವಯಿಸುತ್ತವೆ..ಕವಿತೆ ನೋವಿನೊಂದಿಗೆ ವಾಸ್ತವ್ಯವನ್ನು ಮುಂದಿಟ್ಟಿದ್ದರೆ ಅದರ ಒಂದೊಂದು ಶಬ್ದಗಳ ಒಳಹೊಕ್ಕು ಅರ್ಥವನ್ನು ಮಂಡಿಸಿ ನಮ್ಮ ಮುಂದಿಟ್ಟು ಕವಿತೆಯನ್ನು ವಿವಿಧ ಕೋನಗಳಿಂದ ನೋಡುವಂತೆ ಮಾಡುವ ನಿಮ್ಮ ಶೈಲಿ ಭಿನ್ನವಾಗಿದ್ದು ಭವ್ಯವಾಗಿದೆ.

    1. ಮೀರಾ ಅವರೇ, ನಿಮ್ಮ ವಿಸ್ತೃತವಾದ ಪ್ರತಿಕ್ರಿಯೆ ಅಂಕಣದ ಅನುಭವಕ್ಕೆ ಹೊಸ ರೂಪ ಕೊಟ್ಟಿದೆ. ಚೊಕ್ಕಾಡಿಯವರ ಕವಿತೆಗೆ ಹಲವು ಅರ್ಥಸಾಧ್ಯತೆಗಳಿವೆ. ನೀವು ಬರೆದ ವಿಚಾರಗಳು ಕವಿತೆಯ ಇಂತಹ ಅರ್ಥಗಳ ಮೇಲೆ ಬೆಳಕು ಚೆಲ್ಲುತ್ತವೆ

      ನಿಮ್ಮ ಪ್ರೋತ್ಸಾಹದ ನುಡಿಗಳು ನನಗೆ ತುಂಬಾ ಪ್ರೇರಣೆ ಕೊಡುತ್ತವೆ.

      ಕೃತಜ್ಞ ನಾನು

Leave a Reply

Back To Top