ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ

ಅನುಭವ

ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ

            ಪ್ರತಿ ಡಿಸೆಂಬರ್ ೨೨ಕ್ಕೆ ನಮ್ಮ ಶಾಲೆಯ ವಾರ್ಷಿಕೋತ್ಸವ, ಯಾವಾಗಲು ವಾರ್ಷಿಕೋತ್ಸವ ಮುಗಿದ ಬಳಿಕ ನಮಗೆ ಕ್ರಿಸ್ಮಸ್ರಜೆ. ರಜೆ ಕಳೆಯಲೆಂದೇ ಅಜ್ಜನ ಮನೆಗೆ ಹೋದೆವು. ನಮ್ಮ ಹಾಗೆ ಕ್ರಿಸ್ಮಸ್ ರಜೆ ಕಳೆಯಲು ನಮ್ಮಜ್ಜನ ದಾಯಾದಿಗಳ ಮನೆಮಕ್ಕಳೂ ಬಂದಿದ್ದರು. ಒಂದು ರೀತಿ ಮಕ್ಕಳ ಸೈನ್ಯವೇ ಸರಿ. ನಿಮ್ಮ ಶಾಲೆ ಹೇಗೆ? ನಿಮ್ಮ ಶಾಲೆಯಲ್ಲಿ ಏನೇನು ಕಲಿಸುತ್ತಾರೆ? ನಿಮಗೆ ಯಾವ ಟೀಚರ್ ಇಷ್ಟ? ಯಾರು ಹೇಗೆ ಬಯ್ಯುತ್ತಾರೆ? ಇತ್ಯಾದಿಗಳ ಚರ್ಚೆ ಮಾಡುತ್ತಿದ್ದೆವು. ರಜೆಗೆಂದು ಹೋದ ದಿನ ನಮಗೆ ಅಲ್ಲಿ ಭರ್ಜರಿ ಸ್ವಾಗತ. ನಮ್ಮಜ್ಜ ಅಜ್ಜಿಯಂತೂ ಬಸ್ ಬಳಿಯೇ ಬಂದು ನಮ್ಮ ಹೆಗಲ ಮೇಲೆ ಕೈಹಾಕಿ, ತಲೆನೇವರಿಸಿ ಕರೆದುಕೊಂಡು ಹೋದರು. ಇಂದು ನೆನಪಿಸಿಕೊಂಡರೆ ಕಣ್ಣಂಚಿನಲ್ಲಿ ನೀರು ತುಳುಕುತ್ತದೆ. ಅಣ್ಣನ ಮಕ್ಕಳು ಬರುತ್ತಾರೆಂಬ ಖುಷಿಯಲ್ಲಿ ನಮ್ಮತ್ತೆ (ಆಗಿನ್ನು ಲಗ್ನವಾಗಿರಲಿಲ್ಲ) ಗಸಗಸೆ ಪಾಯಸ ಮಾಡಿ ತಣಿಸಿ ನಮಗಾಗಿ ಕಾಯುತ್ತಿದ್ದರು. ಭರ್ಜರಿ ತಿಂಡಿತಿನಿಸುಗಳು ಅವುಗಳನ್ನು ತಿಂದ ನಮಗೆ ಊಟ ಬೇಡ ಅನ್ನಿಸಿ ಹಾಗೆ ಮಲಗಿಕೊಂಡೆವು. ನನ್ನಜ್ಜಿ ನಾವೆಲ್ಲ ಮಲಗಿದ ಮೇಲೆ ಬಂದು ಸರಿಯಾಗಿ ಹೊದಿಸಿ ತಾನೂ ಪಕ್ಕದಲ್ಲೆ ಕುಳಿತುಕೊಂಡು ಹೂ ಕಟ್ಟುತ್ತಾ “ಇವತ್ತೇನೊ ಹೊಸದು ಏನು ಗಲಾಟೆಯಿಲ್ಲ, ನಾಳೆಯಿಂದ ಇವರ ಜಗಳ ಬಿಡಿಸುವುದೇ ನನಗೊಂದು ಕೆಲಸ” ಎಂದರು. ಅದಕ್ಕೆ ಪ್ರತಿಯಾಗಿ “ಅವರು ಹೇಳಿದ್ದಕ್ಕೆಲ್ಲ ನಾನು ಹೂ ಅನ್ನಬೇಕು ಅದೊಂದು ನನಗೆ ತಾಪತ್ರಯ” ಎಂದು ಅತ್ತೆ ನಗುತ್ತಿದ್ದರು.

             ಡಿಸೆಂಬರ್ ಅಂದರೆ ಚಳಿಗಾಲ ಜೊತೆಗೆ ಸುಗ್ಗಿಯ ಕಾಲವೂ ಹೌದು, ಭತ್ತ ಕೊಯ್ದು ಹೊರೆ ಕಟ್ಟಿ ಬಣವೆಗಳನ್ನು ಒಟ್ಟುತ್ತಿದ್ದ ಸೀಸನ್ ಅದು. ನಮಗೆ ಅದನ್ನು ಹೇಗೆ ಜೋಡಿಸುತ್ತಾರೆ ಎಂಬ ಕುತೂಹಲ, ಅಜ್ಜನ ಬಳಿಗೆ ಹೋಗಿ ಮೆಲ್ಲನೆ “ನಾವೂ ಬರ್ತೀವಿ ನಿಮ್ಮ ಜೊತೆಗೆ ಗದ್ದೆಹತ್ರ” ಅಂದೆವು ಒಂದೇ ಬಾರಿಗೆ “ಬನ್ನಿ ಅದಕ್ಕೇನಂತೆ” ಎಂದರು. ಆದರೆ ಅಜ್ಜಿ “ನೀವುಗಳು ಬಂದು ಅಲ್ಲೇನು ಮಾಡ್ತೀರಿ ಮನೆಲ್ಲೇ ಇರಿ” ಎಂದರು. ಪುರುಸೊತ್ತಿಲ್ಲದ ಕೆಲಸದ ನಡುವೆ ಈ ಮಕ್ಕಳ ತುಂಟಾಟ ತಡೆಯಲಾಗದು ಎಂಬ ಭಾವ ಆಕೆಯದ್ದು. ನಾವು ಅವರ ಬಳಿ ಇವರ ಬಳಿ ಹೇಳಿಸಿ ಶಿಫಾರಸ್ಸು ಮಾಡಿಸಿ ಕಡೆಗೆ ಗದ್ದೆ ಬಯಲಿಗೆ ಪ್ರಯಾಣ ಬೆಳೆಸಿದೆವು. ದಾರಿಯಲ್ಲಿ ಹೋಗುವಾಗ ನಮ್ಮ ಕೂಗಾಟ ಸ್ವಲ್ಪ ಹೆಚ್ಚೇ ಇತ್ತು ಅಜ್ಜಿ  ಆ ಕೂಗಾಟವನ್ನು ತನ್ನ ಕಣ್ಣುಗಳಿಂದಲೇ ನಿಯಂತ್ರಿಸುತ್ತಿದ್ದರು. ಭತ್ತವನ್ನು ಕಟಾವು ಮಾಡಿದ್ದರಿಂದ ಆ ಗದ್ದೆ ಬಯಲಿನಲ್ಲಿ ಬರಿಗಾಲಲ್ಲಿ ಹೋಗಲಿ ಚಪ್ಪಲಿ ಧರಿಸಿದ ಕಾಲುಗಳಿಂದಲೂ ಆಗುತ್ತಿರಲಿಲ್ಲ.

            ಸ್ವಲ್ಪ ಹೊತ್ತು ನೋಡಿ ಪಕ್ಕದವರ ತೋಟಕ್ಕೆ ನಮ್ಮ ಪ್ರವೇಶವಾಯಿತು. ರಜೆಗೆ ಮಕ್ಕಳು ಬಂದಿದ್ದಾರೆ ಎಂದು ಎಳನೀರು, ಸೀಬೆಕಾಯಿ, ಗಣಿಕೆ ಹಣ್ಣು ಇತ್ಯಾದಿಗಳನ್ನು ಕೊಟ್ಟರು. ಹೆಣ್ಣುಮಕ್ಕಳಿಗೆಲ್ಲ ಆ ಪಕ್ಕದ ತೋಟದ ಅಜ್ಜಿ “ಕಾಕಡ, ಕನಕಾಂಬರ, ದವನ, ಮರುಗ ಎಲ್ಲಾ ಇವೆ ಎಲ್ಲಾ ಕೊಯ್ದುಕೊಂಡು ಕಟ್ಟಿ ಮುಡಿದುಕೊಳ್ಳಿ” ಎಂದು ಎಲ್ಲೊ ಸಿಕ್ಕಿಸಿ ಇಟ್ಟಿದ ದಾರವನ್ನು ನಮ್ಮೆಡೆಗೆ ಎಸೆದರು. ಅಭ್ಯಾಸವಿಲ್ಲದ ನಮಗೆ ಹೂ ಬಿಡಿಸಲು ಗೊತ್ತಾಗುತ್ತಿರಲಿಲ್ಲ ತರಚಿ ಹಾಳು ಮಾಡುತ್ತಿದ್ದೆವು ಅದನ್ನು ಕಂಡ ಅವರು “ಉಪಯೊಗಕ್ಕೆ ಬಾರದ್ಹಾಗೆ ಮಾಡ್ತೀರಲ್ಲ”  “ಓದೋ ಮಕ್ಕಳೇ ಹಿಂಗೆ ಹೂ ಬಿಡಿಸೋಕ್ಕು ಬರಲ್ವೆ?” ಎಂದು ಅವರೆ ಬಿಡಿಸಿ ಅಲ್ಲೆ ಒಂದು ಮುತ್ತುಗದ ಎಲೆ ಕೊಯ್ದು ಪೊಟ್ಟಣಕಟ್ಟಿ ನಯವಾಗಿ ಬೀಳ್ಕೊಟ್ಟರು ಇನ್ನು ಹೆಚ್ಚಿನ ನಷ್ಟವಾಗಬಾರದೆಂದು.

            ನನ್ನಜ್ಜನಿಗೆ ಮೊಮ್ಮಕ್ಕಳನ್ನು ಪರಿಚಯ ಮಾಡಿಕೊಳ್ಳುವುದೇ ಖುಷಿ. ಆದರೆ ನಮ್ಮಜ್ಜಿಗೆ ಬೇರೆಯವರ ಬಳಿ ದೂರು ಹೇಳಿ ಬಯ್ಯವುದರಲ್ಲೆ ಖುಷಿ. ಅಜ್ಜ ನನ್ನನ್ನು ತೋರಿಸಿ “ಇವಳು ಕಾನ್ವೆಂಟ್ ಶಾಲೆಗೆ ಹೋಗ್ತಾಳೆ ಅಕ್ಷರವಂತೂ ಮುತ್ತು ಪೋಣಿಸಿದ ಹಾಗೆ ಬರಿತಾಳೆ” ಅಂದರೆ ಅಜ್ಜಿ ಮಧ್ಯೆ ಪ್ರವೇಶಿಸಿ “ಹೌದು ಮನೆಯಲ್ಲಿ ಒಂದೇ ಒಂದು ಕೆಲಸ ಮಾಡಲ್ಲ ಲಕ್ಷಣವಾಗಿ ಉದ್ದಲಂಗ ಹಾಕ್ಕೋಳದ್ ಬಿಟ್ಟು ಎನೋ ಹಿಜಾರ ಸಿಕ್ಕಿಸಿಕೊಂಡಿದ್ದಾರೆ ನೋಡಿ ಮೆರೆಯೋ ದೇವರುಗಳು ಇದ್ದ ಹಂಗೆ” ಎಂದರು. ನಮಗೆ ಆ ಮಾತುಗಳನ್ನು ಕೇಳಿ ನಗುಬಂತು, ತಕ್ಷಣ ಪಕ್ಕದ ಮನೆಯ ನೆಂಟರ ಹುಡುಗಿ “ ಇಲ್ಲ ನಿನ್ನ ತರ ಉದ್ದನೆ ಪಂಚೆ ಸುತ್ತೊಕಬೇಕ ಅಜ್ಜಿ” ನಮ್ಮ ಹಾಗೆ  ನೀವೂ ಹಾಕೊಳಿ ಎಷ್ಟು ಆರಾಮ್ ಫೀಲ್ ಆಗುತ್ತೆ ಗೊತ್ತ” ಎಂದೆ ಬಿಟ್ಟಳು ಎಲ್ಲರು ನಕ್ಕುಬಿಟ್ಟರು ಪಾಪ ಅಜ್ಜಿ ಬೇಜಾರು ಮಾಡಿಕೊಳ್ಳಲಿಲ್ಲ ನಕ್ಕು ಸುಮ್ಮನಾದರು. ಹೊತ್ತು ಕಳೆದ್ದು ಗೊತ್ತಾಗಲಿಲ್ಲ.

            ದೊಡ್ಡ ದೊಡ್ಡ ಬಾಕ್ಸ್ಗಳಲ್ಲಿ ಊಟ ಮನೆಯಿಂದ ಬಂತು. ಗದ್ದೆ ಕೆಲಸಕ್ಕೆ ಬಂದವರೊಬ್ಬರು ಸೈಕಲ್ ಮೇಲೆ ಊಟ ಇರಿಸಿಕೊಂಡು ಬಂದರು ಅವರ ಜೋತೆಗೆ ಅತ್ತೆಯೂ ಬಂದರು. ಗದ್ದೆ ಬಯಲಿನಲ್ಲಿ ಕುಳಿತು ಊಟ ಮಾಡುವ ಖುಷಿಯೇ ಬೇರೆ ಎಲ್ಲಾ ಸೇರಿ ಊಟ ಮಾಡಿದೆವು. ನನ್ನಜ್ಜನಿಗೆ ಎಲೆಯಲ್ಲಿ ಊಟ ಬಿಡುವಂತಿರಲಿಲ್ಲ ಹಾಗೆ ಉಳಿಸಿದರೆ ಬಹಳ ಕೋಪಮಾಡಿಕೊಂಡು ಬಡಿಸಿದವರಿಗೂ, ಊಟಕ್ಕೆ ಕುಳಿತವರಿಗೂ ಬಯ್ದುಬಿಡುತ್ತಿದ್ದರು. ಗದ್ದೆ ಕೆಲಸಕ್ಕೆಂದು ಬಂದಿದ್ದ ಅಳು ಸೈಕಲ್ನಲ್ಲಿ ಊಟ ತಂದಿದ್ದರಲ್ಲ ಅದಕ್ಕೆ ಪ್ರತಿಫಲವೆಂಬಂತೆ “ಇಲ್ಲೇ ಒಂದು ನಿಮಿಷ” ಎಂದು ಹೋದವರು ಒಂದು ಗಂಟೆಯಾದರು ಪತ್ತೆಯಿರಲಿಲ್ಲ. ಕೆಲಸ ಸಾಗುತ್ತಿಲ್ಲ ಎಂದು ಅಜ್ಜ ಸಿಟ್ಟು ಮಾಡಿಕೊಂಡು ನಾವಿದ್ದ ಜಾಗ ಬಿಟ್ಟು ಮುಂದೆ ಹೋದರು. ಹಾಗೆ ಮುಂದೆ ಹೋದರು. ಹಾಗೆ ಮುಂದೆ ಹೋಗುತ್ತಾ ಹೋಗುತ್ತಾ ಇದ್ದಂತೆ ಏನೋ ಸದ್ದಾಯಿತು. ಅದನ್ನು ಗಮನಿಸಿದ ನಮ್ಮ ಸೋದರ ಅತ್ತೆ “ಅದೇನೂ ಅಲ್ಲ ಸಮಯ ಬಂದರೆ ಇರಲಿ ಅಂತ ಒಂದು ಮಡಚುವ ಚಾಕು, ಅರ, ಬೀಗದ ಕೀ ಇತ್ಯಾದಿಗಳನ್ನು ಇಟ್ಟುಕೊಂಡಿದ್ದಾರೆ”. “ಹಾಗಿದ್ದರೆ ಅಜ್ಜಿ” ಎಂದರೆ ಅವರು  “ಚಿಮ್ಮಟ, ಹೂಕಟ್ಟುವ ನೂಲು, ಸೇಪ್ಟಿಪಿನ್, ಹರಶಿಣ ಕೊಂಬು, ಅರ್ಚನೆ ಪ್ರಸಾದ ಇತ್ಯಾದಿ ಇತ್ಯಾದಿ ಅಂದರು ಅದೆಲ್ಲ ಸರಿ ನೀವು………….” ಎಂದಾಗ ಅತ್ತೆಗೆ ಕೋಪ ಬಂದು ಕೈ ಎತ್ತಿದಾಗ ನಾವೆಲ್ಲ ಚೆಲ್ಲಾಪಿಲ್ಲಿಯಾದೆವು.

            ಸ್ವಲ್ಪ ಹೊತ್ತಿನ ಬಳಿಕ ನಮ್ಮಜ್ಜಿ ಮತ್ತು ಅತ್ತೆ ಹೂಕಟ್ಟುತ್ತಾ ಕುಳಿತರು ನಾವು ಹೋಗಿ ಕುಳಿತುಕೊಂಡು ಅದೇನು ಮ್ಯಾಜಿಕ್ ಎಂಬಂತೆ ಕಣ್ಣುಬಾಯಿ ಬಿಟ್ಟು ನೋಡುತ್ತಿದ್ದೆವು. ಏನೋ ದೂರಕ್ಕೆ ಕಣ್ಣು ಹಾಯಿಸಿದರೆ ಎದರೊಂದು ಬೆಟ್ಟ ಅದರ ಮೇಲೊಂದು ಗುಡಿಕಾಣಿಸುತ್ತಿತ್ತು. ಕುತುಹಲ ತಡೆಯಲಾಗಲಿಲ್ಲ ಏನು?ಏನು?  ಎಂದು ಕೇಳಿದೆವು “ಇರಿ ಸ್ವಲ್ಪ ಪಕ್ಕದ ತೋಟದವರು ನಾವು ಕೇಳಿದ್ರೆ ಇಷ್ಟೊಂದು ಹೂ ಕೊಡ್ತಾ ಇರಲಿಲ್ಲ ಎನೋ ನೀವು ಹೋಗಿದಿರ ಅಂತ ಅಪ್ಪಿ ತಪ್ಪಿ ಕೊಟ್ಟಿದ್ದಾರೆ, ಬಾಡಿ ಹೋಗುತ್ತವೆ ಹೂಗಳು ಕಟ್ಟಣ ಇರಿ ಎಂದರು” ನಾವು ಬಿಡಲಿಲ್ಲ ನಮ್ಮ ಬಲವಂತಕ್ಕೆ “ಅದು ರಂಗನಾಥಸ್ವಾಮಿ ಬೆಟ್ಟ” ಅಂದೇ ಬಿಟ್ಟರು. ಹೋಗೋಣ!  ಹೋಗೋಣ! ಅಂದೆವು.

            ಅತ್ತೆ “ಈಗ ………..” ಎಂದರೆ ನಾವು “ಹೌದು ಈಗ್ಲೆ………… ಈ ಕ್ಷಣವೇ” ಎಂದು ಅತ್ತೆಗೆ ಬಲವಂತ ಮಾಡಿದೆವು. ಇವರುಗಳು ಸುಮ್ನೆ ಇರಲ್ಲ ಎಂದು ಅಜ್ಜಿಯ ಕಡೆಗೆ ಕಣ್ಸನ್ನೆ ಮಾಡಿದರು. ಹೊ………. ಇರಲಿ ಇರಲಿ ಬನ್ನಿ ಎಂದೆವು. ನಾವು ಇನ್ಯಾವಾಗ  ಬರ್ತೀವೋ ?ಬಂದರೂ ನೀವು ಮದುವೆಯಾಗಿ ಹೋಗಿರ್ತೀರ ಬನ್ನಿ! ಬನ್ನಿ!  ಪ್ಲೀಸ್! ಪ್ಲೀಸ್! ಅಂದೆವು ಕಡೆಗೂ ಒಪ್ಪಿಗೆ ಕೊಟ್ಟೇ ಬಿಟ್ಟರು. ನಾವುಗಳು ಉತ್ಸಾಹದಿಂದ ಹೊರೆಟೆವೂ. ಹಾಗೆ ಬೆಟ್ಟದ ಕಡೆಗೆ ಹೋಗುವಾಗ ನಾವು ನಮ್ಮ ದೊಡ್ಡಜ್ಜನ ಗದ್ದೆಬಯಲು ಧಾಟಿಕೊಂಡು ಹೋಗಬೇಕಾಗಿತ್ತು ಏನೋ ಮರ ಅದರ  ಹೆಸರು ಗೊತ್ತಿಲ್ಲ  ಆ ಮರದ ಕೆಳಗೆ ಪಾರ್ಕಲ್ಲಿ ವೃತ್ತಾಕಾರದಲ್ಲಿ ಬೆಳೆದ ಸಸ್ಯಗಳಂತೆ ಪೊದೆಪೊದೆಯಾಗಿ ಕಡ್ಡಿಕಡ್ಡಿಯಾಗಿ ಕೆಲವು ಸಸ್ಯಗಳು ಬೆಳೆದಿದ್ದವು. ಅ ಗಿಡಗಳನ್ನು ನೋಡುತ್ತಲೇ “ನನಗೆ ಈ ಗ್ರೀನ್ಶೇಡ್ ಎಂದರೆ ಬಹಳ ಇಷ್ಟ” ಎಂದೆ ಇನ್ನೊಬಳು “ನನಗೆ ಆ ಡೀಪ್ ಗ್ರೀನ್” ಎಂದಳು. ಅತ್ತೆ ನಮ್ಮನ್ನು ಕರೆದು “ಇಂಗ್ಲೀಷ್ ಇಲ್ಲಲ್ಲ ಯಾವ ಗಿಡ? ಅಂತ ಹೇಳಿ” ಎಂದರು ನಮಗೆ ಗೊತ್ತಿದ್ರೆ ಅಲ್ವೆ! ಹೇಳೋದು? ಗೊತ್ತಾಗಲಿಲ್ಲ ಸ್ವಲ್ಪ ಪೊದೆಯಾಗಿ  ತಿಳಿ ಹಸಿರಿನಿಂದ ಇದ್ದ ಸಸ್ಯ ತೋರಿ ಇದು ಹರಿಶಿಣ ಎಂದರು. ಚೂಪಾದ ಗಾಡ ಹಸಿರಿನ ಚೂಪಾದ ಎಲೆ ತೋರಿಸಿ ಇದು ಶುಂಠಿ ಎಂದರು.

            ಅಷ್ಟರಲ್ಲಿ ಅತ್ತೆಗೆ ನಾವು ಅದನ್ನು ನೋಡುತ್ತಿರುವ ಕ್ರಮ ಕಂಡು ಅದನ್ನು ಕಿತ್ತು ತೋರಿಸಬೇಕೆನಿಸಿತು. ಕೀಳಲು ಮುಂದಾದರೆ ಬುಡ ಗಟ್ಟಿಯಾಗಿತ್ತು. ಆಗವರು “ನಿಮ್ಮಜ್ಜಿ ಹತ್ತಿರ ಹೋಗಿ ಕೂಡುಗೋಲು ತೆಗೆದುಕೊಂಡು ಬನ್ನಿ” ಎಂದರು. ಕಣ್ಣು ಮುಚ್ಚಿ ಬಿಡುವುದರಲ್ಲಿ ತಂದು ಕೊಟ್ಟೆವು. ಅತ್ತೆ ಚೂಪಾದ ಕೂಡಗೋಲಿನಿಂದ ನಯವಾಗಿ ಗಿಡಗಳಿಗೆ ಹಾನಿಯಾಗದಂತೆ ಹರಿಶಿಣ, ಶುಂಠಿಯನ್ನು ತೆಗೆದು ತೋರಿಸಿದರು. “ಇನ್ನು ಸ್ವಲ್ಪ ತೋರಿಸಿ” ಎಂದಾಗ “ನಿಮ್ಮ ದೊಡ್ಡಜ್ಜಿ ಬಂದರೆ ಕೋಲಲ್ಲೇ ತೋರಿಸ್ತಾರೆ” ಅಂದರು. ಆದರೆ ಯಾಕೋ ಏನೋ ಅವರ ಮನಸ್ಸಿನಲ್ಲಿ ಎನನ್ನಿಸಿತೋ ಊಟ ಖಾಲಿಯಾಗಿ ತೊಳೆದು ಇಟ್ಟಿದ್ದೀವಲ್ಲ ಆ ಬಾಕ್ಸ್ ತೆಗೆದುಕೊಂಡು ಬನ್ನಿ ಎಂದರು. ನಾವೆಲ್ಲ ಹೊರೆಟೆವು. ಅತ್ತೆ ನಮ್ಮನ್ನು ಕಂಡು “ಈ ಮೆರವಣಿಗೆ ಬೇಕಾ ಯಾರದರು ಒಬ್ಬರು ಹೋಗಿ” ಅಂದರು. ಆ ಮಾತಿನ ಧಾಟಿಗೆ ಅದರಿ ಅಲ್ಲಾಡಿದಂತೆ ನಾವಿದ್ದರೂ ನಮಗೆ ಮನಸ್ಸಿನಲ್ಲಿ ತಡೆಯಲಾಗದ ನಗು ನಗು. ಅತ್ತೆ ಹರಿಶಿಣವನ್ನು, ಶುಂಠಿಯನ್ನು ಬಗೆದು ಬಗೆದು ಬಾಕ್ಸ್ನಲ್ಲಿ ತುಂಬಿಸುತ್ತಿದ್ದರೆ  ನಮಗೆ ನಗು ಮತ್ತು ಹೆದರಿಕೆ ಒಟ್ಟೊಟ್ಟಿಗೆ ಆಗುತ್ತಿತ್ತು. ಮರು ಮಾತನಾಡದೆ ಅತ್ತೆ ಬಾಕ್ಸ್ ತುಂಬಿದ ಮೇಲೆ ಎತ್ಲಾರದಂತೆ ತೆಗೆದುಕೊಂಡು ಹೋಗಿ ಅಜ್ಜಿಯ ಬಳಿ ಕುಕ್ಕರಿಸಿ ಬಂದರು.

            ಹಾಗೆ ನಮ್ಮ ಬಳಿಗೆ ಬಂದವರೆ “ಹರಿಶಿಣ ಫ್ರೆಶ್ ಆಗಿದೆ ಹಾಲಲ್ಲಿ ಅರೆದು ಹಚ್ಚಿಕೊಂಡರೆ ಮುಖ  glove ಆಗುತ್ತೆ  ಗೊತ್ತ” ಎಂದರು. “ಶುಂಠಿನೂ ಹಾಗೆ ಮಾಡಬೇಕ?” ಎಂದು ಇನ್ನೊಬ್ಬರಿಂದ ಮರು ಪ್ರಶ್ನೆ ಬಂತು. ಅತ್ತೆ ಅದೆಲ್ಲ ಇರಲಿ ಬೆಟ್ಟಕ್ಕೆ ಹೋಗ್ಬೇಕೋ ಬೇಡ್ವೋ ಎಂದರು. ಹೂ ಸರಿ ಸರಿ ಎಂದು ಬೇಗನೆಹೆಜ್ಜೆ ಹಾಕಿದೆವು. ನಮಗೆ  ಆ ಗದ್ದೆ ಬಯಲಿನಲ್ಲಿ ತೆಂಗಿನ ಅಡಿಕೆ ತೋಟಗಳ ನಡುವೆ ಅಜ್ಜನ ಮನೆಗೆ ಬಂದ ಕಾರಣಕ್ಕೆ ಹಾಕಿಕೊಂಡಿರುವ ಕಾಲುಗೆಜ್ಜೆ, ಪುಟ್ಟ ಹ್ಯಾಂಗಿಗ್ಸೆಗಳನ್ನು ಕುಣಿಸಿಕೊಂಡು ಅಲುಗಾಡಿಸಿಕೊಂಡು ವೇಲ್ಗಳನ್ನು ಮತ್ತೆ ಮತ್ತೆ ಸರಿಮಡಿಕೊಂಡು ಹೋಗುವುದೇ ಸಂಭ್ರಮವಾಗಿತ್ತು. ದೂರಕ್ಕೆ ಚಿಕ್ಕದಾಗಿ ಕಾಣುತ್ತಿದ್ದ ಅ ಬೆಟ್ಟ ಹತ್ತಿರ ಹೋದಂತೆ ದೊಡ್ಡದು, ದೊಡ್ಡದು ಅನ್ನಿಸುತ್ತಿತ್ತು.

            ಬೇಗ ಬೇಗ ಹತ್ತಿ ಮನಗೆ ಹೋಗಿ ಮತ್ತೆ ಕೆಲಸ ಇದೆ ಧನುರ್ಮಾಸದ ಪೂಜೆ ಬೇರೆ ಬನ್ನಿ ಎಂದರು. ಹೊರಟಾಗ ಇದ್ದ ಖುಷಿ ಬೆಟ್ಟ ಹತ್ತುವಾಗ ಇರಲಿಲ್ಲ. ಆದರೂ ಹೇಗೊ ಸಾಹಸದ ದಂಡಯಾತ್ರೆ ಎಂಬಂತೆ ಗುಡಿಯ ಮುಂಭಾಗ ತಲುಪಿದೆವು. ಬಾಗಿಲು ಕಡೆ ನೋಡಿದರೆ ಎರಡೆರಡು ಬೀಗ ಹಾಕಿದ್ದರು. ಅತ್ತೆ ಇದೇ ಬೆಟ್ಟ  ರಂಗನಾಥಸ್ವಾಮಿ ಬೆಟ್ಟ ನೋಡಿದ್ರಾ ಇಳಿರಿ ಎಂದರು. ನಮಗೆ ಕುತೂಹಲ ಗರ್ಭಗುಡಿಯ ಸುತ್ತು ಬಂದರೆ ಗುಡಿಯ ಪೂರ್ವಕ್ಕೆ ನಮ್ಮ ಹಳ್ಳಿ ಹುಲಿಕಲ್ ಕಾಣುತ್ತಿತ್ತು. ಜೊತೆಗೆ ಶ್ರೀನಿವಾಸ ದೇವಾಲಯದ ರಾಜ ಗೋಪುರ. ಸುಮ್ಮನೆ ಎಲ್ಲಿ? ಎಲ್ಲಿ? ಹುಡುಕೋಣ! ಎಂದು ನಿಂತೆವು. ಅತ್ತೆ ಬಿಡಲಿಲ್ಲ ಈಗ ಕೋಲು ತೆಗೆದುಕೊಂಡು ತೋರಿಸುತ್ತೇನೆ ಎಂದರು. ನಮ್ಮಗಲ್ಲಿ ಕಂಡಿದ್ದು ಕಾಗೆಗಳು ತಿನ್ನಲಾರದ ಮೆಣಸಿನ ಕಾಯಿ, ಕರೀಬೇವು, ಕಡಲೇಬೀಜ, ಉದ್ದನೆಯ ಕೊಬ್ಬರಿ ತುರಿ ಇತ್ಯಾದಿ ಎಲ್ಲ ಪುಳಿಯೋಗರೆಯ ಅವಶೇಷ.

            ಹತ್ತುವಾಗ ಆದ ಕಷ್ಟ ಇಳಿಯುವಾಗ ಆಗಲಿಲ್ಲ. ಬೇಗನೆ ಬಂದರೂ ಮುಸ್ಸಂಜೆ ಅವರಿಸಿದ ಕಾರಣ ಅಜ್ಜಿ ನಮಗಲ್ಲ ಅತ್ತೆಯನ್ನು ಬಯ್ಯಲು ಪ್ರಾರಂಭಿಸಿದರು. “ನೀನು ಅವರುಗಳ ಜೊತೆ ಕುಣಿಯುತ್ತಾ ಇದ್ದೀಯಲ್ಲ” ಎಂದು ಗದರಿದರು. ನಾವೆಲ್ಲ ಸೇರಿ “ಅವರಲ್ಲ ನಾವೇ ಕರೆದುಕೊಂಡು ಹೋಗಿದ್ದು” ಎಂದೆವು ಅಜ್ಜಿ ಹೌದಾ ಅವಳಲ್ವ ಕುಣಿಸಿದ್ದು ನಿವಾ?” ಎಂದರು ನಮಗೆ ನಗು ಬಂದು “ಅಜ್ಜಿ ಎಷ್ಟು ಚೆನ್ನಾಗಿ ಮಾತಾನಾಡ್ತೀರಾ ………….. “ಎಂದೆವು. ಅಜ್ಜಿ  “ಅದು ಸರಿ ದೇವಸ್ಥಾನಕ್ಕೆ ಹೋಗಿದ್ರಲ್ಲ ಏನು ಸಿಕ್ಕಿತು?” ಎಂದರು ನಾವು ಏನು ಇಲ್ಲ ಅಂದರೆ ತಕ್ಷಣ “ಹಣ್ಣಿಲ್ಲ ಕಾಯಿಲ್ಲ ಬಾ ನನ್ನ ಗುಡಿಗೆ ತೀರ್ಥ ಇಲ್ಲ ಪ್ರಸಾದ ಇಲ್ಲ ಹೋಗು ನಿನ್ನ ಮನೆಗೆ ಅಂತಾರಲ್ಲ ಹಾಗಾಯ್ತು ನಿಮ್ಮ ಕತೆ” ಎಂದರು.

            ಸರಿ ಎಂದು ಎತ್ತಲಾರದ ದೊಡ್ಡ ಊಟದ ಬಾಕ್ಸ್ ಎತ್ತಿ ಪಕ್ಕದವರ ಸೈಕಲ್ ಮೇಲೆ ಏರಿಸಿದರು ಅತ್ತೆ. ಮನೆ ಕಡೆಗೆ ಹೆಜ್ಜೆ ಹಾಕುತ್ತಿರುವಾಗ ಅಜ್ಜಿ ಅತ್ತೆಯನ್ನು ಕುರಿತು  ಅದೆಷ್ಟು ಕೆ.ಜಿ. ಹಿಡಿಸುತ್ತೆ ಬಾಕ್ಸ್ ಎಂದರು ೧೨.ಕೆ.ಜಿ.ಬಾಕ್ಸ್ ಎಂದರು ಅತ್ತೆ. ಅವರಿಬ್ಬರಿಗೂ ಬಹಳ ಖುಷಿ. ಹರಿಶಿಣ, ಶುಂಠಿ ಸಿಕ್ಕಿತಲ್ಲ ಎಂಬ ಕಾರಣಕ್ಕೆ. ಅಜ್ಜನ ಮನೆ ಬಂತು ಜೋಪಾನವಾಗಿ ಅತ್ತೆ ಬಾಕ್ಸ್ನ್ನು ಇಳಿಸಿಕೊಂಡು ತುಟಿಕಚ್ಚಿಕೊಂಡು ಎತ್ತಿಕೊಂಡು ನೇರ ಅಡುಗೆ ಮನೆಗೆ ತೆಗೆದುಕೊಂಡು ಹೋಗಿ ಇರಿಸಿದರು. ಅಜ್ಜಿ “ಏ ಹುಳಿ ಹಾಕಬೇಕು ಪಾತ್ರೆಗೆ ಒಳಗೆ ಇಡ್ತಾ ಇದ್ದೀಯ” ಎಂದರು. “ಅಚೆ ಇಟ್ಟರೆ ನೋಡ್ತಾರೆ ………….”ಎಂದು ದೊಡ್ಡಜ್ಜನ ಮನೆ ಕಡೆ ಬೆರಳು ತೋರಿಸಿದರು ಅಜ್ಜಿ ಬಾಯಿಬಿಡಲಿಲ್ಲ.

            ಸರಿ ಎಂದು ಆಗ ತಾನೆ ಕರೆದುತಂದ ನೊರೆ ಹಾಲಿನಲ್ಲಿ ಕಾಫಿ ಮಾಡಿದರು. ಅತ್ತೆ ಜೊತೆಗೆ ತಿನ್ನಲು ಅವಲಕ್ಕಿ ಸಂಡಿಗೆಯನ್ನು ಎಣ್ಣೆಯಲ್ಲಿ ಕರಿಯುತ್ತಿದ್ದರು. ಅಷ್ಟರಲ್ಲಿ ದೊಡ್ಡಜ್ಜಿಯ ಪ್ರವೇಶವಾಯಿತು. “ಕರೀಬೇವು ಇದ್ರೆ ಕೊಡು ಸಾಂಬಾರಿಗೆ ಒಗ್ಗರಣೆ ಹಾಕಬೇಕು”  ಎಂದರು. ಒಳಗೆ ಅತ್ತೆ “ದೊಡ್ಡ ಕರಿಬೇವಿನ ಮರ ಗದ್ದೆ ಹತ್ತಿರ ಇದ್ದರೂ ನಮ್ಮನ್ನು ಕೇಳಕೆ ಬರ್ತೀರಲ್ಲ ಅದಕ್ಕೆ ಸರಿಯಾಗಿ ಮಾಡಿದ್ದೀವಿ” ಎಂದು ಮೆಲ್ಲಗೆ ಹೇಳಿದರು ದೊಡ್ಡಜ್ಜಿ ಏನೊ ಕೇಳಿದಂತಾಗಿ “ಏನಂದೆ” ಎಂದರು. ಅದಕ್ಕೆ ಅತ್ತೆ “ನಿಮ್ಮದು ಅಡುಗೆನೂ ಆಯ್ತು ನಮ್ಮದು ಏನು ಆಗಿಲ್ಲ ನಾಳೆ ಬೆಳಿಗ್ಗೆ ಬೇಗನೆ ದೇವಸ್ಥಾನಕ್ಕೆ ಬೇರೆ ಹೋಗಬೇಕು” ಎಂದರು. “ಈ ಮಕ್ಕಳು ಕೆಲಸ ಕೊಡುತ್ತಾರೆ”. ಅದಕ್ಕೆ ದೊಡ್ಡಜ್ಜಿ“ಏನು ಮಾಡ್ತೀಯ ಅಪರೂಪಕ್ಕೆ ಬಂದಿದ್ದಾವೆ ಮಕ್ಕಳು ನಿಧಾನಕ್ಕೆ ಮಾಡ್ಕೊ” ಎಂದರು. ಅಷ್ಟರಲ್ಲಿ ನಮ್ಮಜ್ಜಿ “ಕೂತ್ಕೊಳಿ ಕಾಫಿ ತಗೊಳಿ” ಎಂದರೆ ದೊಡ್ಡಜ್ಜಿ ಮರು ಮಾತನಾಡದೆ ಕಾಫಿ ಕುಡಿದು ಕರಿದ ಪದಾರ್ಥಗಳನ್ನು “ಮನೆಯಲ್ಲಿಯೇ ತಿನ್ನುತ್ತೇವೆ” ಎಂದು ಬಟ್ಟಲು ಸಹಿತ ತೆಗೆದುಕೊಂಡು ಹೊರಟರು. ಅಗ ಅತ್ತೆ ಅದಕ್ಕೆ! ಅದಕ್ಕೆ! ಅಂದರು. ನಮಗೆ ನಗು ಬಂದರೂ  ಸಹಿಸಿಕೊಂಡೆವು. ಅಜ್ಜ ಬಂದ ಮೇಲೆ ದೇವಸ್ಥಾನಕ್ಕೆ ಹೋಗುವವರು ಯಾವಾಗ ಹೋಗಬೇಕು, ಏನು ತೆಗೆದುಕೊಂಡು ಹೋಗಬೇಕು ಇತ್ಯಾದಿ ಇತ್ಯಾದಿ ಮಾತನಾಡುತ್ತಿದ್ದರು. ಅವತ್ತಿನ ಆ ಮಾತುಗಳು  ಅಜ್ಜನ ಧ್ವನಿ ಈಗಲೂ ಕಿವಿಯಲ್ಲಿ ಮಾರ್ಧನಿಸುತ್ತಿದೆ. ಇನ್ನೊಮ್ಮೆ ಬೇಸಿಗೆ ರಜೆ ಬಂದಾಗ ಹೋಗಬೇಕು ಅಂದುಕೊಂಡೆವು. ಎಷ್ಟೋ ಬೇಸಿಗೆ ರಜೆ ಕಳೆದಿವೆ. ರಂಗನಾಥಸ್ವಾಮಿ ಬೆಟ್ಟವಿರುವ ಕಬ್ಬಳಿಗೆರೆಗೆ ಈಗ ಚಂದದ ರಸ್ತೆಗಳಾಗಿವೆ. ಬೆಟ್ಟ ಹತ್ತಲು ಡಾಂಬರು ರಸ್ತೆ ಮಾಡಿದ್ದಾರೆ. ಆದರೆ ಬೆಟ್ಟಕ್ಕೆ ಹೋಗ್ತೇವೆ ಎಂದು ಹೇಳಲು ಅಜ್ಜ ಅಜ್ಜಿ ಇಲ್ಲ ಕರೆದು ಕೊಂಡು ಹೋಗಲು ಅತ್ತೆಯಿಲ್ಲ. ಆಕೆ ಮೊಮ್ಮಕ್ಕಳನ್ನು ಕಾಣುವ ತವಕದಲ್ಲಿದ್ದಾಳೆ. ಇನ್ನು ನಾವು ನಾವೆ ……….. ಹೋಗುತ್ತೇವೆ. ಈ ಬಾರಿ ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ.

***********************************************

 

Leave a Reply

Back To Top