ಮದ್ಯಪಾನ ಮತ್ತು ಮಾದಕ ದ್ರವ್ಯಗಳ ನಿಷೇಧ

ಪ್ರಸ್ತುತ

      ಮದ್ಯಪಾನ ಮತ್ತು ಮಾದಕ

ದ್ರವ್ಯಗಳ ನಿಷೇಧದ ಕುರಿತು

ಮಹಾತ್ಮ ಗಾಂಧೀಜಿ

ಡಾ.ಎಸ್.ಬಿ. ಬಸೆಟ್ಟಿ

ಮಹಾತ್ಮ ಗಾಂಧೀಜಿಯವರು ಜನರು ಬಯಸುವ ಹಾನಿಕಾರಕ ಮತ್ತು ಅನಾವಶ್ಯಕ ಮಾದಕ ವಸ್ತುಗಳನ್ನು  ವಿರೋಧಿಸುತ್ತಿದ್ದರು. ಗಾಂಧೀಜಿಯವರು ತಂಬಾಕು ಮತ್ತು ಮಧ್ಯವನ್ನು ಜನರ ಆರೋಗ್ಯಕ್ಕೆ ಅತ್ಯಂತ ಹಾನಿ ಕಾರಕ ವಸ್ತುಗಳೆಂದು ಪರಿಗಣಿಸಿದ್ದರು ಜೊತೆಗೇ ಚಹಾ ಮತ್ತು ಕಾಫಿಯನ್ನು ಕೂಡಾ ಅನಾವಶ್ಯಕ ವಸ್ತುಗಳೆಂದು ಭಾವಿಸಿದ್ದರು. “ಬೆಂಕಿ ದೇಹವನ್ನು ನಾಶ ಮಾಡಿದರೆ, ಮದ್ಯ ಮತ್ತು ಮಾದಕ ವಸ್ತು ದೇಹ  ಮತ್ತು ಆತ್ಮ ಎರಡನ್ನೂ ನಾಶ ಮಾಡುತ್ತದೆ” ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದಾರೆ. ವೈದ್ಯರು, ಮದ್ಯಪಾನಿಯಗಳು ಮತ್ತು ಅಫೀಮು ವ್ಯಸನಿಗಳನ್ನು ಈ ಶಾಪದಿಂದ ಹೊರತರುವ ದಾರಿಗಳನ್ನು ಕಂಡುಹಿಡಿಯಬೇಕು. ಪ್ರೀತಿಯಿಂದ ಈ ವ್ಯಸನಿಗಳನ್ನು ತಮ್ಮ ಮಾತು ಕೇಳುವಂತೆ ಮಾಡಿ ಅದರ ಸೇವನೆಯಿಂದಾಗುವ ಕೆಡಕನ್ನು ಅವರಿಗೆ ಮನದಟ್ಟು ಮಾಡಿ ಕೆಟ್ಟ ಚಟವನ್ನು ಬಿಡುವಂತೆ ಮನವರಿಕೆ ಮಾಡಬೇಕು ಎಂದಿದ್ದರು.

ಮಾದಕ ವಸ್ತುಗಳಲ್ಲಿ ಹೊಗೆಸೊಪ್ಪು, ಭಂಗಿ, ಗಾಂಜಾ, ಅಫೀಮು, ಬ್ರಾಂದಿ, ವಿಸ್ಕಿ, ರಮ್ಮ, ಜಿನ್, ವೈನ್, ಶೇಂದಿ, ಸಾರಾಯಿ ಹೀಗೆ ಇನ್ನೂ ಹತ್ತು ಹಲವಾರು ಬಗೆಯ ವಸ್ತುಗಳು ಸೇರಿವೆ. ಇವುಗಳ ಅವಶ್ಯಕತೆ ನಮ್ಮ ಶರೀರಕ್ಕೆ ಖಂಡಿತಾ ಇಲ್ಲ. ಇವುಗಳಿಂದ ಶರೀರದ ಆರೋಗ್ಯ ಹಾಳಾಗಿ ಆರ್ಥಿಕವಾಗಿ ಸಂಸಾರ  ಸರ್ವನಾಶವಾಗುತ್ತದೆ. ಅಗೌರವಯುತ ಬಾಳು ದಕ್ಷತೆಗೆ ಕುಂದು ಮತ್ತು ದೇಶದ ಗೌರವಕ್ಕೆ ಚ್ಯುತಿ ತರುತ್ತದೆ. ಇದಕ್ಕೆ ದಾಸನಾದವನು ತನ್ನ ಮತ್ತು ಸಂಸಾರದ ಮಾನ ಮರ್ಯಾದೆಯನ್ನು  ಬೀದಿ ಬೀದಿಗಳಲ್ಲಿ ಹರಾಜು ಹಾಕುತ್ತಾನೆ.  ಈ ಮಾದಕ ವಸ್ತುಗಳನ್ನು ದೇಶದಿಂದ ಸಂಪೂರ್ಣವಾಗಿ ಪ್ರತಿಬಂಧಿಸಬೇಕೆಂಬುದು ಗಾಂಧೀಜಿಯವರ ಅದಮ್ಯ ಕನಸು. ಆದರೆ ಇಂದಿನ ಸರಕಾರಗಳು ಬದುಕಿರುವುದೇ ಅಬಕಾರಿ ಬಾಬ್ತಿನ ವರಮಾನದಿಂದ ಯಾವ ಪಕ್ಷದ ಸರ್ಕಾರಗಳಿದ್ದರೂ ಇದರ ಬಗೆ ಗಮನ ಹರಿಸಲು ಹಿಂಜರಿಯುತ್ತವೆ. ಗಾಂಧೀಜಿಯವರ ಪರಿಕಲ್ಪನೆಯ ಸಂಪೂರ್ಣ ಪಾನನಿಷೇದ ಎಂದೆಂದಿಗೂ ಸಾಧ್ಯವಾಗದಿರಬಹುದು. ಆದರೆ ಗುಜರಾತ್ ನಂತರ ಇತ್ತೀಚಿನ ವರ್ಷಗಳಲ್ಲಿ ಬಿಹಾರದಲ್ಲಿ   ಪಾನ ನಿಷೇದ ಜಾರಿಗೆ ಬಂದಿದೆ. ತಮಿಳುನಾಡು ಮೊದಲು ನಂತರ ಕರ್ನಾಟಕ ರಾಜ್ಯಗಳು ಸರಾಯಿ ನಿಷೇಧಿಸಿದವು. ಆದರೆ ಆ ನಂತರ ಹೆಚ್ಚೆಚ್ಚು ವೈನಶಾಪ ತೆರೆಯಲು ಅನುಮತಿ ನೀಡಿದವು.

ಒಂದು ಅವಿವೇಕದ ವಾದವನ್ನು ಪ್ರತಿಪಾದಿಸುವವರು ಇದ್ದಾರೆ.  ಸ್ವಲ್ಪ (ಅತೀಕಡಿಮೆ) ಮಧ್ಯಪಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಸರ್ವರೋಗಕ್ಕೂ ಸರಾಯಿ ಮದ್ದು ಎನ್ನುತ್ತಾರೆ. ಇಂದಿನ ಜಗತ್ತಿಗೆ ಸವಾಲಾಗಿರುವ ಮಹಾಮಾರಿ ಕೋವಿಡ-೧೯ ರೋಗಕ್ಕೂ ಸರಾಯಿ ಮದ್ದು ಎನ್ನುವವರಿದ್ದಾರೆ. ಆದರೆ ಈ ವಾದಕ್ಕೆ ಹುರುಳಿಲ್ಲ. ಪಾರ್ಸಿ ಜನಾಂಗದವರು ಹೆಂಡ ಕುಡಿಯುವುದನ್ನು ಒಳ್ಳೆಯದೆಂದು ಪ್ರತಿಪಾದಿಸುತ್ತಿದ್ದರು. ಇದು ಮಾದಕ ವಸ್ತುವಾದರೂ ಆಹಾರವೂ ಸಹ ಆಗಬಲ್ಲದು ಎಂದು ಹೇಳುತ್ತಿದ್ದರು. ಆದರೆ ತಜ್ಞರ ಪ್ರಕಾರ ಇದು ಸತ್ಯವಲ್ಲ.

‘ನೀರಾ’ ಭಟ್ಟಿ ಇಳಿಸಿದ ತಕ್ಷಣ ಮದ್ಯವಲ್ಲ. ನಿಜ ಅದು ಒಂದು ಆಹಾರ. ಇದನ್ನು ಕುಡಿದರೆ ಮಲಬದ್ಧತೆ ಇರುವುದಿಲ್ಲವೆಂದು ಕೇಳಿ ಗಾಂಧೀಜಿಯವರೇ ಕೆಲವು ದಿನಗಳ ಕಾಲ  ‘ನೀರಾ’ ಕುಡಿಯಲು ಪ್ರಾರಂಭಿಸಿದಾಗ ಅವರಿಗೆ ಅದರ ಉಪಯುಕ್ತತೆಯ ಅರಿವಾಗುತ್ತದೆ. ಪಾಮ್ ಜಾತಿಗೆ ಸೇರಿದ ತೆಂಗು, ಈಚಲು, ಖರ್ಜೂರ ಇತ್ಯಾದಿ ಇವುಗಳಲ್ಲಿ ಕಾಂಡ ಕೊರೆದು ತೆಗೆಯುವ ಬಣ್ಣವಿಲ್ಲದ ನೀರಿನಂತಹ ರಸಕ್ಕೆ ಅಥವಾ ಹಾಲಿಗೆ ‘ನೀರಾ’ ಎಂದು ಕರೆಯುತ್ತಾರೆ. ತೆಗೆದ ಕೆಲವೇ ನಿಮಿಷಗಳಲ್ಲಿ ಈ ‘ನೀರಾ’ ಹುಳಿ ಬಂದು ಜನರಿಗೆ ಅಮಲೇರಿಸಿ ಹುಚ್ಚೆಬ್ಬಿಸುತ್ತದೆ.

ಮಹಾತ್ಮಾ ಗಾಂಧೀಜಿಯವರು ಮಧ್ಯಪಾನವನ್ನು ಒಂದು ಘೋರ ಖಾಯಿಲೆ ಎಂಬುದಾಗಿ ಕರೆಯುತ್ತಾರೆ. ಆದರೆ ವೈದ್ಯಕೀಯ ಉದ್ದೇಶಕ್ಕೆ ಮದ್ಯ ಬಳಸುವುದನ್ನು ಗಾಂಧೀಜಿಯವರು ಆಕ್ಷೇಪಿಸುವುದಿಲ್ಲ.

ಕುಡಿತದ ಬಗ್ಗೆ ಗಾಂಧೀಜಿಯವರು ಹೀಗೆ ಹೇಳಿದ್ದಾರೆ, “ಕುಡಿತ ಎನ್ನುವುದು ದುರಾಚಾರ ಎನ್ನುವುದಕ್ಕಿಂತಲೂ ಹೆಚ್ಚಾಗಿ ಅದನ್ನು ಕಾಯಿಲೆ ಎಂದು ಕರೆಯಬಹುದು. ಬಹಳ ಮಂದಿ ಸಾಧ್ಯವಾಗುವುದಾದರೆ ಸಂತೋಷದಿಂದ ಕುಡಿತವನ್ನು ಬಿಟ್ಟುಬಿಡುವರು ಎಂದು ನನಗೆ ಗೊತ್ತಿದೆ. ಪ್ರಲೋಭನೆಗೆ ಒಳಗಾಗಿರುವ ಕೆಲವರು ಅದನ್ನು ದೂರವಿರಿಸಬಹುದು ಎಂದು ನನಗೆ ಗೊತ್ತಿದೆ. ನಿರ್ದಿಷ್ಟ ಪ್ರಸಂಗದಲ್ಲಿ ಆ ಪ್ರಲೋಭನೆಯನ್ನು ದೂರವಿರಿಸುವವರು  ಕಳ್ಳತನದಲ್ಲಿ ಕುಡಿಯುತ್ತಾರೆ ಎಂದು ನನಗೆ ಗೊತ್ತಿದೆ. ಆದ್ದರಿಂದ ಪ್ರಲೋಭನೆಯನ್ನು ಕಿತ್ತು ಹಾಕುವುದು ತಪ್ಪು ಎಂದು ನಾನು ಭಾವಿಸುವುದಿಲ್ಲ. ಕಾಯಿಲೆಯಾಗಿರುವ ವ್ಯಕ್ತಿಗಳು ಅವರಷ್ಟಕ್ಕೆ ಅವರೇ ಸಹಾಯ ಮಾಡಿಕೊಳ್ಳಬೇಕು”.( ಯಂಗ ಇಂಡಿಯಾ – ೧೨-೧-೧೯೨೮)

ಗಾಂಧೀಜಿಯವರು “ನಾನು ನನ್ನನ್ನು ಶ್ರಮಿಕರ ಜತೆಯಲ್ಲಿ ಗುರುತಿಸಿಕೊಂಡಿರುವುದರಿಂದ ಕುಡಿತದ ಚಟಕ್ಕೆ ಅಂಟಿಕೊಂಡಿರುವ ಶ್ರಮಿಕರ ಮನೆಗಳಿಗೆ ಕುಡಿತವು ಎಂತಹ ಹಾನಿಯನ್ನುಂಟು ಮಾಡಿದೆ ಎಂದು ನನಗೆ ಗೊತ್ತಿದೆ. ಅವರಿಗೆ ಸುಲಭವಾಗಿ ದೊರೆಯುವಂತಿಲ್ಲದಿದ್ದರೆ ಅವರು ಮಧ್ಯವನ್ನು ಮುಟ್ಟುವುದಿಲ್ಲ ಎಂದು ನನಗೆ ಗೊತ್ತಿದೆ. ಅನೇಕ ಪ್ರಸಂಗಗಳಲ್ಲಿ ಕುಡುಕರೇ ಸ್ವತಃ ಪಾನನಿರೋಧಕ್ಕೆ ಕೋರಿಕೆ ಸಲ್ಲಿಸಿದ್ದಾರೆ ಎಂಬುದಕ್ಕೆ ನಮ್ಮ ಬಳಿ ಸಮಕಾಲೀನ ಸಾಕ್ಷ್ಯಗಳಿವೆ” (ಹರಿಜನ ಪತ್ರಿಕೆ -೩-೬-೧೯೩೯)  ಎಂದು ಹೇಳಿದ್ದಾರೆ. “ಆರ್ಥಿಕ ನಷ್ಟಕ್ಕಿಂತ ಯಾವಾಗಲೂ ನೈತಿಕ ನಷ್ಟ ಹೆಚ್ಚಿನದು” ಎಂಬುದು ಗಾಂಧೀಜಿಯವರ ವಾದ. ಏಕೆಂದರೆ ಅವರು ಹೀಗೆ “ಕುಡಿತದ ಚಟವು ಮನುಷ್ಯನ ಆತ್ಮವನ್ನು ಹಾಳು ಮಾಡುತ್ತದೆ ಮತ್ತು ಅವನನ್ನು ಮೃಗವಾಗಿ ಪರಿವರ್ತಿಸುತ್ತದೆ. ಹೆಂಡತಿ, ತಾಯಿ ಮತ್ತು ಸಹೋದರಿಯ ನಡುವಣ ಬೇಧವನ್ನು ಗ್ರಹಿಸಿಕೊಳ್ಳಲಾರದಷ್ಟು ಅಸಮರ್ಥವಾಗುತ್ತಾನೆ. ಮಧ್ಯದ ಪ್ರಭಾವದಡಿಯಲ್ಲಿ ಈ ಬೇಧವನ್ನು ಮರೆಯುವವರನ್ನು ನಾನು ಕಂಡಿದ್ದೇನೆ. ಮತ್ತು ಅಮಲೇರದೆ ಶಾಂತಚಿತ್ತನಾಗಿರುವ ಸಮಯದಲ್ಲಿ ತನ್ನ ಹೀನ ಕೃತ್ಯಗಳಿಗೆ ನಾಚಿಕೆಪಟ್ಟುಕೊಳ್ಳುತ್ತಾನೆ. ಆದುದರಿಂದ ಕುಡಿತ ಅತ್ಯಂತ ನೀಚತನದ ಕೆಲಸ” (ಹರಿಜನ ಪತ್ರಿಕೆ- ೯-೩-೧೯೩೪) ಎಂದಿದ್ದಾರೆ.

ಕುಡುಕರ ಪತ್ನಿಯರ ಬಗ್ಗೆ ಗಾಂಧೀಜಿಯವರು ಕನಿಕರ ವ್ಯಕ್ತಪಡಿಸುತ್ತಾರೆ. ಅವರು ಕೊಡುವ ಎರಡು ಉದಾಹರಣೆಗಳು ಕುಡಿತದ ದುಷ್ಪರಿಣಾಮಗಳನ್ನು ತಿಳಿಸುತ್ತದೆ. ಹಡುಗುಗಳ ಕ್ಯಾಪ್ಟನ್ಗಳು ಪಾನಮತ್ತರಾಗಿದ್ದಲ್ಲಿ. ಅವರಿಗೆ ಯಾವ ರೀತಿಯಿಂದಲೂ ಹಡಗನ್ನು ನಿಯಂತ್ರಿಸಲು ಸಾಧ್ಯವಾಗದು. ಅವರ ಕುಡಿತದ ಅಮಲು ಇಳಿದು ಅವರು ಯಥಾಸ್ಥಿತಿಗೆ ಬಂದ ನಂತರ ಮಾತ್ರ ಸಾಧ್ಯವಾಗಬಹುದು. ಅದೇ ರೀತಿ ಓರ್ವ ವಕೀಲ ಪಾನಮತ್ತನಾಗಿ ನಡೆಯಲಾಗದೆ ಚರಂಡಿಯಲ್ಲಿ ಉರುಳಿ ಬಿದ್ದಲ್ಲಿ ಪೋಲಿಸರು ಆತನನ್ನು ಹೊತ್ತೊಯ್ದು ಆತನ ಮನೆ ತಲುಪಿಸಬೇಕಾಗಬಹುದು. “ಕುಡಿತದಿಂದ ಸರ್ವನಾಶ” ಕುಡಿತವು ಆತನ ಸಂಸಾರದ ಮತ್ತು ಸಮಾಜದ ಸ್ವಾಸ್ಥವನ್ನು ಕೆಡಿಸುತ್ತದೆ.

ಗಾಂಧೀಜಿಯವರು ಹೀಗೆ “ಕುಡಿತ ಮತ್ತು ಮಾದಕವಸ್ತುವಿನ ಚಟದ ಕೆಡಕು ಅನೇಕ ರೀತಿಗಳಲ್ಲಿ ಮಲೇರಿಯಾ ಮತ್ತು ಅದರಂತಹ ಕಾಯಿಲೆಗಳಿಂದ ಉಂಟಾಗುವ ಕೆಡುಕಿಗಿಂತಲೂ ಅಪಾರವಾಗಿ ಹಾನಿಯನ್ನುಂಟು ಮಾಡುವುದಾಗಿರುತ್ತದೆ. ಏಕೆಂದರೆ ಕಡೆಯದು ದೇಹಕ್ಕೆ ಅಪಾಯವನ್ನುಂಟು ಮಾಡಿದರೆ ಕುಡಿತ ಮತ್ತು ಮಾದಕ ವಸ್ತುಗಳು ದೇಹ ಮತ್ತು ಆತ್ಮ ಜೀವ ಎರಡನ್ನು ಹಾಳು ಮಾಡುತ್ತದೆ” (ಯಂಗ್ ಇಂಡಿಯಾ – ೩-೩-೧೯೨೭)  ಎಂದಿದ್ದಾರೆ.

ದೇಶ ದಿವಾಳಿಯಾದರೂ ಚಿಂತೆಯಿಲ್ಲ ನಮ್ಮ ಮಧ್ಯೆ ಸಾವಿರಾರು ಮಂದಿ ಕುಡುಕರು ಇರುವ ಸಮಾಜವನ್ನು ನೋಡಲು ನಾನು ಇಷ್ಟಪಡುವದಿಲ್ಲವೆನುತ್ತಿದ್ದರು. ಅಬಕಾರಿ ಸುಂಕದಿಂದ ಬರುವ ಆದಾಯದಿಂದ ನಾವು ಶಿಕ್ಷಣ ಕೊಡುತ್ತೇವೆಂದಾದರೆ ಅಂತಹ ಶಿಕ್ಷಣವೇ ನಮಗೆ ಬೇಡವೆನ್ನುತ್ತಿದ್ದರು.

ಗಾಂಧೀಜಿಯವರು ಹೀಗೆ ಹೇಳಿದ್ದಾರೆ, “ಕುಡಿತದ ಚಟಕ್ಕೆ ಬಲಿಯಾಗಿರುವ ರಾಷ್ಟ್ರದ ಮುಖದಲ್ಲಿ ವಿನಾಶವಲ್ಲದೇ ಬೇರೆನೂ ಕಣ್ಣಿಗೆ ಹೊಳೆಯುವಂತಿರುವುದಿಲ್ಲ. ಆ ಚಟದ ಮೂಲಕ ಸಾಮ್ರಾಜ್ಯಗಳು ಹಾಳಾಗಿವೆ ಎಂದು ಇತಿಹಾಸ ದಾಖಲಿಸಿದೆ. ಶ್ರೀ ಕೃಷ್ಣ ಸೇರಿದ್ದ ಪ್ರಸಿದ್ಧ ಸಮುದಾಯವೊಂದು ಆದ್ದರಿಂದ ಪತನಗೊಂಡಿತು ಎಂದು ಭಾರತದ ಇತಿಹಾಸದಲ್ಲಿ ದಾಖಲಾಗಿದೆ. ರೋಮ್ನ ಪತನಕ್ಕೆ ನೇರವಾಗಿ   ಈ ಭಯಾನಕ ಮಧ್ಯವೇ ಕಾರಣವಾಗಿತು”್ತ.( ಯಂಗ್ ಇಂಡಿಯಾ- ೪-೪-೧೯೨೯)

ಗಾಂಧೀಜಿಯವರು ಹೀಗೆ ಹೇಳಿದ್ದಾರೆ, ‘ಇಡೀ ಭಾರತಕ್ಕೆ ನನ್ನನ್ನು ಒಂದು ಗಂಟೆ ಕಾಲ ಸರ್ವಾಧಿಕಾರಿಯೆಂದು ನೇಮಿಸಿದರೆ ನಾನು ಮಾಡಲಿರುವ ಮೊದಲ ಕೆಲಸವೆಂದರೆ ಪರಿಹಾರ ನೀಡದೇ ಎಲ್ಲ ಮಧ್ಯದಂಗಡಿಗಳನ್ನು ಮುಚ್ಚಿಸುವುದು ಮತ್ತು ಖಾರಕಾನೆ ಮಾಲೀಕರುಗಳಿಗೆ ಅವರ ಕೆಲಸಗಾರರುಗಳಿಗೆ ಮಾನವೀಯ ಸೌಲಭ್ಯಗಳನ್ನು ಒದಗಿಸಲು ಬಲವಂತಪಡಿಸುವುದು ಮತ್ತು ಈ ಶ್ರಮಿಕರುಗಳು ಪರಿಶುದ್ಧ ಪಾನೀಯಗಳನ್ನು ಮತ್ತು ಮನರಂಜನೆಗಳನ್ನು ಪಡೆಯುವಂತಹ ಆಹಾರ ಪಾನೀಯಗಳ ಮತ್ತು ಮನರಂಜನಾ ರೂಮುಗಳನ್ನು ತೆರೆಯುವಂತೆ ಸೂಚನೆ/ಸಲಹೆ ನೀಡುತ್ತಾರೆ’ .(ಯಂಗ್ ಇಂಡಿಯಾ-೨೫-೬-೧೯೩೧)

ರಷ್ಯಾ ದೇಶದ ಲಿಯೋ ಟಾಲ್ಸ್ಟಾಯ್ ಎಂಬ ಮಹಾಶಯ ತಾನೇ ಈ ಚಟಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಬಲಿಯಾಗಿ ನಂತರ ತ್ಯಜಿಸಿ, ಹೊಗೆಸೊಪ್ಪಿನ ಯಾವುದೇ ರೂಪದ ಸೇವನೆ ಎಲ್ಲಾ ಚಟಗಳಿ ಗಿಂತ ಅತ್ಯಂತ ದುಷ್ಟ ಚಟವೆಂದಿದ್ದನು. ಈ ಚಟ ‘ದುಶ್ಚಟಗಳ ರಾಜ’ ‘ತಂಬಾಕು ಅತ್ಯಂತ ಹೀನ ಮಾದಕ ವಸ್ತು ಎಂದು ಆ ಮಹಾನುಭಾವ ಹೇಳಿದ್ದ.

ಸಾಮಾನ್ಯವಾಗಿ ಹದಿಹರೆಯದವರು ಎರಡು ರೀತಿಯ ದುಶ್ಚಟಗಳಿಗೆ ಸಿಲುಕಿಕೊಳ್ಳುತ್ತಾರೆ. ಕೆಲವರು ಸಿಗರೇಟ, ಮದ್ಯಪಾನದ ಸುಳಿಗೆ ಬಿದ್ದರೆ, ಇನ್ನೂ ಕೆಲವರು ಮಾದಕ ದ್ರವ್ಯಗಳ ದಾಸರಾಗುತ್ತಾರೆ. ಸಿಗರೇಟ, ಮದ್ಯಪಾನದ ಸುಳಿಯಲ್ಲಿ ಬಿದ್ದವರು ಚಟವನ್ನು ತುಂಬ ದಿನ ರಹಸ್ಯವಾಗಿ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಸಿಗರೇಟ ಸೇದುವುದು ಒಂದು ಬೇಜವಾಬ್ದಾರಿಯುತ ವರ್ತನೆಯ ಪ್ರತೀಕ ಬಸ್ಸ್,  ರೈಲು, ಟ್ಯಾಂಗಾ, ಮನೆಯಲ್ಲಿ ಅಕ್ಕಪಕ್ಕದವರ ನಿಂದನೆಯನ್ನು ಲೆಕ್ಕಿಸದೇ ಮಾಡುವ ಒಂದು ಅನಾಗರಿಕ ವರ್ತನೆ ಹೊಗೆಸೊಪ್ಪು ಪಾತಕ ಕೃತ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆಂದು ತಜ್ಞರು ಸಾಬೀತುಪಡಿಸಿದ್ದಾರೆ. ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇದಿಸಿದ್ದರೂ. ಸಿಗರೇಟ ಸೇವನೆ ಕಡಿಮೆಯಾಗಿಲ್ಲ. ಧೂಮಪಾನ ಮಾಡುವವನು ಪ್ರಜ್ಞೆ ಇಲ್ಲದೆ ಸುತ್ತಲೂ ಹೊಗೆ ಮತ್ತು ವಾಸನೆ ಹರಡಿ ಪಕ್ಕದವರಿಗೆ ಅಸಹ್ಯ ಹುಟ್ಟಿಸುತ್ತಾನೆ. ಆದರೆ ಮಾದಕ ದ್ರವ್ಯದ  ವ್ಯಸನ ಹಾಗಲ್ಲ. ಮಕ್ಕಳು ಡ್ರಗ್ ದಾಸರಾಗಿ ಅತಿರೇಕಕ್ಕೆ ಹೋಗುವವರೆಗೂ ಪೋಷಕರಿಗೆ ತಮ್ಮ ಮಗ ಮಾದಕ ವ್ಯಸನಿ ಎಂಬ ಸಣ್ಣ ಸುಳಿವು ಕೂಡ ಸಿಕ್ಕಿರುವುದಿಲ್ಲ. ಸೈಲೆಂಟ ಕಿಲ್ಲರ್ನಂತೆ ತನ್ನ ಚಟಕ್ಕೆ ಬಿದ್ದವರನ್ನು ಅಪೋಶನ ತೆಗೆದುಕೊಂಡಿರುತ್ತದೆ. ಹಾಗಾಗಿ ಯುವಸಮುದಾಯದ ಪಾಲಿಗೆ ಮಾದಕದ್ರವ್ಯ ಯಾವತ್ತಿಗೂ ಅತಿಘೋರ ಶಾಪವಿದ್ದಂತೆ.

ವಾಸ್ತವವಾಗಿ ಮದ್ದು ಎಂದರೇನು? ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಯಾವುದೇ ಪದಾರ್ಥವನ್ನು ಜೀವಿಯೊಂದು ಸೇವಿಸಿದಾಗ ಅದರ ಸ್ವಾಭಾವಿಕ ಕ್ರಿಯೆಗಳಲ್ಲಿ ವ್ಯತ್ಯಾಸ ಉಂಟುಮಾಡುವ ಸಾಮರ್ಥ್ಯ ಹೊಂದಿದ್ದರೆ. ಅದನ್ನು ಮದ್ದು ಎಂದು ಕರೆಯಲಾಗುತ್ತದೆ.

‘ನಾರ್ಕೋಟಿಕ್ ಡ್ರಗ್ಸ್’ ಇಂದು ಬಹಳಷ್ಟು ಚರ್ಚೆಗೆ ಗ್ರಾಸವಾಗುತ್ತಿರುವ ವಿಷಯವಾಗುತ್ತಿವೆ. ಸುಂಕದ ಇಲಾಖೆಯವರು ವಿಮಾನ ನಿಲ್ದಾಣಗಳಲ್ಲಿ ಅವುಗಳನ್ನು ವಶಪಡಿಸಿಕೊಂಡ ಸುದ್ಧಿ ಸಮಾಚಾರಗಳನ್ನು ಪತ್ರಿಕೆಗಳಲ್ಲಿ ಆಗಾಗ್ಗೆ ಓದುತ್ತೇವೆ. ಹೆಚ್ಚೆÀಚ್ಚ್ಚು ಯುವಜನರು ಅದರ ಕಪಿಮುಷ್ಟಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಮದ್ದುಗಳ ಕಳ್ಳ ಸಾಗಾಣಿಕೆ ಮತ್ತು ಅವುಗಳ ದುರ್ಬಳಕೆಯ ಅವಳಿ ಸಮಸ್ಯೆ ಇಂದು ನಮ್ಮೆದುರಿಗೆ ಬೃಹದಾಕಾರವಾಗಿ ತಲೆಯೆತ್ತಿ ನಿಂತಿದೆ. ಭೌಗೋಳಿಕವಾಗಿ ನಮ್ಮ ದೇಶ ಮದ್ದುಗಳನ್ನು ಕದ್ದು ಸರಬರಾಜು ಮಾಡುವ ಎರಡು ಪ್ರಮುಖ ವಲಯಗಳ ನಡುವೆ ನೆಲೆಯಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ, ಆಗ್ನೇಯ ಏಷ್ಯಾದ ರಾಷ್ಟ್ತಗಳಾದ ಬರ್ಮಾ, ಥೈಲ್ಯಾಂಡ, ಮತ್ತು ಲಾವೋಸ್ (ಸುವರ್ಣ ತ್ರಿಕೋಣ) ಮತ್ತು ಸನಿಹದ ಮದ್ಯಪೂರ್ವ ದೇಶಗಳಾದ ಪಾಕಿಸ್ತಾನ, ಅಪಘಾನಿಸ್ಥಾನ ಮತ್ತು ಇರಾನ್ (ಬಂಗಾರದ ಅರ್ಧಚಂದ್ರ) ಕೇಂದ್ರ ಕಾರ್ಯಸ್ಥಾನಗಳಾಗಿದ್ದು ಭಾರತ ಅವುಗಳ ನಡುವೆ ಸ್ಯಾಂಡವಿಜ್ ನಂತೆ ಸೇರಿಕೊಂಡಿವೆ. ಹೀಗಾಗಿ ಭಾರತ ಮದಕ ವಸ್ತುಗಳ ಕಳ್ಳ ಸಾಗಾಣಿಕೆಯ ಪ್ರಮುಖ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ. ಜೊತೆಗೆ ಮರಿಜುವಾನ ಮತ್ತು ಹಶೀಶಗಳನ್ನು ವಿಶ್ವದ ಮಾರುಕಟ್ಟೆಗಳಿಗೆ ಸರಬರಾಜು ಮಾಡುವ ನೇಪಾಳ ನಮ್ಮ ಉತ್ತರಕ್ಕಿದೆ.

ಸದ್ಯ ಬಾಲಿವುಡ್ ನಟ ಸುಶಾಂತಸಿಂಗ್  ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಮದ್ದಿನ ವಿರಾಟ್ ಸ್ವರೂಪ ಬಯಲಾಗಿಬಿಟ್ಟಿದೆ. ಎನ್ಸಿಬಿ ಅಧಿಕಾರಿಗಳು ರಾಜ್ಯದ  ಡ್ರಗ್ಸ್  ದಂಧೆಯಲ್ಲಿ, ಬಾಲಿವುಡ್, ಹಾಗೂ ಕನ್ನಡ ಚಿತ್ರರಂಗದ ನಟ-ನಟಿಯರು ನಂಟು ಬೆಸೆದುಕೊಂಡಿರುವುದನ್ನು ಪತ್ತೆ ಮಾಡಿದ್ದಾರೆ. ಇದು ಪ್ರಕರಣಕ್ಕೆ ಇನ್ನಷ್ಟು ರೋಚಕತೆ ತಂದುಕೊಟ್ಟಿದೆ. ಜೊತೆಗೆ ರಾಜಕೀಯ ಕೆಸರೆರಚಾಟಕ್ಕೂ ಈ ಪ್ರಕರಣ ಹಾದಿ ಮಾಡಿಕೊಟ್ಟಿದೆ. ರಾಜಕೀಯ ಆರೋಪ ಪ್ರತ್ಯಾರೋಪಗಳಿಂದ ಡ್ರಗ್ ವಿರುದ್ಧದ ಹೋರಾಟ ಹಾದಿ ತಪ್ಪುತ್ತಿದೆ. ಈಗ ರಾಜಕೀಯ ಮಾಡುತ್ತಾ ಕುಳಿತುಕೊಳ್ಳುವ ಬದಲು ಅತ್ಯಂತ ಕೆಟ್ಟ ಪಿಡುಗಾಗಿರುವ ಈ ದಂದೆಯನ್ನು ಮಟ್ಟಹಾಕುವ ಬಗ್ಗೆ ಆರೋಗ್ಯಕರವಾಗಿ ಚಿಂತಿಸುವ ಕಾಲ ಸನ್ನಿಹಿತನಾಗಿದೆ. ಇಂದು ಕನ್ನಡ ಚಿತ್ರರಂಗದ ಕೆಲವರು ತಳುಕು  ಹಾಕಿಕೊಂಡಿರುವ  ಡ್ರಗ್ ಮಾಫಿಯಾ ಸಮಾಜದ ಎಲ್ಲ ರಂಗಗಳಲ್ಲಿಯೂ ಇದೆ ಎನ್ನುವುದು ಕಟುವಾಸ್ತವ. ಇದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಮನಃಸ್ಥಿತಿಯಿದ್ದರೆ ಮಾತ್ರ ಈ ದಂಧೆಯನ್ನು ಬೇರುಮಟ್ಟದಿಂದ ಕಿತ್ತುಹಾಕಲು ಸಾಧ್ಯ. ಹಾಗೆ ನೋಡಿದರೆ ರಾಜ್ಯದಲ್ಲಿ ಡ್ರಗ್ ಮಾಫಿಯಾದ ಕರಾಳುಬಾಹುಗಳು ನಾವಂದುಕೊಂಡಿದ್ದಕ್ಕಿಂತಲೂ  ಭೀಕರವಾಗಿವೆ. ಸಿಸಿಬಿಯ ತನಿಖೆಯಿಂದ ಕರ್ನಾಟಕ ರಾಜ್ಯದಲ್ಲೂ ಪ್ಯಾಬ್ಲೋ ಎಸೋಬಾರ್ನ ಸಂತತಿಯ ಶಾಡೋ ಕಣ್ಣಿಗೆ ರಾಚುತ್ತಿದೆ. ಪ್ಯಾಬ್ಲೋನಂತೆಯೇ ಡ್ರಗ್ ಟ್ರಾಫಿಕ್ಕಿಂಗ್ ವ್ಯವಸ್ಥಿತವಾಗಿ ನಿರ್ವಹಿಸುವ ಜಾಲ ಕರ್ನಾಟಕದಲ್ಲಿರೊದು ಸತ್ಯ.

ಮಾದಕ ದ್ಯವ್ಯ ಎಂದರೆ ಕೇವಲ ಗಾಂಜಾ ಹಾಗೂ ಅದರ ಸಂಸ್ಕರಿತ ರೂಪವಾದ ಚರಸ್, ಹಶೀಶ್ ಮತ್ತು ವೀಡ್ ಆಯಿಲ್ಗಳು ಮಾತ್ರವಾಗಿರದೇ. ಸಿಂಥೆಟಿಕ್ ಡ್ರಗ್ಗಳಾದ ಎಂಡಿಎಂಎ, ಮಾರ್ಫಿನ್, ಎಕ್ಟಸಿ, ಯಾಬಾ ಹಾಗೂ ಎಲ್ಎಸ್ಡಿಗಳ ಬಗ್ಗೆ ತಿಳಿದುಕೊಂಡಿರುವ ಪೋಲಿಸರ ಸಂಖ್ಯೆ ಬಹಳ ಕಡಿಮೆ. ಜೊತೆಗೆ ಸೆಮಿಸಿಂಥೆಟಿಕ್ ಡ್ರಗ್ ಆದ ಕೋಕೇನ್ ಬಗ್ಗೆಯೂ ಪೋಲಿಸರಲ್ಲಿ ಅರಿವಿನ ಕೊರತೆಯಿದೆ. ಇದು ಡ್ರಗ್ ಜಾಲ ವಿಸ್ತರಣೆಗೆ ಒಂದು ಕಾರಣ ಎಂದು ಪೋಲಿಸ್ ಇಲಾಖೆಯ ಅಭಿಪ್ರಾಯವಾಗಿದೆ. ಇನ್ನೊಂದು ವಿಪರ್ಯಾಸದ ಸಂಗತಿಯೆಂದರೆ ಮಾದಕದ್ರವ್ಯ ಮಾಫಿಯಾಕ್ಕೆ ಕಡಿವಾಣ ಹಾಕಲು ಪೋಲಿಸ ಇಲಾಖೆಯಲ್ಲಿ ಸಾಕಷ್ಟು ಸಂಖ್ಯೆಯ ಸಿಬ್ಬಂದಿಯು ಇಲ್ಲ. ಸಿಸಿಬಿಯಲ್ಲಿ ಮಾದಕ ದ್ರವ್ಯದ ತನಿಖೆಗಿಂತಲೇ ನಾರ್ಕೋಟಿಕ್ ಎಂಬ ಪ್ರತ್ಯೇಕ ವಿಂಗ್ ಇರುತ್ತದೆ. ಭಾರತ ಸರ್ಕಾರದ ಪ್ರಮುಖ ಕಾನೂನಾದ ಎನ್.ಡಿ.ಪಿ.ಎಸ್. ಆ್ಯಕ್ಟ್ ೧೯೮೫ ಪ್ರಕಾರ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೊ ಒಂದನ್ನು ಸ್ಥಾಪಿಸಲಾಗಿದೆ. ಅದರ ಮುಖ್ಯ ಕಚೇರಿ ದೆಹಲಿಯಲ್ಲಿ ಇದ್ದು  ಮುಂಬಯಿ, ಕೊಲ್ಕತ್ತ, ಚೆನ್ನೈ   ದೆಹಲಿ, ಜೋಧಪುರ ಮತ್ತು ವಾರಣಾಸಿಗಳಲ್ಲಿ ೬ ವಲಯ ಕಚೇರಿಗಳಿವೆ. ಇಂಪಾಲ್ ನಲ್ಲಿ ಒಂದು ಪ್ರಾಂತೀಯ ಕಛೇರಿ ಇದೆ. ಸಿಸಿಬಿಯ ನಾರ್ಕೋಟಿಕ್ ವಿಭಾಗವನ್ನು ಸರಕಾರ ಸಶಕ್ತಗೊಳಿಸಿದರೆ ಮಾತ್ರ ಡ್ರಗ್ ವಿರುದ್ಧದ ಹೋರಾಟದಲ್ಲಿ ಯಶಸ್ಸು ಕಾಣಬಹುದು.

ಮಾದಕಲೋಕದ ಅತಿ ದುಬಾರಿ ಡ್ರಗ್ಗಳಾದ ಎಂ.ಡಿ.ಎA.ಎ. ಕೋಕೇನ್ ಹಾಗೂ ಎಲ್.ಎಸ್.ಡಿ.ಗಳಂತಹ ಡ್ರಗ್ಗಳು ಬೆಂಗಳೂರಿನಲ್ಲಿ ಎಗ್ಗಿಲ್ಲದೆ ಸರಬರಾಜಾಗುತ್ತಿದೆ. ಪೋಲಿಸ್ ಇಲಾಖೆಯ ಪ್ರಕಾರ ಕೋಕೆನ್, ಅಫೀಮ್ ಮುಂತಾದ ಡ್ರಗ್ಗಳು ವಿದೇಶಗಳಿಂದ ಬೆಂಗಳೂರಿಗೆ ಬರುವುದು ನೈಜಿರಿಯನ್ ಪ್ರಜೆಗಳ ಮೂಲಕ ಆದರೆ ಎಂ.ಡಿ.ಎಂ.ಎ. ಎಕ್ಠನ ಹಾಗೂ ಎಲ್ಎಸ್ಡಿಗಳನ್ನು ವ್ಯಸನಿಗಳು ನೇರವಾಗಿ ಡಾರ್ಕನೆಟ್ನಲ್ಲಿ ಲಾಗಿನ್ ಆಗಿ ಕ್ರಿಪ್ಟೋಕರೆನ್ಸಿ ಅಥವಾ ಬಿಟ್ಕಾಯಿನ್ ಮೂಲಕ ಖರೀದಿ ಮಾಡುತ್ತಾರೆ. ಅದರಲ್ಲೂ ನೋಡಲು ಕಾಗದದ ಚೂರಿನಂತೆ ಕಾಣಿಸುವ ಎಲ್ಎಸ್.ಡಿ. ಅತಿ ಹೆಚ್ಚಿನ ಪ್ರಮಾಣದಲ್ಲಿ ವ್ಯಸನಿಗಳ ಕೈ ತಲುಪುವುದೇ ಈ ಡಾರ್ಕ್ನೆಟ್ನ ಮೂಲಕ. ಈ ಕರಾಳ ವ್ಯವಹಾರದ ಬಗ್ಗೆ ಪೋಲಿಸರಿಗೆ ಗೊತ್ತಿದೆ. ಯಾಕೆಂದರೆ ಡಾರ್ಕನೆಟ್ನ ಮೇಲೆ ಕಣ್ಗಾವಲು ಇಡುವ ವ್ಯವಸ್ಥೆಯಾಗಲಿ ಅದನ್ನು ಬೇಧಿಸುವ ನುರಿತ ಐಟಿ ತಂತ್ರಜ್ಞರಾಗಲಿ ಪೋಲಿಸ್ ಇಲಾಖೆಯ ಬಳಿ ಇಲ್ಲ. ಇದು ಕೂಡ ಡ್ರಗ್ ಮಾಫಿಯಾ ಅವ್ಯಾಹತವಾಗಿ ಬೆಳೆಯಲು ಕಾರಣ.

ಡ್ರಗ್ ಮಾಫಿಯಾದಿಂದ ಯುವಸಮುದಾಯವನ್ನು ಹಾಗೂ ಸಮಾಜವನ್ನು ರಕ್ಷಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ವಿಚಾರದಲ್ಲಿ ರಾಜಕೀಯ ಮಾಡದೇ ಹಾಗೂ ಪ್ರಚಾರ ಬಯಸದೇ ಪಕ್ಷಾತೀತವಾಗಿ ಕೈಜೋಡಿಸಿ ನೈಜ ಹೋರಾಟ ಮಾಡಬೇಕು. ಆ ಹೋರಾಟ ನಿರಂತರವಾಗಿದ್ದರೆ ಮಾತ್ರ ಡ್ರಗ್ ಮಾಫಿಯಾದ ವಿರುದ್ಧ ಜಯ ಸಾಧಿಸಬಹುದು.

ಮನುಷ್ಯನ ಆತ್ಮವನ್ನೇ ನಾಶಮಾಡುವ ದುರಭ್ಯಾಸವಾಗಿರುವ ಕುಡಿತ ಮತ್ತು ಮಾದಕ ವಸ್ತುಗಳ ಚಟವನ್ನು ಶಾಸನಗಳ ಮೂಲಕ ನಿವಾರಣೆ ಮಾಡಲು ಸಾಧ್ಯವಿಲ್ಲವೆಂದು ಮಹಾತ್ಮ ಗಾಂಧೀಜಿಯವರು ನಂಬಿದ್ದರು. ಒಂದು ಪಕ್ಷ ಶಾಸನಗಳ ಪ್ರಯೋಗದ ಮೂಲಕ ನಿಗ್ರಹಿಸಲು ಪ್ರಯತ್ನಿಸಿದಲ್ಲಿ ಕಳ್ಳಬಟ್ಟಿ ತಯಾರಕರು ಕುಡುಕರನ್ನು ಬೆಂಬಲಿಸಬಹುದು. ಮನಃಪರಿವರ್ತನೆ ಮಾಡುವುದರ ಮೂಲಕ ಕುಡುಕರು ಸ್ವ-ಇಚ್ಛೆಯಿಂದ ಕುಡಿತವನ್ನು ತ್ಯಜಿಸುವಂತೆ ಮಾಡಬೇಕಾಗಿದೆ. ಆದರೆ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಸರಕಾರದ ಪ್ರಮುಖ ಆದಾಯದ ಮೂಲವಾಗಿರುವ ಮಧ್ಯಪಾನವನ್ನು ನಿಷೇದಿಸುವುದು ಸಾಧ್ಯವಾಗುತ್ತಿಲ್ಲ. ಯಾವುದೇ ರೂಪದ ಮದ್ಯ ಮತ್ತು ಮಾದಕ ದ್ರವ್ಯದ ಚಟ ಒಬ್ಬ ಮನುಷ್ಯನನ್ನು ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ, ಸಾಂಸಾರಿಕವಾಗಿ ಮತ್ತು ಧಾರ್ಮಿಕವಾಗಿ ನಿರ್ನಾಮ ಮಾಡುತ್ತದೆ” ಎಂದ ಗಾಂಧೀಜಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಇವುಗಳ ಪ್ರತಿಬಂಧ ಮಾತ್ರ ಪೂರಕವಾಗಿ ಕೆಲಸ ಮಾಡ ಬಲ್ಲದೆಂದು ಬಲುವಾಗಿ  ಪ್ರತಿಪಾದಿಸಿದ್ದರು.  

ದೇಶಾದ್ಯಂತ ಸುದ್ದಿ ಮಾಧ್ಯಮಗಳಲ್ಲಿ ಕೋವಿಡ್-೧೯ ಜೊತೆಗೆ, ಮಾದಕ ವಸ್ತುಗಳ ವಿಷಯ ಹೆಚ್ಚು ಸದ್ದು ಮಾಡುತ್ತಿದೆ. ಶಿಕ್ಷಣ ಸಂಸ್ಥೆಗಳು, ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಾ ರಂಗಗಳಲ್ಲೂ ಡ್ರಗ್ಸ್ ದಂದೆ ವ್ಯಾಪಿಸಿದೆ. ಹದಿವಯಸ್ಸಿನ ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಎಳೆಯ ವಯಸ್ಸಿನಲೇ ಮಾದಕ ವಸ್ತುಗಳಿಗೆ ಬಲಿಯಾಗದಂತೆ ಅರಿವು ಮೂಡಿಸುವ ಅಭಿಯಾನ ರಾಜ್ಯಾದ್ಯಂತ ಕೈಗೊಳಬೇಕಾಗಿದೆ. ಈ ಜವಾಬ್ದಾರಿ ಸರಕಾರ, ಸಮಾಜ, ಶಾಲಾ-ಕಾಲೇಜುಗಳು, ಸಂಘ ಸಂಸ್ಥೆಗಳು, ಪೋಲಿಸ್, ಆರೋಗ್ಯ ಇಲಾಖೆ ಹಾಗೂ ಪೋಷಕರ ಮೇಲಿದೆ. ಮಕ್ಕಳು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುವ ಮುನ್ನ ಎಲ್ಲರೂ ಮುನ್ನೆಚರಿಕೆ ವಹಿಸಬೇಕು. ಕರ್ನಾಟಕ ಡ್ರಗ್ಸ್ ಮುಕ್ತವಾಗಲು ಸರಕಾರ, ಗೃಹ ಇಲಾಖೆ, ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಕಾನೂನು ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕು.

3 thoughts on “ಮದ್ಯಪಾನ ಮತ್ತು ಮಾದಕ ದ್ರವ್ಯಗಳ ನಿಷೇಧ

  1. ವಿವೇಚನೆ ಯಿಂದ ತುಂಬಿದ ಬರಹ. ಮಧ್ಯ, ತಂಬಾಕು ಮತ್ತು ಮಾದಕವಸ್ತು ಗಳು ಅಗತ್ಯ ವೇ ಇಲ್ಲದೆ ವಸ್ತುಗಳು. ಮಾರಕವಾದಂತವು.

  2. ಗಾಂಧಿಜಿಯವರ ಆಶಯ ,ಅವರ ನಿಲುವು ಪ್ರಸ್ತುತ ವಿಷಯಗಳ ವಿಶ್ಲೇಷಣೆ ಎಲ್ಲಾ ಲೇಖನದಲ್ಲಿ ಮೂಡಿ ಬಂದಿದೆ .ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ಕಿತ್ತು ಹಾಕಿ ಸಮಾಜದ ಸ್ವಾಸ್ಥ್ಯ ಕಾಪಾಡ ಬೇಕಿದೆ

  3. ಮದ್ಯ ಸೇವನೆ ಆರೋಗ್ಯಕ್ಕೆ ವಿಷಕಾರಿ ವೆಂಬ ವಿಷಯ ಚೆನ್ನಾಗಿ ವಿವರಿಸಿದ್ದೀರಿ

Leave a Reply

Back To Top