ಅಂಕಣ ಬರಹ

ರಾತ್ರಿಬಸ್ಸುಗಳೊಂದಿಗೆ ಮಾತುಕತೆ

ರಾತ್ರಿಬಸ್ಸಿನಲ್ಲಿ ಎಷ್ಟೆಲ್ಲ ಕನಸುಗಳು ಪಯಣಿಸುತ್ತಿರುತ್ತವೆ; ತಲುಪಬೇಕಾದ ಸ್ಥಳವನ್ನು ಗಮನದಲ್ಲಿಟ್ಟುಕೊಂಡು ಹವಾಮಾನಕ್ಕೆ ತಕ್ಕ ಬಟ್ಟೆ ತೊಟ್ಟು ಬೆಳಗೆನ್ನುವ ಬೆರಗಿಗೆ ಕಣ್ಣುಬಿಡಲು ತಯಾರಾಗಿ ಹೊರಟುನಿಂತಿರುತ್ತವೆ! ಬಗಲಲ್ಲೊಂದು ಹಗುರವಾದ ಪರ್ಸು, ಕೈಯಲ್ಲೊಂದು ಭಾರವಾದ ಬ್ಯಾಗು, ಕೂದಲನ್ನು ಮೇಲೆತ್ತಿ ಕಟ್ಟಿದ ರಬ್ಬರ್ ಬ್ಯಾಂಡು ಎಲ್ಲವೂ ಆ ಕನಸುಗಳೊಂದಿಗೆ ಹೆಜ್ಜೆಹಾಕುತ್ತಿರುತ್ತವೆ. ಅವಸರದಲ್ಲಿ ಮನೆಬಿಟ್ಟ ಕನಸುಗಳ ಕಣ್ಣಿನ ಕನ್ನಡಕ, ಕೈಗೊಂದು ವಾಚು, ಬಿಸಿನೀರಿನ ಬಾಟಲಿಗಳೆಲ್ಲವೂ ಆ ಪಯಣದ ಪಾತ್ರಧಾರಿಗಳಂತೆ ಪಾಲ್ಗೊಳ್ಳುತ್ತವೆ. ಅರಿವಿಗೇ ಬಾರದಂತೆ ಬದುಕಿನ ಅದ್ಯಾವುದೋ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಆ ಕನಸುಗಳನ್ನೆಲ್ಲ ಅಪರಿಚಿತ ರಾತ್ರಿಯೊಂದರ ಬೋರ್ಡಿಲ್ಲದ ಬಸ್ಸು ತನ್ನದಾಗಿಸಿಕೊಂಡು ಸಾಗಿಸುತ್ತಿರುತ್ತದೆ. ಒಂದೊಂದೇ ಬೀದಿದೀಪಗಳನ್ನು ದಾಟುತ್ತ ಚಲಿಸುತ್ತಲೇ ಇರುವ ಅವು ಆ ಸ್ಥಾನಪಲ್ಲಟದ ಮಾರ್ಗಮಧ್ಯದಲ್ಲಿ ಹುಟ್ಟು-ಕೊನೆಗಳ ಆಲೋಚನೆಯನ್ನು ಬದಿಗಿಟ್ಟು, ಬಸ್ಸಿನ ಚಲನೆಯನ್ನೇ ತಮ್ಮದಾಗಿಸಿಕೊಂಡು ಸೀಟಿಗೊರಗಿ ಸುಧಾರಿಸಿಕೊಳ್ಳುತ್ತವೆ. ಹಾಗೆ ದಣಿವಾರಿಸಿಕೊಳ್ಳುತ್ತಿರುವ ಕನಸುಗಳನ್ನು ಹೊತ್ತ ಬಸ್ಸು ಹಳೆ ಸಿನೆಮಾವೊಂದರ ರೊಮ್ಯಾಂಟಿಕ್ ಹಾಡಿನ ಟ್ಯೂನಿನಂತೆ ತನ್ನದೇ ಆದ ಗತಿಯಲ್ಲಿ ದಾರಿಯೆಡೆಗೆ ದೃಷ್ಟಿನೆಟ್ಟು ಓಡುತ್ತಿರುತ್ತದೆ.


ಈ ರಾತ್ರಿಬಸ್ಸುಗಳೆಡೆಗಿನ ಮೋಹವೂ ಹಳೆಯ ಹಾಡುಗಳೆಡೆಗಿನ ಮೋಹದಂತೆ ತನ್ನಿಂತಾನೇ ಹುಟ್ಟಿಕೊಂಡಿತು. ಚಿಕ್ಕವಳಿದ್ದಾಗ ಜಾತ್ರೆಗೆ ಹೋದಾಗಲೋ ಅಥವಾ ಮಳೆಗಾಲದ ದಿನಗಳಲ್ಲಿ ಸಂಚಾರವ್ಯವಸ್ಥೆಗಳೆಲ್ಲ ಅಸ್ತವ್ಯಸ್ತವಾಗಿ ಬಸ್ಸುಗಳೆಲ್ಲ ಕ್ಯಾನ್ಸಲ್ ಆಗುತ್ತಿದ್ದ ಸಂದರ್ಭಗಳಲ್ಲೋ, ಲಾಸ್ಟ್ ಬಸ್ಸಿಗಾಗಿ ಬಸ್ ಸ್ಟ್ಯಾಂಡಿನಲ್ಲಿ ಕಾಯುತ್ತಿದ್ದ ಸಮಯಗಳಲ್ಲಿ ಹೊರಊರುಗಳಿಗೆ ಸಂಚರಿಸುತ್ತಿದ್ದ ರಾತ್ರಿಬಸ್ಸುಗಳು ಬಂದು ನಿಲ್ಲುತ್ತಿದ್ದವು. ಹಾಗೆ ಬಸ್ಸು ಬಂದು ನಿಲ್ಲುತ್ತಿದ್ದಂತೆಯೇ ಒಂದು ಕೈಯ್ಯಲ್ಲಿ ಟಿಕೆಟ್ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಲಗೇಜು ಎತ್ತಿಕೊಂಡು ಗಡಿಬಿಡಿಯಲ್ಲಿ ಬಸ್ಸಿನೆಡೆಗೆ ಓಡುವವರನ್ನು ಕಂಡಾಗಲೆಲ್ಲ, ಈ ರಾತ್ರಿಯ ಸಮಯದಲ್ಲಿ ಇಷ್ಟೊಂದು ಜನರು ಊರು ಬಿಟ್ಟು ಅದೆಲ್ಲಿಗೆ ಹೋಗುತ್ತಿರಬಹುದು ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿತ್ತು. ಪರ್ಸನ್ನು ಭದ್ರವಾಗಿ ಹಿಡಿದುಕೊಂಡು ಸ್ವೆಟರನ್ನು ಸರಿಪಡಿಸಿಕೊಳ್ಳುತ್ತ ಬಸ್ಸಿನಿಂದ ಇಳಿದು ಟಾಯ್ಲೆಟ್ಟಿನ ಬೋರ್ಡನ್ನು ಹುಡುಕುವವರನ್ನು ನೋಡುವಾಗಲೆಲ್ಲ, ಅವರೆಲ್ಲ ಅದ್ಯಾವುದೋ ಬೇರೆಯದೇ ಆದ ಲೋಕದೊಂದಿಗೆ ನನ್ನನ್ನು ಕನೆಕ್ಟ್ ಮಾಡುತ್ತಿರುವಂತೆ ಭಾಸವಾಗುತ್ತಿತ್ತು. ಹಾಗೆ ಒಂದೊಂದಾಗಿ ಸ್ಟ್ಯಾಂಡಿಗೆ ಬರುತ್ತಿದ್ದ ರಾತ್ರಿಬಸ್ಸುಗಳಿಂದಾಗಿ ಬಸ್ ಸ್ಟ್ಯಾಂಡಿನ ಬೇಕರಿಯ ಬ್ರೆಡ್ಡು-ಬಿಸ್ಕಿಟ್ಟುಗಳೂ ಒಂದೊಂದಾಗಿ ಖಾಲಿಯಾಗಿ ಅಂಗಡಿಯವನ ಮುಖದಲ್ಲೊಂದು ಸಮಾಧಾನ ಕಾಣಿಸಿಕೊಳ್ಳುತ್ತಿತ್ತು. ಆ ರೀತಿಯ ಹಗಲಲ್ಲಿ ಕಾಣಸಿಗದ ಒಂದು ವಿಚಿತ್ರವಾದ ಅವಸರದ, ಉಮೇದಿನ, ಸಮಾಧಾನದ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದ ರಾತ್ರಿಬಸ್ಸುಗಳು ಒಂದನ್ನೊಂದು ರಿಪ್ಲೇಸ್ ಮಾಡುತ್ತಿರುವ ಸಮಯದಲ್ಲಿ ಲಾಸ್ಟ್ ಬಸ್ಸುಗಳು ಒಂದೊಂದಾಗಿ ಬಸ್ ಸ್ಟ್ಯಾಂಡಿನಿಂದ ಜಾಗ ಖಾಲಿಮಾಡುತ್ತಿದ್ದವು. ಹಾಗೆ ಲಾಸ್ಟ್ ಬಸ್ಸಿನಲ್ಲಿ ಕಿಟಕಿಪಕ್ಕದ ಸೀಟಿನಲ್ಲಿ ಕುಳಿತ ನಾನು ರಾತ್ರಿಬಸ್ಸಿನೊಳಗೆ ಕುಳಿತ ಜನರನ್ನು ಬೆರಗಿನಿಂದ ಇಣುಕಿ ನೋಡುತ್ತ, ಅವುಗಳ ಬಗ್ಗೆಯೇ ಯೋಚಿಸುತ್ತ ಬಸ್ಸಿನ ಸರಳಿಗೊರಗಿ ನಿದ್ರೆ ಮಾಡುತ್ತಿದ್ದೆ.


ನಾನೂ ಅಂಥದ್ದೇ ರಾತ್ರಿಬಸ್ಸಿನೊಳಗೆ ಕುಳಿತು ಊರುಬಿಟ್ಟು ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಕ್ಯಾಬ್ ಗಳಿಗೆ ಎದುರಾಗುತ್ತಿದ್ದ ರಾತ್ರಿಬಸ್ಸುಗಳ ಬೋರ್ಡಿನೆಡೆಗೆ ದೃಷ್ಟಿ ಹಾಯಿಸುತ್ತಿದ್ದೆ; ಬೋರ್ಡುಗಳೇ ಇರದ ಬಸ್ಸುಗಳ ಡ್ರೈವರುಗಳೆಡೆಗೆ ಇಣುಕಿ ನೋಡುವ ಒಂದು ವಿಚಿತ್ರವಾದ ಚಟವೂ ಅಂಟಿಕೊಂಡಿತ್ತು. ಅವರ ಕಣ್ಣುಗಳಲ್ಲಿರುತ್ತಿದ್ದ ತೀಕ್ಷ್ಣತೆ-ಜಾಗರೂಕತೆಗಳೆಲ್ಲ ಕಂಪ್ಯೂಟರಿನೆದುರಿಗೆ ಕುಳಿತು ಮಂಜಾಗಿರುತ್ತಿದ್ದ ನನ್ನ ಕಣ್ಣುಗಳಲ್ಲೊಂದು ಹೊಸ ಚುರುಕನ್ನು ತುಂಬಿದಂತೆನ್ನಿಸಿ ಖುಷಿಯಾಗಿ, ಆ ಡ್ರೈವರುಗಳ ಮತ್ತು ನನ್ನ ಬದುಕಿನ ನಡುವಿನಲ್ಲೊಂದು ವಿಚಿತ್ರವಾದ ಹೋಲಿಕೆಯಿರುವಂತೆ ಭಾಸವಾಗುತ್ತಿತ್ತು. ಆ ಸಾಮ್ಯತೆಯೇ ಎಲ್ಲ ಬದುಕುಗಳ ನಿಜಸ್ಥಿತಿಯನ್ನು ಕಣ್ಣೆದುರು ತೆರೆದಿಟ್ಟಂತೆನ್ನಿಸಿ, ಹುಟ್ಟು-ಕೊನೆಗಳನ್ನು ಮರೆತು ಬಸ್ಸಿನಲ್ಲಿ ಚಲಿಸುತ್ತಿರುವ ಕನಸುಗಳು ಒಂದಿಲ್ಲೊಂದು ನಿಲುಗಡೆಯಲ್ಲಿ ಇನ್ನೊಂದು ಬಸ್ಸಿನ ಕನಸುಗಳೊಂದಿಗೆ ಸಂಧಿಸಿ ಎಲ್ಲರ ಬದುಕುಗಳನ್ನು ನಿರ್ಧರಿಸುತ್ತಿರುವಂತೆ ತೋರುತ್ತಿತ್ತು. ರಾತ್ರಿಬಸ್ಸಿನ ಮುಚ್ಚಿದ ಕಿಟಕಿಗಳ ಕರ್ಟನ್ನಿನ ಹಿಂದಿರುವ ಕನಸುಗಳೆಲ್ಲ ಬೆಳಗಾಗುವುದನ್ನೇ ಕಾಯುತ್ತಿರಬಹುದು, ಆ ಕಾಯುವಿಕೆಯ ಪ್ರಕ್ರಿಯೆಯೊಂದಿಗೇ ಅವುಗಳ ಸತ್ಯತೆಯೂ ಕೆಲಸ ಮಾಡುತ್ತಿರಬಹುದು ಎನ್ನುವಂತಹ ಯೋಚನೆಗಳೆಲ್ಲ ಪ್ರತಿದಿನವೂ ಬಸ್ಸಿನೊಂದಿಗೆ ಎದುರಾಗುತ್ತಿದ್ದವು. ಇಷ್ಟೆಲ್ಲ ಯೋಚನೆಗಳ ನಡುವೆಯೂ ಕೊನೆಯ ರಾತ್ರಿಬಸ್ಸು ಯಾವ ಸಮಯಕ್ಕೆ ಬಸ್ ಸ್ಟ್ಯಾಂಡನ್ನು ಬಿಡಬಹುದು, ಬಸ್ ಸ್ಟ್ಯಾಂಡಿನಲ್ಲಿರುವ ಬಿಸ್ಕಿಟಿನ ಅಂಗಡಿಯ ಬಾಗಿಲು ಯಾವಾಗ ಮುಚ್ಚಬಹುದು, ಬ್ಯಾಗಿನ ತುಂಬ ಕನಸುಗಳನ್ನು ತುಂಬಿಕೊಂಡು ರಾತ್ರಿಬಸ್ಸು ಹತ್ತಿರುವವರ ಕನಸುಗಳೆಲ್ಲ ಯಾವ ತಿರುವಿನಲ್ಲಿ ಚಲಿಸುತ್ತಿರಬಹುದು ಎನ್ನುವ ಪ್ರಶ್ನೆಗಳೆಲ್ಲ ಪ್ರಶ್ನೆಗಳಾಗಿಯೇ ಉಳಿದಿವೆ.


ಈ ರಾತ್ರಿಬಸ್ಸಿಗಾಗಿ ಕಾಯುವವರೆಲ್ಲ ಸೇರಿ ಅಲ್ಲೊಂದು ಹಗಲುಗಳಿಂದ ಬೇರೆಯದೇ ಆದ ಪ್ರಪಂಚವನ್ನು ಸೃಷ್ಟಿ ಮಾಡಿರುತ್ತಾರೆ. ಸ್ಕರ್ಟು ತೊಟ್ಟು ಅದಕ್ಕೆ ತಕ್ಕ ಹೈ ಹೀಲ್ಸ್ ಧರಿಸಿ ಎಸಿ ರೂಮಿನಲ್ಲಿ ನಿರಂತರವಾಗಿ ಕ್ಲೈಂಟ್ ಮೀಟಿಂಗಿನಲ್ಲಿರುವ ಹುಡುಗಿಯೊಬ್ಬಳು ಸಾಧಾರಣವಾದ ಚಪ್ಪಲಿ ಕಾಟನ್ ಬಟ್ಟೆಯನ್ನು ಧರಿಸಿ ಮೆಟ್ಟಿಲುಗಳ ಮೇಲೆ ಕುಳಿತು, ಎಣ್ಣೆಹಾಕಿ ತಲೆಬಾಚಿ ಕನಕಾಂಬರ ಮುಡಿದ ಅಪರಿಚಿತ ಹೆಂಗಸಿನೊಂದಿಗೆ ತರಕಾರಿ ರೇಟಿನ ಬಗ್ಗೆ ಮಾತನಾಡುತ್ತಿರುತ್ತಾಳೆ; ಕೆಲಸದ ಒತ್ತಡದಲ್ಲಿ ತಮ್ಮವರೊಂದಿಗೆ ಮಾತನಾಡಲು ಸಮಯವೇ ಸಿಗದ ಹುಡುಗನೊಬ್ಬ ಬಸ್ಸು ತಡವಾಗಿ ಬರುತ್ತಿರುವುದಕ್ಕೆ ಕಾರಣವನ್ನೋ, ಆಫೀಸಿನ ಪ್ರಮೋಷನ್ ವಿಷಯವನ್ನೋ, ಸ್ನೇಹಿತನ ಮದುವೆಯ ಸಂಗತಿಯನ್ನೋ ಅಕ್ಕ-ತಂಗಿಯರೊಂದಿಗೆ ಹರಟುತ್ತ ಆಚೀಚೆ ಓಡಾಡುತ್ತಿರುತ್ತಾನೆ; ಹೆಂಡತಿಯನ್ನು ಬಸ್ ಹತ್ತಿಸಲು ಬಂದವನ ಕಾರಿನಲ್ಲಿ ಹಳೆಯ ಗಝಲ್ ಗಳು ಒಂದೊಂದಾಗಿ ಪ್ಲೇ ಆಗುತ್ತ ಹೊಸದೊಂದು ಸಂವಹನವನ್ನು ಹುಟ್ಟುಹಾಕುತ್ತವೆ; ಡಿಸ್ಕೌಂಟಿನಲ್ಲಿ ಖರೀದಿಸಿದ ರೇಷ್ಮೆ ಸೀರೆ, ಹೊಸ ಸಿನೆಮಾವೊಂದರ ನಾಯಕನ ಹೇರ್ ಸ್ಟೈಲ್, ಕ್ರಿಕೆಟ್ಟಿನ ಬೆಟ್ಟಿಂಗ್ ನಲ್ಲಿ ಕಳೆದುಕೊಂಡ ಹಣ, ಟ್ರೆಕ್ಕಿಂಗ್ ನಲ್ಲಿ ಸಿಕ್ಕಿದ ಹೊಸ ಗೆಳೆಯರು, ಅತ್ತೆ-ಸೊಸೆಯರ ಮನಸ್ತಾಪಗಳೆಲ್ಲವೂ ಮಾತಾಗಿ ಹೊರಬಂದು ಬಸ್ ಸ್ಟಾಪಿನ ಪ್ಲಾಟ್ ಫಾರ್ಮ್ ಮೇಲೆ ಒಂದರೊಳಗೊಂದು ಸೇರಿಹೋಗುತ್ತವೆ. ಹಾಗೆ ಸಂಧಿಸಿದ ಮಾತುಕತೆಗಳೆಲ್ಲವೂ ಆ ಕ್ಷಣದ ಬದುಕನ್ನು ತಮ್ಮದಾಗಿಸಿಕೊಂಡು ಬಸ್ಸನ್ನೇರಲು ರೆಡಿಯಾಗುತ್ತವೆ.


ರಾತ್ರಿಬಸ್ಸಿನೊಳಗಿನ ಮಾತುಕತೆಗಳದ್ದೂ ಒಂದು ವಿಶಿಷ್ಟವಾದ ಪ್ರಪಂಚ. ಸ್ನೇಹವೊಂದು ಅದೆಷ್ಟು ಸುಲಭವಾಗಿ ಹುಟ್ಟಿಕೊಳ್ಳಬಹುದೆನ್ನುವ ಪ್ರಾಕ್ಟಿಕಲ್ ಎನ್ನಬಹುದಾದಂತಹ ಕಲ್ಪನೆ ಈ ಬಸ್ಸುಗಳೊಳಗೆ ಸಿದ್ಧಿಸುತ್ತದೆ. ಅಂಥದ್ದೊಂದು ಸ್ನೇಹ ಹುಟ್ಟಿಕೊಳ್ಳಲು ಒಂದೇ ರೀತಿಯ ಆಸಕ್ತಿಯಾಗಲೀ, ಹವ್ಯಾಸಗಳಾಗಲೀ, ಮನೋಭಾವಗಳಾಗಲೀ ಅಗತ್ಯವಿಲ್ಲ; ವಯಸ್ಸಿನ ಇತಿಮಿತಿಗಳಂತೂ ಮೊದಲೇ ಇಲ್ಲ! ಪಕ್ಕದಲ್ಲಿ ಕುಳಿತವರೆಲ್ಲ ಸಲೀಸಾಗಿ ಸ್ನೇಹಿತರಾಗಿ, ಕಷ್ಟ-ಸುಖಗಳ ವಿನಿಮಯವೂ ಆಗಿ, ಮಧ್ಯರಾತ್ರಿಯಲ್ಲಿ ಅದ್ಯಾವುದೋ ಊರಿನಲ್ಲಿ ಬಸ್ಸು ನಿಂತಾಗ ಒಟ್ಟಿಗೇ ಕೆಳಗಿಳಿದು ಜೊತೆಯಾಗಿ ಟೀ ಕುಡಿದು, ಬೆಳಗ್ಗೆ ಬಸ್ಸಿಳಿದ ನಂತರ ಸಂಪರ್ಕವೇ ಇಲ್ಲದಿದ್ದರೂ, ರಾತ್ರಿಬಸ್ಸಿನಲ್ಲಿ ಜೊತೆಯಾಗಿ ಪ್ರಯಾಣ ಮಾಡಿದವರ ಚಹರೆ-ಸಂಭಾಷಣೆಗಳೆಲ್ಲವೂ ಮನಸ್ಸಿನಲ್ಲಿ ಉಳಿದುಹೋಗಿರುತ್ತವೆ. ಆ ವ್ಯಕ್ತಿಯನ್ನು ಮತ್ತೆಂದೂ ಭೇಟಿಯಾಗದಿದ್ದರೂ ಅಲ್ಪಕಾಲದ ಆ ಸ್ನೇಹದ ತುಣುಕೊಂದು ನೆನಪಾಗಿ ಉಳಿದು, ಯಾವುದೋ ಸಂದರ್ಭದ ಯಾವುದೋ ಸಂಗತಿಗಳೊಂದಿಗೆ ತನ್ನನ್ನು ತಾನು ಜೋಡಿಸಿಕೊಂಡು ಸದಾಕಾಲ ಜೊತೆಗಿರುತ್ತದೆ. ಅಂತಹ ಚಿಕ್ಕಪುಟ್ಟ ಸ್ನೇಹಗಳೇ ಒಂದಾಗಿ ಮಾನವೀಯ ನೆಲೆಯಲ್ಲಿ ಅಂತರಂಗದೊಂದಿಗೆ ಮಾತುಕತೆ ನಡೆಸುತ್ತ ಚಾಕಲೇಟ್ ಬಾಕ್ಸಿನೊಳಗಿನ ಬೊಂಬೆಗಳಂತೆ ಬದುಕಿನ ಸವಿಯನ್ನು ಹೆಚ್ಚಿಸುತ್ತಿರುತ್ತವೆ.


ಈ ರಾತ್ರಿಬಸ್ಸುಗಳನ್ನು ಏರುವಾಗಲೆಲ್ಲ ನನ್ನನ್ನೊಂದು ವಿಚಿತ್ರವಾದ ಭಯವೂ ಆವರಿಸಿಕೊಳ್ಳುತ್ತಿತ್ತು. ಚಿಕ್ಕವಳಿದ್ದಾಗ ವಿಧಿ-ಹಣೆಬರಹಗಳ ಕಥೆಗಳನ್ನೆಲ್ಲ ಕೇಳುತ್ತ ಬೆಳೆದಿದ್ದ ನನಗೆ ಈ ಬೋರ್ಡುಗಳಿಲ್ಲದ ಬಸ್ಸುಗಳನ್ನು ಏರುವಾಗಲೆಲ್ಲ, ಹಣೆಬರಹವನ್ನೇ ಬರೆದಿರದ ಬದುಕಿನೊಂದಿಗೆ ಓಡುತ್ತಿರುವ ಅನುಭವವಾಗಿ ವಿಚಿತ್ರವಾದ ತಳಮಳವಾಗುತ್ತಿತ್ತು. ಐದನೇ ಕ್ಲಾಸಿನಲ್ಲಿ ಕಲಿತ ಇಂಗ್ಲಿಷ್ ಅಕ್ಷರಮಾಲೆಯನ್ನು ಮತ್ತೊಮ್ಮೆ ಮನನ ಮಾಡಿಕೊಂಡು, ಬೋರ್ಡಿನ ಬದಲಾಗಿ ಗ್ಲಾಸಿನ ಮೇಲೆ ಬರೆದಿರುತ್ತಿದ್ದ ಅಕ್ಷರವನ್ನು ಮತ್ತೆಮತ್ತೆ ಓದಿಕೊಂಡು, ವಿಧಿಯ ಮೇಲೆ ಭಾರ ಹಾಕುತ್ತಿರುವ ಭಾವದಲ್ಲಿ ಬಸ್ಸಿನೊಳಗೆ ಲಗೇಜು ಇಳಿಸುತ್ತಿದ್ದೆ. ಲಗೇಜಿನಲ್ಲಿರುವ ಟೆಡ್ಡಿಬೇರ್-ಚಾಕಲೇಟುಗಳೆಲ್ಲ ಸುಸೂತ್ರವಾಗಿ ಮಕ್ಕಳ ಕೈಯನ್ನು ತಲುಪುವಂತಾಗಲಿ ಎಂದು ಪ್ರಾರ್ಥಿಸುತ್ತ ಡ್ರೈವರಿನ ಮುಖವನ್ನೊಮ್ಮೆ ನೋಡುತ್ತಿದ್ದೆ. ಎರಡು ತಿಂಗಳಿಗೊಮ್ಮೆಯಾದರೂ ರಾತ್ರಿಬಸ್ಸಿನೊಂದಿಗೆ ಒಡನಾಟವಿಟ್ಟುಕೊಂಡಿದ್ದ ನನಗೆ ಎಷ್ಟೋ ಸಲ ಮುಖಪರಿಚಯವಿರುವ ಡ್ರೈವರಿನ ದರ್ಶನವಾಗಿ, ವರುಷಗಳಿಂದ ಬದಲಾಗದೇ ಪೀಠದಲ್ಲಿ ಕುಳಿತಿರುವ ದೇವರನ್ನು ನೋಡಿದ ಸಮಾಧಾನವಾಗುತ್ತಿತ್ತು. ಆ ನೆಮ್ಮದಿಯ ಭಾವದಲ್ಲಿಯೇ ಸೀಟಿನ ನಂಬರನ್ನು ಹುಡುಕಿ ಕಾಲುಚಾಚಿದ ತಕ್ಷಣ, ಅದೇ ಲಾಸ್ಟ್ ಬಸ್ಸಿನ ಕಿಟಕಿಪಕ್ಕದ ಸೀಟು ತಪ್ಪದೇ ನೆನಪಾಗುತ್ತಿತ್ತು. ರಾತ್ರಿಬಸ್ಸೊಂದು ಕನಸಿನಂತೆ ಮನಸ್ಸನ್ನಾವರಿಸಿಕೊಂಡು, ನಿಧಾನವಾಗಿ ನೆನಪುಗಳೊಂದಿಗೆ ಒಡನಾಡುತ್ತಿರುವ ಸಮಯದಲ್ಲಿಯೂ ಅವುಗಳೆಡೆಗಿನ ಮೋಹ ಮಾತ್ರ ಟಿವಿ ಸ್ಟ್ಯಾಂಡಿನಲ್ಲಿರುವ ಹಳೆಯ ಹಾಡುಗಳ ಸಿಡಿಗಳಂತೆ ಹಳತಾಗದೇ ಉಳಿದುಕೊಂಡಿದೆ. ಮಾತುಕತೆಗಳೆಲ್ಲ ಮೊಬೈಲಿಗೆ ಸೀಮಿತವಾಗಿಹೋಗುತ್ತಿರುವ ಕಾಲದಲ್ಲಿಯೂ ರಾತ್ರಿಬಸ್ಸುಗಳಲ್ಲಿ ಸುಂದರವಾದ ಸಂಬಂಧವೊಂದು ಹುಟ್ಟಿಕೊಂಡು ಕಾಂಟ್ಯಾಕ್ಟ್ ನಂಬರುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರಬಹುದು; ನಿಲುಗಡೆಯ ಚಹಾದ ಅಂಗಡಿಯಲ್ಲೊಬ್ಬ ಬಿಸ್ಕಿಟ್ ಪ್ಯಾಕೆಟ್ಟುಗಳಲ್ಲಿ ಸ್ನೇಹವನ್ನು ಹಂಚುತ್ತಿರಬಹುದು; ಲಗೇಜಿನೊಳಗಿನ ಮಾರ್ಕ್ಸ್ ಕಾರ್ಡು, ಲಗ್ನಪತ್ರಿಕೆ, ನೆಲ್ಲಿಕಾಯಿ, ತುಳಸಿಬೀಜಗಳೆಲ್ಲವೂ ನಿಶ್ಚಿಂತೆಯಿಂದ ಕನಸುಕಾಣುತ್ತಿರಬಹುದು.

***************************************

ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

One thought on “

  1. ರಾತ್ರಿ ಬಸ್ಸುಗಳಮೂಲಕ ವಿಸ್ತರಿಸಿಕೊಂಡ ಚಿತ್ರಗಳು ಬಸ್ ಓಡುವಾಗ ಓಡುವ ಮರಗಳನ್ನು ನೋಡುತ್ತ….. ನಿಂತಾಗ ಮತ್ತಷ್ಟು ಆಪ್ತತೆಯಿಂದ ನೋಡುವಷ್ಟೇ ಆಪ್ತವಾಗಿವೆ.

Leave a Reply

Back To Top