ಅಂಕಣಬರಹ
ಅದುಮಿಟ್ಟ ಮನದ ಮಾತುಗಳು
ಕವಿತೆಗಳಾದಾಗ
ಪುಸ್ತಕ- ಸಂತೆ ಸರಕು
ಕವಿ- ಬಿ ಎ ಮಮತಾ ಅರಸೀಕೆರೆ
ಪ್ರಕಾಶನ- ನಾಕುತಂತಿ
ಬೆಲೆ- ೮೦/-
ಸಿದ್ಧ ಸೂತ್ರ ಬದಲಾಗಬೇಕು
ಅಜ್ಜಿ ಕಥೆಯಲ್ಲಿ
ಅರಿವು ಜೊತೆಯಾಗಬೇಕು
ಹೊಸ ಕಥೆಗಳ ಬರೆಯಬೇಕು
ಅಕ್ಷರ ಲೋಕದಲಿ
ಅಕ್ಷರ ಲೋಕದಲ್ಲಿ ಬದಲಾವಣೆ ಬಯಸುವ ಮಮತಾ ಆಡಲೇ ಬೇಕಾದ ಮಾತುಗಳೊಂದಿಗೆ ನಮ್ಮೆದುರಿಗಿದ್ದಾಳೆ. ಮಮತಾ ಅಂದರೇ ಹಾಗೆ. ಹೇಳಬೇಕಾದುದನ್ನು ಮನದೊಳಗೇ ಇಟ್ಟುಕೊಂಡಿರುವವಳಲ್ಲ. ಹೇಳಬೇಕಾದುದ್ದನ್ನು ಥಟ್ಟನೆ ಹೇಳಿಬಿಡುವವಳು. ಆ ಮಾತಿನಿಂದ ಏನಾದರೂ ವ್ಯತಿರಿಕ್ತವಾದರೆ ನಂತರದ ಪರಿಣಾಮಗಳ ಬಗ್ಗೆ ಕೊನೆಯಲ್ಲಿ ಯೋಚಿಸಿದರಾಯಿತು ಎಂದುಕೊಂಡಿರುವವಳು. ಹೊಸದಾಗಿ ನೋಡುವವರಿಗೆ ಇದ್ಯಾಕೆ ಹೀಗೆ ಎಂದು ಅಚ್ಚರಿಯಾದರೂ ಜೊತೆಗೇ ಇರುವ ನಮಗೆ ಇದು ಅತ್ಯಂತ ಸಹಜ. ಏನಾದರೂ ಒಂದು ಘಟನೆ ನಡೆದಾಗ ಅದಕ್ಕೆ ಮಮತಾ ತಕ್ಷಣ ಪ್ರತಿಕ್ರಿಯಿಸದೇ ಇದ್ದರೆ ಮಮತಾ ಎಲ್ಲಿ? ಆರಾಂ ಇದ್ದಾಳೆ ತಾನೆ? ಎಂದು ಸ್ನೇಹಿತ ಬಳಗದಲ್ಲಿ ಕೇಳಿಕೊಳ್ಳುವಷ್ಟು ಅವಳು ಶೀಘ್ರ ಉತ್ತರ ನೀಡುವವಳು. ಹೀಗಾಗಿ ಮಮತಾ ತಮ್ಮ ಈ ಸಂಕಲನದಲ್ಲಿ ಹೀಗೆ ನೇರಾನೇರ, ಎದೆಗೆ ಢಿಕ್ಕಿ ಹೊಡೆಯುವ ಅನೇಕ ಸಾಲುಗಳೊಂದಿಗೆ ನಮಗೆ ಎದುರಾಗುತ್ತಾರೆ.
ನಿನಗೆ ನೀನೆ ಕತೆಯಾಗುವುದ
ನಿಲ್ಲಿಸಿ ಬಿಡಲಾಗದೇನೆ ಸಖಿ
ಸಾಕು ಮಾಡಲಾಗದೇನೆ
ಅವನ ಹಂಬಲಿಕೆ
ಬರೀ ನಿನ್ನದೇ ಬಿಕ್ಕಳಿಕೆ
ಎಂದು ಪ್ರಾರಂಭವಾಗುವ ‘ಅವತಾರಗಳು’ ಎಂಬ ಕವಿತೆ ಆದಿಯಿಂದ ಹಿಡಿದು ಇಡೀ ಪುರಾಣಗಳನ್ನು ಜಾಲಾಡಿ ಹೆಣ್ಣಿನ ಕಣ್ಣೀರನ್ನು ಹುಡುಕುವ ಪ್ರಯತ್ನ ಮಾಡುತ್ತದೆ. ಇಡೀ ಪುರಾಣ, ಭಾರತದ ಇತಿಹಾಸದ ತುಂಬೆಲ್ಲ ಹೆಣ್ಣಿನ ಬಿಕ್ಕಳಿಕೆಯ ನೋವುಗಳೇ ತುಂಬಿದೆ. ಕಣ್ಣಿಗೆ ಕಾಣದ ಸಂಪ್ರದಾಯಗಳ ಹೊರೆ ಇರುವ ಲಕ್ಷ್ಮಣರೇಖೆ ಎಲ್ಲಾ ಹೆಣ್ಣುಗಳ ಸುತ್ತಲೂ ಆವರಿಸಿಕೊಂಡಿದೆ. ಅದನ್ನು ಮೀರಿದರೆ ಅನರ್ಥ ಎಂದು ಆ ಕಾಲದಿಂದಲೂ ಹೆಣ್ಣನ್ನು ಬಲವಂತವಾಗಿ ನಂಬಿಸುತ್ತ ಬರಲಾಗಿದೆ. ಮತ್ತು ಆಗುವ ಎಲ್ಲಾ ಅನಾಹುತಗಳಿಗೂ ಹೆಣ್ಣೇ ಕಾರಣ ಎಂದು ಪ್ರಪಂಚವನ್ನು ಒಪ್ಪಿಸುತ್ತಲೇ ಬಂದಿದೆ ಈ ಪುರುಷಪ್ರಧಾನ ಸಮಾಜ. ಹೆಣ್ಣು ಮಾತನಾಡಿದರೆ ತಪ್ಪು, ಹೆಣ್ಣು ನಕ್ಕರೆ ತಪ್ಪು, ಹೆಣ್ಣು ಏನಾದರೂ ಆಸೆಪಟ್ಟರೆ ತಪ್ಪು, ಕೊನೆಗೆ ಹೆಣ್ಣು ಅತ್ತರೂ ತಪ್ಪು. ಆಕೆ ಗಂಡು ಆಡಿಸಿದಂತೆ ಆಡುವ ಗೊಂಬೆ ಅಷ್ಟೇ. ಆತ ಏನು ಹೇಳಿದರೂ ಮರು ಮಾತನಾಡದೇ ಒಪ್ಪಿಕೊಳ್ಳಬೇಕಾದ ಜೀವವಿರುವ ವಸ್ತು. ಆತನ ಮನೆ, ಹೊಲಗದ್ದೆ, ಬೈಕು, ಕಾರು ಮತ್ತು ಉಳಿದೆಲ್ಲ ಐಶಾರಾಮಿ ವಸ್ತುಗಳಂತೆಯೇ. ನಿರ್ಧಾರ ತೆಗೆದುಕೊಳ್ಳಬೇಕಾದವನು ಅವನು ಮತ್ತು ಅದರ ಬಗ್ಗೆ ಏನೂ ಕೇಳದೆ ಜಾರಿಗೆ ತರಬೇಕಾದವಳು ಮಾತ್ರ ಅವಳು. ಬದುಕಿನಲ್ಲಿ ತನ್ನಷ್ಟೇ ಅವಳೂ ಮುಖ್ಯವಾದವಳು ಎಂಬುದನ್ನು ಕನಸಿನಲ್ಲೂ ಯೋಚಿಸದ ಆತ ತನ್ನಷ್ಟಕ್ಕೆ ತಾನು ತೆಗೆದುಕೊಳ್ಳುವ ಏಕಮುಖಿ ನಿರ್ಧಾರಗಳಿಗೆ, ಜೀವನದ ಮಹತ್ವದ ತೀರ್ಮಾನಗಳಿಗೆ ಆಕೆ ಬದಲು ಮಾತನಾಡದೇ ಒಪ್ಪಿಕೊಳ್ಳಬೇಕು. ‘ಪ್ರೀತಿಸುತ್ತೇನೆ ಬಾ’ ಎಂದರೆ ಹರಕೆಯ ಕುರಿಯಂತೆ ಹತ್ತಿರ ಬರಬೇಕು, ‘ನೀನು ನನಗೆ ಬೇಡ’ ಎಂದರೆ ಬದಲು ಹೇಳದೇ ದೂರ ಸರಿಯಬೇಕು. ಅದರಲ್ಲಿಯೇ ಆಕೆಯ ಶ್ರೇಯಸ್ಸಿದೆ ಎಂದು ಶತಶತಮಾನಗಳಿಂದ ಹೆಣ್ಣನ್ನು ಭ್ರಮೆಯಲ್ಲಿ ಇಡುತ್ತ ಬರಲಾಗಿದೆ. ಆಕೆ ಸಮಾನತೆಯ ಬಗ್ಗೆ ಮಾತನಾಡುವುದೇ ಅಪರಾಧ. ಹೀಗಾಗಿಯೇ
ಸಮಾನತೆಯ ಪ್ರತಿಭಟನೆ
ನಿನ್ನದಲ್ಲ ಜೋಕೆ
ಎಂದು ಅವಳನ್ನು ಎಚ್ಚರಿಸುತ್ತ ಆಕೆ ಏನಾದರೂ ಮಾತನಾಡಿದರೆ
ಚಾರಿತ್ರವಧೆ, ಆಸಿಡ್ ದಾಳಿ
ಕಲ್ಕಿಯ ಲೋಕದ ಕಾಣಿಕೆ
ಎಂಬಂತೆ ಅವಳನ್ನು ಜೀವಂತವಿರುವಾಗಲೇ ಸಾಯಿಸಿ ಬಿಡುತ್ತದೆ. ಆದರೆ ಈ ಗಂಡುಲೋಕದ ಲೆಕ್ಕಚಾರಗಳೇ ವಿಚಿತ್ರ. ಕುಸಿದು ಬಿದ್ದರೆ ಎತ್ತಲು ಹತ್ತಾರು ಕೈಗಳು ಸಹಾಯ ಬೇಡದೆಯೂ ಮುಂದೆ ಬರುತ್ತವೆ. ‘ಮೈದಡವಿ’ ಸಾಂತ್ವಾನ ಹೇಳುತ್ತವೆ. ಕೇಳದೆಯೂ ‘ಎದೆಗೊರಗಿಸಿಕೊಂಡು’ ಸಮಾಧಾನ ಹೇಳುತ್ತವೆ. ಇಂತಹ ಪುರಾಣ ಸೃಷ್ಟಿಕೃತ ಪುರುಶೋತ್ತಮರನ್ನು ನಾವು ಪ್ರತಿದಿನವೂ ಕಾಣುತ್ತಿದ್ದೇವೆ ಎಂದು ಕವಯತ್ರಿ ಅಭಿಪ್ರಾಯ ಪಡುತ್ತಾರೆ. ಪುರುಷ ಪ್ರಪಂಚದ ಈ ದ್ರಾಷ್ಟ್ಯಕ್ಕೆ ಹೆಣ್ಣಿನ ನವಿರು ಲೋಕ ನಲುಗಿಹೋಗಿದೆ.
ಕಣ್ಣಲ್ಲೇ ಅಳೆದು ಬಿಡುತ್ತೀರಿ
ಕರಾರುವಕ್ಕಾದ ಅಳತೆಗಳು
ಬೇಡವೇ ಬೇಡ ನಿಮಗೆ
ಯಾವುದೇ ಸಿದ್ಧ ಮಾಪಕಗಳು
ಬಾಯಿತುಂಬಾ ಚಪ್ಪರಿಸುತ್ತೀರಿ
ಮತ್ತೆ ಮತ್ತೆ ಸವಿಯುತ್ತೀರಿ
ಅದೆಷ್ಟು ತೆವಲೋ
ಅದೇ ಧ್ಯಾನ ಅದೇ ಉಸಿರು
ರಸಗವಳವೇ ಅಂಗಾಂಗಗಳ ಹೆಸರು
ನಯವಾದ ರೇಷ್ಮೆ ಬಟ್ಟೆಯಲ್ಲಿ ಸುತ್ತಿಕೊಂಡು ಮತ್ತಗೆ ಭಾರಿಸಿದಂತಹ ಈ ಸಾಲುಗಳು ನೀಡುವ ಮೂಕೇಟು ಅತ್ತಯಂತ ಕಠೋರವಾದವುಗಳು. ರಕ್ತ ಹೊರಬರಲಾರದು. ಆದರೆ ಒಳ ಏಟಿಗೆ ಚರ್ಮ ನೀಲಿಗಟ್ಟುವುದನ್ನು ತಡೆಯಲಾಗದು. ಆದರೆ ಈ ಏಟು ತಮಗೇ ನೀಡಿದ್ದು ಎಂದು ಈ ಸಮಾಜ ಅರ್ಥ ಮಾಡಿಕೊಳ್ಳಬೇಕು ಅಷ್ಟೇ. ಪುರುಷರ ತವಲಿಗೆ ಇನ್ನೊಂದು ಪದ ಬೇಡ. ದೀಪ ಮತ್ತು ಕಲಣಿವೆ ಎನ್ನುವ ಕವಿತೆಯನ್ನೋದಿದರೆ ಈ ಪುರುಷ ವಿಕೃತಿಯ ಭೂತೋಚ್ಛಟನೆ ಆಗುವುದಂತೂ ಸತ್ಯ. ಆದರೆ ಕವನ ಓದಿ ಸಮಾಜ ಬದಲಾಗುತ್ತದೆಯೇ? ಬದಲಾಯಿಸುವ ಅವಕಾಶ ಸಿಕ್ಕರೆ ಎಲ್ಲವನ್ನು ಬದಲಿಸಿಬಿಡಬಹುದಿತ್ತು ಎನ್ನುವ ಕವಯತ್ರಿಯ ಮನದಾಳದ ಮಾತು ಇಲ್ಲಿ ಕವಿತೆಯಾಗಿದೆ
ಸದ್ಯ
ಮೂರನೇ ಕಣ್ಣು
ಕೊಡಲಿಲ್ಲ ಪ್ರಭುವೆ
ಶಾಪಗಳೂ ಕೂಡ ಫಲಿಸಲಾರವು
ಹಾಳಾಗಿ ಹೋಗಲಿ ಎಂದು ನಾವು ನೀಡುವ ಶಾಪ, ಬೆನ್ನ ಹಿಂದಿನ ಬೈಗುಳಗಳು ಈ ಮಾನಗೆಟ್ಟವರನ್ನು ಏನೂ ಮಾಡದು ಎನ್ನುವ ಪರಿಜ್ಞಾನ ಅವರಿಗಿದೆ. ಹೀಗಾಗಿಯೇ ಮಮತಾ ಮತ್ತೆ ಮತ್ತೆ ಅಕ್ಕನನ್ನು ಆತುಕೊಳ್ಳುತ್ತಾರೆ
ಹಾದಿಯಲಿ ಹೆಜ್ಜೆ ಗುರುತು ಬೇಡ
ಗೆಜ್ಜೆ ಸದ್ದು ಕೇಳದಾದೀತು
ನಾ ನಿನ್ನ ಹಿಂಬಲಿಸುವ
ಹಂಬಲ ಬೇಡ
ಅಕ್ಕನ ಕಾಂಬ ಗುರಿ
ಮಾಸಿ ಹೋದೀತು
ಎನ್ನುತ್ತಾರೆ. ತನ್ನ ಹಾದಿಯಲ್ಲಿ ತಾನು ದೃಢವಾಗಿ ಹೆಜ್ಜೆ ಇಡುತ್ತಿರುವಾಗ ತನ್ನ ಹಾದಿಯಲ್ಲಿ ಬಂದರೆ ಗೆಜ್ಜೆ ಸದ್ದು ಕೇಳದಾಗುತ್ತದೆ ಎನ್ನುವುದಲ್ಲದೇ ಯಾವುದೇ ಕಾರಣಕ್ಕೂ ತಾನು ಅವನನ್ನು ಹಿಂಬಾಲಿಸುವ ಗುರಿ ಹೊಂದಿಲ್ಲ ಎನ್ನುತ್ತಾರೆ. ಯಾಕೆಂದರೆ ಅವರ ಗುರಿ ಒಂದೆ. ಅಕ್ಕನ ಹಾದಿಯಲ್ಲಿ ನಡೆದು ತಮ್ಮ ಜೀವನಕ್ಕೆ ತಾನು ಜವಾಬ್ಧಾರರೆನ್ನುವವರನ್ನು ಒಲೆಗಿಕ್ಕುವುದು. ಇದು ಮಾಮೂಲಿಯಾಗಿ ಬರುವಂಥಹುದ್ದಲ್ಲ. ಅದಕ್ಕೊಂದು ದಿಟ್ಟತನಬೇಕು. ಅಂತಹ ದೃಢತೆಗಾಗಿ ಮತ್ತೆ ಅಕ್ಕನನ್ನೇ ಮೊರೆ ಹೋಗಬೇಕು.
ಕಾಯುತಿವೆ ಜೀವಗಳು
ಜಿಗಿದು ಪರದೆಯಿಂದಾಚೆ
ಸೀಳಿ ಬಲೆಗಳನ್ನು
ಅಕ್ಕ ಹೇಳೆ
ನೀನ್ಹೇಗೆ ದಾಟಿದೆ
ಬಂಧನದ ಸುಳಿಗಳನ್ನು
ಎನ್ನುತ್ತ ಈ ಸಂಬಂಧಧ ಸುಳಿಗಳು ಮೇಲೇಳಲು ಪ್ರಯತ್ನಿಸಿದಷ್ಟೂ ಒಳಗೆಳೆದುಕೊಂಡು ಮುಳುಗಿಸುವ ಚೋದ್ಯಕ್ಕೆ ಬೆರಗಾಗುತ್ತಾರೆ.
ಮನುಷ್ಯ ಸಂಬಂಧ ಯಾವತ್ತೂ ಕುತೂಹಲಕರವಾದದ್ದು. ಅದು ತಂದೆ ತಾಯಿಗಳೊಟ್ಟಿಗೆ ಇರುವ ಮಕ್ಕಳ ಸಂಬಂಧವಾಗಿರಬಹುದು, ಸಹೋದರ, ಸಹೋದರಿಯರ ನಡುವಣ ಬಂಧವಾಗಿರಬಹುದು ಗಂಡ ಹೆಂಡತಿಯ ನಡುವಣ ಸಂಬಂಧವಾಗಿರಬಹುದು. ಅಥವಾ ಸ್ನೇಹವಾಗಿರಬಹುದು ಇಲ್ಲವೇ ವ್ಯಾಖ್ಯಾನವೇ ಕೊಡಲು ಅಸಾಧ್ಯವಾದ ಪ್ರೇಮ ಸಂಬಂಧವಿರಬಹುದು. ಅವುಗಳಿಗೆ ಅರ್ಥ ಹಚ್ಚುವುದು ಅಸಾಧ್ಯವೇ ಸರಿ. ಮಮತಾ ಕೂಡ ‘ಮೇಲಾಟ’ ಕವನದ ಮೂಲಕ ಇಡೀ ಮನುಷ್ಯ ಸಂಬಂಧಗಳಿಗೆ ಕನ್ನಡಿ ಹಿಡಿದಿದ್ದಾರೆ. ಈ ಸಂಬಂಧಗಳ ಎಳೆ ಅದೆಷ್ಟು ಸೂಕ್ಷ್ಮ. ಕೆಲವೊಮ್ಮೆ ಎಂತಹ ಆಘಾತಗಳಿಗೂ ಕಿತ್ತು ಹೋಗದ ಸಂಬಂಧಗಳು ಒಮ್ಮೊಮ್ಮೆ ಸಣ್ಣ ಎಳೆದಾಟಕ್ಕೂ ತುಂಡಾಗಿ ಹೋಗುವ ನವಿರು ಎಳೆಗಳಂತೆ ಕಾಣುತ್ತದೆ. ಹಾಗಾದರೆ ಸಂಬಂಧಗಳು ಹದಗೊಳ್ಳುವುದು ಯಾವಾಗ? ಕವಯತ್ರಿಗೂ ಈ ಪ್ರಶ್ನೆ ಬೃಹದಾಕಾರವಾಗಿ ಕಾಡಿದೆ. ಹೀಗಾಗಿಯೇ ಸಂಬಂಧಗಳನ್ನು ಹದಗೊಳಿಸಲು ಬೇಯಲಿಡುತ್ತಾರೆ. ಕಾವು ಕೊಟ್ಟರೆ ಮಾತ್ರ ಮೊಟ್ಟೆಯೊಡೆಯುವ ಕ್ರೀಯೆಯಂತೆ ಹದವಾಗಿ ಕಾವು ಹೆಚ್ಚಿಸಿ ಒಂದು ಕುದಿತ ಬರಲಿ ಎಂದು ಕಾಯುತ್ತಾರೆ. ಇಲ್ಲಿ ಕವಿಯತ್ರಿ ಸಂಬಂಧವನ್ನು ಹದಗೊಳಿಸುವ ಪ್ರಕ್ರಿಯೆ ಅಕ್ಕಿಯನ್ನು ನೀರು ಹಾಕಿ ಕೊತಕೊತನೆ ಕುದಿಸುವ ಅನ್ನ ಮಾಡುವ ರೂಪಕದಂತೆ ಕಾಣುತ್ತದೆ. ಅನ್ನದ ಎಸರು ಕುದಿಯುವಾಗ ತಕತಕನೆ ಕುಣಿಯುತ್ತ ಮುಚ್ಚಿದ ತಟ್ಟೆಯನ್ನೇ ಬೀಳಿಸುತ್ತದೆ. ಸಂಬಂಧ ಗಟ್ಟಿಯಾಗುವಾಗಲೂ ಅಷ್ಟೇ. ಅದೆಷ್ಟು ಶಬ್ಧ, ಅದೆಷ್ಟು ರಾಣಾರಂಪ. ಕೆಲವೊಮ್ಮೆ ಈ ಸಂಬಂಧ ಮುರಿದೇ ಹೋಯಿತು ಎಂಬಷ್ಟು ಶಬ್ಧ ಮಾಡುತ್ತದೆ. ಆದರೆ ನಿಜವಾದ ಸಂಬಂಧಗಳು ಹಾಗೆ ಮುಗಿಯುವುದೂ ಇಲ್ಲ. ಚಿಕ್ಕಪುಟ್ಟ ಜಗಳಗಳಿಗೆ ಹೆದರುವುದೂ ಇಲ್ಲ. ಆದರೆ ಹಾಗೆಂದುಕೊಳ್ಳುವುದೂ ಕೆಲವೊಮ್ಮೆ ತಪ್ಪಾಗುತ್ತದೆ. ಏನೇನೂ ಮುಖ್ಯವಲ್ಲದ ವಿಷಯಗಳು ಸಂಬಂಧವನ್ನು ಮುರಿದ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣೆದುರಿಗೇ ಇವೆ. ಆದರೆ ಕೊನೆಗೂ ಒಂದು ಪ್ರಶ್ನೆ ಹಾಗೆಯೇ ಉಳಿದು ಹೋಗುತ್ತದೆ. ಅದನ್ನೇ ಮಮತಾ ಮುಖ್ಯವಾಗಿ ಎತ್ತಿ ತೋರಿಸುತ್ತಾರೆ. ಸಂಬಂಧಗಳಲ್ಲಿರುವ ಮೇಲಾಟ. ತಾನು ಹೆಚ್ಚು, ನಾನು ಹೆಚ್ಚು ಎನ್ನುವ ಅಹಂ ನಮ್ಮ ಸಂಬಂಧವನ್ನು ನುಂಗಿ ನೊಣೆಯುತ್ತದೆ. ಎಲ್ಲಿ ಅಹಂ ಹಾಗೂ ಸ್ವಾರ್ಥ ಇರುತ್ತದೋ ಅಲ್ಲಿ ಸಂಬಂಧಗಳು ಬಹುಕಾಲ ಬಾಳಲಾರವು. ಮತ್ಸರ ಹಾಗೂ ಅಸೂಯೆಗಳು ಸಂಬಂಧಗಳ ನಡುವೆ ಬೆಂಕಿ ಹಚ್ಚುತ್ತವೆ. ಎಲ್ಲಿ ತಾವೇ ಹೆಚ್ಚು ಎನ್ನುವ ಹೆಚ್ಚುಗಾರಿಕೆ ಇಬ್ಬರ ನಡುವೆ ಉಂಟಾಗುತ್ತದೋ ಅಲ್ಲಿ ಸಂಬಂಧ ಹಳಸಲಾಗುತ್ತದೆ. ಎಲ್ಲಿ ಒಬ್ಬರ ಉನ್ನತಿಯನ್ನು ಸಹಿಸಲಾಗದೇ ಹೊಟ್ಟೆಕಿಚ್ಚಿನ ಕಿಡಿ ಹೊಗೆಯಾಡುತ್ತದೋ ಅಲ್ಲಿ ಆ ಸಂಬಂಧ ಮುಕ್ತಾಯಗೊಳ್ಳುತ್ತದೆ ಎನ್ನುತ್ತಾರೆ. ತಕ್ಕಡಿಯಲ್ಲಿ ಒಂದು ತೂಕದ ಬಟ್ಟಲು ಒಮ್ಮೆ ಕೆಳಕ್ಕೆಳೆದರೆ ಮತ್ತೊಮ್ಮೆ ಇನ್ನೊಂದು ತೂಕದ ಬಟ್ಟಲು ಸೆಣೆಸಾಟಕ್ಕೆ ನಿಲ್ಲುತ್ತದೆ. ಕೆಳಗೆ ಜಗ್ಗುವ ಈ ಪ್ರಕ್ರಿಯೆ ನಿರಂತರ. ಇಷ್ಟಾಗಿಯೂ ಕವಯತ್ರಿ ಸಂಬಂಧಗಳನ್ನು ಸುಲಭವಾಗಿ ಬಿಟ್ಟುಕೊಡಲು ಒಪ್ಪುವುದಿಲ್ಲ. ಹೀಗಾಗಿ ಕಾದು ನೋಡುತ್ತೇನೆ ಎನ್ನುತ್ತಾರೆ. ಹಠಕ್ಕೆ ಬೀಳುವ ಸಂಬಂಧಗಳಿಗೆ ಹೊಸ ಸೂತ್ರ ಬರೆಯುತ್ತ ಏಣಿಯಾಗುವ ಮನಸ್ಸಿದೆ ಕವಯತ್ರಿಗೆ. ಸಂಬಂಧಗಳ ನಡುವೆ ಸೇತುವಾಗುವ ಹಂಬಲವಿದೆ. ರೂಪಕಗಳಲ್ಲಿ ಮಾತನಾಡುವ ಸಂಕಲನದ ಅತ್ಯುತ್ತಮ ಕವಿತೆಗಳಲ್ಲಿ ಇದೂ ಒಂದು ಎಂದು ನಿಸ್ಸಂದೇಹವಾಗಿ ಹೇಳಬಹುದು.
ಹಾಗೆಂದು ಯಾವ ಸಂಬಂಧಗಳೂ ಅನಿವಾರ್‍ಯವಲ್ಲ. ಅವು ಆಯಾ ಕಾಲದ ಆಯ್ಕೆಗಳಷ್ಟೇ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದವನು ಒಂದು ಮಾತನ್ನೂ ಹೇಳದೇ ಇಬ್ಬರಿಗೂ ಸೇರಿದ್ದ ಬದುಕಿನ ನಿರ್ಧಾರವನ್ನು ಒಬ್ಬನೇ ತೆಗೆದುಕೊಂಡು ಹೊರಟುಬಿಡುವಾಗ ನೋವಾಗುತ್ತದೆ ನಿಜ. ಆದರೆ ಕಾಲ ಆ ನೋವನ್ನು ಮರೆಸುವ ಶಕ್ತಿ ಹೊಂದಿದೆ. ವಿರಹವನ್ನೂ ಕಾಲದ ತೆಕ್ಕೆಗೆ ಒಪ್ಪಿಸಿಬಿಡಬಹುದು ಎನ್ನುವ ಭಾವದ ಕವಿತೆ ನನ್ನದೀ ಸಮಯ. ನಿಜ. ಅವನಿಗಾಗಿ ಕಾದು, ಕಾತರಿಸಿ, ಪರಿಪರಿಯಾಗಿ ಬೇಡಿಕೊಂಡರೂ ತನ್ನೊಬ್ಬನ ನಿರ್ಧಾರಕ್ಕೆ ಅಂಡಿಕೊಂಡವನಿಗಾಗಿ ಯಾವ ಸಮಯ ಕಾಯುತ್ತದೆ ಹೇಳಿ? ಹೀಗಾಗಿ
ಅನಿವಾರ್ಯವಲ್ಲ ಈಗ ನೀ ನನಗೆ ಗೆಳೆಯ
ಜೀವಭಾವಕೆ ಹೊಸ ಚೈತನ್ಯ ನನ್ನದೀ ಸಮಯ
ಎನ್ನುತ್ತ ತನಗಿಂತಲೂ ಮುಖ್ಯವಾದ ಗುರಿಯೊಂದನ್ನು ಹುಡುಕುವೆ ಎಂದು ಹೊರಟವನಿಗೆ ಪ್ರಸ್ತುತ ಅವನ ಸ್ಥಾನದ ಅರಿವು ಮಾಡಿಕೊಡುತ್ತಾರೆ. ಬದುಕಿನ ಗತಿ ಬದಲಾಗುತ್ತಿರುತ್ತದೆ. ಅಜ್ಜಿಯ ಕಥೆಯಲ್ಲಿ ಬರುವ ಒಕ್ಕಣ್ಣಿನ ರಾಕ್ಷಸ ಏಳುಮಲ್ಲಿಗೆ ತೂಕದ ರಾಜಕುಮಾರಿಯನ್ನು ಹೊತ್ತೊಯ್ದಾಗ ಏಳು ಸಮುದ್ರ ದಾಟಿ, ಏಳು ಸುತ್ತಿನ ಕೋಟೆಯೊಳಗಿಂದ ರಾಜಕುಮಾರಿಯನ್ನು ರಕ್ಷಿಸುವ ರಾಜಕುಮಾರ ಈಗ ಎಲ್ಲಿದ್ದಾನೆ? ಹಾಗೆ ಬೇರೆ ಯಾರಿಂದಲೋ ರಕ್ಷಿಸಿಕೊಳ್ಳಬೇಕಾದ ನಿರೀಕ್ಷೆಯಲ್ಲೂ ರಾಜಕುಮಾರಿ ಇರುವುದಿಲ್ಲ. ಯಾಕೆಂದರೆ ತನ್ನ ರಕ್ಷಣೆಯ ಹೊಣೆಯೂ ಅವಳದ್ದೇ. ತನ್ನನ್ನು ತಾನು ಸಂತೈಸಿಕೊಂಡು ನಿಭಾಯಿಸಿಕೊಳ್ಳಬೇಕಾದ ಹೊರೆಯೂ ಆಕೆಯದ್ದೇ. ಒಕ್ಕಣ್ಣಿನ ರಾಕ್ಷಸನೂ ಈಗ ಅದೆಲ್ಲೋ ಹಸಿರು ಗಿಣಿರಾಮನಲ್ಲಿ ಪ್ರಾಣವನ್ನಿಡುವುದಿಲ್ಲ. ಎನ್ನುತ್ತ ಎಲ್ಲವೂ ಬದಲಾದ ಕಥೆಯೊಂದನ್ನು ಎದುರಿಗಿಡುತ್ತಾರೆ. ಜಲಜಲನೆ ಧಾರೆಯಾಗುವ ಇಳೆ ಮೋಡವಾಗಿ ಮತ್ತೆ ಸೂರ್‍ಯನ ಕಾವಿಗೆ ಧರೆಗಿಳಿಯುವಾಗ ಎಲ್ಲ ಆಕೃತಿಗಳು ಬದಲಾಗುವಂತೆ ನಮ್ಮೆಲ್ಲರ ಬದುಕಿನ ಗತಿಗಳೂ ಆಗಾಗ ಬದಲಾಗುತ್ತವೆ ಎನ್ನುತ್ತಾರೆ. ತೆರೆದ ಹಾಗೂ ಮುಚ್ಚಿದ ಬಾಗಿಲಿನ ನಡುವೆ ಆಯ್ಕೆ ಮಾಡಿಕೊಳ್ಳಲು ಹತ್ತಾರು ಗೊಂದಲಗಳಿರುವುದು ಸಹಜ. ತರೆದ ಬಾಗಿಲು ಮುಚ್ಚದೇ, ಮುಚ್ಚಿದ ಬಾಗಿಲ ಹಿಂದೆ ಏನಿದೆ ಎಂಬ ಅರಿವಾಗದೇ ಗೊಂದಲದ ಗೂಡಾಗುವುದು ಎಲ್ಲರ ಬಾಲಿನಲ್ಲೂ ಸಹಜ. ಹಾಗೆ ನೋಡಿದರೆ ಈ ತೆರೆದ ಮತ್ತು ಮುಚ್ಚಿದ ಬಾಗಿಲುಗಳ ರಹಸ್ಯ ಬಿಡಿಸುವುದರಲ್ಲಿಯೇ ನಮ್ಮೆಲ್ಲರ ಜೀವಮಾನದ ಬಹುಕಾಲ ಸಮದುಹೋಗುತ್ತದೆ ಎಂಬುದು ಮಾತ್ರ ಸತ್ಯ. ಆದರೂ
ನಾ ಹಾಡುವ
ಭಾವಗೀತೆಗೆ
ನೀನೇ ಸಾಹಿತ್ಯ
ಹಾಡುವೆ ಪ್ರತಿನಿತ್ಯ
ಎನ್ನುವ ಪ್ರಣಯದ ಸಾಲುಗಳಿಗೆ ಇಲ್ಲೇನೂ ಬರ ಇಲ್ಲ. ಆದರೂ ಒಂಟಿತನದ ಸೆಳವನ್ನು ಮೀರುವುದಾದರೂ ಹೇಗೆ? ಒಂಟಿತನವೆಂಬುದು ಏನಿರಬಹುದು. ಹಾಗೆನೋಡಿದರೆ
ಒಂಟಿತನವೆಂದರೆ
ಕೈ ಚಾಚಿ
ತಪ್ಪಿ ಹೋದ ಪ್ರೀತಿ
ಇಲ್ಲೆಲ್ಲೋ ನಮ್ಮ ಪ್ರೀತಿಯಿದೆ ಎಂದು ಕೈ ಚಾಚಿಯೂ ಆ ಪ್ರೀತಿ ತಪ್ಪಿ ಹೋದರೆ? ಅಥವಾ ಅದು ಅರ್ಹ ಎಂದು ಅನ್ನಿಸದೇ ಹೋದರೆ?
ಒಂಟಿತನವೆಂದರೆ
ಆಪ್ತವಿಲ್ಲದ ಸಾಮಿಪ್ಯ
ಮಾತಿಲ್ಲದ ನಿಶ್ಯಬ್ಧ
ಒಂಟಿತನಕ್ಕೆ ಎಲ್ಲಿ ಆಪ್ತತೆ ಇರುತ್ತದೆ ಹೇಳಿ? ಅದು ಕೇವಲ ನಿಶಬ್ಧ. ನಮ್ಮೊಳಗೂ ನಾವು ಮಾತನಾಡಿಕೊಳ್ಳಲಾಗದ ನಿಶಬ್ಧ. ನಮ್ಮ ಮನದ ಮಾತನ್ನೂ ನಾವು ಆಲಿಸಲಾಗದ ಶಾಪ ಈ ಒಂಟಿತನ
ಒಂಟಿತನವೆಂದರೆ
ವಿನಾಕಾರಣ ಕಸಿವಿಸಿ
ಕೋಪ
ಕೊನೆಗೆ ಇದರ ಹೊರತಾಗಿ ಮತ್ತೇನೂ ಇಲ್ಲ. ಒಂಟಿತನ ನಮ್ಮನ್ನೇ ನಾವು ದಹಿಸಿಕೊಳ್ಳುವ ಕೋಪಕ್ಕೆ ನಮ್ಮನ್ನು ಈಡುಮಾಡುವ ಸತ್ಯವನ್ನು ಕವಯತ್ರಿ ಇಲ್ಲಿ ಮನಮುಟ್ಟುವಂತೆ ಹೇಳಿದ್ದಾರೆ.
ಕೊಲೆಯೂ ಒಂದು ಕಲೆ ಎನ್ನುವ ಕವನ ಇಡೀ ಸಂಕಲನದ ಹೈಲೈಟ್. ಕೊಲೆ ಮಾಡಲು ನಿರ್ಧರಿಸಿದ ಕವಯತ್ರಿಗೆ ಕೊಲೆ ಎಂದರೆ ಅದೊಂದು ಕಲೆಯಂತೆ ಗೋಚರವಾಗುತ್ತದೆ. ಹಂತಹಂತವಾಗಿ ಸಾಯಿಸುವ ಭಾವ ಹೊಂದಿದ್ದಲ್ಲದೇ ಸಾವು ಇಷ್ಟು ನಿರಾಳ ಎಂದೆನಿಸುವಂತಾಗಬಾರದು ಎನ್ನುತ್ತಲೇ ಯಾವುದೂ ಸುಲಭದಲ್ಲಿ ದಕ್ಕಬಾರದು ಎನ್ನುವ ಸಾಲಿನಲ್ಲಿ ಜೀವನದ ಪಾಕವಿದೆ. ಹಾಗಾದರೆ ಕವಯತ್ರಿ ಕೊಲ್ಲಬಯಸಿದ್ದಾದರೂ ಯಾರನ್ನು? ಯಾಕೆಂದರೆ ಕವಯತ್ರಿಗೆ ಕೊಲೆ ಮಾಡಲು ಸಾಕಷ್ಟು ತರ್ಕಗಲಿರುವಮತೆ ಕೊಲೆಯಿಂದ ತಪ್ಪಿಸಿಕೊಳ್ಳಲು ಬಹಳಷ್ಟು ಕೊಲೆಯಾಗುವವರಿಗೆ ಬಹಳಷ್ಟು ನೆವಗಳೂ ಇವೆ ಎಂಬುದೇ ಕುತೂಹಲಕಾರಿಯಾದದ್ದು. ಸಿಕ್ಕಸಿಕ್ಕವರನ್ನೆಲ್ಲ ಆಪೋಷಣ ತೆಗೆದುಕೊಳ್ಳುವ ಮಣ್ಣಿನ ವ್ಯಾಮೋಹವೂ ಈ ಕೊಲೆಯಲ್ಲಿರಬಹುದೇ?
ಕಾವಿ ದೇಹಕೆ
ಕಾವು ಬೇಕಾಗಿದೆ
ಕೊಲೆ ಸುಲಿಗೆಯೂ
ಸಹಜವಾಗಿದೆ
ಮನಸ್ಸು ಮನಸ್ಸುಗಳು ಮೂಕವಾಗಿದೆ
ಆದರೆ ಮಮತಾ ಮೂಕವಾಗದಿರಲಿ. ಅವಳ ಲೇಖನಿ ಒಂಟಿಯಾಗದಿರಲಿ. ಅವಳ ಬರವಣಿಗೆಯ ಹುಕಿ ಬತ್ತದಿರಲಿ.
ಕವಿಯೊಂದಿಗೆ ಅಂಕಣಕಾರರು
***********************************************************
ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು
ವಾವ್….ಒಂದೇ ಉಸಿರಿಗೆ ಓದಿಸಿಕೊಂಡ ಬರಹವಿದು.ಮಮತಾ ಅವರ ಮಾತಿನಂತೆ ಕವಿತೆಯಲ್ಲೂ ಆ ತೀವ್ರತೆಯಿರುವುದು ಮಾತ್ರವಲ್ಲಾ..ಅದನ್ನು ಆದ್ವಾದಿಸಿದ ಎನ್ನುವುದಕ್ಕಿಂತ ಎದೆಗಿಳಿಸಿಕೊಂಡ ಭಾವಗಳ ಅಭಿವ್ಯಕ್ತಿ ಕೂಡ ತೀವ್ರ..ನೇರ ಓದುಗನನ್ನು ನಿಲ್ಲಿಸಿ,ಓದಿಸಿ,ಸಂತೆಯ ಸರಕು ಕವನ ಸಂಕಲನ ಓದಿಬಿಡಬೇಕೆನಿಸುವಂತಿದೆ..ಬೇಗ ಓದುವೆ ಕವನ ಸಂಕಲನ.ಹೆಣ್ಣಿನ ವ್ಯಕ್ತಿತ್ವದ ಆಳ ಅಗಲ ಸೂಕ್ಷ್ಮ ಮತ್ತು ನೈಜ ಅಭಿವ್ಯಕ್ತಿ ಹೀಗೆ ಇರುತ್ತೆ ಅಂತ ಕಾಣುತ್ತೇನೆ.ಶ್ರೀದೇವಿ ಮತ್ತು ಮಮತಾ…ಇಬ್ಬರಿಗೂ ಧನ್ಯವಾದಗಳು
ಮಮತಾ ಅವರ ಕವನದ ಆಶಯ ಓದುಗರಿ ಚನ್ನಾಗಿ ಮುಟ್ಟಿಸಿದ್ದೀರಿ. ಒಳ್ಳೆಯ ಸಂಕಲನ ನೀಡಿದ ಮಮತಾ ಅವರಿಗೆ, ಪರಿಚಯಿಸಿದ ತಮಗೆ ಅಭಿನಂದನೆಗಳು.
ಉತ್ತಮ ಕವನ ಸಂಕಲನದ ಪರಿಚಯಮಾಡಿದೆ ಶ್ರೀ.., ಅಂಕಣ ಚೆನ್ನಾಗಿದೆ.